ಕೈನಲ್ಲಿ ಇದನ್ನು ಹಿಡಿದುಕೊಂಡು ಓಡಿಹೋದವರಿಗೆ ಇದರ ನೆನಪೂ ಸಹ ಓಡಿಹೋಗಿರಬಹುದು! ನನಗೂ ಸಹ ಇಂತಹ ಒಂದು ಆಟದ ಸಾಮಾನಿತ್ತೆಂದು ನೆನಪಿಗೆ ಬಂದದ್ದು ಮೊನ್ನೆ ಅದನ್ನು ನೋಡಿದಾಗಲೇ. ಬೆಂಗಳೂರಿನಲ್ಲಿ ನನ್ನ ಅಕ್ಕನ ಮಗ ಗಿರ್ಗಟ್ಲೆಯನ್ನು ಹಿಡಿದುಕೊಂಡು ಓಡುತ್ತಿದ್ದಾಗ.
ಬೆಂಗಳೂರು, ಗಿರ್ಗಟ್ಲೆ, ಅದನ್ನ ೪ ವರ್ಷದ ಹುಡುಗ ಆಡುತ್ತಿರುವುದು, ಒಂದಕ್ಕೊಂದು ಲಿಂಕ್ ಆಗುತ್ತಿಲ್ಲ, ಅಲ್ಲವೇ? ಬಹುಶಃ ಮೊದಲಾಗುತ್ತಿತ್ತೇನೋ ಆದರೆ ಈಗಂತೂ ಊಹಿಸುವುದು ಕಷ್ಟವೇ.
ಯಲಹಂಕದ ಬಳಿ ನನ್ನ ಹೆಂಡತಿಯ ಮನೆಯ ಹತ್ತಿರವಿರುವ ಗಣೇಶ ದೇವಸ್ಥಾನಕ್ಕೆ ಕುಟುಂಬ ಸಮೇತ ಹೋಗಿ ದರ್ಶನ ಮಾಡಿ ಹಿಂದಿರುಗುವಾಗ ದೇವಸ್ಥಾನದ ಭಟ್ಟರು ಅವನಿಗೆ ಒಂದು ಗಿರ್ಗಟ್ಲೆ ಮಾಡಿಕೊಟ್ಟಿದ್ದರು, ಅವನು ಅದನ್ನು ಹಿಡಿದು ಓಡಿ ನನ್ನ ಬಳಿ ಬಂದಾಗಲೇ ಅದು ಗಿರ್ಗಟ್ಲೆಯೆಂದು ಗೊತ್ತಾಗಿದ್ದು. ಮೊದಲು ತಿರುಗುತ್ತಿದ್ದ ಅದು ಆಮೇಲೆ ತಿರುಗುತ್ತಿರಲಿಲ್ಲ, ಅವನಿಗೆ ಏನು ಮಾಡಬೇಕೆಂದು ಗೊತ್ತಾಗುತ್ತಿರಲಿಲ್ಲ. ಎಷ್ಟು ಓಡಿದರೂ ನಿಂತ ಹಾಗೇ ಇತ್ತು. ಆಮೇಲೆ ಅವನು ಗಾಳಿಗೆ ವಿರುದ್ಧವಾಗಿ ಹೋಗದಿದ್ದುದರಿಂದ ಅದು ತಿರುಗುತ್ತಿರಲಿಲ್ಲ, ನಾನವನಿಗೆ ಉಲ್ಟಾ ಓಡು ಎಂದೆ, ಆಮೇಲೆ ಅದು ತಿರುಗಿದ್ದು ನೋಡಿ ಅವನ ಸಂಭ್ರಮ ಹೇಳತೀರದು. ಹೋದಲ್ಲೆಲ್ಲಾ ಅವನಿಗೆ ಅದೇ ಆಟ.
ಊರಲ್ಲಿ ಆಗ ಆಟ ಆಡುವುದಕ್ಕೆ ಇದ್ದದ್ದು ಗೋಲಿ, ಬುಗುರಿ, ಚಿನ್ನಿದಾಂಡು, ಮರಕೋತಿಯಾಟ....ಜೊತೆಗೆ ಗಿರ್ಗಟ್ಲೆ. ನನಗೆ ಅದನ್ನು ಮಾಡುವುದು ಗೊತ್ತಿರಲಿಲ್ಲ, ಅಕ್ಕ ಪೇಪರ್ ಹರಿದು ಎಲ್ಲಾ ಜೋಡಿಸಿ ಗಿರ್ಗಟ್ಲೆ ಮಾಡುತ್ತಿದ್ದಳು, ನಾನದನ್ನು ತೆಗೆದುಕೊಂಡು ಅದಕ್ಕೆ ಒಂದು ಕಡ್ಡಿಯನ್ನು ಸಿಕ್ಕಿಸಿ ಓಡುತ್ತಿದ್ದೆ, ಜೊತೆಗೆ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳೂ ಸೇರುತ್ತಿದ್ದರು ಅವರ ಗಿರ್ಗಟ್ಲೆಯೊಂದಿಗೆ. ಅದನ್ನು ಹಾಗೇ ಹಿಡಿದುಕೊಂಡು ಎಷ್ಟೋ ದೂರ ಓಡಿಹೋಗುತ್ತಿದ್ದೆವು, ಹಾಗೆ ಓಡುವಾಗ ತುಂಬಾ ಸಲ ಎಡವಿ ಬೀಳುತ್ತಿದ್ದು ಕೈ ಕಾಲು ತರಚಿ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೆ ಗಿರ್ಗಟ್ಲೆ ಹರಿಯಿತೇನೋ ಎಂದು ನೋಡುತ್ತಿದ್ದೆವು.
ಈಗ ಎಲ್ಲಾಮಕ್ಕಳ ಬಳಿ ಲ್ಯಾಪ್ಟಾಪ್, ಮೊಬೈಲ್, ಚೈನೀಸ್ ಟಾಯ್ಸ್ ಬಂದು ಕುಳಿತಿವೆ, ಗೋಲಿ, ಬುಗುರಿ, ಚಿನ್ನಿದಾಂಡು, ಮರಕೋತಿಯಾಟ ಎಲ್ಲಾ ಮರೆತುಹೋಗಿವೆ, ಗಿರ್ಗಟ್ಲೆಯೂ ಅದೇ ಗುಂಪಿಗೆ ಸೇರಿದೆ. ನಿನಗೆ ಹೇಗೂ ಗೊತ್ತಿದೆಯಲ್ಲಾ ಅವನಿಗೆ ಮಾಡಿಕೊಡು ಎಂದು ಅಕ್ಕನಿಗೆ ಹೇಳಿದೆ, ಮರೆತುಹೋಗಿದೆ ಪ್ರಯತ್ನಿಸುತ್ತೇನೆ ಅಂದಳು. ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಗಿರ್ಗಟ್ಲೆ ಮಾಡಿಕೊಟ್ಟು ನೋಡಿ ನಿಮಗೆ ಗೊತ್ತಿದ್ದರೆ!!
ಗಿರ್ಗಟ್ಲೆ
June 27, 2012 - 1:07pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಗಿರ್ಗಟ್ಲೆ
ಗಿರ್ಗಟ್ಲೆ ಚೆನ್ನಾಗಿದೆ.
ಉ: ಗಿರ್ಗಟ್ಲೆ
ಧನ್ಯವಾದ ಮಹೇಶವ್ರೆ
ಉ: ಗಿರ್ಗಟ್ಲೆ
ತಲೆಯೇ ಗಿರ್ಗಿಟ್ಲೆಯಾಗಿರುವ ಈ ಬಿಸಿ ದಿನಗಳಲ್ಲಿ ಅವಕ್ಕೆಲ್ಲಾ ಸಮಯವೆಲ್ಲಿ ಚಿಕ್ಕೂ....! :((
ಉ: ಗಿರ್ಗಟ್ಲೆ
>> ತಲೆಯೇ ಗಿರ್ಗಿಟ್ಲೆಯಾಗಿರುವ ಈ ಬಿಸಿ ದಿನಗಳಲ್ಲಿ ಅವಕ್ಕೆಲ್ಲಾ ಸಮಯವೆಲ್ಲಿ ಚಿಕ್ಕೂ....! :(( <<
ಕಂಡಿತಾ ಸತ್ಯವಾದ ಮಾತು ಶ್ರೀಧರ್ ಸಾರ್, ದೊಡ್ಡವರಿಗೆ ಮಾತ್ರವಲ್ಲ ಚಿಕ್ಕಮಕ್ಕಳ ತಲೆಯೂ ಗಿರ್ರ್ ಅನ್ನುವ ವ್ಯವಸ್ಥೆಯ ಕಾಲವಿದು. ಇನ್ನೂ ಮುಂದೆ ಹೇಗೋ ನಾಕಾಣೆ,,,,??
ಬಾಲ್ಯದ ದಿನಗಳ ನೆನಪು ಮರುಕಳಿಸುವಂತೆ ಮಾಡಿದ ಚಿಕ್ಕೂ ಅವರಿಗೂ ಧನ್ಯವಾದಗಳು
ರಾಮಮೋಹನ
ಉ: ಗಿರ್ಗಟ್ಲೆ
<ಚಿಕ್ಕಮಕ್ಕಳ ತಲೆಯೂ ಗಿರ್ರ್ ಅನ್ನುವ ವ್ಯವಸ್ಥೆಯ ಕಾಲವಿದು> ಮಕ್ಕಳು ಗಿರ್ ಅಂತ ತಿರುಗಿ ದೊಡ್ಡವರನ್ನೂ ಗಿರ್ ಅಂತ ತಿರುಗಿಸ್ತಾರೆ!!!!
ರಾಮಮೋಹನವ್ರೆ ಯಾರಾದರೂ ಬಾಲ್ಯವನ್ನ ನೆನಪಿಸಿದರೆ ಸ್ವಲ್ಪ ಸಮಯ ಅದೇ ಗುಂಗಿನಲ್ಲಿಯೇ ಇದ್ದುಬಿಡುತ್ತೇವೆ.
ಧನ್ಯವಾದ
ಉ: ಗಿರ್ಗಟ್ಲೆ
:) :) :)
ಹ್ಹ ಹ್ಹ ಹ್ಹ ಶ್ರೀಧರವ್ರೆ ನಿಮ್ಮ ಮಾತು ನೂರಕ್ಕೆ ನೂರು ಸತ್ಯ.
ಉ: ಗಿರ್ಗಟ್ಲೆ
ಹಲವಾರು ವಿಚಾರ ಒಟ್ಟಿಗೆ ಹೇಳಬೇಕೂ ಅನ್ನಿಸಿದೆ ... ಆದ್ರೂ ಒಂದಾದ ಮೇಲೆ ಮತ್ತೊಂದು ಹೇಳ್ತೀನಿ
1. ಗಿರ್ ರ್ ರ್ ರ್ ರ್ ರ್ ಗಿಟ್ಲೆ ಚೆನ್ನಾಗಿದೆ :)
2. ಮೊನ್ನೆ ನನ್ನ ನೆನಪನ್ನು ಕೆದಕಿದ್ದು : ಕವಡೆ, ಆಟದ ವಿಧಾನ, ಗೀಚಿ ...
3. ಹಳೆಯ ಆಟಗಳು ಮತ್ತು ಇಂದು ಬಗ್ಗೆ ನನ್ನ ತಲೆಯಲ್ಲಿ ಓಡಾಡುತ್ತಿರುವ ವಿಚಾರಗಳು
ನೆನಪನ್ನು ಉಪ್ಪಿಟ್ಟಿನಂತೆ ಕೆದಕಿದ್ದಕ್ಕೆ ದ್ಹನ್ಯವಾದಗಳು :)
ಉ: ಗಿರ್ಗಟ್ಲೆ
ಹ್ಹ ಹ್ಹ ಹ್ಹ :) :) ಧನ್ಯವಾದ ಭಲ್ಲೆಯವ್ರೆ
ಕವಡೆ ಆಟ ಒಳ್ಳೆ ಟೈಮ್ ಪಾಸ್...ನಾನು ಆಗಾಗ ಆಡ್ತಾ ಇರ್ತೀನಿ
<ನೆನಪನ್ನು ಉಪ್ಪಿಟ್ಟಿನಂತೆ ಕೆದಕಿದ್ದಕ್ಕೆ ದ್ಹನ್ಯವಾದಗಳು> +1
ಉ: ಗಿರ್ಗಟ್ಲೆ
ನಿಮ್ಮ ಈ ಲೇಖನ ಗಿರ್ಗಿಟ್ಲೆ ನೆನಪನ್ನು ಹೊತ್ತು ತಂತು :) ನಾನು ಪೇಪರ್ ಅಲ್ಲಿ ಗಿರ್ಗಿಟ್ಲೆ ಮಾಡಿದ್ದು ಸ್ಕೂಲಲ್ಲಿ craft workಗೆ ಅಂತ ಮಾತ್ರ... ಆಡೋಕೆ ಅಂತ ಮಾಡ್ತಾ ಇದ್ದಿದ್ದು ತೆಂಗಿನ ಗರಿಯಲ್ಲೇ... ಊರಿಗೆ ಹೋದಾಗ ಮಾಡಿ ಆಡ್ತಾ ಇದ್ವಿ... ವಾಪಸ್ ಬೆಂಗಳೂರಿಗೆ ಬರೋವಾಗೊಮ್ಮೆ ಇಲ್ಲಿಗೆ ತರಬೇಕು ಅಂತ ಕೈಯಲ್ಲೇ ಇಟ್ಕೊಂಡಿದ್ದೆ... ಆದ್ರೆ ನಿದ್ದೆ ಬಂದಾಗ ಬಸ್ಸಲ್ಲಿ ಬೀಳಿಸಿ ಕಳೆದುಕೊಂಡು ಅವತ್ತೆಲ್ಲಾ ಅತ್ತಿದ್ದೆ :( ಕಳೆದ ಬಾರಿ ನನ್ನ ಗೆಳತಿಯರ ಜೊತೆ ಊರಿಗೆ ಹೋಗಿದ್ದಾಗ ಕೂಡ ತೆಂಗಿನಗರಿಯಲ್ಲಿ ಗಿರ್ಗಿಟ್ಲೆ ಮಾಡಿ ಆಡಿದ್ವಿ :)
ಉ: ಗಿರ್ಗಟ್ಲೆ
ಪರ್ವಾಗಿಲ್ಲ ಈಗ್ಲೂ ಆಟ ಆಡಿದ್ದೀರಾ....
<ವಾಪಸ್ ಬೆಂಗಳೂರಿಗೆ ಬರೋವಾಗೊಮ್ಮೆ ಇಲ್ಲಿಗೆ ತರಬೇಕು ಅಂತ ಕೈಯಲ್ಲೇ ಇಟ್ಕೊಂಡಿದ್ದೆ... ಆದ್ರೆ ನಿದ್ದೆ ಬಂದಾಗ ಬಸ್ಸಲ್ಲಿ ಬೀಳಿಸಿ ಕಳೆದುಕೊಂಡು ಅವತ್ತೆಲ್ಲಾ ಅತ್ತಿದ್ದೆ > ಹೇಗಿದ್ರೂ ಮಾಡೋದು ಗೊತ್ತಿತ್ತಲ್ವಾ?? ಮತ್ತೆ ಮಾಡಬಹುದಿತ್ತು.
ಧನ್ಯವಾದ ಇಂದುಶ್ರೀಯವ್ರೆ
ಉ: ಗಿರ್ಗಟ್ಲೆ
ಮಾಡೋಕೆ ಗೊತ್ತಿತ್ತು ಆದ್ರೆ ಇಲ್ಲಿ ತಂಗಿನ ಗರಿ ಸಿಗ್ತಾ ಇರ್ಲಿಲ್ಲ :)
ಉ: ಗಿರ್ಗಟ್ಲೆ
ಬೆಂಗಳೂರಲ್ಲಿ ಒಂದೆರಡು ಏರಿಯಾ ತಿರ್ಗಾಡಿದ್ರೆ ಬಹುಶಃ ಸಿಕ್ತಿತ್ತೇನೋ!!
ಉ: ಗಿರ್ಗಟ್ಲೆ
:) ಆಗ ನಾನಿನ್ನು ಚಿಕ್ಕವಳಾಗಿದ್ದೆ... ಅಷ್ಟೊಂದು ಯೋಚಿಸಿರಲಿಲ್ಲ :P
ಉ: ಗಿರ್ಗಟ್ಲೆ
ಚೇತನ್,
ನನಗೆ ಮರೆತು ಹೋಗಿಲ್ಲ-
ನೆನಪಿಸಿದ್ದಕ್ಕೆ ನನ್ನಿ,
-ಗಣೇಶ
ಉ: ಗಿರ್ಗಟ್ಲೆ
ಅಬ್ಬ ಗಣೇಶಣ್ಣ ನೀವೂ ಆಗಬಹುದು!!!
ಯಾವ ಎಲೆಕ್ಷನ್ದು ಪೇಪರ್???
ಧನ್ಯವಾದ
ಉ: ಗಿರ್ಗಟ್ಲೆ: ಹಸ್ತವನ್ನೆ ತೊರಿಸಿದರೆ....!!
ಅಹ...!!
ಗಣೆಶ್ ಅಣ್ನ ಅವರ ಹಸ್ತ ಕಾಣಿಸಿತು.... ಅದ್ರಲ್ಲೆನು ವಿಶೆಶ ಅನ್ದಿರ?....
ಗಾದೆ ಇದೆಯಲ್ಲ....????
ಬೆರಳು ತೊರಿಸಿದರೆ.......
ಅನ್ತಾದ್ದರಲ್ಲಿ ಹಸ್ತವನ್ನೆ ತೊರಿಸಿದರೆ....!! ನಾವ್ ಬಿಡ್ತೇವ?...
ಅದ್ರ ಕಲರ್ ಜೆರಕ್ಸ್ ಮಾಡಿಸಿ ಹಸ್ತ ಸಾಮುದ್ರಿಕ ಪನ್ಡಿತರಿಗೆ ಕೊಟ್ 'ಅವರನ್ನು' ಪತ್ತೆ ಹಛ್ಹುವೆವು....ಹಾಗೆಯೆ ವಿಶೆಶ ಗುರುತು ಪ್ರಾದಿಕಾರ ಅವರು ವಿಶೆಶ ಗುರುತಿನ ಛಿಟಿ ಕೊಡುವರಲ್ಲ ಅವರ ಹತ್ತಿರ ಗಣೆಶ್ ಅಣ್ಣ ಅವರ ಬೆರಳ ಗುರುತು ಇರುವುದು...:()))
@ ..ತನ್ (ನಾ ಇಲ್ಲಿ ಟೈಪ್ ಮಾಡ್ಷಿದರೆ ಛೆ ತನ್ ಆಗುತ್ತಿದೆ ಅದ್ಕೆ) ಅವ್ರೆ. ಸವಿ ಸವಿ ನೆನಪು...
ಅದು ಮಾಡೊಕೆ ನನಗೆ ಬರುತ್ತೆ ಅನ್ನೊದೆ ಖ್ಸುಶಿ...!! ಹಾಗೆ ತಯಾರು ಮಾಡ್ ಕೋಲಿಗೆ ಸಿಕ್ಕಿಸಿ ನೆರ್ವಾಗಿ ನಿಲ್ಲಿಸುತ್ತಿದ್ದೆವು ಮನೆ ಮೆಲೆ.. ಗಾಳಿಗೆ ಅದು ಗರ ಗರನೆ ತಿರುಗಿದಾಗ... ಅಹ..!!
ಜಿ ಮತ್ತು ಭಲ್ಲೆ ಅವ್ರ ಪ್ರತಿಕ್ರಿಯೆ ಸಖತ್..
\|/
ಉ: ಗಿರ್ಗಟ್ಲೆ
ನೋಡಿ ಗಣೇಶರೆ
ಪಾಪ ನಿಮ್ಮಕೈ ನೋಡೆ ಸ.ಗಿ. ಎಷ್ಟು ಸಂತಸ ಪಡ್ತಿದ್ದಾರೆ ...ಇನ್ನು.....
ಅಲ್ಲದೆ ಬೇಡ ಅಂದರು ಅವರನ್ನು ಕಾರು ಹತ್ತಿಸಿದಿರಿ ಡ್ರೈ ಮಾಡು ಅಂತ ನೋಡಿ ಪಾಪ ಅವಸ್ಥೆ ಅವರ ಕಾರು ರಿವರ್ಸ್ ಮಾಡ್ಲಿಕ್ಕೆ ಹೋಗಿ ಎಲ್ಲಿ ಹತ್ತಿದೆ
ಉ: ಗಿರ್ಗಟ್ಲೆ: ಕೈ ಗುರುತಿನ ಪಕ್ಷ...!!
ಗಣೇಶ್ ಅಣ್ಣ ಹಸ್ತ ತೋರಿಸಿದ್ದೂ ಅವರು ಕೈ ಗುರುತಿನ ಪಕ್ಷಕ್ಕೆ ಸೇರಿದರೇನೋ? ಅನ್ನುವ ಅನುಮಾನ ನಮ್ಮಲ್ಲಿ ಉಂಟು ಮಾಡಿಲ್ಲ ಅಂತ ನಾ ಹೇಳಲು ಇಸ್ತ ಪದುವೆ...!!
ನನಗೆ ಕಾರು ಬೈಕು ಕಲಿಸಲು (ರೈಲು ಬಿಡಲು ತರಭೇತಿ ಅವಶ್ಯಕತೆ ಇಲ್ಲವಲ್ಲ..!!) ಗಣೇಶ್ ಅಣ್ಣ ಅವ್ರೆ ಸೂಕ್ತ ಅಂತ ಹುಡುಕಿದ್ದೆ ಹುಡುಕಿದ್ದು -ಅವರು ಬರೀ ಕೈ ಬೇಳರು- ಹಸ್ತ- ಹೂವು ತೋರಿಸಿ ನಮ್ಮ ನನ್ನ ಕಿವಿಗೆ.... ರು..!!
ಈಗಂತೂ ಬಲವಾದ ಸಾಕ್ಷಿ, ಕುರುಹು ಸಿಕ್ಕಿದೆ...!!
ನೋಡುವ... ಮುಂದೇನು????
>>> ಅಂದ್ ಹಾಗೆ- ನಾವ್ ದಾರೀಲಿ ಹೋಗುವಾಗ- ಹಲವು ಜನ ನಮ್ಮ ಕೈಗೆ ಹಲವು ಪ್ಯಾಂಪ್ಲೇಟ್ ಕೊಡುವರು ಅವನ್ನು ಮತ್ತು ನಮ್ಮ ಮನೆಗೆ ಬರುವ ಹಲವು ಜಾಹೀರಾತು ಪೇಪರ್ ನಾವ್ ಬಿಸಾಡುವೆವು- ಈಗ ಗಣೇಶ್ ಅಣ್ಣ ಅವರ ವಿಧಾನ ಕಂಡು ನಾವ್ ಅದೇ ಪೇಪನಲ್ಲಿ ಗಿರ್‌ಗೀಟ್ಲೆ ಮಾಡಿ ಗಾಳಿಗೆ ಬಿಟ್ಟು ಗಾಳಿ ವಿದ್ಯುತ ತಯಾರಿಸುವ ಅಮೋಘ ಯೋಚನೆ ಬಂತು... ಬನ್ನಿ ಪಾಲುದಾರರಾಗಿ....!!
\|/
ಉ: ಗಿರ್ಗಟ್ಲೆ
ಚಿಕ್ಕು ಈಗಿನ ಮಕ್ಕಳಿಗೆ ಶಾಲೆ, ಹೋಮ್ ವರ್ಕ್, ಟೀವಿ, ಕ೦ಪ್ಯೂಟರ್, ವಿಡಿಯೋ ಗೇಮ್ಸ್. ಇಷ್ಟೇ ಗೊತ್ತಿರುವುದು. ನೀವು ಅವರ ಮು೦ದೆ ಗಿರ್ಗಿಟ್ಲೆ ಎ೦ದರೆ ತಲೆ ಕೆರೆದುಕೊಳ್ಳುತ್ತಾರೆ.
ಬಾಲ್ಯದ ನೆನಪನ್ನು ಮರುಕಳಿಸಿದ್ದಕ್ಕೆ ಧನ್ಯವಾದಗಳು.
ಉ: ಗಿರ್ಗಟ್ಲೆ
ನಮ್ಮ ಕಾಲದಲ್ಲಿ ಅಂದ್ರೆ ೬೦ ರ ದಶಕದಲ್ಲಿ ನಾನು ನಮ್ಮ ಮನೆಯ ಪುಟ್ಟ-ಪುಟ್ಟಿಯರಿಗೆ ಕಾಗದದ ಗಿರಗಿಟ್ಲೆ ಮಾಡಿ ಕೊಡ್ತಿದ್ದೆ. ಆಮೇಲಿ ತೆಂಗಿನಗರಿಯಲ್ಲಿ ; ಅವರಿಗೆ ತೆಂಗಿನ ಗರಿ ವಾಚ್ ಭಾರಿ ಇಷ್ಟ ಆಗ್ತಿತ್ತು !
ಉ: ಗಿರ್ಗಟ್ಲೆ
೬೦ರ ದಶಕ!!!! ನೀವು ಆಗ ಆಡ್ತಿದ್ದ ಆಟಗಳನ್ನ ನಮ್ಮೊಂದಿಗೆ ಹಂಚಿಕೊಬಹುದಲ್ವ
ನಾವೂ ತೆಂಗಿನಗರಿಯ ವಾಚ್ ಮಾಡ್ಕೋತಿದ್ವಿ...
ಧನ್ಯವಾದ
ಉ: ಗಿರ್ಗಟ್ಲೆ
ಚನ್ನಕೇಸರಿ ಹೂವಿನ ತುಂಬಾ ಕುಸುಮೆಗಳಲ್ಲವೇ ? ಅವನ್ನು ಜಾಗ್ರತೆಯಿಂದ ಬಿಡಿಸಿ ಕಾಗದದಲ್ಲಿ ಶೇಖರಿಸಿಟ್ಟುಕೊಂದ್ಡು ಅದರಜೊತೆ ಮತ್ತೊಬ್ಬರು ಕುಸುಮೆತಲೆಹಾರಿಸುವ ಆಟ ನಮಗೆ ಅತಿ ಇಷ್ಟವಾಗಿತ್ತು. ಅದೇತರಹ ಹೊಲದಲ್ಲಿ ಹಳದಿಬಣ್ಣದ ಎತ್ತರ ಕಾಂಡದ ಹೂಗಳು ಗಾಳಿಯಲ್ಲಿ ನರ್ತಿಸುತ್ತಿದ್ದವು. ಅವುಗಳನ್ನು ಕಿತ್ತುತಂದು ಈಗಹೇಳಿದ ಹೂಹಾರಿಸುವ ಆಟ ಆಡ್ತಿದ್ವಿ.
ಲಗೋರಿ (ತೆಂಗಿನ ಚಿಪ್ಪುಗಳನ್ನು ಎತ್ತರಕ್ಕೆ ಪೇರಿಸಿ) ಚಿಣ್ಣಿ-ದಾಂಡು, ಕುಂಟಾಬಿಲ್ಲೆ, ಪಗಡೆ, ಚೌಕಾಬರೆ, ಗಟ್ಟಗೋಣಿಮಣೆ, ಚೈನಾಬೋರ್ಡ್, ಕೇರಂ, ಟ್ರೇಡ್, ಖೊಖೋ, ಕುಂಟು ಮುಟ್ಟುವ ಆಟ, ೩ ಕಾಲಿನ ಆಟೋಟ, ಜೂಟಾಟ, ಮರಕೋತಿಆಟ, ಕಣ್ಮುಚ್ಚ್ಜಿ ಹುಡ್ಕೋ ಆಟ, ಇತ್ಯಾದಿ.
ಸಾಕಲ್ವಾ ???
ಉ: ಗಿರ್ಗಟ್ಲೆ
ಸಾಕು ಸರ್, ಬೇಜಾನ್ ಆಯ್ತು.
ಪಗಡೆ ಬಿಟ್ಟು ಇನ್ನೆಲ್ಲಾ ಆಟಗಳನ್ನ ಆಡಿದ್ದೇವೆ (ನೀವು ಹೇಳಿದ್ರಿಂದ ಕೆಲವು ಮತ್ತೆ ನೆನಪಿಗೆ ಬಂದವು)
ಧನ್ಯವಾದ
ಉ: ಗಿರ್ಗಟ್ಲೆ
>> ಚನ್ನಕೇಸರಿ ಹೂವಿನ ತುಂಬಾ ಕುಸುಮೆಗಳಲ್ಲವೇ ? ಅವನ್ನು ಜಾಗ್ರತೆಯಿಂದ ಬಿಡಿಸಿ ಕಾಗದದಲ್ಲಿ ಶೇಖರಿಸಿಟ್ಟುಕೊಂದ್ಡು ಅದರಜೊತೆ ಮತ್ತೊಬ್ಬರು ಕುಸುಮೆತಲೆಹಾರಿಸುವ ಆಟ ನಮಗೆ ಅತಿ ಇಷ್ಟವಾಗಿತ್ತು. ಅದೇತರಹ ಹೊಲದಲ್ಲಿ ಹಳದಿಬಣ್ಣದ ಎತ್ತರ ಕಾಂಡದ ಹೂಗಳು ಗಾಳಿಯಲ್ಲಿ ನರ್ತಿಸುತ್ತಿದ್ದವು. ಅವುಗಳನ್ನು ಕಿತ್ತುತಂದು ಈಗಹೇಳಿದ ಹೂಹಾರಿಸುವ ಆಟ ಆಡ್ತಿದ್ವಿ.
ನಾವೂ ಆಡ್ತಿದ್ವಿ ಇದನ್ನ. ಒಂದು ಮಾತು, ಗುಲ್ಮೋಹರಿಗೆ ಚನ್ನಕೇಸರಿ ಅಂತಾರೆ ಅಂತಾನೇ ಗೊತ್ತಿರಲಿಲ್ಲ. ನಾವು ಇದಕ್ಕೆ, ಕಳ್ಳ-ಪೋಲೀಸ್ ಅಂತ ಹೆಸರಿಟ್ಟಿದ್ವಿ.
ಉ: ಗಿರ್ಗಟ್ಲೆ
'ಗುಲ್ ಮೊಹರ್' ಅನ್ನೋದು ಹಿಮ್ದಿಭಾಷೆಯ ಪದ ಅಷ್ಟೆ. ಅಳಿಯ ಅಲ್ಲ ; ಮಗಳ ಗಂಡ !
ಉ: ಗಿರ್ಗಟ್ಲೆ
ಅನ್ನಿ, ತಪ್ಪೇನಿದೆ ಆಟ ಅಷ್ಟೇ !
ಉ: ಗಿರ್ಗಟ್ಲೆ
ಹ್ಹ ಹ್ಹ ಹ್ಹ ನಿಜ ಜಯಂತ್
ಆದರೂ ಒಮ್ಮೆ ಪ್ರಯತ್ನ ಪಡಬಹುದು
ಧನ್ಯವಾದ
ಉ: ಗಿರ್ಗಟ್ಲೆ
ನಮಸ್ಕಾರ ಚೇತನ್,
ಬಾಲ್ಯ ಒಂದು ಸುಂದರಕಾಂಡ, ಗಿರಿಗೆಟ್ಲೆ-ಮನದ ನೆನಹುಗಳ ಅಂಗಳಕ್ಕೆ ಕರೆದೊಯಿದಿರಿ, ವಂದನೆಗಳು.
ಅದೆಲ್ಲಿ ಮಾಯವಾಯಿತೋ ಎನಿಸುತ್ತೆ-ಲಗೋರಿ, ಬುಗುರಿ, ಗೋಲಿ, ಕುಂಟಾಬಿಲ್ಲೆ, ಮರಕೋತಿ ಆಟಗಳು. "ವೇಳೆ ಇಲ್ಲ-ಯಾಂತ್ರಿಕತೆ" ಮಂತ್ರದಲಿ ಈಗಿನ ಮಕ್ಕಳ ಬಾಲ್ಯ ಬಂಧಿಯಾಗಿದೆ ಎನಿಸುತ್ತೆ
ವಾಣಿ