ನಾನು ಬೋಳುಮರ ನಿಂತಿದ್ದೇನೆ ಬರಿದಾಗಿ
ಆಗಸಕೆ ಮುಖಮಾಡಿ ಬೆತ್ತಲೆಯಾಗಿ
ಸವೆಸಿದ ವಸಂತಗಳ ಸಾಕ್ಷಿಯಾಗಿ .....
ಬರಡಾಗಿ, ಬೆಂಡಾಗಿ, ಬಸವಳಿದು
ಕವಿಯ ಕಲ್ಪನೆಗೆ ಸ್ಪೂರ್ತಿಯಾಗದ
ಕಲಾವಿದನ ಕುಂಚದಲ್ಲಿ ಬಣ್ಣ ಮುಡಿಸದ
ಪಕ್ಷಿಸಂಕುಲಕ್ಕೆ ನೆಲೆಯಾಗದ ದುರ್ದೈವಿಯಾಗಿ ....
ಅಕ್ಕರೆಯ ಮಾತಿಲ್ಲ ,
ಸಕ್ಕರೆಯ ನಗುವಿಲ್ಲ
ಹಕ್ಕಿಗಳ ಚಿಲಿಪಿಲಿಯಿಲ್ಲ
ಹಸಿರ ಉಸಿರೇ ಇಲ್ಲ ....
ಜೀವಕಳೆಯ ನಿರೀಕ್ಷೆಯಲ್ಲಿದ್ದೇನೆ
ಮತ್ತೊಮ್ಮೆ ಮಗದೊಮ್ಮೆ ಬರುವ ವಸಂತನಿಗಾಗಿ
ಕಾಯುತ್ತಿರುತ್ತೇನೆ ಹಸಿರ ಉಸಿರಿಗೆ,ಇನಿದನಿಗೆ ನಿರಂತರ......
ಕಮಲಬೆಲಗೂರ್









ಪ್ರತಿಕ್ರಿಯೆಗಳು
ಉ: ಜೀವಕಳೆಯ ನಿರೀಕ್ಷೆಯಲ್ಲಿ ನಿರಂತರ.: ಭರವಸೆಯೇ ಬೆಳಕು..???
ಬರಡಾಗಿ, ಬೆಂಡಾಗಿ, ಬಸವಳಿದು
ಕವಿಯ ಕಲ್ಪನೆಗೆ ಸ್ಪೂರ್ತಿಯಾಗದ
ಕಲಾವಿದನ ಕುಂಚದಲ್ಲಿ ಬಣ್ಣ ಮುಡಿಸದ
ಪಕ್ಷಿಸಂಕುಲಕ್ಕೆ ನೆಲೆಯಾಗದ ದುರ್ದೈವಿಯಾಗಿ ....
------------------------------------------------------------------------------
ಕಮಲ ಅವ್ರೆ-
ಈ ಬರಹವನ್ಣ ನಿನ್ನೆಯೇ ಓದಿದ್ದೆ(೦೪-೦೫-೨೦೧೨) ಆದರೆ ಈಗ ಪ್ರತಿಕ್ರಿಯಿಸುತ್ತಿರುವೆ...!!
ಬರಹ ಅದರದೇ ಆದ ಅರ್ಥಗಳನ್ನ ಹೊಂದಿದೆ..
ಹಸಿರು ಹರ್ಷತೆಯ ಪ್ರತೀಕ..
ಹಾಗಂತ ಬೋಳು ಮರ ವ್ಯಥೆ ಪಡಬೇಕಿಲ್ಲ..
ಮುಂದೊಮ್ಮೆ ಚಿಗುರು ಚಿಗುರೀತು..
ಭರವಸೆಯೇ ಬೆಳಕು..
ಅಲ್ಲವೇ?
ಈಗ್ಗೆ ಕೆಲ ದಿನಗಳಿಂದ ನಿಮ್ಮಿಂದ ಬರುತಿರುವ ವೈವಿಧ್ಯಮಯ ಬರಹಗಳನ್ನ ಗಮನಿಸುತಿರುವೆ..
ಎಲ್ಲವೂ ವಿಭಿನ್ನ.
ನನಗೆ ಅನ್ನಿಸಿದಂತೆ
ನೀವು ಕಾವ್ಯ ವಿದದಲ್ಲೇ ಹೆಚ್ಚು ಸಕ್ರಿಯ..
ನಿಮ್ಮಲ್ಲಿ ಇನ್ನೂ ಎಸ್ಟೋ ಯೋಚನೆಗಳು- ಬರಹಗಳ ರೂಪದಲ್ಲಿ ಹುದುಗಿರುವ ಹಾಗಿದೆ,
ಮತ್ತು ಅವುಗಳ ಸರಿಯಾದ ಸಮಯದ ಹೊರ ಬರುವಿಕೆಗಾಗಿ ನಾ ಕಾಯ್ದಿರುವೆ..
ಶುಭವಾಗಲಿ...
ಉ: ಜೀವಕಳೆಯ ನಿರೀಕ್ಷೆಯಲ್ಲಿ ನಿರಂತರ.: ಭರವಸೆಯೇ ಬೆಳಕು..???
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು .ಭರವಸೆಯೇ ಬೆಳಕು..ನನಗೆ ಹಿಡಿಸಿತು