ಕಿರುಗತೆ: ‘Sea’; the ‘Sky’......

ಕಿರುಗತೆ: ‘Sea’; the ‘Sky’......

ನಡುಮಧ್ಯಾಹ್ನದ ಸೂರ್ಯನ ಬೆಳಕಿಗೆ ಮಯ್ಯೊಡ್ಡಿ ಒಡತಿಯಿಂದ ನೀರೆರೆಸಿಕೊಳ್ಳುತ್ತಿದ್ದ ಹಸಿರುಗಿಡಗಳು ಆಲ್ಫ್ರೆಡ್ ಕ್ರೈಗ್ ನನ್ನು ನಸುನಕ್ಕು ಸ್ವಾಗತಿಸಿದವು. ಆಕೆಗೆ ಅವನು ಅವಳ ಹಿಂದೆ ಬರುತ್ತಿದ್ದುದು ಕಾಣಲಿಲ್ಲ. ಆಕೆಯ ಮನದೊಳಗಿನ ಚಿಂತನೆಯ ಕಣ್ಣುಗಳು ತನ್ನ ಗಂಡನನ್ನು ಗುರುತಿಸಲಿಲ್ಲ.  ಆತನ ಮೈ ಸೋಕಲು ಹವಣಿಸಿ ಕೈದೋಟದ ಗಿಡಗಳು ಅವನ ಕಾಲಿಗೆ ಬೇಕುಬೇಕಂತಲೇ ತೊಡಕಾಗುತ್ತಿದ್ದವು.  ಹತ್ತಿರ ಬಂದವನೇ ತನ್ನ ಹೆಂಡತಿಯ ಹೆಸರಿಡಿದು “ಅಬೆಲ್” ಎಂದು  ಸಣ್ಣದನಿಯಲ್ಲಿಯೇ ಕರೆದನು.  ಆಕೆ ಗಾಬರಿಗೊಂಡವಳಂತೆ  "ಹಾಂಞ್.." ಎಂದು ತಿರುಗಿ ನೋಡಿದಳು.  ಗಾಬರಿಯಿಂದುಂಟಾದ ಉಸಿರಿನ ವೇಗವನ್ನು ಕಡಿಮೆಮಾಡಿ "ಓಹ್ ನೀನಾ?" ಎಂದಳು. ಆತನ ಮುಖವನ್ನು ನೋಡಿ ಬಹಳ ದಿನಗಳಾಗಿತ್ತು. ಆದರೂ ಆಕೆಯ ಮುಖದಲ್ಲಿ ಅವನಿಗಾಗಿ ಕಾತರಿಸಿದ ಕುರುಹು ಕಾಣಲಿಲ್ಲ.  "ನಾನಿನ್ನು ನಿರುದ್ಯೋಗಿಯಲ್ಲ, ನನಗೊಂದು ನೌಕರಿಸಿಕ್ಕಿದೆ" ಎಂದು  ನಗುತ್ತಲೇ ಅಲ್ಫ್ರೆಡ್  ಹೇಳಿದನು. ಇದನ್ನು ಕೇಳುತ್ತಲೆ ಕೈದೋಟದ ಗಿಡಗಳೂ  ನಕ್ಕವೂ. ಆಕೆಗೆ ನಗು ಬರಲಿಲ್ಲ, ಆದರೂ ಇರದ ನಗುವನ್ನು ತುಟಿಯಲ್ಲಿ ಮಿನುಗಿಸಿ ನುಡಿದಳು " ಓಹ್, ಅದ್ಯಾವ ನೌಕರಿಯೋ? ಕೊಟ್ಟಿದ್ದು ಯಾರು?" ಎಂದಳು."ಅದು, ಹೇಳುವ ಹಾಗಿಲ್ಲ. ಗೌಪ್ಯವಾದದ್ದು" ಎಂದಷ್ಟೇ ನುಡಿದು  ಗಿಡಗಳನ್ನು ಸವರುತ್ತ ಅಲ್ಲಿಂದ ಕಾಲ್ತೆಗೆದನು. ಹೆಂಡತಿ ಅವನ ನಿರ್ಗಮನವನ್ನು ನೋಡುತ್ತ ಗಿಡಗಳಿಗೆ ನೀರು ಹಾಕುವ ಕೆಲಸವನ್ನು  ಮುಂದುವರಿಸಿದಳು.
 ಮುಂಜಾವಿನಲ್ಲಿ ಸೂರ್ಯನ ಉದಯವಾಗುವ ಮುನ್ನವೇ ಎದ್ದು ತನ್ನ ಕಪಾಟಿನಲ್ಲಿ ಆತ ಏನನ್ನೋ ಹುಡುಕುತಿದ್ದನು. ತನ್ನ ಹೆಂಡತಿಯ ಕೋಣೆಗೆ ಆತನಿಗೆ ಪ್ರವೇಶವಿರಲಿಲ್ಲ. ಸಾಕಷ್ಟು ಹುಡುಕಿದ ನಂತರ ಆತನಿಗೆ ಹುಡುಕುತ್ತಿದ್ದ ವಸ್ತು ಸಿಕ್ಕಿತು. ಅದೊಂದು ಹಳೆಯ ಮೊಗವಾಡ.  ತನ್ನ ನೆಚ್ಚಿನ ಆಗಸ ನೀಲಿಯ ಬಣ್ಣದ ಶರ್ಟಿನ ಜೊತೆ  ಹಳೆಯ ಪೈಜಾಮವನ್ನು ಧರಿಸಿ, ತಾನು ಹುಡುಕಿ ಇಟ್ಟಿದ್ದ ಮೊಗವಾಡವನ್ನು ಮುಖಕ್ಕೆ ಹಾಕಿ ತನ್ನ ಕೆಲಸಕ್ಕೆ ಸಿದ್ಧನಾದನು. ಹೆಂಡತಿಯ ಕೋಣೆಯಬಾಗಿಲನ್ನು ಒಂದೆರಡು ಬಾರಿ ತಟ್ಟಿದರೂ ಪ್ರಯೋಜನವಾಗಲಿಲ್ಲ. ಸರಿ, ಕೆಲಸದ ಆರಂಭಕ್ಕಾಗಿ ಅಲ್ಲಿಂದ ಹೊರಟನು.
 ಆತನಿಗೆ ಈ  ನೌಕರಿ ಸಿಗುವುದಕ್ಕಿಂತ ಮೊದಲು, ನೀಲಿಯಾಗಸವನ್ನು ದಿಗಂತದಲ್ಲಿ ಚುಂಬಿಸಿದ್ದ ಸಲಿಲ ಸಾಗರವನ್ನುನೋಡುತ್ತ ಅಲೆಯುವುದು ಆತನ ದಿನನಿತ್ಯದ ಕಾಯಕ. ನಿರ್ಮಲವಾದ ಆಗಸದ ದೃಶ್ಯವು ತನ್ನ ಹೃದಯದಲ್ಲಿ ನಿಂತಿತೆಂದರೆ ಆತನಿಗೆ ಊಟ, ನಿದ್ದೆ ಮನೆ ಮಡದಿಯೆಲ್ಲವೂ ಅಲ್ಪವಾಗಿ ಕಾಣುತ್ತಿದ್ದವು.  ತನ್ನ ಸಣ್ಣ ಪಟ್ಟಣದಿಂದ ಕೆಲವಾರು ಮೈಲಿಗಳಷ್ಟು ದೂರದಲ್ಲಿದ್ದ ಜನನಿಬಿಡವಲ್ಲದ  ಹಸಿರಿನ ತೆಕ್ಕೆಯ ಸಮುದ್ರವೆಂದರೆ ಆತನಿಗೆ ಪ್ರಾಣ.  ಬಿಸಿಲಿನ ಝಳಕ್ಕೆ ಹೊಳೆಯುವ ಶುಭ್ರವಾದ ಬಿಳಿಯ ಮರಳುದಿಣ್ಣೆಯ ಮೇಲೆ ತಾನು ಏಕಾಂಗಿಯಾಗಿ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಿದ್ದನು. ತನ್ನ ರಾತ್ರಿಯೂ ತಾರೆಗಳೊಂದಿಗಿನ ಸಂವಾದದಲ್ಲಿಯೇ ಕಳೆಯುತ್ತಿತ್ತು.. ಅಪರೂಪಕ್ಕೊಮ್ಮೆ ತನ್ನ ಮನೆ, ಮಡದಿಯ ನೆನಪಾಗಿ ಪಟ್ಟಣದ ಕಡೆ ಬರುತ್ತಿದ್ದನು.  ಅದೊಂದು ಅಲ್ಬೇನಿಯಾದ ಸಣ್ಣ ಪಟ್ಟಣ. ಆತನಿಗೆ ತನ್ನ ದೇಶದ ಮೇಲೆ ಅಭಿಮಾನವೇನೂ ಇದ್ದ ಹಾಗೆ ಇರಲಿಲ್ಲ. ಎಲ್ಲಿ ಸಮುದ್ರವು ಆಗಸವನ್ನು ಚುಂಬಿಸುವ ಹಾಗೆ ಕಾಣುವುದೋ ಅದೆಲ್ಲಾ ಅವನ ದೇಶವೇ!. ಆತ ಸಾಗರದ ದಂಡೆಯಮೇಲೆ ನಡೆಯುತ್ತಿದ್ದರೆ ಅಲೆಗಳಿಗೂ ಒಂದು ರೀತಿಯ ಹರ್ಷ.  ಎತ್ತರದ ನಿಲುವು, ಬಲಿಷ್ಠವಾದ ನಲವತ್ತರ ವಯಸ್ಸಿನವನ ದೇಹ, ಬಿಳಿಯ ಹೂವಿನಮೇಲೆ ಅಲ್ಲಲ್ಲಿ ಕೆಂಪು ಚೆಲ್ಲಿದೆಯೋ ಏನೋ ಎಂಬಂತೆ ಕಾಣುವ  ಮುಖ, ನೀಳವಾದ ಮೂಗು, ತಿಂಗಳುಗಟ್ಟಲೆ ಚೌರಮಾಡಿಸಿರದ ಗಡ್ಡ, ಹಳೆಯದೊಂದು ರಬ್ಬರ್ ಬ್ಯಾಂಡಿನಿಂದ ಗಂಟು ಹಾಕಿದ ಉದ್ದನೆಯ ಕೆದರಿದ ಕೂದಲು, ಸೆಟೆದು, ತಲೆಯನ್ನು ಬಗ್ಗಿಸದೆ ಒಂದೆ ನೋಟದಲ್ಲಿ ನಡೆಯುವ ನೀಳ ಆಳೆತ್ತರದ ಕಾಯ, ಮೇಲೊಂದು ಹರಿದ ಬಿಳಿಯ ಮಾಸಲು ಹೊದಿಕೆಯ ಆ ವ್ಯಕ್ತಿಯನ್ನು ಕಂಡರೆ ಪ್ರಕೃತಿಗೆ ಅತಿಶಯವಾದ ಆನಂದ. ಆದರೆ ಆತನ ಅವತಾರವನ್ನು ನೋಡಿ ಜನರು ಆತನನಿಂದ ದೂರ ಸರಿಯುತ್ತಿದ್ದುದೇ ಹೆಚ್ಚು. ಆತನದ್ದು ಪ್ರೇಮವಿವಾಹವೇ!. ಆತನಿಗಿಂತ ಆಕೆಯೇ ಆತನನ್ನು ಹೆಚ್ಚು ಮೆಚ್ಚಿ ಮದುವೆಯಾಗಿದ್ದಳು. ಆತನ ನಡತೆ ಆತನ ಮಾತುಗಳು ಆಕೆಗೆ ಬಹಳ ಇಷ್ಟವಾಗಿದ್ದವು. ಅವಳನ್ನು ಕಂಡರೆ ಆತನಿಗೂ ಇಷ್ಟವೇ, ಆದರೆ ಅದು ಮಾನವ ಅಸಹಜವಾದ ಪ್ರೀತಿ. ಅದು ಆಕೆಗೆ ತಿಳಿದಿರಲಿಲ್ಲ. ಮೊದಲಿನ ಅವನ ಆಗಸವನ್ನು ಕುರಿತಾದ ಮಾತುಗಳು ಮದುವೆಯ ನಂತರ ಸಪ್ಪೆಯಾಗಿ ಕಾಣತೊಡಗಿದವು. ಆಕೆ ಬಯಸಿದ ಪ್ರೀತಿಯನ್ನು ಕೊಡಬಹುದಾದ ಹಲವಾರು ಜನರಿದ್ದಿರಬಹುದು. ಆದರೆ ಇವನ ಪ್ರೀತಿಯ ವಿಶೇಷತೆ ಅವರಲ್ಲಿರಲಿಲ್ಲ. ಇವನಿಗೆ ಗೊತ್ತಿದ್ದದ್ದೂ ಆಕೆಯೊಬ್ಬಳೆ!.  ಆಕೆ ವಾಸ್ತವದ ಹಿನ್ನೆಲೆಯಲ್ಲಿ ಆತನನ್ನು ನೋಡಿದ್ದರೆ ಆಕೆಗೂ ಇಷ್ಟವಾಗುತ್ತಿರಲಿಲ್ಲವೇನೋ. ಆದರೂ ವಿಧಿ ಇವರಿಬ್ಬರ ನಡುವಣ ಸಂಬಂಧವನ್ನು ಕಷ್ಟಪಟ್ಟು ಬಿಗಿದಿತ್ತು.
 ಸಮುದ್ರದ ದಂಡೆಯಮೇಲೆ  ಕೆಲವು ಮಾರಾಟಗಾರರು ಆಟಿಕೆಗಳನ್ನು ಮಾರುತ್ತಿದ್ದರು. ಸಣ್ಣ ಸಣ್ಣ ಆಟಿಕೆಗಳು, ಬಣ್ಣಬಣ್ಣ ದ ಮೊಗವಾಡಗಳು, ಮಕ್ಕಳ ತಿನಿಸುಗಳನ್ನು ಮಾರುವವರು ಸಾಮಾನ್ಯವಾಗಿ ಕಾಣಸಿಗುತ್ತಿದ್ದರು.  ಆದರೂ ಅದು ಜನನಿಬಿಡವಾದ ಸಮುದ್ರ ತೀರವಾಗಿರಲಿಲ್ಲ. ಅಪರೂಪಕ್ಕೊಮ್ಮೆ ಪ್ರವಾಸಿಗಳು ಅಲ್ಲಿ ಸೇರುತ್ತಿದ್ದರು.  ಆಲ್ಫ್ರೆಡ್  ಒಂದು ಬಂಡೆಯ ಮೇಲೆ, ಹಸನ್ಮುಖಿಯಾಗಿ  ಸಮುದ್ರ ತೀರವನ್ನು ನೋಡುತ್ತಾ ಕುಳಿತಿದ್ದನು. ಯಾರೋ "ಕ್ರೈಗ್" ಎಂದು ಕೂಗಿದ ಹಾಗಾಯಿತು. ತಿರುಗಿ ನೋಡಿದನು. ಅಲ್ಲಿ ದೂರದಲ್ಲಿ ಮಕ್ಕಳೆರಡು  ಆಟಿಕೆಗಳನ್ನು ಕೊಂಡುಕೊಳ್ಳುತ್ತಿದ್ದದ್ದು ಕಣ್ಣಿಗೆ ಬಿತ್ತು ಸ್ವಲ್ಪ ದೂರದಲ್ಲಿ ದಂಪತಿಗಳಿಬ್ಬರು ಮೊಗವಾಡ ಮಾರುವವರ ಹತ್ತಿರ ಚೌಕಾಸಿಯಲ್ಲಿ ತೊಡಗಿದ್ದರು. ಇನ್ನೂ ಸ್ವಲ್ಪ ದೂರದಲ್ಲಿ ಬಣ್ಣಬಣ್ಣದ ಮೊಗವಾಡ ಹಾಕಿಕೊಂಡು ಸಂತೋಷ ಭರಿತವಾಗಿ ಯಾವುದೋ ವಿಷಯದ ಬಗ್ಗೆ ಹರಟುತಿದ್ದ ಒಂದೈದಾರು ಮಂದಿ ಕಣ್ಣಿಗೆ ಬಿದ್ದರು.  ಅವರನ್ನು ಬಿಟ್ಟು ಮತ್ತಾರೂ ಇದ್ದಂತೆ ಕಾಣಲಿಲ್ಲ. ಆದರೆ ಹಿಂದೆ ಒಂದು ಛಾಯೆ ಕಂಡಿತು.. ಅದೇ ಸಾಮಾನ್ಯ ಎತ್ತರದ, ಅರ್ಧ ಬೋಳು ತಲೆಯ, ಸಣ್ಣ ಕಣ್ಣಿನ, ನೀಳ ಗಡ್ಡ ಮೀಸೆಗಳ, ತೇಪೆ ಹಾಕಿದ ಬಟ್ಟೆಯ ಹಾಂಗ್ ಕ್ಸಿಯಾನ್.
 ಸಮುದ್ರದ ದಂಡೆಯ ಬಳಿ ಮಕ್ಕಳ ಆಟಿಕೆಗಳನ್ನು ಹೊತ್ತು ಮಾರುವ ವೃದ್ಧ ಕ್ಸಿಯಾನ್ ಗೆ ಇವನನ್ನು ಕಂಡರೆ ಅಚ್ಚುಮೆಚ್ಚು. ಆಲ್ಫ್ರೆಡ್ ತಿರುಗಿ ನೋಡುವುದೂ ಈ ವೃದ್ಧ ದನಿಗೆ ಮಾತ್ರ.  ಯಾರೊಂದಿಗೂ ಸಮಯ ಕಳೆಯದ ಆಲ್ಫ್ರೆಡ್ ತನ್ನ ದಿನದ ಅರ್ಧ ಭಾಗವನ್ನೂ ಒಮ್ಮೊಮ್ಮೆ ಕ್ಸಿಯಾನ್ ಜೊತೆ ಕಳೆದಿದ್ದಿದೆ. ಕ್ಸಿಯಾನ್ ಮೂಲತಃ ಚೈನಾದಿಂದ ವಲಸೆ ಬಂದಂತಹವನು. ಅವನದು ಒಂದು ರೀತಿಯ ಆಕಾಶ ನೋಡಿಕೊಂಡು ಬದುಕುವ ಜೀವನವೇ!. ಆಟಿಕೆಗಳನ್ನು ಹೊತ್ತು, ನಿಧಾನವಾಗಿ ನಡೆದು ಬಂದ ಕ್ಸಿಯಾಂಗ್, ಕ್ಷೇಮ ಸಮಚಾರವನ್ನು ಕೇಳುತ್ತಾ, ಆಲ್ಫ್ರೆಡ್ ನ ಜೊತೆ ಮಾತಿಗಿಳಿದನು. "ಸುಮ್ಮನೆ ವೃಥಾ ಅಲೆದರೆ ಪ್ರಯೋಜನವೇನು?, ಏನಾದರೊಂದು ಕೆಲಸ ಹುಡುಕಿಕೊಳ್ಳಬಾರದೆ?".
 "ಕೆಲಸವೇನೋ ಮಾಡಬಲ್ಲೆ, ಆದರೆ ನನ್ನ ಮನಸಿಗೆ ಹಿಡಿಸುವ ಕೆಲಸವಿದ್ದರೆ ಖುಷಿಯಾದೀತು. ಇಲ್ಲದಿದ್ದರೆ ಅದರಿಂದ ದುಖಃವೇ ಹೆಚ್ಚು" ಎಂದನು ಆಲ್ಫ್ರೆಡ್.
"ನಿನಗೊಪ್ಪಿಗೆಯಾಗಬಹುದಾದ ಕೆಲಸವೊಂದಿದೆ ಮಾಡಬಲ್ಲೆಯೇನು?  ಕ್ಸಿಯಾನ್ ಕೇಳಿದನು.
"ಓ.. ಅದಕ್ಕೇನಂತೆ ನನಗೆ ಒಪ್ಪಿಗೆಯಾದರೆ ಅಷ್ಟೇ ಸಾಕು.. ಸಂಬಳವೂ ಒಳ್ಳೆಯದಿರಲಿ."
"ಅಲ್ಲಿ ನೋಡು!, ಆ ಜನರಲ್ಲಿ ನೀನು ಗುರುತಿಸಬಹುದಾದ ಎದ್ದು ಕಾಣುವ ಅಂಶವಾವುದು?"
"ಅವರೆಲ್ಲರೂ ಒಟ್ಟು ಸೇರಿ ಖುಷಿಯಾಗಿದ್ದಾರೆ.. ಅವರಲ್ಲಿ ಎದ್ದು ಕಾಣುವ ಅಂಶ ಆತ್ಮೀಯತೆ ಅಲ್ಲವೇ?"
"ಆಲ್ಫ್ರೆಡ್ ಕ್ರೈಗ್, ನಿನ್ನ ಹೆಸರಿಗೆ ತಕ್ಕಂತೆಯೇ ಯೋಚಿಸಿದ್ದೀಯ, ಇನ್ನೂ ಒಂದು ಸಾಮಾನ್ಯವಾದ ಒಂದು ಅಂಶವಿದೆ... ಹುಡುಕಬಲ್ಲೆಯ...?"
"ಓಹ್,  ಅವರು ಧರಿಸಿರುವ ಬಣ್ಣದ ಮೊಗವಾಡವಲ್ಲವೇ?.. ಇಲ್ಲಿ ಅಡ್ಡಾಡುವರೆಲ್ಲರ ಹತ್ತಿರ ಅದು ಇರುವುದರಿಂದ ಅದು ಎದ್ದು ಕಾಣುವ ಅಂಶ ಎನ್ನಿಸಲಿಲ್ಲ.."
"ಹಹ..  ಹೌದು.. ನಿನ್ನ ಕೆಲಸವೂ ಅದೇ, ಯಾರು ಮೊಗವಾಡವನ್ನು ಧರಿಸಿಲ್ಲವೋ ಅವರನ್ನು ನನ್ನ ಬಳಿ ಕರೆತರುವುದು."
ಸ್ವಲ್ಪ ನಕ್ಕು, ಆಲ್ಫ್ರೆಡ್ ತನ್ನ ಬಲಕ್ಕೆ ತಿರುಗಿ ನೋಡಿದ.. ಅಲ್ಲಿ ಕೆಲವು ಮಕ್ಕಳು ಆಟಿಕೆಗಳ ಜೊತೆ ಆಡುತ್ತಿದ್ದರು. ಅವರು ಮೊಗವಾಡಗಳನ್ನು ಧರಿಸಿದಂತೆ ಕಾಣುತ್ತಿರಲಿಲ್ಲ.."
ಕ್ಸಿಯಾನ್ ನಸುನಕ್ಕು ಹೇಳಿದ "ಆದರೆ ಮಕ್ಕಳನ್ನು ಕರೆತರುವ ಹಾಗಿಲ್ಲ!. ಸಂಬಳವಂತೂ ಯಥೇಚ್ಚವಾಗಿ ಕೊಡಲು ನಾನು ಸಿದ್ಧ, ಕೆಲಸವಷ್ಟೇ ನನಗೆ ಮುಖ್ಯ. ಕೆಲಸವೂ ಕಠಿಣವಾದದ್ದೇನಲ್ಲ. ಮೊಗವಾಡವಿಲ್ಲದವರನ್ನು ನನಗೆ ಪರಿಚಯಿಸುವುದು. ಒಬ್ಬರನ್ನು ಪರಿಚಯಿಸಿದರೆ ನಿನಗೆ ಐದು ಸಾವಿರ ಲೆಕ್ ಗಳನ್ನ ಕೊಡುತ್ತೇನೆ, ಎಷ್ಟು ಜನರನ್ನು ಪರಿಚಯಿಸುವೆಯೋ ಅಷ್ಟು ಲೆಕ್ ಗಳನ್ನು ನೀನು ಸಂಪಾದಿಸುತ್ತೀಯ. ಅದೇ ನಿನ್ನ ಸಂಭಾವನೆ. ಒಪ್ಪಿಗೆಯೋ?"
"ಐದು ಸಾವಿರ ಲೆಕ್ ಗಳೇ? ಆದರೆ ಹೇಗೆ ಹುಡುಕುವುದು, ಜನರಂತೂ ನನ್ನನ್ನು ಕಂಡರೇ ದೂರ ಸರಿಯುತ್ತಾರೆ. ಮೊಗವಾಡಗಳಾದರೂ ತುಂಬ ಸ್ವಾಭಾವಿಕವಾಗಿ ಕಾಣುವುದರಿಂದ ದೂರದಿಂದ  ಪರೀಕ್ಷೆ ಮಾಡುವುದು ಕಷ್ಟ.  ಅಂತಹವರು ಸಿಕ್ಕರೂ ಅವರನ್ನು ನಿಮ್ಮ ಬಳಿಗೆ ಕರೆ ತರುವುದು ಇನ್ನೂ ಕಷ್ಟ."
"ಅದಕ್ಕಾಗಿ ಅಷ್ಟೇಕೆ ಯೋಚಿಸಬೇಕು..?  ನೀನೂ ಅವರಂತೆಯೆ ಮೊಗವಾಡವೊಂದನ್ನು ಕೊಂಡು ಕೋ.. ದುಡ್ಡಿಲ್ಲವೋ ?."
ಹಿಂದೊಮ್ಮೆ ಬಳಸುತ್ತಿದ್ದ ಹಳೆಯ ಮೊಗವಾಡವೊಂದು ಕಪಾಟಿನಲ್ಲೋ, ಪೆಟ್ಟಿಗೆಯಲ್ಲೋ ಬಿದ್ದಿರಬೇಕು.. ಒಮ್ಮೆ ಹುಡುಕಿ ನೋಡುತ್ತೇನೆ.. ಹೊಸದೊಂದನ್ನು ಕೊಂಡುಕೊಳ್ಳುವಷ್ಟು ಹಣವಿಲ್ಲ.. ಮೊದಲು ನನಗೆ ಕೆಲಸ ಸಿಕ್ಕ ಶುಭ ಸಮಾಚಾರವನ್ನು ನನ್ನ ಮಡದಿಗೆ ತಿಳಿಸುತ್ತೇನೆ.." ಎಂದು ಅಲ್ಫ್ರೆಡ್ ಬೇಗ ಬೇಗ ಹೆಜ್ಜೆ ಹಾಕಿದ್ದನು.
ಇಂದು ಆಲ್ಫ್ರೆಡ್ ನ ಹೊಸ ನೌಕರಿಯ ಮೊದಲ ದಿನ, ಎಷ್ಟು ಸಂಪಾದಿಸಬಹುದೆಂದು ಮನದಲ್ಲಿಯೇ ಎಣಿಸುತ್ತಾ ತ್ವರೆ ಮಾಡಿ ಹೆಜ್ಜೆ ಹಾಕುತ್ತಾ ನಡೆದನು. ಇಂದು ಅವನ ನಡಿಗೆ ಸಮುದ್ರದ ಕಡೆ ಆಗಿರಲಿಲ್ಲ. ಬದಲಾಗಿ ತನ್ನ ಪುಟ್ಟ ಪಟ್ಟಣದ ಕಡೆ ನಡೆದಿತ್ತು.  ಇನ್ನೂ ಮುಂಜಾವಿನ ಆರರ ಕತ್ತಲಲ್ಲಿ ಜನರನ್ನು ಹುಡುಕುವುದು ಸ್ವಲ್ಪ ತ್ರಾಸದಾಯಕವೇ ಆಗಿತ್ತು. ಪಟ್ಟಣಿಗರು ಮುಂಜಾವಿನಿಂದಲೇ ಮುಖವಾಡವನ್ನು ಹಾಕಿ ಕೆಲಸದಲ್ಲಿ ತೊಡಗಿದ್ದರು. ನೋಡಿದ ಕೂಡಲೆ ಸ್ವಾಭಾವಿಕವಾಗಿ ಕಂಡರೂ ಹತ್ತಿರದಲ್ಲಿ ಹೋಗಿ ನೋಡಿದಾಗ.. ಮುಖವಾಡದ ಚರ್ಮ ಎದ್ದು ಕಾಣುತ್ತಿತ್ತು. ಕೆಲವು ಜನರ ಮುಖ ಸ್ವಾಭಾವಿಕವಾಗಿ ಕಂಡರೂ ಗಂಟೆಗಟ್ಟಲೆ ಅವರೊಡನೆ ಮಾತನಾಡಿದಾಗ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡದ್ದು ತಿಳಿಯುತ್ತಿತ್ತು. ಮುಂಜಾವು ಆರರಿಂದ ಶುರುವಾದ ಹುಡುಕಾಟ ಹನ್ನೊಂದಾದರೂ ಮುಗಿಯಲಿಲ್ಲ.  ಆಲ್ಫ್ರೆಡ್, ಇಂದು ಏನಿಲ್ಲ ವೆಂದರೂ ಒಂದು ಲಕ್ಷ ಲೆಕ್ ಗಳನ್ನು ಸಂಪಾದಿಸುವ ಯೋಚನೆಯಲ್ಲಿದ್ದನು. ಆದರೆ ಅವನ ಗ್ರಹಚಾರಕ್ಕೆ ಒಬ್ಬನೂ ಸಿಕ್ಕಲಿಲ್ಲ. ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ಅದ್ಯಾರೋ ಒಬ್ಬ, ಮುಖ ಮೇಲೆ ಮಾಡಿಕೊಂಡು ಮರದಕೆಳಗೆ ಮಲಗಿದ್ದುದು ಅಲ್ಫ್ರೆಡ್ ನ ಕಣ್ಣಿಗೆ ಬಿತ್ತು. ಹಸನ್ಮುಖಿಯಾದ ಅವನ ಬಳಿ ಉಡುವುದಕ್ಕೆ ಒಳ್ಳೆ ಬಟ್ಟೆ ಇದ್ದಂತೆ ಕಾಣಲಿಲ್ಲ. ಅಲ್ಫ್ರೆಡ್ ಅವನನ್ನು ಮರದ ಮರೆಯಿಂದಲೇ ಕೆಲವು ನಿಮಿಷಗಳ ಕಾಲ ಅವಲೋಕಿಸಿದನು.  ತುಂಬಾ ಹತ್ತಿರದಿಂದ ನೋಡಬಹುದಾಗಿದ್ದ ಅವನ ಮುಖ ಸ್ವಾಭಾವಿಕವಾಗಿಯೇ ಕಂಡು ಬರುತ್ತಿತ್ತು. ಬಹುಶಃ ಇವನೊಬ್ಬನ ಬಳಿ ಅದು ಇರಲು ಸಾಧ್ಯವಿಲ್ಲ ಎಂದು ಅಲ್ಫ್ರೆಡ್ ಅವನ ಹತ್ತಿರ ಬಂದು ಮಾತು ಕತೆಯಲ್ಲಿ ತೊಡಗಿದನು. ಅವನಿಗೆ ತಿಳಿಯದಂತೆ ಅವನ ಮುಖವನ್ನು ಆಗಾಗ್ಗೆ ಪರೀಕ್ಷಿಸುವ ಕಂಗಳಿಂದ ನೋಡುತ್ತಿದ್ದನು. ಬಹಳ ಹೊತ್ತು ನೋಡಿದ ಮೇಲೆ ಅದು ಅವನ ಸ್ವಾಭಾವಿಕ ಮುಖಚರ್ಯೆ ಎಂದು ತಿಳಿಯಿತು. ಖುಷಿಯಿಂದಲೇ "ನನ್ನ ಜೊತೆ ಬರುವೆ ಏನು? ನಿನ್ನನ್ನು ಒಬ್ಬನ ಬಳಿ ಕರೆದೊಯ್ಯುತ್ತೇನೆ. " ಅವನು ಕೊಡುವ ದುಡ್ಡನ್ನು ಹಂಚಿಕೊಳ್ಳೋಣ" ಎಂದು ತನ್ನ ನೌಕರಿಯ ಬಗ್ಗೆ ಹೇಳಿದನು..
ಅದಕ್ಕೆ ಆ ವ್ಯಕ್ತಿಯು "ಮಕ್ಕಳನ್ನು ಕರೆದೊಯ್ಯುವ ಹಾಗಿಲ್ಲವಲ್ಲ!.. ನನಗೋ ವಯಸ್ಸು ಹನ್ನೆರಡು ದಾಟಿಲ್ಲ"  ಎಂದನು.  ಆಲ್ಫ್ರೆಡ್ ಗೆ ಆ ವ್ಯಕ್ತಿಯ  ಹೇಳಿಕೆಯ ಮೇಲೆ ನಂಬಿಕೆ ಬರಲಿಲ್ಲ.. "ನೀನೊಬ್ಬ ಮೋಸಗಾರ, ಕೂದಲು ನೆರೆತಿದ್ದರೂ ಹನ್ನೆರಡು ದಾಟಿಲ್ಲವೆನ್ನುತ್ತೀಯಲ್ಲ" ಎಂದು ಮುನಿಸಿ ಕೊಂಡು ತನ್ನ ಸಮಯ ವ್ಯರ್ಥವಾದುದರ ಬಗ್ಗೆ ಚಿಂತಿಸುತ್ತ ಸಮುದ್ರದ ಕಡೆ ನಡೆದನು. ಆದರೂ ಆ ವ್ಯಕ್ತಿಗೆ ವಯಸ್ಸು ಹನ್ನೆರಡು ದಾಟಿರಲಾರದು ಎಂದೇ ಆಲ್ಫ್ರೆಡ್ ಗೆ ಅನ್ನಿಸತೊಡಗಿತು. ಗಂಟೆ ಮಧ್ಯಾಹ್ನ ಎರಡಾಯಿತು.. ಸಮುದ್ರತೀರದಲ್ಲಿ ಆಟಿಕೆಗಳನ್ನು, ಮುಖವಾಡಗಳನ್ನು, ತಿಂಡಿ ತಿನಿಸುಗಳನ್ನು ಮಾರುವವರ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು.  ಲಕ್ಷ ಲೆಕ್ ಗಳನ್ನು ಸಂಪಾದಿಸಬೇಕೆಂದಿದ್ದವನಿಗೆ ಐದುಸಾವಿರ ಲೆಕ್ ಗಳನ್ನೂ ಸಂಪಾದಿಸುವೇನೋ ಇಲ್ಲವೋ ಅನ್ನಿಸತೊಡಗಿತು. ಆದರೂ ಧೃತಿಗೆಡಲಿಲ್ಲ. ಇದ್ದಕ್ಕಿದ್ದ ಹಾಗೆ ಆತನಿಗೆ ತನ್ನ ಮಡದಿ ಅಬೆಲ್ ನ ನೆನಪಾಯಿತು. "ಓಹ್.. ನನ್ನ ಪ್ರೀತಿಯ ಮಡದಿಯನ್ನೇ ಮರೆತಿದ್ದೆನಲ್ಲಾ.!, ಅವಳು ಮೊಗವಾಡ ಧರಿಸಿರಲು ಸಾಧ್ಯವಿಲ್ಲ. ಬಹಳ ಹತ್ತಿರದಿಂದ ಆಕೆಯನ್ನು ನೋಡಿದ್ದೇನೆ. " ಎಂದು ಸರಸರನೆ ಹೆಜ್ಜೆ ಹಾಕುತ್ತ ಮನೆಯ ಕಡೆ ನಡೆದನು. ಮನೆಯ ಬಾಗಿಲು ತೆರೆದೆ ಇತ್ತು. ಮನೆಯ ಕೋಣೆಯೊಂದರಲ್ಲಿ ಬೇರಾವುದೋ ಹೆಂಗಸಿದ್ದದು ಕಣ್ಣಿಗೆ ಬಿತ್ತು. ಆಕೆ ಅಬೆಲ್ ಎಂದು ಆತನಿಗೆ ಅನ್ನಿಸಲಿಲ್ಲ.  ಅವಳನ್ನು ಕರೆದು ಮಾತನಾಡಿಸುವ ಸ್ಥಿತಿಯಲ್ಲೂ ಆಕೆ ಇರಲಿಲ್ಲ.  ತನ್ನ ಹೂದೋಟದ ಕಡೆಯೊಮ್ಮೆ ನಡೆದು ಅಲ್ಲಿಯೇ ಹುಲ್ಲಿನ ಮೇಲೆ ಕುಳಿತನು. ಆತನ ಕಣ್ಣಿನಿಂದ ತನಗೇ ಗೊತ್ತಿಲ್ಲದ ಹಾಗೆ ನೀರ ಬಿಂದುಗಳು ಜಿನುಗಿದವು.  "ಆಕೆ, ಅಬೆಲ್ ಆಗಿರಲಾರಳು" ಎಂದು ತನಗೆ ತಾನೆ ಹೇಳಿಕೊಂಡನು. ಸ್ವಲ್ಪ ಗಂಟೆಗಳ ನಂತರ ಮತ್ತೆ ಮನೆಯ ಕಡೆ ನಡೆದನು. ಅಲ್ಲಿ ಈ ಬಾರಿ ಯಾರೂ ಇರಲಿಲ್ಲ.  ಹೆಂಡತಿಯ ಕೋಣೆಯನ್ನು ಕಷ್ಟಪಟ್ಟು ತೆಗೆದು  ಒಳಗೆ ಹೋದನು. ಅಲ್ಲಿ ಮಲಗುವ ಹಾಸಿಗೆಯ ಮೇಲೊಂದು , ಕಪಾಟಿನಲ್ಲೆರಡು ಮೊಗವಾಡಗಳು ಸಿಕ್ಕವು". ಬೇಡವೆಂದರೂ ಈ ಬಾರಿ ಕಣ್ಣಿನ ಹನಿಗಳು ಆತನ ಗಡ್ಡದ ಕೂದಲನ್ನು ದಾರಿ ಮಾಡಿಕೊಂಡು ಎದೆಗಿಳಿದವು". ತನಗೆ ಸಿಕ್ಕ ನೌಕರಿಯ ಕಠಿಣತೆ ಆತನಿಗೆ ಅರಿವಾಗಿತ್ತು. ಮತ್ತೆ ಸಮುದ್ರದ ಕಡೆ ನಡೆದನು.. ಸಂಜೆ ಐದರ ಸಮಯವಾಗಿತ್ತು.
ಕತ್ತಲು ಆವರಿಸುತಿತ್ತು. ಆಲ್ಫ್ರೆಡ್, ಕೆಲಸದ ನಿಮಿತ್ತ ಧರಿಸಿದ್ದ ತನ್ನ ಮೊಗವಾಡವನ್ನು ಕಿತ್ತೆಸದು ಒಂದು ಬಂಡೆಯ ಮೇಲೆ ಕುಳಿತುಕೊಂಡನು. ಅವನು ಎಸೆದ ಮೊಗವಾಡವನ್ನು ನಡುವಯಸ್ಸಿನ ವ್ಯಕ್ತಿಯೊಬ್ಬ ಎತ್ತಿ ಕೊಂಡು ಓಡಿದುದು ಆಲ್ಫ್ರೆಡ್ ನ ಕಣ್ಣಿಗೆ ಬಿತ್ತು. ವಿಕಾರವಿಲ್ಲದ ಮನಸ್ಸಿನಿಂದ ಅವನು ಸಾಗರದ ಪೂರ್ವ ದಿಗಂತವನ್ನೇ ನೋಡುತ್ತಿದ್ದನು. ಮುಂಜಾನೆ ಕಂಗೊಳಿಸುತ್ತಿದ್ದ ಸೂರ್ಯ ಅಲ್ಲಿರಲಿಲ್ಲ. ಸಾಗರದ ಬಣ್ಣಕ್ಕೂ ಆಗಸದ ಬಣ್ಣಕ್ಕೂ ವ್ಯತ್ಯಾಸ ತೋರುತ್ತಿರಲಿಲ್ಲ.  ಇಲ್ಲಿಯವರೆಗೂ ಸಾಗರವು ಆಗಸದ ಮುಂದೆ  ಅಲ್ಪವೇನೋ ಎಂದು ಅನ್ನಿಸುತ್ತಿದ್ದ ಆಲ್ಫ್ರೆಡ್ ಗೆ ಸಾಗರವೇ ಆಗಸವಾದಂತೆ ತೋರತೊಡಗಿತು, ದ್ವೈತವನ್ನು ನಿರೂಪಿಸುವ ದಿಗಂತದ ರೇಖೆಯೂ ಕಾಣದಾಗತೊಡಗಿತು. ಸಾಗರ ಆಗಸಗಳು ಭಿನ್ನವಾದಂತೆ ಕಾಣಲಿಲ್ಲ, ತಾನೂ ವಿಶ್ವದಲ್ಲಿ ಭಿನ್ನ ಎಂದು ಅನ್ನಿಸಲಿಲ್ಲ. ಸಾಗರವನ್ನು ಬಳಸಿದ ಅಲೆಗಳು ಮನುಷ್ಯರ ಮೊಗವಾಡಗಳನ್ನು ಕೊಚ್ಚಿ ವಿಶ್ವದ ಮೊತ್ತೊಂದು ಮೂಲೆಗೆ ಎಸೆದಂತಾಯಿತು.  ಸಾಗರದ ಮೊರೆತಕ್ಕೆ ಒಳಪಟ್ಟು ಭಾವಸಮಾಧಿಯಲ್ಲಿ ತಲ್ಲೀನನಾಗಿದ್ದವನನ್ನು ಮಾನವ ದನಿಯೊಂದು ಎಚ್ಚರಿಸಿದಂತಾಯಿತು.  ಅದೇ "ಕ್ರೈಗ್"  ಎಂಬ, ಬಹುದೂರದಲ್ಲಿ ಕಂಪಿತವಾದ ಕ್ಸಿಯಾಂಗ್ ನ ದನಿ.
ನಿಧಾನವಾಗಿ ಆಲ್ಫ್ರೆಡ್ ನ ಕಡೆ ಬಂದ ಕ್ಸಿಯಾಂಗ್ "ಏನು, ಇಂದು ಎಷ್ಟುಗಳಿಸುವ ಯೋಜನೆ ಇದೆ..?" ಎಂದನು.
"ಐದು ಸಾವಿರ ಲೆಕ್ ಗಳು" ಎಂದು ತಕ್ಷಣವೇ ಆಲ್ಫ್ರೆಡ್ ನುಡಿದನು.
"ಓಹೋ, ಕರೆತಂದವರು ಯಾರೂ ಕಾಣುತ್ತಿಲ್ಲವಲ್ಲ..!"
"ಯಾಕೆ ನಾನು ನಿಮಗೆ ಕಾಣುತ್ತಿಲ್ಲವೇ?"
ನಗುತ್ತಲೇ ಕ್ಸಿಯಾಂಗ್ ತನ್ನ ಆಟಿಕೆಗಳ ಚೀಲದಿಂದ ಕನ್ನಡಿಯೊಂದನ್ನು ತೆಗೆದು ಆಲ್ಫ್ರೆಡ್ ನ ಕೈಗಿತ್ತು, ನೋಡಿಕೋ" ಎಂದನು.. ಆಲ್ಫ್ರೆಡ್ ಗೆ ಕ್ಸಿಯಾಂಗ್ ನ ಮಾತಿನ ಹಿಂದಿನ ನಗುವಿನ ರಹಸ್ಯ ತಿಳಿಯಲಿಲ್ಲ. ಕನ್ನಡಿಯನ್ನು ತಿರುಗಿಸಿ ತನ್ನ ಕಡೆ ಹಿಡಿದನು... ಅದೇ ಉದ್ದನೆಯ ಮೂಗು, ಕೆದರಿದ ಕೆಂಪು ಕೂದಲು, ಕುರುಚಲು ಗಡ್ಡ, ವಿಶಾಲವಾದ ಹಣೆ ಎಲ್ಲವೂ ತನ್ನದೇ.... "ಅದರಲ್ಲೇನು ವಿಶೇಷ?" ಎಂದು ಕ್ಸಿಯಾಂಗ್ ನ ಕಡೆ ತಿರುಗಿದನು.. ಅಲ್ಲಿ ಯಾರೂ ಇದ್ದಂತೆ ಆತನಿಗೆ ಅನ್ನಿಸಲಿಲ್ಲ. ಕ್ಸಿಯಾಂಗ್ ಕ್ಸಿಯಾಂಗ್ ಎಂದು ಒಂದೆರಡು ಬಾರಿ ಜೋರಾಗಿ ಕೂಗಿದನು. ಪ್ರಯೋಜನವಾಗಲಿಲ್ಲ.  ಮತ್ತೊಮ್ಮೆ ಕನ್ನಡಿಯಲ್ಲಿ ತನ್ನ  ಮೊಗವನ್ನು ನೋಡಿದನು ಅದೇ ನೀಳ ಮೂಗು,ಕೆದರಿದ ಕೆಂಪು ಕೂದಲು,ಕುರುಚಲು ಗಡ್ಡ, ವಿಶಾಲವಾದ ಹಣೆ... ಆದರೆ ವಯಸ್ಸು ಹನ್ನೆರಡು ದಾಟಿದಂತೆ ಕಾಣುತ್ತಿರಲಿಲ್ಲ...
 

Rating
No votes yet