ಚಿ0ನ್ತನೆ

ಚಿ0ನ್ತನೆ

ಜಗದ ಚಿಂತೆ 

 

                       ಈ ಜಗತ್ತಿನಲ್ಲಿ ಎಲ್ಲರಿಗೂ ಅನ್ನ ಬಟ್ಟೆ ಸಿಗಲಿ, ಎಲ್ಲರು ವಿದ್ಯಾವಂತರಾಗಲಿ, ಎಲ್ಲರು ಆರೋಗ್ಯದಿಂದ ಚೆನ್ನಾಗಿ ಬದುಕಲಿ ಎಂದು ನಾವು ಇಚ್ಚಿಸುವುದು ಸರಿಯಾದ ಚಿಂತನೆಯೇ.  ಅದಕ್ಕಾಗಿ ನಾವು  ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು ಖಂಡಿತ ತಪ್ಪಲ್ಲ.  ಆದರೆ, ಅದರ ಪರಿಣಾಮ ಹೀಗೆ ಇರಬೇಕೆಂದು ನಿರೀಕ್ಷೆ ಇಟ್ಟುಕೊಳ್ಳುವುದು ಸರಿಯಲ್ಲ. ಅದು ವಿಶ್ವದ ನಿಯಾಮಕನಿಗೆ ಸೇರಿದ ವಿಷಯ. ನಮ್ಮ ಬಯಕೆ ಸಹಜ ಸುಂದರ ಸರಿ. ಅದು ನಮ್ಮನ್ನು ಬಂಧಿಸಬಾರದು. ನಾವು  ಸುಂದರವಾದ ಹೂವನ್ನು ನೋಡುತ್ತೇವೆ, ಅದರ ಸೌಂದರ್ಯವನ್ನು ಅಸ್ವಾದಿಸುತ್ತೇವೆ, ಮನತುಂಬಿಕೊಳ್ಳುತ್ತೇವೆ...ಇದೊಂದು ಅಧ್ಬುತ ಅನುಭವ, ತನ್ಮಯತೆಯ ಪ್ರತೀಕ! ಅ ಕ್ಷಣದಲ್ಲಿ ನಾವು ಅನುಭವಿಸಿದ ಆ ದಿವ್ಯ ಆನಂದ ಸದಾ ಕಾಲ ನನಗೆ  ಸಿಗುತ್ತಿರಬೇಕೆಂಬ ಹಠ ಬೇಡ. ಹಾಗೆ ಒಂದು ಪಕ್ಷ ಆಶಿಸಿದರೆ ಅದು ಸಾಧ್ಯವೂ ಇಲ್ಲ. ಏಕೆಂದರೆ ಕಾಲದ ನಿಯತಿಗೆ ಒಳಗಾದ ಯಾವುದೂ ಈ ಜಗತ್ತಿನಲ್ಲಿ ಒಂದೇ ಸಮನೆ ಇರಲು ಸಾಧ್ಯವಿಲ್ಲ.

                     ಒಮ್ಮೆ ಒಬ್ಬ ವಯೋವೃದ್ಧ ಸಂತರು ತೀವ್ರವಾಗಿ ಯೋಚಿಸುತ್ತಿದ್ದರು.  ತಮ್ಮ ಗುಡಿಸಿಲಿನ ಹೊರಗಿನ ಬೆಳದಿಂಗಳ ಸೌಂದರ್ಯವು ಅವರಿಗೆ ಬೇಡವೆನಿಸುವಷ್ಟು ನೀರಸದಿಂದ  ಗಾಡವಾದ ಚಿಂತನೆಯಲ್ಲಿ   ಮುಳುಗಿ ಹೋಗಿದ್ದರು. ಏಕಾಂತದಲ್ಲಿದ್ದ ಅವರೆದುರು ಪರಮಾತ್ಮ ಪ್ರತ್ಯಕ್ಷವಾಗಿ “ ಏನು  ಚಿಂತಿಸುತ್ತಿರುವೆ? ಯಾವುದು ನಿನ್ನನ್ನು ಚಿಂತೆಗೆ ಈಡುಮಾಡಿದೆ? “ ಎಂದು ಕೇಳಿದ. ಆಗ ಎಚ್ಚೆತ್ತ ಸಂತರು “ ನಿನಗೆ ತಿಳಿಯದ್ದು ಈ ಜಗತ್ತಿನಲ್ಲಿ ಏನಿದೆ ಪರಮಾತ್ಮ? ಎಲ್ಲವನ್ನು ಅರಿತಿರುವ ಪರಮೇಶ್ವರ ನಿನ್ನಲ್ಲಿ ಒಂದು ಬಿನ್ನಹ? ನನ್ನ ಮನಸ್ಸು ಬಹಳ ನೊಂದಿದೆ. ಈ ಜಗತ್ತಿನಲ್ಲಿ ಕೋಟಿ ಕೋಟಿ ಜನರು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ, ವಂಚನೆ ಮತ್ತು ವ್ಯಸನಕ್ಕೆ ಒಳಗಾಗುತ್ತಿದ್ದಾರೆ, ಇದು ಒಂದು ವರ್ಗದವರಾದರೆ, ಇನ್ನೊಂದು ವರ್ಗದ ಜನರು ಎಷ್ಟು ಗಳಿಸಿದರು ಸಾಲದೆಂಬಂತೆ ಬಡವರ,  ಅಸಹಾಯಕರ ಶೋಷಣೆ ಮಾಡುತ್ತಾ ಬೇಕಾದಷ್ಟು ಅನ್ಯಾಯ ವಂಚನೆಗಳನ್ನು ಮಾಡುತ್ತಿದ್ದಾರೆ. ಇಷ್ಟೆಲ್ಲಾ ಅಪರಾಧಗಳು ನಡೆಯುತ್ತಿದ್ದರೂ ಅಂತಹವರಿಗೆನು ಶಿಕ್ಷೆಯಾಗುತ್ತಿಲ್ಲ.  ಇದರಿಂದ ನನ್ನ ಮನಸ್ಸು ಬಹಳ ನೊಂದಿದೆ. ಇದಕ್ಕೆಲ್ಲ  ಯಾವಾಗ ಮುಕ್ತಿ ?  ಎಲ್ಲರು ಸುಖ ಶಾಂತಿಯಿಂದ ಬದುಕುವುದು ಯಾವಾಗ?” ಎಂದು ತಮ್ಮ ದುಃಖವನ್ನು ಪರಮಾತ್ಮನಲ್ಲಿ ವಿನಂತಿಸಿಕೊಂಡರು.  ಪರಮಾತ್ಮ ನಸುನಕ್ಕು “ ಇದನ್ನೆಲ್ಲಾ ನಿನ್ನ ತಲೆಗೆ ಏಕೆ ಹಾಕಿಕೊಂಡೆ? ಇದು ನಿನ್ನ ಕೆಲಸವೇ? ಈ ಜಗತ್ತನ್ನು ಸೃಷ್ಟಿ ಮಾಡಿದವನಿಗೆ ಅದು ಹೇಗಿರಬೇಕೆಂಬ ಪರಿಕಲ್ಪನೆ ಇರುವುದಿಲ್ಲವೇ? ಯಾವಾಗ ಯಾರಿಗೆ ಬಡತನ ನೀಗಿಸಬೇಕು? ಯಾರಿಗೆ ಯಾವ ಶಿಕ್ಷೆ ನೀಡಬೇಕು?  ಇವೆಲ್ಲಾ ನಿನ್ನ ಬಯಕೆಯಂತೆ ಆಗುವ ಕೆಲಸವಲ್ಲ. ಅದು ಕೂಡಾ ನನ್ನ ಕೆಲಸವೇ! ನಿನ್ನ ಕೆಲಸವೇನೆಂದರೆ,  ಈ  ಜಗಕ್ಕೆ ನಿನ್ನ ಕೈಲಿ ಸಾಧ್ಯವಾದಷ್ಟು ಒಳ್ಳೆಯದನ್ನು ನಿರ್ವಂಚನೆಯಿಂದ ಮಾಡುವುದು, ಸರ್ವ ಜನರಿಗೂ ಒಳಿತನ್ನು ಬಯಸುವುದು, ಆದರೆ ಕೊನೆಯಲ್ಲಿ ನಿಶ್ಚಿಂತನಾಗಿರುವುದು, ಇದನ್ನು ರೂಡಿಸಿಕೋ. ಜಗತ್ತು ಹೇಗಿರಬೇಕೆಂದು ಬಯಸುವುದು  ತಪ್ಪಲ್ಲ, ಆದರೆ,  ಜಗತ್ತು ಹೀಗೇ ಇರಬೇಕೆಂದು ಬಯಸುವುದು ಖಂಡಿತಾ ತಪ್ಪು. ನೀನು ಶಾಂತಿಯಿಂದ ಇರುವುದನ್ನು ಕಲಿತರೆ ನಿನ್ನ  ಬದುಕು ಮತ್ತು ಸಾಧನೆ ಎರಡು ಸುಗಮವಾಗುತ್ತದೆ!” ಎಂದು ಸಂತನನ್ನು ಸಂತೈಸಿದ.

              ಹೌದು,  ಈ ಜಗತ್ತು ನಮಗೆ ಏನೇನೆಲ್ಲಾ ಕೊಟ್ಟಿದೆ, ಅದನ್ನು ನಾವು ಸಂತೋಷದಿಂದ ನೋಡಿ ಆನಂದಿಸಲು ಕಲಿಯದಿದ್ದರೆ ಸುಂದರ ಕ್ಷಣಗಳು ಮರೆಯಾಗಿಬಿಡುತ್ತವೆ. ಸಂತೋಷದಿಂದ ನೋಡಬೇಕು,ಕೇಳಬೇಕು,ಮಾಡಬೇಕು, ಅನುಭವಿಸಬೇಕು. ಹಾಗೆಯೇ ದುಃಖದ ಕ್ಷಣಗಳನ್ನು ಕೂಡಾ ಅನುಭವಿಸಬೇಕು. ನಾವು ಯಾವುದರಿಂದಲೂ ಹೊರತಾಗಬಾರದು. ಚಿಂತೆ ನಮ್ಮ ಈ ಕ್ಷಣಗಳನ್ನು ನಾಶಮಾಡಬಾರದು. ನಡೆದುಹೋದ ಸಿಹಿ ಕಹಿ ಘಟನೆಗಳನ್ನು ಆಯಾ ಕ್ಷಣದಲ್ಲಿ ಬಂದಂತೆ ಅನುಭವಿಸಿ ಮರೆತುಬಿಡುವ ಸಾಧನೆ ಅನಿವಾರ್ಯವೆಂದು ಭಾವಿಸಬೇಕು. ಆಗಲೇ ಬದುಕಿನ ಪ್ರತಿಕ್ಷಣವೂ ಸುಂದರ .  ಇದನ್ನೇ ಬಸವಣ್ಣನವರು ಹೇಳಿರುವುದು   

                 

                            ಪರಚಿಂತೆ ಎಮಗೇಕಯ್ಯ? ನಮ್ಮ ಚಿಂತೆ ನಮಗೆ ಸಾಲದೇ?

                            ಕೂಡಲಸಂಗಮ ಒಲಿದಾನೋ ಒಲಿಯನೋ ಎಂಬ ಚಿಂತೆ

                            ಹಾಸಲುಂಟು ಹೊದೆಯಲುಂಟು.....

Rating
No votes yet

Comments

Submitted by kavinagaraj Wed, 12/17/2014 - 18:49

ಉತ್ತಮ ಚಿಂತನೆ. ಮುಂದುವರೆಯಲಿ ತಮ್ಮ ಚಿಂತನ ಮಾಲೆ!