ಕಾಲಾಯ ತಸ್ಮಾಯಿ ನಮ್ಃ

ಕಾಲಾಯ ತಸ್ಮಾಯಿ ನಮ್ಃ

ಚಿತ್ರ

    ಗಾಂಧೀಜೀಯವರ ಮೂರು ಕೋತಿಗಳ ವಿಷಯ ನಾವೆಲ್ಲಾ ಕುಂಟೆಬಿಲ್ಲೆ ಆಡುವ ವಯಸ್ಸಿನಿಂದ ಓದಿ, ಕೇಳಿ ತಿಳಿದು ನಮ್ಮದ್ದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದೇವೆ. ಈಗಿನ ಮಾಧ್ಯಮಗಳು ಸಾಮನ್ಯ ಜನರ ಮೇಲೆ ದಿನನಿತ್ಯ ಬೀರುವ ಪ್ರಭಾವ ನೋಡಿದರೆ ಕೋತಿಗಳು ಅದೇ ವಿಷಯವನ್ನೂ ಹೀಗೂ ಹೇಳಿರಬಹುದಲ್ವೇ ಎಂದು ಮತ್ತೊಮ್ಮೆ ನಮ್ಮ ವಿವೇಚನೆಯನ್ನೇ ಪ್ರಶ್ನಿಸಿಕೊಳ್ಳಲು ಉತ್ತೇಜಿಸುತ್ತದೆ. "ಕೆಟ್ಟದ್ದನ್ನು ಹೇಳಬಾರದು" ಎಂದರೆ ಪ್ರಯಶಹ "ನಮಗೆ ತಿಳಿದಿರುವ ವಿಷಯ, ಅದು ನಮ್ಮ ಲೆಕ್ಕಾಚಾರಕ್ಕೆ ಸತ್ಯವೇ ಆಗಿದ್ದರೂ ಕೂಡ, ನಕರಾತ್ಮವಾದದ್ದಾದರೆ, ಯಾರನ್ನಾದರೂ ದೂಷಿಸುವಂತದ್ದಾದರೆ, (ಯಾವುದಾದರು ಅಪರಾಧಿಯ ಹೀನಕೃತ್ಯವನ್ನು ಖಂಡಿಸುವಂಥದ್ದೇ ಆದರೂ ಕೂಡ) ಅದನ್ನು ಜನರ ಎದುರು ಹೇಳಬಾರದು" ಎಂದು ಈ ಕಾಲಕ್ಕೆ ಸರಿಯಾಗಿ ಅರ್ಥೈಸಿಕೊಳ್ಳಬೇಕೇನೋ. ವಿಷಯವು ನಿಜವೇ ಆಗಿರಬಹುದು. ಆದರೆ ಪರಿಸ್ಥಿತಿ, ಅಧಿಕಾರ, ಹಣ, ಆ ಸನ್ನಿವೇಶದಲ್ಲಿ ಒಳಗೊಂಡ ಇತರ ವ್ಯಕ್ತಿಗಳು ಹಾಗು ಅವರಿಗೆ ಆ ಸಂದರ್ಭದಿಂದಾಗುವ ಲಾಭ/ನಷ್ಟ, ವಿಷಯ ಹೇಳುವುದರಿಂದ ಸಾಮಾನ್ಯ ಜನರ ನಂಬಿಕೆಯ ಮೇಲೆ ಆಗುವ ದುಷ್ಪರಿಣಾಮಗಳು, ಅದರಿಂದ ನಂಬಿಕೆ ಮುರಿದು ಮುಂದೆ ಸಮಜದಲ್ಲಾಗುವ ಕಲಹಗಳು ಎಲ್ಲವನ್ನೂ ಸೂಕ್ಷ್ಮವಾಗಿ ಪರಿಗಣಿಸಿದರೆ, ಆ ವಿಷಯ ಅಲ್ಲಿಗೇ ಬಿಡುವುದು ಸಮಾಜದ ಹಾಗು ನಮ್ಮ ಹಿತಾಸಕ್ತಿಯಿಂದ ಒಳ್ಳೆಯದೇ ಹೌದು. ಇದಕ್ಕೆ ಅನೇಕ ಉದಾಹರಣೆಗಳು ಕಳೆದ ಕೆಲವು ದಿನಗಳಲ್ಲೇ ನಮ್ಮ ಮುಂದೆ ಇದೆ. 

    ಒಂದು ಕಡೆ ಹಿರಿಯ ಸಾಹಿತಿ ಕಲ್ಬುರ್ಗಿಯವರ ಘೋರವಾದ ಹತ್ಯೆಯ ಪ್ರಕರಣವಾಗಿರಬಹುದು ಹಾಗು ಅದಕ್ಕೆ ಸಂಬಂದಿಸಿದ ಊಹಪೋಹಗಳು, ಕಾನ್ಸ್ಪಿರಸಿ ಥಿಯರಿಗಳು ಅವರನ್ನು ಮತ್ತೆ ಜೀವಂತವಾಗಿಸುವುದರಲ್ಲಿ ಸಫ಼ಲವಾಗದಿರುವ, ಅಥವಾ ಅವರ ಸಂಸಾರಕ್ಕೆ ನೆಮ್ಮದಿ ಒದಗಿಸುವಲ್ಲಿ ಸಹಾಯಕಾರಿಯಾಗದ ಸಂದರ್ಭವಾದರೆ ಮತ್ತೊಂದೆಡೆ ಐಏಎಸ್ ಅಧಿಕಾರಿ ಡಿ.ಕೆ.ರವಿಯವರ ಆತ್ಮಹತ್ಯೆ ಪ್ರಕರಣದ ಸುದ್ದಿಯೇ ಆಗಿರಬಹುದು. ನಮ್ಮ ಸ್ಯಾಂಡಲ್ವುಡ್ ಚಿತ್ರಗಳಲ್ಲಿ ಬರುವ ಹಾಗೆ ಅವರ "ಭೂತವೇ" ಸಾವಿನಿಂದ ಎದ್ದು ಬಂದು "ಹೀಗೆಯೇ ಆಯಿತು" ಎಂದು ಸಾಕ್ಷಿ ಹೇಳಿದರೂ ಕೂಡ, ಅದು ಅರ್ಧ ಸತ್ಯವೇ ಆಗಿರಬಹುದು, ಏಕೆಂದರೆ ಅದು ಕೊಲೆಯೇ ಆದರೂ ಕೂಡ (ಇಂಥವರು ಈ ಕಾರಣಕ್ಕೆ ಮಾಡಿರಬಹುದು ಎಂದು) ಭೂತವೂ ಊಹಿಸಬಹುದೇ ವಿನಃ ಆ ಸಂದರ್ಭದಲ್ಲಿ ಹೀಗೆಯೇ ಆಯಿತು (ಆ ಕಳೆದು ಹೋದ ಕಾಲದಲ್ಲಿ ಹೀಗೆಯೇ ನಿಖರವಾಗಿ ಆಯಿತು) ಅಂತ "ಟೈಮ್ ಮೆಶೀನ್" ಸಹಾಯ ಇಲ್ಲದೆ ಹೇಳಲು ಭೂತಕ್ಕೂ ಅಸಾಧ್ಯವೇ ಸರಿ. ಎಷ್ಟೇ ನಿಖರ ಎಂದುಕೊಂಡರೂ ಕೂಡ, ಒಂದೇ ಒಂದು ಸಣ್ಣ ಮರೆತ ವಿಷಯ/ವ್ಯಕ್ತಿ/ಉದ್ದೇಶದಿಂದ ಇಡೀ ಪ್ರಕರಣಕ್ಕೇ ಹೊಸ ಬಣ್ಣ ಕಟ್ಟಿದಂತಾಗುತ್ತದೆ. ಉದ್ಯಮಿ ’ಶೀನ ಬೋರ’ ಎಂಬುವರ‌ ಸಾವಿನ ಹೈ ಪ್ರೊಫ಼ೈಲ್ ಕೇಸಿನ ಚರ್ಚೆಗಳು ಹಾಗು ಸಿಕ್ಕ ಆಧಾರಗಳ ಮೇಲೆ ನಡೆದ ವಿಚಾರಣೆಗಳು, ಕೊನೆಗೆ ಅವರ ತಾಯಿಯೇ ಕೊಲೆಗಾರರ ಪೈಕಿ ಮುಖ್ಯ ದೋಶಿ ಆಗಿ ಪ್ರತಿ ವಿಚಾರಣೆಯಲ್ಲೂ ಕೋರ್ಟ್ ತಿರುಗುಬಾಣದಂತೆ ಹೊಸ ತಿರುವು ಪಡೆಯುತ್ತಿದ್ದ ಘಟನೆಯು ಗಮನಾರ್ಹವಾದದ್ದು. ಇತ್ತೀಚೆಗಷ್ಟೆ ಹಿರಿಯ ಸಾಹಿತಿ, ನಿರ್ದೇಶಕರು ಹಾಗು ವಯಸ್ಸಿನಲ್ಲಿ ಹಿರಿಯವರಾದ ಗಿರೀಶ್ ಕಾರ್ನಾಡ್ ರವರು ಅರಸ ಟಿಪ್ಪು ಸುಲ್ತಾನರ ವಿಷಯ ಮಾತಾಡಲು ಹೋಗಿ, ಆ ಸಂದರ್ಭಕ್ಕೆ ಬೇಡದ ಕೆಂಪೇಗೌಡರ ವಿಷಯ ಎತ್ತಿ ದೊಡ್ಡ ವಿವಾದ ಸೃಷ್ಟಿ ಮಾಡಿದ್ದು ನೀವೂ ತಿಳಿದಿರುತ್ತೀರಿ. ಈಗ ಅಮೀರ್ ಖಾನರ ’ನಾನು ನನ್ನ ಹೆಂಡತಿ ಬೇರೆ ದೇಶಕ್ಕೆ ಹೋಗಬೇಕೇನೋ ಎಂದು ಅವಳ ಅನಿಸಿಕೆ’ ಹೇಳಿಕೆ ಇಡೀ ದೇಶದಲ್ಲೇ, ಈಗಾಗಲೇ ನಡೆಯುತ್ತಿರುವ ಧಾರ್ಮಿಕ ಘರ್ಷಣೆಗಳ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದೆ. ಇದಕ್ಕೆ ನಮ್ಮ ವಿಶ್ವದಾದ್ಯಂತ ’ಕನೆಕ್ಟೆಡ್ ಜನರು’,  ಮಾಧ್ಯಮಗಳು, ವಿವಿಧ ಪ್ರತಿಕ್ರಿಯೆಗಳು ಎಲ್ಲವನ್ನೂ ಪರಿಗಣಿಸುತ್ತಾ ಗಾಂಧಿಜಿಯವರ ಎರಡನೆಯ ಕೋತಿಯ ಕಡೆ ಕಣ್ಣು ಹಾಯಿಸೋಣ.

    "ಕೆಟ್ಟದ್ದನ್ನು ನೋಡಬಾರದು" ಎನ್ನುವುದೇ ಎರಡನೆಯ ನೀತಿ ಪಾಠ. ಕಾಲಾಯ ತಸ್ಮಯಿ ನಮಃಕ್ಕೆ ಶರಣಾದ ಈ ಕೋತಿಯು ಹೇಳುವ ವಿಷಯ ಖಂಡಿತವಾಗಿಯು ನಮ್ಮ ಈಶ್ವರಪ್ಪನವರ ’ಟಿವಿ ಮಾಧ್ಯಮಗಳನ್ನು ಖಂಡಿಸಬೇಕು’ ಹೇಳಿಕೆಯನ್ನು ಬೀರುವ ಸಾರಂಶ ಅಲ್ಲವೇ ಅಲ್ಲ. ಮಾಧ್ಯಮಗಳು ಬೇಕೇಬೇಕು. ನಮಗೆ ಹೊರ ಜಗತ್ತಿನಲ್ಲಿ ನಡೆಯುವ ಆಗುಹೋಗುಗಳನ್ನು ತಿಳಿದುಕೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ವಿಷಯಗಳನ್ನು ’ಹೀಗೂ ಇರಬಹುದು’ ಎಂದು ಸಮಾಧಾನವಾಗಿ, ಸಮಾನಭಾವದಿಂದ, ರಾಜಕೀಯ ಹಿತಾಸಕ್ತಿಗಳ ದೃಷ್ಟಿಕೋಣದ ಸೋಂಕು ಇಲ್ಲದೆ ನೋಡಲು ಅವಕಾಶ ಮಾಡಿಕೊಳ್ಳುವಂತಹ ಮಾಧ್ಯಮವನ್ನು ಆರಿಸಿಕೊಳ್ಳುವ ಚಾತುರ್ಯವಾಗಿದೆ. ಕೆಲವರಿಗೆ ಪತ್ರಿಕೆಗಳಲ್ಲಿ ಓದಿದರೆ ವಿಷಯದ ಸ್ವಾರಸ್ಯ ಕಡಿಮೆ ಎನ್ನಿಸಬಹುದು. ಇನ್ನು ಕೆಲವರಿಗೆ ಟಿವಿಯಲ್ಲಿ ಒಂದೇ ಸಮನೆ ೨೪ ಗಂಟೆ ನಡೆಯುವ ವಾರ್ತೆಗಳು ನಾಟಕೀಯ ಅನ್ನಿಸಬಹುದು. ನಮಗೆ ಅರ್ಥವಾಗುವ ಹಾಗೆ, ನಾವು ಮನಸ್ಸನ್ನು ಕೆಡಿಸಿಕೊಳ್ಳದೆ, ಭಾವುಕರಾಗದೆ ವಿಷಯವನ್ನು ಮಾತ್ರ ಗ್ರಹಿಸುವ ಮಾಧ್ಯಮ ಆರಿಸಿಕೊಂಡು, ನಾವು ಯಾವ ಕಾರ್ಯಕ್ರಮ ನೋಡುತ್ತೇವೋ, ಯಾವ ಪುಸ್ತಕ/ಪತ್ರಿಕೆಯಲ್ಲಿ ಯಾವ ವಿಷಯ ಆರಿಸಿಕೊಂಡು ಓದುತ್ತೇವೋ ಎನ್ನುವುದರ ಆಧರದ ಮೇಲೆ ನಿಂತಿದೆ ಈ ಎರಡನೆಯ ಕೋತಿಯ ನೀತಿ. "ನೋಡುವುದು" ಸುಲಭವಲ್ಲ ಏಕೆಂದರೆ ನೋಡಿ, ಅದನ್ನು ನಮ್ಮ ಮನಸ್ಸಿನಲ್ಲಿ ನಮ್ಮ ಅನುಭವಗಳ ಮೇಲೆ ಅರ್ಥಮಾಡಿಕೊಂಡು, ಒಂದು ಕಥೆ ಕಟ್ಟಿ, ಒಂದು ದ್ರುಷ್ಟಿಕೋಣ ಅವಲಂಬಿಸುವಾಗ ಪ್ರತಿಯೊಬ್ಬರ ದೃಷ್ಟಿ ಒಂದೇ ಅಗಿರುತ್ತದೆಯೇ? ಆ ಕಥೆಯನ್ನು ಬೇರೆಯವರ ಮೇಲೆ ಹೇರುವುದು ಎಷ್ಟು ಸರಿ? ನಮ್ಮ ಮೇಲೆ ಬೆರೆಯವರು ಹೇರಿದರೆ ನಾವು ಸುಮ್ಮನಿರುತ್ತೇವೆಯೇ? ಬೇರೆಯವರು ಹೀಗೆ ವಿಷಯವನ್ನು ಪ್ರತಿಬಿಂಬಿಸಬೇಕಿತ್ತು ಎನ್ನುವ ಬದಲು, ನಾವು ಭಾವುಕರಾಗದೆ ’ಇಷ್ಟನ್ನು, ಹೀಗೆ ಇದ್ದರೆ ನೋಡುತ್ತೇವೆ’ ಎಂದು ಆಯ್ದುಕೊಂಡು ನಮ್ಮ ಇತಿಮಿತಿಗಳನ್ನು ಅರಿತುಕೊಳ್ಳುವುದೇ ಬುದ್ಧಿವಂತಿಕೆಯಾಗಿದೆಯೇನೋ.

    ’ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು’ ಹಾಡಿನ ಸಾಲುಗಳಿಗೆ ಕನ್ನಡಿ ಹಿಡಿಯುವ ಮೂರನೆಯ ಕೋತಿಯ "ಕೆಟ್ಟದ್ದನ್ನು ಕೇಳಬಾರದು" ಇದೇ ನೀತಿಯನ್ನು ಹೋಲುವ ರೇಡಿಯೋ, ಇತರ ಮಾತುಗಳು, ನಾವು ಹೆಚ್ಚು ಸಮಯ ಕಳೆಯುವ ವಾತವರಣದಲ್ಲಿ ಸುತ್ತ ಮುತ್ತಲಿನ ಜನರು ಆಡುವ ಮಾತುಗಳು ಹಾಗು ಅವರ ದ್ರುಷ್ಟಿಕೋಣಗಳ ನಮ್ಮ ಮೇಲಿನ ಪರಿಣಾಮದ ಆದಾರಸ್ಥಂಬದ ಮೇಲೆ ನಿಂತಿದೆ. ನಾವು ಬೇರೆಯವರು ಆಡುವ ಮಾತುಗಳಾಗಲಿ, ಮಾಧ್ಯಮಗಳಾಗಲಿ, ಅಧಿಕಾರದ ಮದದಿಂದ ಕಟ್ಟುವ ಕಥೆಗಳಾಗಲಿ ಎಲ್ಲಿಯವರೆಗು ನಮ್ಮ ಜೀವನದಲ್ಲಿ ವ್ಯಾಪಿಸಿಕೊಳ್ಳಲು ಬಿಡುವುದಿಲ್ಲವೋ, ಅಲ್ಲಿಯವರೆಗೂ ಸರಿ. ಇದು ಯವಾಗ ನಮ್ಮನ್ನು ಒಂದು ದ್ರೂಷ್ಟಿಕೋಣವನ್ನು ಆರಿಸಲು ಒತ್ತಡ ಬೀರಲು ಶುರು ಮಾಡುತ್ತದೋ, ಆಗ ಒಳಿತು ಕೆಟ್ಟದ್ದು ಅರಿತು, ಇತರರನ್ನು ತಿದ್ದುವ ಬದಲು ನಾವು ಅದನ್ನು ಕೇಳಿಸಿಕೊಳ್ಳುವುದು ನಿಲ್ಲಿಸುವುದಕ್ಕೆ ಏನು ಮಾಡಬೇಕೋ, ಅದನ್ನು ಮಾಡುವುದೇ ಶ್ರೇಷ್ಠವಾಗಿ ಈ ನೀತಿಯ ಪಾಲನೆಯ ದಾರಿ ಅನ್ನಿಸುತ್ತದೆ. ವಾಕ್ಯಗಳು ಅವೇ, ನೀತಿಯೊಂದೇ. ಕಾಲ ಬೇರೆ. ಕಾಲಕ್ಕೆ ತಕ್ಕಂತೆ ಅರ್ಥ ಮಾಡಿಕೊಂಡು ಮುಂದೆ ಹೋದರೆ ಗಾಂಧೀಜೀಯವರೂ ಖುಶ್, ಮಂಕುತಿಮ್ಮನೂ ಖುಶ್. ಏನಂತೀರಿ?

Rating
No votes yet