ಚತುರೆಯ ಮುನಿಸು

ಚತುರೆಯ ಮುನಿಸು

ಚಿತ್ರ

ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ
ಪಕ್ಕದಲಿ ಕೂರುವುದ ತಪ್ಪಿಸಿದಳು ;
ತಾಂಬೂಲವನು ಕೊಡುವ ನೆವದಿಂದ ಒಳಹೋಗಿ
ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ;
ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ
ಅವನ ಮಾತಿಗೆ ತಾನು  ಸಿಗದಿದ್ದಳು ;
ಮಾಡುವುಪಚಾರದಲಿ ಕೊರತೆಯನು ಕಾಣಿಸದೆ
ಚದುರೆ ಮನಸಿನ ಮುನಿಸ ಮೈವೆತ್ತಳು ! 

ಸಂಸ್ಕೃತ ಮೂಲ (ಅಮರುಕನ ಅಮರು ಶತಕ -  ೧೫) :
ಏಕತ್ರಾಸನ ಸಂಸ್ಥಿತಿಃ ಪರಿಹತಾ ಪ್ರಾದುದ್ಗಮಾದ್ ದೂರತಃ
ತಾಂಬೂಲಾಯನಚಲೇನ ರಭಸಾಶ್ಲೇಷೋಪಿ ಸಂವಿಘ್ನಿತಃ |
ಆಲಾಪೋsಪಿ ನ ಮಿಶ್ರಿತಃ ಪರಿಜನಂ ವ್ಯಾಪಾರಯನ್ತ್ಯಾಂತಿಕೇ
ಕಾಂತಂ ಪ್ರತ್ಯುಪಚಾರತಶ್ಚತುರಯಾ ಕೋಪಃ ಕೃತಾರ್ಥಿಕೃತಃ ||
एकत्रासन संस्थितिः परिहता प्रादुद्गमाद्दूरतः
तांबूलायनचलेन रभसाश्लेषोपि संविघ्नितः
आलापोsपि न मिश्रितः परिजनं व्यापारयन्त्यान्तिके
कांतं प्रत्य्पचारतश्चतुरया कोपः कृतार्थीकृतः 

-ಹಂಸಾನಂದಿ

ಕೊ: ಮೂಲವು ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ.  ಅನುವಾದವು ಮಾರ್ಪಡಿಸಿದ ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ. ಬರೆಯುವಾಗ ಎರಡೆರಡು ಸಾಲಿನ ನಾಲ್ಕು ಘಟಕಗಳಂತೆ ಕಂಡರೂ, ಎರಡು ಸಾಲು ಸೇರಿಸಿ ಒಂದು ಸಾಲು ಎಂದುಕೊಳ್ಳಬಹುದು. ಪ್ರತಿ ಸಾಲಿನಲ್ಲೂ ಐದು ಮಾತ್ರೆಗಳ ಏಳು ಗುಂಪೂ, ಕೊನೆಯಲ್ಲಿ ಒಂದು ಉಳಿಕೆಯ ಗುರುವೂ ಇದೆ. 

ಕೊ.ಕೊ: ನಾಯಕಿಗೆ ಅವಳ ನಲ್ಲನ ಮೇಲೆ ಮುನಿಸು ಏಕೆಂದು ಪದ್ಯ ತಿಳಿಸುವುದಿಲ್ಲ. ಆದರೆ ಅವಳು ಹೇಗೆ ತನ್ನ ಕೋಪವನ್ನು ತೋರದೆಯೇ ತೋರುತ್ತಾಳೆ ಎನ್ನುವುದನ್ನ ಮಾತ್ರ ಹೇಳುತ್ತದೆ. ಮೂಲವು ಅವಳ ನಡವಳಿಕೆಯಿಂದ ಅವಳ ಕೋಪವು ಸಾರ್ಥಕವಾಯಿದು ಎಂದು ಹೇಳುತ್ತದೆ. ಅನುವಾದದಲ್ಲಿ, ನಾನು ಅದನ್ನು ಕೊಂಚ ಬದಲಾಯಿಸಿ, ಅವಳ ಕೋಪವು ಅವಳ ನಡವಳಿಕೆಯಲ್ಲಿ ಮೈವೆತ್ತಿತು ಎಂದು ಹೇಳಿದ್ದೇನೆ. ಅದರಿಂದ ಮೂಲ ಪದ್ಯದ ಚೆಲುವಿಗೆ ಕುಂದೇನೂ ಆಗಿಲ್ಲವೆಂದು ನನ್ನ ಎಣಿಕೆ.

ಚಿತ್ರಕೃಪೆ:  http://shop.gaatha.com/index.php?route=product/product&product_id=377 - ಮಧುಬನಿ ಶೈಲಿಯ ಅರ್ಧನಾರೀಶ್ವರ
 

Rating
No votes yet

Comments