ಭೂಕೈಲಾಸದ ಗಂಗಾ ಗೌಡಶಾನಿ

ಭೂಕೈಲಾಸದ ಗಂಗಾ ಗೌಡಶಾನಿ

ಚಿತ್ರ

 

ಭೂಕೈಲಾಸದ ಗಂಗಾ ಗೌಡಶಾನಿ
                                     - ಲಕ್ಷ್ಮೀಕಾಂತ ಇಟ್ನಾಳ
   ಇತ್ತೀಚೆಗೆ ಮನೆಯವರೊಂದಿಗೆ ಇಡಗುಂಜಿ, ಮುರ್ಡೇಶ್ವರ, ಗೋಕರ್ಣಗಳಿಗೆ ಒಂದು ದಿನದ ದಿಢೀರ ಯಾತ್ರೆ ಹೋಗಿದ್ದೆ ಕುಟುಂಬಸಹಿತವಾಗಿ.  ಬೆಳಿಗ್ಗೆ ಏಳು ಗಂಟೆಗೆ ಧಾರವಾಡ ಬಿಟ್ಟ ನಮಗೆ ಅಂಕೋಲಾದ ಕಾಮತನಲ್ಲಿ ತಿಂಡಿ. ಅಲ್ಲಿಂದ ಇಡಗುಂಜಿಗೆ ತಡೆರಹಿತ, ಒಂದೇ ನೆಗೆತ. ಮುಂಜಾನೆ ಸುಮಾರು ಹನ್ನೊಂದು ಕಾಲಿಗೆ ಹೋದ ನಮಗೆ ಗಣೇಶನ ದರ್ಶನ ಭಾಗ್ಯ, ಅಲಂಕಾರದೊಂದಿಗೆ ಸಿಕ್ಕಾಗ ತುಂಬ ಖುಷಿ. ಬೆಳ್ಳಿ ಕವಚದೊಂದಿಗೆ ಗಣಪ ಸುಂದರವಾಗಿ ಎದ್ದು ನಿಂತು ಹರಸುತ್ತಿದ್ದ. ಮಂಗಳಾರತಿ, ಕುಂಕುಮಾರ್ಚನೆ ಕೈಗೊಂಡು, ಪ್ರಸಾದ ಪಡೆದು,  ಕೆಲಹೊತ್ತು ಗುಡಿಯ ಪ್ರಾಂಗಣದಲ್ಲೆ ವಿಶ್ರಾಂತಿ. ಅಲ್ಲಿಂದ ಮುಂದೆ ಮುರ್ಡೇಶ್ವರಕ್ಕೆ ಪ್ರಯಾಣ. ಅಲ್ಲಿ ದೇವಾಲಯ ಮದ್ಯಾಹ್ನ ಒಂದು ಘಂಟೆಗೆ ಬಾಗಿಲು ಮುಚ್ಚುತ್ತದೆ, ನಂತರ ತೆರೆಯುವುದು ಸಂಜೆ ಎಂದದ್ದೇ ತಡ, ಮುರ್ಡೇಶ್ವರಕ್ಕೆ ಹೊರಟೇ ಬಿಟ್ಟೆವು. ಇಡಗುಂಜಿಯಿಂದ ಕೇವಲ ಅರ್ಧ ಗಂಟೆಯ ಪ್ರಯಾಣ. ಇನ್ನೂ ಸುಮಾರು ದೂರ ಇರುತ್ತಲೇ ಆಕಾಶದಲ್ಲಿ ರಸ್ತೆಯ ಬಲಕ್ಕೆ ನೋಡಿದರೆ, ಮರಗಿಡಗಳ ಪೊದೆಗಳ ಕೊರಳೊಳಗಿನಿಂದ ಶಿವ ಹಾಗೂ ದ್ವಾರಗೋಪುರಗಳು ಕಾಣಸಿಗುತ್ತವೆ. ಎಡಕ್ಕೆ ನಮ್ಮೊಡನೆಯೇ ಉದ್ದಕ್ಕೂ ತುಸು ದೂರ ಇಲ್ಲವೇ ಹತ್ತಿರವಾಗುತ್ತಲೇ ಓಡುವ ಕೊಂಕಣ ರೈಲು ಹಳಿಗಳು. ಕೆಲವೊಮ್ಮೆ ನೆಲದ ಮೇಲೆ, ಇನ್ನೊಮ್ಮೆ ಸುರಂಗದೊಳಗೆ ನುಸುಳಿ ಮರೆಯಾಗುವ ಓಟ ಬಲು ರಮ್ಯ.
     ಮುರ್ಡೇಶ್ವರದಲ್ಲಿ ಅಗಾಧ ಗಾತ್ರದ ಶಿವ ಹಾಗೂ ದ್ವಾರಗೋಪುರಗಳ ನಡುವೆ ಸಮುದ್ರಕ್ಕೆ ಹೊಂದಿಕೊಂಡಂತೆ ಮುರ್ಡೇಶ್ವರನಿದ್ದಾನೆ. ಮುರುಢೇಶ್ವರನ ದರ್ಶನ ಭಾಗ್ಯ ಪಡೆದು, ಅಲ್ಲೆಲ್ಲ ಸಾಲಂಕೃತ ದೃಶ್ಯವೈಭವಗಳನ್ನು ಕಣ್ಗಳಲ್ಲಿ ಮತ್ತೆ ಮತ್ತೆ ಎದೆಯೊಳಗೆ ಇಳಿದು, ಭವ್ಯತೆಯ ಅನುಭವ ಪಡೆದಾಯಿತು, ರಾವಣ ದನಗಾಹಿ ಗಣಪತಿಗೆ  ಶಿವನಿಂದ ಪಡೆದ ಶಿವಲಿಂಗ ನೀಡುತ್ತಿರುವ ದೃಶ್ಯ, ಅರ್ಜುನನಿಗೆ ಶ್ರೀಕೃಷ್ಣನ ಮಹಾಭಾರತದ ಭಗವದ್ಗೀತೆಯ ಬೋಧನೆಯ ದೃಶ್ಯ, ಸೂರ್ಯ ರಥ ಪಶ್ಚಿಮ ದಿಕ್ಕಿಗೆ ಪಯಣಿಸುವ ಧೃಶ್ಯ. ವ್ಯಾಸ ಮಹರ್ಷಿಗಳಿಂದ ಗಣೇಶನಿಂದ ಮಹಾಭಾರತ ನಮೂದಿಸುವ ದೃಶ್ಯ. ಸುವಿಶಾಲ ಮನೋಹರವಾಗಿ ತೆರೆ ತೆರೆ ಉಕ್ಕಿಸುತ್ತ, ಒಂದರ ಹಿಂದೆ ನಿರಂತರ ನೀಡುತ್ತ ಪ್ರಶಾಂತವಾದ ಅರಬ್ಬಿ ಸಾಗರ, ಸುತ್ತ ಮುತ್ತ ಇರುವೆಗಳಂತೆ ಕಾಣುವ ಭಕ್ತ ಸಾಗರ, ಕಡ್ಡಿ ಪೆಟ್ಟಿಗೆಯಂತೆ ಕಾಣುವ ದೋಣಿಗಳು, ರಮ್ಯತೆಯನ್ನೇ ಮೈಗೂಡಿಸಿಕೊಂಡ ಮುರುಢೇಶ್ವರನ ವಿಹಂಗಮ ಐಸಿರಿಯಲ್ಲಿ ನೆನೆಯುತ್ತಿದ್ದರೆ, ಬಿಸಿಲಿನ ಪ್ರಖರ ಝಳವಿರುವುದನ್ನೂ ಲೆಕ್ಕಿಸದ ಭಕ್ತ ವೃಂದ. ಒಂದು ರೀತಿ ಮನಕ್ಕೆ ಮುದನೀಡುತ್ತ ಯಾತ್ರಾ ಸ್ಥಳವೂ ಅಹುದು, ಒಳ್ಳೆಯ ಅಚ್ಚುಕಟ್ಟಿನ ಪ್ರವಾಸಿ ತಾಣವೂ ಹೌದು ಎನ್ನುವಂತಹ ಸ್ಥಳ ಮುರ್ಢೇಶ್ವರ. 
    ಅಲ್ಲೆ ಭೋಜನ ಕೈಗೊಳ್ಳಬಹುದಾಗಿದ್ದರೂ, ಇನ್ನೂ ಸಾಕಷ್ಟು ವೇಳೆ ಇದ್ದುದರಿಂದ, ಅಲ್ಲಿಂದ ಹೊರಟು ಹೊನ್ನಾವರದಲ್ಲಿ ಹೊಟ್ಟೆಗೊಂದಿಷ್ಟು ಹಾಕಲಾಯಿತು. ಮೊನ್ನೆ ಮಗ ಅಮೇರಿಕೆಗೆ ಹೊರಟಾಗ ಅವನ ಜೀವನ ಸುಖಕರವಾಗಲಿ ಎಂದು ಮನೆಯಲ್ಲಿ ಸತ್ಯನಾರಾಯಣ ಪೂಜೆ ಕೈಗೊಂಡ ಸಂದರ್ಭದಲ್ಲಿ ಮನೆಯಾಕೆಗೆ ಮನದಲ್ಲಿ ಮೂಡಿದ ಹರಕೆಯೊಂದು ನಮ್ಮನ್ನು ಇಂದು ಇಲ್ಲಿಗೆ ಕರೆತಂದಿತ್ತು. ಕುಮಟಾದ ಗುಡಿಗಾರ ಗಲ್ಲಿಗೆ ತೆರಳಿ ಒಂದಕ್ಕಿಂತ ಒಂದು ಸುಂದರ ಮಂಟಪಗಳ, ಮೆಮೆಂಟೋಗಳ, ಗಂಧದ ವಸ್ತುಗಳ ಅಂಗಡಿಗಳನ್ನು ಸುತ್ತುತ್ತ, ಕಡೆಗೂ ದೇವಸ್ಥಾನಕ್ಕೆ ನೀಡುವ ಮಂಟಪ ಖರೀದಿಸಿದ್ದಾಯಿತು. ಹಾಗೆಯೇ ವ್ಯಾಸಪೀಠಕ್ಕೊಂದಿಷ್ಟು ಸಮಯ ನೀಡಿದ್ದಾಯಿತು.  
  ಅಲ್ಲಿಂದ ಗೋಕರ್ಣಕ್ಕೆ ನೆಗೆತದ ಓಟ ಶುರು. ಊರ ಪ್ರವೇಶಕ್ಕೆ ಸಿಗಾರೇಟ್ ಸೇದುತ್ತ ಲಲನಾಮಣಿ ಯವನಿಯೊಬ್ಬಳು ಎತ್ತರದ ನಿಲುವಿನಲ್ಲಿ ಕಂದೀಲೊಂದನ್ನು ಖರೀದಿಸಿ, ಬೀಚಿನ ಗೂಡಿಗೆ ತೆಗೆದುಕೊಂಡು ಹೊರಟಿದ್ದು, ಬದಲಾವಣೆಯ ಒಟ್ಟಾರೆ ಚಿಹ್ನೆಯಂತೆ ಕಂಡಿತು. ಹಾಗೇಯೇ ನೆನಪು ಕೆಲ ವರುಷ ಹಿಂದೋಡಿತು. 
   ಇತ್ತೀಚೆಗೆ ಕೆಲ ವರ್ಷಗಳ ಹಿಂದೆ, ಅಮ್ಮನೊಂದಿಗೆ ಗೋಕರ್ಣಕ್ಕೆ ಹೋದಾಗ, ಬೆಳಿಗ್ಗೆ ಟ್ಯಾಕ್ಸಿ ತಿಂಡಿಯ ವೇಳೆಗೆ ಭೂಕೈಲಾಸಕ್ಕೆ ತಲುಪಿದಾಗ, ಅಮ್ಮ ನನ್ನತ್ತ ತಿರುಗಿ, ‘ತಮ್ಮಾ, ಆ ಭಯಂಕರ ಕಾಡು, ಆಕಾಶ ಮುಟ್ಟುವ, ಪಾತಾಳ ಕಾಣುವ ಪರ್ವತಗಳು. ಮಳೆ ಕಾಡಿನಿಂದ ಅಲ್ಲಲ್ಲಿ ರಸ್ತೆಗಡ್ಡ ಬಿದ್ದ ಕುಸಿದ ಮಣ್ಣಾಗಲಿ, ಮರಗಳಾಗಲಿ ಯಾವೊಂದು ಕಾಣಿಸಲೇ ಇಲ್ಲ. ಇದು ಯಾವ ದಾರಿ.  ನಾವು ಹಿಂದೆ ಬಂದಾಗ ಕಾಡಿನ ಮಧ್ಯದ ರಸ್ತೆಯಲ್ಲೇ ಬಂದು ಸಂಜೆಗೆ ಗೋಕರ್ಣಕ್ಕೆ ಸೇರಿಕೊಂಡಿದ್ದೆವು, ಇದಕ್ಕೆ ಇಷ್ಟು ಸನಿಹದ ದಾರಿ ಇನ್ನೊಂದಿದೆ ಎಂದು ನನಗೆ ಗೊತ್ತಿರಲಿಲ್ಲ’ ಎಂದು ಬೆರಗಾಗಿ ಹೇಳಿದ್ದಳು. ‘ಅದಕ್ಕೆ ಬೇರೆ ದಾರಿ ಇಲ್ಲ ಅಮ್ಮಾ, ನಾವು ಬಂದದ್ದು ಒಂದೇ ದಾರಿ, ಆವಾಗ ರಸ್ತೆ ಇಕ್ಕಟ್ಟಿತ್ತು, ಈಗ ಅಗಲವಾಗಿ, ವಾಹನಗಳೂ ಕೂಡ ಹೈಟೆಕ್ ಆಗಿವೆ’ ಎಂದು ಹೇಳಿ, ಅವಳಿಗೆ ತಿಳಿಹೇಳಿದೆನಾದರೂ. ಅವಳ ಕನಸಿನ ಭೂಕೈಲಾಸ ಹೀಗಿರಲಿಲ್ಲವೆಂದೇ ಅವಳ ಅಳಲು. ಕಾಡೇ ಕಣ್ಮರೆಯಾಗಿದೆಯಲ್ಲ ಎಂಬ ಅವಳ ಕಾಡಿನ ದಿವ್ಯ ನೋಟಗಳ ನೆನಪುಗಳನ್ನು ನಾವು ಕಸಿದುಕೊಂಡಿದ್ದು ಅವಳ ದೃಷ್ಟಿಯಲಿ ಅಕ್ಷಮ್ಯವಾಗಿತ್ತು. ಮ್ಲಾನವದನಳಾಗಿಯೇ ದರ್ಶನ ಪಡೆದಿದ್ದಳು ಅಂದು ಅಮ್ಮ.  
  ಈಗ ನಾವು ವಾಹನವನ್ನು ಪಾರ್ಕ ಮಾಡಿ,  ದೇವಸ್ಥಾನಕ್ಕೆ ಪ್ರವೇಶಿಸುತ್ತಲೇ, ಯಾವಾವ ಪೂಜೆಗಳು ಇವೆ. ನೇರ ದರ್ಶನ ಮಾಡಿಸುತ್ತೇವೆ ಎಂದೆಲ್ಲ ಹೇಳುತ್ತ, ಇದಕ್ಕೆಲ್ಲ ಇಂತಿಷ್ಟು ಎಂದು, ನಮ್ಮಗಳಿಗೆ ತಿಳುವಳಿಕೆ ನೀಡುತ್ತ ಬಂದು ಬೇಡವೆಂದರೂ, ಗುಡಿಯ ಪ್ರವೇಶದ್ವಾರದವರೆಗೆ ತಮ್ಮ ರಾಗವನ್ನು ಬಿಡದೇ ಹಾಡುತ್ತಿದ್ದ ಅರ್ಚಕ ತಂಡ.  ಕೊನೆಗೂ ಸರತಿಯ ಸಾಲಿನಲ್ಲಿಯೇ ಹೋಗುವುದೆಂದು ತೀರ್ಮಾನಿಸಿ, ಸರತಿಯ ಸಾಲಿನಲ್ಲಿ ನಿಲ್ಲುವಾಗ ಕಣ್ಣಿಗೆ ಬೋರ್ಡನಲ್ಲಿ ಮಧ್ಯಾಹ್ನದ ಎರಡರಿಂದ ಸಂಜೆ ಐದು ಗಂಟೆಯ ವರೆಗೆ ದೇವಸ್ಥಾನವು ಮುಚ್ಚಿರುತ್ತದೆ ಎಂದು ತಿಳಿಸಿದ್ ಬೋರ್ಡ ಅದು. ಇನ್ನೂ ಏನೇನೋ ಇತ್ತು, ನನಗೆ ಕಂಡದ್ದಷ್ಟು. ಸರತಿಯ ಸಾಲಿನಲ್ಲಿ ನಿಂತಾಗ, ಸಾಲಿನೆಡೆ ಮೆಲ್ಲನೆ ಮೆಲ್ಲನೆ ಬಾಗಿ ನಡೆಯುತ್ತ ಒಬ್ಬ ಹಾಲಕ್ಕಿ ಗೌಡಶಾನಿ ಅಜ್ಜಿ ಹೂ ಹಾರ ಮಾರುತ್ತ ನಮ್ಮ ಹತ್ತಿರ ಬಂತು. ತುಂಬ ಹಣ್ಣು ಹಣ್ಣು ಮುದುಕಿ. ಮುಖದ ತುಂಬ ನೆರಿಗೆಗಳು. ಒಂದೊಂದು ನೆರೆಗೆಗೊಂದು ಕಥೆಯಿದ್ದವೋ ಎನೋ!, ಮರದ ಬೊಡ್ಡೆಯ ಹೊಟ್ಟೆಯಲ್ಲಿರುವ ಗುರುತುಗಳಂತೆ!. ಸನಿಹ ಬಂದು, ನಗುತ್ತ ಹಾರವನ್ನು ನನ್ನ ಮುಂದೆ ಹಿಡಿಯಿತು. ಎಷ್ಟು ಎಂದೆ. ‘ಹತ್ತು’ಎಂದು ಹತ್ತು ಬೆರಳು ತೋರಿಸಿತು. ಹಾರ ಕೊಂಡಾಯಿತು. ಸುಮ್ಮನೆ ಹತ್ತಿರ ನಿಂತಿದ್ದರಿಂದ ಮಾತಾಡಿಸುವಾ ಎಂದು ಏನು ಹೆಸರು ಎಂದೆ. ‘ಗಂಗೆ’ ಎಂದಿತು. ಯಾವ ಊರು ಎಂದದ್ದಕ್ಕೆ ‘ಇದೇನೆಯಾ’ ಎಂದಿತು. ದಿನಕ್ಕೆ ಎಷ್ಟು ಹೂ ಮಾರುತ್ತೀ? ಎಂದಾಗ ದಿನಕ್ಕೆ ಐದು ಹಾರ ಮಾರುತ್ತೇನೆ. ಆರನೇಯದು ಇಲ್ಲ. ನನಗೆ ಅಷ್ಟೇ ಸಾಕು ಎಂದು ಹೊಟ್ಟೆಯ ಕಡೆ ಕೈಮಾಡಿ ತೋರಿಸಿ, ಆ ಮೇಲೆ ಮೇಲಕ್ಕೆ ಕೈತೋರಿಸಿದಳು. ‘ಆದರೆ ಇಂದು ಮೂರೇ ತಂದಿದ್ದೇನೆ’ ಎಂದಿತು ಅಜ್ಜಿ. ಅವಳ ಭಾಷೆಯ ‘ಆಕ್ಷೆಂಟ್’ ನನಗೆ ಅಷ್ಟಾಗಿ ತಿಳಿಯುತ್ತಿರಲಿಲ್ಲ. ಕೈಸನ್ನೆಯಿಂದಲೇ ಹೆಚ್ಚು ಹೇಳುತ್ತಿದ್ದಳು. ಮಕ್ಕಳು ಎಷ್ಟು ಎಂದು ಕೇಳಿದೆ ಅದಕ್ಕೆ ಏನೋ ಹೇಳುತ್ತಿದ್ದವಳನ್ನು ನೋಡಿ , ಇನ್ನೊಬ್ಬ ಹೂ ಮಾರುವವಳು, ‘ಅವಳಿಗಾರೂ ಇಲ್ಲ’ ಎಂದಳು. ನೇರ ದರ್ಶನದಿಂದ ಉಳಿತಾಯವಾದ ಹಣವನ್ನು ಅವಳಿಗೆ ನೀಡಬೇಕೆಂದು ಅನ್ನಿಸಿತು. ಆದರೂ ಅಷ್ಟೊಂದು ಪ್ರಾಮಾಣಿಕವಾಗಿ ಬದುಕು ಸಾಗಿಸುತ್ತ, ಐದು ಹಾರಗಳನ್ನು ಮಾರುವ, ಆರನೇಯದನ್ನು ಮಾರದ ಅವಳ ಸ್ವಯಂ ಶಿಸ್ತಿನಲ್ಲಿ, ಒಳತೂರಬಾರದೆಂದು ಅನಿಸಿತು. ಅಥವಾ ಅವಳು ಸ್ವೀಕರಿಸುವುದಿಲ್ಲವೆಂದೂ  ಮನಸಿನ ದ್ವಂದ್ವ. ಸ್ವೀಕರಿಸಿದರೂ ಅವಳ ಮನಸನ್ನು ‘ಭ್ರಷ್ಟ’ ಮಾಡಿ, ಮರುದಿನ ನನ್ನಂತಹವರಿಗಾಗಿ ಅವಳು ಹುಡುಕಬಾರದು ಎನಿಸಿತು. ನಮಗೆ ನೇರ ದರ್ಶನಕ್ಕಾಗಿ ಒಡ್ಡಿದ ಆಮಿಷದ ಒಂದೆಡೆಯಾದರೆ, ನನಗಿನ್ನೇನೂ ಬೇಡ ಎನ್ನುವ ಗಂಗೆ ಗೌಡಶಾನಿಯ ನಿಲುವು ಒಂದೆಡೆ. ಯಾವುದೂ ತಪ್ಪಲ್ಲ. ಆರ್ಥಿಕವಾಗಿ, ಲೌಕಿಕವಾಗಿ, ತುಲನೆಯಲ್ಲಿ ಒಬ್ಬರು ಹೆಚ್ಚಾದರೆ ಇನ್ನೊಬ್ಬರು ಕಡಿಮೆಯಾದಾರು. ಆದರೆ ಈ ಸಂತೃಪ್ತಿ ಸಿಕ್ಕಸಿಕ್ಕಾಗ , ಸಿಕ್ಕ ಸಿಕ್ಕಲ್ಲಿ ಸಿಗುವುದಲ್ಲ. ಒಂದಿಡೀ ಬದುಕಿನ ಜಮಾ ಖರ್ಚು ಅದು. ಈ ಲೆಕ್ಕ ಅವರವರ ಸಂತೃಪ್ತಿಯ ಬದುಕಿನ ಅಳತೆಯಲ್ಲಿದೆ. 
  ಅಷ್ಟರಲ್ಲಿ ದೇವಸ್ಥಾನದ ಬಾಗಿಲು ತೆರೆದು ದರ್ಶನ ಪ್ರಾರಂಭವಾಯಿತು. ಆತ್ಮಲಿಂಗದ ಹತ್ತಿರ ಹೋಗುತ್ತಲೇ, ಆತ್ಮಲಿಂಗದ ಪಕ್ಕದ ತಟ್ಟೆಯಲ್ಲಿ ದಕ್ಷಿಣೆ ಹಾಕಿ ಎಂಬ ಅಹವಾಲು, ಆತ್ಮಲಿಂಗ ದರ್ಶನ ಮಾಡಿ, ತಟ್ಟೆಯಲ್ಲಿ ಕಾಣಿಕೆ ಹಾಕಿ ಹೊರಬಂದಾಗ, ಇಲ್ಲಿ ದೇವರೂ ಸಹ ಬೇಡುತ್ತಾನೆ, ಇನ್ನು ಕೊಡುವುದೆಲ್ಲಿಂದ ಬಂತು ಎಂದೆನ್ನಿಸಿತು! 
  ಹೊರಬಂದಾಗ ಆತ್ಮಲಿಂಗದಂತೆ ಮಣಿದ ಮೈಯಲ್ಲಿ ಹೂಮಾರುವ  ಗಂಗಾ ಗೌqಶಾನಿ ಗೋಡೆಗೊರಗಿ ನಿಂತಿದ್ದಳು. ಈ ಭೂಕೈಲಾಸದ ಮೂಲನಿವಾಸಿಯಾದ ಅವಳ ಬದುಕಿನ ನಡೆ, ನಂಬಿಕೆ ಕೂಡ ತುಂಬ ಆಳವಾಗಿ ಬೇರೂರಿ ಬಿಟ್ಟಿವೆ ಆ ನೆಲದಲ್ಲಿ. ಕೇವಲ ಗಂಗೆ ಸಾಂಕೇತಿಕವಾಗುತ್ತಾಳೆ, ಆತ್ಮಲಿಂಗದ ತುದಿಯಂತೆ! ಹೊರಗಷ್ಟೇ ಕಂಡರೂ, ಒಳಬೇರು ರಾವಣ ಆತ್ಮಲಿಂಗ ನೀಡಿದ ಗ್ರಾಮೀಣ ದನಗಾಹಿ ಗಣಪತಿಯ ವರೆಗೂ ತಲುಪುತ್ತವೆ! ಅವಳೆಡೆಗೆ ಧನ್ಯತೆಯ ನೋಟದೊಂದಿಗೆ ಮರಳಿದೆವು.  
 

 

Rating
No votes yet

Comments

Submitted by siddharudh_kattimani Fri, 05/03/2013 - 17:37

ಸರ್ ಎಲ್ಲರೂ ಪುಣ್ಯ ಕ್ಷೇತ್ರ ದರ್ಶನ ಮಾದುತ್ತಾರೆ ನೋಡುವ ಪ್ರಾಮಾಣಿಕ ದ್ರಷ್ಟಿಕೋನ ವಿವಿಧ ತೆರನಾಗಿರುತ್ತವೆ. ಲೇಖನ ಚೆನ್ನಾಗಿ ಮೂಡಿ ಬಂದಿದೆ. ಇಡೀ ಲೇಖನದ ಸಾರ ನಮ್ಮ ಪದದಲ್ಲಿಯೇ ಹೇಳಬೇಕೆಂದರೆ, ''ಯಾವುದೂ ತಪ್ಪಲ್ಲ. ಆರ್ಥಿಕವಾಗಿ, ಲೌಕಿಕವಾಗಿ, ತುಲನೆಯಲ್ಲಿ ಒಬ್ಬರು ಹೆಚ್ಚಾದರೆ ಇನ್ನೊಬ್ಬರು ಕಡಿಮೆಯಾದಾರು. ಆದರೆ ಈ......................... ಸಂತೃಪ್ತಿ ಸಿಕ್ಕಸಿಕ್ಕಾಗ ,ಅದೂ ಸಿಕ್ಕ ಸಿಕ್ಕಲ್ಲಿ ಸಿಗುವುದಲ್ಲ.................... ಒಂದಿಡೀ ಬದುಕಿನ ಜಮಾ ಖರ್ಚು ಅದು. ಈ ಲೆಕ್ಕ ಅವರವರ ಸಂತೃಪ್ತಿಯ ಬದುಕಿನ ಅಳತೆಯಲ್ಲಿದೆ. ''ಧನ್ಯವಾದಗಳು

Submitted by lpitnal@gmail.com Fri, 05/03/2013 - 18:37

In reply to by siddharudh_kattimani

ಗೆಳೆಯ ಸಿದ್ಧಾರೂಢರಿಗೆ ವಂದನಗೆಳು. ಬರಹಕ್ಕೆ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕೆ ಕೃತಜ್ಞತೆಗಳು

Submitted by makara Fri, 05/03/2013 - 21:35

ಇಟ್ನಾಳರೆ,
ಮನಃಶುದ್ಧಿ ಮತ್ತು ದೇಹಶುದ್ಧಿ ಎರಡೂ ನಿಮಗೆ ಈ ತೀರ್ಥಯಾತ್ರೆ ಒದಗಿಸಿದಂತೆ ಕಾಣುತ್ತದೆ; ನೀವೇ ಧನ್ಯರು ಬಿಡಿ. ಉತ್ತಮ ಲೇಖನಕ್ಕಾಗಿ ಅಭಿನಂದನೆಗಳು.

Submitted by lpitnal@gmail.com Fri, 05/03/2013 - 22:25

In reply to by makara

ಶ್ರೀಧರ ಬಂಡ್ರಿ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಅತ್ಮೀಯ ಪ್ರತಿಕ್ರಿಯೆಗೆ ಧನ್ಯ, ನನ್ನಿ

Submitted by nageshamysore Sat, 05/04/2013 - 06:45

ತೀರ್ಥಯಾತ್ರೆ, ಗೌಡಶಾನಿಯ ಬಗೆ ಹೇಳುತ್ತಲೆ ಬದುಕಿನ ಸೋಜಿಗ, ವೈರಾಗ್ಯಗಳ ಅಂತರ್ದರ್ಶನ ಮಾಡಿಸಿಬಿಟ್ಟರಲ್ಲಾ ಇಟ್ನಾಳರೆ, ಚೆನ್ನಾಗಿದೆ ಧನ್ಯವಾದಗಳು - ನಾಗೇಶ ಮೈಸೂರು , ಸಿಂಗಾಪುರದಿಂದ

Submitted by H A Patil Sat, 05/04/2013 - 19:59

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
' ಭೂಕೈಲಾಸದ ಗಂಗಾ ಗೌಡಶಾನಿ ' ಓದುತ್ತ ಹೋದಂತೆ ನಾವೂ ನಿಮ್ಮನ ಜೊತೆಗೆ ಇಡಗುಂಜಿ, ಮುರ್ಡೇಶ್ವರ, ಗೋಕರ್ಣಗಳಿಗೆ ಹೋಗಿ ಬಂದ ಅಪೂರ್ವ ಅನುಭವವನ್ನು ನೀಡಿತು. ಈ ಲೇಖನದ ಕೊನೆಯ ಪ್ಯಾರಾ ಈ ಲೇಖನದ ಹೈಲೈಟ್. ಸೊಗಸಾದ ಲೇಖನ ನೀಡಿದ್ದಕ್ಕೆ ಧನ್ಯವಾದಗಳು.

Submitted by lpitnal@gmail.com Sun, 05/05/2013 - 17:51

ಹಿರಿಯರಾದ ಹೆಚ್ ಎ ಪಾಟೀಲ ಸರ್ , ತಮ್ಮ ವಿಮರ್ಶಾತ್ಮಕ, ಪ್ರೋತ್ಸಾಹಕರ ಪ್ರತಿಕ್ರಿಯೆಗೆ ದನ್ಯವಾದಗಳು ಸರ್,