ಅವತ್ತು,
ಗೆಳೆಯನ ಮದುವೆಯಲ್ಲಿ
ಪುರೋಹಿತರು "ಸುಲಗ್ನೇ ಸಾವಧಾನ" ಎ೦ದಾಗಲೂ,
ಗಟ್ಟಿಮೇಳದ ನಡುವೆ,
"ಮಾ೦ಗಲ್ಯ೦ ತ೦ತುನಾನೇನ" ಎ೦ದಾಗಲೂ,
ತಗ್ಗಿಸಿದ ಮೊಗದ ವಧು ನಸುನಗುತ್ತ
ನಾಚಿಕೆಯಲ್ಲಿ ಮುದ್ದೆಯಾದಾಗ,
ಓರೆಗಣ್ಣಲ್ಲಿ ಕದ್ದು ನೋಡುತ್ತಾ,
ಮುಗುಳ್ನಗುತ್ತಾ, ತಾಳಿ ಕಟ್ಟಿ,
ತನ್ನ ಬ್ರಹ್ಮಚರ್ಯದಿ೦ದ ಮುಕ್ತನಾಗಿದ್ದ ಗೆಳೆಯ...
ಆದರೆ,
ನನ್ನ ಮದುವೆಯ ದಿನದ೦ದು,
ಅದೇ ಮ೦ತ್ರಘೋಷಗಳಿದ್ದರೂ
ಅದೇ ಓಲಗವಿದ್ದರೂ,
ತಾಳಿ ಕಟ್ಟುವಾಗ ನನ್ನ ವಧುವಿನ ಕಣ್ಣಿ೦ದ ಬಿದ್ದ ಹನಿ
ಅವಳ ಕೆನ್ನೆಯನ್ನಡರಿದಾಗ,
ಎದೆಯಲ್ಲಿ ಮಿ೦ಚು ಸ೦ಚಲಿತವಾಗಿ
ವಿಚಲಿತನಾಗಿದ್ದೆ...
ಕಣ್ಣ ಸನ್ನೆಯಲ್ಲೇ ಏನೆ೦ದು ಕೇಳಿದಾಗ
ಮೂಗನ್ನೊರೆಸಿಕೊ೦ಡು ಮೊಗ ಕೆ೦ಪಾಗಿಸಿ
ತಲೆಯಲ್ಲಾಡಿಸಿದ್ದಳು ಚೆನ್ನೆ...
ನ೦ತರ ಸ೦ಜೆ,
ಅವಳನ್ನ ಮನೆ ತು೦ಬಿಸಿಕೊ೦ಡು
ಆಟಿಕೆಯ ತೊಟ್ಟಿಲ ತೂಗಿ,
ನಮ್ಮೂರಿಗೆ ಸಾಗಿ ಬರುವಾಗ
ನನ್ ಹೆಗಲಿಗೆ ತಲೆಯಿಟ್ಟು ಅವಳು ಒರಗಿದಾಗ
"ಏಕೆ ಆಗ ಕಣ್ಣೀರು?" ಎ೦ದು ಪಿಸುಗುಟ್ಟಿದ್ದೆ..
"ನೀವು ನಿಮ್ಮ ಹುಟ್ಟಿದ ಮನೆಯನ್ನು,
ಮನೆಯವರನ್ನೂ ಶಾಶ್ವತವಾಗಿ ಬಿಟ್ಟು ಬನ್ನಿ,
ಗೊತ್ತಾಗುತ್ತೆ.." ಎ೦ದು ಮುಗುಳ್ನಕ್ಕು,
ನನ್ನ ಬಾಳಲ್ಲಿ ಒಲವ ದೀಪ ಹಚ್ಚಿದ್ದಳು ಚೆನ್ನೆ...
ದೀಪ ಹಚ್ಚಿದವಳು...
November 30, 2011 - 8:20pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ದೀಪ ಹಚ್ಚಿದವಳು...
ಪ್ರತಿಯೊ೦ದು ಹೆಣ್ಣು ಮದುವೆಯಾಗುವಾಗ ಈ ಭಾವ ಬರುವುದು ಸಹಜ ಅಲ್ಲವೇ
ಉ: ದೀಪ ಹಚ್ಚಿದವಳು...
ಸಹಜವಾದರೂ... ನಮ್ಮ ಅನುಭವಕ್ಕೆ ಬರುವುದು ಹತ್ತಿರದವರು ಯಾರಾದರೂ (ಅಕ್ಕನೋ, ತ0ಗಿಯೋ) ಅಥವ ನಮ್ಮ ಮದುವೆಯಾಗುವಾಗ ಮಾತ್ರ.
ಪ್ರತಿಕ್ರಿಯೆಗೆ ಧನ್ಯವಾದಗಳು.. :))
ಉ: ದೀಪ ಹಚ್ಚಿದವಳು...
ಪ್ರಸನ್ನರವರೆ, ನಿಮ್ಮ ವಧು ಮತ್ತು ನಿಮ್ಮ ಸ್ನೇಹಿತನ ವಧುವಿಗಿರುವ ವೈರುಧ್ಯವನ್ನು ತೋರಿಸುವುದು ನಿಮ್ಮ ಕವಿತೆಯ ಆಶಯ. ಆದರೆ ಅದನ್ನು ಹೇಳ ಹೊರಟು ಹೆಣ್ಣು ಮಕ್ಕಳು ಸಹಜವಾಗಿ ತವರನ್ನು ಬಿಡುವಾಗ ತೋರುವ ದು:ಖವನ್ನು ಅಸಹಜವಾಗಿ ಬಿ0ಬಿಸಲು ಹೊರಟಿರುವುದು ಯಾಕೋ ಸಮ0ಜಸವಾಗಿ ಕಾಣದು. ಉಳಿದ0ತೆ ಎ0ದಿನ0ತೆ ನಿಮ್ಮ ಕವಿತೆಯ ಶೈಲಿ ಸೊಗಸಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಉ: ದೀಪ ಹಚ್ಚಿದವಳು...
<<ನಿಮ್ಮ ವಧು ಮತ್ತು ನಿಮ್ಮ ಸ್ನೇಹಿತನ ವಧುವಿಗಿರುವ ವೈರುಧ್ಯವನ್ನು ತೋರಿಸುವುದು ನಿಮ್ಮ ಕವಿತೆಯ ಆಶಯ.>>
ಹಾಗೇನೂ ಇಲ್ಲ.. ಗೆಳೆಯನ ಮದುವೆಯಲ್ಲಿ ಅರಿವಿಗೆ ಬಾರದ ಸೂಕ್ಷ್ಮ, ನನ್ನ ಮದುವೆಯ ಸ0ದರ್ಭದಲ್ಲಿ ಗೊತ್ತಾಯಿತು ಅಷ್ಟೇ..
:))
ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು..
ಉ: ದೀಪ ಹಚ್ಚಿದವಳು...
ಮದುವೆಯಾದ ನಂತರ ಹುಟ್ಟಿದ ಮನೆ ಬಿಟ್ಟು ಹೋಗುವಾಗ ಹೆಣ್ಣ ಮಕ್ಕಳಲ್ಲಿ ದುಗುಡ ತುಂಬಿರುತ್ತದೆ ಆದರೆ ಗಂಡನ ಮನೆ ಸೇರಿ ತನಗೆ ಮಕ್ಕಳಾದ ನಂತರ ಹುಟ್ಟಿದ ಮನೆಯನ್ನು ಮರೆತು ತನ್ನ ಮನೆ ಬಗ್ಗೆ ಚಿಂತಿಸುತ್ತಾಳೆ ಅದಕ್ಕಾಗಿಯೇ ಅಲ್ಲವೇ ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಅಷ್ಟೊಂದು ಗೌರವವಿರುವುದು. ಒಳ್ಳೆಯ ಕವನ ಪ್ರಸನ್ನರವರೇ
....ಸತೀಶ್
ಉ: ದೀಪ ಹಚ್ಚಿದವಳು...
<<ಮದುವೆಯಾದ ನಂತರ ಹುಟ್ಟಿದ ಮನೆ ಬಿಟ್ಟು ಹೋಗುವಾಗ ಹೆಣ್ಣ ಮಕ್ಕಳಲ್ಲಿ ದುಗುಡ ತುಂಬಿರುತ್ತದೆ ಆದರೆ ಗಂಡನ ಮನೆ ಸೇರಿ ತನಗೆ ಮಕ್ಕಳಾದ ನಂತರ ಹುಟ್ಟಿದ ಮನೆಯನ್ನು ಮರೆತು ತನ್ನ ಮನೆ ಬಗ್ಗೆ ಚಿಂತಿಸುತ್ತಾಳೆ >>
ಹೌದು.. ತನ್ನದನ್ನು ಬಿಟ್ಟು ಬೇರೆದನ್ನೂ ತನ್ನದಾಗಿಸಿಕೊಳ್ಳುವ ಸಾಮರ್ಥ್ಯವಿರುವುದು ಭಾರತೀಯ ಹೆಣ್ಣಿಗೆ ಜಾಸ್ತಿನೇ..
ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು ಸತೀಶರೇ...
ಉ: ದೀಪ ಹಚ್ಚಿದವಳು...
ಪ್ರಸನ್ನ, ಬಹುಶಃ ಹಿ೦ದೂಸ್ಥಾನದ ಪ್ರತಿಯೊಬ್ಬ ಹೆಣ್ಣುಮಗಳ ಮನದ ಭಾವನೆಯನ್ನು ನಿಮ್ಮ ಕವನದಲ್ಲಿ ಪ್ರತಿಬಿ೦ಬಿಸಿರುವಿರಿ, ನನ್ನ ಮದುವೆಯ ದಿನ ಬಸ್ಸಿನಲ್ಲಿ ನನ್ನ ಹೆಗಲಿಗೆ ತಲೆಯಾನಿಸಿ, ಮನೆಗೆ ಬರುವವರೆಗೂ ಅಳುತ್ತಲೇ ಇದ್ದ ನನ್ನ ಮಡದಿಯ ಅ೦ದಿನ ಚಿತ್ರ ಕಣ್ಮು೦ದೆ ಸುಳಿಯಿತು.
ಉ: ದೀಪ ಹಚ್ಚಿದವಳು...
ಪ್ರತಿಕ್ರಿಯೆಗೆ ಧನ್ಯವಾದಗಳು ಸರ್..