ಒಂದು ಆಧ್ಯಾತ್ಮಿಕ ಬೆಳಗು

ಒಂದು ಆಧ್ಯಾತ್ಮಿಕ ಬೆಳಗು

‍‍ನಾನು ಏಳುವುದು ಮುಂಜಾನೆ ನಾಲ್ಕೂವರೆ-ಐದಕ್ಕೆ. ನಾನು ಏಳುತ್ತೀನಿ ಅಂತಲ್ಲ, ನನಗೆ ಎಚ್ಚರ ಆಗುತ್ತದೆ. ನಿದ್ದೆ. ಮಾಡದೆ ಇರುವಾಗಲೂ ಹಾಸಿಗೆಯಲ್ಲಿ ಬಿದ್ದುಕೊಂಡಿರುವದು ಎಲ್ಲರಿಂದ ಆಗುವ ಮಾತಲ್ಲ. ಅದಕ್ಕೂ ಸಮಾಧಾನ ಅನ್ನಿ, ಸಾಧನೆ ಅನ್ನಿ, ಅದು ಬೇಕು. ನಾನು ಅದನ್ನಿನ್ನೂ ಸಾಧಿಸಬೇಕಿದೆ!.  ಹೀಗೆ ಎದ್ದು ವ್ಯಾಯಾಮವನ್ನೋ, ಯೋಗವನ್ನೋ, ಪ್ರಾಣಾಯಾಮವನ್ನೋ, ಪೂಜೆ-ಇತ್ಯಾದಿಗಳನ್ನೋ ಮಾಡ್ತೀನಿ ಅಂತ ತಿಳಿದಿರಾ? ಅದೊಂದೂ ಇಲ್ಲ. ಮತ್ತೆ ಇಂಟರ್ನೆಟ್ಟೇ? ಇಲ್ಲ. ಬ್ರಿಸ್ಕ್-ವಾಕಿಂಗ್ ಗಾದರೋ ಸ್ವಲ್ಪ ಬೆಳಕುಹರಿಯಬೇಕು. ಹಾಗಾಗಿ ಟೀವೀಯ ಇನ್ನೂರು+ ಚಾನೆಲ್ಲುಗಳನ್ನು    ತಡಕಾಡುವೆನು. ಇರಲಿ,  ಈಗ ವಿಷಯಕ್ಕೆ ಬರುವೆನು.

ಐದೂವರೆಗೆ ತಮಿಳಿನ ಜಯಾ ಟೀವಿಯಲ್ಲಿ ದಿನ ಬಿಟ್ಟು ದಿನ ತಿರುಪತಿಯ ಬೆಳಗಿನ ದೃಶ್ಯದೊಂದಿಗೆ ತಮಿಳಿನಲ್ಲಿ ವೆಂಕಟೇಶ ಸುಪ್ರಭಾತ ಬರುವದು.  ಇನ್ನೊಂದು ದಿನ ಚೆನ್ನೈನಲ್ಲಿನ  ರಾಘವೇಂದ್ರಸ್ವಾಮಿಯ ಯಾವುದೋ ಮಠದಲ್ಲಿನ  ‘ಇಂದು ಎನಗೆ ಗೋವಿಂದ’ ಕೀರ್ತನೆಯನ್ನು ಕೇಳಬಹುದು. ಅದೇ ರೀತಿ ಗುಜರಾತಿ ಚಾನೆಲ್ಲಿನಲ್ಲೂ ಆಗಾಗ ಕನ್ನಡ ಕೀರ್ತನೆ ನೋಡಿದ್ದೇನೆ.

ಆಮೇಲೆ ಆರುಗಂಟೆಗೆ ಮಹುವಾ ಎಂಬುದೊಂದು ಚಾನೆಲ್ಲು- ಅದು ಬಹುಶ: ಬಿಹಾರಿ ಚಾನೆಲ್ಲು. ಅಲ್ಲಿ  ಒಂದು ೨೦ ನಿಮಿಷದ ,  ನಡುವೆ  ಒಂದು ವಿರಾಮ ಇರುವ ಒಂದು ರೆಕಾರ್ಡೆಡ್ ಕಾರ್ಯಕ್ರಮ ಬರುವುದು. ಬಹುಶಃ ಪ್ರತಿದಿನ ಅದೇ ಇರುತ್ತದೆ. ಅದರಲ್ಲಿ  ಆಗಾಗ ಒಂದಿಷ್ಟು ಶಾಸ್ತ್ರೀಯ ನಾಟ್ಯದ ವೇಷ ಭೂಷಣ  ಧರಿಸಿದ ಒಂದಿಷ್ಟು  ಗಂಡಸರು ಮತ್ತು ಹೆಣ್ಣು ಮಕ್ಕಳು ನರ್ತಿಸುತ್ತಾರೆ. ನಡು ನಡುವೆ ಬಹುಭಾಗ ಭಾರತದ ಬಹುತೇಕ ಎಲ್ಲ ಭಾಗಗಳ ತೀರ್ಥ ಕ್ಷೇತ್ರಗಳ ದೃಶ್ಯಗಳು ಇವೆ. ಬೇರೆ ಬೇರೆ ಭಾಷೆ , ಪ್ರದೇಶ,ಪದ್ಧತಿ,ಹಿನ್ನೆಲೆಯ ಜನರುಗಳು ಹಿಂದೂ ದೇವತೆಗಳಿಗೆ ತಮ್ಮ ತಮ್ಮ ರೀತಿಯಲ್ಲಿ ಭಕ್ತಿಯಿಂದ ಶರಣಾಗಿ , ನೀರಿನಲ್ಲಿ ಮುಳುಗು ಹಾಕುವುದು, ಪೂಜೆ , ಆರತಿ , ಅರ್ಘ್ಯ ಕೊಡುವುದು , ಸಾಷ್ಟಾಂಗ ನಮಸ್ಕಾರ ಮುಂತಾದ ದೃಶ್ಯಗಳನ್ನು ನೋಡಬಹುದು. ಹಿನ್ನೆಲೆಯಲ್ಲಿ ನದಿ, ಪರ್ವತ , ಬಯಲು, ಮರುಭೂಮಿ,ಕಾಡು ಎಲ್ಲ ಇವೆ. ದೇಶದ ವಿಭಿನ್ನ ಆಚಾರ ವಿಚಾರಗಳನ್ನೂ ಗಮನಿಸಬಹುದು.  ಇವೆಲ್ಲವನ್ನೂ ಒಂದುಗೂಡಿಸಿರುವುದು  ಏನು ?   ನಮ್ಮ ರೀತಿ ನೀತಿಯ ಯಾವ ಭಾಗ  ಎಲ್ಲರದೂ ಆಗಿದೆ ?  ಎಂದೆಲ್ಲ ವಿಚಾರಗಳು  ಮೈ ನವಿರೇಳಿಸುತ್ತವೆ.

ನಂತರ ೬.೪೫ ನಿಮಿಷಕ್ಕೆ  ನಮ್ಮ ಚಂದನ ದೂರದರ್ಶನಕ್ಕೆ ಬಂದೆ. ಅಲ್ಲಿ ಬಸವ-ಬೆಳಗು ಶುರುವಾಯಿತು. ಟೈಟಲ್ -ಮ್ಯೂಸಿಕ್ ನೊಂದಿಗೆಯೇ ನಮ್ಮ ವಚನ ಚಳುವಳಿಯ ವಿಶಿಷ್ಟತೆಯನ್ನು ಗುರುತಿಸಬಹುದು. ಅಲ್ಲಿ ಕೇವಲ ನಿಸರ್ಗ ದೃಶ್ಯಗಳು ಮಾತ್ರ ಬರುತ್ತವೆ, ಹೊರತು ಯಾವದೇ ಧಾರ್ಮಿಕ ಸಂಕೇತಗಳಾಗಲೀ, ದೇವದೇವತೆಗಳಾಗಲೀ, ಸಂತ-ಸನ್ಯಾಸಿಗಳಾಗಲೀ , ಮಾನವ ನಿರ್ಮಿತ ಕಟ್ಟಡಗಳಾಗಲೀ ಇಲ್ಲ. ಆಮೇಲೆ  ಬಂದ ಇವತ್ತಿನ  ವಚನವೂ ವಿಶೇಷವಾಗಿತ್ತು.

ಕೆಲವು ಶರಣರು “ಗುರುವಚನದಿಂದಲ್ಲದೆ ಭವಪಾಶ ಹರಿಯದು; ಗುರುವಚನದಿಂದಲ್ಲದೆ ಜಾತಿಭೇದ ಮಾಣದು  ;ಗುರುವಚನದಿಂದಲ್ಲದೆ ಸೂತಕಪಾತಕಗಳು ಕೆಡದಿಹವು ನೋಡಯ್ಯ ; ಗುರುವಚನದಿಂದಲ್ಲದೆ  ಅಂಗಮನಪ್ರಾಣಗಳು ಶುದ್ಧವಾಗಲರಿಯವು; …. “ ಎಂಬ  ಅಖಂಡೇಶ್ವರವಚನವೊಂದನ್ನು ಹಾಡುತ್ತಿದ್ದರು. ನಂತರ ಅವರಲ್ಲೊಬ್ಬ ಶರಣರು  -( ಈ ಸಂಗತಿಯನ್ನು ಹೇಳುವುದು ಅಷ್ಟು ಸರಿಯಲ್ಲ - ಆದರೆ ಗಮನಿಸದೆ  ಇರಲು  ಮತ್ತು ಹೇಳದೆ ಇರಲು ಸಾಧ್ಯವೇ ಇಲ್ಲ; ವೇಷಭೂಷಣಗಳಿಂದ  ಸ್ಪಷ್ಟವಾಗಿ  ತೋರುವಂತೆ  ಬೇರೆ ಮತದವರು - ಹಿಂದೂವೋ ಲಿಂಗಾಯತರೋ ಅಲ್ಲ  )- ಅದನ್ನು ವಿವರಿಸಿದರು.  ‍ಪುಣ್ಯಾತ್ಮರೇ ಎಂದು ನೋಡುಗರನ್ನು ಸಂಬೋಧಿಸಿದರು! “ಭವಪಾಶದಿಂದಾಗಿ ಜನ್ಮ ಜನ್ಮಾಂತರಕ್ಕೆ ಮನುಷ್ಯ ಎಳೆಯಲ್ಪಡುತ್ತಾನೆ. …  ಆನವಮಲ  , ಮಾಯಾಮಲ , ಕಾರ್ಮಿಕಮಲ ಎಂಬ  ಮಲತ್ರಯಗಳಿಂದ  ,  ಸಂಚಿತಕರ್ಮ,ಆಗಾಮೀಕರ್ಮ, ಪ್ರಾರಬ್ದಕರ್ಮ ಎಂಬ  ಕರ್ಮತ್ರಯ, ರಜೋಗುಣ, ತಮೋಗುಣ, ಸತ್ವಗುಣ ಎಂಬ  ಗುಣತ್ರಯಗಳಿಂದ ಹೊಸೆಯಲ್ಪಟ್ಟ ಬಲವಾದ ಹಗ್ಗ  ಈ ಭವಪಾಶ . ಇದು ಗುರುವಿನಿಂದ ಮಾತ್ರ  ಹರಿಯಲ್ಪಡಬಲ್ಲದು. ಈ ರೀತಿ   ಜೀವ ಮುಕ್ತವಾಗುವುದು ಗುರುವಚನದಿಂದ ಮಾತ್ರ ಸಾಧ್ಯ  . ನಾವು ಪರಮಾತ್ಮನನ್ನು ಮರೆತುಬಿಟ್ಟ ಕಾರಣ,  ನಮ್ಮ ಮೂಲ ಸ್ವರೂಪವನ್ನ ,ಭಗವತ್ ಸ್ವರೂಪವನ್ನು ಮರೆತುಬಿಟ್ಟ ಕಾರಣ,  ಭವಪಾಶದಿಂದ ಬದ್ಧಿತರಾಗಿದ್ದೇವೆ. ಸಂಸಾರ ಬಂಧನಕ್ಕೆ ಒಳಗಾಗಿದ್ದೇವೆ  … “ ಎಂದು  ‘ ಸ್ವರೂಪಭ್ರಮೆಯಿಂದಾಯಿತ್ತು ಅಜ್ಞಾನ, ಅಜ್ಞಾನದಿಂದಾಯಿತ್ತು ಅಹಂ ಮಮತೆ, ಅಹಂ ಮಮತೆಯಿಂದ ಆಯಿತ್ತು ಅತಿಪಾತಕ, ಅತಿಪಾತಕದಿಂದಾಯಿತ್ತು  ಭವಬಂಧನ ‘ ಎಂಬ ವಚನವೊಂದನ್ನು ಉಲ್ಲೇಖಿಸಿದರು. ನಮ್ಮ ಮೂಲ ಸ್ವರೂಪವನ್ನ ಗುರುವು ತಿಳಿಸಿಕೊಟ್ಟಾಗ ನಾವು ಈ ಭವಬಂಧನದಿಂದ ಬಿಡುಗಡೆ ಪಡೆಯುತ್ತೇವೆ. . ಅದಕ್ಕೇ “ಗುರುವಚನದಿಂದಲ್ಲದೆ ಭವಪಾಶ ಹರಿಯದು” . ಆಮೇಲೆ ? “ ಗುರುವಚನದಿಂದಲ್ಲದೆ ಜಾತಿಭೇದ ಮಾಣದು”  ಜಾತಿಭೇದದ ಭೂತ ಕೂಡ  ಗುರುವಚನದಿಂದಲ್ಲದೆ  ಬಿಟ್ಟು ಹೋಗಂಗಿಲ್ಲ; ಜಾತಿ ಮನುಜನಿರ್ಮಿತ ಅಲ್ಲದೆ ದೈವ ನಿರ್ಮಿತ ಅಲ್ಲ ಅನ್ನೋದನ್ನ ಗುರು ತಿಳಿಸಿ ಕೊಡ್ತಾನ; ಅದಕ್ಕ ಈ ಜಾತಿ ಅಭಿಮಾನ ಬಿಟ್ಟು ಬಿಡು ಅಂತ ಹೇಳ್ತಾನ . ನಾವು ಒಂದು ಮನೆಯಲ್ಲಿ ಹುಟ್ಟಿದಾಗ ಈ ಸ್ಥೂಲದೇಹಕ್ಕೆ ಅಂಟಿಕೊಂಡದ್ದೇ ಹೊರತು ನಮ್ಮ  ಮೂಲಸ್ವರೂಪವನ್ನು ಅಂಟಿ ಬಂದದ್ದಲ್ಲ . ಕರ್ಮಾನುಸಾರವಾಗಿ ಜನ್ಮಗಳು ಆಕ್ಕಾವ ಹೊರತು ಜಾತ್ಯಾನುಸಾರ ಅಲ್ಲ .   ಆದ್ದರಿಂದ ನಾನು ಹಿಂದಿನ ಜನ್ಮದಲ್ಲಿ ಬ್ರಾಹ್ಮಣ ಇರಬಹುದು , ಕ್ಷತ್ರಿಯ ಇರಬಹುದು, ವೈಶ್ಯ ಇರಬಹುದು , ಶೂದ್ರ ಇರಬಹುದು, ಈಗ ಮತ್ತೆ ‘ಬೇರೆ ಏನೋ’   ಇರಬಹುದು.  ಹೀಗಾಗಿ ಪೂರ್ವಜನ್ಮದಲ್ಲಿದ್ದ ಜಾತಿ ಈ ಜನ್ಮದಾಗ ಇರ್ತತಿ ಅನ್ನೋ ನೇಮ ಇಲ್ಲ. ಅದೂ ಅಲ್ಲದೆ ಈ ಜಾತಿ ಅನ್ನೋದು ಮನುಜಕಲ್ಪಿತವಾದದ್ದಲ್ಲದೆ ಈಶನಿರ್ಮಿತ ಅಲ್ಲ . ಆದ್ದರಿಂದ ನೀನು  ಸಚ್ಚಿದಾನಂದ ಸ್ವರೂಪನೇ ಹೊರತು ಈ ಜಾತಿಗೆ ಒಳಗಾದವನಲ್ಲ . ದೇಹಾತ್ಮಬುದ್ಧಿ  ಉಳ್ಳವರಿಗೆ ಜಾತಿ ಅಭಿಮಾನ ಇರ್ತದ, ಈ ದೇಹವೇ ನೀನಲ್ಲ ; ನೀನು ಸಚ್ಚಿದಾನಂದ ಸ್ವರೂಪ ಎಂಬ ತಿಳುವಳಿಕೆ ಕೊಟ್ಟು   ಜಾತಿಭೇದದ ಬುದ್ದಿಯನ್ನು  ಗುರುವು ದೂರ ಮಾಡ್ತಾನ.” ಎಂದು ಹೇಳಿದರು.
ಅಲ್ಲಿಗೆ ಆ ಕಾರ್ಯಕ್ರಮವು ಮುಗಿದೇಬಿಟ್ಟಿತು. ಆತನ ಹೆಸರು ತಿಳಿಯಲಿಲ್ಲ;  ಆತನ ಕಣ್ಣಲ್ಲಿನ ಹೊಳಪು   ಆತನ ತಿಳುವಳಿಕೆ , ಜ್ಞಾನದ ಮಟ್ಟವನ್ನು  ನೋಡುಗರ ಮನಕ್ಕೆ   ತಲುಪಿಸುತ್ತಿತ್ತು. ಈ ಕಾರ್ಯಕ್ರಮವನ್ನು ನೋಡುವ ಭಾಗ್ಯ  ನನ್ನದಾದ ಕಾರಣ ಆ ಮಟ್ಟಿಗೆ ಆದರೂ ನಾನು ಪುಣ್ಯಾತ್ಮನೇ ಇದ್ದಿರಬೇಕು ಅನ್ನಿಸಿತು!  
‍‍

Rating
No votes yet

Comments

Submitted by ಗಣೇಶ Mon, 01/20/2014 - 00:34

ಮಿಶ್ರಿಕೋಟಿಯವರೆ, ಬೆಳಗ್ಗೆ ೫ ಗಂಟೆಗೆ ಎದ್ದು ಟಿ.ವಿ ನೋಡುವಿರಲ್ಲಾ ಅಂತ ಆಶ್ಚರ್ಯಪಟ್ಟೆ."..ಈ ದೇಹವೇ ನೀನಲ್ಲ ; ನೀನು ಸಚ್ಚಿದಾನಂದ ಸ್ವರೂಪ ಎಂಬ ತಿಳುವಳಿಕೆ ಕೊಟ್ಟು ಜಾತಿಭೇದದ ಬುದ್ದಿಯನ್ನು ಗುರುವು ದೂರ ಮಾಡ್ತಾನ."
ಅದನ್ನೇ ನಾನು ಬಹಳ ಸಮಯದಿಂದ ಹೇಳುತ್ತಲಿರುವೆ..ಕೆಲವರಿಗೆ ಉತ್ತಮ ಗುರುವಿನ ಅಗತ್ಯವಿದೆ ಅಂತ.
ಆಧ್ಯಾತ್ಮಿಕ ಬೆಳಕು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

Submitted by hariharapurasridhar Tue, 01/21/2014 - 05:52

In reply to by ಗಣೇಶ

ಶ್ರೀಕಾಂತ್, ನೆಟ್ ತೆರೆದದ್ದು ಸಾರ್ಥಕವಾಯ್ತು. ವಾರಕ್ಕೊಮ್ಮೆ RSS ಶಾಖೆಗೆ ಹೋಗುವೆ. ಶಾಖೆ6.30 ಕ್ಕೆ. ಸಮಯ ಇದೆ ಅಂತಾ ನೆಟ್ ತೆರೆದೆ. ಉತ್ತಮವಾದ ಲೇಖನ ಓದಿದೆ.ಬೆಳಗಾಗೆದ್ದು ಒಳ್ಳೆಯ ಮಾತುಗಳಿಂದ ದಿನದ ಆರಂಭವಾದಂತಾಯ್ತು. ಧನ್ಯವಾದಗಳು

Submitted by makara Mon, 01/20/2014 - 20:12

ಒಬ್ಬ ನಿಜವಾದ ಗುರುವಿನ ಬಗೆಗೆ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರ ಮಿಶ್ರಿಕೋಟಿಗಳೆ, ಅದಕ್ಕಾಗಿ ಧನ್ಯವಾದಗಳು. ಈ ಮೂರು ರೀತಿಯ ಮಲಗಳನ್ನು ಕುರಿತು ನಮಗೆ ಪಾಶುಪತ ಶೈವ ಸಿದ್ಧಾಂತವು ತಿಳಿಸಿಕೊಡುತ್ತದೆ. ಅದನ್ನೇ ನಮ್ಮ ಬಸವಾದಿ ಶರಣರಿಂದ ಪ್ರತಿಪಾದಿತವಾದ ವೀರಶೈವ ಧರ್ಮವೂ ಅನುಸರಿಸುತ್ತದೆ. ಇದರ ಕುರಿತು ಹೆಚ್ಚಿನ ವಿವರಗಳಿಗೆ ಈ ಕೊಂಡಿಗಳನ್ನು ನೋಡಬಹುದು.
http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0...
http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0...

Submitted by makara Mon, 01/20/2014 - 20:12

ಒಬ್ಬ ನಿಜವಾದ ಗುರುವಿನ ಬಗೆಗೆ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರ ಮಿಶ್ರಿಕೋಟಿಗಳೆ, ಅದಕ್ಕಾಗಿ ಧನ್ಯವಾದಗಳು. ಈ ಮೂರು ರೀತಿಯ ಮಲಗಳನ್ನು ಕುರಿತು ನಮಗೆ ಪಾಶುಪತ ಶೈವ ಸಿದ್ಧಾಂತವು ತಿಳಿಸಿಕೊಡುತ್ತದೆ. ಅದನ್ನೇ ನಮ್ಮ ಬಸವಾದಿ ಶರಣರಿಂದ ಪ್ರತಿಪಾದಿತವಾದ ವೀರಶೈವ ಧರ್ಮವೂ ಅನುಸರಿಸುತ್ತದೆ. ಇದರ ಕುರಿತು ಹೆಚ್ಚಿನ ವಿವರಗಳಿಗೆ ಈ ಕೊಂಡಿಗಳನ್ನು ನೋಡಬಹುದು.
http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0...
http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0...

Submitted by shreekant.mishrikoti Mon, 01/20/2014 - 21:44

In reply to by makara

ಆ ಸಂತ ಸಜ್ಜನ ಶರಣರು ತಿಳಿಸಿದ್ದನ್ನು ಹಂಚಿಕೊಂಡಿದ್ದೇನೆ ಅಷ್ಟೇ, ನೀವು ಕೊಟ್ಟ ಕೊಂಡಿಗಳಿಗಾಗಿ ಧನ್ಯವಾದಗಳು ಶ್ರೀಧರ್ .