22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಥೆ : ಪಶ್ಚಿಮದಲ್ಲಿ ಲಕ್ಷ್ಮಣ

February 24, 2012 - 11:02pm
partha1059

ಮದ್ಯಾನದ ಬೋಜನದ ನಂತರ , ಅಂತಃಪುರದಲ್ಲಿ ಸ್ವಲ್ಪಕಾಲ ಮಲಗಿ ವಿಶ್ರಾಂತಿ ಪಡೆಯುವುದು ಲಕ್ಷ್ಮಣನ ಅಭ್ಯಾಸ, ಆದರೆ ಇಂದೇಕೊ ಆ ರೀತಿ ವಿಶ್ರಾಂತಿಗೆ ಹೋಗದೆ ಅರಮನೆಯ ಹಜಾರದಲ್ಲಿ ಸುಖಾಸನದ ಮೇಲೆ ಸುಮ್ಮನೆ ಕುಳಿತಿದ್ದ. ಊಟ ಮುಗಿಸಿ ಬಂದ ಊರ್ಮಿಳಾದೇವಿ ಲಕ್ಷ್ಮಣನತ್ತ ನಡೆದುಬಂದಳು,
ಸ್ವಲ್ಪ ಆಶ್ಚರ್ಯದಿಂದಲೆ ಕೇಳಿದಳು,
"ಇದೇನು ಇಲ್ಲಿ ಕುಳಿತಿರಿ? ಮಲಗಿ ವಿಶ್ರಾಂತಿ ಪಡೆಯುವದಿಲ್ಲವೆ?"
ತುಸು ಅನ್ಯ ಮನಸ್ಕತೆಯಿಂದ ನುಡಿದ ಲಕ್ಷ್ಮಣ ,
"ಸ್ವಲ್ಪ ಅರಮನೆಯತ್ತ ಹೋಗಿ ಬರೋಣವೆಂದು ಅನ್ನಿಸಿತು, ಹಾಗಾಗಿ ಕುಳಿತೆ"
ನಗುತ್ತ, ಊರ್ಮಿಳ ಅಂದಳು
"ಈ ಬಿರು ಬಿಸಿಲಿನಲ್ಲಿಯೆ, ಸ್ವಲ್ಪ ಬಿಸಿಲು ಕಂದಲಿ ಬಿಡಿ, ಹೋದರಾದಿತು, ಅಣ್ಣನ ಅರಮನೆಗೆ ತಾನೆ"
ಲಕ್ಷ್ಮಣ ಸ್ವಲ್ಪ ಸಂಕೋಚ, ಸ್ವಲ್ಪ ಗಲಿಬಿಲಿ, ಮತ್ತೇನೊ ಭಾವ ತುಂಬಿ ನುಡಿದ
"ಇಲ್ಲ ಕೆಲಸವಿದೆ, ಅರಮನೆಗೆ ಹೋಗಬೇಕೆನಿಸಿದೆ, ನಿನಗೆ ಬೇಸರವೆ?" , ಊರ್ಮಿಳ ಜೋರಾಗಿ ನಕ್ಕುಬಿಟ್ಟಳು.
"ನಿಮ್ಮದೊಳ್ಳೆ ಕಷ್ಟವಾಯಿತು, ನೀವು ನಿಮ್ಮ ಅಣ್ಣನ ಹತ್ತಿರ ಹೋದರೆ ಬೇಸರೆವೆಂದು ನಾನೆಂದು ಹೇಳಿರುವೆ ?, ನನ್ನೊಬ್ಬಳನ್ನೆ ಬಿಟ್ಟು ನೀವು ಅಣ್ಣ ರಾಮರ ಜೊತೆ ಕಾಡಿಗೆ ಹೊರಟಾಗಲು ನಾನು ಏನು ಹೇಳಲಿಲ್ಲ, ಈಗೇನು, ದಾರಾಳ ಹೋಗಿ ಬನ್ನಿ, ಬಿಸಿಲಿಗೆ ಹೇಳಿದೆನಷ್ಟೆ" ಎಂದಳು.
ತೆಳುವಸ್ಟ್ರವನ್ನು ಧರಿಸಿ ಹೊರಟ ಲಕ್ಷ್ಮಣ, ಬಾಗಿಲಿನ ಹತ್ತಿರ ಬರುವಾಗಲೆ ಹೊರಗಿನ ಬಿಸಿಲಿನ ಜಳಕ್ಕೊ ಏನೊ ಸ್ವಲ್ಪ ಕಣ್ಣು ಕತ್ತಲಾಯಿತು, ಹೊಸಿಲು ಎಡವಿದಂತೆ, ಬಾಗಿಲನ್ನು ಹಿಡಿದು ಹಾಗೆ ನಿಂತ, ಊರ್ಮಿಳ ಹಿಂದಿನಿಂದ ಆತಂಕದಿಂದ ಓಡಿಬಂದಳು.
"ಏನಾಯಿತು," ಗಾಬರಿಯ ದ್ವನಿಯಲ್ಲಿ ಕೇಳಿದಳು.
"ಎನಿಲ್ಲ ಸ್ವಲ್ಪ ಬಳಲಿಕೆಯಾಯಿತು, ಬಿಸಿಲಿಗೆ ಇರಬಹುದು, ಗಾಬರಿ ಏನಿಲ್ಲ" ಎಂದ ಲಕ್ಷ್ಮಣ.
"ಸ್ವಲ್ಪ ವಿಶ್ರಾಂತಿ ಪಡೆದು ಹೋದರಾಗಿತ್ತು" ಎಂದಳು ಊರ್ಮಿಳ, ಹೊರಗೆ ಕೆಲಸಕ್ಕೆ ಹೊರಟ ಗಂಡನನ್ನು ತಡೆಯುವುದು ಶುಭಲಕ್ಷಣವಲ್ಲ, ಸುಮ್ಮನಾದಳು.
.....................................................................................................

ರಾಮನ ಅರಮನೆಯ ಹತ್ತಿರ ಬರುವಾಗಲೆ ಲಕ್ಷ್ಮಣ ಗಮನಿಸಿದ, ರಾಮ ಬಾಗಿಲಲ್ಲಿಯೆ ನಿಂತಿದ್ದಾನೆ, ಇದೇನು ಆಶ್ಚರ್ಯ, ರಾಮನು ಸಹ ವಿಶ್ರಾಂತಿಗೆ ಹೋಗದೆ ಹೀಗೇಕೆ ನನ್ನನ್ನು ಕಾಯುತ್ತ ನಿಂತಿರುವ, ನಾನು ಬರುವೆನೆಂದು ಹೇಳಿರಲಿಲ್ಲ, ಏಕೊ ಸುಮ್ಮನೆ ರಾಮನನ್ನು ಕಾಣಬೇಕೆನಿಸಿತು ಬಂದೆ, ಅಂತ ಸಂತಸವಾಗುವಾಗಲೆ ಮತ್ತೆ ಗಮನಿಸಿದ , ರಾಮನ ಮುಖದಲ್ಲಿ ಸುಖಭಾವವೇನಿಲ್ಲ, ಎಂತದೊ ಆತಂಕ. ಮತ್ತೆ ಹತ್ತಿರ ಬಂದಂತೆ ಗಮನಿಸಿದ ಲಕ್ಷ್ಮಣ, ರಾಮನ ಗಮನವಿರುವುದು ತನ್ನ ಮೇಲಲ್ಲ ! ತನ್ನ ಹಿಂದೆ ಮತ್ತಾರೊ ಬರುತ್ತಿದ್ದಾರೆ, ಅವರತ್ತ ನೋಡುತ್ತಿರುವ ರಾಮ. ಲಕ್ಷ್ಮಣ ಹಿಂದೆ ತಿರುಗಿ ನೋಡಿದ. ಯಾರೀತ ನನ್ನ ಹಿಂದೆ ಬರುತ್ತಿರುವ , ಎಂದು ನೋಡಿದಂತಿಲ್ಲವಲ್ಲ. ನೋಡಲು ಬ್ರಾಹ್ಮಣನಂತೆ ವೇಶದರಿಸಿರುವ. ಪಂಚೆ ಮೇಲೆ ವಸ್ತ್ರ, ಬುಜದಲ್ಲಿ ಎದ್ದು ಕಾಣುವ ಜನಿವಾರ, ತಲೆಯ ಶಿಖೆ ಎಲ್ಲವು ಅದನ್ನೆ ಹೇಳುತ್ತಿದೆ, ಆದರೆ ಅವನ ಬಣ್ಣ , ಅಬ್ಬ ಅಂತ ಕಪ್ಪು ಬಣ್ಣವನ್ನು ಎಂದು ನೋಡಿರಲಿಲ್ಲ, ಆ ರೀತಿ ಕಪ್ಪಾಗಿರುವ ಬ್ರಾಹ್ಮಣನನ್ನ ನೋಡುತ್ತಿರುವುದು ಇದೆ ಮೊದಲು.

ರಾಮನು ಲಕ್ಷ್ಮಣನತ್ತ ನೋಡದೆ, ಆ ಹೊಸ ಆಗುಂತಕನನ್ನು ಸ್ವಾಗತಿಸಿದ
"ದಯಾಮಾಡಿ ಬನ್ನಿ, ಬನ್ನಿ ಒಳಗೆ ಹೋಗಿ ಮಾತನಾಡುವ" , ಆ ಬ್ರಾಹ್ಮಣನಾದರೊ ಒಂದೆ ಒಂದು ಪದವನ್ನು ಆಡಲಿಲ್ಲ, ಮುಖದಲ್ಲಿ, ಸ್ವಲ್ಪ ವಿಷಾದಭಾವ ಬಿಟ್ಟರೆ , ಮುಖ ನಿರ್ಲಿಪ್ತ, ರಾಮನ ಹಿಂದೆ ಹೊರಟ ಒಳಗೆ, ತುಸು ದೂರ ಹೋದ ರಾಮ ಮತ್ತೆ ಹಿಂದೆ ನೋಡಿ ,ತನ್ನ ಜೊತೆ ಬರುತ್ತಿರುವ ಲಕ್ಷ್ಮಣನನ್ನು ಕಂಡು,

"ನೋಡಿಲ್ಲಿ, ನನಗೆ ಒಳಗೆ ಇವರ ಜೊತೆ ಸ್ವಲ್ಪ ಮಾತನಾಡಲು ಇದೆ, ನೀನು ಬಾಗಿಲಿನಲ್ಲಿರು, ಎಂತಹುದೆ ಸಂದರ್ಭ ಬಂದರು ಯಾರನ್ನು ಒಳಗೆ ಬಿಡಬಾರದು, ಇದನ್ನು ರಾಜಾಜ್ಞೆ ಎಂದು ತಿಳಿ" ಎಂದು ಒಳಗೆ ಹೊರಟ.
ಲಕ್ಷ್ಮಣ ಕ್ಷಣ ಕಾಲ ಅವಕ್ಕಾದ! ರಾಮನು ಎಂದು ತನ್ನ ಬಳಿ ನಿಷ್ಟೂರವಾಗಿ ಮಾತನಾಡುವನಲ್ಲ, ಅಲ್ಲದೆ ಅವನು ತನ್ನ ಬಳಿ ಬಾಯಿಬಿಟ್ಟು ತನ್ನ ಮನಸನ್ನು ತಿಳಿಸುತ್ತ ಇದ್ದಿದ್ದು ಕಡಿಮೆ, ತಾನು ಈ ದಿನದದವರೆಗು ಕೇವಲ ಅವನ ಕಣ್ಣ ಸನ್ನೆಯನ್ನೆ ಅನುಸರಿಸಿ ಕೆಲಸಮಾಡಿದ್ದೇನೆ ಅವನೆಂದು ಅಪೇಕ್ಷಿಸಿದವನಲ್ಲ. ಈ ದಿನ ಅವನು 'ರಾಜಾಜ್ಞೆ' ಎನ್ನಲು ಅಷ್ಟೊಂದು ಗಂಭೀರವಾದ ವಿಷಯವೇನಿರಬಹುದು. ಅಲ್ಲದೆ ಅವನಿಗೆ ಆಶ್ಚರ್ಯ ಉಂಟುಮಾಡಿದ ಮತ್ತೊಂದು ವಿಷಯವಿತ್ತು, ರಾಮನ ಪರಿಚಿತರೆಲ್ಲ ತನಗೆ ತಿಳಿದಿರುವವರೆ, ತಾನು ಚಿಕ್ಕ ಮಗುವಿನಿಂದ ರಾಮನ ಜೊತೆಗೆ ಬೆಳೆದವನು, ಹಾಗಿರಲು ಈ ದಿನ ತನ್ನ ಹಿಂದೆ ಬಂದ ಆಗುಂತಕನನ್ನು ರಾಮನು ಮೊದಲಿನಿಂದ ತಿಳಿದಿರುವನಂತೆ ಒಳಗೆ ಕರೆದೋಯ್ದ, ಈ ಅಪರಿಚಿತ ಯಾರಿರಬಹುದು, ಮತ್ತು ತನಗು ಸಹ ತಿಳಿಯಬಾರದ ವಿಷಯ ಏನಿರಬಹುದು.
ಲಕ್ಷ್ಮಣ ಬಾಗಿಲಲ್ಲಿ ಗಂಭೀರಭಾವದಿಂದ ನಿಂತ, ತಾನು ರಾಮನಿಗೆ ವನವಾಸ ಕಾಲದಲ್ಲಿ ರಾಮ ಸೀತರಿಗೆ ಕಾವಲು ಕೆಲಸವನ್ನು ಮಾಡಿದ್ದು ನೆನಪಾಯಿತು, ಇಲ್ಲಿ ಅರಮನೆಯಲ್ಲು ಸಹ ರಾಮನ ಅರಮನೆಯ ಬಾಗಿಲು ಕೆಲಸ ಮೊದಲ ಬಾರಿಗೆ ವಹಿಸಲ್ಪಟ್ಟಿತ್ತು. ಅವನಿಗೆ ಒಮ್ಮೆ ನಗು ಬಂದಿತು, ಒಮ್ಮೆ ಊರ್ಮಿಳಗೆ ಈ ವಿಷಯ ತಿಳಿಸಿದರೆ ಏನನ್ನುವಳೊ, ಮತ್ತೇನು ನಗುವಳು
"ಅಣ್ಣನಿಗೆ ಎಲ್ಲ ಸೇವೆಯು ಆಯಿತು, ಇದು ನಡೆದು ಹೋಗಲಿ ಎನ್ನುವಳೇನೊ"
ಲಕ್ಷ್ಮಣ ತುಸು ಆರಾಮವಾಗಿ ಗೋಡೆಗೆ ಒರಗಿ ನಿಂತ, ಏಕೊ ಚಿಕ್ಕ ವಯಸಿನಿಂದಲು ಕಳೆದ ನೆನಪುಗಳಲ್ಲೆ ಒಮ್ಮೆಲೆ ಮುತ್ತಿಗೆ ಹಾಕಿದಂತೆ ಅನ್ನಿಸಿತು. ಅಣ್ಣನೊಡನೆ ವಿದ್ಯೆ ಕಲಿತಿದ್ದು, ವಿಶ್ವಾಮಿತ್ರರ ಜೊತೆ ಹೋಗಿ ಅವರ ಯಾಗಕ್ಕೆ ನೆರವು ನೀಡಿ ರಕ್ಕಸರನ್ನು ಸಂಹರಿಸಿದ್ದು, ಪುನಃ ಅಣ್ಣ ಹಾಗು ಗುರುಗಳೊಡನೆ ಮಿಥಿಲಾ ನಗರಿಗೆ ಪಯಣ, ಅಲ್ಲಿ ರಾಮನು ಶಿವ ದನುಸ್ಸನು ಭಂಗಿಸಿ ನಂತರ ಜನಕನ ಮಗಳಾದ ಸೀತ ಹಾಗು ರಾಮ ವಿವಾಹವಾದರೆ ತಾನು ಊರ್ಮಿಳಳನ್ನು ಹಾಗು ಭರತ , ಶತೃಘ್ನರ ವಿವಾಹ. ನಂತರ ಪಟ್ಟಾಭಿಷೇಕದ ಗಡಿಬಿಡಿಯಲ್ಲಿ ಎಲ್ಲವು ವಿರುದ್ದವಾಗಿ ರಾಮ ಸೀತಯರೋಡನೆ ತಾನು ಕಾಡಿಗೆ ನಡೆದುದ್ದು, ಕಾಡಿನ ವಾಸ, ಸೀತೆ ಕಾಣೆಯಾಗಿ ಪಟ್ಟ ಕಷ್ಟಗಳು. ಲಂಕೆಯಲ್ಲಿ ನಡೆದ ಯುದ್ದ ಎಲ್ಲವು ಒಂದೊಂದಾಗಿ ಅವನ ಕಣ್ಣಮುಂದು ಚಿತ್ರಗಳಂತೆ ಹಾದು ಹೋದವು.

ಏನು ಇಷ್ಟುಹೊತ್ತಾಯಿತು, ಒಳಗೆ ಏನು ನಡೆದಿರಬಹುದು ಮಾತು ಎಂಬ ಕುತೂಹಲ, ಏಕೊ ಮನ ನೊಂದಿತ್ತು, ತನಗೆ ತಿಳಿಯುವ ವಿಷಯವಾದರೆ ರಾಮನೆ ಒಳಗೆ ಕರೆಯುತ್ತಿದ್ದ, ಈಗ ತನಗೆ ಏಕೆ ಬೇಕು ಅದರಲ್ಲಿ ಆಸಕ್ತಿ ಎನಿಸಿತು. ಅವರು ತಾನಾಗೆ ಹೊರಗೆ ಬರುವವರೆಗು ಇಲ್ಲಿಯೆ ಕುಳಿತಿರುವುದು ಅನ್ನುತ್ತ ಬಾಗಿಲ ಹತ್ತಿರವಿದ್ದ ಆಸನದಲ್ಲಿ ಕುಳಿತ . ಅವನ ದೃಷ್ಟಿ ಬಾನಿನತ್ತ ಇತ್ತು, ಸೂರ್ಯ ಕೆಳಗಿಳಿದು ಹೋಗುವದಕ್ಕೆ ಇನ್ನು ಸ್ವಲ್ಪ ಕಾಲವಿತ್ತು.

ಯಾರೊ ಇತ್ತ ಬರುವಂತಿದೆ ಕಣ್ಣಿಟ್ಟು ನೋಡಿದ, ಏಕೆ ಈದಿನ ಹೀಗೆ ಕಣ್ಣು ಸ್ವಲ್ಪ ಮಬ್ಬು ಮಬ್ಬಾಗಿದೆ, ತನಗೆ ವಯಸ್ಸಾಗಿಹೋಯಿತಾ ಅನ್ನಿಸಿತು. ಹತ್ತಿರ ಬರುತ್ತಿರುವಂತೆ ಗಮನಿಸಿದ , ಯಾರೊ ಋಷಿವರ್ಯರು, ಇದೇನು ಇಂತ ಹೊತ್ತಿನಲ್ಲಿ, ಓಹೊ, ಇವರು ದುರ್ವಾಸರು , ಸಂಜೆಯಾಗುತ್ತಿರುವ ಸಮಯದಲ್ಲಿ ಇವರೇಕೆ ಬರುತ್ತಿದ್ದಾರೆ ಇದು ಅತಿಥಿ ಸತ್ಕಾರಕ್ಕೆ ಸರಿಯಾದ ಸಮಯವು ಅಲ್ಲ ಇರಲಿ ಎಂದು ಎದ್ದು ನಿಂತನು. ದೂರ್ವಾಸರು ಹತ್ತಿರ ಬಂದಂತೆ ಎದ್ದು ನಮಸ್ಕರಿಸಿದನು, ಸುಪ್ರೀತರಾದ ಮುನಿಗಳು ಅವನನ್ನು ಹರಸುತ್ತ,
"ನನಗೀಗ ರಾಮನನ್ನು ಕಾಣಬೇಕಿದೆ ಲಕ್ಷ್ಮಣ" ಎಂದರು.
ಲಕ್ಷ್ಮಣನೀಗ ಗೊಂದಲಕ್ಕೆ ಸಿಲುಕಿದ, ಅವನಿಗೆ ರಾಮನ ಆಜ್ಞೆ ಇತ್ತು ಯಾರನ್ನು ಒಳಗೆ ಬಿಡಬಾರದೆಂದು, ಆದರೆ ಇವರೋ ಅತಿ ಕೋಪಿಷ್ಟರೆಂದೆ ಪ್ರಸಿದ್ದ ದೂರ್ವಾಸ ಮುನಿ , ಅವನು ದ್ವನಿಯಲ್ಲಿ ವಿನಯ ತುಂಬಿ ನುಡಿದ
"ಮುನಿವರ್ಯರೆ, ಕುಳಿತು ಕೊಳ್ಳಿ, ಹೋಗುವಿರಂತೆ, ರಾಜ ರಾಮಚಂದ್ರ ಯಾರನ್ನು ಒಳಗೆ ಬಿಡಬಾರದೆಂದೆ ಅಪ್ಪಣೆ ಮಾಡಿದ್ದಾನೆ, ಒಳಗೆ ಯಾರೊ ಆಗುಂತಕರಿದ್ದಾರೆ, ಅವರು ಹೊರಬಂದ ನಂತರ ತಮ್ಮನ್ನು ಒಳಗೆ ಕರೆದೊಯ್ಯುವೆ"
ಮುನಿಗಳು ಕೆರಳಿದರು, ಮೊದಲೆ ಸೂಕ್ಷ್ಮ ಅವರು, ಈಗ ಒಳಗೆ ಬಿಡುವದಿಲ್ಲವೆಂದರೆ ಸುಮ್ಮನಿರುವರೆ
"ಲಕ್ಷ್ಮಣ ಇದೆಂತ ಮಾತು, ನೀನು ಯಾರ ಜೊತೆ ಮಾತನಾಡುತ್ತಿರುವೆ ಎಂದು ಅರಿತು ಮಾತನಾಡು, ನಿನಗೆ ನಿನ್ನ ರಾಮ ಅಪ್ಪಣೆ ಮಾಡಿರಬಹುದು ಯಾರನ್ನು ಒಳಗೆ ಬಿಡಬಾರದೆಂದು, ಆದರೆ ನಮಗು ಅದೇ ರಾಮಚಂದ್ರನೆ ಹೇಳಿದ್ದಾನೆ ನಾವು ಯಾವ ದಿನದಲ್ಲು ಯಾವ ಸಮಯದಲ್ಲಿ ಬೇಕಾದರೆ ಬಂದು ಅವನನ್ನು ನೋಡಬಹುದೆಂದು, ನೀನು ತಡೆದೆಯಾದರೆ ನಮಗೆ ಬರುವ ಕೋಪದಲ್ಲಿ, ನಿನ್ನನು ಶಪಿಸಿಯೇವು, ಮತ್ತು ತಾನು ರಾಜನಾಗಿರುವದರಿಂದ ಏನು ಅಪ್ಪಣೆ ಬೇಕಾದರೆ ಕೊಡಬಲ್ಲನೆಂದು ತಿಳಿದಿರುವ ನಿನ್ನ ರಾಮನನ್ನು ಶಪಿಸಿಯೇವು ಎಚ್ಚರ, ನಡಿ ರಾಮನನ್ನು ತೋರಿಸು" ಎಂದರು.
ಲಕ್ಷ್ಮಣನೀಗ ಗೊಂದಲದಲ್ಲಿ ಬಿದ್ದ, ಇದೆಂತ ಸನ್ನಿವೇಶ ರಾಮನೆ ಸ್ವತಹ ಎಂದು ಇಲ್ಲದೆ ರಾಜಾಜ್ಞೆ ಎನ್ನುತ್ತ , ಯಾರನ್ನು ಒಳಗೆ ಬಿಡಬಾರದೆಂದಿದ್ದಾನೆ, ಒಳಗಿರುವ ಆ ಅಗುಂತಕ ಯಾರಿರಬಹುದೆಂಬ ಕಲ್ಪನೆಯು ನನಗಿಲ್ಲ, ಈ ಮುನಿಗಳು ಇದೆ ಕಾಲಕ್ಕೆ ಬಂದು ನನ್ನನ್ನು ಇಕ್ಕಟಿಗೆ ಸಿಕ್ಕಿಸಿದ್ದಾರೆ, ಈಗ ತನ್ನ ಕರ್ತವ್ಯವೇನು ? .

ಲಕ್ಷ್ಮಣನು ಎಂದಿಗು ರಾಮನ ಮಾತನ್ನು ಮೀರಿದವನಲ್ಲ, ಹಿಂದೊಮ್ಮೆ ರಾಮ ಕಾಡಿಗೆ ಹೊರಟಾಗ ರಾಮ ತಾನೊಬ್ಬನೆ ಹೋಗುವನೆಂದಾಗ ತಾನವನನ್ನು ಒಪ್ಪಿಸಿ ಜೊತೆಗೆ ಹೊರಟುಬಿಟ್ಟ, ರಾಮನಿಗು ಸಹ ಲಕ್ಷ್ಮಣನನ್ನು ಅಗಲಿರಲಾರದ ಅನಿವಾರ್ಯತೆ ಇದ್ದು ಆಗ ರಾಮನ ಮಾತಿಗೆ ವಿರುದ್ದ ಎನ್ನುವ ಭಾವ ಬರಲಿಲ್ಲ, ಪ್ರಥಮ ಬಾರಿ ಲಕ್ಷ್ಮಣ ರಾಮನ ಮಾತು ಮೀರಿದ್ದು, ಸೀತೆಯ ಅಪಹರಣ ಸಮಯದಲ್ಲಿ, ತಾನು ಬರುವವರೆಗು ಅಲ್ಲಿಯೆ ಇರು ಎಂದು ಅವನು ನೀಡಿದ್ದ ಆಜ್ಞೆಯನ್ನು ಸೀತೆಯ ಕಠಿಣ ಮಾತುಗಳನ್ನು ಎದುರಿಸಲಾಗದೆ ಮೀರಿದ್ದ, ಪರಿಣಾಮ ಸೀತೆಯ ಅಪಹರಣವಾಗಿತ್ತು. ಈಗ ಎರಡನೆ ಬಾರಿ ರಾಮನ ಮಾತು ಮೀರುವ ಸಂದರ್ಬ ಬಂದಿದೆ. ಅವನು ವಿಹ್ವಲನಾದ ಅವನಿಗೆ ಇದ್ದದ್ದು ಎರಡೆ ಆಯ್ಕೆ ರಾಮನ ಮಾತು ಪಾಲಿಸಿ ಅವನು ಮತ್ತು ರಾಮ ಇಬ್ಬರು ಶಾಪಕ್ಕೆ ಗುರಿಯಾಗಿ ಮುನಿಗಳ ಕೋಪ ಎದುರಿಸುವುದು, ಅಥವ ತನಗೆ ರಾಮ ಶಿಕ್ಷೆ ವಿದಿಸಿದರು ಚಿಂತೆಯಿಲ್ಲ ಎಂದು ರಾಮನನ್ನು ಮುನಿಗಳ ಶಾಪದಿಂದ ಕಾಪಾಡುವುದು ಅವನಿಗೆ ತನಗೆ ಒದಗಬಹುದಾದ ಶಿಕ್ಷೆ ಅಥವ ಶಾಪದ ಬಗ್ಗೆ ಚಿಂತೆ ಇರಲಿಲ್ಲ, ತನ್ನ ಅಣ್ಣ ರಾಮ ಮುನಿಗಳ ಶಾಪಕ್ಕೆ ತನ್ನಿಂದ ಸಿಲುಕುವುದು ಇಷ್ಟವಾಗಲಿಲ್ಲ. ತಕ್ಷಣ ನಿರ್ದಾರಕ್ಕೆ ಬಂದ, ಎರಡನೆ ಆಯ್ಕೆಯೆ ಸರಿ. ಮುನಿಗಳನ್ನು ಒಳಗೆ ಬಿಡುವುದು ಎಂದು ನಿರ್ದರಿಸಿ
"ಕ್ಷಮಿಸಿ ಮುನಿಗಳೆ, ನಾನು ರಾಮನ ಅಜ್ಞೆ ನಿಮಗೆ ತಿಳಿಸಿದೆ ಅಷ್ಟೆ, ನಿಮ್ಮನ್ನು ತಡೆಯಲಾರೆ, ಬನ್ನಿ ಒಳಹೋಗೋಣ " ಎನ್ನುತ್ತ ಒಳಗೆ ಹೊರಟ.

ರಾಮನನ್ನು ಅರಸಿ ಒಳಕೋಣೆಗೆ ಹೊರಟ ಲಕ್ಷ್ಮಣ ಜೊತೆಯಲ್ಲಿ ಮುನಿಗಳಾದ ದೂರ್ವಾಸರು, ರಾಮನ ಅಂತರಂಗದ ಕೋಣೆಯ ಬಾಗಿಲು ಮುಂದೆ ಹಾಕಲಾಗಿತ್ತು, ಒಳಗೆ ಮೆಲುದ್ವನಿಯಲ್ಲಿ ಯಾರೊ ಮಾತನಾಡುತ್ತಿರುವ ಶಬ್ದ. ಲಕ್ಷ್ಮಣನು ನಿದಾನವಾಗಿ ಬಾಗಿಲು ತಳ್ಳಿದ. ಒಳಗೆ ನಡೆದಂತೆ, ಸುಖಾಸನದ ಮೇಲೆ ಕುಳಿತ್ತಿದ್ದ ರಾಮ , ಯಾವುದೆ ಭಾವವಿಲ್ಲದೆ ಲಕ್ಷ್ಮಣನತ್ತ ನೋಡಿದ.

"ಅಣ್ಣ , ದೂರ್ವಾಸ ಮುನಿಗಳು ನಿನ್ನ ದರ್ಶನಕ್ಕಾಗಿ ಬಂದಿದ್ದಾರೆ. ಅವರನ್ನು ಒಳಗೆ ಕರೆ ತಂದಿರುವೆ"
ರಾಮ ತಣ್ಣಗಿನ ಸ್ವರದಲ್ಲಿ ನುಡಿದ "ಸರಿ ನೀನು ಹೊರಗಿರು".
ಪೆಚ್ಚಾದ ಲಕ್ಷ್ಮಣ , ತಲೆತಗ್ಗಿಸಿ ನಿದಾನಕ್ಕೆ ಹೊರಬಂದ , ಅರಮನೆಯ ಹೊರಗಿನ ದ್ವಾರದ ಹತ್ತಿರ ನಿಂತ, ಇದೇನಾಯ್ತು ರಾಮನೇಕೆ ತನ್ನ ಬಳಿ ಈ ರೀತಿ ವರ್ತಿಸುತ್ತಿದ್ದಾನೆ. ಬಹುಷಃ ತನ್ನಿಂದ ಆದ ಅಪರಾದ ಅವನಿಗೆ ಅಸಮದಾನ ಉಂಟುಮಾಡಿದೆ ಅನ್ನಿಸುತ್ತೆ.
ಲಕ್ಷ್ಮಣನಿಗೆ ಮತ್ತು ಒಂದು ಗೊಂದಲ ಕಾಡಿತ್ತು, ರಾಮನ ಜೊತೆ ಇದ್ದ ಆ ಹೊಸ ಅಪರಿಚಿತ ಆಗುಂತಕ ಎಲ್ಲಿ , ಅವನೇಕೆ ಎಲ್ಲಿಯು ಕಾಣುತ್ತಿಲ್ಲ ? ಒಳಗೆ ಹೋದ ಅವನೆಲ್ಲಿ ಹೋದ?. ಅವನು ಪೆಚ್ಚಾಗಿ ನಿಂತ. ಅವನೆಂದು ರಾಮನ ಕೋಪ ಅಥವ ಅಸಮದಾನ ಎದುರಿಸಿದವನಲ್ಲ. ಅವನಿಗೆ ಏನು ತೋಚುತ್ತಿಲ್ಲ, ನಿಸ್ಸಹಾಯಕನಾಗಿ ನಿಂತಿದ್ದ. ಎಷ್ಟು ಸಮಯ ಕಳೆಯಿತೊ ತಿಳಿಯಲಿಲ್ಲ. ಒಳಗಿನಿಂದ ದೂರ್ವಾಸರು ಹಾಗು ರಾಮನು ಹೊರಬಂದರು. ರಾಮನು ದೂರ್ವಾಸರಿಗೆ ನಮಸ್ಕರಿಸಿ ಬಿಳ್ಕೋಟ್ಟ. ಲಕ್ಷ್ಮಣನು ಅವರಿಗೆ ಒಮ್ಮೆ ನಮಸ್ಕರಿಸಿದ, ಮುನಿಗಳು ಹೊರಟಂತೆ ಸ್ವಲ್ಪ ಹೊತ್ತು ನಿಂತಿದ್ದು ರಾಮನು ಒಳಹೋಗಲು ತಿರುಗಿದ. ಲಕ್ಷ್ಮಣ ತುಸು ಸಂಕೋಚಭಾವದಲ್ಲಿ ನುಡಿದ

"ಅಣ್ಣ ದೂರ್ವಾಸರು ಅಗ್ರಹ ಮಾಡಿದರು, ಬಿಡಬೇಕಾಯಿತು, ನಿನ್ನ ಮಾತನ್ನು ಮೀರಿದ ನನಗೆ ಯಾವ ಶಿಕ್ಷೆಯಾದರು ಕೊಡು"

ರಾಮನ ದ್ವನಿ ಪೂರ ತಣ್ಣಗಿತ್ತು, ಅವನು ನುಡಿದ
"ರಾಮನ ರಾಜ್ಯದಲ್ಲಿ ಎಲ್ಲರು ಸಮಾನರು, ಹಾಗೆ ಶಿಕ್ಷೆಯು ಸಮವೆ, ರಾಜಾಜ್ಞೆ ಮೀರಿದವರಿಗೆ ನೀಡುವ ಶಿಕ್ಷೆ ಎಲ್ಲರಿಗು ಒಂದೆ"
ಎನ್ನುತ ಒಳಗೆ ಹೊರಟುಹೋದ.
ಲಕ್ಷ್ಮಣ ವಿಹ್ವಲನಾದ, ತನ್ನ ಅಣ್ಣ ಏನು ನುಡಿದ ? ರಾಜಾಜ್ಞೆ ಮೀರಿದವರಿಗೆ ನೀಡುವ ಶಿಕ್ಷೆ ಎಲ್ಲರಿಗು ಒಂದೆ, ಅಂದರೆ ಅದರ ಅರ್ಥವೇನು. ಇಷ್ಟುವರ್ಷ ರಾಜ್ಯಬಾರದಲ್ಲಿ ಬಾಗವಹಿಸಿದ ಲಕ್ಷ್ಮಣನಿಗೆ ಅದು ತಿಳಿಯದ್ದೇನು ಅಲ್ಲ. ರಾಜಾಜ್ಞೆ ದಿಕ್ಕರಿಸುವರಿಗೆ ರಾಜ್ಯದಲ್ಲಿ ಇರುವುದು ಒಂದೆ ಶಿಕ್ಷೆ "ಮರಣ ದಂಡನೆ". ಅಂದರೆ ರಾಮನು ತನಗೆ ಮರಣದಂಡನೆಯನ್ನು ವಿದಿಸಿದನೆ, ಅವನ ದ್ವನಿ ಅದೇಕೆ ಅಷ್ಟೇಕೆ ತಣ್ಣಗಿತ್ತು. ಅವನ ವರ್ತನೆಯು ಸಹ ಎಂದಿನಂತೆ ಸದರವಾಗಿರಲಿಲ್ಲ. ವಿವೇಕಶೂನ್ಯನಾದ ಲಕ್ಷ್ಮಣ. ಅವನಿಗೆ ಏನು ತೋಚದೆ ನಿದಾನವಾಗಿ ಅಲ್ಲಿಂದ ಹೊರಹೊರಟ.
.....................................................................................................

ಲಕ್ಷ್ಮಣನಿಗೆ ತಾನು ಎತ್ತ ನಡೆದಿರುವನೆಂಬ ಪರಿವಿಲ್ಲ, ಅವನ ಕಾಲುಗಳು ಅವನನ್ನು ಅಯೋದ್ಯೆಯ ಹೊರವಲಯದಲ್ಲಿ ಹರಿಯುತ್ತಿರುವ ಸರಯೂ ನದಿಯ ದಂಡೆಯ ಹತ್ತಿರ ಕರೆತಂದಿದ್ದವು. ಮುಳಗಲು ಅಣಿಯಾಗಿ ಕೆಂಪು ಚೆಂಡಿನಂತಾದ ಸೂರ್ಯನನ್ನೆ ನೋಡುತ್ತ ನಿಂತ. ಮುಳುಗು ಸೂರ್ಯನ ಕಿರಣಗಳ ಹಿನ್ನಲೆಯಲ್ಲಿ ತುಂಬಿಹರಿಯುತ್ತಿದ್ದ ಸರಯೂ ಅವನಿಗೆ ಹಳೆಯ ನೆನಪೊಂದನ್ನು ಕೆದಕಿತು, ತಾನು ಹಾಗು ಅಣ್ಣ ರಾಮಚಂದ್ರ ಹಾಗು ಸೀತಾದೇವಿ ಅರಣ್ಯವಾಸಕ್ಕೆ ಹೊರಟಾಗ ಈ ನದಿಯನ್ನು ಹರಿಗೋಲಿನಲ್ಲಿ ದಾಟಿದ್ದೆವು, ಯಾರಾತ ಅಂಬಿಗ ಗುಹ ಎಂದೊ ಏನೊ ಅವನ ಹೆಸರು. ಲಕ್ಷ್ಮಣನ ಮನವನ್ನು ದೊಡ್ಡ ಶೂನ್ಯ ಒಂದು ಆಕ್ರಮಿಸಿತ್ತು, ಅವನು ಯೋಚಿಸುತ್ತಿದ್ದ, ತನ್ನ ಮುಂದಿನ ನಿರ್ದಾರವೇನು. ಪುನಃ ಹೋಗಿ ರಾಮನ ಮುಂದೆ ನಿಂತು , ತಾನು ಮುನಿಗಳನ್ನು ಒಳಗೆ ಬಿಟ್ಟಿದ್ದಕ್ಕೆ ಕಾರಣ ವಿವರಿಸಿ ಕ್ಷಮೆ ಯಾಚಿಸುವುದೆ, ನಿನ್ನ ಆಜ್ಞೆಯನ್ನು ಹಿಂದೆ ಪಡೆ ಎನ್ನುತ್ತ ಪ್ರಾಣ ಬಿಕ್ಷೆ ಬೇಡುತ್ತ ಅಂಗಲಾಚುವುದೆ. ಅದು ಎಂದಿಗು ಸಾದ್ಯವಿಲ್ಲ ಎಂದಿತು ಅವನ ಮನಸ್ಸು. ಅವನಿಗೆ ಚೆನ್ನಾಗಿ ತಿಳಿದಿತ್ತು ಒಮ್ಮೆ ರಾಮನ ಬಾಯಲ್ಲಿ ಬಂದ ಮಾತು ಅವನ ಬಾಣದಂತೆ ಅವನ್ನು ಹಿಂದಕ್ಕೆ ಪಡೆಯಲಾಗದು. ಅವನ ಮನ ಚಿಂತಿಸಿತು. ಪ್ರಜೆಗಳ ಒಂದು ಮಾತಿಗಾಗಿ ತನ್ನ ಕೈಹಿಡಿದವಳನ್ನೆ ಯಾವ ಅಳುಕು ಇಲ್ಲದೆ ದೂರ ತಳ್ಳಿ ಅಡವಿಗೆ ಅಟ್ಟಿದವನು ರಾಮ, ಇನ್ನು ತಾನು ಹೇಗೆ ಅವನ ಬಳಿ ಪ್ರಾಣ ಬಿಕ್ಷೆ ಬೇಡಲಿ. ನಾಳೆ ಪುನಃ ರಾಮನಿಗೆ ಅಪವಾದ ಬಾರದೆ ? ಪ್ರಜೆಗಳಿಗೆ ಒಂದು ನ್ಯಾಯ ತಮ್ಮನಿಗೆ ಒಂದು ನ್ಯಾಯ ಎಂದು ಯಾರು ಬೇಕಿದ್ದರು ಅನ್ನಬಹುದಲ್ಲವೆ, ಅಂತಿರಲು ರಾಮನನ್ನು ಪ್ರಾರ್ಥಿಸುವುದು ನಿಷ್ಪ್ರಯೋಜಕ. ಮತ್ತೆ ತಾನು ದೇಶ ಬಿಟ್ಟು ಹೊರಟು ಹೋಗುವುದೆ, ಛೇ! ಬೇಡ ಕೇವಲ ಜೀವಕ್ಕೆ ಹೆದರಿ ದೂರಹೋಗುವುದೆ.

ಮತ್ತೆ ಹೇಗೆ ರಾಮನ ಎದುರಿಗೆ ಹೋಗಿ , ಅವನು ಕೊಟ್ಟ ಶಿಕ್ಷೆಗೆ ತಲೆಯೊಡ್ಡಿ ನಿಲ್ಲುವುದೆ?. ಏಕೊ ಬೇಡವೆನಿಸಿತು. ನನ್ನಷ್ಟೆ ರಾಮನು ನೊಂದಿರುತ್ತಾನೆ, ತನ್ನನ್ನು ಶಿಕ್ಷೆಗೆ ಒಳಪಡಿಸುವುದು ಎಂದರೆ ಅವನಿಗು ಹಿಂಸೆಯೆ, ಅಂತ ಹಿಂಸೆ ಅವನಿಗೆ ಏಕೆ ಕೊಡುವುದು. ಅಲ್ಲದೆ ಪ್ರಜೆಗಳ ಎದುರಿಗೆ ಇದು ಮತ್ತು ಅಪಹಾಸ್ಯಕ್ಕೆ ಒಳಗಾದಿತು. ಈಗ ಏನು ಮಾಡುವುದು ಎನ್ನುವಾಗ ಹೊಳೆಯಿತು. ತಾನಾಗೆ ಜೀವತ್ಯಾಗ ಮಾಡಿಬಿಡುವುದು. ಇದನ್ನು ಅಣ್ಣನ ಆಜ್ಞೆ ಎಂದು ಭಾವಿಸಿದರೆ ಆತ್ಮಹತ್ಯೆಯ ಪಾಪವು ಹತ್ತುವದಿಲ್ಲ ಅನ್ನಿಸಿತು. , ಮರುಕ್ಷಣದಲ್ಲೆ ಅವನ ಮನ ಅದನ್ನು ಸರಿ ಎಂದು ಒಪ್ಪಿ ನಿರ್ದರಿಸಿಬಿಟ್ಟಿತು. ತಾನೀಗ ಸರಿಯಾದ ಜಾಗಕ್ಕೆ ಬಂದಿರುವೆ, ಸರಯೂ ನದಿಯು ತುಂಬಿ ಹರಿಯುತ್ತಿದ್ದಾಳೆ. ತನ್ನ ಜೀವನವನ್ನೆಲ್ಲ ಪೊರೆದ ತಾಯಿಗೆ ತನ್ನ ದೇಹವನ್ನು ಅರ್ಪಿಸಿಬಿಡುವುದು ಎಂದು ನಿರ್ದರಿಸಿದ. ಏಕೊ ಊರ್ಮಿಳೆಯ ನೆನಪು ಬಂದಿತು. ಮದ್ಯಾನ ಹೊರಡುವಾಗ ಅವಳೇಕೊ ತಡೆದಳು ಆದರು ತಾನು ನಿರ್ಲಕ್ಷಿಸಿ ಹೊರಟೆ ಅನ್ನಿಸಿತು. "ಊರ್ಮಿಳ ನನ್ನನ್ನು ಕ್ಷಮಿಸು ನಿನಗೆ ತಿಳಿಸಿ ಹೋಗುವಷ್ಟು ಸಮಯವಿಲ್ಲ, ವ್ಯವದಾನವು ಇಲ್ಲ" ಎಂದು ಮನಸಲ್ಲಿಯೆ ಅಂದುಕೊಂಡ. ಮಗ ಚಿತ್ರಕೇತು ತಾಯಿ ಊರ್ಮಿಳಗೆ ತಿಳಿಸಿ ಅಯೋದ್ಯ ಬಿಟ್ಟು ವಿಹಾರಕ್ಕೆಂದು ಪತ್ನಿಯೊಡನೆ ಹೋಗಿದ್ದ.

ಲಕ್ಷ್ಮಣ ನಿದಾನಕ್ಕೆ ನದಿಯ ಮದ್ಯಕ್ಕೆ ನಡೆಯುತ್ತ ಹೊರಟ, ನೀರಿನ ಸೆಳವು ಅಪಾರವಾಗಿತ್ತು, ನೀರು ಸೊಂಟದವರೆಗು ಬರುವಂತೆ ಕಾಲಿಗೆ ಆದಾರ ತಪ್ಪುವಂತೆ ಎಳೆಯುತ್ತಿತ್ತು. ಮತ್ತು ಮುಂದೆ ಹೊರಟ. ದೂರದಲ್ಲಿ ಸೂರ್ಯನೀಗ ಪೂರ್ಣ ಮುಳುಗಿದ್ದ, ನೀರೆಲ್ಲ ಕಪ್ಪು ಛಾಯೆಯಲ್ಲಿ ಕಾಣಿಸುತ್ತಿತ್ತು. ನೀರು ಅವನ ಕುತ್ತಿಗೆವರೆಗು ಬಂದಿತ್ತು. ಲಕ್ಷ್ಮಣನ ಮನವೇಕೊ ಸ್ವಲ್ಪ ಒದ್ದೆಯಾಯಿತು. ಅವನ ಕಣ್ಣೆದುರು ಒಂದು ದೃಷ್ಯ ಕಾಣಿಸಿತು. ರಾಮ ತೀರ ಚಿಕ್ಕ ವಯಸಿನವ, ಆಗಿನ್ನು ಪುಟ್ಟ ಬಿಲ್ಲಿನಲ್ಲಿ ಬಾಣಬಿಡುವುದನ್ನು ಕಲಿಯುತ್ತಿದ್ದ, ತಾನು ಸದಾ ಅವನ ಜೊತೆಗೆ, ರಾಮನು ಬಿಟ್ಟ ಬಾಣವನ್ನು ತಾನು ಹೋಗಿ ತಂದು ಕೊಡುತ್ತಿದ್ದೆ, ರಾಮನು ಅದನ್ನು ಪುನಃ ಪಡೆದು ಬಿಲ್ಲಿನಲ್ಲಿ ಹೂಡಿ ದೂರಕ್ಕೆ ಚುಮ್ಮಿಸುತ್ತಿದ್ದ, ತನ್ನತ್ತ ಒಂದು ಕುಡಿನೋಟವಷ್ಟೆ, ಅವನ ಮನ ಅರಿತವನಂತೆ ತಾನು ಪುನಃ ಬಾಣದತ್ತ ಓಡಿ ಅದನ್ನು ತಂದು ಕೊಡುತ್ತಿದ್ದೆ, ಮತ್ತೆ ಏಕೊ ನೆನಪಿಗೆ ಬಂದಿತು ರಾಮನ ಜೊತೆ ಇದ್ದ ನನಗೆ ಕಾಲಯಮನ ರೂಪಿನಲ್ಲಿ ಬಂದ ಆ ಅಪರಿಚಿತ ಆಗುಂತಕ ಯಾರಿರಬಹುದು? . ಏಕೊ ಲಕ್ಷ್ಮಣನ ಕಣ್ಣ ಕೊನೆಯಲ್ಲಿ ನೀರಿನ ಬಿಂದು ಒಂದು ಮೂಡಿ ಅದು ಸರಯೂ ನದಿಯಲ್ಲಿ ಕರಗಿ ಒಂದಾಗಿ ಹರಿಯುತ್ತಿತ್ತು.......
....

....................................................................................................

ಸರಯೂ ನದಿಯ ದಡದಲ್ಲಿದ್ದ ಹಲವು ಮೀನುಗಾರರು, ಮತ್ತೆ ವಿಹಾರಕ್ಕೆಂದು ಬಂದವರು ಕೆಲವರು ಲಕ್ಷ್ಮಣನನ್ನು ಗುರುತಿಸಿದ್ದರು. ಅವರಿಗೆ ಆಶ್ಚರ್ಯ ಇದೇನು ಮಹರಾಜ ಲಕ್ಷ್ಮಣನು ಈ ರೀತಿ ಒಂಟಿಯಾಗಿ ನದಿಯ ದಡಕ್ಕೆ ಬಂದಿರುವ, ಯಾರ ಕಡೆಯು ನೋಡದೆ ನದಿಯ ದಡದಲ್ಲೇಕೆ ನಿಂತಿರುವ ಪ್ರಶ್ನೆ. ಆದರೆ ಅವರಿಗೆಲ್ಲ ಲಕ್ಷ್ಮಣನ ಜೊತೆ ಅಷ್ಟು ಸಲುಗೆ ಇಲ್ಲ. ಸದಾ ಅರಮನೆಯಲ್ಲಿ ನಿಂತು ರಾಜ್ಯಾಡಳಿತವನ್ನು ನೋಡಿಕೊಳ್ಳುವ ಲಕ್ಷ್ಮಣನನ್ನು , ಸಾದಾರಣ ಪ್ರಜೆಗಳು ಹೇಗೆ ಮಾತನಾಡಿಸಿಯಾರು. ದೂರದಿಂದಲೆ ಗಮನಿಸುತ್ತಿದ್ದರು. ಅವರಿಗೇನೊ ಆತಂಕ. ಆದರೆ ಸ್ವಲ್ಪ ಸಮಯದಲ್ಲೆ ಲಕ್ಷ್ಮಣ ನಿದಾನಕ್ಕೆ ನೀರಿನೊಳಗೆ ಇಳಿದು ಹೊರಟು ಹೋದಂತೆ ಅವರಿಗೆ ಅಘಾತ. ಇದೇನು ಆಗುತ್ತಿದೆ, ನದಿಯ ಪ್ರವಾಹದ ನೀರಿನೊಳಗೆ ಇವನೇಕೆ ಇಳಿಯುತ್ತಿದ್ದಾನೆ ಎಂದು ಎಲ್ಲ ಎಚ್ಚರಗೊಳುವದರಲ್ಲಿ ಲಕ್ಷ್ಮಣನು ನೀರಿನ ಆಳಕ್ಕೆ ಇಳಿದಿದ್ದು ಆಗಿತ್ತು. ದೂರದಲ್ಲಿದ ಕೆಲವರು ಗಾಭರಿಗೊಂಡು ಹತ್ತಿರ ಓಡಿಬಂದರು. ಕೆಲವರು ಅರಮನೆಗೆ ವಿಷಯ ತಿಳಿಸಲು ದಡಬಡಿಸಿ ಓಡಿದರು.

ನೀರಿನ ಹತ್ತಿರ ಬಂದವರಿಗೆ ಅಚ್ಚರಿಯೊಂದು ಕಾದಿತ್ತು, ಲಕ್ಷ್ಮಣ ನೀರಿನಲ್ಲಿ ಇಳಿದ ಜಾಗದ ಸುತ್ತ ಎಲ್ಲು ಅವನ ಸುಳಿವೆ ಕಾಣಲಿಲ್ಲ ಬದಲಿಗೆ ಆ ಜಾಗದಲ್ಲಿ ನೀರಿನ ಮೇಲ್ಮೆಯಲ್ಲಿ ಕೌತುಕವೊಂದು ಕಾಣಿಸಿತು, ಅ ಮಬ್ಬುಗತ್ತಲಿನಲ್ಲಿ, ನೀರಿನ ಮೇಲೆ ಹಲವು ಹೆಡೆಗಳ ಸರ್ಪವೊಂದು ನಿದಾನಕ್ಕೆ ನೀರಿನಲ್ಲಿ ಸೇರುತ್ತ ಕಣ್ಮರೆಯಾಗಿ ಹೋದಂತೆ ಅನ್ನಿಸಿತು, ಅವರು ಪುರಾಣಗಳಲ್ಲಿ ಸಾವಿರ ಹೆಡೆಗಳ ಆದಿಶೇಷ ಮುಂತಾದ ಹೆಸರುಗಳನ್ನು ಕೇಳಿದ್ದರು, ಈಗ ಅವರಿಗೆ ಇದು ಅದೇ ರೀತಿಯ ಹಲವು ಹೆಡೆಗಳ ಸರ್ಪವೊ , ಇಲ್ಲ ಹಲವು ಸರ್ಪಗಳು ಒಂದಕ್ಕೊಂದು ಹೆಣೆದುಕೊಂಡು ಹೆಡೆಬಿಚ್ಚಿ ಸಾಗಿದವೊ ಎಂಬ ಗೊಂದಲ ಅವರನ್ನು ಕಾಡಿತು, ಅಥವ ಮಬ್ಬು ಕತ್ತಲೆಯಲ್ಲಿ ಕಂಡ ದೃಷ್ಯ ಒಂದು ಭ್ರಮೆಯೊ ನಿರ್ದರಿಸಲಾಗದೆ ಅವರೆಲ್ಲ ನದಿಯಲ್ಲಿ ಉಕ್ಕಿ ಹರಿಯುತ್ತಿದ್ದ ಕೆಂಪು ನೀರನ್ನು ನೋಡುತ್ತ ನಿಂತರು.

-ಮುಗಿಯಿತು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

ಕತೆಗೊಂದು ಹಿನ್ನುಡಿ: ಏಕೊ ಕತೆ ಮುಗಿಸುವಾಗ , ಈ ರೀತಿಯ ಕತೆ ಬರೆಯಬಾರದಿತ್ತು ಅನ್ನಿಸಿತು. ಇಂತ ಕತೆಗಳನ್ನು ಬರೆದ ನಂತರ ಏಕೊ ಮನದಲ್ಲಿ ವಿಷಾದಭಾವ ತುಂಬಿ ಬಿಡುತ್ತದೆ. ರಾಮಾಯಣದಲ್ಲಿ ವನವಾಸಕ್ಕೆ ಹೊರಟ ರಾಮನ ಜೊತೆ ತಾವು ಬರುವದಾಗಿ ತಿಳಿಸಿ ಹೊರಟ ಇಬ್ಬರು ಪತ್ನಿ ಸೀತ ಹಾಗು ಅವನ ತಮ್ಮ ಲಕ್ಷ್ಮಣ. ಆದರೆ ಅದೇಕೊ ಅವರಿಬ್ಬರ ಅಂತ್ಯವು ರಾಮನ ಆಜ್ಞೆಯಂತೆ ಆಯಿತು ಅನ್ನುವಾಗ ವಿದಿಯ ವಿಕಟ ಆಟ ವಿಚಿತ್ರ ಹಾಗು ಕೌತುಕ ಅನ್ನಿಸುತ್ತೆ. ಅಥವ ಅದನ್ನು ರಾಮಾಯಣ ರಚಿಸಿದ ಕವಿಯ ಮನಸಿನ ಲಹರಿಯೊ ತಿಳಿಯದಾಗುತ್ತೆ. ಹೇಗಾದರು ಆಗಲಿ ಲಕ್ಷ್ಮಣನ ಈ ಕತೆಯನ್ನು ಓದುವಾಗ ನಿಮಗೆ ಹೇಗೆ ಅನ್ನಿಸುತ್ತಿದ್ದೆ ತಿಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಪಾರ್ಥಸಾರಥಿಗಳೆ,
ಕೆಳಗಿನ ಕೊಂಡಿಯನ್ನು ನೋಡಿ ನಿಮ್ಮ ಗೊಂದಲಕ್ಕೆ ಸ್ವಲ್ಪ ಪರಿಹಾರ ಸಿಕ್ಕೀತು.
http://sampada.net/b...

ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಈ ಕೆಳಗಿನ ಲೇಖನದಲ್ಲಿ ಉಲ್ಲೇಖಿಸಲಾಗಿರುವ ಪುಸ್ತಕವನ್ನು ಓದಿ.
http://sampada.net/b...

ಒಟ್ಟಾರೆಯಾಗಿ ವಿಭಿನ್ನವಾಗಿ ಆಲೋಚಿಸಿ ಎಲ್ಲರ ಆಧ್ಯಾತ್ಮಿಕತೆಯನ್ನು ಎಚ್ಚರಗೊಳಿಸುತ್ತಿದ್ದೀರ. ಅದಕ್ಕಾಗಿ ನಿಮಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ವಂದನೆಗಳು ಶ್ರೀಧರ್
ನೀವು ಕೊಟ್ಟ ಲಿಂಕ್ ಮೊದಲೆ ಓದಿರುವೆ ನನ್ನ ಪ್ರತಿಕ್ರಿಯೆ ಸಹ ಅದರಲ್ಲಿದೆ.
ನನ್ನದು ಗೊಂದಲವಲ್ಲ ಕತೆಯ ಭಾವದಲ್ಲಿ ಮುಳುಗಿದ ವಿಷಾದಭಾವ.
‍ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghusp on

ಸಣ್ಣ ಸಣ್ಣ ಎಳೆಗಳನ್ನು ಬಿಡಿಸಿ ಒಂದು ಹಿಡಿ ಕಥೆಯಾಗಿ ಕೊಡುವ ಶೈಲಿ ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ರಘರವರೆ ತಮ್ಮ ಮೆಚ್ಚುಗೆಗೆ ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಸೊಗಸಾಗಿ ಮೂಡಿ ಬಂದಿದೆ
ಇಲ್ಲಿ ವಿಷಾದ ಪಡುವ ಅವಶ್ಯಕತೆ ಇರುವುದಿಲ್ಲ ಅವತಾರ ಸಮಾಪ್ತಿ ಕಾಲ ಬಂದಿದೆ ಎಂಬುವುದಕ್ಕಾಗಿ ರಾಮ ಲಕ್ಷಣನಿಗೆ ಈ ರೀತಿ ಆಜ್ಞೆ ಮಾಡುತ್ತಾನೆ ಎಂದು ತಿಳಿಯಬೇಕು ಎಂಬುವುದು ನನ್ನ ಅಭಿಪ್ರಾಯ.
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಹೌದು ಅದು ದೈವ ಸಂಕಲ್ಪ , ಹಾಗೆ ಕೊನೆಯಾಗಬೇಕಿತ್ತು ಆಯಿತು
ಆದರೆ ಬರೆಯುವಾಗ ನಮ್ಮ ಮನಸ್ಸು ಅದರಲ್ಲಿ ಮುಳುಗಿದಾಗ ಹಾಗೆನಿಸ್ಸುತ್ತೆ
ಮೆಚ್ಚುಗೆಗೆ ವಂದನೆಗಳು

== ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಗುರುಗಳೆ-

ನನಗೆ ಈ ಬರಹ ಹಿಡಿಸಿತು..

ನೀವು ರಾಮಾಯಣದ ಎರಡು ಮುಖ್ಯ ಪಾತ್ರಗಳ ವಿಭಿನ್ನ ಮಾನಸಿಕ ವ್ಯಕ್ತಿತ್ವವನ್ಣ ಅನಾವರಣ ಮಾಡಿದೀರ...

ಅವರ ಮನದ ತೊಳಲಾಟವನ ಬಹು ಚೆನ್ನಾಗಿ ಹೇಳಿದ್ದೀರ..

ನಿಮಗೆ ಅನ್ನಿಸಿದಂತೆ ಕಥೆಯ ಅಂತ್ಯ ನನಗೋ ವಿಷಾದ ಮೂಡಿಸಿತು...

ಆದರೆ - ಕಥೆಯ ಅಂತ್ಯದಲ್ಲಿ 'ನಾಗರನನ್ನು' ಬಳಸಿದು ಏಕೆ ಅಂತ ಗೊತ್ತಾಗಲಿಲ್ಲ..

ಶ್ರೀಧರ್ ಜೀ ಆವ್ರು ಕೊಟ್ಟ ಲಿಂಕ್‌ಗಳನ್ನು ನೋಡಿದೆ

http://sampada.net/b...

ನಿಮ್ಮ ಬರಹ ಓದಿದ ಮೇಲೆ ನನಗೆ ಆ ಕಪ್ಪು ಬ್ರಾಹ್ಮಣ ಯಾರು?
ಯಾಕೆ ಬಂದ?
ಆಗಲೇ ದೂರ್ವಾಸರು ಯಾಕೆ ಬಂದರು?
ಎಂದೆಲ್ಲ ಸಂಶಯ ಬಂದವು!!

>>>ಆಮೇಲೆ ಶ್ರೀಧರ್ ಜೀ ಅವರು ಕೊಟ್ಟ ಲಿಂಕುಗಳಲಿ ಹೋಗಿ ಅಲ್ಲಿ ಅವರು ಒಬ್ಬರ ಬರಹಕೆ ಪ್ರತಿಕ್ರಿಯಿಸಿದ್ದು ಅಲ್ಲಿ ಮತ್ತೆ ನಿಮ್ಮ ಈ ಬರಹದ ಕಥೆ ವಿವರವಾಗಿ ಕೆಲವೇ ಸಾಲುಗಳಲ್ಲಿ ಹೇಳಿದ್ದು ಓದಿದ ಮೇಲೆಯೇ ನನಗೆ ಈ ಬರಹದ ಗ್ರಹಿಕೆ ಆಗಿದ್ದು..

ರಾಮಾಯಣವನ್ನು ಕೆಲವೋಮೇ ಓದಿದ್ದ ನನಗೆ ಈ ಬರಹದಲಿದ್ದ ಆ ಸಂದರ್ಭ (ರಾಮ- ಯಮ ರ ರಹಸ್ಯ ಸಭೆ) ನನಗೆ ನೆನಪೇ ಇರಲಿಲ್ಲ..

ಈಗ ಮತ್ತೊಮ್ಮೆ ರಾಮಾಯಣ ಸಂಬಂಧಿ ಎಲ್ಲ ವಿಧ ವಿಧವಾದ ಬರಹಗಳನ್ನ ಓದುವೆ...

ನನಗೋ ಮೊದಲಿಂದಲೂ ರಾಮಾಯಣ ಮಹಾ ಭಾರತ ಮತ್ತು ಅದರ ಕೆಲ ಪಾತ್ರಗಳು ಅಚ್ಚು ಮೆಚ್ಚು...

ನನ್ನ ಈ ಪ್ರತಿಕ್ರಿಯೆಯ ಕೆಲ ಸಾಲುಗಳನ್ನ ನೀವ್ ವಿವರವಾಗಿ ಗಮನಿಸಿದ್ದರೇ ನಿಮಗೆ 'ಒಂದು' ಬದಲಾವಣೆ ಮಾಡಬೇಕು ಅನ್ನಿಸಿರುತ್ತೆ!!

ಇಲ್ಲವಾದರೆ ನೀವು ಒಮ್ಮೆ ಶ್ರೀಧರ್ ಜೀ ಅವ್ರ ಆ ೨ನೇ ಲಿಂಕ್ ನೋಡಿ -ಅದನ್ನು ಇಲ್ಲಿ ನಿಮ್ಮ ಬರಹದಲ್ಲಿ ಸೇರ್‍ಸಿದರೆ ನನ್ನ ತರಹ ರಾಮಾಯಣದ ಈ ಸಂದರ್ಭದ ಬಗ್ಗೆ ಗೊತಿಲ್ಲದವರಿಗೆ ಆ ಕಪ್ಪು ಬ್ರಾಹ್ಮಣ ಯಾರು ಏನು ?ಎಂಥ ? ಎಲ್ಲ ಅರ್ಥವಾಗಬಹುದು...

ನಾ ಈ ಬರಹವನ್ ರಾತ್ರಿಯೆ ನೋಡಿದೆ -
ಆದರೆ ವಿವರವಾಗಿ ಓದಿ ಗ್ರಹಿಸಿಕೊಂಡು ಪ್ರತಿಕ್ರಿಯಿಸೋಣ ಅಂತ ಈಗ ಓದಿ ,ಪ್ರತಿಕ್ರಿಯಿಸ್ದೇ...

----------------------------------------------------------------------------

ಶ್ರೀಧರ್ ಜೀ ಅವರು ಕೊಟ್ಟ ಲಿಂಕುಗಳಲಿ ಹೋಗಿ ನೋಡಿದಾಗ ಅಲ್ಲಿ ನೀವು ಪ್ರತಿಕ್ರಿಯಿಸಿದ್ದನ್ನು ಓದಿದೆ - ನಿಮ್ಮಾತು ನಿಜ...
ಅದು ನಮ್ಮಲ್ಲೇ ಏಕೆ ಹೀಗೆ?
----------------------------------------------------------------------------

ನನಗಂತೂ ಬರಹ ಹಿಡಿಸಿತು...

ಅಂದು ಉರ್ಮಿಲೇ- ಈಗ ಲಕ್ಷ್ಮಣ

ಮುಂದ?

ಶುಭವಾಗಲಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ನಿಜ ವೆಂಕಟೇಶ್
ಅಲ್ಲಿ ಬ್ರಾಹ್ಮಣರೂಪಿನಲ್ಲಿ ಬಂದವನು ಕಾಲಪುರುಷ ಅಂತ ಹೇಳಬೇಕಿತ್ತೇನೊ ಆದರೆ ಎಲ್ಲಿಯು ನನಗೆ ಹೇಳಲು ಅವಕಾಶ ಸಿಗಲೆ ಇಲ್ಲ ಏಕೆಂದರೆ ಕತೆಯನ್ನು ಲಕ್ಷ್ಮಣನ ದೃಷ್ಟಿಯಲ್ಲಿ ಹೆಣಿದಿದ್ದೆ, ಅದರೆ ಲಕ್ಷ್ಮಣನಿಗೆ ಅವನಾರೆಂದು ಗೊತ್ತಿಲ್ಲ , ಹಾಗಿರುವಾಗ ಅವನ ಬಾಯಲ್ಲಿ ಹೇಗೆ ಹೇಳಿಸಲಿ ತಿಳಿಯಲಿಲ್ಲ, ಮತ್ತೊಂದು ಗಮನಿಸಿ ಆ ಬ್ರಾಹ್ಮಣ ಬರುವುದೆ ಲಕ್ಷ್ಮಣನ ಬೆನ್ನು ಹತ್ತಿ , ಅಂದರೆ ಬರುವಾಗಲೆ ಲಕ್ಷ್ಮಣನಿಗೆ ಸಾವಿನ ರೂಪದಲ್ಲಿ ಬೆನ್ನು ಹತ್ತಿ ಬರುತ್ತಿದ್ದಾನೆ ಅದು ರಾಮನಿಗೆ ಗೊತ್ತು ಆದರೆ ಲಕ್ಷ್ಮಣನಿಗೆ ಗೊತ್ತಿಲ್ಲ ಅವನು ಕಾಲ ಪುಋಷ, ಯಮ ರಾಯ ಅಂತ.

ಹಾಗೆ ನಾಗರ ಬಗ್ಗೆ ಕೇಳಿದ್ದೀರಿ, ರಾಮಾಯಣದಲ್ಲಿ ಲಕ್ಷ್ಮಣನು ಹಾಗು ಮಹಾಬಾರತದಲ್ಲಿ ಬಲರಾಮರು ಆದಿಶೇಷನ ಅವತಾರ ಅಂತ ಒಂದು ನಂಬಿಕೆ, ಅವರು ವಿಷ್ಣುವಿನೊಡನೆ ಭೂಲೋಕಕ್ಕೆ ಬಂದವರು, ತಮ್ಮ ಕೆಲಸ ಮುಗಿಸಿ ಹಿಂದಿರುಗಿದವರು, ಅದಕ್ಕಾಗಿಯೆ ಅಲ್ಲಿ ನಾಗರ ಹಾವನ್ನು ಕಲ್ಪನೆ, ಅಲ್ಲದೆ ಅವರ ಅವತಾರ ಸಮಾಪ್ತಿ ಕಾಲವನ್ನು ನೆನಪಿಸಲೆಂದೆ ಕಾಲಪುರುಷ ಬಂದಿದ್ದ ಅನ್ನುವುದು ಕೆಲವು ಕತೆಯ ಕಲ್ಪನೆ.

ನಿಮ್ಮ ಮೆಚ್ಚುಗೆಗೆ ವಂದನೆಗಳು

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಸಪ್ತಗಿರಿ ನೀವು ಹೇಳೀದಂತೆ ಸಣ್ಣದೊಂದು ಬದಲಾವಣೆ ತಂದಿರುವೆ ಗಮನಿಸಿ..... ಕಾಲಯಮನ ಪ್ರಸ್ತಾಪ ಸೂಚ್ಯವಾಗಿ ಮಾಡಿರುವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಗುರುಗಳೆ

ನಿಮ್ಮ ಆ ಬದಲಾವಣೆಯನ್ನ ನಾ ಬೆಳಗ್ಗೆಯೇ ಗಮನಿಸಿದ್ದೆ.

ಆದರೆ ಈ ಮಧ್ಯೆ ನಾ 'ನಮ್ಮವರ' ಜೊತೆ ಮಂತ್ರಿ ಮಾಲಿಗೆ ಕನ್ನಡ ಸಿನೆಮಾ 'ಲಕ್ಕಿ' ನೋಡಲು ಹೋಗಿದ್ದರಿಂದ ಈಗ ನನ್ನ ಪ್ರತಿಕ್ರಿಯೆ ದಾಖಲಿಸುತ್ತಿರುವೆ..

ಈ ಮಧ್ಯೆ ನಮ್ಮ ಗಣೇಶ್ ಅಣ್ಣ ಅವರು ನಿನ್ನೆ ರಾತ್ರಿ ಮತ್ತು ಈಗ ಪ್ರತ್ಯಕ್ಷ ಆಗಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ...

ನಿಮ್ಮ ಈ ಬರಹ ಓದಿಯೂ ಆ ಆಗಂತುಕ ಕಪ್ಪು ಬ್ರಾಹ್ಮಣ ಯಮ ಅಂತ ಯಾರಿಗಾದರೂ ಗೊತ್ತಾಗದಿದ್ದರೆ
ನಮ್ಮ ನಿಮ್ಮ ಪ್ರತಿಕ್ರಿಯಾ ಸರಣಿ ಗಮನಿಸಿದರೆ ಅವರಿಗೆ ಅದು ಗೊತ್ತಗಲಿದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಹಾ.. ಲಕ್ಷ್ಮಣ..
ಪಾರ್ಥಸಾರಥಿಯವರೆ, ಇಲ್ಲಿಗೆ ಮುಗಿಯಲಿಲ್ಲ. ನಂತರದ ರಾಮನ ತೊಳಲಾಟ- ಮುಂದಿನ ಬರಹದಲ್ಲಿ.. ನಿಮ್ಮಿಂದ.
ಕಾಯುತ್ತಿರುವೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಅಬ್ಬ ಗಣೇಷರೆ ಇದ್ದಕಿದ್ದಂತೆ ಪ್ರತ್ಯಕ್ಷರಾದಿರಿ
ನಿಮ್ಮ ಪ್ರತಿಕ್ರಿಯೆಗೆ ಮೆಚ್ಚುಗೆಗೆ ನನ್ನ ವಂದನೆಗಳು
ನಿಮ್ಮ ಮನೆ ಶಿಪ್ಟಿಂಗ್ ಎಲ್ಲಿಗೆ ಬಂದಿತು.
ಮುಂದೆ ನಾವು ನಿಮ್ಮನ್ನು ಹುಡುಕಬೇಕಾದಲ್ಲಿ ಯಾವ ಏರಿಯಾದಲ್ಲಿ ಹುಡುಕಬೇಕೆಂದು ಕ್ಲೂ ಕೊಡಿ , ಬೆಂಗಳೂರು ಅನ್ನಬೇಡಿ
‍= ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಪಾರ್ಥಸಾರಥಿಯವರೆ,
>>>ಮುಂದೆ ನಾವು ನಿಮ್ಮನ್ನು ಹುಡುಕಬೇಕಾದಲ್ಲಿ ಯಾವ ಏರಿಯಾದಲ್ಲಿ ಹುಡುಕಬೇಕೆಂದು ಕ್ಲೂ ಕೊಡಿ , ಬೆಂಗಳೂರು ಅನ್ನಬೇಡಿ
:) :)
ನಾನಿರುವ ಏರಿಯಾ ಬೆಂಗಳೂರೇ ಅಂದ್ಕೊಂಡಿದ್ದೆ. ೧೫ ದಿನ ಕಳೆದ ಮೇಲೂ ಫೋನ್ ಕನೆಕ್ಷನ್ ಕೊಡದೇ ಇದ್ದಾಗ ವಿಚಾರಿಸಿದರೆ ಸಾಧ್ಯವಿಲ್ಲಾ! ಕೇಬ್‌ಲ್ ಇಲ್ಲಾ! ಅಂದರು. (ಕೇಬಲ್ ಸಿಕ್ಕಿದರೂ ನಿಮ್ಮ ಕುತ್ತಿಗೆಗೆ ಸುತ್ತಿಕೊಳ್ಳಿ ಅನ್ನೋವಷ್ಟು ಕೋಪ ಬಂತು) ನಾನಿರುವುದು ಐಟಿ ಸಿಟಿಯೊಳಗಿರುವ, ಫೋನ್ ಕನೆಕ್ಷನ್ ಸಿಗದ ಒಂದು ಹಳ್ಳಿಯಲ್ಲಿ ಅಂತಿಟ್ಟುಕೊಳ್ಳಿ :) ಇಷ್ಟು ಕ್ಲೂ ಸಾಕಲ್ಲಾ?
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gunashekara murthy on

ಕಪ್ಪು ಮನುಷ್ಯ ಬೇರೆಯಾರಲ್ಲ ಬಂದಿರುವ ವ್ಯೆಕ್ತಿ ಕಾಲನೇ, ( ಯಮ ) ಆಗಿದ್ದು ನಿಮ್ಮಕಾಲವು ಮುಗಿದಿರಲು ನೀವಾಗಿ ಬಂದರೇ ಒಳಿತು ನಾನಾಗಿ ಕರೆದ್ಯೊದರೇ ಅದು ಸಮಂಜಸವಲ್ಲ ಎನ್ನುತ್ತಾನೆ. ಅದಕ್ಕಾಗಿಯೇ ಲಕ್ಷ್ಮನೂ ರಾಮನೂ ಇಬ್ಬರೂ ಸರಯು ನದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಓದಿದ ನೆನಪು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ನಿಜ ಮೂರ್ತಿಯವರೆ
ಕಾಲಗಟ್ಟದಲ್ಲಿ ರಾಮಾಯಣ ಮಹಾಭಾರತ ಕಾವ್ಯಗಳನ್ನು ಹಲವರು ರಚಿಸಿದ್ದಾರೆ ಕೆಲವೊಮ್ಮೆ ಅದರಲ್ಲಿ ಕೆಲವು ಬದಲಾವಣಗಳು ವಿಬ್ಬಿನ್ನ ವಾದಗಳು ಇವೆ. ಬಹುಷ ಈ ಕಾರಣಕ್ಕಾಗಿಯೆ ಇವು ಭಾರತದ ಮಹಾಕಾವ್ಯಗಳಾಗಿವೆ.
‍ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಪಾರ್ಥರೇ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ವಂದನೆಗಳು ಗೋಪಿನಾಥರಾಯರಿಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shastriss on

ಮಹೋದಯ,
ನಿಮ್ಮ ಈ ಲೇಖನ ಚೆನ್ನಾಗಿ ಮೂಡಿ ಬಂದಿದೆ.
ನನಗನ್ನಿಸಿದ್ದನ್ನು ಇಲ್ಲಿ ತಿಳಿಸಲು ಬಯಸುತ್ತೇನೆ.
ಏನೆಂದರೆ, ನೀವು ಬರಹದಲ್ಲಿ ' ಮಹಾಪ್ರಾಣ' ವನ್ನು ಬಹಳಕಡೆ ಬಿಟ್ಟಿದ್ದೀರಿ. ದೀರ್ಘಗಳು ಹಾಗೂ ಚಿನ್ಹೆಗಳನ್ನು ಕೂಡ. ಅವೆಲ್ಲವೂ ಗಮನದಲ್ಲಿದ್ದು ನಿಮ್ಮ ಮುಂದಿನ ಲೇಖನ ಇನ್ನೂ ಚೆನ್ನಾಗಿ ಮೂಡಿ ಬರಲೆಂದು ನನ್ನ ಶುಭ ಆಶಯಗಳನ್ನು ನಿಮಗೆ ಕಳಿಸುತ್ತಿದ್ದೇನೆ.
ಆದರೂ, ನಾನು ಹೊಸಬ,
ಇದಿಷ್ಟನ್ನು ಬರೆಯುವ ಹೊತ್ತಿಗೆ ನನಗೆ ಸುಮಾರು 30 ನಿಮಿಷಗಳೇ ಬೇಕಾಯಿತು.
ನನ್ನ ತಪ್ಪೇನಾದರೂ ಇದ್ದಲ್ಲಿ, ನಿಮ್ಮ ಕನಿಕರ ನನ್ನ ಮೇಲೆ ಇರಲಿ.
ವಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಶಾಸ್ತ್ರಿಯವರೆ,
ಲಕ್ಷ್ಮಣ ’ಪ್ರಾಣ’ ಬಿಟ್ಟ ದುಃಖದಲ್ಲಿ ಪಾರ್ಥಸಾರಥಿಯವರು ಬರಹದಲ್ಲಿ "ಮಹಾಪ್ರಾಣ"ಬಿಟ್ಟರು.. ಅಷ್ಟೇ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಅದು ಹಾಗಲ್ಲ ಗಣೇಶರೆ
ಮಹಾಪ್ರಾಣ ಏನಿದ್ದರು ತಮ್ಮಂತ 'ಮಹಾನ್' ಜೀವಿಗಳಿಗೆ(ಅಂಡಾಂಡಭ್ರಹ್ಮರಿಗೆ)
ನಮ್ಮಂತ 'ಅಲ್ಪ' ರಿಗೆ ಅಲ್ಪಪ್ರಾಣವೆ ಸಾಕು ಎಂಬ ಅರಿವು ನಮಗಾದ್ದರಿಂದ
ಎಲ್ಲವು 'ಅಲ್ಪಪ್ರಾಣ' ವೇ ಆಗಿದೆ!
ಇಂತಿ ಅಲ್ಪಪ್ರಾಣಿ
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

. ಶಾಸ್ತ್ರಿಗಳಿಗೆ ನನ್ನ ನಮಸ್ಕಾರ‌
ನಿಜ ಹಲವು ಸಾರಿ ಈ ರೀತಿಯ ತಪ್ಪುಗಳಾಗುತ್ತಿವೆ. ಅದಕ್ಕೆ ಕಾರಣ ಕಣ್ತಪ್ಪು ಕೈತಪ್ಪು ಕೆಲವೊಮ್ಮೆ ಅರಿವಿನ ತಪ್ಪು ಅಂದರೆ ಗೊತ್ತಿಲ್ಲದ್ದರಿಂದ ಆಗುವ ತಪ್ಪುಗಳು
ಅಂತಹ ತಪ್ಪುಗಳನ್ನು ತಿಳಿಸಿದಾಗ ತಿದ್ದಿಕೊಳ್ಳಲು ಸದಾ ಸಿದ್ದ
ನೋಡೋಣ ಮುಂದೊಮ್ಮೆ ಅಂಗ್ಲದಲ್ಲಿ ಸ್ಪೆಲ್ ಚೆಕ್ ಇರುವ ರೀತಿ ಕನ್ನಡದಲ್ಲಿಯು ಕಾಗುಣಿಕ ಪರೀಕ್ಷಕ ದಂತಹ ಸಾಪ್ಟ್ ವೇರ್ ಬರಬಹುದೇನೊ ಮೊದಲು ನಮ್ಮ ಸಂಪದದಲ್ಲಿಯೆ ಬಂದರೆ ಅನುಕೂಲ‌
ಮತ್ತೊಂದು ವಿಷಯ‌
ವರ್ಣಮಾತ್ರವನ್ನು ತಿದ್ದಿದರು ಗುರುವೆನ್ನುವ ಸಂಪ್ರದಾಯವಿದೆ ಹಾಗಿರಲು
ತಪ್ಪು ಕನಿಕರದಂತ ಪದಗಳೇಕೆ ನೀವು ಸಂಕೋಚವಿಲ್ಲದೆ ಸಂಪದಿಗರ ಕಾಗುಣಿತ ತಿದ್ದಿ ಹೇಳುವ ಕೆಲಸ ಮಾಡಿ
= ‍ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by H A Patil on

ಪಾರ್ಥಸಾರಥಿ ಯವರಿಗೆ ವಂದನೆಗಳು

" ಪಶ್ಚಿಮದಲ್ಲಿ ಲಕ್ಷ್ಮಣ " ಕಥೆಯನ್ನು ಓದಿದೆ, ನನಗೆ ಲಕ್ಷ್ಮಣನ ಅಂತ್ಯದ ಕಥೆ ಗೊತ್ತಿರಲಿಲ್ಲ. ಕಥೆಯಲ್ಲಿ ಲಕ್ಷ್ಮಣ ಸುಮಿತ್ರೆ, ರಾಮ ಲಕ್ಷ್ಮಣ, ದುರ್ವಾಸ ಮುನಿಗಳ ಭೇಟಿಯ ಸಂಧರ್ಭಗಳನ್ನು ಬಹಳ ನವಿರಾಗಿ, ಅರ್ಥಪೂರ್ಣವಾಗಿ ಚಿತ್ರಿಸಿದ್ದೀರಿ. ಬಿಗುವಾದ ಕಥಾಬಂಧ, ಸತ್ವಪೂರ್ಣ ನಿರೂಪಣೆ, ಪಾತ್ರಗಳ ಮಾನಸಿಕ ತುಮುಲಗಳನ್ನು ಸತ್ವಪೂರ್ಣವಾಗಿ ಹಿಡಿದಿಟ್ಟಿದ್ದೀರಿ. ಒಂದು ಪೌರಾಣಿಕ
ಕಥಾನಕವನ್ನು ಅತ್ಯುತ್ಮಮವಾಗಿ ನೀಡಿದ್ದೀರಿ. ಕೊನೆಯ ದೃಶ್ಯಕ್ಕೆ ತಾವು ನೀಡಿದ ಅಂತಿಮ ಸ್ಪರ್ಶ ಬಹಳ ಚೆನ್ನಾಗಿದೆ. ಒಮ್ಮೆ ಅಲ್ಲ ಹಲವು ಬಾರಿ ಓದಿಸಿ ಕೊಳ್ಳುವ ನಿಮ್ಮ ಬರವಣಿಗೆ ಉತ್ಕಷ್ಟಮಟ್ಟದ್ದು. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಪಾಟೀಲರೆ ತಮ್ಮ ಮೆಚ್ಚುಗೆ ನನಗೆ ತುಂಬಾ ಸಂತಸ ತಂದಿದೆ.
ಈಗ ಕತೆಗಳನ್ನು ಬರೆಯುವಾಗ ಪೌರಾಣಿಕ ಕತೆಗಳನ್ನು ಯಾರು ಮುಟ್ಟಲು ಹೋಗುವದಿಲ್ಲ
ಹಾಗಿರುವಾಗ ಸಂಪದದಲ್ಲಿ ಈ ರೀತಿಯ ಕತೆಗೆ ಸಿಗುವ ಪ್ರೋತ್ಸಾಹ ನನಗೆ ಸಂತಸ ಕೊಡುತ್ತದೆ
= ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sriprasad82 on

ರಾಮಾಯಣದಲ್ಲಿ ಲಕ್ಷ್ಮಣನ ಈ ಅದ್ಯಾಯದ ಬಗ್ಗೆ ತಿಳಿದಿರಲಿಲ್ಲ. ತಿಳಿಸಿದ್ದಕ್ಕೆ ದನ್ಯವಾದಗಳು. ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ
----ಶ್ರೀ:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಶ್ರೀಪ್ರಸಾದ್ ಶೆಟ್ಟಿಯವರಿಗೆ
ತಮ್ಮ ಮೆಚ್ಚುಗೆಗೆ ನನ್ನ ವಂದನೆಗಳು
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಆಸಕ್ತಿ ಹುಟ್ಟಿಸುವಂತಹ ಕಥೆ. ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ!

ಅಂದಹಾಗೆ ನಮ್ಮಲ್ಲಿ ನೂರಾರು ರಾಮಾಯಣಗಳಿರುವುದೂ ಅದರಲ್ಲೆ ಬೇರೆ ಬೇರೆ ಕಥೆಗಳಿರುವುದೂ ನಿಜವೇ. ವಾಲ್ಮೀಕಿ ರಾಮಾಯಣದಲ್ಲಿ ಈ ಕಥೆ ಪ್ರಸ್ತಾಪವಾಗಿಲ್ಲ. ( ಉತ್ತರಕಾಂಡವೇ ವಾಲ್ಮೀಕಿ ಬರೆದಿದ್ದಲ್ಲ ಅನ್ನುವ ಮಾತೂ ಇದೆ, ಅದು ಬೇರೆ ವಿಷಯ ಬಿಡಿ).

ಉತ್ತರ ಕಾಂಡದ ಕೊನೆಯ ಶ್ಲೋಕಗಳಲ್ಲಿ, ರಾಮ ಲಕ್ಷ್ಮಣರೆಲ್ಲರೂ ಒಟ್ಟಿಗೆ ಸರಯೂ ನದಿಯನ್ನು ಹೊಕ್ಕ ಸಮಾಚಾರವಿದೆ. ಇದರ ಬಗ್ಗೆ ಹಿಂದೊಮ್ಮೆ ಬರೆದಿದ್ದೆ - http://sampada.net/b...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಹಂಸಾನಂದಿಯವರಿಗೆ
ತಮ್ಮ ಪ್ರತಿಕ್ರಿಯೆಗೆ ವಂದನೆಗಳು
ನೀವು ಕೊಟ್ಟಿರುವ ಲಿಂಕ್ ಓದಿದೆ . ರಾಮಯಣಕ್ಕೆ ಕೊನೆಯೆ ಇಲ್ಲವೇನೊ. ಹಾಗೆ ಕನ್ನಡಕ್ಕೆ ಬಾಷಾಂತರವಾದ ಒಂದು ಕಾದಂಬರಿ ಓದಿದ್ದೆ , ನೆನಪಿರುವಂತೆ ಯಾರೊ ಮಹಾರಷ್ಟ್ರದವರ ರಚನೆ ಅದರಲ್ಲಿ ಅಯೋದ್ಯೆಯ ರಾಜವಂಶದಲ್ಲಿ ಅಣ್ಣ ತಂಗಿಗೆ ಮದುವೆಯಾಗುತ್ತಿತ್ತು ಎನ್ನುತ್ತ ರಾಮನು ಸೀತೆಯು ಅಣ್ಣತಂಗಿ ಎನ್ನುತ್ತಾರೆ ಎನೇನೊ ವಿಚಿತ್ರಗಳು. ಇರಲಿ.
ವಂದನೆಗಳೊಡನೆ
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gunashekara murthy on

ಪಾರ್ಥಸಾರಥಿಯವರೇ,
ನನ್ನದೊಂದು ಸಣ್ಣ ದ್ರಾವಿಡ ರಾಮಾಯಣ ಎನ್ನುವ ಕಥೆಯಿದೆ ಓದಿ ಪ್ರತಿಕ್ರಿಯೆ ತಿಳಿಸಿ

ದ್ರಾವಿಡ ರಾಮಾಯಣ
( ಮಿಥ್ಯ ಭೂಮಿಯನ್ನು ಬಿರಿದು ಮೊಳೆತ ಸತ್ಯಕಥೆ )

ಭಾರತದಲ್ಲಿ ಯಾರೂ ನೆಲಸಿಲ್ಲದ ಕಾಲವೊಂದಿತ್ತು. ಮುಂದೆ ದಕ್ಷಿಣ ಆಫ್ರೀಕದಿಂದ ಬಂದು ನೆಲೆಸಿದ ದ್ರವಿಡರು ಇಲ್ಲಿನ ಮೂಲನಿವಾಸಿಗಳಾಗಿ ಶಾಂತಿ ನೆಮ್ಮದಿಯಿಂದಿದ್ದ ಸಂಪತ್ಭರಿತ ನಾಗರೀಕತೆ ಬಾಷೆ ಐಸಿರಿಯ ಜೀವನ ಪದ್ಧತಿಯಲ್ಲಿ ತಮಗೆ ವಿರೋಧಿಗಳಿಲ್ಲದೆಲೇ ಯುದ್ಧವೇನೆಂದರಿಯದ ಸುಮಾರು ೫೦೦ (ಐನೂರು) ವರ್ಷ ಕಾಲವಾದಿಂದೆ ಕ್ರಿ ಪೂ ೩೭೨೦, ಅಂದರೆ ಈಗಿನ ಕಾಲಮಾನ ೫೭೨೦ ಹಿಂದೆ ಆರ್ಯರು ಮಧ್ಯೆ ಏಷ್ಯದಿಂದ ಬುಲೂಚಿಸ್ಥಾನದ ಮೂಲಕ ಸಿಂಧ್ ಕಣಿವೆಯ ಮೂಲಕ ಭಾರತವನ್ನು ಪ್ರವೇಶಿಸಿದರು.
ಸಿಂಧೂ ನದಿ ಬಯಲಿನ ನಾಗರೀಕತೆಯ ಬಗ್ಗೆ ಏಳು ದಶಕಗಳಿಂದೆ ಗೊಚರಿಸಿತು. ಆ ಹರಪ್ಪ ಮೊಹೆಂಜೋದಾರೋದಲ್ಲಿ ಉತ್ಖನಗಳಿಂದ ಬೆಳಕಿಗೆ ಬಂದ ವಿವರಗಳು ಹೀಗಿದೆ, ವ್ಯೆವಸ್ಥಿತ ನಗರ ಯೋಜನೆ, ಮಹಡಿ ಮನೆಗಳು, ೯ ಒಂಬತ್ತು ಮೀಟರ್ ಅಗಲದ ರಸ್ತೆಗಳು, ಒಳಚರಂಡಿ ವ್ಯೆವಸ್ಥೆ, ಗಂಡು ಹೆಣ್ಣಿಗೆ ಬೇರೆ ಬೇರೆ ಸಾರ್ವಜನಿಕ ಸ್ನಾನದಕೊಳಗಳು ಕಂಭಗಳಿಂದ ಕೂಡಿದ ಸಭಾಂಗಣ ಮಂಟಪ ೫ ಐದು ಕಿಲೋಮೀಟರ್ ಪರಿಧಿಯ ಗೋಡೆಯಿಂದ ಸುತ್ತುವರಿದಿತ್ತು.
ಅವಶೇಷಗಳಲ್ಲಿ ದೊರೆತಿರುವ ೩೨೫ ( ಮೂನ್ನೂರೈಪ್ಪತೈದು )ಅಸ್ತಿಪಂಜರಗಳು ದ್ರಾವಿಡರ, ಸಿಂಧಿ, ಗುಜರಾತಿ, ವ್ಯೆಕ್ತಿ ಲಕ್ಷಣಗಳನ್ನೇ ಹೋಲುತ್ತದೆ. ಅದರಲ್ಲಿ ಯಾವ ಸಂಶಯವಿಲ್ಲ.
ಆರ್ಯರು ಯುದ್ಧ ಕಲೆಯರಿತ ಅವರು ಅಲ್ಪಸಂಖ್ಯಾತ ಜನ ದ್ರವಿಡ ಅಥವಾ ದ್ರಮಿಳ ಮೂಲ ನಿವಾಸಿಗಳ ಮೇಲೆ ಯುದ್ಧ ಮಾಡಿ ಆ ನೆಲವನ್ನು ಆಕ್ರಮಿಸಿಕೊಂಡರು. ದ್ರಮಿಳರನ್ನು ದಕ್ಷಿಣಕ್ಕೆ ಅಟ್ಟಿದರು ತಮ್ಮ ಕುಲ ಕಸುಬಾದ ಪಶು ಸಂಗೋಪನೆ ದನಕಾಯುವ (ದನ ಮೇಯಿಸುವುದು) ಸಂಗೋಪನೆ ಕಸುಬನ್ನೇ ಮುಂದುವರಿಸಿಕೊಂಡು ತಮ್ಮ ಪ್ರಾಬಲ್ಯವನ್ನೇ ಉತ್ತರ ಭಾರತದಲ್ಲಿ ಸ್ಥಾಪಿಸಿಕೊಂಡರು.
ವೇದಗಳನ್ನು ನಂಬುವ ಆರ್ಯರಿಗೆ ಮೂರ್ತಿ ಪೂಜೆಗೆ ಅವಕಾಶವಿರಲಿಲ್ಲ ಅವಕಾಶಕೊಡಲಿಲ್ಲ ಈಗಲೂ ಇಲ್ಲ. ದ್ರವಿಡ ( ದ್ರಮಿಳರು ) ಹರಪ್ಪ ಮಹಂಜೋದಾರೋವಿ ನಲ್ಲಿರುವಾಗಲೇ ಮೊದಲು ಪಶುಪತಿಯನ್ನು ಪೂಜಿಸುತ್ತಿದ್ದರು. ಪೂಜಿಸಲು ಕಾರಣ, ಆತ ಆದಿ ಮನುಷ್ಯನಂತೆ ಗಜ ಚರ್ಮವನ್ನು ಧರಿಸಿದ್ದವನಾಗಿದ್ದ. ತಲೆ ಬಾಚಲು ಗೊತ್ತಿಲ್ಲದ ಕಾಲ, ಗಂಟು ಜಡೆಯವನಾಗಿದ್ದ. ಆತನಿಗೆ ಸರ್ಪಕಚ್ಚಿದರೆ ವಿಷತೆಗೆಯಲು ಬರುತ್ತಿತ್ತು. ಸರ್ಪಗಳನ್ನು ಮಾಲೆಯಂತೆ ಧರಿಸಿದ್ದ ಮೊದಲು ಮನುಷ್ಯ ಗೆಡ್ಡೆ ಗೆಣಸು ತಿನ್ನುತ್ತಿದ್ದದ್ದು ಎಲ್ಲರಿಗೂ ತಿಳಿದ ವಿಚಾರ. ನಂತರ ಮನುಷ್ಯ ಮಾಂಸಹಾರಿಯಾಗಿದ್ದು, ಮುಂದೆ ಬೇಟೆಯಾಡಲು ಆರಭಿಸಿದ್ದು ಅದಕ್ಕೆ ಆಯುಧವಾಗಿ ತನ್ನ ರಕ್ಷಣೆಗೂ ಹಿನ್ನಲೆಯಲಿ ಅವನ ಕೈಯಲ್ಲಿ ತ್ರೀಶೂಲವಿತ್ತು ಎಂಬ ಕಾರಣದಿಂದಾಗಿ ಈತನೇ ನಮ್ಮ ಮೂಲ ಪುರುಷನೆಂದು, ಪಶುಪತಿಯನ್ನು ವಾಹನ ನಂದಿ ನಾಗಗಳನ್ನು ಪೂಜಿಸುತಿದ್ದರು. ಮುಂದೆ ಆರ್ಯರು ತಮ್ಮ ನಿಲುವನ್ನು ಬದಲಾಯಿಕೊಂಡು ಮೂರ್ತಿ ಪೂಜಿಕರಾದುದ್ದಲ್ಲದೆ ದೇವಾಲಯಗಳಲ್ಲಿ ಅರ್ಚಕರಾದರೂ ಆಗಿದ್ದಾರೆ.
ದ್ರವಿಡರೂ ತಮ್ಮ ಸಂಸ್ಕೃತಿ ಹಿರಿಮೆಯ ನಾಗರೀಕತೆ ತತ್ವಙ್ಞಾನ ಪರಂಪರೆ ಇತಿಹಾಸ ಜೀವನದ ಆದರ್ಶಗಳನ್ನು ಬಿಟ್ಟು ದಿಕ್ಕು ದೆಶೆ ಕಾಣದೇ ಭಾರತದ ಮೂಲೆ ಮೂಲೆಗೆ ಅಂದರೆ, ಗುಜರಾತ್, ಅಸ್ಸಾಂ, ಬಿಹಾರ, ನಾಗಲ್ಯಾಂಡ್, ತ್ರಿಪುರ, ದಕ್ಷಿಣ ಬಂಗಾಳ, ಒರಿಸ್ಸಾ ಇಂದಿನ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಸಿಂಹಳ ಹೀಗೆ ದಾರಿತಪ್ಪಿ ಹಂಚಿಹೋದರು. ಮುಂದೆ ನಮ್ಮ ನಾಗರೀಕತೆ, ಆಸ್ತಿ, ಸಂಪತ್ತು, ಸಂಸ್ಕೃತಿಯ ನಾಶಮಾಡಿದ ಆ ಆರ್ಯರಿಗೂ ದಕ್ಷಿಣ ದ್ರಾವಿಡ (ದ್ರಮಿಳ)ರಿಗೂ ದ್ವೇಷಬೆಳೆಯುತ್ತಲೇ ಇತ್ತು.
ದ್ರಾವಿಡರ ಬಣ್ಣ ಕಪ್ಪು, ಚಪ್ಪ್ಟೆಯಾದ ಮೂಗು, ಗಿಡ್ಡವಾದ ಆಕಾರ ಈ ವ್ಯೆತ್ಯಾಸ ಈಗಲೂ ಕಾಣಬಹುದು. ಆದರೆ, ನಗರಗಳಲ್ಲ, ನಾಗರೀಕತೆ ಬೆಳದಂತೆ ಈಗ ತುಸು ಬದಲಾಗಿದೆ. ಆರ್ಯರು ತಮಗೆ ಬೇಕಾದಾಗ ಶೂದ್ರರೆಂಬ ಅನಾರ್ಯರ, ದಾಸರ, ಪಣಿಗಳ, ದಸ್ಸ್ಯುಗಳನ್ನು ಎತ್ತಿನಂತೆ ದುಡಿಯಲು, ಗಾಣಗಳಲ್ಲಿ, ಬಾರದ ಕಲ್ಲುಗಳನ್ನು ಹೊರಲು ಹಿಡಿದುಕೊಂಡು ಹೋಗುತ್ತಿದ್ದರು. ಹೆಣ್ಣುಗಳಿಗೆ ಮದುವೆಗೆ ಬಳುವಳಿಯಾಗಿ ೧೦೦ ಅಥವಾ ೫೦ ಜನ ಅನಾರ್ಯ, ದಾಸ, ಪಣಿ, ದಸ್ಸ್ಯು ಸೇವಕರನ್ನು ಬಳುವಳಿಯಾಗಿ ಕಳಿಸುತಿದ್ದರು. ಅವರಾರೆಂದರೆ ದಕ್ಷಿಣದಿಂದ ಬಲತ್ಕಾರವಾಗಿ ಒದ್ದು ಬಡಿದು ಎಳೆದುಕೊಂಡು ಹೋಗುತ್ತಿದ್ದರು. ಕೇಳಲು ಯಾವನಾಡಿಯು ಇರಲಿಲ್ಲ. ಅಲ್ಲಿ ಚಾಟಿಗಳಿಂದ ಹೊಡೆದು ತಮ್ಮ ಕೆಲಸಗಳಿಗೆ ಬಳಿಸಿಕೊಳ್ಳುತಿದ್ದರು. ದಾಸ, ದಸ್ಸ್ಯು, ಪಣಿ ಮತ್ತು ಮ್ಲೇಚ್ಚರು ( ಶೂದ್ರ )ಇರುವುದೇ ಮೇಲ್ ವರ್ಗದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಜನರಿಗೆ ದುಡಿಯುವುದಕೆಂದು ವೇದ ಉಪನಿಷತ್ತು ಗೀತೆಯಲ್ಲಿದೆ ಎನ್ನುತಿದ್ದರು.
ಈ ದ್ರಾವಿಡರು ಆಂದರೆ, ದಕ್ಷಿಣದಲ್ಲಿ ಮೂಲ ದ್ರಾವಿಡ
( ದ್ರಮಿಳ ) ಬಾಷೆಯಿಂದ ತಮಿಳು ಮೊದಲು ಬೇರ್ಪಟ್ಟಿತು.
ಬಹಳಕಾಲದ ತದನಂತರ ಪ್ರಾಂತಿಯ ಬಾಷೆಗಳು ಬೇರ್ಪಟ್ಟು ತಮ್ಮ ತಮ್ಮದೇ ಬಾಷೆಯನ್ನು ಸಂಸ್ಕೃತದೊಂದಿಗೆ ಮಿಶ್ರಿತವಾಗಿ ತೆಲಗು, ಕನ್ನಡ, ಮಾತನಾಡುವರಾದರೂ ಬೇರೆಯಾದರು. ಮಲೆಯಾಳಂ ಈಗ್ಗೆ ( ೬೦೦ ) ವರ್ಷದಿಂದೆ ತಮಿಳಿನಿಂದ ಬೇರ್ಪಟ್ಟಿತು. ಉತ್ತರ ಭಾರತದ ದ್ರಾವಿಡರೂ ಸಹಜವಾಗಿ ಆರ್ಯರಲ್ಲಿ ಬೆರೆತರು ತಮ್ಮ ಬಾಷೆಯನ್ನು ಮರೆತು ಹೋದರು. ತುಳು ಅದಕ್ಕೆ ಬಾಷೆಯಿದೆ ಲಿಪಿ ಇನ್ನೂ....ಯಿಲ್ಲ. ಈ ಬಾಷೆಗಳೂ ಪಂಚ ದ್ರಾವಿಡ ಬಾಷೆಯಾಗಿ ಉಳಿದಿದೆ.
ತಮಿಳು ಮಾತ್ರ ತನ್ನತನವನ್ನು ಕಾಪಾಡಿಕೊಂಡು ಬಂದಿತ್ತು ಸಂಸ್ಕೃತದೊಂದಿಗೆ ಆ ಬಾಷೆ ಸಂಕರಣವಾಗದೇ ಬೆರೆಯದೇ ಹೊಯಿತು. ದಕ್ಷಿಣದಲ್ಲಿ ತಮಿಳರು ಮಾತ್ರ ಬೆರೆಯದೆ ಹೋದ ಕಾರಣ, ಅವರಲ್ಲಿ ಪರಿಶುದ್ಧ ( ಬೆರೆಯದ ) ಬಾಷೆಯಾಗಿತ್ತು. ಅದಕ್ಕೆ ತನ್ನದೇ ಆದ ಹಳೆಯ ಸಾಹಿತ್ಯ ಬಲವುಳ್ಳದಾಗಿತ್ತು.
***{ ಉತ್ತರ ಭಾರತದ ಆರ್ಯರು ದಕ್ಷಿಣದಲ್ಲಿ ಬಂದು ನೆಲಸಿದ ಮೇಲೆ
" ಮುಂದೆ ಮಣಿ ಪ್ರವಾಳ "ಎಂಬ ಬೆಳವಣಿಗೆ ಬಂದು ಅಂದರೆ, ಮುತ್ತು ಮಣಿಗಳ ಜೋತೆ ಹವಳವನ್ನೂ, ಬೇರೆ ಬಣ್ಣದ ಮಣೀ ಪೋಣೀಸುವುದರಿಂದ ಶೋಭೆ ತರುವುದೆಂದು ಹೊಸದಾಗಿ ಬಂದ ಆರ್ಯರಿಂದ( ಬ್ರಾಹ್ಮಣರಿಂದ) ತಮಿಳಿನಲ್ಲಿ ಸಂಸ್ಕೃತವನ್ನು ಬೆರೆಸಿ ಬರೆಯ ತೊಡಗಿದರು. } ( ತಮಿಳಿನಲ್ಲಿ ಈಗಲೂ ಬೇರೆ ಬಾಷೆಗಳ ಬೆರಸದೇ ಜನಸಾಮಾನ್ಯರು ಮಾತನಾಡಲು ಸಾದ್ಯವಿದೆ ). ಮುಂದೆ ಮುಂದೆ ಅಲ್ಲಿಂದ ದ್ರಾವಿಡರಲ್ಲೇ ಕಚ್ಚಾಟ ಹುಟ್ಟಿಕೊಂಡವು.
*
ತಮಿಳರು ಹಿಂದಿನಿಂದಲೂ ಬಂದ ವೇದ ಉಪನಿಷತ್ತುಗಳನ್ನು ಯಾಗ-ಯಙ್ಞಗಳನ್ನು ತಮಿಳರು ದಿಕ್ಕರಿಸುತ್ತಿದ್ದರು, ದಿಕ್ಕರಿಸುತ್ತಾ ಹೋದರು. ಇದರಿಂದ ಮತ್ತು ಇಂದಿನಂತೆ ಬಾಷೆಯಲ್ಲಿನ ಅಭಿಮಾನದಿಂದ ದಕ್ಷಿಣ ಭಾರತೀಯರಲ್ಲೇ ವಿರೋಧಿಗಳಾದರು.
ಆರ್ಯರು ಹೀಗಿರುವಲ್ಲಿ ಆಗಾಗ ದಾಸ್ಯುಗಳನ್ನು ದಸ್ಸು
ಮ್ಲೇಚ್ಚರರನ್ನು ಅಂದರೆ ಯಾಗ-ಯಙ್ಞಗಳನ್ನು ದಿಕ್ಕರಿಸುವ ಇವರನ್ನು ಸೇವಕರಾಗಿ ಹಿಡಿದುಕೊಂಡಿ ಹೋಗುತ್ತಿದ್ದರು. ಇವರಿಗೆ ಜನ ಬಲವಿಲ್ಲ ಹಣಬಲವಿಲ್ಲ ಆಯುಧಗಳಿಲ್ಲ ಅಲ್ಪಸಂಖ್ಯಾತರಾದ ( ದ್ರಮಿಳ )ತಮಿಳರು ದಾರಿ ಕಾಣದೇ ಇದ್ದರು.
ಈ ಹೋರಾಟ ಮುನ್ನುಡಿ ಬರೆದವರು ರಾವಣನ ತಾತ
ಈತನೆದುರೆ ಹಲವರನ್ನು ಹೆಣ್ಣು ಮಕ್ಕಳನ್ನು ಹಿಂಸಿಸುವುದ ನೋಡಿ ಇದಕ್ಕೆ ದಾರಿ ಕಂಡುಕೊಳ್ಳಲೇಬೇಕು ಎಂದು ತೀರ್ಮಾನಿಸಿ, ತನ್ನ ಮಗಳನ್ನು( ರಾವಣನ ತಾಯಿ ಕೈಕಸಿ )ಕರೆದು ತಾಯೇ, ನಿನ್ನಿಂದ ನಮ್ಮ ಕುಲಕ್ಕೊಂದು ಉಪಕಾರವಾಗಬೇಕಿದೆ ನಿನ್ನಿಂದಲಿ ನಮ್ಮ ದುಃಖನೀಗುತ್ತದೆ . ನೀನು ಮಾಡುವುದಾದರೆ ನಾನು ಹೇಳುತ್ತೇನೆ ಎನ್ನುತ್ತಾನೆ.
ಮಗಳೋ ಕೈಕಸಿ, ರೋಷವುಳ್ಳವಳು ತ್ಯಾಗಬುದ್ಧಿಯುಳ್ಳವಳು ಬಾಷಾಭಿಮಾನಿಯು ಆರ್ಯರ ಅಕ್ರಮಣ ಅರಿತವಳು ಕುಲಜನರ ದುಃಖದುಮ್ಮನ ಕಂಡವಳೂ ಸರಿ ಎನ್ನುತ್ತಾಳೆ.
ಅಯ್ಯ, ಏನದು ಎನ್ನುತ್ತಾಳೆ ?. ಅವನು ಆ ಒಂದು ಸಿದ್ಧಾಂತವನ್ನು ತನ್ನ ಕುಲಜನರೆದುರು ಹೇಳುತ್ತಾನೆ.
ನೋಡಿ! ನನ್ನ ಕುಲ ಬಾಂಧವರೇ, ಈ ನನ್ನ ಮಗಳಿಗೆ ವರ್ಣ ಸಂಕರಣ ಮಾಡಿಸುತ್ತೇನೆ. ಇದರಿಂದ ಒಬ್ಬ ಶಕ್ತಿ ವೀರ್ಯವಂತ ಮಗನನ್ನು ಪಡೆದು ನಮ್ಮ ಕುಲಕ್ಕೆ ಬಂದಿರು ಕಷ್ಟಗಳು ನೀಗಲಿವೆ ನೀವು ಒಪ್ಪುವುದಾದರೆ ಎನ್ನುತ್ತಾನೆ. ಎಲ್ಲರು ಅಂಗೀಕರಿಸಿ ಒಪ್ಪುತ್ತಾರೆ. ಒಬ್ಬಮೇಧಾವಿ ಒಳ್ಳೆಙ್ಞಾನಿ ಸಕಲವಿದ್ಯೇ ಪಾರಂಗತ ಬ್ರಾಹ್ಮಣನಲ್ಲಿ ಇವಳನ್ನು ಕಳಿಸಿ ಅವನನ್ನೇ ಮದುವೆ ಮಾಡಿಕೊಳ್ಳುವಂತೆ ಆಕೆಗೆ ಪ್ರೋತ್ಸಾಹಕೊಟ್ಟು ದಾರಿಯನ್ನೂ ಹೇಳಿ ಕಳಿಸುತ್ತಾನೆ.( ಬ್ರಾಹ್ಮಣರೆಲ್ಲರು ಕೆಟ್ಟವರಲ್ಲ ಎಂಬುದನ್ನು ಒತ್ತಿ, ಒತ್ತಿ ಹೇಳಬಯಸುತ್ತೇನೆ.) ಆಕೆಯು ಕುದುರೆಯೇರಿ ಒಳ್ಳೆಯ ವಂಶಸ್ಥರನು ಹುಡಿಕಿ ಪುಲಸ್ಯಬ್ರಹ್ಮನ ವಂಶಕ್ಕೆ ಸೇರಿದ ವಿಶ್ರವಸ್ಸಿ ಆಶ್ರಮಕ್ಕೆ ಹೋಗಿ ಆ ಗುರುವನ್ನು ಕಾಣುತ್ತಾಳೆ. ಆತ ಮೊದಲು ಈ ಆಶ್ರಮವನ್ನು ದಸ್ಸ್ಯುಗಳು ಪ್ರವೇಶಿಸಬಾರದೆಂದು ತಡೆಯುತ್ತಾನೆ. ಆದರೆ ಆಕೆ ಬಿಡದೆ ತನ್ನಕುಲದ ಮೇಲೆ ನಡೆಯುವ ಹಿಂಸೆಯನ್ನು ದೌರ್ಜನ್ಯವನ್ನು ದಾಸ್ಯತ್ವವನ್ನೂ ದಾಸರಾಗಿ ದುಡಿಯುವ ಮಕ್ಕಳನ್ನು ಕಾರಣತೋರಿ ಒಪ್ಪಿಸುತ್ತಾಳೆ. ಆದರೆ, ಆತನ ಮಡದಿ, ಮಕ್ಕಳು, ಶಿಷ್ಯರು ಒಪ್ಪದೇ ದಿಕ್ಕರಿಸುತ್ತಾರೆ. ಬ್ರಾಹ್ಮಣರಾದ ನಾವು ದಾಸರಿಗೆ ಆಶ್ರಮದಲ್ಲಿ ಸ್ಥಳ ಜೋತೆಗೆ ಮದುವೆಯೇ ಎಂದು ಹಟ ಮಾಡುತ್ತಾರೆ. ಆತ ಮಹಾನ್ ಆತ ಬ್ರಾಹ್ಮಣನೆಂದರೆ ಹೇಗಿರಬೇಕು ಹೇಗಿರಬಾರದೆಂದು ಬ್ರಾಹ್ಮಣ್ಯದ ಬಗ್ಗೆ ಕುಲಂಕುಶವಾಗಿ ತಿಳುವಳಿಕೆ ಕೊಡುತ್ತಾನೆ. ಬೇರೆದಾರಿಯಿಲ್ಲದೆಲೇ ಮದುವೆ ನಡೆದು ಸಂತಸದಲ್ಲಿ ಜೀವನ ಸಾಗಿರಲು ಮೂರು ಗಂಡು ಮಗುವು ಒಂದು ಹೆಣ್ಣು ಮಗುವು ಆಗುತ್ತದೆ. ಅವರೆ ರಾವಣ ಕುಂಭಕರ್ಣ ವಿಭೀಷಣ ಮತ್ತು ಶೂರ್ಪಣಕಾರಾಗಿರುತ್ತಾರೆ. ಇವರುಗಳು ಬ್ರಾಹ್ಮಣ್ಯ ಪುರೋಹಿತ, ವೇದ, ಉಪನಿಷತ್, ಸಕಲ ಯುದ್ಧಕಲೆಗಳಲ್ಲಿ ಅತ್ತ್ಯೋನ್ನತ ಪರಿಣತಿ ಹೊಂದಿ ತಂದೆಯಿಂದಲೇ ಪ್ರಶಂಶೆಗೆ ಪಾತ್ರರಾಗುತ್ತಾರೆ.
ಇನ್ನೂ ತಾಯಿ ಮಕ್ಕಳಿಗೆ ಹೇಳಿದ ಆ ವಾಕ್ಯ ಪರಿಪಾಲನೆಗಾಗಿ ತನ್ನ ಗಂಡ ವಿಶ್ರವಸ್ಸಿಂಗೆ ವಿಧಾಯ ಹೇಳಿ ಆತನ ಉಪಕಾರಕ್ಕೆ ಕಂಬಿನಿಯಿಂದಲಿ ದುಃಖದಿಂದಲೀ ಬೀಳ್ಕೊಟ್ಟು ಮೊದಲಪತ್ನಿಯು ಬಹಳ ದುಃಖ ದುಮ್ಮನದಿಂದಲಿ ಕಳಿಸಿಕೊಡುತ್ತಾಳೆ. ಆತನ ಶಿಷ್ಯರೂ ತಾಯಿ ಮಕ್ಕಳು ಬೇರೆಯಾದಂತೆ ದುಃಖದಿ ದುಃಖಸಾಗರದಲ್ಲಿ ಮುಳುಗಿ ಹೋಗುತ್ತಾರೆ.
ಅಲ್ಲಿಂದಲಿ ಹೊರಟು ತಮ್ಮ ದ್ಯೇಯಕ್ಕಾಗಿ ತಮ್ಮತಾಯಿ ನೆಲಕ್ಕೆ ಕಾಲಿಕ್ಕಿದಾಗಲೇ ಮಣ್ಣಿನ ಮಣ್ಣ್ ಸುಗಂಧ ವಾಸನೆ ಮೈರೋಮಂಚನ
ವಾಗುತ್ತದೆ. ಸುಂದರನೆಲ ಬನ ವನ್ಯಮೃಗಗಳು ಜಿಂಕೆಗಳ ನೆಗೆದಾಟ ಅಲ್ಲಲ್ಲಿ ಝರಿಝರಿಗಳು ಹೂವಿನ ಮಧುರ ಸುವಾಸನೆ ಕಣ್ ಮನಗಳ ಸಂತಸದಿ ತಣಿಸುತ್ತದೆ. ಮುಂದೆ ತಾತ, ದಾಯದಿಗಳು, ಬಂಧು, ಬಾಂದವರು, ನಾಡಜನರು ಪ್ರೇಮಪಾಶದಲ್ಲಿ ಕುಣಿದು ಕುಪ್ಪಳಿಸುತ್ತಾರೆ. ನಮ್ಮ ಕಷ್ಟಗಳೆಲ್ಲಾ ಇಂದಿಗೆ ತೀರಿತೆಂದು ಹಿರಿಹಿರಿ ಹಿಗ್ಗಿದರು. ಅವರಮಾತು ಸತ್ಯವೇ ಆಗಿತ್ತು.
ಮುಂದೆ ಅವರ ಕಥೆಯಲ್ಲಿ ಮಾರ್ಪಾಡುಗಳು ಕಂಡವು ದಕ್ಷಿಣದ ದಾಸರು ದಸ್ಸ್ಯುಗಳು ಎಲ್ಲಾ ವಿದ್ಯೆಯನು ಅವರಿಂದ ಕಲಿತು ಅಲ್ಲಿ ಯಾವ ಒಬ್ಬ ಆರ್ಯನೂ ಪ್ರವೇಶಿಸದಂತೆ ಅವರನ್ನು ನೋಡಿದರೇ ನಡುಗುವಂತೆ ಪ್ರಕಾಶಮಾನವಾಗಿ ಬೆಳಗುತ್ತಾರೆ. ಯಾವ ಯಾಗ-ಯಙ್ಞವನಡೆಯದಂತೆ ಪಶು ವಧೆ ನಡೆಯದಂತೆ ನೋಡಿಕೊಂಡರು. ವಿಶ್ವಮಿತ್ರನ ಯಾಗಕ್ಕೆ ಮಾರೀಚ ಮತ್ತು ಸುಬಾಹು ಎಂಬ ರಾವಣನ ದಿಕ್ಕ್ಪಾಲಕರು ಅಡ್ಡಿಪಡಿಸುತ್ತಲೇ ಇರುತ್ತಾರೆ. ಗೊತ್ತಿಲ್ಲದೆ ನಡೆದರೇ ಸತ್ತದನದ ಮಾಂಸವನ್ನು ಅದರಲ್ಲಿ ಹಾಕಿಬಿಡುತ್ತಿದ್ದರು ಯಙ್ಞಗಳಲ್ಲಿ ಜೀವಂತ ಕುದುರೆ, ಹಸು, ಟಗರು, ಪ್ರಾಣಿಗಳನ್ನು ಹಾಕಬೇಕೆ ಹೊರತು ಸತ್ತಪ್ರಾಣಿಗಳ ಹಾಕಿದೆ ಯಙ್ಞನಾಶವೇ ಜೋತೆಗೆ ಋಷಿಗಳನ್ನು ಹಿಡಿದು ಬಡಿದು ಹಿಂಸೆ ಕೊಡುತ್ತಿದ್ದರು. ಇದು ದ್ರಾವಿಡರಿಗೆ ಮೊದಲಿಂದಲೂ ವಿರೋಧವಿತ್ತು. ಈ ವಿರೋಧದಿಂದ ಬೇಸತ್ತಾ ಋಷಿ ಮುನಿಗಳೆಲ್ಲಾ ಪ್ರಯತ್ನಗಳು ವ್ಯೆರ್ಥವಾಗಿ ಯಾರ‍್ಯಾರಲ್ಲೂ ಮೊರೆಯಿಟ್ಟರು ಅದು ಆ ಬಲಶಾಲಿಯಾದ ರಾವಣನ ಮುಂದೆ ನಿಶ್ಫಲವಾಯಿತು.
ಹೀಗೆ ಬಹು ಕಾಲಗಳು ಹುರುಳುತಲಿರುವಲ್ಲಿ ದೇವರಲ್ಲಿ ಮೊರೆಯಿಟ್ಟಿರಲ್ಲಲ್ಲಿ ವಿಶ್ವಾಮಿತ್ರನೆಂಬ ಋಷಿ ರಾಮನೆಂಬ ರಾಜನು ವನವಾಸಕ್ಕೆ ಬಂದಿರುವಲ್ಲಿ ಅವನಲ್ಲಿ ಇದನ್ನು ಪ್ರಸ್ಥಾಪಿಸಿ ರಾವಣನನ್ನು ಕೊಲ್ಲಬೇಕೆಂದು ದಕ್ಷಿಣಕ್ಕೆ ಕರೆದು ಬರುತ್ತಾನೆ. ವಿಶ್ವಮಿತ್ರನೂ ರಾಮಮತ್ತು ಲಕ್ಷ್ಮಣರಿಗೆ ಬಲ-ಅತಿಬಲ ಎಂಬ ಮಂತ್ರವನ್ನೂ ತಂತ್ರವನ್ನೂ ಉಪದೇಶಿಸುತ್ತಾನೆ. ಆದರೆ, ರಾವಣನನ್ನು ಕೊಲ್ಲುವುದು ಸುಲಭದ ಮಾತಲ್ಲ.
ರಾವಣನು ಚಕ್ರವರ್ತಿಯಾಗಿ ಮೆರೆಯುತಿರುವಲ್ಲಿ ತನ್ನ ತಂಗಿಯ ಗಂಡ ತನ್ನ ತಂಗಿ ಶೂರ್ಪನಕಗೆ ಹಿಂಸೆ ಕೊಡುತ್ತಿರುತ್ತಾನೆ. ಇದನ್ನು ಗುಢಾಚಾರಿಗಳಿಂದ ಅರಿತ ರಾವಣ ತನ್ನ ಭಾವನನ್ನು ಕರೆದು ವಿಚಾರಿಸುತ್ತಾನೆ, ಆತನೋ, ಚಕ್ರೇಶ್ವರನಲ್ಲಿ ಕೆಟ್ಟದಾಗಿ ವರ್ತಿಸುತ್ತಾನೆ. ಕೋಪಗೊಂಡ ರಾವಣ ತನ್ನ ಎಡಕೈಯಿಂದ ಬೀಸಲು ಅದು ವಜ್ರಾಯುಧದಂತೆ ಪೆಟ್ಟುಬಿದ್ದು ಸ್ಥಳದಲ್ಲೇ ಮೃತ್ಯು ಹೊಂದುತ್ತಾನೆ. ಇದರಿಂದ ರಾವಣ ಬಹುಕಾಲ ದುಃಖದಲ್ಲಿ ಮುಳುಗಿರಲು ತಂಗಿಗೆ ಮುಖತೋರದಲೇ ಇರುವಲ್ಲಿ ತಂಗಿಯು ಅಣ್ಣನಲ್ಲಿ ಮೊರೆಯಿಡುತ್ತಾಳೆ. ಅಣ್ಣ, ನಿನ್ನದೇನು ತಪ್ಪಿಲ್ಲ ಬಾ ಹೊರಗೆ ಎಂದು ಕರೆದಾಗ ಒಲ್ಲದಾ ಮನಸ್ಸಿಂದ ಆಸ್ಥಾನಕ್ಕೆ ಬರುತ್ತಾನೆ. ಸಿಂಹಾಸನರೊಡನಾಗಿ ಆಸ್ಥಾನದ ಸಭಿಕರ ಮುಂದೆ ತನ್ನ ತಪ್ಪಿನ ಪ್ರಾಯಚ್ಚಿತ್ತವಾಗಿ ಮತ್ತು ಆಕೆಗೆ ಜೀವನಕೆಂದು ತನ್ನ ದಕ್ಷಿಣ ಭಾರತದಅಂಗ ವಿಂಧ್ಯಪರ್ವತದವರಿವಿಗೆ ಆಕೆಗೆ ರಾಜ್ಯಭಾರ ನಡೆಸಲು ಅಧಿಕಾರ ಕೊಡುತ್ತಾನೆ.
ಹೀಗಿರುವಲ್ಲಿ ರಾಮನು ಅಲ್ಲಿ ಆಶ್ರಮದ ಕುಟೀರವಕಟ್ಟಿರುವುದು ಗುಢಾಚಾರರಿಂದ ಅರಿತ ಶೂರ್ಪನಕ ಬರುತ್ತಾಳೆ. ಅವಳೋ ಯುವತಿ ಗಂಡನಿಲ್ಲದೇ ಒಬ್ಬಳೇ ಇರುವುದು ಆ ವೇದನೆಯು ಅರಿತವರಿಗೆ ಮಾತ್ರ ಗೊತ್ತು. ಮುಂದೆ ರಾಮನನ್ನು ಕೇಳುತ್ತಾಳೆ. ನನ್ನನು ಮದುವೆಯಾಗಿಯೆಂದು ಆತ ಒಲ್ಲೆಯೆಂದು, ನೀನು ಒಬ್ಬಂಟಿಗನಾದ ನನ್ನ ತಮ್ಮನನ್ನು ಕೇಳು ಎನ್ನುತ್ತಾನೆ. ಆತನೋ ನಾನು ದಾಸ್ಸ್ಯರನ್ನು ಮದುವೆಯಾಗಲಾರೆ ಎನ್ನುತ್ತಾನೆ. ಮತ್ತೆ ರಾಮನಲ್ಲಿ ಕೇಳಲಾಗಿ ರಾಮನು ಅವಳ ಬೆನ್ನಹಿಂದೆ ಬರೆದು ಇವಳ ಮೂಗು ಮತ್ತು ಕಿವಿಯನ್ನು ಕತ್ತರಿಸಿ ಬಿಡು ಎಂದು ಬರೆದಿರುತ್ತಾನೆ. ಇದು ಸ್ವಲ್ಪವಾದರೂ ನ್ಯಾಯವೇ ? ? ?.
ದಶರಥನ ಮಗಳೂ ರಾಮನ ಸ್ವಂತ ತಂಗಿ ಶಾಂತದೇವಿಗೆ ಹೀಗಾಗಿದ್ದರೆ ರಾಮನೂ ಬಿಡುತ್ತಿದ್ದನೇ, ಆತನ ಪತಿ ಋಷ್ಯಶೃಂಗನೂ ಬಿಡುತ್ತಿದ್ದನೇ, ನೀವೇ ಯೋಚಿಸಿ ನಿಮ್ಮ ಮನಸ್ಸು ಒಪ್ಪುವುದೇ ನಿಮ್ಮ ಅಕ್ಕ ತಂಗಿಯರಿಗಾದರೇ ನೀವು ಬಿಡುವಿರೇ ಚಿಂತನೆಗೆಯಿಡುಮಾಡಿ ನೋಡಿ.
ಆಕೆಯು ತನ್ನ ಅಣ್ಣನಲ್ಲಿ ತನಗಾದ ಅವಮಾನವನ್ನು ಸತ್ಯವನ್ನು ಮರೆ ಮಾಚದೇ ಹೇಳುತ್ತಾಳೆ. ಇದರಿತ ರಾವಣ ತನ್ನ ಸೈನ್ಯದೊಂದಿಗೆ ಹೊರಡುತ್ತಾನೆ. ಆಗಶೂರ್ಪನಕ ತನ್ನಾವಮಾನಕ್ಕೆ ತಕ್ಕಪ್ರಾಸ್ಥವಾಗಬೇಕೆಂದು ಒಂದು ಸಲಹೆ ನೀಡುತ್ತಾಳೆ. ಅದೇನೆಂದರೆ, ಸೀತೆಯನ್ನು ಅಪಹರಿಸಿ ತಂದರೆ ಆ ಹೆಂಡತಿಯಿಲ್ಲದ ವೇದನೆ ಆತನಿಗೆ ಅರಿವಾಗುತ್ತದೆ. ಎನ್ನುತ್ತಾಳೆ ಅದು ಸರಿ ಎಂದು ಸೇಡು ತೀರಿದಂತಾಗುವುದೆಂದು ನಂಬೀ......,ಆ ಸೀತೆಯನ್ನು ಅಪಹರಿಸುವ ಕೆಲಸಕ್ಕೆ ಇಳಿಯುತ್ತಾನೆ. ರಾವಣನ ಹೆಂಡತಿ ಮಂದೋದರಿ ಬೇಡವೆಂದು ತಡೆಯುತ್ತಾಳೆ. ಅದನ್ನು ಒಪ್ಪದೇ ಅಪಹರಿಸುವ ಕೆಲಸಕ್ಕೆ ಇಳಿಯುತ್ತಾನೆ.
ಅಪಹರಿಸಿ ತಂದ ಸೀತೆಯನ್ನು ಮುಟ್ಟದೇ ಬೇರೆಯಾಗಿ ಅಶ್ರಮದಲ್ಲಿ ಇಟ್ಟಿರುತ್ತಾನೆ. ಹೀಗೆ ಕಾಲಗಳು ಉರುಳುತ್ತಿರುವಲ್ಲಿ ರಾಮನು ತನ್ನ ರಾಣಿ ಸೀತೆಯನ್ನು ಹುಡುಕುತ್ತಾ ಅಗಸ್ಯ ಮುನಿ ಅಶ್ರಮಕ್ಕೆ ಬರುತ್ತಾನೆ. ಅಲ್ಲಿನ ತಮಿಳಿಗೆ ಮೂಲ ಪುರುಷನಾದ ಅಗಸ್ಯ ಮಹರ್ಷಿಯಿಂದ ಕೆಲವು ಅತಿಶಯವಾದ ಆಯುಧಗಳನ್ನು ಮಾಹಿತಿಯನ್ನು ಪಡೆದು ತೆಲಗು ಬಾಷೆಯವರಾದ ಜಾಂಭವರ ಸಹಾಯವನ್ನು ಕನ್ನಡಿಗರಾದ ವಾನರ ಆಂಜನೇಯ, ಸುಗ್ರೀವ, ಅಂಗಧ, ನಲ ಮತ್ತು ನೀಲರೆಂಬ ವಿಶ್ವಕರ್ಮರನ್ನು ಸೈನ್ಯವನ್ನು ಒಟ್ಟುಗೂಡಿಸಿ ( ಕನ್ನಡಿಗರನ್ನು ಕಪಿ ಕೋತಿಯೆಂದು ತೋರಿಸಿರುತ್ತಾರೆ. ತೆಲಗರನ್ನುಕರಡಿಯಂತೆ ತೋರಿತ್ತಾರೆ. ತಮಿಳರನ್ನು ರಕ್ಕಸರೆಂದು ತೋರಿರುವುದು. ಇವರು ಮಾತ್ರ ಮಾನವರಾಗಿದ್ದರು ಎಂಬುದು ಏಷ್ಟು ಸರಿ ನೀವೇ ಯೋಚಿಸಿ ! ) . ರಾವಣನ ಸ್ವಂತ ತಮ್ಮನನ್ನೇ ವಿಭೀಷಣ ತಮ್ಮ ಕಡೆಗೆ ಬರುವಂತೆಯು ಲಂಕಾದ್ವೀಪವನ್ನೂ ( ಸಿಂಹಳ ) ರಾಜ್ಯವನ್ನೇ ವಿಭೀಷಣನಿನಗೆ ಕೊಟ್ಟು ಪಟ್ಟಭಿಷೇಕ ಮಾಡುತ್ತೇವೆಂದು ಆಸ್ವಾಶನೆಕೊಟ್ಟು, ಆಶೆ ಅಮಿಷಗಳನ್ನು ಒಡ್ಡಿ ರಾವಣನ ರಾಜ್ಯದಲ್ಲಿರುವ ರಹಸ್ಯವಾದ ಮಾಹಿತಿಗಳನ್ನು ತಿಳಿದು ಕೊಳ್ಳುತ್ತಾರೆ.
ರಾವಣನ ಮೇಲೆ ಯುದ್ಧವನ್ನು ಸಾರಿ ಯುದ್ಧದ ದಿನಾಂಕವನ್ನು ಗೊತ್ತುಪಡಿಸುತ್ತಾರೆ. ಸೈನ್ಯವನ್ನು ಸೇರಿಸಿ ಯುದ್ಧ ಮಾಡಲು ಸಿದ್ಧತೆ ನಡೆಯುತ್ತಿರುವಲ್ಲಿ ಯುದ್ಧ ಕಂಕಣ ಶಾಸ್ತ್ರೋತ್ತರವಾಗಿ ಕಟ್ಟಲು ಈ ಕೈಂಕಾರ್ಯಯಕ್ಕೆ ಪುರೋಹಿತರನ್ನು ಹುಡುಕಲು ಸಜ್ಜಾಗುತ್ತಾರೆ ಹುಡುಕುತ್ತಾರೆ. ಆದರೆ, ದಕ್ಷಿಣದಲ್ಲಿ ಯಾರು ಪುರೋಹಿತರಿಲ್ಲದ ಕಾರಣ, ವಿಭೀಷಣನೂ ಒಂದು ಉಪಾಯವನ್ನು ಹೇಳುತ್ತಾನೆ.
ಪ್ರಭು ರಾಮ, ನನ್ನದೊಂದು ವಿನಂತಿ ಸ್ವೀಕರಿಸುವುದಾದರೆ ಸ್ವೀಕರಿಸಿ, ಇಲ್ಲವೆಂದರೆ ಬಿಟ್ಟು ಬಿಡಿ ನನ್ನ ಅಭ್ಯಂತರವೇನು ಇಲ್ಲ. ಈ ಸ್ಥಳದಲ್ಲಿ ಕೈಂಕಾರ್ಯವನ್ನು ಮಾಡಬಲ್ಲವರು ಯಾರು ಇಲ್ಲವೆಂದು ನಾವೇಲ್ಲರೂ ಬಲ್ಲೆವು. ಆದರೇ, ನಮ್ಮ ಅಣ್ಣ ರಾವಣನೋ ಒಳ್ಳೆ ಬ್ರಾಹ್ಮಣ್ಯವರಿತ ಪುರೋಹಿತ ವೇಧಾಂತಿ ಮೇಧಾವಿ ಙ್ಞಾನಿ ವಿಚಾರವಂತ ಸತ್ಯಸಂಧ ಯಾವ ಲೋಪ ದೋಷಗಳಿಲ್ಲದೇ ಮಾಡತಕ್ಕವನು. ನೀವು ಅವನನ್ನು ಆಹ್ವಾನಿಸಿದರೇ. ಆತ ಖಂಡಿತವಾಗಿ ಈ ಕಾರ್ಯವನ್ನು ಸುಗಮವಾಗಿ ಮಾಡಿಕೊಡಬಲ್ಲವ ಎನ್ನುತ್ತಾನೆ.
ಸಭಿಕರಿಗೆಲ್ಲಾ ಎಲ್ಲರಿಗೂ ಆಶ್ಚರ್ಯ ಏನಿದೂ ರಾವಣನೇ, ಎಲ್ಲರೂ ನಿಟ್ಟೂಸಿರು ಬಿಡುತ್ತಾರೆ. ಏನಿದು ಹುಚ್ಚುತನ ಮಾತಿದು ನಮ್ಮ ವಿರೋಧಿಯ ಕೈಯಿಂದಲೀ ಯುದ್ಧ ಕಂಕಣವೇ ? . ಲಕ್ಷ್ಮಣನಿಗೆ ಅತ್ಯಂತ ಮಗದಾಶ್ಚರ್ಯ ! ಹೆದರಿಕೆಯಿಂದ ಅಂದು ಬೆಚ್ಚಿ ಬೀಳುತ್ತಾರೆ.
ರಾಮನು ಮುಂಚೆಯೇ ಗುರು ವಿಶ್ವಾಮಿತ್ರರು, ಗುರು ಅಗಸ್ಯರು, ಆಧಿ ಜಾಂಬವರಿಂದ ರಾವಣನ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಾನೆ ಆತನಿಗೆ ಗೊತ್ತಿರುತ್ತದೆ. ರಾವಣ ಸತ್ಯವ್ರತ ನೀತಿವಂತ ಆತ್ಮಙ್ಞಾನಿ ಅತನಿಂದ ಈ ವಿಷಯದಲ್ಲಿ ಏನೂ ತೊಂದರೆಯಾಗ ಲಾರದೆಂದು ಮೀನ ಮೇಷ ಏಣಿಸದೆ ಒಪ್ಪಿಗೆ ಕೊಡುತ್ತಾನೆ.
ರಾವಣನೂ ಕರೆಯ ಮೇರೆಗೆ ಆತ್ಮಸಂತೋಷದಿಂದ ಬರುತ್ತಾನೆ. ಆತನ ಕರ್ತವ್ಯದಲ್ಲಿ ಯಾವ ಲೋಪವು ಬರದಂತೆ ನಿರ್ವಿಙ್ಞದಲ್ಲಿ ಕಂಕಣ ದಾರವನ್ನು ಕೈಗೆ ಕಟ್ಟುತ್ತಾನೆ ಕಟ್ಟುವಾಗ ರಾಮನಿಗೆ ಹೇಳುತ್ತಾನೆ. ಈ ನಿಮಿಷದಲ್ಲಿ ಕಂಕಣ ಕಟ್ಟಿಕೊಂಡರೇ, ಗೆಲವು ನಿನ್ನದೇ ಸಂದೇಹ ಬೇಡವೆಂದು ಹೇಳಿ, ಈ ಕಾಲಮೀರಿದರೆ ರಾವಣನಿಗೆ ಗೆಲುವು ಸಿಗುತ್ತದೆ. ಬೇಗ ಕಂಕಣ ಕಟ್ಟಿಕೂ ಎಂದು ಆ ಕ್ಷಣದಲ್ಲೇ ಕಂಕಣ ಕಟ್ಟುತ್ತಾನೆ.
ರಾಮನೂ ಸಂತಸದಿಂದ ಪುರೋಹಿತರಿಗೆ ಕೊಡಬೇಕಾದ ಸನ್ಮಾನವನ್ನು ಕೊಟ್ಟು ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡು ರಾವಣನಿಗೆ ಬೀಳ್ಕೊಟ್ಟು ಕಳಿಸುತ್ತಾನೆ. ರಾಮನಾಗಲೀ, ರಾವಣನಾಗಲೀ ತಮ್ಮ ಸ್ವಂತ ಜೀವನದ ಸುಖ ದುಃಖದ ವಿಚಾರದಲ್ಲಿ ಏನೂ ಮಾತನಾಡುವುದಿಲ್ಲ.
ದ್ರಾವಿಡ ರಾಜನನ್ನು ದ್ರಾವಿಡರನ್ನು ಆರ್ಯರು ತಮ್ಮ ಚಾಣಕ್ಯತನದಲ್ಲಿ ಸುಲಭದಲ್ಲಿ ಗೆಲ್ಲುತ್ತಾರೆ. ಆರ್ಯರ ಸಂಚು ಗೆಲುವಿನಲಿ ಮುಗಿಯುತ್ತದೆ.

ಮುಂದೆ ದ್ರಾವಿಡ ರಾಜನ ಕುಮಾರ ಬೋಧಿಧರ್ಮನಿಂದ ಚೀನಾಗೆ ಕುಂಫೂ, ಕರಾಟೆ ಮರ್ಮದ ಆ ಯುದ್ಧಕಲೆ ಹೋಯಿತೆನ್ನುವುದು ಸತ್ಯ ಇದು ಬೇರೆಮಾತು.

ಆತ್ಮೀಯರೇ,
ಇದು ಅಪ್ಪಟ ದ್ರಾವಿಡ-ಆರ್ಯರ ವೈಷ್ಯಂಯ ಯುದ್ಧವೇ ಹೊರತು ಯಾವ ದೇವರುಗಳ ಕರಡಿ ಕಪಿ ಕೋತಿಗಳಿಂದ ರಕ್ಕಸರ ಯುದ್ಧವಲ್ಲವೆಂದು ದೈರ್ಯವಾಗಿ ಹೇಳಬಹುದು.
ಇಂದು ನಾವುಗಳೆಲ್ಲರೂ ಎಲ್ಲಾ............... ಏಲ್ಲಾ ವೈಷಮ್ಯಗಳ ಬಿಟ್ಟು ಸತ್ಯ ನ್ಯಾಯ ಧರ್ಮಸಮ್ಮತವಾದ ಮಾನವೀಯತೆ ಬೆಳೆಸಲು ಮನುಷ್ಯರಾಗಲು ಸತ್ಪ್ರೆಜೆಯಾಗಿರಲು ಹೀಗೆ ಈ ದೇಶವನ್ನು ಶ್ರೀಮಂತಗೊಳಿಸುವಿರೆಂದು ನಂಬಿರುವ ನಿಮ್ಮ ಸ್ನೇಹಿತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಗುಣಶೇಖರರವರೆ

ನಾನು ತುಂಬಾ ಹಿಂದೆ ಬರೆದ ಕತೆ 'ಪಶ್ಚಿಮದಲ್ಲಿ ಲಕ್ಷಣ' ಅದಕ್ಕೆ ನಿಮ್ಮ ಇತ್ತೀಚಿನ ಪ್ರತಿಕ್ರಿಯೆ ನೋಡಿದಾಗ ಆಶ್ಚರ್ಯವೆನಿಸಿತು. ಮೊದಲಿಗೆ ನನ್ನ ಕತೆಗಳ ಬಗ್ಗೆ ಹೇಳಿಬಿಡುವೆ. ನಾನು ಕತೆಗೆ ಪಾತ್ರಗಳನ್ನು ಎಲ್ಲಕಡೆಗಳಿಂದಲು ತೆಗೆದುಕೊಳ್ಳುವೆ, ಅದು ಲಕ್ಷ್ಮಣನೊ, ಊರ್ಮಿಳೆಯೊ.ಸೀತೆಯೊ, ಸುನಂದಳೊ ಅಥವ ಆಂಡ್ರಿಯ ಮತ್ತು ಆಂಜಾಲಿನ ಆಗಬಹುದು ಅವೆಲ್ಲ ನನಗೆ ಇಷ್ಟವೆ, ಅವುಗಳು ರಾಮಾಯಣದ ಅಥವ ಮಹಾಭಾರತದ ಒಂದು ಪಾತ್ರವಾಗಿರುವುದು ಆಕಸ್ಮಿಕವಷ್ಟೆ :))).
ನನ್ನ ಕತೆಗೆ ಅವುಗಳ ಧಾರ್ಮಿಕ ಅಥವ ಪಾರಂಪರಿಕ ಹಿನ್ನಲೆ ಮುಖ್ಯವೆಂದು ನಾನು ಭಾವಿಸಿಲ್ಲ. ಆ ಪಾತ್ರಗಳ ಮಾನಸಿಕ ಹೋಯ್ದಾಟ ಅಥವ ಚಿಂತನೆ ನೋವು ನಲಿವುಗಳು ಮುಖ್ಯವಾಗುತ್ತವೆ.

ಮತ್ತೆ ರಾಮಾಯಣ ಮಹಾಭಾರತ ಇವುಗಳನ್ನೆಲ್ಲ ನಾನು ಚಿಕ್ಕವಯಸಿನಿಮ್ದ ಓದಿಕೊಂಡು ಬೆಳೆದೆ. ಹಾಗಂತ ಅವುಗಳನ್ನಷ್ಟೆ ಅಲ್ಲ ಕಾರಂತರ ಕಾದಂಬರಿಗಳಾಗಿರಲಿ, ಬೈರಪ್ಪನವರ ಕತೆಗಳಾಗಿರಲಿ, ನರಸಿಂಹಯ್ಯನವರು ಅಥವ ನಿನ್ನೆ ತೀರಿಹೋದರಲ್ಲ ಸುದರ್ಶನ ದೇಸಾಯಿ ಅಥವ ಟಿ,ಕೆ ರಾಮರಾವ ಅಥವ ಕೆ,ಟಿ ಗಟ್ಟಿಯವರ ಕಾದಂಬರಿಗಳು ಎಲ್ಲವು ನನ್ನೊಳಗೆ ತುಂಬಿ ಹೋಗಿವೆ, ಕೆ,ಟಿ, ಗಟ್ಟಿಯವರ ಅಭ್ರಾಹ್ಮಣವಾಗಲಿ ಕಾರಂತರ ಮೂಕಜ್ಜಿಯ ಕನಸಾಗಲಿ ಎಲ್ಲವು ಬೇಡವೆಂದರು ತುಂಬಕಾಲ ಮನದಲ್ಲಿ ನಿಲ್ಲುವಂತವು. ಹೀಗಾಗಿ ನನಗೆ ಅದೇನೊ ಹೊಸ ಹೊಸ ಪಾತ್ರಗಳನ್ನು ತೆಗೆದು ಕೊಂಡು ಬರೆಯುವದರಲ್ಲಿ ಎಂತದೊ ಆಸೆ.

ಈ ಪೀಠಿಕೆಯೊಂದಿಗೆ ನಿಮ್ಮ ಪ್ರತಿಕ್ರಿಯೆಗೆ ಬರುವೆ

ನಾನು ಪೀಯುಸಿ ಪಾಸಾದನಂತರ ನಮ್ಮ ತಾತನವರ ಜೊತೆ ಒಮ್ಮೆ ವಾದವನ್ನು ಹೂಡಿದ್ದೆ, ರಾಮಯಣ ವೆಂದರೆ ಅದನ್ನು ನಿಜ ಘಟನೆಯ ವೈಭವಿಕರಣವೆಂದು ಹೇಳಬಹುದು ಯಾವುದೆ ಮನುಷ್ಯನಾಗಲಿ ಪರಿಪೂರ್ನ ಮನುಷ್ಯನಾಗಿರಲು ಸಾದ್ಯವಿಲ್ಲ, ರಾಮನನ್ನು ಅಷ್ತೋಂದು ಹೊಗಳುವ ವಾಲ್ಮೀಕಿ ಇರುವುದೆ ರಾಮನು ಆಳ್ವಿಕೆ ನಡೆಸುತ್ತಿದ್ದ ರಾಜ್ಯದಲ್ಲಿ, ಹಾಗಿರಲು ವಾಲ್ಮೀಕಿ ರಾಮನಲ್ಲಿರುವ ಅವಗುಣಗಳನ್ನು ಎತ್ತಿಹಾಡಲು ಹೇಗೆ ಸಾದ್ಯ ಹಾಗಾಗಿ ಹೊಗಳಿಬರೆದಿದ್ದಾನೆ ಅನ್ನುತ್ತ
'ಹೋಗು ಬರಿ ವಿತಂಡವಾದ ಮಾಡಬೇಡ ' ಎಂದು ಅನ್ನಿಸಿಕೊಂಡಿದ್ದೆ. ನಂತರ ಓದುತ್ತ ಹೋದಂತೆ ಬೇರೆ ಬೇರೆ ರೀತಿಯ ರಾಮಯಣವನ್ನು ಓದಿದೆ, ಅದರಲ್ಲಿ ಬೌದ್ದ ರಾಮಾಯಣವು ಒಂದು, ಮತ್ತೆ ನಾನು ಮೇಲೆ ಹೇಳಿರುವ ಕತೆ ಒಂದರಲ್ಲಿ ರಾಮಾಯಣದ ನಂತರದ ಮುಂದಿನ ತಲೆಮಾರಿನಲ್ಲಿ ಅಣ್ಣನಿಗೆ ತಂಗಿಯನ್ನು ಕೊಟ್ಟು ಮದುವೆ ಮಾಡುವ ನಂತರ ಆ ಮದುವೆ ವಿಫಲ ಮದುವೆಯಾಗುವ ಕತೆಯೊಂದಿದೆ ಆ ಕತೆಯಂತೆ ರಾಮ ಮತ್ತು ಸೀತೆ ಅಣ್ಣ ತಂಗಿ .

ಆದರೆ ರಾಮಾಯಣವನ್ನು ಮತ್ತೆ ಬೇರೆ ದೃಷ್ಟಿಯಿಂದ ನೋಡುವ ಅಲೋಚನೆ ನನ್ನಲ್ಲಿ ಮತ್ತೆ ಮೊಳೆಯಿತು,
ರಾಮಾಯಣದ ಕತೆಯ ನಾಯಕ ರಾಮ ಹಾಗು ಸೀತ ಎಲ್ಲ ಕ್ಷತ್ರೀಯರು, ಅದನ್ನು ರಚಿಸಿರುವ ವಾಲ್ಮೀಕಿ ಬೇಡ, ಕತೆಯ ವಿಲನ್ ರಾವಣನಾಗಲಿ ಕುಂಭಕರ್ಣನಾಗಲ್ಲಿ ಬ್ರಾಹ್ಮಣ . ಆದರೆ ರಾಮಾಯಣವನ್ನು ಮಹಾಕಾವ್ಯವೆಂದು , ಪಠಣ ಮಾಡಿದರೆ ಪುಣ್ಯಬರುವದೆಂದು ನಂಬುವರಲ್ಲಿ ಬ್ರಾಹ್ಮಣರೆ ಪ್ರಥಮ. ಎಲ್ಲವು ಎಷ್ಟು ಸಂಕೀರ್ಣ. ಇವೆಲ್ಲ ಕೇವಲ ಅಭಿಪ್ರಾಯಗಳಿಂದ ಅಥವ ವಾದಗಳಿಂದ ತಿಳಿಯುವ ವಿಷ್ಯಗಳಲ್ಲ ಸಂಶೋದನೆಗಳೆ ಆಗಬೇಕಾದ ವಿಷ್ಯ ಎಂದು ಅನ್ನಿಸಿತ್ತು.

ರಾಮಾಯಣದ ಸ್ವರೂಪ ಸಾವಿರಾರು ವರ್ಷಗಳಿಂದ ಬದಲಾಗುತ್ತಲೆ ಸಾಗಿದೆ. ಅದರ ಮೂಲ ಸ್ವರೂಪವೆ ಸರಿಯಾಗಿ ತಿಳಿದಿಲ್ಲ. ಮತ್ತೊಂದು ವಿಚಿತ್ರ ಮಹಾಭಾರತ ಎಂಬ ಕತೆ ನಡೆದಿರುವುದು ರಾಮಾಯಣದ ನಂತರ ಆದರೆ ಮಹಾಭಾರತದಲ್ಲಿ ಎಲ್ಲಿಯು ನೇರವಾಗಿ ರಾಮಾಯಣದ ಕತೆಯ ಪ್ರಸ್ತಾಪವಾಗಿಲ್ಲ !. ದರ್ಮರಾಯನು ಕಾಡಿನಲ್ಲಿರುವಾಗ ಋಷಿಗಳ ಪಾದದ ಬಳಿ ಕುಳಿತು ಸಾವಿರಾರು ಕತೆ ಕೇಳಿರುವನೆಂದು ಬರೆಯಲಾಗಿದೆ ಆದರೆ ಎಲ್ಲಿಯು ರಾಮಾಯಣದ ಬಗ್ಗೆ ಪ್ರಸ್ಥಾಪವೆ ಆಗಿಲ್ಲ, ಎನ್ನುವಾವ ಸ್ವಲ್ಪ ವಿಚಿತ್ರ ಅನ್ನಿಸುತ್ತದೆ.

ಇದನ್ನೆಲ್ಲ ಯೋಚಿಸುವಾಗ ಅನಿಸುತ್ತದೆ ರಾಮಾಯಣ ನಡೆವ ಕಾಲದಲ್ಲಿ ಎಲ್ಲಿಯು ರಾಮನನ್ನು ದೈವವೆಂದು ಪ್ರಸ್ಥಾಪ ಮಾಡಲಾಗಿಲ್ಲ, ಕಡೆಗೆ ವಾಲ್ಮೀಕಿಯು ರಾಮನನ್ನು ದೇವರೆಂದು ಕರೆದಿದ್ದಾನೊ ಇಲ್ಲವೊ ನನಗೆ ತಿಳಿದಿಲ್ಲ. ಆದರೆ ರಾಮಾಯಣ ನಡೆದ ಎಷ್ಟೋ ಕಾಲದ ನಂತರವಷ್ಟೆ ರಾಮನನ್ನು ದೇವರೆಂದು ಪೂಜಿಸುವ ಪದ್ದತಿ ಪ್ರಾರಂಬವಾಗಿದೆ, ರಾಮನ ದೇವಾಲಯಗಳಾಗಿವೆ ಅದು ಯಾವಾಗ ಎಂದು ತಿಳಿಯದು. ಮಹಾಭಾರತದಲ್ಲಿ ಸಹ ಎಲ್ಲಿಯು ರಾಮದೇವಾಲಯದ ಬಗ್ಗೆ ಪ್ರಸ್ತಾಪವೆ ಬರಲ್ಲ.

ರಾಮಾಯಣದ ರಾಮನಿಗಿಂತ ಮುಂಚೆಯೆ ರಾಮ ಎನ್ನುವ ಹೆಸರು ಚಾಲ್ತಿಯಲ್ಲಿತ್ತು, ಅದು ಪರುಷರಾಮ ಎಂಬ ಹೆಸರು ಕೇಳಿರುವೆವು. ನಂತರವು ಇರಬಹುದು. ಮತ್ತೆ ಶ್ರೀರಾಘವೇಂದ್ರರ ಕತೆ ಓದುವಾಗ ಸಹ ಅವರು ಪೂಜಿಸುತ್ತಿದ್ದಿದ್ದು 'ಮೂಲರಾಮನ' ವಿಗ್ರಹವನ್ನು. ಮೂಲರಾಮನು , ರಾಮಾಯಣದ ರಾಮರು ಬೇರೆಬೇರೆಯೊ ಗೊತ್ತಿಲ್ಲ.

ಈ ಹಿನ್ನಲೆಯಲ್ಲಿ ನಿಮ್ಮ ಕತೆಗೆ ಬರುವೆ. ಈ ಕತೆ ನೀವೆ ಬರೆದಿರುವದಾಗಿ ತಿಳಿಸಿದ್ದೀರಿ. ಯಾವ ಯಾವ ಆದಾರದಲ್ಲಿ ಬರೆದಿರುವಿರಿ ಎಂಬುದು ತಿಳಿದಿಲ್ಲ.
ಆದರೆ ನಿಮ್ಮ ರಾಮಾಯಣಕ್ಕೆ ದೊಡ್ಡ ಹಿನ್ನಲೆಯೆಂದರೆ ಆರ್ಯರು ಹಾಗು ದ್ರಾವಿಡರ ದೀರ್ಘ ಹೋರಾಟದ ಒಂದು ಘಟ್ಟ. ಅದು ಅಲ್ಲಿಗೆ ಮುಗಿಯಿತೊ ನಂತರ ಮಹಾಭಾರತದ ಕಾಲಕ್ಕು ಮುಂದುವರೆಯಿತೊ ತಿಳಿಯಲಿಲ್ಲ.

ಆರ್ಯರು ದ್ರಾವಿಡರ ಹೋರಾಟದ ಕತೆ ಹಿನ್ನಲೆಯಲ್ಲಿ ರಾಮಾಯಣದ ಕತೆ ಸರಿಯಾಗಿಯೆ ಕಾಣುತ್ತಿದೆ. ಇಲ್ಲಿ ನೀವು ಆದಂತೆ ಆರ್ಯರೆಂದರೆ ಬ್ರಾಹ್ಮಣರು, ಕ್ಷತ್ರೀಯರು ಹಾಗು ವೈಶ್ಯರು. ಹೊರತು ಪಡಿಸಿ ದ್ರಾವಿಡರನ್ನು ಕೇವಲ ಕಾಡಿನಲ್ಲಿ ಇದ್ದವರಂತೆ ನಾಗರೀಕತೆ ಇಲ್ಲದವರಂತೆ ಕೇವಲ ಕಾಡಿನಲ್ಲಿ ಇರುವಂತೆ ಕಾಣಿಸುತ್ತದೆ , ಆದರೆ ನನಗೊಂದು ಅನುಮಾನ ದ್ರಾವಿಡರಲ್ಲಿ ನಾಗರೀಕತೆ ಬೆಳೆದಿರಲೆ ಇಲ್ಲವೆ. ಕೇವಲ ಕಾಡುಜನರಂತೆ ಮಾತ್ರ ಇದ್ದರೆ ?. ಅದು ಹೇಗೆ ಸಾದ್ಯ ? ಒಂದು ನೆನೆಯಿರಿ ,
ರಾಮಾಯಣದಲ್ಲಿ ಭಾರತದಿಂದ ಲಂಕೆಗೆ ಸೇತುವೆಯ ನಕ್ಷೆ ತಯಾರಿಸಿ ನಿರ್ಮಿಸಿದವರು ಕಪಿಗಳೆ ಅಂದರೆ ತಾಂತ್ರಿಕತೆ ಆ ಮಟ್ಟಿಗೆ ಬೆಳೆದಿತ್ತು ಅವರಲ್ಲಿ , (ಇಂದಿಗು ನೀಲ ನಕ್ಷೆ (blue print) ಅನ್ನುತ್ತಾರೆ!!) . ಮತ್ತೆ ಲಕ್ಷ್ಮಣನಿಗೆ ನೆನೆಪು ತಪ್ಪಿದಾಗ ಹನುಮಂತನು ಔಷದ ತರುತ್ತಾನೆ ಸಂಜೀವಿನಿ !, ಅಂದರೆ ಕಪಿಗಳಲ್ಲಿ ಅಥವ ನೀವು ಹೇಳುವ ದ್ರಾವಿಡರಲ್ಲಿ ವೈದ್ಯ ವಿಜ್ಞಾನವು ಬೆಳೆದಿತ್ತು ! ಅಲ್ಲಿಗೆ ಅವರು ಅನಾರ್ಯರು ಹೇಗಾದಾರು?

ರಾವಣನ ಕತೆಯಲ್ಲಿ ಬರುವ ಬ್ರಾಹ್ಮಣ ವಿಶ್ರವಸ್ಸಿ ಎಂಬುವನು ಸಹ ಆರ್ಯರ ಗುಂಪಿನವನೆ ! . ಅಂದರೆ ಆರ್ಯರ ದ್ವಾವಿಡರ ವರ್ಣಸಂಕರ ಅಲ್ಲಿ ಪ್ರಾರಂಬವಾಯಿತು, ಅಲ್ಲಿಂದ ಪ್ರಾರಂಬಿಸಿ ಇಂದಿನವರೆಗು ಸಾವಿರಾರು ವರ್ಷಗಳು ವರ್ಣಸಂಕರ ನಡೆಯುತ್ತಲೆ ಬರುತ್ತಿದೆ ಎನ್ನುವದಾದರೆ ಆರ್ಯ ಮತ್ತು ದ್ರಾವಿಡರ ಪ್ರತ್ಯೇಕತೆ ಎಲ್ಲಿ ಉಳಿಯಿತು ?

ರಾವಣನು ತನ್ನ ತಂಗಿಯ ಗಂಡನನ್ನೆ ಕೊಲ್ಲುವುದು ಮತ್ತೆ ಶೂರ್ಪಣಕಿ ಆಗಲೆ ಮದುವೆಯಾಗಿ ಸೀತೆಯೊಡನೆ ಇರುವ ರಾಮನನ್ನು , ಅದರಲ್ಲು ಆಕೆ ದ್ರಾವಿಡ ಪ್ರತಿನಿಧಿಯಾಗಿ ಆರ್ಯನಾದ ರಾಮನನ್ನು ಮದುವೆಯಾಗೆಂದು ಕೇಳುವುದು ಸ್ವಲ್ಪ ವಿಚಿತ್ರವೆನಿಸುವದಿಲ್ಲವೆ. ಮತ್ತೆ ದ್ರಾವಿಡನಾದ ರಾವಣನನ್ನು (ಅವನು ಬ್ರಾಹ್ಮಣ!) ಆರ್ಯನಾದ ರಾಮನು ವಂದಿಸಿ ಯುದ್ದಕಂಕಣ ಕಟ್ಟಿಸಿಕೊಂಡನೆಂಬುದು, ಸತ್ಯ ಕತೆಗಿಂತ ಯಾರೊ ಸೇರಿಸಿರುವ ಕಲ್ಪನೆಯಂತೆ ನನಗೆ ತೋರುತ್ತದೆ. ಇದನ್ನು ಹಿಂದೆ ಸಹ ಒಂದು ಸಿನಿಮಾದಲ್ಲಿ ನೋಡಿರುವೆ.

ಆದರೆ ಒಂದಂತು ನಿಜ , ನೀವು ಕಡೆಯಲ್ಲಿ ಹೇಳಿರುವ ರಾಮಯಣವೆಂಬುದು ಆರ್ಯ ದ್ರಾವಿಡರ ಒಂದು ಕಲಹ ಇರಬಹುದು ಎಂದು ಭಾವಿಸುವಲ್ಲಿ ನನಗೆ ಯಾವುದೆ ಗೊಂದಲ ಕಾಡುವದಿಲ್ಲ.

ಆದರೆ ನನಗೆ ಕಾಡುವ ಗೊಂದಲವೆ ಬೇರೆ ಸಾವಿರಾರು ವರ್ಷಗಳ ಹಿಂದೆ ನಡೆದಿರಬಹುದಾದ ಆರ್ಯ ದ್ರಾವಿಡ ಅಂತಕಲಹದ ಉತ್ಖನನದಿಂದ ಇಂದಿನ ಸಮಾಜಕ್ಕೆ ಏನು ಲಾಭವಾಗಬಹುದು ಎನ್ನುವುದು.

ಒಂದು ವೇಳೆ ಅದರಿಂದ ನೀವು ಹೇಳುವಂತೆ
ಇಂದು ನಾವುಗಳೆಲ್ಲರೂ ಎಲ್ಲಾ............... ಏಲ್ಲಾ ವೈಷಮ್ಯಗಳ ಬಿಟ್ಟು ಸತ್ಯ ನ್ಯಾಯ ಧರ್ಮಸಮ್ಮತವಾದ ಮಾನವೀಯತೆ ಬೆಳೆಸಲು ಮನುಷ್ಯರಾಗಲು ಸತ್ಪ್ರೆಜೆಯಾಗಿರಲು ಹೀಗೆ ಈ ದೇಶವನ್ನು ಶ್ರೀಮಂತಗೊಳಿಸಲು ಸಾದ್ಯಮಾಡುವದಾದರೆ ನನಗೆ ಅದಕ್ಕಿಂತಲು ಬೇರೆ ಖುಷಿಯಿಲ್ಲ.
ನಿಮ್ಮ ಮಾತು ನಿಜ ಹಿಂದಿನ ಯಾವುದೊ ಕತೆಗಳಿಂದ ಇಂದಿನ ಸಮಾಜ ಬದುಕಬೇಕಿಲ್ಲ, ಈಗ ಸಮಾನತೆಯೊಂದಿಗೆ ಬದುಕುವದರಲ್ಲಿ ಬದುಕಿದೆ.

ಮತ್ತು ಕಡೆಯದಾಗಿ ನಾನು ಕತೆಗಳನ್ನು ವಿಮರ್ಷಿಸುವ ಮಟ್ಟಿಗೆ ಇನ್ನು ಬೆಳೆದಿಲ್ಲ ಅನ್ನಿಸುತ್ತೆ. ಅವುಗಳನ್ನು ವಿಷ್ಲೇಶಿಸಬಲ್ಲನಷ್ಟೆ. ನೀವು ನನಗೆ ನಿಮ್ಮ ಕತೆಯನ್ನು ಅಭಿಪ್ರಾಯವನ್ನು ಕೇಳಿದ್ದು ಸಂತಸ ನೀಡಿದೆ. ನನ್ನ ಪರಿಮಿತಿಯಲ್ಲಿ ಉತ್ತರಿಸಿರುವೆ.
ಮತ್ತೆ ನೋಡೋಣ

ನಿಮ್ಮ ಆತ್ಮೀಯ

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gunashekara murthy on

ದ್ರಾವಿಡರಿಗೆ ಏಷ್ಟೇ ನಾಗರೀಕತೆಯಿದ್ದರೂ ಅವರು ದಸ್ಸ್ಯುಗಳು ದಾಸರು ಎಂಬ ಭಾವನೆ ಇದ್ದೇಯಿರುತ್ತದೆ. ಆರ್ಯರಿಗೆ ಯಾರಿಗೂ ಅಂಟದೇ ಇದ್ದಿರುತ್ತಾರೆ. ನಲ ಮತ್ತೂ ನೀಲ( ವಿಶ್ವ ಕರ್ಮರು ಅಂದರೆ ಕಲ್ಲಿನಕೆಲಸ, ಮರಗೆಲಸ,ಕಟ್ಟಡಕಲೆ, ಕಬ್ಬಿಣಕಾಸಿ ತಟ್ಟುವುದು ) ಹೀಗೆ ಬಹು ಮುಖ ಕೌಶಲ್ಯ ತುಂಬಿದವರು ಅದು ಹಾಗಿರಲಿ ನೀಲಿನಕ್ಷೆ ಎಂಬುದು ನೀಲಿ ಬಣ್ಣದಿಂದ ಕೂಡಿದ ನಕ್ಷೆ. ಕಾಗದವನ್ನು ರಾಸಾಯನ ಕ್ರಿಯೆಗೆ ಒಳಪಡಿಸಿ ನೀಲಿಬಣ್ಣದಲ್ಲಿ ಬರೆಯುವಂತದ್ದು ಅದಕ್ಕೂblue print ಗೂ ನಮ್ಮ ನೀಲನಿಗೂ ಯಾವ ಸಂಭಂಧವಿಲ್ಲ. ಕಪಿ ಆಂಜನಯ್ಯ ಎನ್ನುವುದೇ ತಪ್ಪು ಎನ್ನುವನು ನಾನು. ಆತ ಒಬ್ಬ ದ್ರಾವಿಡರಲ್ಲಿ ಬಾಷೆಯಿಂದಲಿ ಹರಿದು ಹಂಚಿ ಹಂಚಿಹೋದ ಮನುಷ್ಯ ಎಲ್ಲಾ ದ್ರಾವಿಡ ಜನಾಂಗಕ್ಕೂ ಗೂತ್ತು. ವೈದ್ಯ ಗುಣ ವಿಙ್ಞಾನ ಈಗಿನ ಸಿದ್ಧೌಷದವು ದ್ರಾವಿಡರಿಂದ ಬಂದದ್ದು ನಿಜ. ಅದನ್ನು ಯಾರೂ ಅಲ್ಲಗೆಳೆಯಲಾರರು.

ಪಾರ್ಥಸಾರಥಿಯವರೇ,
ಮನ ಮೆಚ್ಚುವಂತ ಪ್ರತಿಕ್ರಿಯೆ, ನಿಮ್ಮ ಪ್ರತಿಕ್ರಿಯೇಗೆ ಅನಂತ ಅನಂತ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.