22
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ಮನೆ ಮದ್ದು

March 5, 2012 - 1:33am
padma.A
4.07143

   ಅನಾದಿಕಾಲದಲ್ಲಿ ಮನುಷ್ಯನಿಗೆ ಅನಾರೋಗ್ಯದ ಅರಿವೇ ಇರಲಿಲ್ಲವಂತೆ. ರೋಗವೇ ಇಲ್ಲವೆಂದಾದ ಮೇಲೆ ಔಷಧಿ ಅಗತ್ಯವಾದರೂ ಏಕೆ? ಆಕಸ್ಮಿಕವಾಗಿ ಭೂಮಿಯ ಮೇಲೆ ಯಾರಿಗಾದರೂ ಆರೋಗ್ಯ ಕೆಟ್ಟರೆ ಚಿಕಿತ್ಸೆ ನೀಡಲು ದೇವಲೋಕದಿಂದ ದೇವತೆಗಳೆ ಬರಬೇಕಾಗಿತ್ತಂತೆ.  ಚವನ ಮಹರ್ಷಿಗಳಿಗೆ ಚಿಕಿತ್ಸೆ ನೀಡಿದವರು ಅಶ್ಬಿನೀ ದೇವತೆಗಳೇ ಅಲ್ಲವೇ.

   ಆದಿಮಾನವ ಪ್ರಕೃತಿಯೊಂದಿಗೆ ಒಂದಾಗಿ ಸ್ವಚ್ಛಂದ ಬಾಳನ್ನು ಬಾಳುತ್ತಿದ್ದನು. ಆರೋಗ್ಯದ ಯಾವ ತೊಂದರೆಯೂ ಆತನನ್ನು ಭಾದಿಸುತ್ತಿರಲಿಲ್ಲ. ಸಣ್ಣ ಪುಟ್ಟ ತೊಂದರೆಗಳನ್ನು ಪ್ರಕೃತಿಯೇ ಸರಿಪಡಿಸುತ್ತಿತ್ತು. ಕಾಲಾಂತರದಲ್ಲಿ ಅಲೆಮಾರಿ ಜೀವನವನ್ನು ತೊರೆದು ಒಂದೆಡೆ ನೆಲೆನಿಂತನು.

  ಮಾನವನ ನೆಲಸು ಜೀವನವು ಗುಡಿಸಲು, ಮನೆ, ಗ್ರಾಮ, ಪಟ್ಟಣ, ನಗರಗಳ ಬೆಳವಣಿಗೆಗೆ ಹಾದಿ ಮಾಡಿಕೊಟ್ಟಿತು. ಮಾನವ ನಾಗರಿಕನಾಗುತ್ತಾ ಪ್ರಕೃತಿಯಿಂದ ವಿಕೃತಿಯೆಡೆಗೆ ಸಾಗಿದ್ದು ದೊಡ್ಡ ದುರಂತವೇ ಸರಿ. ನಾಗರಿಕಜೀವನ ಮಾನವನನ್ನು ಎಲ್ಲಾ ರೀತಿಯಲ್ಲೂ ಬದಲಾಣೆ ಮಾಡಿತು.

  ಬೆಳವಣಿಗೆಗೆ ಹಾಗೂ ಬದಲಾವಣೆ ಅನಿವಾರ್ಯವು ಹೌದು ಅವಶ್ಯವೂ ಹೌದು. ಬದಲಾವಣೆಯೇ ದುರಂತಕ್ಕೆ ಎಡೆಮಾಡಿಕೊಡಬಾರದಲ್ಲವೆ. ಮಾನವನ ಆಹಾರ ಪದ್ಧತಿಯಲ್ಲಾದ ಬದಲಾವಣೆ ಇಂದಿನ ಅನೇಕ  ಆರೋಗ್ಯ ಸಮಸ್ಯೆಗಳಿಗೆ ನಾಂದಿಯಾಗಿದೆ ಎಂದರೆ ತಪ್ಪಾಗಲಾರದು.

   ಹಿಂದಿನ ಆಹಾರಪದ್ಧತಿ ಆರೋಗ್ಯಕ್ಕೆ ಪೂರಕವಾಗುವಂತೆ ಪ್ರಾದೇಶಿಕ ಪರಿಸರ ಹಾಗೂ ಋತುಮಾನಕ್ಕೆ ಅನುಗುಣವಾಗಿತ್ತು. ಜೀವನ ಶೈಲಿ ಬದಲಾದಂತೆ ಆಹಾರ ಸೇವನೆಯಲ್ಲಿ ಮಾತ್ರವಲ್ಲ ಅಭಿರುಚಿಯಲ್ಲೂ ಬದಲಾವಣೆಗಳಾದವು. ನಾಗರಿಕತೆ ಮಾನವನನ್ನು ಆರೋಗ್ಯದಿಂದ ಅನಾರೋಗ್ಯದೆಡೆಗೆ ಕರೆದೊಯ್ದಿತು. ಪ್ರಕೃತಿಯ ಕೈಯಲ್ಲಿದ್ದ ಆರೋಗ್ಯದ ಜುಟ್ಟು ಬೇರೆ ಯಾರ ಯಾರ ಕೈಗೋ ಸೇರುವಂತಾಯಿತು. ವೈದ್ಯ ಗ್ರಂಥಗಳಲ್ಲೂ ಇಲ್ಲದ  ಇಲ್ಲಿಯವರೆಗೆ ಕೇಳರಿಯದ ಅದೆಷ್ಟೋ  ರೋಗಗಳು ಅವತರಿಸಲು ಅನುವಾಯಿತು.

   ಅನೇಕ ವೈದ್ಯಕೀಯ ಪದ್ಧತಿಗಳು ಅಸ್ತಿತ್ವಕ್ಕೆ ಬಂದವು. ಯಾವ ವೈದ್ಯಕೀಯ ಪದ್ಧತಿ ಇಲ್ಲದಿದ್ದರೂ. ಎಲ್ಲಾ ಔಷಧಿ ಅಂಗಡಿಗಳು, ದವಾಖಾನೆಗಳು ಮುಚ್ಚಿ ಹೋದರೂ 24 ಗಂಟೆ, 365ದಿನವೂ ಔಷಧಿದೊರಕುವ ಏಕೈಕ ಕ್ಲಿನಿಕ್ ಎಂದರೆ ಅಡುಗೆ ಮನೆ. ಅಲ್ಲಿ ದೊರೆಯುವ ನೀರು, ಸಾಸಿವೆ, ಏಲಕ್ಕಿ, ಅರಿಶಿನ. ಜೀರಿಗೆ, ಮೆಂತ್ಯ, ಶುಂಠಿ, ಗಸಗಸೆ. ಕೊತ್ತಂಬರಿ ಬೀಜ, ಇಂಗು, ಬೆಳ್ಳುಳ್ಳಿ, ಬೆಲ್ಲ, ಉಪ್ಪು, ಕರಿ, ಬೇವು. ಅಂಜೂರ, ದ್ರಾಕ್ಷಿ, ಬಾದಾಮಿ, ಹಣ್ಣು, ತರಕಾರಿ, ಹೇಳುತ್ತಾ ಹೋದರೆ ಪಟ್ಟಿಯೂ ಬೆಳೆಯುತ್ತಾ ಹೋಗುತ್ತದೆ. ಅಡಿಗೆ ಮನೆಯಲ್ಲಿ ದೊರೆಯುವ ಪ್ರತಿಯೊಂದೂ ತನ್ನದೇ ಆದ ಔಷಧೀಯಗುಣಗಳನ್ನು ಹೊಂದಿವೆ. ಕ್ಯಾನ್ಸರ್, ಜಾಂಡೀಸ್, ಅರ್ಥೋರೈಟೀಸ್ ನಂತಹ ಕಾಯಿಲೆಗಳಿಗೂ ಉತ್ತಮ ಔಷಧಿಗಳು ಅಡುಗೆ ಮನೆಯಲ್ಲಿವೆ. ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರತಿನಿತ್ಯ ಇವುಗಳನ್ನು  ಬಳಸುತ್ತಾರೆ. ಪಾಶ್ಚಾತ್ಯರ ಪ್ರಭಾವ ಹಾಗೂ ಆಧುನಿಕತೆಯಿಂದ ಆಹಾರ ಪದ್ಧತಿಯಲ್ಲಿ ವ್ಯತ್ಯಯವಾಯಿತು. ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಬೀರಿತು. ಅಡುಗೆ ಮನೆಯ ಸಾಮಾನುಗಳ ವೈಶಿಷ್ಟ್ಯ ತಿಳಿದವರಿಗೆ ಅದರ ಮಹತ್ವದ  ಅರಿವಿರುತ್ತದೆ.

1. ಸಿಹಿ, 2. ಹುಳಿ, 3. ಉಪ್ಪು, 4. ಖಾರ, 5. ಒಗರು ಮತ್ತು 6. ಕಹಿ ಎಂಬ ಆರು ರುಚಿಗಳೇ ಷಡ್ರಸಗಳು. ಪ್ರತಿ ನಿತ್ಯ ನಮ್ಮ ಅಡುಗೆ ಮನೆಯಲ್ಲಿ ಬಳಸುವ 1. ಬೆಲ್ಲ, 2. ಹುಣಿಸೆ ಹಣ್ಣು, 3. ಅಡಿಗೆ ಉಪ್ಪು, 4. ಮೆಣಸಿನ ಕಾಯಿ ಮತ್ತು ಕಾಳು ಮೆಣಸು, 5. ಜೀರಿಗೆ ಮತ್ತು ಸಾಸಿವೆ ಹಾಗು 6. ಮೆಂತ್ಯ ಈ ಆರೂ ಪದಾರ್ಥಗಳೂ ಔಷಧೀಯಗುಣದೊಂದಿಗೆ ವಿಭಿನ್ನ ರುಚಿಯನ್ನು ಹೊಂದಿವೆ. ಆರೂ ಸಾಮಾನುಗಳನ್ನು ಬಳಸಿ ತಯಾರಿಸುವ ಬೇಳೆ ಸಾರು ಷಡ್ರಸ ಪಾಕಕ್ಕೆ ಉತ್ತಮ ಉದಾಹರಣೆಯಾಗಿದೆ. ನಾಲಿಗೆಗೆ ರುಚಿ. ಶರೀರಕ್ಕೆ ಸೌಖ್ಯ.

ನಮ್ಮ ಜೀರ್ಣ ಶಕ್ತಿಗೆ ಅನುಗುಣವಾಗಿ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳ ಬೇಕು.

ಕಾಲಿಹೊಟ್ಟೆಗೆ ನೀರು ಕುಡಿಯ ಬೇಕು,

ಊಟವಾದ ಮೇಲೆ ಮಜ್ಜಿಗೆ ಕುಡಿಯ ಬೇಕು,

ಮಲಗುವಾಗ ಹಾಲು ಕುಡಿಯ ಬೇಕು,

   ಮೆಂತ್ಯದ ಔಷಧೀಯಗುಣವನ್ನು ಕುರಿತು ಹೈದ್ರಾಬಾದಿನಲ್ಲಿ ಸಂಶೋಧನೆ ನಡೆಯುತ್ತಿದೆ. ಬಹಳ ಹಿಂದಿನಿಂದಲೇ ನಮ್ಮ ದೇಶದಲ್ಲಿ ಔಷಧಿಗಾಗಿ  ಬಳಸುತ್ತಿದ್ದ ಅರಿಶಿನ ಮುಂತಾದ ಪದಾರ್ಥಗಳ ಮೇಲೆ ಅಮೇರಿಕಾದಂತಹ ಬಲಿಷ್ಠರಾಷ್ಟ್ರಗಳು ಮತ್ತೊಂದೆಡೆ ಪೇಟೆಂಟ್ ಪಡೆಯಲು ಮುಂದಾಗಿವೆ ಎಂದರೆ ನಮ್ಮ ಅಡುಗೆ ಮನೆಯ ಪ್ರಾಮುಖ್ಯತೆಯ ಅರಿವಾಗದಿರದು.

  ಗಸಗಸೆಯನ್ನು ನಸೆನಸೆ ಮಾಡದೆ ಕುಡಿದರೆ ಆರೋಗ್ಯವನ್ನು ಉತ್ತಮವಾಗಿ ಕಾದಿರಿಸಿಕೊಳ್ಳಬಹುದು. ಇದು ಆಯಾಸವನ್ನು ಪರಿಹರಿಸಿ ಸುಖನಿದ್ದೆಯನ್ನು ದಯಪಾಲಿಸುತ್ತದೆ. ಆಹಾರ, ನಿದ್ದೆ, ಬ್ರಹ್ಮಚರ್ಯೆ/ಲೈಂಗಿಕ ನಿಷ್ಠೆ ಇವು ಮೂರೂ ಆರೋಗ್ಯದ ಕಂಬಗಳು, ಇವುಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವಲ್ಲಿ ಅಜ್ಜಿ ಔಷಧಿಯೆಂದೇ ಪ್ರಖ್ಯಾತಿ ಪಡೆದಿರುವ ಮನೆ ಮದ್ದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

   ಸಾಸಿವೆ : ತೀಕ್ಷ ದ್ರವ್ಯವಾಗಿದ್ದು ಖಾರವನ್ನು ಹೆಚ್ಚಿಸುವುದು. ಆಮ್ಲತೆಯನ್ನು ಹೆಚ್ಚಿಸುವುದು. ಹೈಡ್ರೋಕ್ಲೋರಿಕ್ ಆಸಿಡ್ ಇರುವುದರಿಂದ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ. ನೋವು ನಿವಾರಕವಾಗಿಯೂ ಕೆಲಸಮಾಡುವುದು.

1 ಹಿಡಿ ಸಾಸಿವೆ ಅರೆದು ಪೇಸ್ಟನ್ನು ಮಾಡಿಕೊಂಡು ಬಿಸಿಮಾಡಿ ನೋವು ಇರುವ ಭಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುವುದು. ಭುಜದ ನೋವಿಗೆ ಅತ್ಯಂತ ಸೂಕ್ತ ಔಷಧ, ಸಾಸಿವೆ ಎಣ್ಣೆಯನ್ನೂ ಸಹ ಬಳಸ ಬಹುದೆಂದರು

ಮೂಗೇಟಾದಾಗ ಎಣ್ಣೆಯನ್ನು ಹಚ್ಚಿ 5 ಪಾತ್ರೆ ಬಿಸಿನೀರು, 5 ಪಾತ್ರೆ ತಣ್ಣೀರನ್ನು ಮೇಲಿಂದ ಕೆಳಕ್ಕೆ ಹಾಕುವುದರಿಂದ ನೋವು ಕಡಿಮೆಯಾಗುತ್ತದೆ. ಕಾಲಿನಲ್ಲಿ ನರಗಳು ಉಬ್ಬಿ ಹಸಿರು ಬಣ್ಣಕ್ಕೆ ತಿರುಗಿದಾಗಲೂ (ವೆರಿಕೊಸ್ಟ್ರೈನ್) ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಏಲಕ್ಕಿ : ಪಾಯಸ ವೊದಲಾದ ಸಿಹಿ ತಿನಿಸುಗಳಿಗೆ ಪರಿಮಳವನ್ನು ನೀಡುತ್ತದೆ. ಅಜೀರ್ಣವಾಗದಂತೆ ಮಾಡುತ್ತದೆ. ಅಜೀರ್ಣದಿಂದುಂಟಾಗುವ ಹೊಟ್ಟೆ ತೊಳಸನ್ನು ತಪ್ಪಿಸುತ್ತದೆ, ತಲೆಸುತ್ತನ್ನು ನಿವಾರಿಸುತ್ತದೆ.

ಏಲಕ್ಕಿಯನ್ನು ಸೂಜಿಯಲ್ಲಿ ಚುಚ್ಚಿ ಚೆನ್ನಾಗಿ ಸುಟ್ಟು ಆ ಬೂದಿಯನ್ನು ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ವಾಂತಿ ನಿಲ್ಲುತ್ತದೆ. ವಾಕರಿಕೆಯೂ ಕಡಿಮೆಯಾಗುತ್ತದೆ. ಸಮಾರಂಭಗಳಲ್ಲಿ ಊಟಮಾಡಿದ ನಂತರ ಏಲಕ್ಕಿಯನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಆಹಾರ ಜೀರ್ಣವಾಗುವುದು.

ಅರಿಶಿನ : ಅಗಣಿತವಾದ ಅದ್ಭುತಗುಣಗಳನ್ನು ಹೊಂದಿದೆ. ಹಾನಿಕಾರಕ ಅಂಶಗಳನ್ನು ನಾಶಮಾಡುತ್ತದೆ. ಅಲಜ್ರಿಯಾಗದಂತೆ ತಡೆಯುತ್ತದೆ. ಸೋಂಕಾಗದಂತೆ ಮಾಡುತ್ತದೆ.

ವಿಸೂ : ಕಲಬೆರಕೆ ಅರಿಶಿನವನ್ನು ಬಳಸ ಬಾರದು. ಅರಿಶಿನದ ಕೊಂಬನ್ನೇ ಪುಡಿಮಾಡಿ ಬಳಸ ಬೇಕು. ಕಾಮಾಲೆಯಾದವರು ಅರಿಶಿನ ಬಳಸಬಾರದೆಂಬ ತಪ್ಪುಕಲ್ಪನೆ ಇದೆ. ಈ ಭಾವನೆ ತಪ್ಪು. ಅರಿಶಿನಕ್ಕೂ ಕಾಮಾಲೆಗೂ ಯಾವ ಸಂಬಂಧವೂ ಇಲ್ಲ.

ಅರಿಶಿನದ ಕೊಂಬಿಗೆ ತುಪ್ಪ ಸವರಿ ಬೆಂಕಿಗೆ ಹಿಡಿದು ಹೊಗೆಯನ್ನು ಮೂಗಿನಿಂದ ಎಳೆದುಕೊಂಡು ಬಾಯಿಂದ ಬಿಡ ಬೇಕು. ಇದರಿಂದ ಸೀತ, ನೆಗಡಿ, ಕಫ ಕಡಿಮೆಯಾಗುವುದು.

ಅರ್ಧ ಲೋಟ ಬಿಸಿಹಾಲಿಗೆ ಅರ್ಧ ಚಮಚ ಅರಿಶಿನವನ್ನು ಹಾಕಿ ದಿನಕ್ಕೆ 2 ರಿಂದ 3 ಬಾರಿ ತೆಗೆದು ಕೊಳ್ಳುವುದರಿಂದ ಕೆಮ್ಮು ಕಡಿಮೆ ಯಾಗುವುದು.

ಚಿಕ್ಕಮಕ್ಕಳಿಗೆ ಗಂಟಲು ನೋವು ಬಂದಾಗ ಅರಿಶಿನ ಕೊಂಬನ್ನು ಇದ್ದಿಲಾಗುವಂತೆ ಸುಟ್ಟು ಪುಡಿಮಾಡಿ ಉಪ್ಪು ಬೆರೆಸಿ ಹಲ್ಲು ಉಚ್ಚುವುದರಿಂದ ಕಡಿಮೆಯಾಗುತ್ತದೆ. ಟಾನ್ಸಿಲ್್ಸ ಕಡಿಮೆಯಾಗುತ್ತದೆ. ಜೊತೆಗೆ ಹಲ್ಲು ಮತ್ತು ಒಸಡು ಗಟ್ಟಿಯಾಗುತ್ತದೆ. ಒಸಡಿನಲ್ಲಾಗುವ ರಕ್ತಸ್ರಾವವನ್ನೂ ತಡೆಯುತ್ತದೆ.

ಜೀರಿಗೆ : ಆಮ್ಲತೆಯನ್ನು ಕಡಿಮೆ ಮಾಡುತ್ತದೆ. ಪಿತ್ತಹರ, ಪಿತ್ತದಿಂದ ಉಂಟಾದ ಕಾಯಿಲೆ ರೋಗವನ್ನು ಕಡಿಮೆ ಮಾಡುತ್ತದೆ. ಅಸಿಡಿಟಿಯನ್ನೂ ಕಡಿಮೆ ಮಾಡುತ್ತದೆ.

ಅರ್ಧ  ಚಮಚ ಜೀರಿಗೆ 1 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಆರಿಸಿ ಪ್ರತಿನಿತ್ಯ ಕುಡಿಯುವುದರಿಂದ ರಕ್ತಶುದ್ಧಿಯಾಗುತ್ತದೆ. 15 ರಿಂದ 20 ದಿನದವರೆಗೆ ಸೇವಿಸುವುದರಿಂದ ಚರ್ಮರೋಗವು ಕಡಿಮೆಯಾಗುತ್ತದೆ. ಅರ್ಧ  ಲೋಟ ನೀರಿಗೆ ಅರ್ಧ  ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯವನ್ನು ತಯಾರಿಸಿ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ. ಜೀರಿಗೆ ನೀರು ಮತ್ತು ಜೀರಿಗೆ ಕಷಾಯ ರಕ್ತದ ಒತ್ತಡವನ್ನು ಸರಿ ಪಡಿಸುತ್ತದೆ. ಪಿತ್ತ ಮತ್ತು ಅಜೀರ್ಣದಿಂದಾದ ತೊಂದರೆಗಳನ್ನು ಸರಿ ಪಡಿಸುತ್ತದೆ.

ಮೆಂತ್ಯ : ತಂಪು ಮತ್ತು ಕೂದಲನ್ನು ರಕ್ಷಿಸುತ್ತದೆ.

1 ಚಮಚ ಜೀರಿಗೆ ಮತ್ತು 1 ಚಮಚ ಮೆಂತ್ಯವನ್ನು ರಾತ್ರಿ ನೆನೆಸಿ ಬೆಳಗ್ಗೆ 1 ಹಿಡಿ  ಮೆಂತ್ಯದ ಸೊಪ್ಪು ಮತ್ತು ತೆಂಗಿನ ಕಾಯಿ ಹಾಲು ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಪೇಸ್್ಟ ತಯಾರಿಸಿಕೊಳ್ಳ ಬೇಕು. ಈ ಪೇಸ್ಟನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲಿಗೆ ಹೊಳಪು ಬರುತ್ತದೆ. ತಲೆಯಲ್ಲಿನ ಹಗರು(ಹೊಟ್ಟು)ಮಾಯವಾಗುತ್ತದೆ.

ಮೆಂತ್ಯ ಮತ್ತು ನಿಂಬೆರಸ ಸೇರಿಸಿ ಪೇಸ್ಟನ್ನು ತಯಾರಿಸಿಕೊಂಡು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಮುಖವನ್ನು ತೊಳೆದರೆ ವೊಡವೆ ಕಡಿಮೆ ಯಾಗುತ್ತದೆ. ಮುಖದ ಕಾಂತಿಯೂ ಹೆಚ್ಚುತ್ತದೆ.

1 ಚಮಚ ಮೆಂತ್ಯದ ಜೊತೆಗೆ 1 ಚಮಚ ಕರಿ ಎಳ್ಳು, 100ಗ್ರಾಂ ಕಡ್ಲೆಬೇಳೆ, 100 ಗ್ರಾಂ ಹೆಸರು ಬೇಳೆ ಸೇರಿಸಿ ಪುಡಿ ಮಾಡಿ ಮೈ ಮತ್ತು ತಲೆತೊಳೆಯಲು ಬಳಸುವುದರಿಂದ ಚರ್ಮ ಕಾಯಿಲೆಗಳನ್ನು ತಡೆಯ ಬಹುದು. ಕೂದಲು ಉದುರುವುದು ಕಡಿಮೆಯಾಗುತ್ತದೆ. (ಒಣ ಚರ್ಮ ಇಲ್ಲದವರು ಸೀಗೆ ಪುಡಿಯನ್ನು ಬೆರೆಸಿಕೊಳ್ಳ ಬಹುದು)

ಒಂದು ಬೊಗಸೆ ಹುರಿದ ಮೆಂತ್ಯಯೊಂದಿಗೆ ಅರ್ಧ ಬೊಗಸೆ ಹುರಿದ ಜೀರಿಗೆ, ಒಂದು ಚಮಚ ಹುರಿದ ಕಾಳು ಮೆಣಸು ಸೇರಿಸಿ ಪುಡಿಮಾಡಿ ನೀರಿನೊಂದಿಗೆ ನಿತ್ಯ ಸೇವಿಸುವುದರಿಂದ ಸಂಧಿವಾತ ಕಡಿಮೆಯಾಗುತ್ತದೆ.

ಮೆಂತ್ಯಸೊಪ್ಪಿನ ಬಳಕೆಯಿಂದ ಮಲಬದ್ಧತೆಯ ತೊಂದರೆ ಕಡಿಮೆಯಾಗುತ್ತದೆ. ಕೊಬ್ಬಿನ ಅಂಶವೂ ಕಡಿಮೆಯಾಗುತ್ತದೆ.

ಮೆಂತ್ಯವನ್ನು ವೊಸರಿನೊಂದಿಗೆ ಸೇವಿಸುವುದರಿಂದ ಅತಿಸಾರ ಕಡಿಮೆಯಾಗುತ್ತದೆ. ಹೊಟ್ಟೆ ನೋವು, ಹೊಟ್ಟೆ ನುಲಿಯುವುದನ್ನೂ ಕಡಿಮೆ ಮಾಡುತ್ತದೆ.

2 ಚಮಚ ಮೆಂತ್ಯವನನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದೊಡನೆಯೇ ನೆನೆದ ಮೆಂತ್ಯವನ್ನು ನುಂಗಿ ಅದೇ ನೀರನ್ನು ಕುಡಿಯುವುದರಿಂದಲೂ ಕೊಬ್ಬಿನ ಅಂಶ ಕಡಿಮೆ ಯಾಗುತ್ತದೆ. ಮೆಂತ್ಯದ ಕಷಾಯವು ಆರೋಗ್ಯಕ್ಕೆ ಒಳ್ಳೆಯದು.

ಮೆಂತ್ಯವನ್ನು ನೆನಸಿಯೇ ತಿನ್ನಬೇಕು, ಮೆಂತ್ಯಕ್ಕೆ ನೀರನ್ನು ಹೀರುವ ಗುಣ ಇರುವುದರಿಂದ ಒಣ ಮೆಂತ್ಯವನ್ನು ಹಾಗೆ ತಿನ್ನ ಬಾರದು.

ಒಣ ಮೆಂತ್ಯವನ್ನು ಸೇವಿಸುವುದರಿಂದ ಭೇದಿಯಾಗುವುದು ನಿಲ್ಲುತ್ತದೆ.

ಶುಂಠಿ: ಕಾಲಾತೀತ, ದೇಶಾತೀತ. ಎಲ್ಲರಿಗೂ ಎಲ್ಲಾಕಾಲಕ್ಕೂ ಉಪಯುಕ್ತವಾದುದು. ಅದ್ದರಿಂದ ಇದನ್ನು ವಿಶ್ವ ಔಷಧಿ ಎನ್ನುತ್ತಾರೆ. ದೀಪಕ ಎಂದರೆ ಹಸಿವಾಗುವಂತೆ ಮಾಡುವುದು, ಪಾಚಕ ಎಂದರೆ ಜೀರ್ಣಮಾಡುವುದು. ಎರಡೂ ಗುಣಗಳನ್ನೂ ಇದು ಹೊಂದಿದೆ. ಆಮವಾತ , ಕೀಲುನೋವಿಗೆ ಇದು ಉತ್ತಮವಾದ ಔಷಧ.

ಊಟಕ್ಕೆ ಅರ್ಧಗಂಟೆ ಮುಂಚಿತವಾಗಿ 1 ಚಿಟಿಕೆ ಒಣಶುಂಠಿ ಪುಡಿಯನ್ನು 1 ಚಮಚ ಉಪ್ಪಿನೊಂದಿಗೆ ಬಿಸಿನೀರಿನಲ್ಲಿ ಕುಡಿದರೆ ಚೆನ್ನಾಗಿ ಜೀರ್ಣವಾಗುತ್ತದೆ. ಆರೋಗ್ಯವರ್ಧಸುತ್ತದೆ.

ಹಸಿಶುಂಠಿಯನ್ನು ಕಲ್ಲಿನ ಮೇಲೆ ತೇಯ್ದು ಪಟ್ಟು ಹಾಕುವುದರಿಂದ ತಲೆನೋವು ಹಾಗೂ ಶೀತ ಕಡಿಮೆಯಾಗುತ್ತದೆ. ನೋವು ಹಾರಕ ಔಷಧಿಯ ಕೆಲಸವನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೆ ನಿರ್ವಹಿಸುತ್ತದೆ.

ಶುಂಠಿ, ವೊಸರು, ನೀರು ಸೇರಿಸಿ ಮಜ್ಜಿಗೆ ಮಾಡಿ ಕುಡಿಯುವುದರಿಂದ ಸಂಧಿವಾತ, ಕೀಲು ನೋವು ಮತ್ತು ಆಮವಾತ ಕಡಿಮೆಯಾಗುತ್ತವೆ.

ನಿದ್ದೆಗೆ ಔಷಧಗಳು:

1. ಗಸಗಸೆ ನೈಸರ್ಗಿಕ ನಿದ್ದೆಗೆ ಸಹಾಯಕ.

2. ಎಳ್ಳೆಣ್ಣೆಯನ್ನು ಪಾದಕ್ಕೆ ಹಚ್ಚಿ ಬಿಸಿನೀರಿನಲ್ಲಿ ಅರ್ಧಗಂಟೆ ಕಾಲನ್ನು ಮುಳುಗಿಸಿ ನಂತರ ನಿದ್ದೆ ಮಾಡಿದರೆ ಒಳ್ಳೆ ನಿದ್ರೆ ಬರುತ್ತದೆ.

3. ಬಲಮಗ್ಗಲಿಗೆ ಮಲಗಿ 8 ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ದೀರ್ಘವಾಗಿ ಉಸಿರು ಬಿಡಬೇಕು. ನಂತರ ಅಂಗಾತ ಮಲಗಿ 16 ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ದೀರ್ಘವಾಗಿ ಉಸಿರು ಬಿಡಬೇಕು. ನಂತರ ಎಡಮಗ್ಗಲಿಗೆ ಮಲಗಿ 32 ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ದೀರ್ಘವಾಗಿ ಉಸಿರು ಬಿಡಬೇಕು.

ಕೊತ್ತಂಬರಿ (ಧನಿಯಾ) : ತಂಪು. ಒಂದು ಚಮಚ ನೀರನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಬೆಳಗ್ಗೆ ಕುಡಿಯುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

ಒಂದು ಪ್ರಮಾಣ ದನಿಂiÀi ಒಂದು ಪ್ರಮಾಣ ಜೀರಿಗೆಯನ್ನು ಹುರಿದು ಪುಡಿಮಾಡಿ ಕೊಳ್ಳಬೇಕು. ಅರ್ಧ ಚಮಚ ಈ ಮಿಶ್ರಣವನ್ನು ಅರ್ಧಲೋಟ ಹಾಲಿಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಅಲ್ಸರ್ ಮತ್ತು ಅಸಿಡಿಟಿ ಕಡಿಮೆಯಾಗುತ್ತದೆ.

ಒಂದು ಚಮಚ ದನಿಯಕ್ಕೆ ಒಂದು ಲೋಟ ನೀರು ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ತಲೆಸುತ್ತು ಕಡಿಮೆಯಾಗುತ್ತದೆ.

ನೀರು : ತಂಪು. ಉತ್ತಮ ಔಷಧಿ ಗುಣವನ್ನು ಹೊಂದಿದೆ. ನೀರನ್ನು ಬಿಸಿಮಾಡದೆ ಸಹಜ ಸ್ಥಿತಿಯಲ್ಲೇ ಸ್ನಾನ ಮಾಡುವುದು ಒಳ್ಳೆಯದು. ಉಗುರು ಬೆಚ್ಚನೆಯ ನೀರನ್ನು ಬಳಸಬಹುದು. ನೀರಿನ ಕಷಾಯ ಕುಡಿಯುವುದರಿಂದ ಅನೇಕ ರೋಗಗಳನ್ನು ತಡೆಯ ಬಹುದು.

ನೀರಿನ ಕಷಾಯವನ್ನು ತಯಾರಿಸುವ ಕ್ರಮ : 1. ನೀರನ್ನು ಕುದಿಸಿ ಕುಡಿಯುವುದು, 2. ಅರ್ಧಪ್ರಮಾಣಕ್ಕೆ ಇಂಗಿಸುವುದು.  3. ಕಾಲು ಭಾಗಕ್ಕೆ ಇಂಗಿಸುವುದು. 4. ಎಂಟನೇ ಒಂದು ಭಾಗಕ್ಕೆ ಇಂಗಿಸುವುದು.

ಬೆಳ್ಳುಳ್ಳಿ : ಬಡವರ ಕಸ್ತೂರಿ, ಶೀತಹರ. ವಾಯುಹರ. 2-3 ಬೆಳ್ಳುಳ್ಳಿಯನ್ನು ಅರ್ಧಲೋಟ ಹಾಲಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಕುಡಿಯುವುದರಿಂದ ರೋಗ ನಿರೋಧಕ ಗುಣ ಹೆಚ್ಚುತ್ತದೆ. ಶೀತ ಕಡಿಮೆಯಾಗುತ್ತದೆ.

ಮಕ್ಕಳಿಗೆ ಸ್ನಾನ ಮಾಡಿಸುವಾಗ ಕೊನೆಯ ತಂಬಿಗೆ ನೀರಿಗೆ ನೀಲಗಿರಿ ಎಣ್ಣೆಯನ್ನು ಹಾಕಿ ಸ್ನಾನ ಮಾಡಿಸಿದರೆ ಶೀತ, ಜ್ವರ ನೆಗಡಿ ಕಡಿಮೆಯಾಗುತ್ತದೆ.

ತುಪ್ಪ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ಶುದ್ಧ ಜೇನುತುಪ್ಪ  ನೆಗಡಿ, ಕಫವನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪವನ್ನು ನಿಂಬೆ ರಸದೊಂದಿಗೆ ಬೆರೆಸಿ ತಣ್ಣೀರಿನೊಂದಿಗೆ ಸೇವಿಸಿದರೆ ಶರೀರದ ತೂಕ ಹೆಚ್ಚಾಗುತ್ತದೆ. ಬಿಸಿನೀರಿನೊಂದಿಗೆ ಸೇವಿಸಿದರೆ ಶರೀರದ ತೂಕ ಕಡಿಮೆಯಾಗುತ್ತದೆ. ( ಕುಡಿದ ಕೂಡಲೇ ಬಾಯನ್ನು ಚೆನ್ನಾಗಿ ತೊಳೆದು ಕೊಳ್ಳಬೇಕು. ಇಲ್ಲದಿದ್ದರೆ ಹಲ್ಲಿನ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.)

ಶುದ್ಧಜೇನು ತುಪ್ಪವನ್ನು ಪರೀಕ್ಷಿಸುವ ಕ್ರಮ : ಹತ್ತಿಯ ಬತ್ತಿಯನ್ನು ಜೇನುತುಪ್ಪದಲ್ಲಿ ಅದ್ದಿ ಉರಿಸಿರದೆ ಎಣ್ಣೆದೀಪದಂತೆ ಉರಿಯುತ್ತದೆ.

ಒಣ ಅಂಜೂರವನ್ನು ಕತ್ತರಿಸಿ ಹಾಲಿನಲ್ಲಿ ಕುದಿಸಿ ಸೇವಿಸುವುದರಿಂದ ಹಿವೋಗ್ಲೋಬಿನ್ ಹೆಚ್ಚಾಗುತ್ತದೆ.

ಮೆಣಸು ಅಥವಾ ಇಂಗನ್ನು ತೇದು ಮೊಡವೆಗೆ ಹಚ್ಚುವುದರಿಂದ ಮೊಡವೆ ಮತ್ತು ಮೊಡವೆಯ ಕಲೆ ಕಡಿಮೆಯಾಗುತ್ತದೆ.

ಪ್ರತಿಯೊಂದು ಸಸ್ಯವೂ ತನ್ನದೇ ಆದ ಔಷಧಿಗುಣಗಳನ್ನು ಹೊಂದಿವೆ. ಅವುಗಳ ಅರಿವು ನಮ್ಮ ಅಜ್ಜಿಯರಿಗೆ ಇತ್ತು. ಮನೆಯಂಗಳದಲ್ಲೇ ಅವುಗಳನ್ನು ಬೆಳೆಸುತ್ತಿದ್ದರು. ಮನೆಯ ಹಿತ್ತಲೇ ಧನ್ವಂತರಿ ವನದಂತೆ ಇರುತ್ತಿತ್ತು.

ಧನ್ವಂತರಿ ವನದಲ್ಲಿನ ಔಷಧಿಗಿಡಗಳನ್ನು ನೋಡಿದ ಆಗಿಡ, ಈಗಿಡ, ಒಂದೊಂದು ಜೀವಕೊಡ ಎಂದು ನುಡಿದ ಜಿ ಎಸ್ ಶಿವರುದ್ರಪ್ಪನವರ ನುಡಿ ಉತ್ಪ್ರೇಕ್ಷೆಯೇನಲ್ಲ. ಆ ಜೀವಕೊಡವನ್ನು ಸರಿಯಾಗಿ ಬಳಸಿದರೆ ಮನೆಯವರ ಆರೋಗ್ಯವನನ್ನು ಸದಾ ಕಾಡುತ್ತದೆ.

27ವರ್ಷ ತಪಸ್ಸು ಮಾಡಿ ಆನೆಕೊಡು ಎಂದು ಬೇಡಿದ ತಪಸ್ವಿಯ ಕತೆ ನೆನಪಿಗೆ ಬರುತ್ತದೆ, ಆ= ಆರೋಗ್ಯ, ನೆ= ನೆಮ್ಮದಿ ಇವೆರಡೂ ಇದ್ದರೆ ಜೀವನ ಹಸನಾಗುವುದು. ಅಜ್ಜಿಯ ಔಷಧವಾದ ಮನೆಮದ್ದು ಪ್ರತಿಯೊಬ್ಬರಿಗೂ ಆನೆ ಬಲವನನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ.

ನಿಮಗೆಲ್ಲರಿಗೂ ದೇವರು ಆನೆಯನ್ನು ದಯಪಾಲಿಸಲಿ.

ಚಿತ್ರ ಕೃಪೆ ಗೂಗಲ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.1 (14 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sathishpy on
ಪದ್ಮ ಅವರೇ, ತುಂಬಾ ತುಂಬಾ ಧನ್ಯವಾದಗಳು, ಇಂತಹ ಒಂದು ಬರಹಕ್ಕಾಗಿ. ಅಡುಗೆ ಮನೆಯಲ್ಲಿ ಸುಲಭವಾಗಿ ಎಟುಕುವ ಎಲ್ಲ ಔಶಧಿಗಳನ್ನು ಒಂದೇ ಪುಟದಲ್ಲಿ ತುಂಬಿದ್ದೀರಿ. ನಾನಂತೂ ಇನ್ನು ಮೇಲೆ ಮನೆ ಔಷಧಿಗಾಗಿ ಅಂತರ್ಜಾಲದಲ್ಲಿ ಹುಡುಕಿ ಹುಡುಕಿ ಸುಸ್ತಾಗಬೇಕಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಸತೀಶ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ನಿಮಗೆ ಉಪಯೋಗವಾಗುವುದಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಜ್ಜಿ ಮದ್ದುಗಳ ಬಗೆಗೆ ತಿಳಿಸಲು ಪ್ರಯತ್ನಿಸುತ್ತೇನೆ. ಆಯುರ್ವೇದಿಕ್ ಕ್ಲಿನಿಕ್ ನ ಡಾ|| ಅನಂತರಾಮನ್ ರವರ ಭಾಷಣಕೇಳು ಅವಕಾಶ ನನಗೆ ದೊರೆತಿತ್ತು. ಅದರ ಫಲ ಈ ಲೇಖನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸುಮ ನಾಡಿಗ್ on
ಪದ್ಮ ಅವರೆ, ಮನೆ ಮದ್ದಿನ ಬಗ್ಗೆ ಮಾಹಿತಿಯನ್ನು ಒದಗಿಸಿದಕ್ಕೆ ಧನ್ಯವಾದಗಳು. ನಾವೂ ಮನೆ ಮದ್ದನ್ನೆ ಬಳಸುವವರು. ಮನೆಯಲ್ಲಿ ಲೋಳೆಸರ, ಒಂದೆಲಗ, ದೊಡ್ಡ ಪತ್ರೆ, ಕಾಕೆ ಸೊಪ್ಪು, ಮದರಂಗಿ, ದಾಸವಾಳ, ಗರ್ಗ, ಅರಸಿನ, ಶುಂಠಿ, ಕರಿಬೇವು, ಕಹಿಬೇವು ಬೆಳೆಸಿದ್ದೇವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಸುಮಾ ನಿಮ್ಮ ಮನೆ ವಿಳಾಸ ತಿಳಿದಿದ್ದರೆ ಔಷಧಿಗಾಗಿ ನಿಮ್ಮ ಮನೆಗೆ ಓಡಿ ಬಂದು ಬಿಡಬಹುದಿತ್ತು. ನಿಮಗೆರುವ ಕಾಳಚಿ ನಿಜಕ್ಕೂ ಸಂತೋಷವಾಯಿತು. ಮನೆ ಮದ್ದಿನ ಬಗೆಗೆ ತಿಳಿದಿದ್ದು ಜೊತೆಗೆ ಮನೆಯಲ್ಲಿ ಬೇವು, ತುಳಸಿ, ಲೋಳೆಸರ, ಒಂದೆಲಗ, ದೊಡ್ಡ ಪತ್ರೆ, ಕಾಕೆ ಸೊಪ್ಪು, ಮದರಂಗಿ, ದಾಸವಾಳ, ಗರ್ಗ, ಅರಸಿನ, ಶುಂಠಿ, ಕರಿಬೇವು, ಕಹಿಬೇವು ಇದ್ದರೆ ಅರ್ಧ ರೋಗ ನಿವಾರಣೆಯಾದಂತೆಯೆ. ರೋಗ ಹತ್ತಿರನೇ ಸುಳಿಯುವುದಿಲ್ಲ ಅಂತೀರಾ? ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
ಹಿರಿಯರೇ ಒಳ್ಳೆಯ ಮಾಹಿತಿ ಪೂರ್ಣ ಆರೋಗ್ಯ ಸಂಬಂಧಿ ಬರಹ.. ನೀವ್ ಹೇಳಿದ್ದು ಎಲ್ಲವೂ ಅಡುಗೆ ಮನೆಯಲಿ ಲಭ್ಯ. ಇಲ್ಲದ್ದನ್ನೂ ಕೊಂಡು ತಂದು ಬಳಸಿ ನೀರೋಗಿಗಳಾಗಬಹುದು... ------------------------------------------------------------------------------------------------------------------- ಮಕ್ಕಳಿಗೆ ಸ್ನಾನ ಮಾಡಿಸುವಾಗ ಕೊನೆಯ ತಂಬಿಗೆ ನೀರಿಗೆ ನೀಲಗಿರಿ ಎಣ್ಣೆಯನ್ನು ಹಾಕಿ ಸ್ನಾನ ಮಾಡಿಸಿದರೆ ಶೀತ, ಜ್ವರ ನೆಗಡಿ ಕಡಿಮೆಯಾಗುತ್ತದೆ. ------------------------------------------------------------------------------------------------------------------ >>> ನಮ್ಮಮ್ಮ ಹಾಗೆ ನಮಗೆ ಸ್ನಾನ ಮಾಡಿಸುತಿದ್ದುದು ನನಗೆ ನೆನಪು... ವಂದನೆಗಳು ಶುಭವಾಗಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on
ಒಳ್ಳೆಯ ಮಾಹಿತಿಯನ್ನು ಒದಗಿಸಿದ್ದೀರಿ.ನನಗೂ ಮನೆಮದ್ದಿನ ಬಗ್ಗೆ ಆಸಕ್ತಿಯಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಪ್ರೇಮ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಸಪ್ತಗಿರಿ, ಅಜ್ಜಿ ಹೇಳಿದ್ದು, ಮನೆಯಲ್ಲಿ ಮಾಡಿದ್ದು , ಡಾ|| ಅನಂತರಾಮನ್ ರವರ ಭಾಷಣದಿಂದ ತಿಳಿದಿದ್ದನ್ನು ಲೇಖನ ರೂಪಕ್ಕೆ ಇಳಿಸಲು ಪ್ರಯತ್ನಿಸಿದೆ. ಕೆಲವರಿಗಾದರು ಅನುಕೂಲವಾದರೆ ನನ್ನ ಪ್ರಯತ್ನ ಸಾರ್ಥಕವಾಯಿತು ಅಂದುಕೊಳ್ಳುತ್ತೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on
ಪದ್ಮಾಜಿ, ನಿಜಕ್ಕೂ ಅತ್ಯ೦ತ ಉಪಯುಕ್ತ ಬರಹವನ್ನು ನೀಡಿರುವಿರಿ. ಎಲ್ಲ ಸ೦ಪದಿಗರ ಪರವಾಗಿ ನಿಮಗೆ ಅಭಿನ೦ದನೆಗಳು. ಸಣ್ಣ ಪುಟ್ಟ ತೊ೦ದರೆಗಳಿಗೆಲ್ಲ ವೈದ್ಯರ ಬಳಿಗೆ ಓಡಿ ಹೋಗುವ, "ಇನ್ಷೂರೆನ್ಸ್ ಹೆಲ್ತ್ ಕಾರ್ಡ್" ತೋರಿಸಿ ದೊಡ್ಡ ದೊಡ್ಡ ಬಿಲ್ಲು ತೆರುವವರು ನಿಮ್ಮ ಲೇಖನವನ್ನು ತಪ್ಪದೆ ಓದಬೇಕು. ನನಗೆ ಯಾವುದೇ ಮಾತ್ರೆ ತೆಗೆದುಕೊಳ್ಳುವುದರಲ್ಲಿ ಆಸಕ್ತಿಯಿಲ್ಲ, ಜೀರಿಗೆ / ಬೆಳ್ಳುಳ್ಳಿ/ಹುಣಿಸೆ ಹುಳಿ/ನಿ೦ಬೆಹುಳಿ ಚಿತ್ರಾನ್ನ ನಮ್ಮ ಮನೆಯ ಮೆನುವಿನ ಖಾಯ೦ ಆಗಿವೆ. ಸಾಸಿವೆ, ಜೀರಿಗೆ, ದನಿಯಾ ಇಲ್ಲದೆ ಯಾವ ಅಡಿಗೆಯೂ ತಯಾರಾಗೋದಿಲ್ಲ. ಸಧ್ಯಕ್ಕೆ ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ, ಲಿವರ್/ಕಿಡ್ನಿ ಸ೦ಬ೦ಧಿ ತೊ೦ದರೆಗಳು ಕಾಡುತ್ತಿಲ್ಲ. ಏನು ತಿ೦ದರೂ ಜೀರ್ಣವಾಗಿ ಹೊತ್ತಿಗೆ ಸರಿಯಾಗಿ ಹಸಿವಾಗುತ್ತದೆ. ಇದಕ್ಕಿ೦ತ ಆರೋಗ್ಯ ಬೇಕೇ? ನಮ್ಮ ಮನೆಯ ಮದ್ದು ರುಚಿಕರ ಊಟವೇ ಆಗಿದೆ ಅ೦ದರೆ ಅತಿಶಯೋಕ್ತಿಯಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ನಿಜ ಮಂಜುನಾಥ್, ನಮ್ಮ ಹಿರಿಯರು ಕಡುಜಾಣರು ಆಹಾರ ಪದ್ಧತಿಯಲ್ಲೇ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದರು. ಆಧ್ಯಾತ್ಮದ ಮೂಲಕ ಸಾಮಾಜಿಕ ಆರೋಗ್ಯವನ್ನು ಕಾಡಿಕೊಂಡಿದ್ದರು. ಇವತ್ತು ಎರಡೂ ಇಲ್ಲ ಅದಕ್ಕೆ ಹೀಗೆ. ಹಿಂದಿನ ಪದ್ಧತಿಯನ್ನೇ ನೀವು ಮುಂದುವರಿಸಿಕೊಂಡು ಬರುತ್ತಿರುವುದರಿಂದ ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ, ಲಿವರ್/ಕಿಡ್ನಿ ಸ೦ಬ೦ಧಿ ತೊ೦ದರೆಗಳಾವುವೂ ನಿಮ್ಮ ಬಳಿಗೆ ಸುಳಿದಿಲ್ಲ . ಸುಳಿಯುವುದೂ ಇಲ್ಲ. 1 ಆಹಾರ 2 ಆರೋಗ್ಯ 3 ಆಧ್ಯಾತ್ಮ ‍ ‍‍_ 3 `ಆ`ಗಳನ್ನು ಕಾಪಾಡಿಕೊಂಡು ಬಂದವರಿಗೆ ಯಾವ ಆತಂಕವೂ ಇಲ್ಲ ನಿಮ್ಮ ಪ್ರತಿ ಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on
ವಾಹ್ ಪದ್ಮಾ ಅವರೇ ನಿಮಗೆ ತೆರೆದ ಟೋಪಿಯ ನಮನ ಇಂತಹಾ ಅತ್ತ್ಯುತ್ತಮ ಸಂಗ್ರಹ ಯೋಗ್ಯ ವಿಷಯಕ್ಕಾಗಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಗೋಪಿನಾಥರವರೆ, ಅಜ್ಜಿ ಹೇಳಿದ್ದು, ಮನೆಯಲ್ಲಿ ಮಾಡಿದ್ದು , ಡಾ|| ಅನಂತರಾಮನ್ ರವರ ಭಾಷಣದಿಂದ ತಿಳಿದಿದ್ದನ್ನು ಲೇಖನ ರೂಪಕ್ಕೆ ಇಳಿಸಲು ಪ್ರಯತ್ನಿಸಿದೆ ಅಷ್ಟೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಪದ್ಮ ಅವರೆ, ಉಪಯುಕ್ತ ಮಾಹಿತಿಗೆ ಧನ್ಯವಾದಗಳು. ********* >>>ನಿಮಗೆಲ್ಲರಿಗೂ ದೇವರು ಆನೆಯನ್ನು ದಯಪಾಲಿಸಲಿ -ಆರೋಗ್ಯ+ನೆಮ್ಮದಿ ಎಂದು ದೇವರಿಗೆ ಗೊತ್ತಲ್ವಾ? ನಿಜ ಆನೆಯನ್ನು ದಯಪಾಲಿಸಿದರೆ? :) >>>ತುಪ್ಪ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. -ಸಪ್ತಗಿರಿವಾಸಿ ಗಮನಕ್ಕೆ :) >>>ನಿದ್ದೆಗೆ ಔಷಧಗಳು:.... 3. ಬಲಮಗ್ಗಲಿಗೆ ಮಲಗಿ 8 ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ದೀರ್ಘವಾಗಿ ಉಸಿರು ಬಿಡಬೇಕು. ನಂತರ ಅಂಗಾತ ಮಲಗಿ 16 ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ದೀರ್ಘವಾಗಿ ಉಸಿರು ಬಿಡಬೇಕು. ನಂತರ ಎಡಮಗ್ಗಲಿಗೆ ಮಲಗಿ 32 ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ದೀರ್ಘವಾಗಿ ಉಸಿರು ಬಿಡಬೇಕು. -ನಂತರ ಕವಚಿ ಮಲಗಿ 64 ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ದೀರ್ಘವಾಗಿ ಉಸಿರು ಬಿಡಬೇಕು. ಮತ್ತೂ ನಿದ್ರೆ ಬರದಿದ್ದರೆ ಲೆಕ್ಕ ತಪ್ಪಿರಬೇಕು. ಪುನಃ ಮೊದಲಿಂದ ಆರಂಭಿಸಿ. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
ನಿದ್ರೆ ಬರದಿದ್ದರೆ ಲೆಕ್ಕ ತಪ್ಪಿರಬೇಕು. ಪುನಃ ಮೊದಲಿಂದ ಆರಂಭಿಸಿ:(( ಗಣೇಶ್ ಅಣ್ಣ- ಹೀಗೆ ನಾ ೧೨೦ ಸಾರಿ ಉಸಿರು ಎಳೆದು ಬಿಡುತ್ತಿದ್ದರೆ?..... ಶಿವ- ಶಿವ!! ------------------------------------------------------------------------ ವೀ-ಸೂ- ಇದನ್ನು ಯಾರೂ ....................................ಡಿ....!!! -----------------------------------------------------------------------
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on
@ ಪದ್ಮಾ ಉತ್ತಮ ಬರಹ! ನನ್ನ ಪರಿಚಯದವರಿಗೆ ಕಳಿಸಿದ್ದೇನೆ. @ಗಣೇಶ್ ನಿದ್ರೆಗೆ ಒಳ್ಳೆಯ‌ ಉಪಾಯ‌ ಸೂಚಿಸಿದ್ದೀರಿ. ಆದ‌ರೆ ನ‌ನ್ನ ಸ‌ಮ‌ಸ್ಯೆ ಎಂದ‌ರೆ ನಿದ್ದೆಯಾದ‌ರೂ ಬ‌ಂದೀತು, ಎಣಿಕೆ ಮಾತ್ರ ಬಾರ‌ದು. :‍)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಗಣೇಶ್ ಎಷ್ಟು ಕರಾರುವಾಕಗಿ ನುಡಿದಿದ್ದೀರಿ. ಲೆಕ್ಕ ತಪ್ಪಾದಗಲೆ ಅಲ್ವ ನಿದ್ದೆ ಗೆಡಿಸುವುದು? ನಿದ್ದೆಕೆಟ್ಟು ಲೆಕ್ಕ ತಪ್ಪಬೇಕು ಇಲ್ಲ ಲೆಕ್ಕತಪ್ಪಿ ನಿದ್ದೆ ಕೆಡಬೇಕು. ನಿಮ್ಮ ಪ್ರತಿಕ್ರಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
:()))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಹೌದ್ಹೌದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Ambikapraveen on
ತುಂಬ ಒಳ್ಳೆಯ ಬರಹ ಮೇಲಾಗಿ ತುಂಬಾನೆ ಉಪಯುಕ್ತವಾದ ಬರಹ ನಿಮಗೆ ಧನ್ಯವಾದಗಳು ಇಂತಹ ಬರಹಕ್ಕಾಗಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on
+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಶ್ರೀನಿವಾಸ್ ಮೂರ್ತಿಯವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಅಂಬಿಕಾರವರೆ ನಿಮ್ಮ ಪ್ರತಿಕ್ರಿಯೆಯನ್ನು ಓದಿದೆ. ನಿಮ್ಮ ಅಭಿಮಾನ ಪೂರ್ವಕ ಪ್ರತಿಕ್ರಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by H A Patil on
ಮೇಡಂ ವಂದನೆಗಳು ' ಮನೆ ಮದ್ದು ' ಒಂದು ಉಪಯುಕ್ತ ಉತ್ತಮ ಲೇಖನ. ನಮ್ಮ ದೈನಂದಿನ ಜೀವನದಲ್ಲಿ ಬ ರುವ ಅರ್ಧದಷ್ಟು ಕಾಯಿಲೆಗಳು ಮನೆ ಮದ್ದಿನಿಂದಲೆ ವಾಸಿಯಾಗುತ್ತವೆ.ಕೆಲವೇ ದಶಕಗಳ ಹಿಂದೆ ಮನೆಮದ್ದು ಬಲ್ಲ ಅಜ್ಜಿಯಂದಿರು ಎಲ್ಲ ಮನೆಗಳಲ್ಲಿಯೂ ಇದ್ದರು. ನಾವು ಅವರನ್ನು ಅವರ ಮಾಡುತ್ತಿದ್ದ ಮನೆಮದ್ದುಗಳನ್ನು ಕಳೆದು ಕೊಂಡಿದ್ದೇವೆ ಅಷ್ಟೆ ಅಲ್ಲ ಅವರನ್ನು ಉದಾಸೀನ ಮಾಡಿದ್ದೇವೆ.ಈಗಲೂ ಕಾಲ ಮಿಂಚಿಲ್ಲ ಮನೆಮದ್ದು ಬಲ್ಲವರನ್ನು ಗುರುತಿಸುವ ಮತ್ತು ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ಈಗಿನಿಂದ ಆಗಬೇಕು. ಸಕಾಲಿಕ ಲೇಖನ ನೀಡಿದ್ದೀರಿ , ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಪಾಟೀಲರೇ ನಮಸ್ಕಾರಗಳು ನೀವು ಹೇಳಿರುವಂತೆ ನಮ್ಮ ಅರ್ಧದಷ್ಟು ಮನೆಮದ್ದಿನಿಂದಲೇ ವಾಸಿಯಾಗುತ್ತಿತ್ತು. ದೇಹಸ್ಥಿತಿಗೆ ಅನುಗುಣವಾಗಿ ಅಡಿಗೆ ಮಾಡಿ ರೋಗವನ್ನು ತಡೆಗಟ್ಟುವ ಜಾಣ್ಮೆ ನಮ್ಮ ಹಿರಿಯರಿಗೆ ಇತ್ತು. ಬಹುಶಃ ಇನ್ನು ಒಂದು ತಲೆಮಾರು ಮಾಯವಾದರೆ ಎಷ್ಟೋ ವಿಚಾರಗಳು ಅವರೊಂದಿಗೇ ಕಣ್ಮರೆಯಾಗುತ್ತವೆ. ನೀವು ತಿಳಿಸಿರುವಂತೆ ಆದಷ್ಟು ಅವುಗಳನ್ನು ಉಳಿಸುವ ಪ್ರಯತ್ನ ಮಾಡಲೇ ಬೇಕು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on
ಪದ್ಮಾ ಮೇಡಮ್, <<ಆಕಸ್ಮಿಕವಾಗಿ ಭೂಮಿಯ ಮೇಲೆ ಯಾರಿಗಾದರೂ ಆರೋಗ್ಯ ಕೆಟ್ಟರೆ ಚಿಕಿತ್ಸೆ ನೀಡಲು ದೇವಲೋಕದಿಂದ ದೇವತೆಗಳೆ ಬರಬೇಕಾಗಿತ್ತಂತೆ.>> ಇದು ಕಲಿಯುಗ ಈಗ ದೇವತೆಗಳು ಇಲ್ಲಿ ಬರುವುದಿಲ್ಲವಾದ್ದರಿಂದ ಈಗ ಯಾರಿಗಾದರೂ ಖಾಯಿಲೆ ಉಂಟಾದರೆ ಚಿಕಿತ್ಸೆಗಾಗಿ ದೇವಲೋಕಕ್ಕೇ ಹೋಗಬೇಕು. :)) ಇದನ್ನು ತಪ್ಪಿಸಿಕೊಳ್ಳಬೇಕೆಂದರೆ ಈ ಲೇಖನದಲ್ಲಿ ನೀವು ಇದರಲ್ಲಿ ಕೊಟ್ಟಿರುವ ವಿಷಯಗಳನ್ನು ಚೆನ್ನಾಗಿ ಮನನ ಮಾಡಿಕೊಳ್ಳಬೇಕು. ಸಾಸಿವೆಯ ಬಗ್ಗೆ ಇನ್ನೊಂದು ವಿಷಯ: ಎಂತಹ ಅಸಿಡಿಟಿಯಿದ್ದರೂ ಎರಡು ಮೂರು ಚಮಚೆ ಸಾಸಿವೆ ಕಾಳುಗಳನ್ನು ನುಂಗಿ ಅರ್ಧ ಲೋಟದಷ್ಟು ನೀರು ಕುಡಿದರೆ ಐದರಿಂದ ಹತ್ತು ನಿಮಿಷಗಳಲ್ಲಿ ಅಸಿಡಿಟಿಯಿಂದಾದ ಹೊಟ್ಟೆಯುರಿ ಮತ್ತು ಎದೆಯುರಿ ಕಡಿಮೆಯಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on
ಶ್ರೀಧರ್ ಬಂಡ್ರಿ ನಿಮ್ಮ ಪ್ರತಿಕ್ರಯೆಯನ್ನು ಓದಿದೆ. ನಿಜ ನೀವು ತಿಳಿಸಿದಂತೆ ಇದು ಕಲಿಯುಗ ಈಗ ದೇವತೆಗಳು ಇಲ್ಲಿ ಬರುವುದಿಲ್ಲವಾದ್ದರಿಂದ ಈಗ ಯಾರಿಗಾದರೂ ಖಾಯಿಲೆ ಉಂಟಾದರೆ ಚಿಕಿತ್ಸೆಗಾಗಿ ದೇವಲೋಕಕ್ಕೇ ಹೋಗಬೇಕು. :)) ಅಸಿಡಿಟಿಯಿಂದಾದ ಹೊಟ್ಟೆಯುರಿ ಮತ್ತು ಎದೆಯುರಿಗೆ ಸಾಸಿವೆ ಸಹಾಯಕ ಎಂದು ತಿಳಿಸಿದ್ದೀರಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟ್ವಿಟ್ಟರಿನಲ್ಲಿ ಸಂಪದ