ಕವನ : ಮಸಣದ ಹುಡುಗಿ

ಕವನ : ಮಸಣದ ಹುಡುಗಿ

ಕವನ : ಮಸಣದ ಹುಡುಗಿ

 

ಕೆಂಗೂದಲಲ್ಲಿ ಸಿಲುಕಿದ ಮಲ್ಲಿಗೆಯ ಹೂವು,
ಬಿಚ್ಚಿ ಗಾಳಿಗೆ ಹಾರುವೆಳೆ ಕೂದಲಿನ ಆಟ,
ಎಳೆಯುಬ್ಬು, ಎಳೆತುಟಿಗಳೆಳೆ ಕಣ್ಣಿನಾ ಮಾಟ,
ಹುಬ್ಬ ಮೇಲ್ಗಡೆ ಕಿರಿದು ಕಪ್ಪು ಚುಕ್ಕಿಯ ಸೊಬಗು,
ಮೂಗ ಕೆಳಗಡೆ  ಸಣ್ಣ ಕರಿಮಚ್ಚೆಯೊಳು ಬೆರಗು,
ಕಿವಿತುದಿಯ ತೂತಿನೊಳು ಎಳೆಬೇವ ಕರಿ ಕಡ್ಡಿ,
ಅನುಗಾಲ ಅರಳುತಿಹ ನಗುವಿಗಾವುದು ಅಡ್ಡಿ,
ನೆತ್ತಿ ಇಬ್ಭಾಗಿಸಿದ ಬೈತಲೆಯ ಬಿಳಿ ದಾರಿ,
ಗೌರವರ್ಣದ ತನುವ  ಮೂರಡಿಯ ಎಳೆ ಗೌರಿ,
ಎಳೆಕೂದಲೆಳೆ ಹಿಡಿದು ಬಿಗಿದು ಹೆಣೆದಿಹ ವೇಣಿ,
ಮೃದು ಚರ್ಮ, ಮೃದು ದೇಹ, ಮೃದು ಪಾದ,  ಮೃದು ಪಾಣಿ,
ಹೆಣೆದ ಕೂದಲ ತುದಿಯ ಬಿಳಿದಾರವನು ಬಿಚ್ಚಿ,
ಸಣ್ಣ ಕುತ್ತಿಗೆ ಸಣ್ಣ ಭುಜಗಳೆರಡನು ಮುಚ್ಚಿ,
ತೊಟ್ಟ  ಕೆಂದುಡಿಗೆಯನು ಮೋಣಕಾಲ ಮೇಲಿರಿಸಿ,
ಎಕ್ಕಡಗಳಿಲ್ಲದೇ ಕಾಲ್ಗಳನು ಸಿಂಗರಿಸಿ,
ಚೆಲುವೆಯರ ಮಾಣಿಸುತ ಮಸಣದೊಳು ಮನೆಮಾಡಿ
ಇದ್ದಳೊಬ್ಬಳು ಪುಟ್ಟ ಹುಡುಗಿ ಚೆಲುವಿ.

ಚೆಲುವಲ್ಲೆ ಚೆಲುವೆನಲು  ಚೆಲುವು ತಾ ಮನೆ ಮಾಡಿ
ಸುತ್ತಮುತ್ತಲ ಬಾಲೆಯರ ಸೊಬಗನೀಡಾಡಿ,
ನಲಿದಾಡಿ ಕುಣಿದಾಡಿ ಪ್ರೇತಗಳ ಜೊತೆಗೂಡಿ,
ಮಸಣದುದ್ದಗಲಕ್ಕೂ ತಿರುಗಾಡಿ ಓಡಾಡಿ,
ತನ್ನಂದದೊಳು ಸಂಶಯವು ತಲೆಯ ಹೊಕ್ಕಿರಲು,
ಪ್ರೇತಗಳ ಒಣ ಮೊಗವೆ ಚೆಲುವಂತೆ ಕಂಡಿರಲು,
ತಾನಾಗ ಬಯಸಿದಳು ಭೂತಗಳಲೊಂದು.

ಓ ಪ್ರೇತವೇ  ನಿನ್ನ ಕಳೆಯೆನ್ನ ಮೊಗಕೆ ಬರ-
ಲೇನೊಂದ ಮಾಡಲಹುದದ ಹೇಳು ಬಿಡಿಸಿ.

              ಹೇಳಲೇನಿಹುದನ್ನು ಕಂಡಿಲ್ಲವೇನದನು 
             ಬರಲಿ ಬರ ಕಾಡಿಗೆಗೆ, ಅಳಿಸಿಹೋಗಲಿ ಚುಕ್ಕಿ,
             ಸಹಜನಗೆಯನು ಕೊಂದು, ಎಳೆ ನಿನ್ನ ತುಟಿಯನ್ನು.
              ಕೆದಡು ಕೂದಲ ಹೆರಳ, ಎಸೆ  ನಿನ್ನ ಕೆಂದುಡಿಗೆ,
             ಎಂಟು ವರ್ಷದ ಸೌಮ್ಯ ಮೊಗವ ಬಿಸುಟಾಡಿ ಮೂ-
             ವತ್ತು ವಯಸಿನ ಒರಟು ಮೊಗವಾಡ ಧರಿಸಿನ್ನು,
             ಕಳೆ ನಿನ್ನ ತನವನ್ನು, ಒಪ್ಪು ಎಮ್ಮಂದವನು,
            ಇಳಿಯದಿರು ಆಳಕ್ಕೆ, ತೇಲು ನೀ ಮೇಲಕ್ಕೆ,
            ಮರೆತು ಹೋಗಲಿ ನಿನ್ನ ಮೊದಲಚೆಲುವಿನ ಬಣ್ಣ
            ಮುಗ್ಧರೂಪವ  ಕಳೆದು ಗಂಟಿಕ್ಕು ಹುಬ್ಬನ್ನು
           ಸಹಜಕೋಮಲ ತನುವಿನೊಳು ಹಾಕು ಗತ್ತನ್ನು,
            ಬರದಿರಲಿ ಮೃದುವಾಕ್ಯ ಬರಲಿ ಕಿಡಿನುಡಿಯು.   

ಓಹೋ ಖುಷಿಯಾಯ್ತೆನಗೆ ಆಹ ಖುಷಿಯಾಯ್ತು,
ಇದೆ ಮೊದಲ ಹಿತವಾಕ್ಯ ಕಿವಿಗೆ ಬಿದ್ದಾಯ್ತು.
ನೀ ಹೇಳಿದುದ ನಡೆವೆ,
ನಾನಿದ್ದುದನು ಮರೆವೆ,
ನಿನ್ನಿಂದ ಬಹುದೊಡ್ಡ ಉಪಕಾರವಾಯ್ತು.

 

Rating
No votes yet

Comments