19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಒಂದು ಹೊತ್ತಿನ ಊಟವಿದೆ!

June 24, 2012 - 11:10am
asuhegde

ಅಪ್ಪಯ್ಯ ಹೇಳಿದ್ದ ಕತೆ-೦೨


ಒಂದು ಹೊತ್ತಿನ ಊಟವಿದೆ!


ಅದೊಂದು ಸಣ್ಣ ಊರು. ಆ ಊರಿನಲ್ಲಿ ಎಲ್ಲಾ ಮತ ಧರ್ಮದವರೂ ಸಾಮರಸ್ಯದ ಜೀವನ ನಡೆಸುತ್ತಿದ್ದರು. ಅಲ್ಲಿ ದೇವಸ್ಥಾನ, ಕ್ರೈಸ್ತ ಪ್ರಾರ್ಥನಾ ಮಂದಿರಗಳಿದ್ದಂತೆಯೇ, ಒಂದು ಮಸೀದಿ ಕೂಡ ಇತ್ತು. ಆ ಮಸೀದಿಯಲ್ಲೋರ್ವ ಧರ್ಮಗುರು ಇದ್ದರು. ಆ ಧರ್ಮಗುರುವಿಗೋರ್ವ ಮಗನಿದ್ದ.

ಆ ಧರ್ಮಗುರುವಿಗೆ ವಯಸ್ಸಾಗಿತ್ತು. ತನ್ನ ಅಂತಿಮ ಕಾಲ ಸನ್ನಿಹಿತವಾಗುತ್ತಿದೆ ಎನ್ನುವುದನ್ನು ಅರಿತ ಆತ, ಒಂದು ದಿನ ತನ್ನ ಮಗನನ್ನು ಕರೆದು: “ಮಗನೇ ನಿನಗೆ ನಾನು ಮಸೀದಿಯ ವಿಧಿ ವಿಧಾನಗಳನ್ನೆಲ್ಲಾ ಕಲಿಸಿಕೊಟ್ಟಿರುತ್ತೇನೆ, ಇನ್ನು ಮುಂದೆ ನನ್ನಂತೆಯೇ ನೀನು ಇಲ್ಲಿನ ಧರ್ಮ ಗುರುವಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗಬೇಕು. ಈ ಊರಿನಲ್ಲಿ ಎಲ್ಲಾ ಮತದವರೂ ಇದ್ದಾರೆ. ಎಲ್ಲರೊಂದಿಗೂ ಪ್ರೀತಿಯಿಂದ ವ್ಯವಹರಿಸುತ್ತಾ ಇರು. ಇಲ್ಲಿನ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವುದಕ್ಕೆ ಸದಾ ಸಹಕರಿಸುತ್ತಾ ಇರು. ಇನ್ನೊಂದು ಮಾತು ಈ ಊರಿನಲ್ಲಿರುವ ಪ್ರತಿ ಮನೆಯಲ್ಲೂ, ನಿನಗೊಂದು ಹೊತ್ತಿನ ಊಟ ಇದೆ. ಅದನ್ನು ಯಾವತ್ತೂ ಹಾಳು ಮಾಡಿಕೊಳ್ಳಬೇಡ. ನಿನಗೆ ಒಳ್ಳೇದಾಗಲಿ ಮಗನೇ” ಎಂದು ಕಿವಿಮಾತುಗಳನ್ನು ನುಡಿದು ಶುಭ ಹಾರೈಸಿದರು.

ಸ್ವಲ್ಪ ದಿನಗಳ ನಂತರ ಆ ಧರ್ಮಗುರು ವಿಧಿವಶರಾದರು ಹಾಗೂ ಅಂದಿನ ನಿಯಮದಂತೆ ಆತನ ಪುತ್ರ ಆ ಮಸೀದಿಯಲ್ಲಿನ ಧರ್ಮಗುರುವಾಗಿ ನಿಯುಕ್ತರಾದರು. ಊರಿನ ಎಲ್ಲಾ ಜನರೂ ಆ ಹೊಸ ಧರ್ಮಗುರುವನ್ನು ಅಭಿನಂದಿಸಿದರು ಹಾಗೂ ಶುಭ ಕೋರಿದರು. ಧರ್ಮ ಭೇದವಿಲ್ಲದೇ, ಎಲ್ಲಾ ಮನೆಯವರೂ ಆ ಧರ್ಮಗುರುವನ್ನು ತಮ್ಮ ತಮ್ಮ ಮನೆಗಳಿಗೆ ಭೋಜನಕ್ಕಾಗಿ ಆಹ್ವಾನಿಸಿದರು. ಆಗ ಆ ಧರ್ಮಗುರುವಿಗೆ ತನ್ನ ತಂದೆಯವರು ತಮ್ಮ ಕೊನೆ ದಿನಗಳಲ್ಲಿ ನುಡಿದಿದ್ದ ಮಾತಿನ ನೆನಪಾಯ್ತು. “ ... ಈ ಊರಿನಲ್ಲಿರುವ ಪ್ರತಿ ಮನೆಯಲ್ಲೂ, ನಿನಗೊಂದು ಹೊತ್ತಿನ ಊಟ ಇದೆ. ಅದನ್ನು ಯಾವತ್ತೂ ಹಾಳು ಮಾಡಿಕೊಳ್ಳಬೇಡ”.

“ಓ...ಹೌದು... ಹೌದು... ನನ್ನ ತಂದೆಯವರ ಮಾತನ್ನು ನಾನು ಪಾಲಿಸಲೇ ಬೇಕು. ಯಾವ ಮನೆಯ ಕರೆಯನ್ನೂ ನಾನು ನಿರ್ಲಕ್ಷಿಸಲಾಗದು. ನಿರ್ಲಕ್ಷಿಸಿದರೆ, ಆ ಮನೆಯ ಊಟವನ್ನು ನಾನು ಹಾಳುಮಾಡಿಕೊಂಡಂತಾಗುತ್ತದೆ ಹಾಗೂ ನನ್ನ ತಂದೆಯವರ ಮಾತನ್ನು ನಾನು ಧಿಕ್ಕರಿಸಿದಂತಾಗುತ್ತದೆ”. ಹೀಗೆಂದು ಯೋಚಿಸಿದ ಆ ಧರ್ಮಗುರು, ಒಂದೊಂದು ಹೊತ್ತು ಒಂದೊಂದು ಮನೆಯಲ್ಲಿ ಭೋಜನ ಸ್ವೀಕರಿಸಲು ಆರಂಭಿಸುತ್ತಾನೆ. ನೂರು ಮತ್ತಷ್ಟು ಮನೆಗಳಿದ್ದ ಆ ಊರಿನ ಎಲ್ಲಾ ಮನೆಗಳಿಗೂ ಭೇಟಿ ಇತ್ತು, ಅಲ್ಲಿ ಅವರು ನೀಡಿದ ಭೋಜನವನ್ನು ಸ್ವೀಕರಿಸುತ್ತಾನೆ.

ದಿನಗಳು ತಿಂಗಳುಗಳಾದವು, ತಿಂಗಳುಗಳು ವರ್ಷಗಳಾದವು. ಆರಂಭದ ದಿನಗಳಲ್ಲಿ ಆತನನ್ನು ಕಂಡಲ್ಲೆಲ್ಲಾ ಗೌರವ ನೀಡುತ್ತಿದ್ದ ಆ ಊರಿನ ಜನರು, ದಿನಗಳೆದಂತೆ, ಆತನನ್ನು ಕಂಡರೆ ಗುರುತಿಸುವುದನ್ನೂ ಕಡಿಮೆ ಮಾಡಿದರು. ಆತನನ್ನು ನೋಡಿದರೂ ನೋಡದವರಂತೆ ಮುಖಮರೆಸಿ ಹೋಗುವ ಜನರನ್ನೂ ಆತ ಕಾಣತೊಡಗಿದ. ಆತನ ಕಷ್ಟಕ್ಕೂ ಯಾರೂ ಸ್ಪಂದಿಸದಾದರು. “ಇದೇಕೆ ಹೀಗಾಯ್ತು?” ಎಂದು ಯೋಚಿಸತೊಡಗಿದ ಆತನಿಗೆ, ತನ್ನ ತಂದೆಯವರ ನೆನಪಾಯ್ತು. ಅವರು ನುಡಿದಿದ್ದ, ಆ ಮಾತಿನ ನಿಜವಾದ ಅರ್ಥ ಏನಾಗಿತ್ತೆಂದು ನಿಧಾನವಾಗಿ, ಅರಿವಾಗತೊಡಗಿತು.

“ಈ ಊರಿನಲ್ಲಿರುವ ಪ್ರತಿ ಮನೆಯಲ್ಲೂ, ನಿನಗೊಂದು ಹೊತ್ತಿನ ಊಟ ಇದೆ. ಅದನ್ನು ಯಾವತ್ತೂ ಹಾಳು ಮಾಡಿಕೊಳ್ಳಬೇಡ. ಎಂದು ನನ್ನ ತಂದೆಯವರು ನುಡಿದಿದ್ದರು. ಆದರೆ, ನಾನು ನನಗೆ ಅದರ ಅಗತ್ಯ ಇಲ್ಲವಾಗಿದ್ದಾಗಲೂ, ಎಲ್ಲರ ಮನೆಯ ಭೋಜನವನ್ನೂ ಸ್ವೀಕರಿಸಿ ಹಾಳುಮಾಡಿಕೊಂಡುಬಿಟ್ಟಿದ್ದೇನೆ. ಜೊತೆಗೆ ಈ ಊರಿನ ಜನರಿಗೆ ನನ್ನ ಮೇಲಿದ್ದ ಗೌರವವನ್ನೂ ಕಳೆದುಕೊಂಡಿದ್ದೇನೆ”, ಎಂದು ಮರುಗಿದ.

 
 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by hvravikiran on

ಎಲ್ಲರೂ ಯೊಚಿಸಲೆ ಬೇಕಾದ ನೀತಿಕಥೆ............
ದನ್ಯವಾದಗಳು ಸರ್..:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಆಪತ್ಕಾಲದಲ್ಲಿ ಉಪಯೋಗವಾಗುವಂಥದ್ದನ್ನು ಅನಾವಶ್ಯಕವಾಗಿ ಉಪಯೋಗಿಸಿದರೆ ಅವಶ್ಯವಿದ್ದಾಗ ಅದು ನಮಗೆ ಒದಗುವುದಿಲ್ಲ ಎಂದು ಸಾರುವ ಸರಳ ಮತ್ತು ಸುಂದರ ಕತೆ. ಒಳ್ಳೆಯ ಕತೆಗೆ ಅಭಿನಂದನೆಗಳು ಆಸು ರವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatesh on

ಒಳ ಅರ್ಥವನ್ನು ಕಾಣದೆ ಪರಿತಪಿಸುವುದು ಒಮ್ಮೆಮ್ಮೆ ನಮ್ಮೆಲ್ಲರಿಗೂ ಆಗಿರುವ ಅನುಭವ !

'ಕಥೆಯೊಂದರಲ್ಲಿ ಮಗನಿಗೆ ದ್ರಾಕ್ಷಿತೋಟದ ಮಣ್ಣಿನಲ್ಲಿ ಧನವನ್ನು ಅಡಗಿಸಿಟ್ಟಿದ್ದೇನೆ, ಪಡೆದುಕೋ' ಎಂದು ಹೇಳಿ ಜೀವತೊರೆದ ತಂದೆಯ ಮಾತಿನ ಮರ್ಮ ತಿಳಿಯದ ಮಗ, ತನ್ನ ತೋಟವನ್ನೆಲ್ಲಾ ಅಗೆದನಂತೆ ! ಧನ ಕಣ್ಣಿಗೆಬೀಳಲಿಲ್ಲ; ಅದರಬದಲಾಗಿ ಒಳ್ಳೆಯ ಅಗೆತದಿಂದ ಮಣ್ಣು ಹದಗೊಂಡು ಆ ವರ್ಷದ ದ್ರಾಕ್ಷಿಯ ಫಸಲು ೪ ರಷ್ಟು ಹೆಚ್ಚಾದಮೇಲೆ ಮಗ ತಂದೆಯ ಇಂಗಿತವನ್ನು ಅರಿತನಂತೆ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ಅಧಿಕಸ್ಯ ಅಮೃತಂ ವಿಷಂ.......... ಎಲ್ಲವು ಮಿತಿಯಲ್ಲಿದ್ದರೆ ಚೆನ್ನ. ಉತ್ತಮ ಸಂದೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ಅಧಿಕಸ್ಯ ಅಮೃತಂ ವಿಷಂ.......... ಎಲ್ಲವು ಮಿತಿಯಲ್ಲಿದ್ದರೆ ಚೆನ್ನ. ಉತ್ತಮ ಸಂದೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.