ಒಂದಿಷ್ಟು ಮಾಹಿತಿ ಇಲ್ಲಿದೆ..........
ನಾವು ದಿನನಿತ್ಯ ಬಳಸುವ ಒಂದಿಷ್ಟು ಶುದ್ಧ ಅಶುದ್ಧ ಶಬ್ದಗಳ ಮಾಹಿತಿ
ಬಳಕೆಯ ಅಶುದ್ಧ ಶಬ್ದಗಳು ಶುದ್ಧ ಶಬ್ದಗಳು
ಉಪಹಾರ ಉಪಾಹಾರ
ಫಲಹಾರ ಫಲಾಹಾರ
ಮಧ್ಯಂತರ ಮಧ್ಯಾಂತರ
ಬೇಸಿಗೆ ಬೇಸಗೆ
ನಾಲಿಗೆ ನಾಲಗೆ
ಮಹಾವೃತ ಮಹಾವ್ರತ
ಅನುವಂಶೀಯತೆ ಆನುವಂಶೀಯತೆ
ವ್ರತ್ತಾಂತ ವೃತ್ತಾಂತ
ವ್ರತ್ತ ವೃತ್ತ
ಮಡಿಕೆ ಮಡಕೆ
ಜಾತ್ಯಾತೀತ ಜಾತ್ಯತೀತ
ಹಾವಾಡಿಗ ಹಾವಡಿಗ
ಬೆಳಸಿ ಬೆಳಸು
ಜಾನ್ಹವಿ ಜಾಹ್ನವಿ
ವಿವ್ಹಲ ವಿಹ್ವಲ
ಸನ್ನಿವೇಷ ಸನ್ನಿವೇಶ
ಭೋದನೆ ಬೋಧನೆ
ಸಂವಿಧಾನಿಕ ಸಾಂವಿಧಾನಿಕ
ನಿಮಗೆ ಈ ಸಂಗ್ರಹ ಮಾಹಿತಿ ನೆರವಾಗಬಹುದೇ ?









ಪ್ರತಿಕ್ರಿಯೆಗಳು
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಎಲ್ಲವೂ ಪರಿಶುದ್ಧ ಕನ್ನಡ ಶಬ್ದಗಳಲ್ಲ. ಅವು ಸಕ್ಕದದಿಂದ ಕನ್ನಡಕ್ಕೆ ಬಂದವುಗಳು.
ಮಹಾಪ್ರಾಣ ಮತ್ತು ಅಲ್ಪಪ್ರಾಣಗಳನ್ನು ಎಲ್ಲಿ ಬಳಸಬೇಕೆಂಬುದಕ್ಕೆ ಒಂದು thumb rule ಇದ್ದರೆ ಹೇಳಿಕೊಡಿ. ನಮ್ಮಂಥ ದಡ್ಡರಿಗೆ ಅದು ತಿಳಿಮೆ ಬರೋಲ್ಲ.
ಹಾಗೆಯೇ ಯಾವುದು ಶುದ್ಧ ರೂಪ ಮತ್ತು ಯಾವುದು ಅಶುದ್ಧ ರೂಪ ಎಂಬುದನ್ನು ಹೇಗೆ ತಿಳಿಯಬೇಕು ಎಂಬುದನ್ನೂ ಹೇಳಿಕೊಡಿ. ಒಂದು ಕಡೆ ಶುದ್ಧರೂಪವಾಗಿ ಇರುವುದು ಇನ್ನೊಂದು ಕಡೆ ಅಶುದ್ಧವಾಗಿರಬಹುದು. ಯಾವ ಭೌಗೋಳಿಕತೆಯಲ್ಲಿನ ಬಳಕೆ ಶುದ್ಧರೂಪದ್ದು ಎಂದು ದಯವಿಟ್ಟು ತಿಳಿಸಿಕೊಡಿ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಸಾಲೀಮಠರೇ, ನಮಸ್ಕಾರ
<<ಅವು ಸಕ್ಕದದಿಂದ ಕನ್ನಡಕ್ಕೆ ಬಂದವುಗಳು>>
ನನಗೆ ಒ೦ದು ಮಾಹಿತಿ ಬೇಕು. ಸಕ್ಕದ ಅ೦ದ್ರೆ ನನಗೆ ಗೊತ್ತಾಗಲಿಲ್ಲ. ಅದರ ಮೂಲ ಯಾ ಅದರ ಬಗ್ಗೆ ನನಗೆ ಮಾಹಿತಿ ನೀಡುವಿರಾ?
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಸಕ್ಕದ ಎಂಬುದು "ಸಂಸ್ಕೃತ"ದ ತದ್ಭವ ರೂಪ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಸಾಲಿಮಠರವರಿಗೆ ಧನ್ಯವಾದಗಳು
ನಾನಿಲ್ಲಿ ಹೆಸರಿಸಿದ್ದು ಗ್ರಂಥಸ್ಥ ಭಾಷೆಯ ಶುದ್ಧಾಶುದ್ಧತೆಯ ಕುರಿತಲ್ಲ.ಜನರ ಆಡುಭಾಷೆಯ ಶುದ್ಧಾಶುದ್ಧತೆಯ ಕುರಿತು.ನಮ್ಮ ಜವಪದ ಸಾಹಿತ್ಯದಲ್ಲಿನ ಶುದ್ಧ ಪದಪ್ರಯೋಗಗಳೇ ಇದಕ್ಕೆ ನಮಗೆ ಮಾದರಿ.ಆಡುಭಾಷೆ ಶುದ್ಧವಾಗಿದ್ದಲ್ಲಿ ಅದು ಸದಾಕಾಲ ಸತ್ವಶಾಲಿ ಸುಂದರಭಾಷೆಯಾಗಿ ಉಳಿಯಬಲ್ಲುದು
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ದಾರಿ ತಪ್ಪಿಸುತ್ತಿದ್ದೀರಿ...!
ಶುದ್ಧವಾಗಿ ಮಾತನಾಡು ಅಂದರೆ ಹೇಗೆ? ವ್ಯಾಕರಣದಂತೆ ಮಾತನಾಡು ಎಂದೇ? ಭಾಷೆಯಿಂದ ವ್ಯಾಕರಣವೇ; ವ್ಯಾಕರಣದಿಂದ ಭಾಷೆಯೇ?
ಜನಪದ ಸಾಹಿತ್ಯದಲ್ಲಿ ಶುದ್ಧ ಪದಬಳಕೆ ಬೇರೆಬೇರೆ ಕಡೆ ಬೇರೆ ಬೇರೆ ರೀತಿ ಇದೆ.
ನೀವು ಹೇಳಿದ ಪದಗಳು ಬಹುತೇಕ ಜನಪದದಲ್ಲಿ ಬಳಕೆಯಲ್ಲಿಲ್ಲ.
ನಿಮ್ಮ ಪ್ರಕಾರ ಕನ್ನಡ ಸತ್ವಶಾಲಿ ಭಾಷೆಯಲ್ಲ ಎಂದಾಗುತ್ತದೆ ಯಾಕೆಂದರೆ, ತೀರಾ ಇತ್ತೀಚಿನವರೆಗೆ 'ಹ' ಕಾರ ಕನ್ನಡದಲ್ಲಿರಲಿಲ್ಲ.
ಆರೈಕೆಯ ಶುದ್ಧ ರೂಪ ಪಾರಯಿಕೆ
ಹೇಳು ಪೇಳು. ಇತ್ಯಾದಿ..
ಪಕಾರಗಳು ಹಕಾರಗಳಾಗಿವೆಯಲ್ಲ ಏನು ಮಾಡುವುದು? ಶುದ್ಧರೂಪ ಬದಲಾವಣೆಯಾಗಿದೆಯಲ್ಲ!
ಶ್ರುತಿ ಶೃತಿ ಇವೆರಡರ ಆಡುಭಾಷೆಯ ಬಳಕೆಯ ವ್ಯತ್ಯಾಸವನ್ನು ಹೇಗೆ ತಿಳಿಸುವಿರಿ?
ಹಾಗೆಯೇ ಸನ್ನಿವೇಶ ಮತ್ತು ಸನ್ನಿವೇಷ ಇವೆರಡನ್ನು ಬರೆಯುವಾಗ ವ್ಯತ್ಯಾಸ ತೋರಿಸಬಹುದು. ಆಡುವಾಗ ಹೇಗೆ ವ್ಯತ್ಯಾಸ ತೋರಿಸುತ್ತೀರಿ?
ನಿಮ್ಮ ಪ್ರತಿಕ್ರಿಯೆ ನಿಮ್ಮ ಬರಹಕ್ಕಿಂತ ನೀರಸವಾಗಿದೆ ಹಾಗೂ ಪಲಾಯನಗೈಯುವಂತಿದೆ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಸಾಲಿಮಠ ರವರಿಗೆ ನಮಸ್ಕಾರಗಳು
<< ದಾರಿ ತಪ್ಪಿಸುತ್ತಿದ್ದೀರಿ..>>.!
ಇಲ್ಲಿ ದಾರಿತಪ್ಪುವ ಕಾರ್ಯವಾಗಿಲ್ಲ ಅಂತ ನನ್ನ ಭಾವನೆ. ಆಡು ಮಾತಿನಲ್ಲಾಗಲಿ, ರೂಢಿಮಾತಿನಲ್ಲಾಗಲಿ,ಗ್ರಾಮ್ಯಭಾಷೆಯಲ್ಲಾಗಲಿ,ಜಾನಪದ ನುಡಿಯಲ್ಲಾಗಲಿ, ವ್ಯಾಕರಣವು ಮೂಲಭೂತ ಅಂಶವಾಗಿರಬೇಕಾದುದು ಸೂಕ್ತ.ಅದರಿಂದ ಭಾಷೆಯ ಬೆಡಗು, ಬಿಗುವು ಅರ್ಥಗಳು ಹೆಚ್ಚುವದಲ್ಲದೆ ಅಪಾರ್ಥ-ಅನರ್ಥಗಳಿಗೆ ಕಾರಣವಾಗುವದಿಲ್ಲ ಹಾಗೂ ಸತ್ವಪೂರ್ಣ ಭಾಷೆಯಾಗಿ ಉಳಿಯಬಲ್ಲುದು.
ನಾನು ಹೇಳಿರುವ ಕೆಲವು ಪದಗಳು ನಮ್ಮ ಬಳಕೆಯಲ್ಲಿ ತಪ್ಪಾಗಿ ಬಳಸುತ್ತಿರುವ ಶಬ್ಧಗಳ ಕಡೆಗೆ ಗಮನಹರಿಸುವದೇ ಹೊರತೂ ನೀವು ಹೇಳಿದಂತೆ"<<ಶುದ್ಧವಾಗಿ ಮಾತನಾಡು ಅಂದರೆ ಹೇಗೆ? ವ್ಯಾಕರಣದಂತೆ ಮಾತನಾಡು ಎಂದೇ? ಭಾಷೆಯಿಂದ ವ್ಯಾಕರಣವೇ;ವ್ಯಾಕರಣದಿಂದ ಭಾಷೆಯೇ? >> ಇದರೆಡೆಗೆ ಅಲ್ಲ. ಇದು ತರ್ಕಕ್ಕಾಗಿಯೂ ಅಲ್ಲ.ಭಾಷೆಯ ಪರಿಶುದ್ಧತೆ ಕಾಪಾಡುವ ಕಾರ್ಯ ಅದನ್ನು ಬರೆಯಲು ಓದಲು ಬಲ್ಲವರಿಂದಲ್ಲದೇ ಇನ್ನಾರಿಂದ ಸಾಧ್ಯ ?
<<ಜನಪದ ಸಾಹಿತ್ಯದಲ್ಲಿ ಶುದ್ಧ ಪದಬಳಕೆ ಬೇರೆಬೇರೆ ಕಡೆ ಬೇರೆ ಬೇರೆ ರೀತಿ ಇದೆ>> ಭಾಷೆಯಲ್ಲಿ ಶುದ್ಧತೆಯು ಕಲಿಯುವದರಿಂದ ಮಾತ್ರ ಬರುವದಿಲ್ಲ. ಅದು ಬಾಲ್ಯದಿಂದಲೇ ತಮಗರಿಯದಂತೆ ತಾನೇ-ತಾನಾಗಿ ಮನುಷ್ಯನಲ್ಲಿ ಮೈಗೂಡಿ ಬೆಳೆದು ಬಂದಿರುತ್ತದೆ. ನಮ್ಮ ಜಾನಪದ ಸಾಹಿತ್ಯ ಯಾವುದೇ ಪದವಿ ಪಡೆದವರಿಂದ ರಚನೆಗೊಂಡಿದ್ದಲ್ಲ. ಅದರಲ್ಲಿ ಶುದ್ಧತೆಯ ಕೊರತೆಯಿದೆಯೆಂದು ಅನಿಸುವದೇ? ಹಾಗಿದ್ದರೆ ಆ ಶುದ್ಧತೆಯು ಹೇಗೆ ಸಾಧ್ಯವಾಯಿತು?
<< ಆಡುವಾಗ ಹೇಗೆ ವ್ಯತ್ಯಾಸ ತೋರಿಸುತ್ತೀರಿ?>>
ನನ್ನ ವಿಷಯ ಆಡು ಭಾಷೆಯ ಕುರಿತಾಗಿ ಅಲ್ಲ. ಹಾಗಾಗಿ ನಿಮ್ಮ ಪ್ರಶ್ನೆಯಿಂದ ನೀವೆ ಹಾದಿತಪ್ಪಿರಬಹುದೆಂದು ನನ್ನ ಸಂದೇಹ.
<<ನಿಮ್ಮ ಪ್ರತಿಕ್ರಿಯೆ ನಿಮ್ಮ ಬರಹಕ್ಕಿಂತ ನೀರಸವಾಗಿದೆ ಹಾಗೂ ಪಲಾಯನಗೈಯುವಂತಿದೆ.>>
ನಿಮ್ಮ ಈ ಪ್ರತಿಕ್ರಿಯೆಯನ್ನು ಗೌರವದಿಂದ ಸ್ವೀಕರಿಸುತ್ತಾ ಸಂಪದದಲ್ಲಿ "ರಸ" ತುಂಬಿದ ಲೇಖನ ನಿಮ್ಮಿಂದ ನಿರೀಕ್ಷಿಸುವೆ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ನಿಮ್ಮ ಈ ಪ್ರತಿಕ್ರಿಯೆ ಅತ್ಯಂತ ಸತ್ವರಹಿತವಾಗಿದೆ.
ಹಿಂದಿನ ನಿಮ್ಮದೇ ಕಮೆಂಟನ್ನು ನೋಡಿ "ನಾನು ಬರೆದಿದ್ದು ಗ್ರಾಂಥಿಕ ಭಾಷೆಯಲ್ಲ ಾಡುಭಾಷೆಯ ಶುದ್ಧತೆಯ ಬಗ್ಗೆ ಬರೆದಿದ್ದು" ಎಂದು ಹೇಳಿದ್ದಿರಿ. ಹೊಸ ಕಮೆಂಟಿನಲ್ಲಾಗಲೇ ಪ್ಲೇಟನ್ನು ಉಲ್ಟಾ ತಿರುಗಿಸಿದ್ದೀರಿ! ("ನನ್ನ ವಿಷಯ ಆಡು ಭಾಷೆಯ ಕುರಿತಾಗಿ ಅಲ್ಲ.")
ತಾವು ಏನು ಬರೆಯಬೇಕೆಂದಿದ್ದೀರಿ ಏನು ಹೇಳಬೇಕೆಂದಿದ್ದೀರಿ ಎಂಬುದನ್ನು ಸರಿಯಾಗಿ ನಿರ್ಣಯಿಸಿ ಬರೆಯಿರಿ. ಹಿಂದಿನ ಕಮೆಂಟಿನ ಸಂಪೂರ್ಣ ಉಲ್ಟಾ ಉತ್ತರ ಹೊಸ ಕಮೆಂಟಿನಲ್ಲಿ ಬರೆದಿದ್ದೀರಿ. ಓದುಗರು ಮೂರ್ಖರು ಎಂದು ತಾವು ಭಾವಿಸಿದಂತಿದೆ.
"ಶುದ್ಧತೆ" ಎಂಬುದನ್ನು ನಿಮ್ಮ ಪಾಠದ ತಲೆಬರಹದಲ್ಲೆ ಕೊಟ್ಟು ಈಗ ದಾರಿ ತಪ್ಪಿಸುತ್ತಿದ್ದೀರಿ!
ಇನ್ನು ನಿಮ್ಮೊಡನೆ ಮಾತಾಡಿ ಪ್ರಯೋಜನವಿಲ್ಲ. ನಮಸ್ಕಾರ!
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಆತ್ಮೀಯ ಸಾಲಿಮಠರವರಿಗೆ ನಮಸ್ಕಾರ
<<"ಶುದ್ಧತೆ" ಎಂಬುದನ್ನು ನಿಮ್ಮ ಪಾಠದ ತಲೆಬರಹದಲ್ಲೆ ಕೊಟ್ಟು ಈಗ ದಾರಿ ತಪ್ಪಿಸುತ್ತಿದ್ದೀರಿ!>>
ಕ್ಷಮೆಯಿರಲಿ, ಕನ್ನಡ ಕೀಲಿಮಣೆ ಬಳಕೆಯಲ್ಲಿ ಹಾಗೂ ಪ್ರತಿಕ್ರಿಯೆನೀಡುವಲ್ಲಿ ನಾನಿನ್ನು ಎಳಸು.ಸಂಪದದಲ್ಲಿ ನಾನು ಬಳಕೆಯಲ್ಲಾಗುತ್ತಿರುವ ಶುದ್ಧ ,ಅಶುದ್ಧ ,ಶಬ್ಧ ಸಂಗ್ರಹ ನೀಡಿ ಕೊನೆಯಲ್ಲಿ ಇದು ಸಂಗ್ರಹ ಯೋಗ್ಯವಾಗಬಹುದೇ? ಎಂಬ ಪ್ರಶ್ನೆಯನ್ನು ಓದುಗರಮುಂದಿಟ್ಟಿದ್ದನ್ನು ತಾವು ಗಮನಿಸಿರ ಬಹುದು.ಹೀಗಯೇ ಬಳಸಬೇಕೆಂದು ನಾನಲ್ಲಿಯೂ ಹೇಳಿಲ್ಲ.ಅಷ್ಟಕ್ಕೂ ಅದು ಲೇಖನವಲ್ಲ ಸಂಗ್ರಹ ಮಾಹಿತಿ.ನನ್ನ ತಲೆ ಬರೆಹದ ಹೆಸರೂ ಸಹ "ಯಾವುದು...........ಪರಿಶುದ್ಧ ಕನ್ನಡ ಶಬ್ಧ"? ಎಂಬುದು. ನನ್ನ ಪ್ರತಿಕ್ರಿಯೆಯಲ್ಲಿಯೂ ನಾನು ಹಾದಿ ತಪ್ಪಿದೆ ಎಂಬ ಅರಿವುಮೂಡಿಸಿದ ತಮಗೆ ಅಭಿನಂದನೆಗಳು. ಮುಂದೆ ನನ್ನಿಂದ ಈ ರೀತಿ ಆಗಲಾರದೆಂದು ಭರವಸೆ ನೀಡುವೆ.ಒಂದಿಷ್ಟು ಕುತೂಹಲಗಳನ್ನು ಬಗಲಲ್ಲಿಟ್ಟು ಕೊಂಡು ಸಂಪದದಲ್ಲಿ ಬಲ್ಲವರು ಬಹಳ ಜನ ಇರುವದರಿಂದಲೇ ಹೊಸತನ್ನು ಕಲಿತು ಕೊಳ್ಳುವ ಆಸೆಹೊತ್ತು ಬಂದೆ.ನಾನೂ ಏಕೆ ಬರೆಯಬಾರದು ಎಂಬ ಹಠಕ್ಕೆ ಬಿದ್ದು ಹೀಗಾಗಿರಬಹುದು.
ನನ್ನಲ್ಲಿ ಶಬ್ಧದ ಬಡತನವಿದೆಯೆಂದು ನಮ್ರನಾಗಿ ಒಪ್ಪಿಕೊಳ್ಳುತ್ತೇನೆ. ಇದು ದಯನೀಯತೆ,ಅಥವಾ ದೌರ್ಬಲ್ಯವೆಂದು ಪರಿಭಾವಿಸದೇ
ತಪ್ಪನ್ನು ತಿದ್ದಿದ ತಮ್ಮನ್ನು ಸ್ಮರಿಸುವೆ. ಧನ್ಯವಾದಗಳು,
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ನಮಸ್ಕಾರಗಳು,
ಇಂತಹ ಮತ್ತಷ್ಟು ಶಬ್ದಗಳನ್ನು ಬರೆಯಿರಿ.
ಶುಭವಾಗಲಿ
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಭಾಗ್ವತರೆ
ಗೃಹ ಪ್ರವೇಶಕ್ಕೆ ಗುರು ಪ್ರವೇಶ ಅನ್ನೋರು ಇದ್ದಾರೆ :)
--
ಅರವಿಂದ್
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಕನ್ನಡ ವಾರ್ತೆ ಓದುವವರು ಅತಿ ಸಾಮಾನ್ಯವಾಗಿ ಮಾಡುವ ತಪ್ಪು: "ಜ್ಞ" ದ ಬದಲಾಗಿ "ಘ್ನ" ಎಂದು ಹೇಳುವುದು. ಹೀಗಾಗಿ "ಕೃತಜ್ಞತೆ"ಗೆ ಬದಲಾಗಿ ಸಂಪೂರ್ಣ ವಿರುದ್ಧವಾದ "ಕೃತಘ್ನತೆ" ಎಂದಾಗಿಬಿಡುತ್ತದೆ. ಜ್ಞಾನಿಯು ಘ್ನಾನಿಯಾಗುತ್ತಾನೆ. ಈ ತಪ್ಪನ್ನು ಹೆಚ್ಚಿನ ಬೆಂಗಳೂರು-ಮೈಸೂರು ಸೀಮೆಯ ಜನರು ಮಾಡುವುದನ್ನು ಗಮನಿಸಿದ್ದೇನೆ(ನನಗೆ ಯಾವುದೇ ಪ್ರದೇಶದ ಜನರ ವಿರುದ್ಧ ಪೂರ್ವಾಗ್ರಹ ಭಾವನೆ ಇಲ್ಲ ಎಂದು ಸ್ಟಷ್ಟ ಪಡಿಸುತ್ತಾ).
ಕೆಲವರು ಅಂತರರಾಷ್ಟ್ರೀಯ ಎಂದು ಬಳಸುವುದನ್ನು ನೋಡಬಹುದು. ಆದರೆ ಸರಿಯಾದ ಪ್ರಯೋಗ "ಅಂತಾರಾಷ್ಟ್ರೀಯ" ಎಂದು ಹಿಂದೆ ಎಲ್ಲೋ ಓದಿದ ನೆನಪು. ಸರಿಯಾಗಿ ಗೊತ್ತಿಲ್ಲ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಕೆಲವರು ಅಂತರರಾಷ್ಟ್ರೀಯ ಎಂದು ಬಳಸುವುದನ್ನು ನೋಡಬಹುದು. ಆದರೆ ಸರಿಯಾದ ಪ್ರಯೋಗ "ಅಂತಾರಾಷ್ಟ್ರೀಯ" ಎಂದು ಹಿಂದೆ ಎಲ್ಲೋ ಓದಿದ ನೆನಪು. ಸರಿಯಾಗಿ ಗೊತ್ತಿಲ್ಲ.
ನಿಮ್ಮ ಓದಿನ ನೆನಪು ಸರಿ ಇದೆ."ಅಂತಾರಾಷ್ಟ್ರೀಯ" ಈ ಪದ ಬಳಕೆಯೇ ಹೆಚ್ಚು ಸರಿ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಸಾಲಿಮಠರನ್ನೇ ಕೇಳೋಣ!
ಅದಕ್ಕೇನು ಭಾಗ್ವತರೇ? ಗೊತ್ತಿಲ್ಲದಿದ್ದದ್ದನ್ನು ಕೇಳುವುದರಲ್ಲಿ, ಬೇಸರ, ಸ೦ಕೋಚ ಎರಡನ್ನೂ ಇಟ್ಟುಕೊಳ್ಳಬಾರದು.
ಸಾಲಿಮಠರೇ, ``ಅ೦ತಾರಾಷ್ಟ್ರೀಯ``ನಾ `` ಅ೦ತರರಾಷ್ತ್ರೀಯ`` ನಾ?
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ನಾವುಡರವರೆ ಅವರೇ ನಾನೇ ಹೇಳ್ತೀನಿ,
"ಅ೦ತಾರಾಷ್ತ್ರೀಯ" ಅಲ್ಲ "ಅಂತರ್ ರಾಷ್ತ್ರೀಯ" ಎನ್ನುವದು ಶುದ್ಧ ಬಳಕೆಯಾಗಿದೆ.
ಇನ್ನು ಕೆಲವು,
ಅಂತರ್ ಶಾಲಾ ಕ್ರೀಡಾಕೂಟ
ಅಂತರ್ ರಾಜ್ಯ ಕ್ರೀಡಾಕೂಟ
ಈ ಹಿಂದೆ ನಾನು ತಪ್ಪಾಗಿ ಅರ್ಥ ನೀಡಿದ ಶಬ್ಧ -"ಅ೦ತಾರಾಷ್ತ್ರೀಯ"ಈ ಬಗ್ಗೆ ಕ್ಷಮೆಯಿರಲಿ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಇಲ್ಲ ;
ಸಂಸ್ಕೃತದಲ್ಲಿ ಅಂತರ್ರಾಷ್ಟ್ರೀಯ ಸರಿ ಇರಬಹುದು . ಆದರೆ ಕನ್ನಡದಲ್ಲಿ ಅಂತಾರಾಷ್ಟ್ರೀಯವೇ ಸರಿ ಅಂತೆ . ಈ ಬಗ್ಗೆ ಕಸ್ತೂರಿಯಲ್ಲಿ ಎರಡು-ಮೂರು ವರುಷಗಳ ಹಿಂದೆ ಹಿಂದೊಮ್ಮೆ ಬರಹ ಇತ್ತು . ಎರಡು ರಕಾರಗಳು ಕರ್ಕಶ. ಕನ್ನಡವು ಕಿವಿಗೆ ಕರ್ಕಶವಾಗಬಾರದೆಂದು ರ್ರ ಕೂಡದು ಅಂತೆ ! ಅದಕ್ಕೇ ಇರಬಹುದು, ಈಗ ಎಲ್ಲೆಡೆ 'ಅಂತಾರಾಷ್ಟ್ರೀಯ' ಶಬ್ದದ ಬಳಕೆ ಕಂಡು ಬರುತ್ತಿದೆ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಪ್ರತಿಕ್ರೀಯೆಗಾಗಿ ಧನ್ಯವಾದಗಳು ಶ್ರೀಕಾಂತರವರೆ,
ಈ ಪದ ಬಳಕೆಯ ಬಗ್ಗೆ ನಿಮಗೆ " ಆಯ್.ಎಸ್.ಅರಳಗುಪ್ಪಿ" ಅವರು ಬರೆದ " ಪರಿಶುದ್ಧ ಕನ್ನಡ" ಎಂಬ ಪುಸ್ತಕ( "ಸಮಾಜ ಪುಸ್ತಕಾಲಯ" ಧಾರವಾಡ ಪ್ರಕಟಣೆ.) ನಿಮಗೆ ನೆರವಾಗುವದು.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಎರಡು ರೇಫ ಗಳನ್ನು ತಂದು ಸಂಧಿ ಮಾಡಬಾರದೆಂದು, ಕೇಶಿರಾಜನೆ ಈ ಬಗ್ಗೆ "ಶ್ರುತಿ ಸಹ್ಯ" ಸಂದಿ ಬಗ್ಗೆ ಹೇಳುತ್ತಾ , ಹೇಳಿದ್ದಾನೆ.
ಸಂಧಿ ಮಾಡಿದರೆ ಅದು ಶ್ರುತಿ ಸಹ್ಯ ಆಗುವುದಿಲ್ಲ (ಕರ್ಕಶವಾಗುತ್ತೆ - ಕರಡೆಯ ಗಿರ್ಗಿಟದ ಧನಿಯವೊಲ್ - ಕೇಶಿರಾಜ) ಅನ್ನೋ ಕಾರಣದಿಂದ ಇಲ್ಲಿ ಸಂದಿ ಮಾಡಬಾರದು .
ಉದಾ .
೧. ಬಂದರ್ + ರಾಮರ್ = ಬಂದರ್ರಾಮಾರ್ ತಪ್ಪಾಗುತ್ತೆ.
ಇಲ್ಲಿ ಬಂದರ್ ರಾಮರ್ ಅಂತಾನೆ ಬರೆಯಬೇಕು.
೨. ದೇವರ್ + ರಕ್ಷಿಸುಗೆ = ದೇವರ್ ರಕ್ಷಿಸುಗೆ ( ಇಲ್ಲಿ ಸಂಧಿ ಇಲ್ಲ - ವಿಸಂಧಿ)
ಹಾಗಾಗಿ "ಅಂತರ ರಾಷ್ಟ್ರೀಯ" ಅಂತ ಬಿಡಿಸಿ ಬರೆಯುವುದು ಸರಿ. ಅಂತರ್ರಾಷ್ಟ್ರೀಯ ತಪ್ಪು.
ಈ "ಅಂತರ ರಾಷ್ಟ್ರೀಯ" ಬರು ಬರುತ್ತಾ ಮಾನವನ ಸೌಲಭ್ಯಾಕಾಂಕ್ಷೆ & ಮಿತವ್ಯಯಾಸಕ್ತಿ ಗುಣದಿಂದ ಅಂತರಾಷ್ಟ್ರೀಯ ಆಗಬಹುದು.
ಅಂತರ ರಾಷ್ಟ್ರೀಯ >> ಅಂತರಾಷ್ಟ್ರೀಯ
ಮತ್ತೊಂದು ಉದಾಹರಣೆ:
ವೀರ ರಾಜ ಪೇಟೆ >> ವಿರಾಜಪೇಟೆ
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ನಾವುಡರಿಗೆ ನಮಸ್ಕಾರಗಳು,
ನನಗೆ ಕನ್ನಡ ಕೀಲಿಮಣೆ ಬರೆಹ ಇನ್ನೂ ಪರಿಪೂರ್ಣವಾಗಿಲ್ಲ. ತಪ್ಪಾಗಿ ಬರೆದಿರುವದನ್ನು ಸರಿಪಡಿಸುವದರೊಳಗೆ ವಿದ್ಯುತ್ ಕೈ ಕೊಟ್ಟಿತು.
ದಯವಿಟ್ಟು ಕ್ಷಮೆಯಿರಲಿ " ಅಂತರ್ ರಾಷ್ಟ್ರೀಯ" ಎನ್ನವದು ಸರಿಯಾದ ಬಳಕೆ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
" ಅಂತರ್ ರಾಷ್ಟ್ರೀಯ" ಸರಿಯಾದ ಬಳಕೆಯಲ್ಲ. ಶ್ರೀನಿಧಿ ಒಮ್ಮೆ ಈ ಕುಱಿತು ಬರೆದಿದ್ದರು. "ಅಂತರ ರಾಷ್ಟ್ರೀಯ" ಮಾತಿನಲ್ಲಿ " ಅಂತರ್ ರಾಷ್ಟ್ರೀಯ" ಆಗುವುದರಿನ್ದ
"ಅಂತಾರಾಷ್ಟ್ರೀಯ"ವನ್ನು ರೂಢಿಗೆ ತರಲಾಯಿತು.
೧. " ಅಂತರ್ ರಾಷ್ಟ್ರೀಯ" - ರಾಷ್ಟ್ರದ ಒಳಗಣ
೨. "ಅಂತರ ರಾಷ್ಟ್ರೀಯ" - ಎರಡು ರಾಷ್ಟ್ರಗಳ ನಡುವಣ
ತಾವು ಎರಡನೇ ಅರ್ಥದಲ್ಲಿ ಪ್ರಯೋಗಿಸಿದ್ದೀರೆನ್ದುಕೊಣ್ಡಿದ್ದೇನೆ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಈ ಅಂತರಾಷ್ಟ್ಱೀಯ ಸಮಸ್ಯೆಯನ್ನು ನಾನಿಷ್ಟು ತಡವಾಗಿ ಗಮಗನಿಸಿದೆನಲ್ಲ..! ಅರರೇ ಕ್ಷಮೆಯಿರಲಿ....!
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಹೌದು ಅರವಿಂದ್
ಕನ್ನಡ ಭಾಷಾದೋಷಗಳನ್ನು ಮುಖ್ಯವಾಗಿ ಈ ಕೆಳಗಿನಂತೆ ಹೆಸರಿಸಬಹುದು
1.ಮಾತಿನಲ್ಲಿ ಕಂಡು ಬರುವ ದೋಷ
2. ಬರೆಹದಲ್ಲಿ
3. ಮಾತು ಬರೆಹ ಎರಡರಲ್ಲಿ
4.ಪುನರುಕ್ತಿ ದೋಷ
5.ಭಾಷಾಂತರ ಅಪಪ್ರಯೋಗ
ಧನ್ಯವಾದಗಳು .
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
"ಬರಹ" ನೋ, "ಬರೆಹ" ನೋ?
'ಬರಹ' ನೋ, 'ಬರೆಹ' ನೋ?
'ಬರಹ' ನೋ, 'ಬರೆಹ' ಯಸ್.
ಹಂಗನ್ನೊಕ್ಕಾಗುತ್ತಾ? ಕನ್ನಡದ ವಿಖ್ಯಾತ ಅಚ್ಚುಮಣೆ ತಂತ್ರಾಂಶದ ಹೆಸರೇ 'ಬರಹ' ಅನ್ದುಬಿಟ್ಟು. :)
"ಕನ್ನಡದಲ್ಲಿ ಕೆಲವು ಶಬ್ದಗಳಿಗೆ ಪರ್‍ಯಾಯ ರೂಪಗಳಿರುತ್ತವೆ. ಈ ನಿಘಂಟಿನಲ್ಲಿ ಆ ಪರ್‍ಯಾಯಗಳನ್ನೂ ಉಪಯೋಗಿಸಲಾಗಿದೆ. ಶರತ್ತು-ಷರತ್ತು, ಬರಹ-ಬರೆಹ, ಮರವು-ಮರೆವು ಹೀಗೆ ಆ ಎರಡು ರೂಪಗಳೂ ಶುದ್ಧವಾದುವೇ ಎಂದು ತಿಳಿಯಬೇಕು. " -ಜಿ. ವೆಂಕಟಸುಬ್ಬಯ್ಯರು ಹಂಗನ್ತಾರೆ ಕಾಣ್ರಿ.
ಇನ್ನು ಹೆಚ್ಚಾಗಿ 'ಬರಹ' ಬೞಕೆಯಾಗುತ್ತಿದೆ. ಅದೇ ಸರಿಯೆನ್ದು ನಮ್ಮ ತಿಳಿವಳಿಕೆಯಾಗಿದೆ.
ಆದರೂ 'ಬರಹ' ಹೆಂಗೆ ಬನ್ತೆನ್ದು ನೋಡುವುದಾದರೆ,
ಬರೆ+ಪ = ಬರೆಪ >> ಬರೆಹ.
ಬರೆ ಎಂಬ ಪದಕ್ಕೆ ದ್ರಾವಿಡ ಭಾಷೆಗಳಲ್ಲಿ,
ವರಯ್[ತಮಿೞು] ಮತ್ತು ವರ[ಮಲೆಯಾಳ] ಎನ್ನುವನ್ಥ ರೂಪಗಳಿವೆ. [ತೆಲುಗಿನ ಪದಗಳ ಪರಿಚಯ ನನಗಿಲ್ಲದಿರುವುದರಿನ್ದ ಹೆಚ್ಚು ಹೇಳಬಯಸೆನು. :( ] ಆದರೆ ಆ ಭಾಷೆಗಳು 'ಬರೆ' ಎನ್ನುವುದನ್ನು 'ಗೆರೆ' ಅಥವಾ 'ಗೀಟು' ಎಂಬ ಅರ್ಥದಲ್ಲಿ ಬೞಸುತ್ತವೆ. ಮಾತಿನ ರೂಡಿಯೇ ಈ ರೂಪುಪಲ್ಲಟಕ್ಕೆ ಕಾರಣವಲ್ಲದೆ ಬರೆಹದ ರೂಡಿಯಲ್ಲ. ಮೊದಲಿಗೆ ಬನ್ದುದು ಮಾತು, ಅದಾದಮೇಲೆ ಬನ್ದುದು ಬರೆಹ. ಬರೆವ ಭಾಷೆ ಮತ್ತು ಒರೆವ[ಗ್ರಾಂಥಿಕ] ಭಾಷೆ ಒನ್ದಕ್ಕಿನ್ತ ಇನ್ನೊನ್ದು ಭಿನ್ನವಲ್ಲ. ಒರೆವ ಭಾಷೆಯನ್ನೇ ಬರಹದಲ್ಲಿ ರೂಡಿಗೆ ತರಲಾಗುತ್ತದೆ.
ಮೂಲದ್ರಾವಿಡದಿನ್ದ ಮಾರ್ಪಾಡು ಹೊನ್ದುತ್ತ ಕನ್ನಡ ತನ್ನ ಪಡಿಯುಳಿಕೆಯನ್ನು* ನೆಲೆಯೂರಿಸಿಕೊಣ್ಡ ಬಗೆ - ಬರಯ್>>ಬರೆ, ಮಲಯ್>>ಮಲೆ, ಹೀಗೆ ಸಾಗುತ್ತದೆ. ಶಬ್ದವೊನ್ದಕ್ಕೆ ವಿಭಕ್ತಿ ಪ್ರತ್ಯಯಗಳು ಸೇರುವಾಗ ಆ ಪದದ ಕೊನೆಯಲ್ಲಿರುವ 'ಯ್' ಮತ್ತು 'ಲ್' ಇಲ್ಲದಾಗುವುದೂ ಹೀಗೆ ನೆಲೆಗೊಣ್ಡ ಬಗೆಯೇ.
ಬೞಕೆಗಳು: ಹೋಗುತ್ತಲ್+ಇದ್ದನು = ಹೋಗುತ್ತಲಿದ್ದನು >> ಹೋಗುತ್ತ+ಇದ್ದನು = ಹೋಗುತ್ತಿದ್ದನು.
ಇನ್ತಿರಲು,
ಬರಯ್+ಪ = ಬರಪ ಎಂಬುದೂ ಕನ್ನಡಕ್ಕೆ ಅಸಹಜವಲ್ಲ. ಆದರೂ ಬರಯ್+ಪ = ಬರೆಪ ಎನ್ನುವುದೂ ತಪ್ಪಲ್ಲ.
ನನಗಿದ್ದ ಗೊನ್ದಲಗಳನ್ನು ಪರಿಹರಿಸಿಕೊಣ್ಡೆ... :)
ಉ: 'ಬರಹ' ನೋ, 'ಬರೆಹ' ನೋ?
>>ವರಯ್[ತಮಿೞು]
ನನಗೆ ತಿಳಿದ ಹಾಗೆ ವರಯ್ ಅನ್ನುವ ಮಾತು ತಮಿೞಿನಲ್ಲಿ ಸಾಧಾರಣ ಆಡುನುಡಿಯಲ್ಲಿ ಬರೆದದ್ದು ಅನ್ನುವ ತಿಳಿವಿನಲ್ಲಿ ಬಳಕೆ ಇಲ್ಲ. ಬಹುಶಃ ’ಬರೆ’ ಹಾಕುವುದು (ಇದು ಕೃಷ್ಣಪ್ರಕಾಶರು ಹೇಳಿದ ಗೆರೆ, ಗೀಟಿಗೆ ಹೊಂದುತ್ತೆ) ಅನ್ನುವ ಅರ್ಥದಲ್ಲಿದೆ ಅನ್ನಿಸುತ್ತೆ. ಸಾಮಾನ್ಯವಾಗಿ ತಮಿಳಿನಲ್ಲಿ ಎೞುತ್ತು, ಎೞುದು ಇವುಗಳು ಬರವಣಿಗೆಯನ್ನು ಸೂಚಿಸುತ್ತವೆ.
ಉ: 'ಬರಹ' ನೋ, 'ಬರೆಹ' ನೋ?
ಪಡಿಯುಳಿಕೆ ಎಂಬ ಪದಕ್ಕೆ ಸ್ಟಾರ್ ಸೇರಿಸಿಬಿಟ್ಟು ಅರ್ಥವನ್ನು ಕೊನೆಯಲ್ಲಿ ಬಿಡುವುದು ಬಿಟ್ಟುಹೋಗಿದೆ.
ಪಡಿಯುಳಿಕೆ = ಸ್ವನ್ತಿಕೆ, ಅಸ್ಮಿತೆ
ನಿಜ ರಾಮಪ್ರಸಾದರೆ,
ವರಯ್ ಅನ್ನುವ ಮಾತು ತಮಿೞಿನಲ್ಲಿ ಮತ್ತು ಮಲೆಯಾಳದಲ್ಲಿ ಬರೆದದ್ದು ಎಂಬ ಅರ್ಥದಲ್ಲಿ ಬೞಕೆಯಾಗದು. ಬಹುಶಃ ’ಬರೆ’ ಹಾಕುವುದು ಅನ್ನುವ ಅರ್ಥದಲ್ಲಿದೆ ಅನ್ನಿಸುತ್ತೆ. ಸಾಮಾನ್ಯವಾಗಿ ತಮಿಳಿನಲ್ಲಿ ಎೞುತ್ತು[ನಾ], ಎೞುದು[ಕ್ರಿ] ಮತ್ತು ಮಲೆಯಾಳದಲ್ಲಿ ಇವುಗಳು ಬರವಣಿಗೆಯನ್ನು ಸೂಚಿಸುತ್ತವೆ. ಮಾತಿನ ರೂಡಿಯೇ ಈ ರೂಪುಪಲ್ಲಟಕ್ಕೆ ಕಾರಣವಲ್ಲದೆ ಬರೆಹದ ರೂಡಿಯಲ್ಲ.
ದ್ರಾವಿಡಾದಿ ಭಾಷೆಯಲ್ಲಿ ಚಿತ್ರ ಬಿಡಿಸುವುದನ್ನು 'ವರಯುಗ' ಮತ್ತು 'ವರಯ್ಕುಗ' ಎನ್ನುತ್ತಾರೆ.
ಉ: ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು
ಈ ವರೆಗೆ "ಪರಿಶುದ್ಧ ಕನ್ನಡ ಶಬ್ದಗಳು" ಕುರಿತಾಗಿ ಪ್ರತಿಕ್ರಿಯೆ ಸಲಹೆ ನೀಡಿದ ಎಲ್ಲ ಆತ್ಮೀಯ ಸಂಪದದ ಗೆಳೆಯರಿಗೆ ನಮನಗಳು.
ನಾರಾಯಣ ಭಾಗ್ವತ