23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಲಿಂಗಿ ಪ್ರೇಮಿ(?)ಗಳ ನೆನಪಿನಲ್ಲಿ...!

November 15, 2009 - 11:30am
ಪ್ರಶಾಂತ್ ಹುಲ್ಕೋಡು

ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭಾಷೆಯ ಹೆಸರು ಮಾತ್ರ. ಇದು ಸರಕಾರಿ ಕಡತಗಳಲ್ಲಿ ಅಧಿಕೃತತೆ ಹೊಂದಿರಬಹುದೇನೋ, ಆದರೆ ಜನ ಸಂಸ್ಕೃತಿ ಭಾಷೆಗಳಲ್ಲಿ ತಮ್ಮದೆ ಹೆಸರಗಳನ್ನು ಮಂಗಳೂರಿಗೆ ನೀಡಿದ್ದಾರೆ. ತುಳು ಭಾಷಿಕರು ಇದನ್ನು ‘ಕುಡ್ಲ’ ಎನ್ನುತ್ತಾರೆ. ಬ್ಯಾರಿ ಮಾತನಾಡುವವರಿಗೆ ಇದು ‘ಮೈಕಳ’ವಾಗಿದೆ. ಹತ್ತಿರದ ಕೇರಳಿಗರ ಮಲೆಯಾಳಂನಲ್ಲಿ ಇದು ‘ಮಂಗಳಾಪುರ’.


ಪುಸ್ತಕ ಪ್ರೀತಿ, ಅಕ್ಷರ ಪ್ರೀತಿಗಳು ಇಲ್ಲಿ ಹೆಚ್ಚು ಕಾಣಸಿಗುತ್ತವೆ. ಜೀವನಾನುಭವವನ್ನು ಕತೆಯಾಗಿಸಿದ ಅದ್ಭುತ ಕತೆಗಾರರು ದಕ್ಷಿಣ ಕನ್ನಡದಿಂದ ಮೂಡಿ ಬಂದಿದ್ದಾರೆ. ಆದರೆ ಕಳೆದ ಎರಡು ತಿಂಗಳಲ್ಲಿ ಕಂಡಿದ್ದು ಮಂಗಳೂರಿನ ಬದಲಾದ ಪರಿಸ್ಥಿತಿ. ಸೃಜನಶೀಲತೆಗಿಂತ ಇಲ್ಲಿ ಧಾರ್ಮಿಕ ಕಟ್ಟಳೆಗಳು ಬಹುಮುಖ್ಯವಾಗಿ ಕಾಡುತ್ತವೆ. ಇವತ್ತು ಧರ್ಮ ಐಡೆಂಟಿಟಿ ನೀಡುತ್ತಿದೆ. ಹಿಂದುತ್ವ ಪ್ರಬಲವಾಗುತ್ತಿರುವ ಜೊತೆಯಲ್ಲೇ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ತಮ್ಮ ಧಾರ್ಮಿಕ ಐಡೆಂಟಿಟಿಗಾಗಿ ಸೆಣಸಾಡುತ್ತಿದ್ದಾರೆ.
ಇಲ್ಲಿನ ಮತ್ತೊಂದು ವಿಶೇಷ ಸಂಜೆ ಪತ್ರಿಕೆಗಳದ್ದು. ಮುಖ ಪುಟದ ತುಂಬಾ ಭೀಕರ ಚಿತ್ರಗಳನ್ನು ಹೊತ್ತು ಬರುವ ಸಂಜೆ ಪತ್ರಿಕೆಗಳು ಮದ್ಯಾನಕೆಲ್ಲ ಸ್ಟಾಲುಗಳಲ್ಲಿ ನೇತಾಡುತ್ತಿರುತ್ತವೆ. ಆಟೋದವರು, ಸಿಟಿ ಬಸ್ಸುಗಳ ಕಂಡಕ್ಟರ್‌ಗಳು ಒಂದು ಕೈಯಲ್ಲಿ ಸಂಜೆ ಪತ್ರಿಕೆಗಳನ್ನು ಹಿಡಿದುಕೊಂಡು ತಮ್ಮ ಕೆಲಸ ಮಾಡುತ್ತಿರುತ್ತಾರೆ. ಯಾವಾಗಲೋ, ಮತ್ತೆಲ್ಲೋ ಸಂಭವಿಸಿದ ಕೊಲೆಯ ಫಾಲೋ‌ಅಪ್‌ಗಾಗಿ ತುಡಿಯುತ್ತಿರುತ್ತಾರೆ. ಅದನ್ನೇ ಪತ್ರಿಕೆಗಳು ಉಣ ಬಡಿಸುತ್ತವೆ. ಅಥವಾ ಪತ್ರಿಕೆಗಳು ಬೆಳೆಸಿದ ಇಂತಹ ಅಭಿರುಚಿ ಇದಕ್ಕೆ ಕಾರಣ ವಿರಬಹುದು. ಪತ್ರಿಗಳಲ್ಲಿ ಬರುವ ಅರೆನಗ್ನ ಚಿತ್ರಗಳನ್ನು ಕದ್ದು ಮುಚ್ಚಿಯಾದರು ನೋಡುವ ಮನಸ್ಥಿತಿ ಎಲ್ಲರಲ್ಲೂ ಇದೆ. ಇದನ್ನು ಕೊಡಲಾರವನು ಸೆಣಸಾಟದಲ್ಲಿ ಹಿಂದೆ ಬೀಳುತ್ತಾನೆ.

ಬಹುತೇಕ ಆಟೋ ಡ್ರೈವರ್‌ಗಳು ಮಾಫಿಯಾ ಜೊತೆ ಸಂಪರ್ಕ ಹೊಂದಿದ್ದಾರೆ. ನಿಮಗೆ ಬೇಕಾದ ‘ಮಾಲ’ನ್ನು ಎದುರಿಗೆ ನಿಲ್ಲಿಸುತ್ತೇವೆ ಎಂದು ಹೇಳಿದ ಆಟೋ ಡ್ರೈವರ್‌ಗಳನ್ನು ಸುಮ್ಮನೆ ಮಾತನಾಡಿಸಿದರೆ, ಮಂಗಳೂರಿನ ಮೇಲ್ನೋಟದ ಐಶಾರಾಮಿ ಬದುಕಿನ ದುಸ್ವಪ್ನಗಳಿಗೆ ಅವರು ಒಳಗಾಗಿರುವುದು ಕಾಣುತ್ತದೆ.

ಇಂದು ಸಿಟಿ ಬಸ್ಸಿನಲ್ಲಿ ನಡೆದ ಘಟನೆಯನ್ನು ತಿಳಿಸದಿದ್ದರೆ ಮಂಗಳೂರಿನ ಅನುಭವ ಪರಿಪೂರ್ಣವಾಗುವುದಿಲ್ಲ. ಅನಾಮಿಕ ಸ್ಟಾಪೊಂದರಲ್ಲಿ ಹತ್ತಿದ ಸಿಟಿ ಬಸ್ಸು ಆಗಲೆ ಬೆವರಿದ ಮುಖಗಳನ್ನು ತುಂಬಿಕೊಂಡಿತ್ತು. ಹಿಂದಿನ ಸೀಟಿನಲ್ಲಿ ಸಲಿಂಗಿಗಳ ದಂಪತಿ(?) ಕುಳಿತಿತ್ತು. ಇಬ್ಬರು ಮಹಿಳೆಯರು ಸಹಜವಾಗಿ ಹುಡುವ ಸೀರೆ ಉಟ್ಟಿದ್ದರು. ಆದರೆ ಇಬ್ಬರಲ್ಲಿ ಸಮಾಜದ ಇತರೆ ಪ್ರೇಮಿಗಳಲ್ಲಿರುವ ಭಾವನೆಗಳು ಕಣ್ಣಿಟ್ಟು ತಡಕಾಡಿದರೆ ಮಾತ್ರ ತಿಳಿಯುವಂತಿತ್ತು. ನಾನು ಹತ್ತಿದ ತಕ್ಷಣ ನನ್ನೆಡೆ ಇಬ್ಬರ ಹರಿಸಿದ ನೋಟದಲ್ಲಿಯೇ ಅಂತಹ ಭಾವಗಳು ಕಾಣುತ್ತಿದ್ದವು. ಕಿಟಕಿ ಬಳಿ ಕುಳಿತಿದ್ದ ಸಲಿಂಗಿಗೆ ಹೆಣ್ಣಿನ ಸುಪ್ತ ಭಾವನೆಗಳು ಆವರಿಸಿಕೊಂಡಂತಿತ್ತು. ಇತರ ಹುಡುಗರು ತನ್ನನ್ನು ನೋಡುತ್ತಾರಾ ಎಂಬ ಕುತೂಹದ ಕಣ್ಣುಗಳಿಗೆ ನಾಚಿಕೆಯ ಮೆರಗು.


ಆದರೆ ಪಕ್ಕದಲ್ಲಿ ಸ್ವಲ್ಪ ದೃಢಕಾಯದ ಸಲಿಂಗಿಗೆ ಮಾತ್ರ ಗಂಡಿನ ಗಂಭೀರತೆ. ಜೇಬಿನಲ್ಲಿದ್ದ ಗುಟ್ಕಾದ ಪೊಟ್ಟಣವನ್ನು ತೆಗೆದು ಎಲ್ಲರ ಎದುರೆ ಬಾಯಿಗೆ ಹಾಕಿಕೊಂಡು ಮತ್ತೆ ತನ್ನ ಪ್ರೇಮಿಯೊಡನೆ ಮಾತಿನ ಸರಸ. ಅವಳ ಮೈಯ ಸ್ಪರ್ಷದ ಸುಖ ಅನುಭವಿಸುವ ಕಾತರತೆ. ಅವಳಿಗೋ ಯಾರಾದರು ನೋಡಿದರೆ ಎಂಬ ಕಪ್ಪೆ ಚಿಪ್ಪಿನ ಮನಸ್ಸು.

ಪಕ್ಕದಲ್ಲಿ ಕುಳಿತಿದ್ದ ‘ಸರಿ’ ಲಿಂಗಿ ಯುವಕನಿಗೆ ಮಾತ್ರ ಜನರು ಹಿಜಿಡಾಗಳ ಪಕ್ಕ ಕುಳಿತದ್ದಕ್ಕೆ ನನ್ನನ್ನು ಹೇಗೆ ನೋಡುತ್ತಾರೆ ಎಂಬ ಆತಂಕ. ಆದರೆ ಕುತೂಹಲಕ್ಕಾಗಿ ಅವರೆಡೆಗೆ ತಿರುಗುವ ಕಣ್ಣುಗಾಲಿಗಳು. ಅವನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾಯ ವ್ಯಕ್ತಿಯೊಬ್ಬರು ಸಲಿಂಗಿ ಪ್ರೇಮಿಗಳೆಡೆ ಕದ್ದು ಮುಚ್ಚು ತಮ್ಮ ನೋಟ ಹರಿಸುತ್ತಿದ್ದರು. ಅದು ಸಮಾಜದ ನಾಡಿ ಮಿಡಿತ. ಪ್ರತಿಯೊಬ್ಬರಿಗೂ ಇರುವ ಸುಪ್ತ ಭಾವನೆಗಳನ್ನು ‘ಸಚ್ ಕಾ ಸಾಮ್ನಾ’ ಸವಾಲಿಗೆ ಒಡ್ಡಲಾರದ ಭಯ. ಅರ್ಧ ಸತ್ಯ ಮತ್ತರ್ಧ ಮಿತ್ಯಗಳ ಮಿಶ್ರಣ.
ಹಾಗೆ ನೋಡುತ್ತಿರುವಾಗಲೇ ಬಸ್ಸು ಕಾಲಿಯಾಯಿತು. ನಾನು ಸಲಿಂಗಿ ಪ್ರೇಮಿಗಳ ಪಕ್ಕದಲ್ಲಿ ಕುಳಿತೆ. ಬಸ್ಸು ಮುಂದೆ ಹೋಗುವುದಿಲ್ಲವಾ? ಎಂದು ಸಹಜವಾಗಿಯೆ ಪ್ರಶ್ನಿಸಿ ಹೆಣ್ಣಿನ ಸಹಜತೆ ತೋರುತ್ತಿದ್ದ ಕಿಟಿಕಿ ಬದಿಯ ಕಣ್ಣುಗಳ ಜೊತೆ ನನ್ನ ಕಣ್ಣೊಟ ಬೆರೆಸಿದೆ. ‘ಏನಪ್ಪಾ, ಗೊತ್ತಾಗುತ್ತಿಲ್ಲ’ ಎಂದ ಉತ್ತರದಲ್ಲಿ ಸ್ವಲ್ಪ ರಾಗದ ಮಿಶ್ರಣ.

ಅದೇ ಮಂಗಳೂರಿನ ಕಡಲ ತಡಿಯಲ್ಲಿ ಮುಳುಗುತ್ತಿದ್ದ ಸೂರ‍್ಯನ ಕೆಂಬಣ್ಣ. ಎಲ್ಲವು ಅರ್ಥವಾದಂತಾಗಿ, ಮತ್ತೇನೊ ಗೊತ್ತಾಗದ ಗೊಂದಲದ ನೆನಪುಗಳು. ಮಂಗಳೂರು ಡೈರಿ ನಾಳೆ ಮತ್ತೆಲ್ಲಿಯದೋ ಡೈರಿ. ಅಕ್ಷರಗಳ ಸಂತೆಯಲ್ಲಿ ನೆನಪುಗಳ ಬಿಕರಿಗೆ ಮಾತ್ರ ದಿನವೂ ಸಂತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.