ಮತ್ತೊಮ್ಮೆ ಮಳೆ... ಸ್ವಗತ

ಮತ್ತೊಮ್ಮೆ ಮಳೆ... ಸ್ವಗತ

ಈ ಮಳೆ, ಮನದ ಕದಕೆ ಬಿದ್ದ ಚಿಲಕದಂತೆ ಒಂದೊಮ್ಮೆ ಶಬ್ದವಾದರೂ ಕದ ಮುಚ್ಚದೆ ಹಾಗೆಯೇ ಉಳಿಯುತ್ತದೆ. ಮತ್ತೊಮ್ಮೆ ಗಾಳಿಯ ಏಟಿಗೆ, ಪೆಟ್ಟು ಬಿದ್ದ ನಾಯಿ ಕುನ್ನಿಯಂತೆ ಶಬ್ದ ಮಾಡುತ್ತಾ ಮುಚ್ಚಿಕೊಳ್ಳುತ್ತದೆ. ಒಮ್ಮೊಮ್ಮೆ  ಆರ್ಭಟದ ಗಾಳಿ, ಗುಡುಗು ಎಲ್ಲ.. ಮಳೆಯೇ ಇಲ್ಲ!! ಮತ್ತೊಮ್ಮೆ, ಯಾವ ಸೂಚನೆಯೂ ಕೊಡದೆ ಮೆಲ್ಲಗೆ ಹನಿಯಿಕ್ಕಿ, ಇಡಿಯ ಭೂಮಿಯನ್ನೇ ತೊಯ್ದಿದೆ ಎನ್ನುವಂತೆ ಸುರಿದಿದೆ ಈ ಮಳೆ.

ಬಹಳಷ್ಟು ದಿನಗಳಲ್ಲಿ ಅನಿಸಿದ್ದಿದೆ.. ಈ ಮಳೆ ಏಕೆ ಹೀಗೆ, ಅದು ಸುರಿಯುತ್ತಾ ಇರುವಂತೆ, ಮನದ ಯಾವುದೋ ಒಂದು ಭಾವ ಪ್ರವಹಿಸಿ ಹರಿದು ಮಳೆಯಲ್ಲಿ ಲೀನವಾಗಿದೆ ಎನಿಸುವಷ್ಟು ಆಪ್ಯಾಯ. ಕೆಲವು ಸಲವಂತೂ, ನಿರ್ಭಾವದಿಂದ ಛೇ.. ಈ ಮಳೆ ಯಾವಾಗ ನಿಲ್ಲುತ್ತೋ.. ಅನಿಸುವಷ್ಟು ಅನಿವಾರ್ಯ..

ಜೀವನ ಎಷ್ಟೊಂದು ಸಂಕೀರ್ಣ ಅಂದುಕೊಳ್ಳುತ್ತಿದ್ದಂತೆ, ನಾವೆಂಥ ದಡ್ದರೋ ಅನಿಸಿಬಿಡುವಂತೆ ಯಾವುದೋ ಕಠಿಣ ಸನ್ನಿವೇಶಕ್ಕೊನ್ದು ಉತ್ತರ ಸಿಕ್ಕು.. ಹೇ ಹೌದಲ್ಲವಾ... ಜೀವನ ಎಷ್ಟೊಂದು ಸರಳ. ಸುಮ್ಮನೆ ನಾವೇ ಯಾವುದೋ ಭ್ರಮೆಗೆ ಒಳಗಾಗಿ ಹೀಗೆಲ್ಲ ಅಂದುಕೊಂಡೆವೋ ಎನ್ನುತ್ತಾ ಮತ್ತೆ ಯೋಚನೆಗೆ ಹಚ್ಚುತ್ತದೆ.

ಕಳೆದ ಹಳೆಯ ವಸ್ತು ಸಿಕ್ಕಾಗ ಮನಕ್ಕೆ ಎಷ್ಟು ಮುದವಾಗುತ್ತದೋ ಅಷ್ಟೇ ಸಂತೋಷವಾಗಿದೆ. ಮಳೆಯ ಕುರಿತಾಗಿ ಏನಾದರೂ ಬರೆಯಬೇಕೆಂದು ಅಂದುಕೊಂಡಾಗಲೆಲ್ಲ, ಮನಸು ಏನನ್ನು ಯೋಚಿಸುತ್ತಿದೆ ಎಂದೇ ತಿಳಿಯದ ಸ್ಥಿತಿಗೆ ಹೋಗಿ ಮರಳುವ ಪರಿಸ್ಥಿತಿ ನನ್ನದು. ಬಹುಷಃ ಹಿಂದಿನ ನನ್ನ ಜನ್ಮಕ್ಕೂ ಮಳೆಗೂ ಒಂದು ಅವಿನಾಭಾವ ಸಂಬಂಧ ಇರಬಹುದೆಂಬ ಒಂದು ಸ್ವಗತ.........   

Rating
No votes yet