' ದಡ ಸೇರದ ಡೋಣಿ '

' ದಡ ಸೇರದ ಡೋಣಿ '

ಚಿತ್ರ

                              

     ಈ ಸಲ ಆಷ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ 11 ನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಬಲ ಆಷ್ಟ್ರೇಲಿಯಾ ನ್ಯೂಜಿಲಂಡ್ ತಂಡವನ್ನು ಸೋಲಿಸಿ ಐದನೆಯ ಬಾರಿಗೆ ವಿಶ್ವಕಪ್ ಗೆದ್ದು ತನ್ನ ಪಾರಮ್ಯವನ್ನು ಮೆರೆಯಿತು. ಕಳೆದ ಬಾರಿಯ ಚಾಂಪಿಯನ್ ತಂಡವಾಗಿದ್ದ ಭಾರತ ಈ ಸಲ ಸೆಮಿ ಫೈನಲ್ ನಲ್ಲಿ ಆಷ್ಟ್ರೇಲಿಯಾದ ಎದುರು 95 ರನ್ ಅಂತರದಿಂದ ಸೋತು ತವರಿನೆಡೆಗೆ ಮುಖ ಮಾಡಿತು. ನಿಜಕ್ಕೂ ಈ ಸಲ ವಿಶ್ವಕಪ್   ಫೈನಲ್ ಪಂದ್ಯಗಳಿಗೆ ಅರ್ಹವಾಗಿದ್ದ ತಂಡಗಳೆಂದರೆ ಅವು ಆಷ್ಟ್ರೇಲಿಯಾ ಮತ್ತು ನ್ಯೂಜಿಲಂಡ್ಕ ತಂಡಗಳು. ಅವೆರಡೂ ಲೀಗ್ ಹಂತದಲ್ಲಿ ನಿಜಕ್ಕೂ ಚಾಂಪಿಯನ್ ತಂಡಗಳಂತೆ ಹೋರಾಡಿದವು, ಕೂದಲೆಳೆಯ ಅಂತರದಲ್ಲಿ ನ್ಯೂಜಿಲಂಡ್ ಸೋಲಿನಿಂದ ಪಾರಾಯಿತು, ಆದರೆ ಫೈನಲ್ಲಿನಲ್ಲಿ ಅದರ ಆಟ ನಡೆಯಲಿಲ್ಲ. ಕಳೆದ ಮೂರು ತಿಂಗಳುಗಳಿಗಿಂತ ಹೆಚ್ಚು ಕಾಲ ಆಷ್ಟ್ರೇಲಿಯಾದಲ್ಲಿ ಬೀಡು ಬಿಟ್ಟು ಟೆಸ್ಟ ಸರಣಿ, ಒಂದು ದಿನದ ಸರಣಿಗಳಲ್ಲಿ ಒಂದು ಪಂದ್ಯವನ್ನೂ ಗೆಲ್ಲದೆ ವಿಶ್ವ ಕಪ್ ನಲ್ಲಿಯೂ ಆ ದೇಶಕ್ಕೆ ತಲೆಬಾಗಿ ಶೂನ್ಯ ಸಾಧನೆಯೊಂದಿಗೆ ಹಿಂದಿರುಗಿದೆ. ಈ ವಿಶ್ವಕಪ್ ಲೀಗ್ ಪಂದ್ಯಗಳಳ್ಲಿ ಅಜೇಯ ದಾಖಲೆ ಮಾಡಿದ್ದ ಭಾರತ ಎಂಟರ ಘಟ್ಟದಲ್ಲಿ ಬಾಂಗ್ಲಾವನ್ನು ಸೋಲಿಸಿ ನಾಲ್ಕರ ಹಂತ ಏರಿ ಅಲ್ಲಿ ಸೋತು ಸಮಸ್ತ ಭಾರತೀಯರ ನಂಂಬಿಕೆಯನ್ನು ಹುಸಿ ಗೊಳಿಸಿತು. ಭಾರತೀಯರ ಸಂಬಿಕಸ್ತ ಕಪ್ತಾನ ಧೋನಿಯ ನಾಯಕತ್ವದ ಪಡೆಯ ದೋಣಿ ಇನ್ನೇನು ಎರಡು ಮಾರುಗಳ ಅಂತರದಲ್ಲಿ ದಡ ಸೇರಲಿದೆ ಎನ್ನುವಾಗಲೆ ದೋಣಿ ಮುಗುಚಿಗೊಂಡು ನಾವೆಲ್ಲ ನಿರಾಶೆಗೊಳ್ಳುವಂತೆ ಮಾಡಿತು. ಭಾರತೀಯ ಉಪ ಖಂಡದ ಫ್ಲ್ಯಾಟ್ ಪಿಚ್ ಗಳಲ್ಲಿ ಮಿಂಚುವ ನಮ್ಮ ತಂಡ ವಿದೇಶಿ ಬೌನ್ಸಿ ಪಿಚ್ ಗಳಲ್ಲಿ ತಾನೂ ಏನೂ ಅಲ್ಲ ಎಂಬ ವಿದೇಶಿಯರ ನಂಬಿಕೆಯನ್ನು ನಿಜ ಮಾಡಿದೆ. ಕ್ರಿಕೆಟ್ ನಮ್ಮ ದೇಶದ ಮತ್ತು ನಮ್ಮ ಸ್ವಾಭಿಮಾನದ ಸಂಕೇತ ಬರಿ ಗೆಲುವೆ ನಮ್ಮ ಬೀಜ ಮಂತ್ರವಾಗಬೇಕು ಎಂದು ನಂಬಿರುವ ಕ್ರಿಕೆಟ್ ಹುಚ್ಚಿನ ಈ ದೇಶದ ಅಂಧಾನುವರ್ತಿಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿ ಬಿಡುತ್ತದೆ.

     ಕ್ರಿಕೆಟ್ ಮತ್ತು ಸಿನೆಮಾಗಳು ನಮ್ಮ ದೇಶದ ಬಹುತೇಕರ ದೌರ್ಬಲ್ಯಗಳು ಯಾಕೆಂದರೆ ನಾವು ಕುರುಡು ಅಭಿಮಾನಿಗಳು. ಬಹುತೇಕ ಅಬಾಲ ವೃದ್ಧರಾದಿಯಾಗಿ ಎಲ್ಲರೂ ಬಹು ಭಾವುಕರು. ಸಿನೆಮಾ ನಟ ನಟಿಯರಂತೆ ಕ್ರಿಕೆಟ್ ಆಟಗಾರರೂ ನಮಗೆ ಸಾಕ್ಷಾತ್ ದೇವರ ತರಹ ಅವರುಗಳನ್ನು ಆರಾಧಿಸುತ್ತೇವೆ . ನಮ್ಮ ದೇಶದಲ್ಲಿ ಮಿಂಚುವ ನಮ್ಮ ಆಟಗಾರರ ಆಟವನ್ನು ನೋಡಿ ಹೊಗಳಿ ಅಟ್ಟಕ್ಕೇ ರಿಸುವ ನಾವು ವಿದೇಶಗಳಲ್ಲಿ ಅವರ ನಿಕೃಷ್ಟ ಪ್ರದರ್ಶನವನ್ನು ಕಂಡು ಭೂಮಿಗಿಳಿದು ಹೋಗುತ್ತೇವೆ, ಅವರನ್ನು ಕೆಟ್ಟದಾಗಿ ಹಳಿಯುತ್ತೇವೆ ಅನಾಗರಿಕರಂತೆ ವರ್ತಿಸುತ್ತೇವೆ. ಈ ವರ್ತನೆ ಇನ್ನಿಲ್ಲದ ಭಾರವನ್ನು ನಮ್ಮ ಆಟಗಾರರ ಮೇಲೆ ಹೇರಿ ಅವರನ್ನು ಒತ್ತಡಕ್ಕೆ ಸಿಲುಕಿಸುತ್ತೇವೆ. ನಮ್ಮಲ್ಲಿ ಎಲ್ಲ ಕ್ರಿಕೆಟ್ ನೋಡುಗರೂ ಪ್ರಬುದ್ಧ ವಿಮರ್ಶಕರಾಗಿ ಬಿಟ್ಟಿದ್ದೇವೆ. ಗೃಹಿಣಿಯರೂ ತಮ್ಮ ದೈನಂದಿನ ಕೆಲಸ ಕಾರ್ಯದ ಪರಿವೆಯಿಲ್ಲದೆ, ಯುವ ಸಮೂಹ ತಮ್ಮ ಶಾಲಾ ಕಾಲೇಜುಗಳಿಗೆ ಮತ್ತು ಕೆಲಸ ಕಾರ್ಯಗಳಿಗೆ ಬಹುತೇಕ ತಿಲಾಂಜಲಿ ಹೇಳಿ ಟೆಲಿವಿಜನ್ ಮುಂದೆ ಸ್ಥಾಪಿತರಾಗುವುದು ಅವರ ಹವ್ಯಾಸ ವ್ಯಸನವಾಗುತ್ತಿರುವುದರ ದ್ಯೋತಕವೆನ್ನಬಹುದು. ಕ್ರಿಕೆಟ್ ಗಂಧ ಗಾಳಿಯೂ ಗೊತ್ತಿಲ್ಲದವರೂ ಕಮೆಂಟೇಟರಗಳು ಹೇಳುವುದನ್ನು ತಮ್ಮದೇ ಆದ ರೀತಿಯಲ್ಲಿ ಗ್ರಹಿಸುತ್ತ ವಿವರಿಸುತ್ತ ತಾವೆಷ್ಟು ಕ್ರಿಕೆಟ್ ಪರಿಣೀತರು ಎಂದು ಬಿಂಬಿಸಿಕೊಳ್ಳುತ್ತ ಹೋಗುತ್ತಾರೆ. ಇಂತಹ ಮನಸ್ಥಿತಿಯ ಕ್ರಿಕೆಟ್ ಅಂಧಾಭಿಮಾನಿಗಳು ಗೆಲುವನ್ನು ವೈಭವಿಕರಿಸುತ್ತ ಗೆಲುವನ್ನು ಒಪ್ಪದೆ ಅಸಹಜವಾಗಿ ವರ್ತಿಸುತ್ತ ಆಟಗಾರರ ಭಿತ್ತಿ ಚಿತ್ರಗಳನ್ನು ಸುಡುತ್ತ ಕೆಟ್ಟದಾಗಿ ಪ್ರತಿಕ್ರಿಯಿಸುತ್ತ ಒಂದು ರೀತಿಯ ಆತಂಕದ ಸ್ಥಿತಿಯನ್ನು ನಿರ್ಮಿಸಿ ಬಿಡುತ್ತಾರೆ. ನಮ್ಮ ಜನರ ಈ ಮನಸ್ಥಿತಿಗೆ ಟೆಲಿವಿಜನ್ ಮಾಧ್ಯಮಗಳಲ್ಲಿ ಬಿತ್ತರಿಸುವ ಎರಡು ದೇಶಗಳ ನಡುವೆ ನಡೆಯುವ ಪಂದ್ಯಗಳನ್ನು ಒಂದು  ರೀತಿಯ ಯುದ್ದವೆನ್ನುವ ರೀತಿ ಬಿಂಬಿಸುವ ರೀತಿಯ ಪದ ಪುಂಜಗಳೂ ಕಾರಣವಾಗುತ್ತವೆ. ಸ್ನೇಹ ಸೌಹಾರ್ದಗಳ ರೀತಿ ನಡೆಯಬೇಕಾಗಿರುವ ಪಂದ್ಯಗಳು ದ್ವೇಷದ ಮತ್ತು ಉದ್ವೇಗದ ಸ್ಥಿತಿಗೆ ತಲುಪುವಲ್ಲಿ ಇವುಗಳೂ ಕಾರಣವಾಗುತ್ತವೆ. ಇಂತಹ ವಿಪರ್ಯಾಸಗಳು ನಮ್ಮ ಭಾರತೀಯ ಉಪ ಖಂಡದಂತಹ ನೆಲಗಳಲ್ಲಿ ಮಾತ್ರ ನಡೆಯುವಂತಹವು.

     ಕ್ರಿಕೆಟ್ ಜನಕರ ನಾಡು ಇಂಗ್ಲಂಡ್ ತಂಡ ಲೀಗ್ ಹಂತದಲ್ಲಿಯೇ ಸೋತು ತವರು ಸೇರಿದೆ, ಅಲ್ಲಿಯೂ ಕಟು ಟೀಕೆಗಳಿವೆ ಮತ್ತು ವಿಷಾಧಗಳಿವೆ ಅದು ಅದೊಂದು ದಿನ ಮಾತ್ರ. ಮಾರನೆ ದಿನದಿಂದಲೆ ಅವರುಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಗ್ನ., ಇದು ಅಲ್ಲಿನ ಜನತೆಯ ಪ್ರಬುದ್ಧ ಮನಸ್ಥಿತಿಯ ಜೊತೆಗೆ ಕ್ರೀಡೆಯ ಸೋಲು ಗೆಲುವುಗಳಿಗೆ ಎಷ್ಟು ಮಾತ್ರದ ಮಹತ್ವ ಕೊಡಬೇಕು ಎನ್ನುವುದಕ್ಕೆ ಶ್ರೇಷ್ಟ ಉದಾಹರಣೆ. ಭಾರತೀಯ ಉಪ ಖಂಡದ ದೇಶಗಳ ವರ್ತನೆಯೆ ಒಂದು ರೀತಿಯ ವಿಕ್ಷಿಪ್ತತನದ್ದು. ಆಯಾ ದೇಶಗಳ ಜನಪ್ರಿಯ ಆಟಗಾರರು ನಿರೀಕ್ಷಿತ ಮಟ್ಟದಲ್ಲಿ ಆಡಲು ವಿಫಲರಾಗಿ ತಂಡ ಸೋತಾಗ ಅವರ ಭಿತ್ತಿ ಚಿತ್ರಗಳಿಗೆ ಬೆಂಕಿ ಹಚ್ಚುವುದು ಅವರ ಮನೆಗಳಿಗೆ ಕಲ್ಲು ತೂರುವುದು ಅವರ ಬಗೆಗೆ ಕಟ್ಟದಾಗಿ ಟ್ವಿಟ್ ಮಾಡುವುದು ಮುಂತಾದವು ನಡೆಯುತ್ತವೆ. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ನಡೆದ ವಿಶ್ವಕಪ್ ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಸೋತಾಗ  ಅಂಪೈರ್ ನೀಡಿದ ಎರಡು ತೀರ್ಪುಗಳು ಸಂಶಯಾ ಸ್ಪದವಾಗಿದ್ದವು ಎನ್ನುವುದನ್ನೆ ಅರಿರೇಕಕ್ಕೆ ಒಯ್ದು ಬಾಂಗ್ಲಾದೇಶದಲ್ಲಿ ಅಂಪೈರ್ ನಿರ್ಣಯದ ವಿರುದ್ಧ ಧಿಕ್ಕಾರ ಕೂಗುತ್ತ ಮೆರವಣಿಗೆ ನಡೆಸುತ್ತಿರುವುದು, ಆ ದೇಶದ ವಯೋವೃದ್ಧ ಧೀಮಂತ ರಾಜಕಾರಣಿ ನಾಯಕಿಯೊಬ್ಬರು ಜನ ಸಾಮಾನ್ಯರಂತೆ ಈ ಕುರಿತು ತನ್ನ ಅಸಮಾಧಾನವನ್ನು ವ್ಯಕ್ತ ಪಡಿಸುವುದು ಇವೆಲ್ಲ ಅಪಕ್ವ ನಡವಳಿಕೆಯ ಉದಾಹರಣೆಗಳು. ಕ್ರೀಡೆಯಲ್ಲಿ ಆಗಾಗ ಸಂಭವಿಸುವ ಅಂಪೈರ ನಿರ್ಣಯ ಕುರಿತು ಇಷ್ಟೊಂದು ತೀವ್ರತರವಾದ ಪ್ರತಿಭಟನೆಯೆ? ಇನ್ನು ಭಾರತ ಪಾಕಿಸ್ಥಾನಗಳು ಇಂತಹ ವರ್ತನೆಗಳಿಗೆ ಹೊರತಲ್ಲ. ಭಾರತ ಸೆಮಿ ಫೈನಲ್ ಆಟದಲ್ಲಿ ಸೋತಾಗ ವಿರಾಟ್ ಕೊಹ್ಲಿಯ ಪೋಸ್ಟರನ್ನು ನಮ್ಮ ದೇಶದಲ್ಲಿ ಅಲ್ಲಲ್ಲಿ ಸುಡಲಾಯಿತು. ಆತನ ಸೋಲಿಗೆ ಆತನ ಗೆಳತಿ ಕಾರಣಳೆಂದು ಟ್ವಿಟರನಲ್ಲಿ ದೂಷಿಸಲಾಯಿತು. ರಾಂಚಿಯಲ್ಲಿ ಧೋನಿ ವಿರುದ್ಧ ಸಹ ಅಸಮಾಧಾನದ ವಾತಾವರಣ ಕಂಡು ಬಂತು. ಇದು ಏನನ್ನು ತೋರಿಸುತ್ತದೆ ಎಂದರೆ ಭಾರತ ಉಪ ಖಂಡದಲ್ಲಿ ಕ್ರಿಕೆಟನಲ್ಲಿ ನಾವು ಅದ್ವಿತೀಯರು ನಮ್ಮ ತಂಡಗಳು ಸೋಲಬಾರದು ಎನ್ನುವ ಧೋರಣೆ.

     ಕ್ರೀಡೆಯ ಬಗೆಗೆ ಮೂಲ ಜ್ಞಾನವಿಲ್ಲದವರು ಮಾತ್ರ ಗೆಲುವನ್ನು ವೈಭವೀಕರಿಸುವುದು ಸೋಲನ್ನು ಪ್ರತಿಭಟಿಸುವುದು ಮಾಡಬಲ್ಲರು. ಈ ಪ್ರವೃತ್ತಿಯನ್ನು ಇನ್ಜೊಂದು ರೀತಿಯಲ್ಲಿ ನೋಡುವುದಾದರೆ ತಮ್ಮ ದೈನಂದಿನ ಬದುಕಿನ ಜಂಜಾಟ ಮತ್ತು ಒತ್ತಡಗಳಲ್ಲಿ ಬದುಕುವ ಜನ ಸಾಮಾನ್ಯರು ಸಂತಸದ ಕ್ಷಣಗಳಿಗಾಗಿ ಹಂಬಲಿಸುವವರು ವ್ಯತಿರಿಕ್ತ ಸಂಧರ್ಭಗಳಲ್ಲಿ ತಮ್ಮ ಮನಸ್ಥಿತಿಯನ್ನು ತಾವು ನಿಯಂತ್ರಿಸಿ ಕೊಳ್ಳಲಾಗದೆ ಇಂತಹ ಕಿರುಕುಳದ ಮನಸ್ಥಿತಿಗೆ ಇಳಿಯುತ್ತಾರೆ ಎಂದು ಕಾಣುತ್ತದೆ. ಇಲ್ಲಿ ಸಾಮಾಜಿಕ ಜವಾಬ್ದಾರಿ ವಿವೇಚನೆಯ ಕೊರತೆ ಗಳು ಇಂತಹ ವರ್ತನೆಗಳಿಗೆ ಕಾರಣವಾಗುತ್ತವೆ. ಇಂತಹ ಭಾವಪೂರ್ಣ ಕೆಲ ಭಾರತೀಯರ ಮನಸ್ಥಿತಿಯ ಈ ಸಂಧರ್ಭದಲ್ಲಿ ಗಾವಸ್ಕರ್, ತೆಂಡೂಲ್ಕರರ|ಂತಹ ಪ್ರಬುದ್ಧ ಆಟಗಾರರು ಕ್ರೀಡೆಯ ಮತ್ತು ಆ ದಿನದ ಪರಿಸ್ಥಿತಿಯ ವಿವರಣೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ನೋಡಿದ್ದಾರೆ. ವಿರಾಟ ಗೆಳತಿ ಅನುಷ್ಕಾಳ ನೆರವಿಗೆ ಇಡಿ ಬಾಲಿವುಡ್ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಮುಂತಾದವರು ಕೆಲ ಕ್ರೀಡಾಭಿಮಾನಿಗಳ ಅತಿರೇಕದ ವರ್ತನೆ ಖಂಡಿಸಿ ಹೇಳಿಕೆ ನೀಡಿ ಆಕೆಯ ಬೆಂಬಲಕ್ಕೆ ಬಂದಿದ್ದಾರೆ. ಈ ಕೋಪ ತಾಪವೆಲ್ಲ  ಕೆಲ ದಿನಗಳ ಕಾಲ ಮಾತ್ರ ಬರುವ ತಿಂಗಳ ಪ್ರಾರಂಭದ ದಿನಗಳಲ್ಲಿಯೆ ಐಪಿಎಲ್ ಕ್ರಿಕೆಟ್ ಟೂರ್ನಿ ಪ್ರಾರಂಭವಾಗಲಿದೆ ಖ್ಯಾತ ಕ್ರಿಕೆಟ್ ಆಡುವ ದೇಶಗಳ ತಾರಾ ಆಟಗಾರರು ವಿದಿಧ ತಂಡಗಳಡಿಯಲ್ಲಿ ಆಡಿ ರಂಜಿಸಲಿದ್ದಾರೆ, ಮತ್ತೆ ದಾಖಲೆಯ ಜನ ಸಮೂಹ ಕ್ರೀಡಾಂಗಣದಲ್ಲಿ ನೆರೆದು ಸಂಭ್ರಮಿಸಲಿದ್ದಾರೆ. ಆಷ್ರೇಲಿಯಾದ ಬೌನ್ಸಿ ಪಿಚ್ ಗಳಲ್ಲಿ ಪ್ರಬಲ ತಂಡಗಳೆದುರು ತಿಣುಕಾಡಿದ ನಮ್ಮ ತಾರಾ ಆಟಗಾರರು ನಮ್ಮ ದೇಶದ ನಿರ್ಜೀವ ಪಿಚಗಳಲ್ಲಿ ರನ್ನುಗಳ ಸುರಿಮಳೆಯನ್ನೆ ಹರಿಸಿ ಮೀಸೆ ತಿರುವುತ್ತಾರೆ, ಪೆವಿಲಿಯನ್ ಕಡೆಗೆ ಹೂಮುತ್ತುನ್ನು ರವಾನಿಸುತ್ತಾರೆ

     ಈಗ ಕ್ರಿಕೆಟನಲ್ಲಿ ಭಾರತವೆ ಬಿಗ್ ಬಾಸ್, ಭಾರತದಲ್ಲಿ  ಐಪಿಎಲ್ ಕ್ರಿಕೆಟ್ನಲ್ಲಿ ಹರಿವ ಹಣದ ಹೊಳೆ ಅಭಿಮಾನಿಗಳ ಪ್ರೀತಿಯ ಸುರಿಮಳೆ ವಿದೇಶಿಯ ಆಟಗಾರರನ್ನು ಆಕರ್ಷಿಸಿದೆ, ನಮ್ಮ ಕ್ರೀಡಾ ತಂಡಗಳ ಮಾಲಿಕರು ದುಬಾರಿಯ ಹಣ ಕೊಟ್ಟು ಅವರನ್ನು ಖರೀದಿಸುತ್ತಾರೆ, ಅವರು ಬರುತ್ತಾರೆ ಮತ್ತು ಆಡುತ್ತಾರೆ ನಮ್ಮ ದೇಶದ ಪಿಚ್ ಗಳ ಅನುಭವ ಪಡೆಯುತ್ತಾರೆ, ತಮ್ಮ ದೌರ್ಬಲ್ಯಗಳನ್ನು ತಿದ್ದಿ ಕೊಳ್ಳುತ್ತಾರೆ ಸಶಕ್ತರಾಗುತ್ತಾರೆ ತಮ್ಮ ತಮ್ಮ ದೇಶಗಳಿಗೆ ಮರಳಿ ದೇಶೀಯ ಮತ್ತು ಅಂತರ್ದೇಶೀಯ ಪಂದ್ಯಗಳಲ್ಲಿ ಆಡಿ ಶತಾಯ  ಗತಾಯ ಗೆಲ್ಲುತ್ತಾರೆ, ಇದಕ್ಕೆ ಉತ್ತಮ ಉದಾಹರಣೆ ಆಷ್ಟ್ರೇಲಿಯಾ ತಂಡ.  ಮೂರು ತಿಂಗಳುಗಳ ಕಾಲ ಮೀರಿ ನಮ್ಮ ತಂಡ ಅಲ್ಲಿಗೆ ತೆರಳಿದ್ದರೂ ಟೆಸ್ಟ, ಒಂದು ದಿನದ ಸರಣಿ ಮತ್ತು ವಿಶ್ವಕಪ್ ಸೆಮಿಫೈನಲ್ಲಿನಲ್ಲಿ ಒಂದೇ ಒಂದು ಬಾರಿ ಅವರ ಮೇಲೆ ನಮ್ಮ ತಂಡಕ್ಕೆ ಗೆಲ್ಲಲಾಗಲಿಲ್ಲ.

     ನಮ್ಮ ವಿಶ್ವಕಪ್ ಸೋಲಿನ ವಿಷಾದ ಪರ್ವದ ಈ ಸಂಧರ್ಭದಲ್ಲಿ  ನಮ್ಮ ಗ್ರೇಟ್ ಧೋನಿ ನೀಡಿದ ಹೇಳಿಕೆಗಳನ್ನು ಅರ್ಥೈಸಲು ಕಷ್ಟ ವಾಗುತ್ತದೆ. ಸೆಮಿ ಫೈನಲ್ ಸೋತ ನಂತರ ಒಂದು ಹೇಳಿಕೆ ನೀಡಿದ್ದಾನೆ. ಭಾರತ ಕ್ರಿಕೆಟ್ ತಂಡ ವಿಶ್ವಕಪ್ ನಲ್ಲಿ ಏಳು ಪಂದ್ಯಗಳಲ್ಲಿ ಉತ್ತಮವಾಗಿ ಆಡಲು ಶಮಿ, ಯಾದವ್ ಮತ್ತು ಮೋಹಿತರು ಕಾರಣ, ಆದ್ದರಿಂದ ಅವರನ್ನು ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವಂತೆ ಒತ್ತಾಯ ಮಾಡಬಾರದು, ಇವರುಗಳು ದೇಶಿಯ ಕ್ರಿಕೆಟ್ಟಿನಲ್ಲಿ ಹೆಚ್ಚು ಆಡಿಸದಂತೆ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಗಳಿಗೆ ಬಿಸಿಸಿಐ ಮನವಿ ಮಾಡಬೇಕು, ಸ್ಥಳೀಯ ಕ್ರಿಕೆಟ್ ಟೂರ್ನಿಗಳಲ್ಲಿ ಬಂದು ಆಡುವಂತೆ ಆಹ್ವಾನಿಸುತ್ತಾರೆ ಇದಕ್ಕೆ ಪ್ರತಿಯಾಗಿ ಅವರು ಪ್ರತಿ ಓವರಿಗೆ ಇಷ್ಟು ಎಂದು ಹಣ ಅಥವಾ ಚೆಕ್ ಕೊಡುವುದಿಲ್ಲ. ಹೀಗಾಗಿ ಈ ಪ್ರಮುಖ ಬೌಲರುಗಳಿಗೆ ಆಡುವಂತೆ ಒತ್ತಾಯ ಹೇರುವುದು ಸರಿಯಲ್ಲ ಎಂದು ಅಸಮಾಧಾನ ತೋಡಿ ಕೊಂಡಿದ್ದಾರೆ. ಒಂದು ದೃಷ್ಟಿಯಿಂದ ಇದು ಸರಿ ಎನಿಸಿದರೂ ದೇಶೀಯ ಕ್ರಿಕೆ್ಟಿನಲ್ಲಿ ಆಡಲು ಹೇಳಬಾರದು ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಮಾತು. ಇವರೆಲ್ಲ ಕ್ಲಬ್ ಕ್ರಿಕೆಟ್ಟಿನಲ್ಲಿ ಆಡಿ ಅನುಭವ ಪಡೆದು ತಾವಾಡುವ ರಾಜ್ಯ ತಂಡಗಳಿಗೆ ಆಡಿ ಪ್ತತಿಭೆ ತೋರಿಸಿ ಮೇಲೆ ಬಂದವರಲ್ಲವೆ? ಈಗ ಇವರೆಲ್ಲ ಏರಿದ ಎತ್ತರಕ್ಕೆ ಏರಲು ಇವರು ಆಡಿ ಬೆಳದು ಬಂದ ತಂಡಗಳು ಕಾರಣವಲ್ಲವೆ? ಇನ್ನು ಇವರಾಡುವ ಪ್ರತಿ ಓವರಿಗೆ ಹಣ ಕೇಳುವ ಧೋರಣೆ ಎಷ್ಟು ಸರಿ. ಈಗ ಇವರುಗಳು ರಾಷ್ಟ್ರೀಯ ಮತ್ತು ಐಪಿಎಲ್ ತಂಡಗಳಿಗೆ ಆಡಿ ಹಣ ಗಳಿಸುತ್ತಿರಬಹುದು ಈ ಮಟ್ಟಕ್ಕೇರುವ ಮೊದಲು ಇವರುಗಳು ಅವಕಾಶ ಕೇಳಿಕೊಂಡು ಬಂದವರಲ್ಲವೆ? ಈಗ ದೇಶದ ರಣಜಿ, ಇರಾಣಿ ಟೂರ್ನಿಗಳೆಲ್ಲ ಮುಗಿದಿವೆ ಎನ್ನುವುದು ಈ ಗ್ರೇಟ್ ನಾಯಕನಿಗೆ ತಿಳಿದಿಲ್ಲವೆ? ಇನ್ನು ಒಂದೇ ವಾರದಲ್ಲಿ ಐಪಿಎಲ್ ಟೂರ್ನಿಗಳು ಪ್ರಾರಂಭ ವಾಗಲಿವೆ ಅಲ್ಲಿ ಈ ಗ್ರೇಟ್ ಆಟಗಾರರು ಆಡಬಹುದೆ ? ವಿಶ್ವಕಪ್ ಕ್ರಿಕೆ್ಟಿನಲ್ಲಿ ಆಡಿ ದಣಿದು ಬಂದ ಇವರಿಗೆ ಐಪಿಎಲ್ ಪಂದ್ಯಗಳಲ್ಲಿ ಆಡಿದರೆ ಇನ್ನಷ್ಟು ದಣಿವಾಗುವುದಿಲ್ಲವೆ? ಈ ಕುರಿತು ನಮ್ಮ ಕ್ರಿಕೆಟ್ ತಂಡದ ನಾಯಕ ವಿವರಿಸಿಲ್ಲ, ಐಪಿಎಲ್ಲಿನಲ್ಲಿ ದುಡ್ಡು ಕೊಡುತ್ತಾರೆ ಅಲ್ಲಿ ಆಡಬಹುದು ಎನ್ನುವ ಧೋರಣೆ ಇರಬಹುದೆ? ಹಿಂದೆಲ್ಲ ತಂಡದಿಂದ ಬಿಡಲ್ಪಟ್ಟವರು ಗಾಯಾಳುಗಳಾದವರುಗಳು ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಪ್ರವೇಶ ಪಡೆದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡ ಉದಾಹರಣೆಗಳು ಅನೇಕ ಇವೆ. ಇನ್ನು ರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲೆಂಬ ಆಶಯವೂ ಇರುತ್ತದೆ. ಅವಕಾಶಗಳಿಗಾಗಿ ಕಾಯುತ್ತಿರುವ ಇಂತಹ ಯುವ ಪ್ರತಿಭೆಗಳ ಶ್ರಮಕ್ಕೆ ಧೋನಿಯ ಅನಿಸಿಕೆಯೇನು ಎನ್ನುವ ಪ್ರಶ್ನೆ ಎದುರಾಗುತ್ತದೆ.

     ಈ ಹೇಳಿಕೆಗೆ ಮೊದಲು ಈ ನಾಯಕಮಣಿ ಇನ್ನೊಂದು ಹೇಳಿಕೆಯನ್ನು ನೀಡಿದ್ದರು, ನಮ್ಮ ವಿಶ್ವಕಪ್ ತಂಡದಲ್ಲಿದ್ದ ಉಳಿದ ಬೆಂಚ್ ಸ್ಟ್ರೆಂಗ್ತ ಆಟಗಾರರು ಬೇಂಚ್ ಕಾಯಲಿ ಬಿಡಿ ಎಂದಿದ್ದರು. ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದ ತಂಡ ನಿರಾಯಾಸವಾಗಿ ಎಂಟರ ಘಟ್ಟಕ್ಕೆ ಏರುತ್ತಿತ್ತು. ನಮ್ಮ ತಂಡ ಲೀಗ್ ಹಂತದಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದ ನಂತರವಾದರೂ ಈಗ ಅವರು ಹೆಸರಿಸಿರುವ ಪ್ರಮುಖ ಆಟಗಾರರಿಗೆ ಒಬ್ಬೊಬ್ಬರಿಗಾದರೂ ವಿಶ್ರಾಂತಿ ನೀಡಿ ಅವರ ಬದಲಿಗೆ ಧವಳ ಕುಲಕರ್ಣಿ, ರವೀಂದ್ರ ಜಡೇಜಾ ಬದಲಿಗೆ ಅಕ್ಷರ ಪಟೇಲಗೆ, ಆಡಿದ ಏಳೂ ಪಂದ್ಯಗಳಲ್ಲಿ ಏನೂ ಪ್ರಭಾವ ಬೀರದ ಧೋನಿಯು ತನ್ನ ನೀಲಿ ಕಣ್ಣಿನ ಹುಡುಗ ಸುರೇಶ ರೈನಾ ಬದಲಿಗೆ ಅಂಬಟ್ಟಿ ರಾಯಡುಗೆ ಒಂದೆರಡು ಪಂದ್ಯಗಳಲ್ಲಿಯಾದರೂ ಅವಕಾಶ ನೀಡಿದ್ದರೆ ಇವರು ಹೆಸರಿಸಿದ ನೆಚ್ಚಿನ ಆಟಗಾರರಿಗೆ ವಿಶ್ರಾಂತಿ ಸಿಕ್ಕು ಪ್ರಮುಖ ಪಂದ್ಯಗಳಲ್ಲಿ ಇನ್ನೂ ಶಕ್ತಿಶಾಲಿಯಾಗಿ ಬೌಲ್ ಮತ್ತು ಬ್ಯಾಟ್ ಮಾಡಿ ತಂಡದ ಯಶಸ್ಸಿಗೆ ಸಹಕರಿಸುತ್ತಿದ್ದರೇನೋ. ಇದು ಯಾವುದೂ ಆಗಲಿಲ್ಲ. ನಮ್ಮ ಹಿರಿಯ ಹೆಸರಾಂತ ಆಟಗಾರರು ಮತ್ತು ಈಗಿನ ವೀಕ್ಷಕ ವಿವರಣೆಗಾರರು ಮತ್ತು ಕ್ರೀಡಾ ಅಂಕಣದ ಬರಹಗಾರರು ಸಹ ಗೆಲ್ಲುವ ತಂಡದ ಬದಲಾವಣೆ ಮಾಡಬಾರದು ಎಂದು ತೇಲಿಸಿ ಮಾತನಾಡಿದರೆ ವಿನಃ ವಸ್ತುನಿಷ್ಟವಾಗಿ ಯಾರೂ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲಿಲ್ಲ ಎನ್ನುವುದು ನಮ್ಮ ಕ್ರಿಕೆಟ್ಟಿನ ದುರಂತ. ಇನ್ನೂ ಒಂದು ಹೇಳಿಕೆಯನ್ನು ಈ ಧೋನಿ ನೀಡಿದ್ದಾನೆ ತನಗಿನ್ನೂ 32 ವರ್ಷ, ಇನ್ನೂ ಕೆಲ ವರ್ಷಗಳ ಕ್ರಿಕೆಟ್ ತನ್ನಲ್ಲಿ ಬಾಕಿ ಇದೆ ಎಂದು ಹೇಳಿದ್ದಾನೆ, ಆಡಲಿ ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ, ಆದರೆ ಇದೇ ಅಭಿಪ್ರಾಯದ ಕೆಲ ಹಿರಿಯ ಆಟಗಾರರಿಗೆ ಒಂದು ಗೌರವಯುತವಾದ ಬೀಳ್ಕೊಡುಗೆಯ ಅವಕಾಶವನ್ನು ಈತ ನೀಡಲಿಲ್ಲ. ಈತನೂ ಸಹ ನಮ್ಮ ದೇಶದ ರಾಜಕಾರಣಿಗಳಂತಾಗಿ ಬಿಟ್ಟನೆ ಎನ್ನುವ ಆತಂಕ ನಮ್ಮೆಲ್ಲರದು.

 

       ಚಿತ್ರಕೃಪೆ: ಅಂತರ್ಜಾಲ                                                              

                                                             

                                                ಹ. ಅ. ಪಾಟೀಲ, ರಿಪ್ಪನಪೇಟೆ

 

 

Rating
No votes yet

Comments

Submitted by nageshamysore Wed, 04/01/2015 - 19:47

ಪಾಟೀಲರೆ ನಮಸ್ಕಾರ. ವಿಶ್ವಕಪ್ ಪಂದ್ಯಾವಳಿಯ ಸ್ಥೂಲ ಮತ್ತು ಸೂಕ್ಷ್ಮ ವಿಶ್ಲೇಷಣೆಯ ಸುಧೀರ್ಘ ಲೇಖನ, ಅದರ ವಿವಿಧ ಮಜಲುಗಳನ್ನು ಚೆನ್ನಾಗಿ ತೆರೆದಿಟ್ಟಿದೆ. ನಿಜಕ್ಕೂ ಆಸ್ಟೇಲಿಯ ನ್ಯೂಜಿಲ್ಯಾಂಡ್ ತಂಡಗಳು ಫೈನಲ್ ತಲುಪಿದ ಅರ್ಹ ತಂಡಗಳಾದರು, ಅಲ್ಲಿ ನ್ಯೂಜಿಲ್ಯಾಂಡ್ ಆಡಿದ ತರ ನೋಡಿದರೆ, ಭಾರತವೆ ಅದಕ್ಕಿಂತ ಚೆನ್ನಾಗಿ ಪೈಪೋಟಿ ನೀಡಿತೇನೊ ಎನಿಸಿತು - ಅದಕ್ಕೆ ಮೊದಲು ಆಡಿದ್ದ ಸಮಯದಲ್ಲಿ ಭಾರತದ ಆಟ ತೀರಾ ಕಳಪೆ ಎನಿಸಿದ್ದರು! ಕ್ರಿಕೆಟ್ಟಿನಲ್ಲಿರುವ ಹಣ ಏನೆಲ್ಲಾ ಮಾಡಿಸುತ್ತದೆ, ಮಾತಾಡಿಸುತ್ತದೆ ಎನ್ನುವುದು ಆ ಆಟದಷ್ಟೆ ಸೋಜಿಗದ ವಿಷಯ ಬಿಡಿ. ರಾಜಕೀಯವಿಲ್ಲ ಎಂದರೆ ಬಹುಶಃ ಅಚ್ಚರಿಯಾಗುತ್ತದೇನೊ :-)

Submitted by H A Patil Sun, 04/05/2015 - 20:21

In reply to by nageshamysore

ನಾಗೇಶ ಮೈಸೂರುರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ತಾವು ಹೇಳಿದ ರೀತಿ ಸೆಮಿಫೈನಲ್ ನಲ್ಲಿ ಭಾರತ ಚೆನ್ನಾಗಿ ಆಡಿ ಸೋ ತಿತು ಆದರೂ ಈ ವಿಶ್ವಕಪ್‍ ನಲ್ಲಿ ತನ್ನ ಎರ ಡು ಮುಖಾಮುಖಿಯಲ್ಲಿ ಒಮ್ಮೆಯಾದರೂ ನ್ಯೂಜಿಲಂಡ್ ಆಷ್ಟ್ರೇಲಿಯಾವನ್ನು ಸೋಲಿಸಿತು ಆದರೆ ಭಾರತ ಚೆನ್ನಾಗಿ ಆಸಿದ್ದರೂ ಆಷ್ಟ್ರೇಲಿಯಾವನ್ನು ಒಮ್ಮೆಯೂ ಸೋಲಿಸಲಿಲ್ಲ ವೆಂಬುದನ್ನು ಗಮನದಲ್ಲಿರಿಸಿಕೊಂಡು ಆ ರೀತಿ ಬರೆದೆ ನಿಮ್ಮ ವಿವರವಾದ ಪ್ರತಿಕ್ರಿಯೆ ಖುಷಿ ನೀಡಿತು, ಧನ್ಯವಾದಗಳು.

Submitted by kavinagaraj Sun, 04/05/2015 - 16:04

ದೇಶಕ್ಕಾಗಿ ಆಡುವ ಕ್ರಿಕೆಟಿಗರು ಬರಲಿ ಎಂದು ಆಶಿಸುವುದಷ್ಟೇ ನಾವು ಮಾಡಬಹುದಾದುದು! ಉತ್ತಮ ವಿಮರ್ಶಾತ್ಮಕ ಲೇಖನ, ಪಾಟೀಲರೇ.
ವಂದನೆಗಳು,
ನಾಗರಾಜ್.

Submitted by H A Patil Sun, 04/05/2015 - 20:24

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ತಮ್ಮ ಆಶಯ ಸರಿ ದೇಶಕ್ಕೆ ಆಡುವವರು ಬರುವುದರ ಜೊತೆಗೆ ಪ್ರತಿಭಾವಂತರಿಗೆ ಸಕಾಲದಲ್ಲಿ ಅವಕಾಶಗಳು ದೊರೆಯಬೇಕು ಎನ್ನುವ ದೃಷ್ಠಕೋನವನ್ನು ಇಟ್ಟುಕೊಂ ಡು ಬರೆದ ಲೇಖನ ಧನ್ಯವಾದಗಳು.