ಜೋಕರ್...

ಜೋಕರ್...

ಯಕ್ಷಗಾನ ನಮ್ಮೂರ ಕಲೆ. ಭರ್ಜರಿ ವೇಷ ಭೂಷಣಗಳು, ಪುರಾಣದ ಕಥಾಪ್ರಸಂಗಗಳು, ಭಾಗವತರ ಭಾಗವತಿಕೆಯ ಸಿರಿವಂತಿಕೆ, ಪಾತ್ರದಾರಿಗಳ ನಾಟ್ಯ, ಮಾತಿನ ಅಬ್ಬರ, ವಿಧೂಶಕರುಗಳ ಹಾಸ್ಯ , ಚಂಡೆಯ ಮೊರೆತ ಇವುಗಳ ಸಮ್ಮಿಲನವೇ ಯಕ್ಷಗಾನ. ಕೆಲ ದಿನಗಳ ಹಿಂದೆ ನಡೆದ ಯಕ್ಷಗಾನದ ಬಗೆಗಿನ ಒಂದು ಕಾರ್ಯಕ್ರಮದಲ್ಲಿ ಸ್ನೇಹಿತನೊಬ್ಬ ಹೇಳಿದ ಘಟನೆಯಿಂದ ಪ್ರೇರಿತ ಈ ಲೇಖನ, ಜೊತೆಗೆ ಸ್ವಲ್ಪ ಕಲ್ಪನೆ ... ಕಥೆಯ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ.

ಜೋಕರ್

ಹೊರಗೆ ಮಳೆ ದೋ ಎಂದು ಸುರಿಯುತ್ತಿದೆ. ಮಳೆಗಾಲ ಅಂದ್ರೆ ನನ್ನಂತ ಯಕ್ಷಗಾನ ಪಾತ್ರದಾರಿಗಳಿಗೆ ರಜಾ ದಿನಗಳು. ರಜೆ ಅಲ್ಲ ಒಂತರ ಸಜೆ ಅಂದ್ರು ತಪ್ಪೇನು ಇಲ್ಲ. ಈ ಮಳೆಗಾಲದಲ್ಲಿ ಅಲ್ಲಿ ಇಲ್ಲಿ ಅಂತ ಒಂದೆರಡು ಹರಕೆಯ ಯಕ್ಷಗಾನ ಬಿಟ್ಟರೆ ನಮಗೆ ಅಸಹನೀಯ ರಜೆ. ರಾತ್ರಿಯಿಡೀ ನಿದ್ದೆ ಬಿಟ್ಟು ಪ್ರದರ್ಶನ ಕೊಟ್ಟು ಹಗಲಲ್ಲಿ ನಿದ್ರಿಸಿದ ನಮಗೆ ಈಗ ಸ್ವಲ್ಪ ಕಷ್ಟದ ಹೊತ್ತು. ಹಗಲು ದುಡಿಬೇಕು ರಾತ್ರೆ ನೆಮ್ಮದಿಯ ನಿದ್ರೆ ಮಾಡಬೇಕು, ಇದು ಜಗದ ನಿಯಮ. ಆದರೆ ಯಕ್ಷಗಾನಕ್ಕೆ ಇದು ಅನ್ವಯಿಸುವುದಿಲ್ಲ. ಜ್ವರದಿಂದ ಬಳಲಿ ಬೆಂಡಾಗಿರೋ ಹೆಂಡತಿ ಮೂಲೆಯಲ್ಲಿ ಮಲಗಿದ್ದಾಳೆ. ಕೈಯಿಟ್ಟರೆ ಸುಟ್ಟು ಹೋಗುವುದೇನೋ ಅನ್ನೋವಷ್ಟು ಜ್ವರ. ಯಜಮಾನರು ಇವತ್ತು ಒಂದು ಬಯಲಾಟ ಇದೆ ಬಾ ಮಾರಾಯ ಅಂತ ಹೇಳಿ ಹೋಗಿದ್ದಾರೆ. ಇವಳನ್ನು ಬಿಟ್ಟು ಹೇಗೆ ಹೋಗ್ಲಿ ನಾನು. ನಾನಿಲ್ಲದೆ ನಡೆಯದೇನೋ ಅನ್ನೋ ಪರಿಸ್ತಿತಿ ಏನೂ ಇಲ್ಲ ಆದ್ರೆ ನಾನಿಲ್ಲದೆ ಜನ ನಗಲಾರರು ಅನ್ನೋದು ಮಾತ್ರ ಸತ್ಯ ಯಾಕಂದ್ರೆ ನಾನು ಜನರ ಬಾಯಲ್ಲಿ ವಿಧೂಷಕ ಅಥವಾ ಜೋಕರ್. ಆದರೆ ಇವಳ ಬಾಡಿದ ಮುಖವನ್ನು ನೆನೆಸಿಕೊಂಡು ನಾನು ನಗಿಸುವುದು ಹೇಗೆ. ಆದರೆ ಕಾಣದ ನನ್ನ ನೋವಿನಲ್ಲಿ ಜನ ನಗು ಕಾಣುತ್ತಾರೆ ಅನ್ನೋದು ಮಾತ್ರ ಸತ್ಯ. ನನಗೆ ಸಹ ಪಾತ್ರದಾರಿ ಒದ್ದರೆ ಅಥವ ವಿಚಿತ್ರವಾಗಿ ನಡೆಯುತ್ತಾ ನಾನು ಬಿದ್ದರೆ ಜನರ ಕರತಾಡನ ಮುಗಿಲು ಮುಟ್ಟುತ್ತೆ. ನನ್ನ ತೊದಲು ನುಡಿಗೆ ಮಾತ್ರ ಜನರ ಕರತಾಡನ. ನಾನು ರಂಗಸ್ಥಳದಲ್ಲಿ ಅಪ್ಪಿ ತಪ್ಪಿ ಏನಾದರು ಒಳ್ಳೆ ಯ ನಾಲ್ಕು ಸಾಲು ಹೇಳಿದರೆ ಜನರಿಂದ ನೀರಸ ಪ್ರತಿಕ್ರಿಯೆ. ಯಾಕಂದ್ರೆ ನಾನು ನಾನಾಗಿದ್ದರೆ ಅಲ್ಲಿ ಅದು ನಾನಲ್ಲ. ಜನರು ಚಹಕ್ಕೋ ಇಲ್ಲ ಬಿಸಿ ವಡೆ ತಿನ್ನಲೋ ಎದ್ದು ಹೋದರೆ ಆ ಬ್ಲಾಂಕ್ ಸ್ಪಾಟ್ ತುಂಬೋಕೆ ನಾನು ಬೇಕು. ಆದರೆ ಸ್ಪಾಟ್ ಅಲ್ಲಿ ಕಥಾನಾಯಕ ಬಂದ ಮೇಲೆ ನಾನು ತೆರೆಯ ಮೂಲೆಯಲ್ಲಿ ಏನೇನೋ ಹಾವ ಭಾವ ತೋರಿಸುತ್ತ ನಿಲ್ಲಬೇಕು. ವಿಪರ್ಯಾಸ..,..

ಕೈಲಿ ಒಂದು ಹರಿದ ಬ್ಯಾಗ್ ಹಿಡಿದು ಯಕ್ಷಗಾನ ಮೇಳದವರೊಡನೆ ಊರೂರು ಸುತ್ತುತ್ತ ಇದ್ದವ ನಾನು. ಅದೇನು ಕಂಡು ನನ್ನ ಮದುವೆ ಆದಳೋ ಗೊತ್ತಿಲ್ಲ. ಆದರೆ ತೆರೆಯ ಮೇಲಿನ ನನ್ನ ಮಾತಿಗೆ ಹಾವಭಾವಕ್ಕೆ ಇಡೀ ಊರು ನಕ್ಕರು ಇವಳನ್ನು ನಗಿಸೋದು ಇದುವರೆಗೂ ಸಾದ್ಯವಾಗಿಲ್ಲ. ನೀನು ನನ್ನ ಅಭಿನಯ, ಮಾತು ಕೇಳಿ ಯಾಕೆ ನಗೋದಿಲ್ಲ ಅಂತ ಕೇಳಿದ್ರೆ ನಿಮ್ಮ ಮಾತಿನ ಹಿಂದಿನ ನೋವು ನನಗೆ ಮಾತ್ರ ಗೊತ್ತು. ನಿಮಗೆ ಯಾರೋ ಒದ್ದು ನೀವು ಅಲ್ಲಿ ಬಿದ್ದರೆ ಸಭೆ ನಗುತ್ತದೆ. ನಿಮ್ಮ ಮುಖದಲ್ಲಿ ನೀವು ತೋರಿಕೆಯ ನೋವನ್ನು ವಿಚಿತ್ರವಾಗಿ ಬಿಂಬಿಸಿ ನಗಿಸ್ತೀರ. ಆದರೆ ನಿಮಗೆ ನಿಜವಾಗಿಯೂ ನೋವಾಗಿರಬುಹುದೇನೋ ಅನ್ನೋ ಭಯವನ್ನು ಮನಸ್ಸಿನೊಳಗಿಟ್ಟು ನಾನು ಹೇಗೆ ನಗಲಿ ಅಂದಳು ನಗುತ್ತ. ನೀನು ನನ್ನ ಯಕ್ಷಗಾನ ನೋಡೋಕೆ ಬರಬೇಡ ಕಣೆ ಅಂದುಬಿಟ್ಟೆ ಅವತ್ತು. ಯಾಕೆ ಅಂದಳು?. ಹೆಂಡತಿಯನ್ನೇ ನಗಿಸಲಾಗದ ಈ ಪ್ರಾಣಿ ನಮ್ಮನ್ನೇನು ನಗಿಸಿಯಾನು ಅಂತ ಲೋಕ ಕೇಳಿದರೆ ನನ್ನಲ್ಲಿ ಉತ್ತರವಿಲ್ಲ ಅದಕ್ಕೆ ಅಂದಿದ್ದೆ. ಇದಾದ ಮೇಲೆ ಒಮ್ಮೆನೂ ಆಕೆ ಬಂದಿಲ್ಲ...

ಮಳೆಗಾಲದಲ್ಲಿ ಯಕ್ಷಗಾನ ನಡೆಯೋದೇ ಕಮ್ಮಿ .ಈಗ ಯಕ್ಷಗಾನ ನೋಡೋರ ಸಂಖ್ಯೆನೂ ಅಷ್ಟಕಷ್ಟೇ. ಏನೋ ಅಲ್ಲಿ ಇಲ್ಲಿ ಅಂತ ಕೆಲ ಯಜಮಾನರುಗಳ ಕೃಪೆಯಿಂದ ಯಕ್ಷಗಾನ ಮಂಡಳಿಗಳು ಇನ್ನೂ ಉಳಿದುಕೊಂಡಿವೆ. ಕಸುಬಾಗಿರೋದ್ರಿ೦ದ 5 ಜನ ಇದ್ದರೂ ಅಥವಾ 5೦೦ ಇದ್ದರೂ ನಾವು ನಮ್ಮ ಕೆಲಸ ಮಾಡಬೇಕು. ಇದರ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಹಾಗೇನೆ ಆ ವಿಘ್ನೇಶ್ವರನನ್ನು ವಂದಿಸಿ ಬಣ್ಣ ಹಾಕಿ ಅಭಿನಯಿದಾಗ ಸಿಗೋ ತೃಪ್ತಿನೂ ಅವರ್ಣನೀಯ. ವ್ಯವಸಾಯದ ಕೆಲಸಗಳೆಲ್ಲ ಮುಗಿದಿದ್ದವು. ಅಪರೂಪಕ್ಕೆ ಎಂಬಂತೆ ಮಳೆಯೂ ಬಿಟ್ಟಿತ್ತು. ಅದಕ್ಕೇ ಏನೋ ಜನರು ಜಾಸ್ತೀನೇ ಇದ್ದರು.

ಯಕ್ಷಗಾನ ಆರಂಭವಾಯ್ತು. ಭಾಗವತರು ತಮ್ಮ ಕಂಠ ಸಿರಿಯಿಂದ ಜನರನ್ನು ಹಿಡಿದಿಟ್ಟಿದ್ದಾರೆ. ಅವರ ಗಾನದ ಪ್ರತಿ ಏರಿಳಿತಕ್ಕೂ ಕರತಾಡನ. ಇಂದಿನ ಪ್ರಸಂಗ ಕೀಚಕ ವಧೆ. ಮೇಲಿರೋ ಆ ಸೂತ್ರದಾರ ಕೀಚಕನನ್ನು ದುರುಳ ಖಳನಾಯಕನನ್ನಾಗಿ ತೋರಿಸಿದರೆ ನಮ್ಮ ಸೂತ್ರದಾರರು ಇಂದು ಅವನನ್ನು ಕಥಾ ನಾಯಕನಿಗೆ ಸರಿ ಸಮಾನವೆನ್ನಿಸೋ ರೀತಿ ವೈಭವೀಕರಿಸಿದ್ದಾರೆ. ಇದೆ ಕಲೆಯ ಗಮ್ಮತ್ತು. ಕಥೆಯ ಪಾತ್ರಗಳೆಲ್ಲ ಕಥೆಗಾರನ ಕೈಲಿ ಬಂಧಿ. ಆದರು ಕೊನೆ ಮಾತ್ರ ಅದೇ ...ಕೀಚಕನ ಪರ್ಯಾವಸಾನ. ಕೀಚಕನ ರಂಗಪ್ರವೇಶ ಆಯಿತು, ಜೊತೆಗೆ ನಾನು. ಕೀಚಕನೋ ಅಜಾನುಭಾಹು. ಹಾವಭಾವಗಳಿಂದ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾನೆ. ಭಾಗವತರು ತನ್ಮಯರಾಗಿ ಭಾಗವತಿಕೆಯಲ್ಲಿ ತಮ್ಮ ಏರಿಳಿತ ತೋರಿಸುತ್ತಿದ್ದರೆ ತಾನೇನು ಕಮ್ಮಿ ಎಂದು ಇವನು ಸುತ್ತು ಹಾಕುತ್ತಿದ್ದಾನೆ. ಜನರ ಕಣ್ಣಿಗೆ ರಾಗ, ತಾಳ, ನೃತ್ಯ, ಹಾವಭಾವ ಗಳ ರಸದೌತಣ. ಅಲ್ಲೇ ಬದಿಯಲ್ಲಿ ನಿಂತ ನಾನು ಸುತ್ತು ಹಾಕಲು ಪ್ರಯತ್ನಿಸಿ ಬಿದ್ದೆ. ಸುತ್ತು ಹಾಕಲು ಬರೋದಿಲ್ಲ ಅಂತೇನು ಇಲ್ಲ. ಇವನಿಗೆ ಸರಿಸಮಾನವಾಗಿ ಅಥವಾ ಇನ್ನೊಂದು ಸುತ್ತು ಜಾಸ್ತಿ ನಾನು ಸುತ್ತಬಲ್ಲೆ ಆದರೆ ನಾನಿಲ್ಲಿರೋದು ವಿಧೂಷಕನಾಗಿ ಮಾತ್ರ. ನಾನು ಸುತ್ತು ಹಾಕಿದರೆ ಜನ ಚಪ್ಪಾಳೆ ಹೊಡೆಯೋದಿಲ್ಲ, ಬಿದ್ದರೆ ಮಾತ್ರ ಚಪ್ಪಾಳೆ!!! ಯಕ್ಷಗಾನ ಮುಂದುವರಿಯುತ್ತಿದೆ. ಪಾಂಡವರು ವಿರಾಟ ರಾಜನಲ್ಲಿ ಆಶ್ರಯಪಡೆದಿದ್ದಾಯ್ತು, ಭೀಮ ಬಾಣಸಿಗನಾಗಿದ್ದು ಅಯ್ತು. ಅರ್ಜುನ ಬೃಹನ್ನಳೆ ಯಾಗಿದ್ದು ಆಯ್ತು. ದ್ರೌಪದಿಯು ಮಹಾರಾಣಿಯ ಸಹಾಯಕಿ ಆಗಿ ಸೇರಿಕೊಂಡಿದ್ದಾಯ್ತು. ಕೀಚಕನ ಮಾತಿಗೆ ನಾನು ವಿಚಿತ್ರ ಹಾವ ಭಾವಗಳಿಂದ ತಮಾಷೆಯಾಗಿ ಉತ್ತರಿಸುತ್ತಿದ್ದರೆ ಸಭಿಕರು ನಗೆಯ ಕಡಲಲ್ಲಿ ಮುಳುಗಿದ್ದರು. ನೆರೆದಿದ್ದ ಸಭೆಯ ಮೇಲೆ ಹಾಗೆ ಕಣ್ಣು ಹಾಯಿಸುತ್ತಿದ್ದಾಗ ಪರಿಚಿತ ಮುಖವೊಂದನ್ನು ನೋಡಿ ಕಣ್ಣು ಅಲ್ಲಿಂದ ಕದಲದಾಯ್ತು. ಅರೇ ಇವಳು ಇಲ್ಲಿ ಯಾಕೆ ಬಂದಳು? ಅದೂ ನಗುತ್ತಿದ್ದಾಳೆ, ಇಷ್ಟು ವರ್ಷಗಳಲ್ಲಿ ಮೊದಲ ಭಾರಿ ನನ್ನ ಅಭಿನಯ ನೋಡಿ ನಗುತ್ತಿದ್ದಾಳೆ. ಕಡೆಗೂ ನಾನು ಇವಳನ್ನು ನನ್ನ ಅಭಿನಯದಿಂದ ನಗಿಸುವಲ್ಲಿ ಸಫಲನಾಗಿದ್ದೇನೆ. ಆದರೆ ಎದ್ದೇಳಲಾಗದಷ್ಟು ಅನಾರೋಗ್ಯವಿದ್ದರೂ ಯಾಕೆ ಬಂದಳು? ಯೋಚನೆಯಲ್ಲಿ ಮುಳುಗಿದ್ದವನ ಬೆನ್ನಿಗೊಂದು ಅನಿರೀಕ್ಷಿತ ಒದೆ. ರಂಗಸ್ಥಳದಲ್ಲಿದ್ದೂ ಕಳೆದು ಹೋಗಿದ್ದ ನನ್ನನ್ನು ಒಂದು ಒದೆಯಿಂದ ಕೀಚಕ ಪಾತ್ರದಾರಿ ವಾಪಸು ಕರೆ ತಂದಿದ್ದ. ಒದೆಗೆ ಜೋಲಿ ತಪ್ಪಿ ಬಿದ್ದೆ, ಎದ್ದು ನಕ್ಕೆ. ಇದು ಕಥೆಯಲ್ಲಿನ ಸನ್ನಿವೇಷವೆಂದು ಜನ ನಕ್ಕರು. ಕಥೆ ಮುಂದುವರಿಯಿತು. ಕೀಚಕ ದ್ರೌಪದಿಯನ್ನು ತನ್ನವಳನ್ನಾಗಿಸಬೇಕೆಂದು ಹೋರಟ. ನಾನು ಪರಸ್ತ್ರೀಯ ಮೇಲೆ ಕಣ್ಣು ಹಾಕಿದ ನಿನ್ನ ಅಂತ್ಯ ಹತ್ತಿರ ಬಂದ ಹಾಗಿದೆ ನಿನ್ನ ಸಹವಾಸವೇ ಬೇಡ ಮಾರಾಯ ಅಂತ ಎದ್ದು ಬಿದ್ದು ಓಡಿದೆ. ಜನ ಮತ್ತೆ ನಕ್ಕರು. ಇಲ್ಲಿಗೆ ನನ್ನ ಪಾತ್ರ ಮುಗಿದಿತ್ತು.

ರಂಗಸ್ಥಳದಿಂದ ಸರಿದವನೇ ವೇಷ ಕಳಚೋವಷ್ಟು ಕೂಡ ವ್ಯವದಾನವಿಲ್ಲದೆ ಮೊದಲು ನನ್ನಾಕೆಯನ್ನು ಮಾತನಾಡಿಸಿ ಬರುತ್ತೇನೆಂದು ಸಭೆಯತ್ತ ನಡೆದೆ. ಎಲ್ಲರೂ ಯಕ್ಷಗಾನದಲ್ಲಿ ಲೀನರಾಗಿದ್ದರು. ಕಡೆ ಸಾಲಿನಲ್ಲಿ ಕೂತಿದ್ದ ನನ್ನಾಕೆ ಮಾತ್ರ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾಳೆ. ಹತ್ತಿರ ಹೋದಂತೆ ಆಕೆಯ ಮುಖದಲ್ಲಿ ಒಂದು ಪ್ರಶ್ನೆಯ ಛಾಯೆ. ಜ್ವರ ಏನಾದರೂ ಕಡಿಮೆ ಆಗಿದೆಯೇ ನೋಡೋಣ ಅಂತ ಆಕೆಯ ಕೆನ್ನೆ ಸವರಲು ಹೋದೆ . ಮರುಕ್ಷಣ ಪಟ್ ಅಂತ ಕೆನ್ನೆಗೆ ಯಾರೋ ಭಾರಿಸಿದ ಹಾಗಾಯ್ತು .. ನನ್ನಾಕೆಯ ಬಗ್ಗೆ ಯೋಚನೆ ಮಾಡ್ತಾ ಇದ್ದ ನನ್ನ ಕಣ್ಣಿಗೆ ಆ ಸುಸಂಸ್ಕೃತ ಹೆಣ್ಣುಮಗಳು ನನ್ನ ಹೆಂಡತಿಯಂತೆ ತೋರಿದ್ದಳು. ಛೇ... ಎಂಥಾ ತಪ್ಪಾಗಿ ಹೋಯ್ತು, ನನ್ನ ವೃತ್ತಿಗೆ ಅಪಮಾನವಾಗಿ ಹೋಯ್ತು ಅಂತ ಕಣ್ಣಂಚಿನಲಿ ನೀರ ಧಾರೆ. ಅಷ್ಟರಲ್ಲಿ ಹೇಯ್ ಇವ್ರು ಜೋಕರ್ ಮಾರಾಯ್ತಿ, ಸುಮ್ನೆ ನಿನ್ನೆಡೆಗೆ ಬಂದಂತೆ ನಟಿಸ್ತಾ ಇದ್ರು ಅನ್ಸುತ್ತೆ. ಇದು ಅವರ ಕಥೆಯ ಭಾಗ ಇರಬೇಕು, ಯಾಕೆ ಅವರಿಗೆ ಹೊಡೆದೆ? ನೋಡು ಈಗ ಕಣ್ಣಲ್ಲಿ ನೀರು ಬಂದ ಹಾಗೆ ನಟಿಸ್ತಾ ಇದ್ದಾರೆ ..... ಕ್ಷಮಿಸಿ ಸರ್ ಅಂದ್ರು ಯಾರೋ ಪುಣ್ಯಾತ್ಮರು. ನಾನು ಮತ್ತೆ ನಕ್ಕೆ. ಕಣ್ಣಲ್ಲಿ ನೀರು ಬರ್ತಾನೆ ಇತ್ತು. ಇದು ನಟನೆಯ ಕಣ್ಣೇರು ಅಲ್ಲ ಅಂತ ಇವರಿಗೆ ಹೇಳೋರ್ಯಾರು? ನಾನು ಯಾಕೆ ನಗಿಸ್ತೀನಿ ಅಂತ ಇವರಿಗೆ ಹೇಳೋರ್ಯಾರು? ಆ ನಗೆ ಹಿಂದೆ ಇರೋ ನೋವು ತಿಳಿದವರ್ಯಾರು? ಕಥೆಯ ನಿರೂಪಣೆಯಲ್ಲಿಲ್ಲದ ಈ ಸನ್ನಿವೇಷವನ್ನು ವಿವರಿಸೋರ್ಯಾರು?

ವಿಚಿತ್ರ ವೇಷಭೂಷಣ, ತಪ್ಪಿತಸ್ಥನ ನಿಲುವು, ಕಣ್ಣಲ್ಲಿ ನೀರು, ಮುಖದಲ್ಲಿ ನಗು, ನನ್ನನ್ನೇ ದಿಟ್ಟಿಸುತ್ತಿರೋ ನೂರಾರು ಕಣ್ಣುಗಳು .... ವಿಧಿಯ ನೈಜ ಜೀವನದ ಕಥಾ ಪ್ರಸಂಗವೊಂದರಲ್ಲಿ ನಿಜವಾದ ಜೋಕರ್ ನಾನಾಗಿದ್ದೆ.
---ಶ್ರೀ:-)
"ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ "

Rating
No votes yet

Comments

Submitted by kavinagaraj Sat, 08/08/2015 - 10:51

ಓದುಗರು ಮರುಗುವಂತಹ ಸನ್ನಿವೇಶದ ನಿರೂಪಣೆ ಚೆನ್ನಾಗಿದೆ. ಇಂತಹ ಸನ್ನಿವೇಶಗಳು ಅಪರೂಪವಲ್ಲ. ಕಣ್ಣಿದ್ದವರಿಗೆ ಕಾಣುತ್ತದೆ.

Submitted by sriprasad82 Sun, 08/09/2015 - 09:40

In reply to by kavinagaraj

ನಿಜ ಸರ್, ನಾನು ನೋಡಿದ ಯಕ್ಷಗಾನದ ವಿಧೂಷಕನು ನಿಜಜೀವನದಲ್ಲಿ ಒಮ್ಮೆ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ಹೆಂಡತಿಯನ್ನು ಹೋಟೆಲಲ್ಲಿ ರೂಮ್ನಲ್ಲಿ ಇರಿಸಿ ಯಕ್ಷಗಾನದಲ್ಲಿ ಪಾತ್ರ ವಹಿಸಿದ್ದನಂತೆ. ಇದು ನನ್ನ ಮಿತ್ರನೊಬ್ಬ ಹೇಳಿದ್ದು. ಅದಕ್ಕೆ ಈ ಪಾತ್ರದ ಬಗ್ಗೆ ಏನಾದರೂ ಬರೆಯಬೇಕೆನಿಸಿತ್ತು.... ಅದಕ್ಕೆ ಈ ಲೇಖನ ಬರೆದೆ. ಪ್ರತಿಕ್ರಿಯಿಸಿದ್ದಕ್ಕೆ ದನ್ಯವಾದಗಳು ನಾಗರಾಜ್ ಸರ್

Submitted by santhosha shastry Sat, 08/08/2015 - 16:59

ಶೆಟ್ಟಿಯವರು ಸುಂದರ‌ ಭಾವುಕ‌ ಲೇಖನದಿಂದ‌ ನಮ್ಮನ್ನು ಬೋಲ್ಡ್ ಮಾಡಿ ಬಿಟ್ರಿ.

Submitted by sriprasad82 Sun, 08/09/2015 - 09:44

In reply to by santhosha shastry

ಸಂತೋಷ್ ಸರ್. ಈ ಯಕ್ಷಗಾನದಲ್ಲಿ ಹಾಗೂ ನಾಟಕಗಳಲ್ಲಿ ಕಲಾವಿದರಿಗೆ ರೀಟೇಕ್ ಅವಕಾಶವಿಲ್ಲ ಆದರೂ ಅದ್ಬುತವಾಗಿ ನಟಿಸ್ತಾರೆ. ಆದರೆ ಇವರಿಗೆ ಜನಮನ್ನಣೆ ಕಡಿಮೆ. ಆರ್ಥಿಕ ಬೆಂಬಲವೂ ಕಡಿಮೆ. .....ಇದು ವಾಸ್ತವ. ಪ್ರತಿಕ್ರಿಯಿಸಿದ್ದಕ್ಕೆ ದನ್ಯವಾದಗಳು ಸಂತೋಷ್ ಸರ್

Submitted by nageshamysore Tue, 08/11/2015 - 06:03

ಶ್ರೀಪ್ರಸಾದ್, ಮೇರಾ ನಾಂ ಜೋಕರ್ ನೆನಪಾಯ್ತು ನಿಮ್ಮ ಬರಹ ಓದಿ. ನೈಜತೆಗು ನಟನೆಗು ವ್ಯತ್ಯಾಸವೆ ತಿಳಿಯಲಾಗದಂತೆ ಬದುಕುವ ಎಷ್ಟೊ ಜನರ ಪಾಡು ಇದು. ಹಾಸ್ಯ ನಟನೆಗೆ ಆ ಬದುಕಿನ ದುರಂತಗಳೆ ಸ್ಪೂರ್ತಿಯ ಸರಕಾಗುವುದು ಮತ್ತೊಂದು ವಿಪರ್ಯಾಸ..

Submitted by sriprasad82 Tue, 08/11/2015 - 13:06

In reply to by nageshamysore

ನೀವು ಹೇಳಿದ್ದು ಸರಿ ಸಂತೋಷ್ ಸರ್, ಒಂತರಾ ವಿಪರ್ಯಾಸವೇ...ಪ್ರತಿಕ್ರಿಯಿಸಿದ್ದಕ್ಕೆ ದನ್ಯವಾದಗಳು
ಶ್ರೀ:-)