19
June
2013

ನಮಗೇನು ಬೇಕು?

July 17, 2012 - 9:34pm
asuhegde

ಅಪ್ಪಯ್ಯ ಹೇಳಿದ್ದ ಕತೆ ೦೫

ನಮಗೇನು ಬೇಕು?


ಹೆಚ್ಚಾಗಿ ಮಾವಿನ ಮರಗಳಲ್ಲಿ ಹಾಗೂ ಗೇರು ಮರಗಳಲ್ಲಿ, ತಿಳಿಯಾದ ಕೆಂಪು-ಕೇಸರಿ ಬಣ್ಣದ ಹಾಗೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ ಇರುವೆಗಳು ಅಡ್ಡಾಡುತ್ತಿರುತ್ತವೆ. ಅವುಗಳು ನಮ್ಮ ಮೈಮೇಲೆ ಹರಿದಾಡಿದರೆ, ನಮ್ಮನ್ನು ಕಡಿಯದೇ ಇರುವುದಿಲ್ಲ. ಕಡಿದರೆ ವಿಪರೀತ ಉರಿತ. ಅವುಗಳಿಗೆ ನಾವು "ತಬುರು" ಎಂದು ಕರೆಯುತ್ತಿದ್ದೆವು. ಬಹುಷಃ ಅದು ತುಳು ಭಾಷೆಯ ಪದವಾಗಿರಬಹುದು. ಕನ್ನಡದಲ್ಲಿ ಏನನ್ನುತ್ತಾರೋ ಗೊತ್ತಿಲ್ಲ. ನಮ್ಮನ್ನು ಕಡಿವ ಆ ತಬುರುಗಳನ್ನು ನಾವು ಹಿಸುಕಿ ಹಾಕುವುದು ಸರ್ವೇ ಸಾಮಾನ್ಯವಾಗಿತ್ತು.

ಇದೇಕೆ ಹೀಗೆ? ಎಂದು ನಾವು ಬಾಲ್ಯದಲ್ಲಿ ಒಮ್ಮೆ ನಮ್ಮ ಅಪ್ಪಯ್ಯನವರನ್ನು ಕೇಳಿದ್ದಾಗ ಅವರು ಹೇಳಿದ್ದ ಮಾತುಗಳಿವು.


ಒಮ್ಮೆ ಈ ತಬುರುಗಳೆಲ್ಲಾ ಒಂದು ಸಭೆ ನಡೆಸಿದವು. ನಮ್ಮನ್ನು ಮನುಜರು ಹಿಸುಕಿ ಹಿಸುಕಿ ಸಾಯಿಸುತ್ತಿದ್ದಾರೆ. ಇದನ್ನು ತಡೆಯಲು ನಾವು ದೇವರ ಮೊರೆ ಹೋಗೋಣ. ತಪಸ್ಸು ಮಾಡಿ ದೇವರಲ್ಲಿ ವರ ಬೇಡೋಣಎಂದು ನಿರ್ಧರಿಸಿದವು. ಒಂದು ಸುಮುಹೂರ್ಥದಲ್ಲಿ, ಎಲ್ಲಾ ತಬುರುಗಳೂ ತಪಸ್ಸಿಗೆ ಕೂತು ಬಿಟ್ಟವು. ಕೊನೆಗೂ ದೇವರು ಪ್ರತ್ಯಕ್ಷರಾಗಿ ನಿಮ್ಮ ಸಮಸ್ಯೆ ಏನು? ಏನು ಬೇಕಾಗಿದೆ? ಒಂದು ವರ ನೀಡುತ್ತೇನೆ. ಬೇಡಿಕೊಳ್ಳಿಅಂದರು. ಆಗ ಆ ತಬುರುಗಳೆಲ್ಲಾ ನಾನು ಕೇಳುತ್ತೇನೆ, ನಾನು ಕೇಳುತ್ತೇನೆ ಎಂದು ಹಾರಾಡತೊಡಗಿದವು. ಇದನ್ನು ಕಂಡ ದೇವರು ನಿಮ್ಮಲ್ಲಿ ಯಾರಾದರೂ ಒಬ್ಬರು, ಒಂದು ವರ ಕೇಳಿ, ನೀಡುತ್ತೇನೆಅನ್ನುತ್ತಾರೆ.

 

ಆಗ ಒಂದು ತಬುರು, “ಸುಮ್ಮನಿರಿ ನಾನು ಕೇಳುತ್ತೇನೆಎಂದು ಅನ್ಯ ತಬುರುಗಳನ್ನೆಲ್ಲಾ ಸುಮ್ಮನಿರಿಸಿ ದೇವರೇ, ನಮ್ಮ ಸಮಸ್ಯೆ ಏನೆಂದರೆ, ನಾವು ಯಾವ ಮನುಜರನ್ನು ಕಡಿಯುತ್ತೇವೆಯೋ, ಆ ಮನುಜರು ನಮ್ಮನ್ನು ಹಿಸುಕಿ ಹಿಸುಕಿ ಸಾಯಿಸುತ್ತಿದ್ದಾರೆ. ಹಾಗಾಗಿ ಕಡಿದ ಕೂಡಲೇ ಸಾಯುವಂತೆ ವರ ನೀಡಿ ನಮಗೆ’’’ ಎಂದು ಬೇಡಿಕೆ ಸಲ್ಲಿಸುತ್ತದೆ. ಕೂಡಲೇ ದೇವರು ತಥಾಸ್ತುಎಂದು ನುಡಿದು ಅದೃಶ್ಯರಾಗುತ್ತಾರೆ.

 

ತಬುರುಗಳೆಲ್ಲಾ ಸಂತೋಷದಿಂದ, "ಇನ್ನು ಕಡಿದ ಕೂಡಲೇ ಸಾವು, ಕಡಿದ ಕೂಡಲೇ ಸಾವು" ಎಂದು ಹಾಡುತ್ತಾ ಮರಳುತ್ತವೆ.

 

ಆಗ ನಾವು ಆದರೆ ಇಂದಿಗೂ ಮನುಜ ಆ ತಬುರುಗಳು ಕಡಿದ ಕೂಡಲೇ, ಅವುಗಳನ್ನು ಹಿಸುಕಿ ಸಾಯಿಸುತ್ತಿದ್ದಾನೆ. ಮನುಜರು ಯಾರೂ ಆ ತಬುರುಗಳು ಕಡಿದ ಕೂಡಲೇ ಸಾಯಿತ್ತಿಲ್ಲವಲ್ಲಾ? ದೇವರಲ್ಲಿ ವರ ಪಡೆದು ಏನು ಪ್ರಯೋಜನವಾಯ್ತು?" ಎಂದು ಕೇಳಿದೆವು. ನಮ್ಮ ಈ ಪ್ರಶ್ನೆಗಳಿಗೆ ಅಪ್ಪಯ್ಯ ಉತ್ತರಿಸಿದ್ದು ಹೀಗೆ. 

 

ದೇವರು ವರ ಬೇಡಿಕೊಳ್ಳಿ ಅಂದಾಗ, ತಮಗೆ ಏನು ಬೇಕು ಅನ್ನುವುದನ್ನು ಅರಿತುಕೊಂಡು, ಒಂದಿಷ್ಟೂ ಅಪಾರ್ಥ ಅಥವಾ ಅನರ್ಥಗಳಿಗೆ ಎಡೆಮಾಡಿಕೊಡದಂತೆ, ಸ್ಪಷ್ಟವಾಗಿ, ಬೇಡಿಕೊಳ್ಳಬೇಕಿತ್ತು. ಆದರೆ, ಹಾಗೆ ಮಾಡುವ ಬದಲು ಕಡಿದ ಕೂಡಲೇ ಸಾಯುವಂತೆ ವರ ನೀಡಿಎಂದು ಬೇಡಿಕೊಂಡು, ಮೋಸ ಹೋಯಿತು. 

 

ಹಾಗೆಯೇ, ನಮ್ಮ ಜೀವನದಲ್ಲಿ ನಮಗೆ ಏನು ಬೇಕು ಅನ್ನುವುದರ ಅರಿವು ನಮಗೆ ಚೆನ್ನಾಗಿ ಇರಬೇಕು. ಅದಿಲ್ಲವಾದರೆ, ನಮಗೆ ಒದಗುವ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳದೇ, ಅವು ನಮ್ಮ ಕೈತಪ್ಪಿಹೋಗುತ್ತವೆ
*****

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ಆಸು ಹೆಗಡೆಯವರೆ,
ತಬರುಗಳಿಗೆ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಕೆಂಚಿರುವೆ,/ಕೆಂಜಿಗ ಎಂದು ಕರೆಯುತ್ತಾರೆ. ನಿಮ್ಮ ಅಪ್ಪಯ್ಯ ಹೇಳಿದ ಕತೆಯನ್ನೇ ನಾವೂ ಕೂಡಾ ಸಣ್ಣವರಿದ್ದಾಗ ಕೇಳಿದ್ದೆವು. ಅದನ್ನೇ ಇತ್ತೀಚೆಗೆ ನನ್ನ ಕೆಲವು ಮಿತ್ರರಿಗೆ ಮಿಂಚಂಚೆ ಕಳುಹಿಸಿದ್ದೆ. ಅದು ಹೀಗಿದೆ:
ಹಾವುಗಳು ಕಚ್ಚಿದರೆ ಮನುಷ್ಯ ಸಾಯುತ್ತಾನೆ ಕೆಲವೊಮ್ಮೆ ಚೇಳುಗಳು ಕಚ್ಚಿ ವಿಷವೇರಿದರೂ ಮನುಷ್ಯ ಸಾಯುತ್ತಾನೆ. ಇದನ್ನೆಲ್ಲಾ ನೋಡಿದ ಇರುವೆಗೆ ತನಗೂ ಅಂಥಹ ಶಕ್ತಿಯಿದ್ದಿದ್ದರೆ ಎಷ್ಟು ಚೆನ್ನ ಎನಿಸಿತು ಅದಕ್ಕಾಗಿ ಬ್ರಹ್ಮನಿಂದ ವರ ಪಡೆಯಲು ನಿಶ್ಚಯಿಸಿ ಬ್ರಹ್ಮನ ಬಳಿ ಸಾರಿ ಹೇಳಿತು, "ದೇವಾನು ದೇವ, ನಾನು ಕಚ್ಚಿದರೆ ಸಾಯಬೇಕು; ಹೀಗೆಂದು ವರಕೊಡು". ಅದರ ಮೊರೆಯನ್ನು ಆಲಿಸಿದ ಬ್ರಹ್ಮ, "ತಥಾಸ್ತು" ಎಂದು ವರವಿತ್ತ. ಅದಕ್ಕೇ ನಮ್ಮನ್ನು ಇರುವೆ ಕಚ್ಚಿದ ಕೂಡಲೇ ಅದು ಸಾಯುತ್ತದೆ. (ಆದ್ದರಿಂದ ನಾವು ಯಾರಿಂದಲಾದರೂ ಏನನ್ನಾದರೂ ಕೇಳಿ ಪಡೆಯಬೇಕಾದರೆ ಅದನ್ನು ಸ್ಪಷ್ಟವಾಗಿ ಕೇಳಬೇಕು; ಇಲ್ಲದಿದ್ದರೆ ಇರುವೆಗೆ ಸಿಕ್ಕ ವರವೇ ನಮಗೂ ಸಿಗುವ ಅಪಾಯವಿದೆ.)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಶ್ರೀಧರ್‍‍ರವರೇ,
ಕತೆಗಳು ನಾವೆಲ್ಲರೂ ನಮ್ಮ ಬಾಲ್ಯದಲ್ಲಿ ಕೇಳಿರುತ್ತೇವೆ.
ಹೊಸತಲ್ಲವಾದರೂ, ಅವನ್ನೆಲ್ಲಾ ಸಾಧ್ಯವಾದಷ್ಟು ಸಂಗ್ರಹ ಮಾಡಿಡುವ ಯತ್ನ ಇದು ಅಷ್ಟೇ.
ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
‍ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಆಸು ಹೆಗಡೆಯವರೆ,
>>ಕತೆಗಳು ನಾವೆಲ್ಲರೂ ನಮ್ಮ ಬಾಲ್ಯದಲ್ಲಿ ಕೇಳಿರುತ್ತೇವೆ. ಹೊಸತಲ್ಲವಾದರೂ, ಅವನ್ನೆಲ್ಲಾ ಸಾಧ್ಯವಾದಷ್ಟು ಸಂಗ್ರಹ ಮಾಡಿಡುವ ಯತ್ನ ಇದು ಅಷ್ಟೇ.<< ನಿಮ್ಮ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿಮ್ಮ ಕತೆ ಓದಿದ ಸಂತಸದಲ್ಲಿ ನಾನೂ ಅದನ್ನು ನಮ್ಮ ಸ್ನೇಹಿತರಲ್ಲಿ ಹಂಚಿಕೊಂಡಿದ್ದನ್ನು ನಿಮಗೆ ತಿಳಿಸುವ ಪ್ರಯತ್ನ ಮಾಡಿದೆನಷ್ಟೇ. ಅದು ಬೇರೆ ಅಭಿಪ್ರಾಯವನ್ನು ಕೊಟ್ಟಿದ್ದರೆ ಅದಕ್ಕೆ ಕ್ಷಮೆಯಿರಲಿ. ನಿಮ್ಮ ಕಥೆಗಳು ಚೆನ್ನಾಗಿ ಮೂಢಿ ಬರುತ್ತಿವೆ ಅವನ್ನು ಮುಂದುವರೆಸಿ. ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಇಲ್ಲ ಇಲ್ಲ ಹಾಗಂತೂ ಇಲ್ಲ.
ನಾನು ನನ್ನ ಈ ಯತ್ನಕ್ಕೆ ಕಾರಣ ನೀಡಿದೆ ಅಷ್ಟೇ.
ನಾನು ಅನ್ಯಥಾ ಗ್ರಹಿಸಿಕೊಂಡಿಲ್ಲ.
ಹಾಗಿದ್ದಲ್ಲಿ ನೇರವಾಗಿ ನುಡಿಯುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

:)) ಆಸು ಹೆಗಡೆಯವರೆ, ನಿಮ್ಮ ಅಪ್ಪಯ್ಯ ಹೇಳಿದ ಕತೆಗಳ ಮಾಲಿಕೆಯನ್ನು ನೋಡಿದ ಮೇಲೆಯೇ ನನಗೂ ಜಮಾನಾದ ಜೋಕುಗಳು ಬರೆಯುವ ಸ್ಪೂರ್ತಿ ಬಂದದ್ದು. ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinuhegde on

ಆಸು ಹೆಗ್ದೆಯವರೆ ಒಳ್ಳೆಯ ನೀತಿ ಕ‌ಥೆಗಾಗಿ ಧನ್ಯವಾದಗಳು... ಆ ಬಗೆಯ ಇರುವೆಗಳನ್ನು ಕುಮಟಾಕಡೆ "ಚಗಳಿ" ಅನ್ನುತ್ತಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ವಿನಾಯಕ,
ಹೂಂ... ಸೌಳಿ, ಚೌಳಿ, ಚಗಳಿ, ಈ ಎಲ್ಲಾ ಹೆಸರುಗಳೂ ಇವೆ, ಅವುಗಳಿಗೆ.
ಧನ್ಯವಾದಗಳು
‍ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by suma kulkarni on

ಅಸು ಹೆಗ್ಡೆಯವರೆ ನಿಮ್ಮ ಕಥೆ-ಲೇಖನ ಚೆನ್ನಾಗಿದೆ. ಇದನ್ನು ಓದಿ ನನಗೆ ಇನ್ನೊಂದು ಕಥೆ ನೆನಪಿಗೆ ಬಂದಿತು. ಮಕ್ಕಳಿಲ್ಲದ ಬಡವನಿಗೆ ಕುರುಡ ತಂದೆ ತಾಯಿ ಇದ್ದರಂತೆ, ಅವನೂ ತಪಸ್ಸು ಮಾಡಿ ದೇವರನ್ನು
ಒಲಿಸಿಕೊಂಡನಂತೆ, ಪ್ರತ್ಯಕ್ಷನಾದ ದೇವರು ಕೇವಲ ಒಂದು ವರ ಕೇಳುವಂತೆ ಹೇಳಿದನಂತೆ, ಇವನಿಗೋ ಮೂರು ಸಮಸ್ಯೆಗಳು, ಬಡತನ-ಮಕ್ಕಳಿಲ್ಲ-ತಂದೆ ತಾಯಿಯರಿಗೆ ಕಣ್ಣುಗಳಿಲ್ಲ-ಏನು ಮಾಡುವುದು? ಕ್ಷಣ ಯೋಚಿಸಿದನಂತೆ, ನಂತರ ಬೇಡಿದನಂತೆ," ಬಂಗಾರದ ತೊಟ್ಟಿಲಲ್ಲಿ ಆಡುವ ನನ್ನ ಮಗುವನ್ನು, ನನ್ನ ತಂದೆ ತಾಯಿಯರು ಕಣ್ತುಂಬಾ ನೋಡಿ ಆನಂದಿಸಬೇಕು" ದೇವರು ಕೇಳಿ ಮುಗುಳ್ನಕ್ಕು ಅವನ ಬುದ್ಧಿಗೆ ಮೆಚ್ಚಿ ತಥಾಸ್ತು ಎಂದನಂತೆ, ಹೀಗೆ ಮಾತು ಸ್ಪಷ್ಟವಾಗಿರಬೇಕು, ಅರ್ಥವಾಗುವಂತೆ ಇರಬೇಕು ಇದನ್ನು ಜೀವನದ ಪ್ರತಿ ಹೆಜ್ಜೆಯಲ್ಲೂ ನಾವು ಪಾಲಿಸಬೇಕು ಎನ್ನುವ ತಮ್ಮ ಕಥಾ-ಲೇಖನ ಸುಂದರವಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಸುಮ,
ಹೂಂ...ಈ ಕತೆಯನ್ನೂ ಕೇಳಿದ್ದೆ ಅಪ್ಪಯ್ಯನವರಿಂದ.
ತಮ್ಮ ಸಹಮತದ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು.
ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಹೌದು ನಮ್ಮ ಹುಷಾರಿನಲ್ಲಿ ನಾವಿರಬೇಕು
ನಾನು ತಲೆಯ ಮೇಲೆ ಕೈಯಿಟ್ಟವರೆಲ್ಲ ಬಸ್ಮವಾಗಬೇಕು
ಎಂದು ವರ ಪಡೆದ ಬಸ್ಮಾಸುರರಂತೆ ನಾವು ಆಗಬಾರದು

ನಮಸ್ಕಾರಗಳೊಡನೆ
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಉತ್ತಮ ನೀತಿ ಕತೆ.
ಅಪ್ಪಯ್ಯ ಹೇಳಿದ್ದ ಕತೆಗಳು ಚೆನ್ನಾಗಿ ಮೂಡಿಬರುತ್ತಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಧನ್ಯವಾದಗಳು ತಮಗೆ
‍‍‍ ‍ಆಸು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಧನ್ಯವಾದಗಳು.
ಆಸು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.