ಬ್ರಹ್ಮಾಂಡರ‌ ಆಶ್ರಮದಲ್ಲಿ ಜನಸಾಗರ

ಬ್ರಹ್ಮಾಂಡರ‌ ಆಶ್ರಮದಲ್ಲಿ ಜನಸಾಗರ

ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಆಶ್ರಮದಲ್ಲಿ ಜನಸಾಗರ

 

ಲೇಖಕನ ವಿವರಣೆ

ಈ ದಿನ ರಾತ್ರಿಯೇ ಶ್ರೀನಾಥರು u.s.ಗೆ ಹಿಂದಕ್ಕೆ  ಹೋರಡುವದಾಗಿ ತಿಳಿಸಿದ್ದರು, ಭಾರತಕ್ಕೆ ಹತ್ತು ದಿನ ರಜಾಕ್ಕೆ ಬಂದಿದ್ದ ಅವರು ಈ ನಡುವೆ ಬ್ರಹ್ಮಾಂಡರ ಆಶ್ರಮಕ್ಕೆ ಹೋಗಿ ಅವರನ್ನು ಮಾತನಾಡಿಸಿದ ವಿಷಯ ಎಲ್ಲವನ್ನು  ಕಳೆದ ವಾರ ನನಗೆ ಫೋನಿನಲ್ಲಿ ತಿಳಿಸಿದ್ದರು. ಅದನ್ನೆಲ್ಲ ನಾನಾಗಲೆ ಮೇಲೆ ವಿವರಿಸಿ ಬರೆದಿರುವೆ.  

ಕಡೆಯಲ್ಲಿ ಏನಾಯಿತು ಎಂದು ಕೇಳಿದಕ್ಕೆ ಅಷ್ಟೊಂದು ಆಸಕ್ತಿ ಇದ್ದರೆ ಮನೆಗೆ ಬರಬೇಕೆಂದು ತಿಳಿಸಿ ಪೋನ್ ಕಟ್ ಮಾಡಿಬಿಟ್ಟಿದ್ದರು. ಸರಿ  ಶ್ರೀನಾಥರನ್ನು  ನೋಡಿದ ಹಾಗು ಆಯಿತು, ಬ್ರಹ್ಮಾಂಡರ ವಿಷಯ ತಿಳಿದ ಹಾಗು ಆಯಿತು,  ಹಾಗೆ ರಜಾ ಮುಗಿಸಿ u s ಗೆ ಹಿಂದೆ ಹೊರಟವರನ್ನು ಬಿಳ್ಕೊಟ್ಟ ಹಾಗು ಆಯಿತು ಎಂದು ಸಂಜೆ ಅವರ ಮನೆಗೆ ಹೊರಟೆ.

ಹಾಲಿನಲ್ಲಿ ಸೋಪಾದ ಮೇಲೆ ವಿರಾಜಮಾನರಾಗಿ ಕುಳಿತಿದ್ದರು ಹಸನ್ಮುಖರಾಗಿ ಶ್ರೀನಾಥ.,ಎದುರಿಗಿದ್ದ ಟೀವಿಯನ್ನು ವೀಕ್ಷಿಸುತ್ತ.

’ಬನ್ನಿ  ಬನ್ನಿ ಈಗಲಾದರು ಬಂದಿರಲ್ಲ’ ಎಂದರು.

’ಬರದಿದ್ದರೇ ಹೇಗೆ, ನೀವು ಬ್ರಹ್ಮಾಂಡರ ಕತೆಯನ್ನು ಅರ್ದದಲ್ಲಿ ನಿಲ್ಲಿಸಿಬಿಟ್ಟಿರಲ್ಲ’ ಎಂದೆ.

’ಈಗ ನನ್ನನ್ನು ನೋಡಲು ಬಂದದ್ದೋ ಇಲ್ಲ ಆ ಗಣೇಶನ ಕತೆ ಕೇಳಲು ಬಂದಿದ್ದೋ ಸರಿಯಾಗಿ ಹೇಳಿಬಿಡಿ’

ಅವರ ಕುಹಕ.

’ಹಾಗಾದರೆ ನಿಮ್ಮನ್ನು ನೋಡುತ್ತ, ಅವರ ಕತೆ ಕೇಳಲು ಎಂದು ಭಾವಿಸಿ’ ಎಂದೆ ನಗುತ್ತ.

ಅಷ್ಟರಲ್ಲಿ ಅವರ ಮೊಬೈಲ್ ರಿಂಗ್ ಆಯಿತು, ಅದನ್ನು ಕಿವಿಗಿಸಿದವರು, ಆಶ್ಚರ್ಯದಿಂದ,

’ಹೌದೇ’ ಎನ್ನುತ್ತ,

’ಸರಿ ಬಿಡಿ ನೋಡುತ್ತೇನೆ’  ಮೋಬೈಲ್ ಆಕಡೆ ಇದ್ದವರಿಗೆ ಉತ್ತರಿಸಿ,

ನನ್ನತ್ತ ತಿರುಗಿ ,

’ ನೋಡಿ ಸರಿಯಾದ ಸಮಯಕ್ಕೆ ಬಂದಿರುವಿರಿ, ನಿಮ್ಮ ಎಲ್ಲ ಪ್ರಶ್ನೆಗೂ ಉತ್ತರ ಸಿಗುತ್ತದೆ ಎಂದು ಕಾಣುತ್ತದೆ ತಡೆಯಿರಿ’

ಎನ್ನುತ್ತ ,

ತಾವು ನೋಡುತ್ತಿದ್ದ ,  ಡಿಸ್ಕವರಿ ಚಾನಲ್ ಬದಲಾಯಿಸಿ, TV-90 ಸೆಲೆಕ್ಟ್ ಮಾಡಿದರು.

ನನಗೆ ಕುತೂಹಲ, ಅಲ್ಲ ಅದೇನು ನನ್ನಪ್ರಶ್ನೆಗೆ ಉತ್ತರ ಟೀವಿಯಲ್ಲಿ ಸಿಗುವುದೇ ಅಂದುಕೊಂಡು

’ನನ್ನ ಕುತೂಹಲಕ್ಕೂ , ನೀವು ಟೀವಿ ಹಾಕುವದಕ್ಕೂ ಎಲ್ಲಿಯ ಸಂಬಂಧ ’ ಎಂದು ಕೇಳಿದೆ.

ಅದಕ್ಕವರು , ’ಮಾತನಾಡಬೇಡಿ, ನೋಡಿ ಏನಾಗುತ್ತದೋ ನನಗೂ ಕುತೂಹಲವೇ ’ ಎಂದರು.

TV-90 ಯಲ್ಲಿ ನಿರೂಪಕ ಅತ್ಯಂತ ಉದ್ವೇಗದಿಂದ ಹೇಳುತ್ತಿದ್ದ

’ವೀಕ್ಷಕರೆ , ನಾಡಿನ ಎಲ್ಲ ಜನತೆಯ ಕುತೂಹಲ ಕೆರಳಿಸಿದ್ದ  ಅಂಡಾಂಡಬ್ರಹ್ಮ ಆಶ್ರಮದ ಬ್ರಹ್ಮಾಂಡ ಗುರುಗಳು ಒಳಗೊಂಡಿದ್ದ ರೇಪ್ ಘಟನೆಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಒಂದು ಬರುತ್ತಿದೆ.

ಬ್ರಹ್ಮಾಂಡ ಗುರುಗಳು ನಿಜವಾಗಿಯು ಅಂತಹ ಹೀನ ಕೃತ್ಯದಲ್ಲಿ ಪಾಲ್ಗೊಂಡಿರುವರೆ ಇಲ್ಲವೇ ಎನ್ನುವ ನಿಮ್ಮಲ್ಲರ ಅನುಮಾನ ಕೊನೆಗೊಳ್ಳುವ ದಿನವಿದು.

ನೀವು ಇಷ್ಟು ದಿನ ಸ್ಟಿಂಗ್  ಆಪರೇಶನ್ ಬಗ್ಗೆ ಕೇಳಿರಬಹುದು, ಆದರೆ ಅವೆಲ್ಲ ತಮ್ಮ ಶರ್ಟಿನಜೋಬಿನಲ್ಲೊ, ತಲೆಯಲ್ಲೊ ಅಡಗಿಸಿದ ಮರೆಮಾಚಿದ ಕ್ಯಾಮರದ ಮೂಲಕ ಹಗರಣ ಬಯಲಿಗೆಳೆಯುವ ಕೆಲಸಕ್ಕಾಗಿ ಬಳಸಲಾಗುತ್ತಿತ್ತು ,

ಆದರೆ ಇದು ಚಾನಲ್ ಗಳ ಇತಿಹಾಸದಲ್ಲಿಯೆ ಒಂದು ಬ್ರೇಕ್, ಇಲ್ಲಿಯವರೆಗೂ ಯಾರು ಮಾಡದ ಸಾಹಸವನ್ನು ನಿಮಗೆ ನಾವು ತೋರಿಸುತ್ತಿದ್ದೇವೆ.  

ಬ್ರಹ್ಮಾಂಡರು ಅಪಾದಿತರಾಗಿರುವ ಈ ರೇಪ್ ಕೇಸಿನಲ್ಲಿ, ಅವರು ನಿಜವಾಗಿಯೂ ಅಪಾದಿತರೆ ಅಥವ ಅವರನ್ನುಯಾವುದೋ ಕಾಣದ ಕೈನ ಶಕ್ತಿಯೊಂದು ಈ ಅಪಾದನೆಯಲ್ಲಿ ಸಿಕ್ಕಿಬೀಳುವಂತೆ ಬಲೆ ಹಣಿದಿದಿಯೆ ಎನ್ನುವ ಅನುಮಾನ ಬಗೆಹರಿಯುತ್ತಿದೆ. ಇದು ರೆಕಾರ್ಡೆಡ್ ಅಲ್ಲ ನೇರ ಪ್ರಸಾರ,
ಸ್ಟಿಂಗ್ ಅಪರೇಷನ್ನಿನ ನೇರ ಪ್ರಸಾರ,

ಮಾಧ್ಯಮಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಟಿಂಗ್ ಆಪರೇಷನ್ನಿನ ನೇರ ಪ್ರಸಾರ.

ಹೆಚ್ಚು ಸಮಯ ವ್ಯರ್ಥ ಮಾಡುವಂತಿಲ್ಲ, ಪ್ರೇಕ್ಷಕರೆ ಬನ್ನಿ , ಈಗ ಬ್ರಹ್ಮಾಂಡರ ಆಶ್ರಮಕ್ಕೆ ಹೋಗೋಣ’

ಒಡನೆಯೆ  ಪರದೆಯ ಮೇಲೆ ಬ್ರಹ್ಮಾಂಡರು , ಜಯಂತ ನಾರಿಮನ್ , ಹಾಗು ಮಂಜುಳ ಕುಳಿತು ಮಾತನಾಡುತ್ತಿರುವ ದೃಷ್ಯ ಕಾಣಿಸಿ ಬೆಚ್ಚಿ ಬಿದ್ದೆ, ಸ್ವಲ್ಪ ಬೆಳಕು ಕಡಿಮೆ ಇದ್ದರು ಮೂವರು ಸ್ವಷ್ಟವಾಗಿ ಗೋಚರಿಸುತ್ತಿದ್ದರು.

’ಅಲ್ಲಯ್ಯ ಜಯಂತ ನೀನು ಹೀಗೆ ಮಾಡೋದು ಸರಿಯಾ? ಮೊದಲಿಗೆ ನನ್ನ ಹತ್ತಿರ ನೀನು ಹೇಳಿದ್ದೇನು ,ಇದೊಂದು ನಾಟಕ ಹೀಗೆ ಮಾಡು ಇದರಿಂದ ನಿನ್ನ ಆಶ್ರಮದ ಹೆಸರು ಪ್ರಸಿದ್ದಿಗೆ ಬರುತ್ತೆ ಅಂತ ಅಲ್ವ ? ನೀನೆ ಮಾಡಿದ ಪ್ಲಾನ್ ಪ್ರಕಾರ ನಾನು ನಂಬಿ ನೀನು ಹೇಳಿದಂತೆ ಪೋಟೊ ತೆಗೆಸಿಕೊಂಡೆ, ಅದನ್ನು ಪೋಲಿಸರಿಗೆ ಕೊಡ್ತೀನಿ ಅಂತ ನೀನು ಹೇಳಿರಲಿಲ್ಲ, ಬರಿ ಪ್ರಚಾರಕ್ಕಾಗಿ ಪೇಪರ್ ನಲ್ಲಿ ಹಾಕಿಸುತ್ತೇನೆ, ಆಗ ಜನ ನಿನ್ನ ಆಶ್ರಮಕ್ಕೆ ಬರ್ತಾರೆ ಅಂತ ತಾನೆ ನೀನು ಹೇಳಿದ್ದು, ಈಗ ನೋಡಿದರೆ ಪೋಟೋವನ್ನು ಈಕೆ ಪೋಲಿಸರಿಗೆ ಒಪ್ಪಿಸಿ ನನ್ನ ಮೇಲೆ ಕೇಸು ಜಡಿದಿದ್ದಾರೆ, ನಾನು ಮಾಡದ ತಪ್ಪಿಗೆ ನಾನು ಅನುಭವಿಸುವಂತಾಗಿದೆ ,  ನೀನು ಬೈಲ್ ಸಹ ಕೊಡಿಸಲಿಲ್ಲ. ನನ್ನ ಗತಿ ಏನಾಗಬೇಕು ಹೇಳು’

ಬ್ರಹ್ಮಾಂಡರು ಕರುಣೆ ಬರುವಂತೆ ಹೇಳುತ್ತಿದ್ದರು.

’ನಾನು ಹೇಳಲಿಲ್ಲವೇನಪ್ಪ ಬೈಲ್ ಸಿಗೋದು ಅಂದರೆ ಕಷ್ಟ ಇಂತ ಕೇಸಿನಲ್ಲಿ, ನಾನು ಜಡ್ಜಿಗೆ ಅಡ್ಜೆಸ್ಟ್ ಮಾಡಬೇಕಾಗುತ್ತೆ ಗೊತ್ತ ಕಡಿಮೆ ಅಂದರೆ ಒಂದು ಕೋಟಿ ಅಲ್ಲೇ ಹೋಗುತ್ತೆ’

ಕಾರ್ಯಕ್ರಮ ನೋಡುತ್ತಿದ್ದ ಜನ ಹೋಗಲಿ, ಆ ಕೇಸು ನಡೆಸುತ್ತಿದ್ದ ಜಡ್ಜ್ ಸಹ ಬೆಚ್ಚಿ ಬಿದ್ದರಬಹುದು ಅಂದುಕೊಂಡೆ ನಾನು ಮನದಲ್ಲಿ.

ಮಾತು ಮುಂದುವರೆಸಿದ್ದ ಜಯಂತ್ ನಾರಿಮನ್

’ಅಲ್ಲದೇ ಇವಳು ಹೀಗೆ ಮಾಡ್ತಾಳೆ ಅಂತ ನನಗೇನು ಗೊತ್ತಪ್ಪ, ನೋಡು ನನಗೆ ಕೈಕೊಟ್ಟು ಪೋಲಿಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾಳೆ, ಈಗ ಐದು ಕೋಟಿ ಕೇಳ್ತಾ ಇದ್ದಾಳೆ, ಬೇಕಾದರೆ ನೀನೆ ನೇರವಾಗಿ ಮಾತನಾಡು ಅವಳ ಜೊತೆ ’

ಜಯಂತ ಆಡುತ್ತಿದ್ದ ನಾಟಕ , ಬ್ರಹ್ಮಾಂಡರಿಗೆ ತಿಳಿಯುತ್ತಿತ್ತು, ಆದರು ಏನು ಮಾಡುವಂತಿರಲಿಲ್ಲ, ಆಕೆಯಾದರು ನಗುತ್ತ ಕುಳಿತಿದ್ದಳು.

ಕಡೆಗೆ ಬ್ರಹ್ಮಾಂಡರೇ ಸೋತು ಹೇಳಿದರು

’ಆಗಲಿ ಬಿಡಪ್ಪ ನನ್ನ ಗ್ರಹಚಾರ ಕೆಟ್ಟಿದೆ ಅಂತ ತಿಳಿದುಕೊಳ್ತೇನೆ, ಹೇಗೋ ನಾವು ನಾವೇ ಬಗೆಹರಿಸಿಕೊಂಡು ಬಿಡೋಣ. ಏನು ಮಾಡುವುದು ಅಂತ ನೀನೆ ಸ್ವಷ್ಟವಾಗಿ ಹೇಳಿಬಿಡು’

ಜಯಂತ , ಗಂಭೀರವಾಗಿ ಹೇಳಿದ

’ನಾನು ಏನು ಹೇಳಲಿ ? ಗಣೇಶ ,  ಆಗಲೇ ಹೇಳಿದ್ದೇನಲ್ಲ, ಅವಳ ಕಡೆ ಐದು ಕೋಟಿ ಕೊಟ್ಟು ಬಿಡು, ಇನ್ನು ಈ ಕೇಸು ಮುಚ್ಚಿಸಲು, ಕೋರ್ಟ್ , ಪೋಲಿಸು ಎಲ್ಲರನ್ನು ಸುಮ್ಮನಾಗಿಸಬೇಕಾಗುತ್ತೆ,

ದೊಡ್ಡ ಲೆವೆಲ್ ಎಲ್ಲ ಇನ್ ವಾಲ್ವ್ ಆಗುತ್ತಾರೆ, ಅದಕ್ಕೆ ನನಗೆ ಮೂರು ಕೋಟಿ ಕೊಟ್ಟು ಬಿಡು, ಒಟ್ಟು ಎಂಟು ಕೋಟಿ, ತಕ್ಷಣ ಎಲ್ಲ ತಣ್ಣಗಾಗುತ್ತೆ, ನಾನೆ ಹೇಳಿ ಇವಳ ಹತ್ತಿರ ಕೇಸು ವಾಪಸ್ ತೆಗೆದುಕೊಳ್ಳುವಂತೆ ಹೇಳುತ್ತೇನೆ’

’ಅಲ್ಲಯ್ಯ, ಎಲ್ಲರಿಗೂ ಪ್ರಚಾರವಾಗಿದೆ ಈಗ ಕೇಸು ಹಿಂದೆ ಅಂದರೆ ಯಾರಿಗೂ ಡೌಟು ಬರಲ್ವ’ ಬ್ರಹ್ಮಾಂಡರ ಪ್ರಶ್ನೆ .

’ಯಾಕೆ ಬರುತ್ತೆ ಹೇಳು ನಾನು ಎಲ್ಲ ಹ್ಯಾಂಡಲ್ ಮಾಡುತ್ತೇನೆ ಬಿಡು, ಹೀಗೆ ಏನೋ ತಪ್ಪು ಅಭಿಪ್ರಾಯದಿಂದ ಗುರುಗಳ ಬಗ್ಗೆ ತಪ್ಪು ತಿಳಿದಿದ್ದೆ ಅಂತ ಅವಳ ಕೈಲಿ ಒಂದು ಸ್ಟೇಟ್ ಮೆಂಟ್ ಕೊಡಿಸಿ, ಗುರುಗಳು ಅಂದರೆ ಅವರ ಮನಸ್ಸು ಚಿಕ್ಕ ಮಕ್ಕಳ ತರ ಅವರಿಗೆ ಏನು ತಿಳಿಯದು ಅಂತ ಅವಳ ಕೈಲೇ ಹೇಳಿಸಿಬಿಡ್ತೀನಿ’ ಅಂದ ನಗುತ್ತ ಜಯಂತ. ಪಕ್ಕದಲ್ಲಿ ನಗುತ್ತ ಕುಳಿತ ಮಂಜುಳ.

ಬಹಳ ಕಾಲ ಯೋಚಿಸಿದ ಬ್ರಹ್ಮಾಂಡರು,

’ಸರಿಯಪ್ಪ ವಿಧಿಯಿಲ್ಲ , ಕೊಡುತ್ತೇನೆ, ಆದರೆ ನಿಜವಾಗಿ ನನ್ನ ಹತ್ತಿರ ಅಷ್ಟೊಂದು ಹಣ ಈಗ ಹೊಂದಿಸಲು ಆಗಲ್ಲ ಕಣೊ ನನ್ನ ನಂಬು, ಇನ್ನು ಮೂರು ದಿನದಲ್ಲಿ ಇವಳ ಪಾಲು ಐದುಕೋಟಿಯ ಪೈಕಿ, ಮೂರು ಕೋಟಿ ಕೊಡುತ್ತೇನೆ, ನಿನ್ನದು ಎರಡು ಕೋಟಿ ಒಟ್ಟು ಐದು ಕೋಟಿ ಕೊಡುತ್ತೇನೆ. ಮೂರು ತಿಂಗಳು ಸಮಯಕೊಡು ಉಳಿದ ಮೂರು ಕೋಟಿ ನಿನಗೆ ತಲುಪಿಸುತ್ತೇನೆ, ಅದಕ್ಕಿಂತ ನನ್ನ ಕೈಲಿ ಏನು ಮಾಡೋದು ಕಷ್ಟ’  

ಅತ್ತುಕೊಂಡರು ಬ್ರಹ್ಮಾಂಡರು.

ಜಯಂತ ನಾರಿಮನ್,  ಮಂಜುಳ ಕಡೆ ನೋಡಿದ, ಅವಳು ಆಗಬಹುದು ಎನ್ನುವಂತೆ ಸನ್ನೆ ಮಾಡಿದಳು

’ಆಯಿತಪ್ಪ ನಿನ್ನ ನಂಬುತ್ತೇವೆ, ನೀನು ಮೂರುದಿನದಲ್ಲಿ ಐದು ಕೊಟಿ ಹೊಂದಿಸಿಕೊಡು, ನೀನು ಹಣ ಕೊಟ್ಟ ತಕ್ಷಣ ಈಕೆ ತನ್ನ ಹೇಳಿಕೆ ಬದಲಿಸಿ ಮಾಧ್ಯಮಗಳಿಗೆ ಹೇಳುತ್ತಾಳೆ, ನಾನು ಪೋಲಿಸ್ , ಕೋರ್ಟ್ ಇತ್ಯಾದಿ ವಿಷಯ ನೋಡಿಕೊಳ್ಳುವೆ , ನೀನು ನಮ್ಮಿಬ್ಬರಿಗೂ ಕ್ಲಾಸ್ ಮೇಟ್ ಆಗಿದ್ದವನು,  ಅಲ್ಲದೆ ಗುರು ಸ್ಥಾನದಲ್ಲಿದ್ದೀ ಹೆಚ್ಚು ತೊಂದರೆ ಕೊಡಲ್ಲ’ ಎಂದ

ಬ್ರಹ್ಮಾಂಡರು, ಕ್ಲಾಸ್ ಮೇಟ್ ಅಂತೆ ಕ್ಲಾಸ್ ಮೇಟ್ ಇವನ ಪಿಂಡ ಅಂತ ಗೊಣಗಿಕೊಂಡಿದ್ದು ಟೀವಿಯಲ್ಲಿ ಸ್ವಷ್ಟವಾಗಿ ಕೇಳಿ ಎಲ್ಲರಿಗೂ ನಗು.

ಅಷ್ಟರಲ್ಲಿ ಜಯಂತನಾರಿಮನ್  ಮೊಬೈಲ್ ರಿಂಗ್ ಆಯಿತು, ಅವನು ನೋಡಿ, ಮಂಜುಳ ಬಳಿ

’ನನ್ನ ಹೆಂಡತಿ ಪೋನ್ ಮಾಡಿದ್ದಾಳೆ, ನೀನು ಮಾತನಾಡುತ್ತಿರು ಎಂದು , ಪಕ್ಕಕ್ಕೆ ಎದ್ದು ಬಂದು ನಿಂತ ಈಗಂತು, ಮೊಬೈಲ್ ಹಿಡಿದು ನಿಂತ ಅವನ ಮುಖ ಸ್ವಷ್ಟವಾಗಿ  , ಟೀವಿಯಲ್ಲಿ ಕಾಣುತ್ತಿತ್ತು.

’ಹಲೋ , ಹೇಳು ಡಿಯರ್ ಏಕೆ ಕಾಲ್ ಮಾಡಿದೆ?” ಕೇಳಿದ

’ ಅಲ್ಲರೀ ನೀವು ಎಲ್ಲಿದ್ದೀರಿ? …’  ಆ ಕಡೆಯಿಂದ ಹೆಂಡತಿಯ ದ್ವನಿ ( ನಮ್ಮ ಊಹೆ)

’ನಾನು  ಇಲ್ಲೆ ರಾಮಕೃಷ್ಣ ಆಶ್ರಮಕ್ಕೆ ಅಂತ ಬಂದಿದ್ದೆ ಕಣೇ, ಇಲ್ಲಿ ಪ್ರಣವಾನಂದರು ಅಂತ ಒಬ್ಬರು ಸ್ವಾಮಿಗಳು ಪ್ರಪಂಚದ ನಶ್ವರದ ಬಗ್ಗೆ ಅದೇನು ಚೆನ್ನಾಗಿ ಸ್ಪೀಚ್ ಕೊಡ್ತಾಇದ್ದಾರೆ ಅಂತೀಯ’  ಜಯಂತನ ಮಾತು.
(ನೋಡುಗರಾದ ನಮ್ಮೆಲ್ಲರಿಗೂ ನಗು)

’ರೀ ಸಾಕು ಮಾಡಿ ನಿಮ್ಮ ರೀಲ್ ನ, ನೀವು ಬ್ರಹ್ಮಾಂಡರ ಆಶ್ರಮದಲ್ಲಿದ್ದೀರ ಅಲ್ವ ’ ಆಕೆಯ ಮಾತು (ನಮ್ಮ ಊಹೆ)

’ಅಯ್ಯೋ ನಿನಗೇಗೆ ಗೊತ್ತಾಯಿತು, ಹೋಗಲಿ ಬಿಡು, ಹೌದೇ , ಪಾಪ ಬ್ರಹ್ಮಾಂಡರಿಗೆ ಬೈಲ್ ಕೊಡಿಸುವ ವಿಚಾರ ಅವರ ಜೊತೆ ರಹಸ್ಯವಾಗಿ ಚರ್ಚಿಸಬೇಕಿತ್ತು, ಅದಕ್ಕೆ ಇಲ್ಲಿ ಬಂದಿದ್ದೆ ’  

ಆಶ್ಚರ್ಯಗೊಂಡ ಜಯಂತ ಉತ್ತರಿಸಿದ.

’ನಿಮ್ಮ ಪಿಂಡ, ಬ್ರಹ್ಮಾಂಡರಿಗೆ  ಬೈಲ್  ಆ ವಿಚಾರವಿರಲಿ, ಈಗ ನಿಮ್ಮ ಬೈಲ್ ಗೆ ಓಡಾಡಬೇಕಾಗುತ್ತೆ, ಇದೇನ್ರಿ ನಿಮ್ಮ ಅವಸ್ಥೆ’  ಆಕೆಯ ಮಾತು (ನಮ್ಮ ಊಹೆ)

’ಏಕೆ ಏನು ಹೇಳ್ತಾ ಇದ್ದೀಯ, ನಾನೇಕೆ ಬೈಲ್ ತಗೋಬೇಕು ಯಾರು ಏನು ಹೇಳಿದರೆ’

’ಯಾರೇನು ಹೇಳೋದು, ಪ್ರಪಂಚಕ್ಕೆ ಗೊತ್ತಾಗ್ತ ಇದೆ, ರೀ ನೀವು ಮಾತಾಡ್ತಾ ಇರೋದು ನೇರವಾಗಿ TV-90 ನೋರು ಪ್ರಸಾರ ಮಾಡ್ತಾ ಇದ್ದಾರೆ, ಈಗ ನೀವು ನನ್ನ ಜೊತೆ ಮೊಬೈಲ್ ನಲ್ಲಿ ಮತಾಡ್ತಾ ಇರೋದು ಸಹ ನನಗೆ ಟೀವಿಲಿ ಕಾಣಿಸ್ತಾ ಇದೇರಿ’ ಆಕೆಯ ಮಾತು (ನಮ್ಮ ಊಹೆ)

’ಹೌದೇನೇ ಇದೇನು ಗ್ರಹಚಾರ, ಈ ಗಣೇಶ ಏನೊ ಕಿರಿಕ್ ಮಾಡಿದ ಅಂತ ಕಾಣುತ್ತೆ, ಮೋಸ ಆಗೋಯ್ತು, ನಾನು ಆಮೇಲೆ ಮಾತಾನಾಡುತ್ತೇನೆ’  ಎನ್ನುತ್ತ,

ಅವನು ಬ್ರಹ್ಮಾಂಡರ ಬಳಿಗೆ ಓಡಿದ,

ಅಲ್ಲಿ ಮಂಜುಳ ತಮಾಷಿ ಮಾಡ್ತಾ ಇದ್ದಳು

’ಅಯ್ಯೋ ಗುರುಗಳೆ ನೀವು ರೇಪ್ ಮಾಡೋದು ಎಲ್ಲಿ ಬಂತು, ನಾನು ಎದ್ದು  ವೇಗವಾಗಿ ನಡೆದರೆ ನಿಮ್ಮ ಕೈಲಿ ನನ್ನ ಹಿಂದೆ ಬರೋಕೆ ಆಗೋಲ್ಲ, ಓಡಿ ಬಿಟ್ರೆ, ನಿಮ್ಮ ಕತೆ ಅಷ್ಟೇನೆ, ನೀವು ನನ್ನ ಹಿಡಿಯೋದು ಎಲ್ಲಿ ಬಂತು, ಗೂಬೆಗಳು ಆ ಪೋಲಿಸರು, ಜಡ್ಜ್ ಎಲ್ಲ ನನ್ನ ಮಾತು ನಂಬಿದರು’

ಎನ್ನುತ್ತ ಆಕೆ ಜೋರಾಗಿ ನಕ್ಕಳು, ಗಾಭರಿಯಾದ ಜಯಂತ್ ಕೂಗಿಕೊಂಡ

’ಮಂಜುಳ,  ಏನು ಮಾತನಾಡಬೇಡ, ನಾವು ಟ್ರಾಪ್ ಆಗಿದ್ದೇವೆ,ನಾವು ಮಾತನಾಡುತ್ತಿರುವದೆಲ್ಲ ನೇರವಾಗಿ ಪ್ರಸಾರ ಆಗುತ್ತ ಇದೆ, ಈ ಮನೆಯ ಮೂಲೆ ಮೂಲೆಯಲ್ಲಿ ಕ್ಯಾಮರ ಇದೆ ,  ಹೊರಗೆ ಜನರೆಲ್ಲ ಟೀವಿಲಿ ನೋಡ್ತಾ ಇದ್ದಾರೆ, ನಮ್ಮ ಕತೆ ಮುಗಿಯಿತು, ಮೌನವಾಗಿರು ಮಾತನಾಡಬೇಡ, ಏನಾಗುತ್ತೆ ನೋಡೋಣ’

ಅವರಿಬ್ಬರು ಅಲ್ಲಿಂದ ಓಡಿ ಬಾಗಿಲ ಹತ್ತಿರ ಹೊರಟರು,

ಬಾಗಿಲು ತೆಗೆಯುವಾಗಲೆ, ಹೊರಗೆ ಹತ್ತಾರು ಮಂದಿ ಟೀವಿ ರಿಪೋರ್ಟರ್ ಗಳು, ಕಾಯುತ್ತಿದ್ದರು.  ಪೋಲಿಸ್ ಅಧಿಕಾರಿಯು ಇದ್ದರು. ನಂತರ ಸಾಕಷ್ಟು ಗಲಭೆಗಳು, ಮಾತುಕತೆ, ಎಲ್ಲವೂ ಅಸ್ವಷ್ಟ,

ಸ್ವಲ್ಪ ಹೊತ್ತಿನಲ್ಲೆ , ಪೋಲಿಸ್ ಅಧಿಕಾರಿ ಹೇಳಿಕೆ ಕೊಟ್ಟರು

’ನಿರಾಪರಾದಿಗಳಾದ ಬ್ರಹ್ಮಾಂಡ ಗುರುಗಳ ಮೇಲೆ ಅನಾವಶ್ಯಕ ಅರೋಪ ಹೊರಸಿ , ಪೋಲಿಸರನ್ನು, ಹಾಗು ನ್ಯಾಯಲಯವನ್ನು ದಾರಿ ತಪ್ಪಿಸಿದ, ಕ್ರಿಮಿನಲ್ ಲಾಯರ್ ಜಯಂತ ನಾರಿಮನ್ ಹಾಗು ಅವರ ಸಂಗಾತಿ ಮಂಜುಳರನ್ನು ನಾವು ಬಂದಿಸುತ್ತೇವೆ, ಬ್ರಹ್ಮಾಂಡಗುರುಗಳ ಮೇಲಿರುವ ಎಲ್ಲ ಆರೋಪ ಹಾಗು ಕೇಸನ್ನು ನಾವು ಹಿಂದೆಗೆದುಕೊಂಡು ಅವರಲ್ಲಿ ಕ್ಷಮೆ ಯಾಚಿಸುತ್ತೇವೆ ’  

ಕಾರ್ಯಕ್ರಮ ಮುಂದುವರೆದಿತ್ತು,
ಈಗ ಟೀವಿಯಲ್ಲಿ ನಿರೂಪಕ ಮತ್ತೆ ಕಾಣಿಸಿಕೊಂಡರು, ಟೀವಿಯ ಬ್ರೇಕಿಂಗ್ ನ್ಯೂಸ್ ಸಾಲಿನಲ್ಲಿ ಪದೆ ಬ್ರಹ್ಮಾಂಡರ ಹೆಸರು, ಅವರ ಆಶ್ರಮ,  ಸ್ಟಿಂಗ್ ಕಾರ್ಯಾಚರಣೆಯಲ್ಲಿ ಬಾಗವಹಿಸದವರಲ್ಲಿ ಮುಖ್ಯಸ್ಥರಾದ ಜಯಂತ್ ರಾಮಾಚಾರ್, ಹಾಗು ಚಿಕ್ಕು ಅಂದರೆ ಚೇತನ್ ಕೋಡುವಳಿಯವರ ಹೆಸರು ಪದೆ ಪದೇ ಕಾಣಿಸುತ್ತಿತ್ತು . ಚೇತನ್ ಕೋಡುವಳ್ಳಿ ಅದೇ TV-90 ಯಲ್ಲಿ ಕೆಲಸಮಾಡುವ ಸ್ಟಿಂಗ್  ಅಪರೇಷನ್ ಎಕ್ಸ್ ಪರ್ಟ್ ಎಂದು ಹೇಳುತ್ತಿದ್ದರು.
.
.

ಎಲ್ಲವನ್ನು ನೋಡುತ್ತ ಕುಳಿತ ನಾನು ಕೇಳಿದೆ,

’ಇದೇನು ಶ್ರೀನಾಥರೆ ಏನೆಲ್ಲ ಆಗಿಹೋಯಿತಲ್ಲ, ಅಂತೂ ಬ್ರಹ್ಮಾಂಡರು  ತಮ್ಮ ಅಪವಾದದಿಂದ ಹೊರಬಂದರಲ್ಲ, ಬಹುಶಃ ನೀವು ಹೇಳಿದ್ದಿರಲ್ಲ,  ಶನಿದೇವನ ಸೇವೆ ಮಾಡು, ರಾಹುವಿಹ ಸೇವೆ ಮಾಡು ಎಂದು ಅದರ ಪ್ರಭಾವಾನ’  ನಾನು ಕೇಳಿದೆ

ಶ್ರೀನಾಥರು ಏನನ್ನು ಹೇಳದೇ ನಕ್ಕು ಬಿಟ್ಟರು

ನಾನು ಪುನಃ ಕೇಳಿದೆ

’ಅದು ಸರಿ, ಶ್ರೀನಾಥರೆ ಈಗಲಾದರು ಹೇಳಿ ಇದೆಲ್ಲ ನಿಮ್ಮ ಪ್ಲಾನೇನ, ಬ್ರಹ್ಮಾಂಡರನ್ನು ಕಾಪಾಡಿದ್ದು ನೀವೇನಾ, ಆದರೆ ನೀವು ಇಲ್ಲಿ ಕುಳಿತಿದ್ದೀರಲ್ಲ. ಇದೆಲ್ಲ ಹೇಗೆ ಆಯಿತು, ಅಷ್ಟಕ್ಕೂ  ಬ್ರಹ್ಮಾಂಡರ ಕಾಪಾಡುವ ಕಾರ್ಯಾಚರಣೆಯಲ್ಲಿ ಪದೆಪದೆ ಜಯಂತ ರಾಮಚಾರ ಹಾಗು ಚಿಕ್ಕು ಉರುಫ್ ಚೇತನ್ ಅನ್ನುವವರ ಹೆಸರನ್ನು ಪದೆ ಪದೇ ತೋರಿಸುತ್ತಿದ್ದಾರೆ,  ಈ ಪ್ರಸಂಗದ ಗುಟ್ಟು ನಿಮಗೆ ಗೊತ್ತಾ,, ಕಾರ್ಯಕ್ರಮ ಬರುತ್ತಿದೆ ಎಂದು, ನೇರ ಪ್ರಸಾರವಿದೆ ಎಂದು ನಿಮಗೆ ಪೋನ್ ಮಾಡಿ ತಿಳಿಸಿದವರಾರು ’

ಕುತೂಹಲಕ್ಕೆ ನನ್ನಲ್ಲಿ ನೂರಾರು ಪ್ರಶ್ನೆ ಮೂಡುತ್ತಿದ್ದವು

‘ಸಾರ್ , ನಿಮಗೆ ಇದೆಲ್ಲ ಹೇಗಾಯಿತೆಂದು ,  ಏನಾಯಿತೆಂದು ವಿವರಿಸುವ ಬದಲು ಆ ದಿನ ಬ್ರಹ್ಮಾಂಡರ ಜೊತೆ ಕಡೆಯಲ್ಲಿ ನಡೆದ ಗುಟ್ಟಿನ ಮಾತು ಕತೆಯನ್ನು ವಿವರಿಸಿಬಿಡುತ್ತೇನೆ’  ಎನ್ನುತ ಅಂದಿನ ಘಟನೆ ವಿವರಿಸಿದರು.

ಲೌಕಿಕವಾದ ಉಪಾಯ ಎಂದು ಶ್ರೀನಾಥರು ಅನ್ನುವಾಗಲೆ ಬ್ರಹ್ಮಾಂಡರು ಅವರತ್ತ ನೋಡಿದರು ಅದೇನು ಅನ್ನುವಂತೆ

’ನೋಡಪ್ಪ ಗಣೇಶ ಈಗ ನಿನಗೆ ಸಮಸ್ಯೆ ಬಂದಿರುವುದು ಒಬ್ಬ ಜಯಂತನಿಂದ, ನಿನ್ನ ಸಮಸ್ಯೆಯ ಪರಿಹಾರವು ಜಯಂತನಿಂದಲೇ ಆಗಬೇಕು, ಆದರೆ ಅವನು ಬೇರೆ ,  ಜಯಂತ ರಾಮಾಚಾರ್ ನನಗೂ ನಿನಗೂ ಸ್ನೇಹಿತ’

ಶ್ರೀನಾಥ ಹೇಳಿದಾಗ ಬ್ರಹ್ಮಾಂಡರು ಅನುಮಾನದಿಂದ ಬಾಯಿಬಿಟ್ಟರು

’ಏನಯ್ಯ ನೀನು ಹೇಳೋದು, ಅದೇನೋ ಶಾರ್ಟ್ ಮೂವಿ ತೆಗೆತೀನಿ ಅಂತ ಕ್ಯಾಮರ ಹಿಡದುಕೊಂಡು ಈ ಮೈಸೂರು ರಸ್ತೆಯಲ್ಲೆಲ್ಲ ಓಡಾಡ್ತಿದ್ದನಪ್ಪ ಅವನು ಅವನೇನು ಸಹಾಯ ಮಾಡುವನು’

ಅದಕ್ಕೆ ಶ್ರೀನಾಥ,

’ಅದಕ್ಕೆ ನಿನಗೆ ಅರ್ಥವಾಗಲ್ಲ ಪೆದ್ದು ಅನ್ನೋದು, ನಾನು ಹೇಳುವದನ್ನು ಮಾತ್ರ ಕೇಳು ಪ್ರಶ್ನೆ ಮಾಡಬೇಡ, ಶ್ರೀನಾಥ ಒಬ್ಬನೆ ಅಲ್ಲ, ಮತ್ತೆ ಇಬ್ಬರಿದ್ದಾರೆ ನಮ್ಮ ಗುಂಪಲ್ಲಿ,  ಚಿಕ್ಕು, ಹಾಗು ವೆಂಕಟೇಶ್ ’

’ಚಿಕ್ಕು ಅಂದರೆ ಯಾರಪ್ಪ ಅವನೇ ತಾನೆ, ಯಾವಾಗಲು ಕ್ಯಾಮರ ಹಿಡಿದು ಮರದ ಕೆಳೆಗೆ ಕುಳಿತಿರುತ್ತಿದ್ದ,ಪಕ್ಷಿ ಪೋಟೊ ತೆಗಿತೀನಿ ಅಂತ ಅವನೇ ತಾನೆ, ಇನ್ನು ವೆಂಕಟೇಶ್ ಅಂದರೆ ಬಿಡು ನಮ್ಮ ತಮ್ಮನಿದ್ದ ಹಾಗೆ ಅವನೇ ಪಾಪ ಯಾವಾಗಲು ಅಣ್ಣ ಅಂತ ಇಲ್ಲಿ ಬರ್ತಿತಾನೆ, ಸಪ್ತಗಿರಿ ಅಂತ ಅವನ ಇನ್ನೊಂದು ಅಡ್ಡಹೆಸರು ಆದರೆ ಇವರೆಲ್ಲ ನನಗೆ ಯಾವ ಸಹಾಯ ಮಾಡ್ತಾರಪ್ಪ’

ಶ್ರೀನಾಥ ಸಹನೆಯಿಂದ ಗಣೇಶರಿಗೆ ಹೇಳಿದರು

’ನೋಡು ಇದನ್ನು ಸ್ಟಿಂಗ್ ಆಪರೇಷನ್ ಅಂತ ಕರೀತಾರೆ, ನಿನಗೆ ಗೊತ್ತಾಗಲ್ಲ,  ನೀನು ಮಾಡಬೇಕಾದ್ದು ಇಷ್ಟೆ, ಆ ಜಯಂತ ನಾರಿಮನ್ ಹಾಗು ಮಂಜುಳರನ್ನು ಹೇಗಾದರು ಮಾಡಿ ಹಣಕೊಡುತ್ತೇನೆ ಸಿದ್ದ ಆದರೆ ಅದಕ್ಕೆ ಮುಂಚೆ ನಾನು ಮಾತಾಡಬೇಕು, ನನಗೆ ಗ್ಯಾರಂಟಿ ಬೇಕು , ಅದು ಇದು  ಅಂತಹೇಳಿ ಇಲ್ಲಿಗೆ ಕರೆಸಬೇಕು. ಸಾದ್ಯವಾದರೆ ಇದೇ ರೂಮಾಗಲಿ ಇದು ರಹಸ್ಯವಾಗಿದೆ, ಹಾಗು ಕ್ಯಾಮಾರಗಳನ್ನು ಗುಟ್ಟಾಗಿ ಇಡಲು ಸಹಾಯಕವಾಗಿದೆ,  ಅವರಿಬ್ಬರು ಬರಲು ಒಪ್ಪಿದರೆ ಸಾಕು, ಮುಂದಿನದೆಲ್ಲ ಸುಲಭ, ಈ ಚಿಕ್ಕು ಇದ್ದಾನಲ್ಲ ಅವನು ಕದ್ದು ಪೋಟೋ ತೆಗೆಯುವದರಲ್ಲಿ, ಹಾಗು ಅದಕ್ಕೆ ಸಲಹೆ ಕೊಡುವದರಲ್ಲಿ ಬಹಳ ಎಕ್ಸ್ ಪರ್ಟ್, ಅವನು ಹಾಗು ಜಯಂತ್ ರಾಮಾಚಾರ್ ಸೇರಿದರೆ ಎಲ್ಲವೂ ಸುಲಭ’

’ಅದೇನೊ ಸರಿಯಾಯಿತು, ಆದರೆ ಹುಡುಗ ವೆಂಕಟೇಶ್ ಇಲ್ಲಿ ಬಂದು ಏನು ಮಾಡುವ’

’ಅವನನ್ನು ಬೇರೆ ವಿಷಯಕ್ಕೆ ಕರೆಸುತ್ತಿರೋದು, ಈ ಸ್ಟ್ರಿಂಗ್ ಅಪರೇಷನ್ ನಲ್ಲಿ  ಅವರಿಬ್ಬರನ್ನು, ಜಯಂತನಾರಿಮನ್ ಹಾಗು ಮಂಜುಳರನ್ನು  ನಂಬಿಸುವಂತೆ ಮಾತನಾಡುವುದೇ ಮುಖ್ಯ. ನೀನೊ ತೀರ ಪೆದ್ದು ಪೆದ್ದು, ಮಾತನಾಡಲು ತಿಳಿಯಲ್ಲ, ಬೇಕಾದರೆ ಇಲ್ಲಿ ಕ್ಯಾಮರ ಇಟ್ಟಿದ್ದೀವಿ ಅಂತ ತಿಳಿಸಿಬಿಡುತ್ತಿ, ಅದಕ್ಕೆ ನೀನು ಅವರ ಜೊತೆ ಹೇಗೆ ವರ್ತಿಸಬೇಕು, ಯಾವ ಸಮಯಕ್ಕೆ ಹೇಗೆ ಮಾತನಾಡಿ ಅವರನ್ನು ನಂಬಿಸಬೇಕು ಇಂತಹುದನ್ನೆಲ್ಲ ತಿಳಿಸಿ , ನಿನ್ನ ತಯಾರು ಮಾಡಲು ವೆಂಕಟೇಶನನ್ನು ಕರೆಸುವ’

ತನ್ನನ್ನು ಪೆದ್ದು ಪೆದ್ದು ಎಂದು ಬೈದದ್ದಕ್ಕೆ ಬ್ರಹ್ಮಾಂಡರಿಗೆ ಬ್ರಹ್ಮಾಂಡವಾದ ಸಿಟ್ಟು ಬಂತು ಆದರೆ ಅದನ್ನು ತೋರಿಸುವ ಹಾಗಿರಲಿಲ್ಲ ಕೆಲಸ ಕೆಡುತ್ತದೆ ಎಂದು ಸುಮ್ಮನಾದರು. ಅಷ್ಟು ವ್ಯವಹಾರ ಜ್ಞಾನವಂತು ಅವರಿಗಿತ್ತು.

ಎಲ್ಲ ವಿವರಿಸಿ ನಕ್ಕರು ಶ್ರೀನಾಥರು.

’ಇವರೆಲ್ಲ ಹಿನ್ನಲೆಯಲ್ಲಿದ್ದಾರೆ ಪಾರ್ಥರವರೆ, ನೋಡಿ ನಮ್ಮ ಪ್ಲಾನ್ ಹೇಗೆ ವರ್ಕೌಟ್ ಆಗಿ ಹೋಯಿತು, ನನಗೆ ಈ ರಾತ್ರಿಯೆ  u.s ಗೆ ಫ್ಲೈಟ್ ಬುಕ್ ಆಗಿದೆ, ಹೇಗಪ್ಪ ಅಂತ ಕೊಂಚ ಆತಂಕವಾಗಿತ್ತು, ಸದ್ಯ ಎಲ್ಲ ಸರಿಯಾಯಿತು. ಇನ್ನು ಹೊರಡಬಹುದು, ಸರಿಯಾದ ಸಮಯಕ್ಕೆ ಆ ಚಿಕ್ಕು ಫೋನ್ ಮಾಡಿ ನೇರ ಕಾರ್ಯಕ್ರಮ ಪ್ರಸಾರ ನೋಡು ಎಂದ ”

ಎಂದರು.

ನಾನು ಆಶ್ಚರ್ಯದಿಂದ ಹೌದೇ ಅನ್ನುವಾಗ ಮತ್ತೆ ಹೇಳಿದರು,

’ನಮ್ಮ ಮೊದಲ ಪ್ಲಾನಿನ ಪ್ರಕಾರ ಎಲ್ಲವನ್ನು ರೆಕಾರ್ಡ್ ಮಾಡಿ ಪೋಲಿಸರಿಗೆ ಕೊಡುವುದು ಅಂತ ಇತ್ತು, ಆದರೆ ಎಲ್ಲವೂ ಎಷ್ಟು ಚೆನ್ನಾಗಿ ಬರುತ್ತಿತ್ತು ಅಂದರೆ ಚಿಕ್ಕು ಮನಸ್ಸು ಬದಲಾಯಿಸಿ, ನೇರವಾಗಿ ಅವರ ಬಾಸನ್ನು ಸಂಪರ್ಕಿಸಿ, ನೇರಪ್ರಸಾರಕ್ಕೆ ಅವರನ್ನು ಒಪ್ಪಿಸಿದನಂತೆ, ನೇರ ಪ್ರಸಾರ ಅನ್ನುವುದು ಕಡೆಯ ಕ್ಷಣದಲ್ಲಿ ಆದ ಬದಲಾವಣೆ ಎಂದು ಹೇಳಿದ’ ಎಂದು ನಕ್ಕರು

ನಾನು ವಿದೇಶಕ್ಕೆ ಹೊರಟಿದ್ದ  ಶ್ರೀನಾಥರನ್ನು ಬಿಳ್ಕೊಟ್ಟು ಬ್ರಹ್ಮಾಂಡರ ಆಶ್ರಮದ ಕಡೆಗೆ ಹೊರಟೆ.

ಹೊರಗೆ ಜನಸಾಗರವೇ ನೆರೆದಿತ್ತು, ಪೋಲಿಸರು ಯಾರನ್ನು ಒಳಗೆ ಬಿಡುತ್ತಿರಲಿಲ್ಲ, ಎಲ್ಲರನ್ನು ತಡೆದು ದೂರ ಕಳಿಸುತ್ತಿದ್ದರು. ಎಲ್ಲರೂ ಬ್ರಹ್ಮಾಂಡರನ್ನು ನೋಡಿ ಆಶೀರ್ವಾದ ತೆಗೆದುಕೊಳ್ಳುವ ಆಸೆ ಇರುವವರು, ಆದರೆ ಎಲ್ಲರಿಗೂ ಒಳಗೆ ಹೋಗಲು ಆಗಬೇಕಲ್ಲ, ಮುಂದಿನವಾರ ಬನ್ನಿ ಎಂದು ಹೇಳಿ ಕಳಿಸುತ್ತಿದ್ದರು

ಶ್ರೀನಾಥರಿಂದ ಕತೆ ಕೇಳಿದ್ದರಿಂದ , ನೆಮ್ಮದಿಯಾಗಿ ಆಶ್ರಮದ ಗೇಟಿನ ಹತ್ತಿರ ಹೋಗಿ ಗುಟ್ಟಾಗಿ, ಸೆಕ್ಯೂರಿಟಿ ಹತ್ತಿರ ಹೇಳಿದೆ ಅವರ ಪಾಸ್ ವರ್ಡನ್ನ .

’ಏಳರ ಶನಿ ಏಳರ ಶನಿ ಏಳರ ಶನಿ’

ಅವನು ನನ್ನನ್ನು ವ್ಯಘ್ರನಾಗಿ ನೋಡಿದ

’ರೀ ಸ್ವಾಮಿ ಕಳೆದ ವಾರದ ಪಾಸ್ ವರ್ಡ್ ತಂದು ಮೋಸ ಮಾಡಲು ನೋಡುವಿರ, ಯಾರ ಹತ್ತಿರವೋ ಕೇಳಿ ಬಂದಿದ್ದೀರಿ,  ಸ್ವಾಮಿಗಳು ಸಿಕ್ಕಾಪಟ್ಟೆ ಬಿಸಿ ಇದ್ದಾರೆ, ಹಾಗೆಲ್ಲ ಒಳಗೆ ಬಿಡಲು ಆಗಲ್ಲ ನಡೀರಿ’
ಅಯ್ಯೋ ಆಗಲೇ ಪಾಸ್ ವರ್ಡ್ ಬದಲಾಗಿ ಹೋಗಿದೆಯ, ಅಲ್ಲಿಗೆ ನಾನು ಸಧ್ಯಕ್ಕೆ ಒಳಗೆ ಹೋಗುವ ಹಾಗಿಲ್ಲ ಎಂದು ಸಪ್ಪೆಯಾಗಿ ಅಲ್ಲಿಂದ ಹೊರಟೆ.

ಬ್ರಹ್ಮಾಡರ ಪುರಾಣದ 
ಬ್ರಹ್ಮಾಂಡ ವಿಲಾಸದಲ್ಲಿ 
ಬ್ರಹ್ಮಾಂಡರ‌ ಬೇಟಿ ಎಂಬ ಅಧ್ಯಾಯದ  
ಸ್ಟಿಂಗ್ ಕಾರ್ಯಾಚರಣೆ ಎನ್ನುವ‌ ಸಾಹಸದ‌ ಕತೆ  

ಮುಗಿಯಿತು

 

Rating
No votes yet

Comments

Submitted by partha1059 Thu, 12/25/2014 - 19:10

In reply to by kavinagaraj

ಗಣೇಶರು ಎಲ್ಲಿ ಸಿಗುತ್ತಾರೆ ಸಾರ್ ! ಹಾಗೆಲ್ಲ !
ನುಣುಚಿಕೊಂಡು ಬಿಡುತ್ತಾರೆ !
ನಿಮಗೆ ಖುಷಿ ಆಯಿತಲ್ಲ ಬಿಡಿ ! ಸಾರ್ಥಕ