22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನನ್ನ peer-group

June 26, 2011 - 10:34am
krvinutha
        ಮತ್ತದೇ ಬೆಳಗಿನ ಬೆಳಕು. ಗಡಿಯಾರದ ಮುಳ್ಳಿನ ಜೊತೆಗೆ ನಾವೂ ಓಡುತ್ತೇವೆ. ಬೆಳಿಗ್ಗೆ ೫ಕ್ಕೆ ಏಳುವುದು ನಮಗೆ ಬೇಜಾರಾದರೂ ಇತರರಿಗೆ "ವ್ಯಕ್ತಿತ್ವ"ಕ್ಕೆ ಅಂಟಿದ ವಿಷಯವಾದ್ದರಿಂದ ಏಳುತ್ತೇವೆ. ಹಾಸಿಗೆ ಬಿಟ್ಟು ಎದ್ದ ಕೂಡಲೆ ಸೀದ ಅಡಿಗೆಮನೆಗೇ ತೆರಳುತ್ತೇನೆ. ಹಾಲು ಕಾಯಲು ಇಟ್ಟು, ಕಾಫ಼ಿ ಮೇಕರ್ ನಲ್ಲಿ ಪುಡಿ ಮತ್ತು ನೀರು ತುಂಬಿಸಿ ಸ್ವಿಚ್ ಒತ್ತಿ ನಂತರವೇ ಬಚ್ಚಲಿಗೆ ತೆರಳುತ್ತೇನೆ. ಮನಸ್ಸಲ್ಲೆ  "pre-empt the process"  ನೆನಪಿಸಿಕೊಂಡು ನಗುತ್ತೇನೆ. ಮಧ್ಯದಲ್ಲೊಮ್ಮೆ ಗಡಿಯಾರ ನೋಡುತ್ತೇನೆ, ಒಹ್, ಅದಾಗಲೇ ೧೫ ನಿಮಿಷಗಳು ಕಳೆದಿವೆ. ಸರಸರನೆ ಅಕ್ಕಿ, ಬೇಳೆ ಪಾತ್ರೆಗಳಿಗೆ ತುಂಬಿಸಿ, ತರಕಾರಿ ಹಾಕಿ ಕುಕ್ಕರ್ ಜೋಡಿಸುತ್ತೇನೆ. ಅಗೋ ಅಲ್ಲಿ, ಟಿಫ಼ಿನ್ ಡಬ್ಬ ತೊಳೆದಿಲ್ಲ, ಎಲ್ಲವನ್ನೂ ತೊಳೆಯುತ್ತೇನೆ. ಅಯ್ಯೋ, ಹಾಲು ಉಕ್ಕುತ್ತಿದೆ. ಧಡಾರನೆ ಜಿಗಿಯುತ್ತೇನೆ, ಹಾಲು ಉಕ್ಕಿಯೇ ಬಿಡುತ್ತದೆ, ಜೊತೆಗೆ ನಾನು ಜಿಗಿದ ರಭಸಕ್ಕೆ ಕೈ ತಾಗಿ ಪಾತ್ರೆಗಳೆರಡು ಬೀಳುತ್ತವೆ. ಅತ್ತೆ ಮಲಗಿದಲ್ಲಿಂದಲೇ ಗೊಣಗುತ್ತಾರೆ. ನಾನು ನನ್ನ ಅಕ್ಕ ಪಕ್ಕ ಇರುವುದನ್ನೆಲ್ಲ ಶಪಿಸುತ್ತೇನೆ. ಅಂತೂ ಕುಕ್ಕರ್ ಕೂಗಿ, ಅನ್ನ, ಹುಳಿ ಮಾಡಿ ಪುಟ್ಟನ ಡಬ್ಬಿ ಕಟ್ಟುವ ಹೊತ್ತಿಗೆ ೬ ಘಂಟೆ ಆಗಿಯೇ ಬಿಡುತ್ತದೆ.
 ಕೈಯಲ್ಲಿ ಎರಡು ಲೋಟ ಕಾಫ಼ಿ ಹಿಡಿದು ರೂಮ್ ಗೆ ಹೋಗುತ್ತೇನೆ. ಯಾವುದೇ ರಂಗಿನ ಭಾವನೆಗಳಿಗೆ ಆಸ್ಪದ ಕೊಡದೇ ಗಂಡನನ್ನು ನಿರ್ಧಾಕ್ಶಿಣ್ಯವಾಗಿ ಎಬ್ಬಿಸುತ್ತೇನೆ. ಅವ "ಪಿಚ್ ಪಿಚ್" ಎಂದುಕೊಂಡು ಏಳುವಾಗ ಕರುಣೆ ಉಕ್ಕಿ ಬಂದರೂ, ತೋರಿಸಿಕೊಳ್ಳದೇ ಕಾಫ಼ಿ ಲೋಟ ಕೈಯಲ್ಲಿ ತುರುಕುತ್ತೇನೆ. ಅದಾದಮೇಲೆ ಕಾಫ಼ಿ ಮುಗಿಯುವವರೆಗೂ ಅಗಾಧ ಮೌನ. ಅಲ್ಲಿಂದ ಪುಟ್ಟನನ್ನು ಎಬ್ಬಿಸುವ ಕೆಲಸ ಶುರು. ಸಮಯ ಮೀರಿ ಹೋಗುತ್ತಿದ್ದರೂ "ಚಿನ್ನಿ, ಪುಟ್ಟ" ಎಂತೆಲ್ಲ ಹೇಳಿ ಎಬ್ಬಿಸುವುದು ಬಲು ಪ್ರಯಾಸದ ಕೆಲಸ. ಅಂತೂ ಇಂತೂ ಜೋರು ಮಾಡಿಯೋ, ಒಂದೇಟು ಹಾಕಿಯೋ ಅವನನ್ನು ಸಿದ್ಧ ಮಾಡಿದರೆ ಒಂದು ಹಂತ ಮುಗಿದಂತೆ.
 
ನಾನು ಸ್ನಾನಕ್ಕೆ ಓಡುತ್ತೇನೆ. ಇತ್ತೀಚೆಗೆ ತಂದಿಟ್ಟ ಸೋಪ್ ಸಲೂಶನ್ ಬಳಸಿ, ಅದರ ಗಂಧದಲ್ಲಿ ತೇಲಿಹೋಗುತ್ತೇನೆ. ಸ್ನಾನದ ನಂತರ ಧರಿಸಲು ಹತ್ತಿಯ ಬಟ್ಟೆಯೇ ಆಗಬೇಕು  "formal"  ಆಗಿ ಕಾಣಲು.  deodourent  ಬೇಕು ಬೆವರು ನಾತವನ್ನು ಪರಿವರ್ತಿಸಲು. ಮುಖದ ತುಂಬ ಎಣ್ಣೆ ಸುರಿದಂತೆ ಕಂಡರೂ  sunscreen lotion  ಬೇಕು ತ್ವಚೆಯನ್ನು ಮೃದುವಾಗಿಡಲು. ಸ್ನಾನ ಮಾಡಿದ ನಂತರವೇ ಅನುಭವಕ್ಕೆ ಬರುವ ಮೈಯ ತಾಜಾತನವನ್ನು  body lotion ಇಂದ ಮುಚ್ಚಿಬಿಡುತ್ತೇನೆ. ಕೂದಲನ್ನು ತಿದ್ದಿ ಬಾಚುತ್ತೇನೆ. IT   ಜಗತ್ತಿನ ಒತ್ತಡಗಳಲ್ಲಿ ಅರ್ಧ ಕೂದಲು ಕಳೆದುಕೊಂದರೂ ಇರುವ ಕೂದಲಿಗೆ  shampoo, conditioner ಹಾಕಿ ಹೊಳಪಿಸುತ್ತೇನೆ. ತಿದ್ದಿ ಬಾಚಿದ ಕೂದಲನ್ನು   groom up ನೆನಪಿಸಿಕೊಂದು ಹಗುರಾಗಿಸುತ್ತೇನೆ. ೧೦೦೦ ರೂ. ಚಪ್ಪಲಿಯನ್ನು comfortable ಎನ್ನಿಸಿ ಧರಿಸಿ laptop ಚೀಲದೊಡನೆ ಹೊರಬೀಳುತ್ತೇನೆ. ಮನದೊಳಸಂಖ್ಯ ಬಾಂಬುಗಳು ಸ್ಫೋಟಿಸಲು ಸಿದ್ಧವಿದ್ದರೂ ಮುಖದ ಮೇಲೆ ಮಂದ ಮುಗುಳ್ನಗೆ ಹೊತ್ತು ದಿಟ್ಟ ಹೆಜ್ಜೆ ಇಟ್ಟು ನಡೆಯುತ್ತೇನೆ.
 
ಒಹ್! ಅವರು  unit head , ಇವರು  CEO, ಇವರು  director !!! ನನ್ನ ಮುಖ ಬಾಡುತ್ತದೆ. ನಾನು? ಪ್ರಶ್ನಿಸಿಕೊಳ್ಳುತ್ತೇನೆ. ಬರೀ   manager.  ಸಂಬಳ ಆರಂಕಿ ದಾಟಿತ್ತೇ? ಮನದಲ್ಲೇ "ಇನ್ನೂ ಇಲ್ಲ" ಎಂದುಕೊಳ್ಳುತ್ತೇನೆ.
 
 perfection  ನ ಹಿಂದೆ ಓಡುತ್ತಲೇ ಎಲ್ಲದಕ್ಕೂ  process  ಹಾಕುತ್ತೇನೆ.  "systems?"  ಪ್ರಶ್ನಿಸುತ್ತೇನೆ.  reviews  ಮಾಡುತ್ತೇನೆ.  reviews  ಗೆ ಒಳಗಾಗುತ್ತೇನೆ. ತಲೆಯ ಮೇಲಿನ ಅಧಿಕಾರಿ ಬೈದಿದ್ದನ್ನು ಇನ್ನಾವುದೊ ರೀತಿ  positive  ಶೀರ್ಷಿಕೆಯಡಿ ಕೆಳಗಿನವರಿಗೆ ವರ್ಗಾಯಿಸುತ್ತೇನೆ. ಹತ್ತಿಯ ವಸ್ತ್ರ ಧರಿಸಿ, ಎಣ್ಣೆ ಮೂತಿ ಮಾಡಿಕೊಂಡು, ವಾಸನೆ ಓಡಿಸುವ ದ್ರಾವಣ ಪೂಸಿ ಅದರ ವಾಸನೆ ಹೊರಡಿಸುತ್ತಾ ಜೋರು ದನಿಯಲ್ಲಿ "ಆಯಿತೇ ಕೊಟ್ಟ ಕೆಲಸ?" ಎಂದು ವಿಚಾರಿಸುತ್ತಾ ಗಂಭೀರವದನಳಾಗಿ ಓಡಾಡುವ ನಾನು manager   ಬದಲಾಗಿ ನಮ್ಮ ಕೆಳಗಿನವರಿಗೆ Hitler ತರಹ ಕಾಣುತ್ತೇನೆ. ದಿನಪೂರ್ತಿ ಅಲ್ಲಿಂದಿಲ್ಲಿ ಓಡಾಡಿ, ಗಂಟಲು ಹರಿದುಕೊಂಡು ಮಾತಾಡಿ, ಅವರಿವರೊಂದಿಗೆ ಗುದ್ದಾಡಿ ಕಡೆಗೆ ಸುಸ್ತಾಗಿ ಕುಳಿತುಕೊಳ್ಳುತ್ತೇನೆ.
 
mail ಒಂದು ಗಮನ ಸೆಳೆಯುತ್ತದೆ. "ನಿಮ್ಮ ಸಂಬಳವನ್ನು ೯೫೦೦೦ ಗಳಿಂದ ೧೦೩೦೦೦ಕ್ಕೆ ಹೆಚ್ಚಿಸಿದ್ದೇವೆ" ಎಂಬ ಸಾಲನ್ನು ಹತ್ತು ಬಾರಿ ಓದುತ್ತೇನೆ. ಪ್ರಳಯಾಂತಕ ಕೋಪ ಬರುತ್ತದೆ. ನನಗೆ ಹೇಳಿದ್ದೊಂದು, ಈತ ಕೊಟ್ಟಿರುವುದೊಂದು - ಕೋಪದಲ್ಲಿ ಮೈ, ಮನ ಮತ್ತು ತಲೆ - ಎಲ್ಲ ಬಿಸಿಯಾಗುತ್ತವೆ. ಹಣದುಬ್ಬರಕ್ಕಿಂತ ಕಡಿಮೆ ಈ ಭತ್ಯೆ ಎಂದು ಶಪಿಸುತ್ತೇನೆ. ಈ ವರ್ಷ ಆ ಹೊಸ  manager  ಇರದಿದ್ದರೆ, ನನಗೆ ಇನ್ನೂ ಹೆಚ್ಚಿನ ರಾಂಕಿಂಗ್ ಬಂದಿರುತ್ತಿತ್ತು. ನನ್ನ peer group ಸರಿ ಇಲ್ಲ ಎಂದುಕೊಳ್ಳುತ್ತೇನೆ. ನಾನು ಬರೀ manager ಎಂದುಕೊಳ್ಳುತ್ತೇನೆ.
 
ಸಪ್ಪೆ ಮೋರೆಯೊಂದಿಗೆ, ಪುಟ್ಟನೊಂದಿಗೆ ಮನೆಗೆ ಹಿಂದಿರುಗುತ್ತೇನೆ. ಅಪ್ಪ, ಅಮ್ಮ ಮನೆಗೆ ಬಂದಿರುತ್ತಾರೆ. ಅಮ್ಮ ಮುಗುಳ್ನಗುತ್ತಾರೆ. ಅಪ್ಪ ಸಂತೋಷದ ನೋಟ ನೀಡುತ್ತಾರೆ. ನಮ್ಮವರೇ ಸಂಬಂಧಿಕರು "ಚೆನ್ನಾಗಿದೀಯೇನಮ್ಮ" ಎಂದು ಕೇಳುತ್ತಾರೆ. ನಾನು ನಿಶ್ಯಬ್ಧ ಮುಗುಳ್ನಗೆಯೊಂದನ್ನಿತ್ತು ಬಾತ್‍ರೂಮ್ ಸೇರುತ್ತೇನೆ. ಹೊರಗೆ ಮಾತು ಕೇಳಿಸುತ್ತದೆ.
 
"ಏನೇ ಹೇಳಿ ಸರ್, ನಿಮ್ಮ ಮಗಳು ಬಹಳ ಬುದ್ಧಿವಂತೆ. ಒಳ್ಳೆ ಕೆಲಸದಲ್ಲಿದ್ದಾಳೆ. ಒಳ್ಳೆ ಸಂಬಳ ತರ್ತಾಳೆ. ಮಗುವನ್ನೂ ನೋಡಿಕೊಂಡು ಸಂಪಾದನೆನೂ ಮಾಡಿಕೊಂಡು ಇದ್ದಾಳೆ. ಈ ಛಲ ಬಹಳ ಅಪರೂಪ"
 
ಅಪ್ಪ ದನಿಗೂಡಿಸುತ್ತಾರೆ. "ಮುಂಚಿನಿಂದಲೂ ಹೀಗೆ, ಆಟ ಪಾಠಗಳಲ್ಲಿ ಸದಾ ಮುಂದು. ೧೦ ನೇ ತರಗತಿಯಲ್ಲಿ ತಲ್ಲೂಕಿಗೇ ಮೊದಲು ಬಂದವಳು. ೨-೩ ವರ್ಷ ಓದಿನಲ್ಲಿ ಅಂತರವಿದ್ದರೂ, ದೂರ ಶಿಕ್ಷಣದಲ್ಲಿ ಓದಿ ಮಾಸ್ಟರ್ ಡಿಗ್ರೀ ಮಾಡಿದ್ದಾಳೆ. ಅವಳ ವಯಸ್ಸಿನವರೆಗಿಂತ ಹಿಂದೇನೂ ಇಲ್ಲ, ಚೆನ್ನಾಗಿ ಮುಂದೆ ಬಂದಿದ್ದಾಳೆ. ಈಗ ನೋಡಿ  manager ಆಗಿದ್ದಾಳೆ."
 
ಬಾತ್‍ರೂಮ್ ನಲ್ಲಿ ನನ್ನ ಮುಖ ಎಣ್ಣೆಯಿದ್ದೇ ಅರಳುತ್ತದೆ :-) ಸಪ್ಪೆ ಮೋರೆಯ ಬರೀ manager ಈಗ MANAGER ಆಗಿ ಕಾಣುತ್ತೇನೆ. ಮುಖದ ಎಣ್ಣೆಯನ್ನು ತೊಡೆದು, ಸೋಪ್‍ನಿಂದ ಚೆನ್ನಾಗಿ ತೊಳೆದು, ಮುಖದ ತುಂಬಾ ನಗುವಿನೊಂದಿಗೆ ಹೊರಬರುತ್ತೇನೆ. ಅಪ್ಪನ ಪಕ್ಕದಲ್ಲಿ ಕೂಡುತ್ತೇನೆ. 
 
ಹಿಡಿದಿಡಲಾಗದ ಅತ್ತ್ಯುತ್ಸಾಹದೊಂದಿಗೆ, ತಣ್ಣನೆಯ ಸ್ವರದಲ್ಲಿ ಹೇಳುತ್ತೇನೆ. "ನನಗೆ ಸಂಬಳ ೧ ಲಕ್ಷ ದಾಟಿತು ಅಪ್ಪ". ಅಪ್ಪ ಸಂತೋಷದಲ್ಲಿ ಹಿಗ್ಗಿ ಹೀರೆಕಾಯಿ ಆಗುತ್ತಾರೆ. ಕಣ್ಣಲ್ಲಿ ನೀರುಕ್ಕಿಸಿ ನನ್ನ ತಲೆ ನೇವರಿಸಿ "ದೇವರು ದೊಡ್ಡವನು, ಎಲ್ಲ ಒಳ್ಳೆದಾಗಲಮ್ಮ" ಎನ್ನುತ್ತಾರೆ. ಅವರ ಮಾತುಗಳು ನನ್ನ ಸುತ್ತಲೇ ಪರಿಭ್ರಮಿಸುತ್ತವೆ, ನನ್ನ ಸಾಧನೆಗಳು, ನನ್ನ ಕಷ್ಟಗಳು, ನನ್ನ ರೀತಿನೀತಿಗಳ ಗುಣಗಾನ ಪ್ರಾರಂಭವಾಗುತ್ತದೆ. ಎದುರಿನ ಕನ್ನಡಿಯಲ್ಲಿ ನನಗೆ  MANAGER ಕಾಣುತ್ತಾಳೆ. ಈ peer group ನಲ್ಲಿ ಅತಿ ಹೆಚ್ಚಿನ ಅಂಕ ಪಡೆದು ಎದ್ದು ನಿಂತ ಅನುಭವವಾಗುತ್ತದೆ. ಅಪ್ಪನ ಹೆಮ್ಮೆಯ ಭಾವದಲ್ಲಿ ಅಸ್ತಿತ್ವ ಪಡೆದ ನಾನು, ಅವರ ಕಣ್ಣುಗಳಲ್ಲಿ ಹೆಚ್ಚು ಹೊಳಪಾಗಿಯೇ ಕಾಣುತ್ತೇನೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.9 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಸುಮ ನಾಡಿಗ್ on

ಸರಳವಾಗಿ ಬರೆದಿದ್ದೀರಿ. ತುಂಬ ಇಷ್ಟವಾಯಿತು ಲೇಖನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by krvinutha on

ಧನ್ಯವಾದಗಳು ಸುಮಾ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಈ ಎಲ್ಲಾ ಜಂಜಾಟಗಳ ನಡುವೆ ಸಂಪದದಲ್ಲಿ ಬರೆಯುತ್ತಿರುವುದೇ ಸಾಹಸ! ಧನ್ಯವಾದ. ನನ್ನ ಅಳಿಯ ನಿದ್ದೆಯಲ್ಲಿ ಕನವರಿಸುತ್ತಲೇ ಪ್ರಾಜೆಕ್ಟ್ ಬಗ್ಗೆ ಸಲಹೆ/ನಿರ್ದೇಶನ ಕೊಡುತ್ತಿರುತ್ತಾನೆ, ಮಗಳು ನೆಮ್ಮದಿಯಿಂದ ನಿದ್ದೆ ಮಾಡುವಂತೆ ಎಬ್ಬಿಸಿ ಹೇಳುವವರೆಗೂ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by krvinutha on

ನಿಜಕ್ಕೂ ನಮ್ಮ ಯಶಸ್ಸು ಹಣದಲ್ಲಿ ಅಡಗಿಲ್ಲ. ಆರಂಕಿಯ ಸಂಬಳದಲ್ಲಿ ಅಡಗಿಲ್ಲ. ಅಪ್ಪ-ಅಮ್ಮನ ಹೆಮ್ಮೆಯ ಭಾವಗಳಲ್ಲಿ, ಸಂಗಾತಿಯ ಒಲವಿನ ಭಾವಗಳಲ್ಲಿ, ಪುಟ್ಟು ಕಂದನ ಮೃದು ಸ್ಪರ್ಶಗಳಲ್ಲಿ. ನಮ್ಮ peer-group ಕಛೇರಿಯಲ್ಲಿ ಇಲ್ಲ. ನಮ್ಮ ಮನವೊಪ್ಪುವ ವ್ಯಕ್ತಿಗಳ ನಡುವೆ ಇದೆ. ಅವರಿಂದ ಕಲಿಯುವಲ್ಲಿ, ಕಲಿಸುವಲ್ಲಿ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

+೧
ಲೇಖನ ಚೆನ್ನಾಗಿದೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by krvinutha on

ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on

+೧

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pramods1729 on

ಉತ್ತಮವಾದ ಸರಳವಾದ ಬರಹ .. ಓದಿಸಿಕೊಂಡುಹೋಯಿತು ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by krvinutha on

ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vani shetty on

ಚೆನ್ನಾಗಿ ಬರೆದಿದ್ದೀರಿ ..manager ಜೀವನ ಇಷ್ಟು ಸರಳ ವಾಗಿ ಇರುತ್ತೆ ಅಂತ ಗೊತ್ತಿರಲಿಲ್ಲ .ನಮಗೂ ಇದ್ದಾರೆ great manager!.ಆಕೆಯ ಹಾವ, ಭಾವ,ಆಹಾರ ಪದ್ಧತಿ,ಮಾತಾಡೋ ರೀತಿ ನೋಡಿದರೆ ಈ ಲೋಕದವರಲ್ಲವೇ ಅಲ್ಲ ಅನಿಸಿಬಿಡುತ್ತೆ. ಇನ್ನು " IT ಜಗತ್ತಿನ ಒತ್ತಡಗಳಲ್ಲಿ ಅರ್ಧ ಕೂದಲು ಕಳೆದುಕೊಂದರೂ ಇರುವ ಕೂದಲಿಗೆ ..........ಹ್ಮ್..ಟೆನ್ಶನ್ ತಗೊಳ್ಳದೆ ಇದ್ದರೂ ಇಲ್ಲಿನ ನೀರು, ನಮ್ ತಲೇಲಿ ಕೂದಲು ಸಮೃಧ್ಧವಾಗಿರೋದನ್ನು ಸಹಿಸೋದಿಲ್ಲಾರೀ :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by krvinutha on

ನೀವು ಹೇಳಿದ್ದು ನಿಜ. ಹಿಂದೊಮ್ಮೆ "ಉದ್ದ ಕೂದಲಿನ ಹುಡುಗಿ" ಅನ್ನಿಸಿಕೊಂಡಿದ್ದ ನಾನು, ಈಗ ಮೋಟು ಜಡೆಯೊಂದಿಗೆ ಓಡಾಡುವಾಗ ಬೇಸರವಾಗುತ್ತದೆ. Hair Health ಅನ್ನೋದು ಈಗ ಬರೀ ಹೊಳಪಿನಲ್ಲಷ್ಟೇ ಅಳೆಯುವಂತಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ನಿಮ್ಮ ಬರಹ ಓದಿ ನನ್ನ ಅಮ್ಮನ ಕೆಲಸ ಜ್ಞಾಪಕಕ್ಕೆ ಬಂತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by krvinutha on

ನಿಮ್ಮ ತಾಯಿ ಕೂಡ ಕೆಲಸ ಮಾಡುತ್ತಿದ್ದರೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಯಾರ ತಾಯಿ ಕೆಲಸ ಮಾಡುವುದಿಲ್ಲ ಹೇಳಿ :)

ಬೆಳಗ್ಗೆ ಎದ್ದು, ಕಸ ಗುಡಿಸಿ, ಮನೆ (ಮಲೆನಾಡಿನ ಮನೆ) ಒರೆಸಿ, ರಂಗೋಲಿ ಹಾಕಿ, ನೀರು ಕಾಯಿಸಿ , ಮಕ್ಕಳನ್ನು ಎಬ್ಬಿಸಿ, ತಿಂಡಿ, ಊಟ ರೆಡಿ ಮಾಡಿ, ಶಾಲೆಗೆ ಹೊರಡಿಸಿ, ಅಪ್ಪನಿಗೆ ತಿಂಡಿ ಬಡಿಸಿ, ಆಫೀಸಿಗೆ ಊಟ ಹಾಕಿ, ಅಜ್ಜನನ್ನು ಎಬ್ಬಿಸಿ, ಅವರ ಹಲ್ಲುಜ್ಜಿ, ಮುಖ ತೊಳೆಸಿ ತಿಂಡಿ ಹಾಕಿ, ಆಮೇಲೆ ೪-೫ ಆಳುಗಳಿಗೆ ತಿಂಡಿ ಕೊಟ್ಟು ಅವರಿಗೆ ಮಧ್ಯಾಹ್ನಕ್ಕೆ ಊಟದ ಡಬ್ಬ ಹಾಕಿ, ಅಜ್ಜಿಗೆ ತಿಂಡಿ ಕೊಟ್ಟು. ಆಮೇಲೆ ತೋಟಕ್ಕೆ ಅಥವಾ ಗದ್ದೆಗೆ ಹೋಗಿ ಅಲ್ಲಿ ಕೆಲಸ ಮಾಡಿ ಮತ್ತೆ ಸಂಜೆ ಇದು ನಿತ್ಯದ ದಿನಚರಿಯಾಗಿತ್ತು.

ಈ ನಡುವೆ ಕೆಲವಿಲ್ಲ ಅಂದರೆ ನಾವು ಇಲ್ಲಿದ್ದೇವೆ, ಆಳುಗಳ ಸಂಖ್ಯೆ ಸ್ವಲ್ಪ ಕಡಿಮೆ, ಅಜ್ಜ ಇಲ್ಲ, ಆದರೂ ಅದೇ ದಿನಚರಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by krvinutha on

ನೀವು ಹೇಳುತ್ತಿರುವುದು ಖಂಡಿತ ಸತ್ಯ. ನಮ್ಮದು ಓಡುವ ದಿನಚರಿ. ಅದರಲ್ಲಿ "ಬದುಕುವುದು" ಕೆಲವು ಕ್ಷಣಗಳು ಮಾತ್ರ. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on

ಕಸ್ಟಮರ್ ಕೇರ್ ಗೆ ಫೋನ್ ಮಾಡಿ ನಾನು ಇಂಗ್ಲಿಷ್ ನಲ್ಲಿ ಮಾತಾಡುವುದನ್ನೂ ನನ್ನಪ್ಪ ನಾನೇನೋ ಸಾಹಸ ಮಾಡುತ್ತಿರುವಂತೆ ಪಕ್ಕದಲ್ಲಿ ಕಣ್ಣರಳಿಸಿ ಕೂತು ಕೇಳಿಸಿಕೊಳ್ಳುತ್ತಿದ್ದರು. ಪೋಷಕರು ಯಾವತ್ತು ಅಷ್ಟೇ ನಮ್ಮ ಸಣ್ಣ ಸಣ್ಣ ಗೆಲುವಗಳನ್ನು ದಿಗ್ವಿಜಯ ಎಂಬಂತೆ ಆಚರಿಸುತ್ತಾರೆ, ಇದ್ದುದ್ದರಲ್ಲಿ ತೃಪ್ತಿಪಡದೆ, ಹೆಚ್ಚಿನದಕ್ಕೆ ಹಂಬಲಿಸಿ ನರಳುವುದು ನಾವೇ. ಚೆನ್ನಾಗಿದೆ ಎಂದರೆ ಕ್ಲೀಷೆ ಕಮೆಂಟಾದೀತು, ನೀವು ಬರೆದಿರುವುದು ನನ್ನ ಯೋಚನೆಯ ಒಂದು ಭಾಗ. ಆಪ್ತ ಬರಹ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by krvinutha on

ತುಂಬಾ ಧನ್ಯವಾದಗಳು ಹೇಮಾರವರೆ. ಎಲ್ಲಿ ಗೆಲ್ಲದಿದ್ದರೂ ನಮ್ಮ ಆಪ್ತರ peer-group ನಲ್ಲಿ ಗೆಲ್ಲುವುದು ನಿಜಕ್ಕೂ ದಿಗ್ವಿಜಯವೇ. ಕುಟುಂಬದಿಂದ ಪ್ರೋತ್ಸಾಹ ನಿಜಕ್ಕೂ ನೆಮ್ಮದಿ ನೀಡುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil_harihar on

ಈ ನಿಮ್ಮ(ಹೆಣ್ಣಿನ) ಮತ್ತು ದೊಡ್ಡವರ ಅಭಿಮಾನದ ಸ್ಯೆಕಾಲೋಜಿಕಾಲ್ ಬ್ಯಾಡ್ ಎಫ್ಫೆಕ್ಟ್ನಿಂದ ಗ್ಲೋಬಲ್ ವಾರ್ಮಿಂಗ್ ಆಗುವ ಸಾಧ್ಯತೆಗಳಿವೆ , ಎಚ್ಚರಿಕೆ . . . .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.