ಗುಬ್ಬಚ್ಚಿ - ಲಕ್ಷ್ಮೀಕಾಂತ ಇಟ್ನಾಳ

ಗುಬ್ಬಚ್ಚಿ - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಗುಬ್ಬಚ್ಚಿ

ದೂರ ಏರಿಯಲ್ಲಿ ಕಾಣುತ್ತಿತ್ತು ತುತ್ತಿಗಾಗಿ ಬಾಯಿ ತೆರೆದ ಗೂಡು

ಮುಗಿಲೆಡೆ ಮುಖಮಾಡಿವೆ ನಿರೀಕ್ಷೆಗಳು, ಓಡುವ ಬಿಳಿ ಮೋಡಗಳನ್ನು

ಸೂರ್ಯನಿನ್ನೂ ಏಳದ ಹೊತ್ತಿಗೆಲ್ಲಾ ಹೊಲದಲ್ಲಿ ಉಳುಮೆ

ಮೂರು ಹೊತ್ತಿಗೆಲ್ಲ ಹಣೆಯ ಬೆವರ ಮಾಲೆಗೆ ಹಸಿವಿನ ಹಟ,

ಜಗಕ್ಕೆ ಅನ್ನ ಕೊಡುವ ಧಣಿಗೆ ಹಸಿದ ಹೊಟ್ಟೆ! ...ಮನೆ ಖಾಲಿ ತಟ್ಟೆ!

 

ಗೀತೆ, ಕುರಾನ್ ಬೈಬಲ್‍ಗಳಲ್ಲೂ ಗೆರೆಗಳಿವೆ

ಸಾಲು ಸಾಲು, ಪ್ರತಿ ಪುಟದಲ್ಲೂ, ....ಜೀವವಿದೆಯೇ ಒಂದರಲ್ಲೂ ಸಹಿತ,

ಆದರೆ ಇವ ಬರೆದ ಒಂದೊಂದು ಗೆರೆಯಲ್ಲೂ .....ಜೀವ ಜನಿಸುತ್ತವೆ

ಜಗಕೆ ಅನ್ನ ಕೊಡುವ ಅನ್ನದಾತ..., ನಮ್ಮೀ ರೈತ

ಎಲ್ಲ ಧರ್ಮಗಳ ಪ್ರಾಣವಾಯು, ...ಇಳೆಯ ಮಗನೀತ

 

ಎರೆ ಹೊಲದ ಒಡಲ ತುಂಬ ಜಗದ ಭವಿಷ್ಯದ ಹಸಿರು ಗೆರೆಗಳು

ಹಸಿರೆಲ್ಲ ಹಳದಿಯಾಗಿ ಎಲೆ ಎಲೆಯೂ ಬಾಯಾರಿದೆ, ಬಿಂದು ಹನಿಗಾಗಿ

ಇವನ ಗೆಳೆಯರಂತಿದ್ದ, ಗುಬ್ಬಚ್ಚಿಗಳೀಗ ಕಾಣುತ್ತಿಲ್ಲ ಇಹವನ್ನೇ ತೊರೆದಿವೆಯೇನೋ,

ನೆರಳಾಸರೆ ಬಯಸಿ ಮರದಡಿ ನಡೆದ ಜೀವ,

ನೆರಳು ಕಾಣದೇ ಕೆಲ ಹೊತ್ತಿನಲ್ಲೇ ನೇತಾಡುತ್ತಿತ್ತು, ...ಗುಬ್ಬಚ್ಚಿಯಂತೆ!

 

ಕಿಸಾಗೌತಮಿಗಾಗಿ ಬೆಳೆದಿದ್ದ ಸಾಸಿವೆ ಬಿಕ್ಕುತ್ತಿತ್ತು ಕಾಲಡಿಯಲ್ಲೇ!

 

(photo courtesy: internet)

Rating
No votes yet

Comments

Submitted by lpitnal Tue, 08/04/2015 - 07:51

ಆತ್ಮೀಯರೆ, ಎರಡನೆಯ ಸಾಲು ಹೀಗಿದೆ, ''ಮುಗಿಲೆಡೆ ಮುಖಮಾಡಿ ನೋಡಿವೆ, ನಿರೀಕ್ಷೆಗಳು, ಓಡುವ ಬಿಳಿ ಮೋಡಗಳನ್ನು'' ಕಾಪಿ ಪೇಸ್ಟ್ ಮಾಡುವಾಗ ಕಣ್ತಪ್ಪಿತು. ಕ್ಷಮಿಸಿ..

Submitted by nageshamysore Wed, 08/05/2015 - 00:51

ಇಟ್ನಾಳರೆ ನಮಸ್ಕಾರ. ಪರರ ಜೀವನದ ಗತಿಯ ಒಳಿತಿಗಾಗಿ ದುಡಿವವನಿಗೆ, ಅವನ ಹಣೆಯ ಗೆರೆಗಳು ಕೈ ಕೊಟ್ಟು ಗುಬ್ಬಚ್ಚಿಯಾಗಿಸುವುದು ವಿಪರ್ಯಾಸವೆ ಸರಿ. ಕೊನೆಯ ಸಾಲು ತುಂಬಾ ಅರ್ಥಗರ್ಭಿತವಾಗಿ ಮೂಡಿಬಂದಿದೆ - ಸಾವಿಗು ಕಿಸ್ಸಾ ಗೌತಮಿಯ ಕಥನಕ್ಕೂ ಇರುವ ಸಂಬಂಧದ ಪರಿಕಲ್ಪನೆಯಲ್ಲಿ ನೋಡಿದಾಗ.

Submitted by H A Patil Wed, 08/05/2015 - 16:35

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಗುಬ್ಬಚ್ಚಿ ಕವನ ಬರಿ ಗುಬ್ಬಚ್ಚಿಯ ದರ್ಶನ ಮಾಡಿಸದೆ ಭೂಮಿ ರೈತ ಮಳೆ ಬೆಳೆ ವರ್ತಮಾನ ಮತ್ತು ಭವಿಷ್ಯ ಎಲ್ಲದರ ಜೊತೆಗೆ ಬಿಚ್ಚಿಕೊಳ್ಳುವ ಪರಿ ಅದರ ವ್ಯಾಪಿಸುವಿಕೆ ಬಹಳ ಅನನ್ಯವಾದುದು ಬಹಳ ಅರ್ಥಗರ್ಬಿತ ಕವನ ಧನ್ಯವಾದಗಳು.

Submitted by lpitnal Wed, 08/05/2015 - 23:47

In reply to by H A Patil

ಹಿರಿಯ ಲೇಖಕ, ಕವಿ ಹನುಮಂತ ಅನಂತ ಪಾಟೀಲ ಸರ್, ತಮ್ಮ ಆತ್ಮೀಯ ವಿಶ್ಲೇಷಣೆಯ ಮೆಚ್ಚುಗೆಗೆ ಧನ್ಯವಾದಗಳು. ರೈತ ಇಂದು ನಿಸರ್ಗದ ಗುಬ್ಬಚ್ಚಿ. ಅವನ ಬದುಕಿಗೆ ಧಕ್ಕೆ ಬಂದಿದೆ. ಗುಬ್ಬಚ್ಚಿಯಂತೆ ಕಾಣೆಯಾಗುತ್ತಿದ್ದಾನೆ. ಅವನ ಬವಣೆ ಯಾರ ಕಿವಿಗೆ , ಕಣ್ಣಿಗೆ ಕಾಣಬರುತ್ತಿಲ್ಲದ್ದು ದುರಂತ. ಆತ್ಮಾಹುತಿಗಳಿಗೆ ಲೆಕ್ಕವೇ ಇಲ್ಲ. ಅದೇಕೆ ಹೀಗೋ, ಒಂದು ಕಾಲದ ಸರಳ ಉತ್ತರಗಳು ಇಂದು ಜಟಿಲ ಪ್ರಶ್ನೆಗಳಾಗಿವೆ. ಮುಗ್ಧ ಜೀವಗಳನ್ನು ಉಳಿಸಬೇಕಿದೆ. ತುಸು ಧೈರ್ಯ ತುಂಬ ಬೇಕಿದೆ. ಬದುಕಿನ ನೂರು ದಾರಿಗಳನ್ನು ಅವನಿಗೆ ಪರಿಚಯಿಸಬೇಕಿದೆ. ಅದು ಹಾಗಲ್ಲ ಎಂದು ತಿಳಿಹೇಳಬೇಕಿದೆ ಅಲ್ಲವೇ ಸರ್. ಯಾಕೋ ಮ್ಲಾನ ಮನಸ್ಸು ಇದನ್ನೆಲ್ಲ ಯೋಚಿಸಿದಾಗ.....

Submitted by kavinagaraj Thu, 08/06/2015 - 21:35

ಪುಟ್ಟ ಗುಬ್ಬಿ, ಜಾನಪದದ ಗುಬ್ಬಿ, ನಿರುಪದ್ರವಿ, ರೈತನಿಗುಪಕಾರಿ ಗುಬ್ಬಿ ಈಗೆಲ್ಲಿ? ನೆನೆಸಿಕೊಂಡರೆ ವಿಷಾದದ ಭಾವ ಮನಸ್ಸನ್ನು ಭಾರಗೊಳಿಸುತ್ತದೆ. ಈಗಿನ ಮಕ್ಕಳಿಗಂತೂ ಗುಬ್ಬಚ್ಚಿ ಅಂದರೆ ಗೊತ್ತೇ ಇರಲಾರದು!! :((