" ಮಹಾರಥಿ ಕರ್ಣ"

" ಮಹಾರಥಿ ಕರ್ಣ"

ಚಿತ್ರ

 

ಮಹಾಕಾವ್ಯ ಮಹಾಭಾರತದ ತುಂಬೆಲ್ಲ

ಅದ್ಭುತ ವಿಶಾಲ ಗುಣ ಸ್ವಭಾವಗಳ

ಎಷ್ಟೊಂದು ವೈವಿಧ್ಯಪೂರ್ಣ ಪಾತ್ರಗಳು ?

ಪಾಂಡವರು ಕೌರವರು ಭೀಷ್ಮ ಕೃಷ್ಣ ವಿಧುರ

ಶಕುನಿ ಕೃಪ ದ್ರೋಣ ಅಶ್ವತ್ಥಾಮ ಎಲ್ಲರಿಗೂ

ಮಿಗಿಲಾದ ದಾನಶೂರ ಕರ್ಣ !

 

ಕರ್ಣನೆಂದರೆ ಸುಮ್ಮನೆ ಅಲ್ಲ !

ಸೂರ್ಯನಂತಹ ತಂದೆ ಕುಂತಿಯಂತಹ

ತಾಯಿ ಆದರೇನು

ಅದನ್ನು ಸಮಾಜ ಪರಿಗಣಿಸುವುದೆ ?

ಯಾರೆಡೆಗೆ ಬೆಟ್ಟು ತೋರುವುದು ? ಅವರವರಿಗೆ

ಅವರವರವೆ ಮಿತಿಯ ಕಟ್ಟು ಪಾಡುಗಳು

 

ಹುಡುಗಾಟದ ವಯದ ಬಾಲೆ ಕುಂತಿ

ಅನಾಯಾಸವಾಗಿ ದೊರೆತ ವರಗಳ ಕುರಿತು

ಒಂದು ಬಗೆಯ ಕುತೂಹಲ

ಪರೀಕ್ಷಿಸಿ ನೋಡುವ ತವಕ ಇರಲಿ ಎಂದು

ಸೂರ್ಯನನು ನೆನೆದರೆ ಪ್ರತ್ಯಕ್ಷವಾಗಿ

ಮಗುವ ಕೈಗಿಟ್ಟು ಹೊರಟು ಬಿಡಬೇಕೆ

ಮಹಾನುಭಾವ! ಪಿಳಿ ಪಿಳಿ ಕಣ್ಣು ಬಿಡುತ್ತ

ತನ್ನನೇ ದಿಟ್ಟಿಸುವ ಮುದ್ದಾದ ಮಗು

ಮಗುವಿನೆಡೆಗಿನ ಸೆಳೆತ ಒಂದೆಡೆಗಾದರೆ

ಲೋಕಾಪವಾದದ ಭಯ ಇನ್ನೊಂದೆಡೆ

 

ತಬ್ಬಿಬ್ಬಾದ ಕುಂತಿ ತೇಲಿ ಬಿಟ್ಟಳು ಅಮಾಯಕ

ಮಗುವನು ತುಂಬಿ ಹರಿಯುತಲಿದ್ದ

ವಿಶಾಲ ಗಂಗೆಯ ಒಡಲಲ್ಲಿ

ಮಗನ ರಕ್ಷಣೆ ಕೋರಿದಳು ಗಂಗೆಯಲಿ 

ನೆಟ್ಟಗೆ ನಡೆದಳು ಅರಮನೆಯ ಕಡೆಗೆ

ಗಂಗೆ ಕುಂತಿಯಲ್ಲ ! ಆಕೆ ಮಾತೃ ಹೃದಯಿ

ಮೇಲಾಗಿ ಪ್ರಬುದ್ಧೆ ಜಗದ ನೀತಿ ನಿಯಮಗಳ

ಕುರಿತ ಸೂಕ್ಷ್ಮ ಅರಿವುಳ್ಳವಳು

ಅಮಾಯಕ ಮಗುವನು ಮುಳುಗಿಸದೆ

ಕೊಂಡೊಯ್ದು ಮಕ್ಕಳಿಲ್ಲದ ಬೆಸ್ತ ದಂಪತಿಗಳಿಗೆ

ಆ ಮಗುವ ಕರೂಣಿಸಿದಳು ಅರಮನೆಯ

ರಾಜ ಕುವರ ಸಂಧರ್ಭದ ಶಿಶುವಾಗಿ

ಬೆಸ್ತನ ಗುಡಿಸಲಲಿ ಬೆಳೆದ

 

ವರ್ಣಾಶ್ರಮ ಪದ್ಧತಿಯ ಕಾಲ ಕುರುಕುಲ

ಸಾಮ್ರಾಜ್ಯದ ಅತಿರಥ ಮಹಾರಥ ಬೀಷ್ಮ ಕೃಪ

ದ್ರೋಣ ವಿದುರ ಅರಸು ಕುವರರಾದ

ಗಾಂಧಾರಿ ಕುಂತಿ ತನಯರು

ರಾಜಗುರು ದ್ರೋಣ ಅರ್ಜುನನಿಗಲ್ಲದೆ

ಸೂತ ಪುತ್ರನಿಗೆ ಬಿಲ್ವಿದ್ಯೆ ಕಲಿಸಲು ಸಾಧ್ಯವೆ?

ಅವಮಾನವನೆ ಸಫಲತೆಯ ಏಣಿಯನಾಗಿಸಿ

ಬೆಳೆದ ಧನುರ್ಧರ ಮಧ್ಯಮ ಪಾಂಡವಗೆ

ಸರಿಸಮನಾಗಿ

 

ಕುರುಕುಲದ ಶೂರ ಪೀಳಿಗೆಗೆ ಕಡಿಮೆಯಲ್ಲದ

ಈ ಧನುರ್ಧರ ! ನ್ಯಾಯ ನೀತಿವಂತ

ಕೃಷ್ಣ ಭೀಮ ಅರ್ಜುನರಂತೆ ಸ್ತ್ರೀಲೋಲನಲ್ಲಾತ

ಜನ್ಮ ಮೂಲದ ಅರಿವಿಲ್ಲದ ಲೋಕಧರ್ಮದ

ಒಳ ಸುಳಿಗಳ ಅರಿವಿಲ್ಲದ ಮಣ್ಣಲಡಗಿದ

ವಜ್ರವಾಗಿದ್ದನಾತ ಸುಯೋಧನನಿಗೊಂದು

ಕೊರಗಿತ್ತು ಅರ್ಜುನಗೆ ಸರಿಸಾಟಿ ಬಿಲ್ಲಾಳು

ತನ್ನ ಬಳಿಯಿಲ್ಲೆಂದು ಆತನ ಮನಗೆದ್ದ

ಅಶ್ವತ್ಥಾಮನಿಂದ ಶಾಪಗ್ರಸ್ತ ಈ ಸೂತಪುತ್ರ

ಗೆಳೆತನದ ಮಹತಿಗೊಂದು ಭಾಷ್ಯವನೆ ಬರೆದ

 

ಮಹಾ ಭಾರತ ಯುದ್ಧ ಸಂಭವನೀಯ ಕಾಲ

ಯುದ್ಧ ಗೆಲುವ ಹುಮ್ಮಸಿನಲಿದ್ದ ಪ್ರಾಣ ಸ್ನೇಹಿತ ಕರ್ಣನ

ಬೆಂಬಲ ನೆಚ್ಚಿದ್ದ ಕೌರವ ಇದರರಿವಿದ್ದ

ರುಕ್ಮಿಣಿಪ್ರಿಯ ಕೃಷ್ಣ ಹೂಡಿದನೊಂದುಪಾಯ

ಉದಯ ಕಾಲದಲೊಂದು ದಿನ ರಥಾರೂಢನಾಗಿ

ಸಾಗಿದನು ಗಂಗೆಯ ತಟದ ದಾರಿಯಲಿ

ಸೂರ್ಯನಿಗಘ್ರ್ಯವನು ಕೊಟ್ಟು ಬರುತಲಿದ್ದ

ಕರ್ಣನಿಗೆದುರಾಗಿ ರಟ್ಟು ಮಾಡಿದನಾತನ

ಜನ್ಮ ರಹಸ್ಯ ಕೋರಿದ ಹಿರಿಯ ಪಾಂಡವನಾಗಿರಲು

ಅಚಲ ನಿಷ್ಟೆಯ ಕರ್ಣ

ಕೌರವನ ಸ್ನೇಹದಿಂದಿನಿತೂ ಕದಲಲಿಲ್ಲ ಆದರೂ

ಕೃಷ್ಣ ಕಳಿಸಿದನು ಕುಂತಿಯನು ಸೂರ್ಯಪುತ್ರ

ಕರ್ಣನಲ್ಲಿಗೆ ಪಾಂಡವರಿಗೆ ಸಹಾಯ ಕೋರಿ

 

ಅರುಣೋದಯದ ಶಾಂತ ನಿರ್ಮಲ ಕಾಲ

ಗಿಡಗಂಟಿಗಳ ಸಂದಿನಲಿ ಉಲಿಯುತಿಹ ಹಕ್ಕಿಗಳು

ಮೆಲ್ಲಗೆ ಬೀಸುತಿಹ ಮಂದಾನಿಲ ತೇಲಿ ಬರುತಿಹ

ಅರಳಿದ ಸುಮಗಳ ಸೌಗಂಧ ! ಇಬ್ಬನಿಯಲಿ ಮಿಂದೆದ್ದ

ಹುಲ್ಲು ಹಾಸಿನ ಮೇಲೆ ಮೆಲ್ಲಗೆ ಸಾಗಿದಳು ಕುಂತಿ

ಗಂಗೆಯ ತಟದೆಡೆಗೆಅನ್ಯ ಮನಸ್ಕಳಾಗಿ ಅಂದು

ಲೋಕಾಪವಾದಕಂಜಿ ಜಾತ ಶಿಶು ಕರ್ಣನನು

ಗಂಗೆಯಲಿ ತೇಲಿ ಬಿಡಲು ಬಂದಿದ್ದ ಬಾಲೆ ಕುಂತಿ

ಇಂದು ಮತ್ತೆ ಬಂದಿದ್ಧಾಳೆ ತನ್ನಿಳಿವಯದ ಸಂಜೆಯಲಿ

ತನ್ನೈವರು ಮಕ್ಕಳ ಪ್ರಾಣ ಭಿಕ್ಷೆಯನು ಕೋರಿ

 

ಪ್ರತ್ಯಕ್ಷಳಾದಳು ಗಂಗೆ ಸುಂದರ ಸೂರ್ಯೋದಯದಿ

ಹೆತ್ತತಾಯಿ, ಸಾಕುತಾಯಿ, ಮಗ ಮೂವರ

ಅಪೂರ್ವ ಸಮ್ಮಿಲನ ಕುಂತಿ ಕೋರಿಕೆಯಂತೆ

ಕರ್ಣನನು ಸಲಹಿದ್ದ ಗಂಗೆ ಆತನನು ಮರಳಿ

ಕುಂತಿಗೊಪ್ಪಿಸಿ ನಿರ್ಭಾವುಕಳಾಗಿ ಸಾಗಿದಳು ತನ್ನ

ದೈನಂದಿನ ಬದುಕಿಗೆ ಎಂತಹ ನಿಸ್ಸಹಾಯಕ ಸ್ಥಿತಿಯಲ್ಲಿ

ನಿಂತಿದ್ದಾನೆ ಅಮಾಯಕ ಕರ್ಣ !

 

ಎದುರಿನಲಿ ತಾಯಿ ಕುಂತಿ ಮೇಲೆ ತೇಜಸ್ವಿ ಸೂರ್ಯ

ಸಂಬಂಧವನು ತೊರೆದು ಹೋಗುತಿಹ ಗಂಗೆ

ತ್ರಿಕೋನ ಸಂಬಂಧಗಳ ಜಾಲದಲಿ ಬಂದಿ ಕರ್ಣ

ಯಾಚಕಿ ತಾಯಿ ಸೋದರರ ಬಾಂಧವ್ಯ

ಪ್ರಾಣ ಸ್ನೇಹಿತ ಕೌರವ ಇವರುಗಳ ಮಾಯಾ ಪಾಶ

ಒಂದು ಕ್ಷಣ ವಿಚಲಿತನಾದ ಕರ್ಣ ಬಂಧಗಳ

ಗೋಡೆ ಕೆಡವಿ ಅಚಲನಾದ ಕೌರವಗೆ ನಿಷ್ಟನಾಗಿ

 

ಆದರೂ ಕುಂತಿ ಕೇಳಿದಳು ತೊಟ್ಟ ಬಾಣ

ಮತ್ತೆ ತೊಡದಂತೆ ತಥಾಸ್ತು ಎಂದನಾತ ತಾಯಿ

ಕುಂತಿಯ ಕೋರಿಕೆಗೆ ಆತನ ಬತ್ತಳಿಕೆಯಲಿದ್ದ

ಪ್ರಚಂಡ ಸರ್ಪಾಸ್ತ್ರ ಕನಲಿ ಕೆಂಡವಾಗಿ ತನ್ನ

ನಿಜರೂಪ ಧರಿಸಿ ಆತನೆದುರಲಿ ನಿಂತು ತನ್ನ

ಪೂರ್ವಾಶ್ರಮದ ಕಥೆ ಹೇಳಿ ಕೇಳಿ ಕೊಂಡಿತು

ಕರ್ಣನನು ಕುಂತಿಗೆ ಮಾತು ಕೊಡ ಬೇಡವೆಂದು

ಅರೆ ಕ್ಷಣ ಯೋಚಿಸಿದ ಆತ ಎಂದಿಗೂ

ಯಾರ ಕೋರಿಕೆಗೂ ಇಲ್ಲವೆನ್ನದ ತಾನು ಒಬ್ಬ

ಅಸಹಾಯಕ ತಾಯಿಯ ಕೋರಿಕೆಗೆ

ಇಲ್ಲವೆನ್ನುವುದೆ ದ್ವಂದ್ವದಲಿ ಬಿದ್ದನಾತ !

 

ಭೂಲೋಕದ ರೀತಿ ರಿವಾಜುಗಳ ಗೊಡವೆ

ತನಗೇಕೆ ಎಂದು ಚಣ ಕಾಲ ಅನ್ನಿಸಿದರೂ

ತಡೆಯಲಾಗದೆ ಸೂರ್ಯ ಪ್ರತ್ಯಕ್ಷನಾಗಿ

ತನಯನು ಎಚ್ಚರಿಸಿ ನಿಷ್ಟುರವಾಗೆಂದ ಯಾಚಕ

ಕೇಳಿದ್ದು ಕೊಡುವುದು ಸದ್ಗುಣ ನಿಜ ! ಅದು

ಯಾಚಕ ಸನ್ಮಾರ್ಗದಲ್ಲಿರುವಾಗ ಆದರೆ ಇಲ್ಲಿ

ಕುಂತಿ ಲೀಲಾ ವಿನೋದಿ ಕೃಷ್ಣನ ಕೈಯದಾಳ

ಭಾವಾವೇಶಕೆ ಬಲಿಯಾಗ ಬೇಡವೆಂದನಾ ರವಿತೇಜ

ಕ್ಷಣ ಕಾಲ ಯೋಚಿಸಿದ ಕರ್ಣ ತಾನೇನು

ಚಿರಂಜೀವಿಯೆ ? ದೇಹ ನಶ್ವರ ಆತ್ಮ ಅಮರ

ಪವಿತ್ರ ಜೀವನಧರ್ಮ ಬದಲಿಸಿ ಕೊಳ್ಳಲಾರೆನೆಂದು

ಅಂತರಾತ್ಮದ ಕರೆಗೆ ಓಗೊಟ್ಟ ಆತ

ಕುಂತಿಯ ಕೋರಿಕೆಗೆ ಸಮ್ಮತಿಸಿದ

 

ಹುಂಬ ಭಾವನೆಗಳಿಗೆ ಪರವಶನಾಗದೆ

ಜನ್ಮ ರಹಸ್ಯ ತಿಳಿದು ಅಸಹಾಯಕನಾಗದೆ

ಯಾವ ಸಂಬಂಧಗಳ ಒಳಸುಳಿಗೂ ಸಿಲುಕದೆ

ಸ್ನೇಹದ ಮಹತ್ವ ಎಂತಹುದೆಂದು

ಜಗಕೆ ಸಾರಿದ ಕರ್ಣನೊಂದು ಮಹತ್ವದ

ಚಿರಂತಹ ವ್ಯಕ್ತಿತ್ವ ಒಮ್ಮೊಮ್ಮೆ ಧರ್ಮಜ

ಅಧರ್ಮೀಯನಂತೆ ತೋರಬಹುದು ಕೃಷ್ಣ

ಸುಳ್ಳುಗಾರನೆನಿಸಿರಬಹುದು ಆದರೆ

ಪ್ರೀತಿಯನುಕ್ಕಿಸುವ ಐಹಿಕ ಸುಖ ಭೋಗಗಳಿಗೆ

ಪಕ್ಕಾಗದೆ ತ್ಯಾಗದ ಪ್ರತೀಕವಾಗಿ ಜಗದೆದುರು

ನಿಂತ ಕರ್ಣ! ನಿನ್ನ ಬಾಳು ಸಾರ್ಥಕ

ನೀನೊಂದು ನಿರ್ಮಲ ಸ್ನೇಹದ ಪ್ರತೀಕ

 

                     *

Rating
No votes yet

Comments

Submitted by H A Patil Fri, 01/02/2015 - 19:35

ಮೇಲಿನ ಕವನಕ್ಕೆ ಬಳಸಿದ ಚಿತ್ರ ಅಂತರ್ಜಾಲದಿಂದ ಆರಿಸಿಕೊಳ್ಳಲಾಗಿದೆ.

Submitted by Lakshmikanth Itnal Fri, 01/02/2015 - 21:07

ಹಿರಿಯರಾದ ಹೆಚ್ ಏ ಪಾಟೀಲ ಸರ್ ಜಿ. ಮಹಾರಥಿ ಕರ್ಣ ತುಂಬ ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದೀರಿ, ಗಂಗೆ, ಕುಂತಿಯರ ತುಮುಲಗಳನ್ನು, ಕರ್ಣನ ಮಿತ್ರಭಕ್ತಿಯನ್ನು ಅನೂಚಾಣವಾಗಿ ಸುಂದರವಾಗಿ ಚಿತ್ರಿಸಿದ್ದೀರಿ. ಸುಂದರ ಕವನ. ಅಭಿನಂದನೆಗಳು ಸರ್

Submitted by venkatb83 Sat, 01/03/2015 - 12:14

In reply to by Lakshmikanth Itnal

+1
"ಹುಂಬ ಭಾವನೆಗಳಿಗೆ ಪರವಶನಾಗದೆ
ಜನ್ಮ ರಹಸ್ಯ ತಿಳಿದು ಅಸಹಾಯಕನಾಗದೆ
ಯಾವ ಸಂಬಂಧಗಳ ಒಳಸುಳಿಗೂ ಸಿಲುಕದೆ
ಸ್ನೇಹದ ಮಹತ್ವ ಎಂತಹುದೆಂದು
ಜಗಕೆ ಸಾರಿದ ಕರ್ಣನೊಂದು ಮಹತ್ವದ
ಚಿರಂತಹ ವ್ಯಕ್ತಿತ್ವ ಒಮ್ಮೊಮ್ಮೆ ಧರ್ಮಜ
ಅಧರ್ಮೀಯನಂತೆ ತೋರಬಹುದು ಕೃಷ್ಣ
ಸುಳ್ಳುಗಾರನೆನಿಸಿರಬಹುದು ಆದರೆ
ಪ್ರೀತಿಯನುಕ್ಕಿಸುವ ಐಹಿಕ ಸುಖ ಭೋಗಗಳಿಗೆ
ಪಕ್ಕಾಗದೆ ತ್ಯಾಗದ ಪ್ರತೀಕವಾಗಿ ಜಗದೆದುರು
ನಿಂತ ಕರ್ಣ! ನಿನ್ನ ಬಾಳು ಸಾರ್ಥಕ
ನೀನೊಂದು ನಿರ್ಮಲ ಸ್ನೇಹದ ಪ್ರತೀಕ"
ಹಿರಿಯರೇ
ವರ್ಷದಾರಂಭದಲ್ಲಿ ಒಂದೊಳ್ಳೆ ಅರ್ಥಗರ್ಭಿತ ದೀರ್ಘ ಕಾವ್ಯ ಕಥನ ಬರೆದಿರುವಿರಿ,ಇಲ್ಲಿನ ಹಲವು ಸನ್ನಿವೇಶಗಳು ಕಣ್ಣಿಗೆ ಕಟ್ಟಿ ಮನಸಿಗೆ ಮುಟ್ಟುವಂತಿವೆ.
ಮಹಾಭಾರತದಲ್ಲಿ ನನಗೆ ಬಹು ಆಪ್ತವಾದ ಪಾತ್ರಗಳು -ಮುಖ್ಯವಾಗಿ ದ್ರೌಪದಿ ,ನಂತರದಲ್ಲಿ ಗಾಂಧಾರಿ ಮತ್ತು ಧೃತರಾಸ್ಟ್ರ (ಕುರುಡು ಮಮಕಾರ ಪ್ರೀತಿಗೆ ಈಗಲೂ ಮುಂದೆಯೂ ಅವರನ್ನೇ ಉದಾಹರಿಸುವುದು .(() ).
ಕರ್ಣನೂ ಮಹಾ ಭಾರತದಲ್ಲಿ ಬಹು ಮುಖ್ಯ ವ್ಯಕ್ತಿ ಶಕ್ತಿ ..
ಮೋಹ- ಮದ -ಮತ್ಸರ ಕ್ಕೆ ಅತೀತನಾಗಿ ಕೇವಲ ಕೌರವನ ಉಪ್ಪಿನ ಋಣ ಮತ್ತು ಸ್ನೇಹಕ್ಕೆ ಬದ್ಧ್ನಾಗಿ ಕೊನೆವರೆಗೂ ಕಾಪಾಡುವನು -ಹಾಗೆಯೇ ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳುವನು (ಆ ಸಂದರ್ಭದಲ್ಲಿ ಕರ್ಣನ ಮನೋ ಸ್ಥಿತಿ ಹೇಗಿದ್ದಿರಬಹುದು ಎಂದು ಕಲ್ಪಿಸಿಕೊಂಡರೆ ಮನೋ ವೇದನೆಯಾಗುತ್ತದೆ ).ಸ್ನೇಹಕ್ಕೆ ದಾನಕ್ಕೆ ಈಗಲೂ ಮುಂದೆಯೂ ಕರ್ಣನನ್ನೇ ಉದಾಹರಿಸುವರು...
ಮಹಾ ಭಾರತ ಮತ್ತು ರಾಮಾಯಣದ ಕೆಲ ಮುಖ್ಯ ಪಾತ್ರಗಳ ಕುರಿತಾಗಿ ಹಲವು ಗದ್ಯ ಪದ್ಯ ಬರಹಗಳು ಈ ಹಿಂದೆ ಗುರುಗಳಾದ ಶ್ರೀಯುತ ಪಾರ್ಥ ಸಾರಥಿ ಅವರ ಮತ್ತು ನಾಗೇಶ್ ಮೈಸೂರು ಹಾಗೂ ಇನ್ನಿತರರ ಬರಹಗಳಲ್ಲಿ ಭಲೇ ಸೊಗಸಾಗಿ ಮೂಡಿ ಬಂದಿವೆ ,ಅದಕ್ಕೆ ಮತ್ತೊಂದು ಸೇರ್ಪಡೆ ನಿಮ್ಮೀ ಸುಂದರ ಕಥನ ಕಾವ್ಯ ..
ಓದಿ ಸಂತಸಗೊಂಡೆ..
ಜೊತೆಗೆ ಸೇರಿಸಿದ ಚಿತ್ರವೂ ಬರಹ್ದ ಶೋಭೆ ಹೆಚ್ಚಿಸಿದೆ..
ಮುಂದಿನ ದಿನಗಳಲ್ಲಿ , ಮಂಥರೆ ,ಗಾಂಧಾರಿ ಧೃತ ರಾಸ್ಟ್ರ ,ದ್ರೌಪದಿ , ಕೈಕೇಯಿ,ಹನುಮ,ವಾಲಿ ಸುಗ್ರೀವರ ಕಥನ ಕಾವ್ಯಗಳನ್ನೂ ಬರೆದು ನಮ್ಮ ಮನ ತಣಿಸುವಿರಿ ಎಂಬ ನಂಬುಗೆ ಎನದು...
ಶುಭವಾಗಲಿ
ನನ್ನಿ
\|/

Submitted by H A Patil Mon, 01/05/2015 - 20:03

In reply to by venkatb83

ಸಪ್ತಗಿರಿಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ನೋಡಿ ಮನಸ್ಸು ತುಂಬಿ ಬಂತು, ನೀವು ಕವನವನ್ನು ಹೊಗಳಿದ್ದೀರಿ ಎನ್ನುವ ಕಾರಣಕ್ಕಾಗಿ ಅಲ್ಲ, ನೀವು ಬರಹಗಳು ಯಾರವೆ ಮತ್ತು ಯಾವವೆ ಇರಲಿ ಅವುಗಳ ಆಳಕ್ಕಿಳಿದು ಗ್ರಹಿಸಿ ಅವುಗಳನ್ನು ಮಥಿಸಿ ಪ್ರತಿ್ ಕ್ರಿಯಿಸುವ ಪರಿ ಅನನ್ಯ,ನಿಮ್ಮ ಅನಿಸಿಕೆ ಸರಿ ದ್ರೌಪದಿ, ಗಾಂಧಾರಿ ಮತ್ತು ಧೃತರಾಷ್ಟ್ರರು ಸಹ ಮಾನವೀಯ ಒಳ ತೋಟಿಗಳನ್ನು ಬಿಂಬಿಸುವ ಪಾತ್ರಗಳೆ. ಇವುಗಳಷ್ಟೆ ಅಲ್ಲ ಅದರಲ್ಲಿ ಬರುವ ಎಲ್ಲ ಪಾತ್ರಗಳೂ ಅದಭುತವಾದ ಪಾತ್ರಗಳೆ ಎರಡು ಮಾತಿಲ್ಲ, ಅವೆಲ್ಲ ಪಾತ್ರಗಳನ್ನು ಚಿತ್ರಿಸುವ ಶಕ್ತಿ ನನ್ನ ಲೇಖನಿಗೆ ಬರಲಿ ಎನ್ನುವ ಆಶಯದೊಂದಿಗೆ ಧನ್ಯವಾದಗಳು.

Submitted by H A Patil Mon, 01/05/2015 - 19:54

In reply to by Lakshmikanth Itnal

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ನೀವು ಕವನಗಳನ್ನು ಗ್ರಹಿಸಿ ಪ್ರತಿಕ್ರಿಯಿಸುವುದು ಯಾವುದೇ ಬರಹಗಾರನಿಗೆ ಸಂತಸ ತರುವಂತಹುದು, ಕವನದ ಮೆಚ್ಚುಗೆಗೆ ಧನ್ಯವಾದಗಳು.

Submitted by kavinagaraj Sun, 01/04/2015 - 08:52

ಪಾಟೀಲರೇ, ಕರ್ಣನ ಪಾತ್ರವೈಭವದ ಸೊಗಸು ಚೆನ್ನಾಗಿ ಮೂಡಿಸಿರುವಿರಿ. ಸಂಸಾರ, ಬಂಧುಗಳ ಬಂಧನವಿಲ್ಲದಿದ್ದುದೂ ಕರ್ಣ ಕರ್ಣನಾಗಿ ಅರಳಲು ಸಹಾಯಕವೂ ಆಯಿತು!!

Submitted by H A Patil Mon, 01/05/2015 - 20:06

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ಓದಿದೆ ತಾವು ಕರ್ಣನ ಪಾತ್ರವನ್ನು ಅರ್ಥೈಸಿದ ರೀತಿ ಸಹ ನಿಜ ತಮ್ಮ ಅಭಿಪ್ರಾಯವನ್ನೂ ನಾನೂ ಒಪ್ಪುವೆ. ಧನ್ಯವಾಗಳು.

Submitted by nageshamysore Sun, 01/04/2015 - 17:19

ಕರ್ಣಾನಂದಕರ ಕರ್ಣಾಲಾಪ ಪ್ರತಾಪ :-)
ಬಹುಶಃ ದುಷ್ಟ ಚತುಷ್ಟಯದ ಭಾಗವಾಗಿದ್ದೂ ಕೂಡ ತನ್ನ ಸ್ವಂತ ಗುಣಧರ್ಮದ ಕಾರಣದಿಂದಲೆ, ತನ್ನದೇ ಆದ ಪ್ರತ್ಯೇಕ ಸಕಾರಾತ್ಮಕ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ಕರ್ಣನ ಹಿರಿಮೆ. ತನ್ನ ನಿಷ್ಠೆಯನ್ನು ಕಾಪಾಡಿಕೊಳ್ಳುವ ಮತ್ತು ನಂಟಿನ ಬಂಧನದ ತೊಳಲಾಟಕ್ಕೆ ಇಂಬುಕೊಡುವ ದ್ವಂದ್ವದಲ್ಲಿ ಎರಡಕ್ಕೂ ಅಪಚಾರವೆಸಗದಂತೆ ನಡೆದ ರೀತಿಯಲ್ಲಿ ಪಾಪ ಅವನ ಜೀವನವಿಡಿ ತಲೆ ತಗ್ಗಿಸಿಕೊಂಡೆ ಬಾಳಬೇಕಾಯ್ತು. ಆದರೆ ತನ್ನ ನೀತಿ ಸಡಿಲಿಸದೆ, ಕೀರ್ತಿಗೆ ಎರವಾಗದೆ ಅವನು ಎಲ್ಲವನ್ನು ನಿಭಾಯಿಸಿದ ರೀತಿ ಅಮೋಘ. ವಸ್ತ್ರಾಪಹರಣ, ಅಭಿಮನ್ಯು ವಧೆ ಇತ್ಯಾದಿಗಳಲ್ಲಿ ದೋಷ ಹುಡುಕಬಹುದಾದರೂ ಅವುಗಳ ಕಾರ್ಯತಂತ್ರದ ಹೊಣೆ ದುರ್ಯೋಧನನದಾಗಿಬಿಡುವುದರಿಂದ ಕರ್ಣಿಗೆ ಅಲ್ಲಿ 'ಬೆನಿಫಿಟ್ ಅಫ್ ಡೌಟ್' ಸಿಕ್ಕಿಬಿಡುತ್ತದೆ. ಒಟ್ಟಾರೆ ಸೊಗಸಾದ ಲಹರಿ :-)

Submitted by H A Patil Mon, 01/05/2015 - 20:14

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಕರ್ಣನ ಪಾತ್ರವನ್ನು ಸೊಗಸಾಗಿ ಗ್ರಹಿಸಿ ಅರ್ಥೈಸಿದ್ದೀರಿ, ದ್ರೌಪದಿಯ ವಸ್ತ್ರಾಪಹರಣ ಮತ್ತೂ ಅಭಿಮನ್ಯು ಚಕ್ರವ್ಯೂಹವನ್ನು ಬೇಧಿಸಿದ ಮುಂತಾದ ಸಂಧರ್ಭಗಳಲ್ಲಿ ಕರ್ಣ ದುರ್ಯೋಧನನ ಪಕ್ಷಪಾತಿ ಯಾಗಿಯೆ ವರ್ತಿಸಿದ್ದಾನೆ ಅದರಲ್ಲಿ ಎರಡು ಮಾತಿಲ್ಲ. ಮನುಷ್ಯ ಅನ್ನದ ಋಣಕ್ಕೆ ಕಟ್ಟಿ ಬಿದ್ದಾಗ ತನ್ನ ಸ್ವಂತಿಕೆ ಕಳೆದುಕೊಂಡು ಬಿಡುತ್ತಾನೆ, ಕರ್ಣನದೂ ಅದೇ ಪಾಡು. ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by ಗಣೇಶ Mon, 01/05/2015 - 00:00

ದಾನಶೂರ ಕರ್ಣನ ಪೂರ್ತಿ ವಿವರ ಚಿಕ್ಕ ಕವನದಲ್ಲಿ ಸೊಗಸಾಗಿ ಹೇಳಿದ್ದೀರಿ. ಇದು ಸುಮ್ಮನೆ- ಮಹಾರಥಿ ಕರ್ಣ ಒಂದು stand by ರಥ ಇಟ್ಟುಕೊಂಡಿದ್ದರೆ... :)

Submitted by H A Patil Mon, 01/05/2015 - 20:19

In reply to by ಗಣೇಶ

ಗಣೇಶ ರವರಿಗೆ ವಂದನೆಗಳು ಕವನದ ಓದು ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಬಹುಶಃ ಕರ್ಣನಿಗೆ ಇಂತಹ ಸಂಧರ್ಭ ಬರಬಹುದು ಎಂಬ ನಿರೀಕ್ಷೆ ಇದ್ದಿರಲಿಲ್ಲವೇನೂ ...!!