1966 ನೇ ಇಸವಿ. ಶಾಸ್ತ್ರಿಗಳು ಬೆಳೆಗೆರೆಯಲ್ಲಿ ಇದ್ದಾರೆ.ನಿತ್ಯವೂ ಬೆಳಿಗ್ಗೆ ಸಮಯ ಸ್ವಲ್ಪ ಹೊತ್ತು ಧ್ಯಾನಮಾಡುವ ಪದ್ದತಿ. ಅಂದು ಧ್ಯಾನದಲ್ಲಿ ಕುಳಿತಿದ್ದ ಸ್ವಲ್ಪಹೊತ್ತಿನಲ್ಲೇ ......... . ಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಆಶ್ರಮದ ಬಾಗಿಲಲ್ಲಿ ನಿಂತಂತೆ..... ಕೌಪೀನವನ್ನು ಮಾತ್ರ ಧರಿಸಿದ್ದ ಸ್ವಾಮಿಗಳು.ಆಶ್ರಮದ ಒಳಗಿನಿಂದ ಛಂಗನೆ ನೆಗೆದು ಹೊರಬಂದು ಇವರ ಮುಂದೆ ನಿಂತಂತೆ ದೃಷ್ಯವನ್ನು ಕಂಡು ಶಾಸ್ತ್ರಿಗಳು ಚಕಿತರಾಗುತ್ತಾರೆ. ಪೈಲ್ವಾನರಂತೆ ತೊಡೆತಟ್ಟಿ "ಕರೆಯೋ ಅದ್ಯಾರು ಬರ್ತಾರೆ ಕುಸ್ತೀಗೆ" ...ಅಂತ ಹಸನ್ಮುಖರಾಗಿ ನಿಲ್ಲುತ್ತಾರೆ.
"ಏನ್ ಸ್ವಾಮಿ ,ನೀವು ಎಷ್ಟು ವರ್ಷಗಳಿಂದ ಒಂದೇ ತರ ಇದ್ದೀರಲ್ಲಾ! ಸ್ವಲ್ಪ ನಾದ್ರೂ ಏರು ಪೇರು ಕಾಣುವುದಿಲ್ಲವಲ್ಲಾ!!" ಅಂತಾ ಶಾಸ್ತ್ರಿಗಳು ಸ್ವಾಮಿಗಳಲ್ಲಿ ಹೇಳ್ತಾರೆ. ..." ಇವನೆಲ್ಲಿ ಬದಲಾಗ್ತಾನೆ..ಇದ್ ಹಂಗೇ ಇರ್ತಾನೆ...ಅಂತಾ ಹೇಳ್ತಾ ಆಶ್ರಮದ ಒಳ ಹೋಗುತ್ತಾರೆ......ಶಾಸ್ತ್ರಿಗಳಿಗೆ ಎಚ್ಚರವಾಗಿ ಕಣ್ ಬಿಡುತ್ತಾರೆ.ಮನದ ತುಂಬೆಲ್ಲಾ ಮುಕುಂದೂರು ಸ್ವಾಮಿಗಳೇ ತುಂಬಿಹೋಗಿದ್ದಾರೆ. ಧ್ಯಾನ ಸ್ಥಿತಿಯಲ್ಲಿದ್ದಾಗ ಸ್ವಾಮಿಗಳ ಅಂತಹಾ ಅದ್ಭುತ ದರ್ಶನ!!
ಒಂದು ದಿನ ಕಳೆಯುತ್ತೆ. ಅದರ ಮಾರನೆಯ ದಿನದ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ "ಮುಕುಂದೂರು ಸ್ವಾಮಿಗಳ ನಿಧನ ವಾರ್ತೆ ಪ್ರಕಟವಾಗಿರುತ್ತೆ....... ಶಾಸ್ತ್ರಿಗಳಿಗೆ ಅಂದು ದರ್ಶನ ಕೊಟ್ಟ ಅದೇ ಸಮಯಕ್ಕೆ ಸ್ವಾಮಿಗಳು ಶರೀರವನ್ನು ತ್ಯಜಿಸಿರುತ್ತಾರೆ........
ಯಾಕೋ ಇವತ್ತು ಮುಕುಂದೂರು ಸ್ವಾಮಿಗಳ ನೆನಪು ಬಹಳವಾಗಿ ಆಗ್ತಿದೆ. ಶಾಲೆಗೆ ಹೋಗಿಯೇ ಇಲ್ಲ. ತನ್ನ ಪೂರ್ವಾಶ್ರಮದ ಬಗ್ಗೆ ಎಲ್ಲೂ ಹೇಳಿಕೊಂಡೇ ಇಲ್ಲ.ಇವರ ವಯಸ್ಸಿನ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ.ಯಾವ ಗುರುವಿನ ಹತ್ತಿರ ಏನು ಉಪದೇಶ ಪಡೆದರೋ ಗೊತ್ತಿಲ್ಲ. ಪಕ್ಕಾ ಹಳ್ಳೀ ಮಾತು. ಯೋಗ ಅನ್ನೋದಕ್ಕೆ ಯೇಗ ಅಂತಾಲೇ ಹೇಳ್ತಿದ್ರಂತೆ.ಆದರೆ ಪ್ರತಿಯೊಂದು ಮಾತಲ್ಲೂ ಅಧ್ಯಾತ್ಮ ಅಡಗಿರುತ್ತಿತ್ತು. ಸ್ವಾಮಿಗಳು ಶರೀರರವನ್ನು ತ್ಯಜಿಸಿದಾಗ ನಡೆದ ಪವಾಡವನ್ನು ಕಂಡ ಜನ ಇನ್ನೂ ಬದುಕಿರುವುದರಿಂದ ಇದೊಂದು ಕತೆಯಲ್ಲ. ನಡೆದ ಘಟನೆ. ಮೊದಲಭಾಗದಲ್ಲಿ ಆ ಘಟನೆಯನ್ನು ತಿಳಿಸಿ ನಂತರ ಸ್ವಾಮೀಜಿಯವರನ್ನು ಕುರಿತಾದ ಬಿಳಿಗೆರೆ ಕೃಷ್ಣಶಾಸ್ತ್ರಿಗಳ "ಯೇಗದಾಗೆಲ್ಲಾ ಐತೆ" ಪುಸ್ತಕದಿಂದ ಆಯ್ದ ಕೆಲವು ಘಟನೆಗಳನ್ನು ಮುಂದಿನ ದಾರಾವಾಹಿಯಾಗಿ ಓದುಗರಲ್ಲಿ ಹಂಚಿಕೊಳ್ಳುತ್ತೇನೆ.
ಮುಕುಂದೂರು ಸ್ವಾಮಿಗಳು ಒಂದು ನೆನಪು
June 24, 2012 - 8:25am
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಮುಕುಂದೋರು ಸ್ವಾಮಿಗಳು ಒಂದು ನೆನಪು
.ಶ್ರೀಧರ್ ಸರ್,
ಆಧ್ಯಾತ್ಮಿಕ ವಿದ್ಯೆ ಕಲಿತವರೆಲ್ಲರೂ ಲೌಕಿಕ ವಿದ್ಯೆಯ ಬಗ್ಗೆ ಗಮನ ಕೊಟ್ಟಂತೆ ಕಾಣುವುದಿಲ್ಲ.
>>ಯೋಗ ಅನ್ನೋದಕ್ಕೆ ಯೇಗ ಅಂತಾಲೇ ಹೇಳ್ತಿದ್ರಂತೆ.ಆದರೆ ಪ್ರತಿಯೊಂದು ಮಾತಲ್ಲೂ ಅಧ್ಯಾತ್ಮ ಅಡಗಿರುತ್ತಿತ್ತು.<<
ಇಲ್ಲಿ ಸ್ವಾಮಿ ವಿವೇಕಾನಂದರು ನನ್ನ ಗುರುದೇವ ಎಂಬ ಭಾಷಣದಲ್ಲಿ ತಮ್ಮ ಗುರು ಶ್ರೀ ರಾಮಕೃಷ್ಣರ ಬಗ್ಗೆ ಹೇಳಿದ ಒಂದು ವಿಷಯ ನೆನಪಿಗೆ ಬರುತ್ತದೆ. ತಮ್ಮ ಹೆಸರನ್ನು ಬಂಗಾಲಿಯಲ್ಲಿ ಕೂಡಾ ಸರಿಯಾಗಿ ಬರೆಯಲು ಬಾರದ ನನ್ನ ಗುರುಗಳ ಮುಂದೆ ಅಂದಿನ ದಿನಗಳಲ್ಲಿ ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮಾಡಿದ ದೊಡ್ಡ ದೊಡ್ಡ ವಿದ್ವಾಂಸರೂ ಕೂಡ ಅವರ ಪಾದದ ಬಳಿಯಲ್ಲಿ ಕುಳಿತು ಅವರ ಮಾತನ್ನು ಭಯಭಕ್ತಿಗಳಿಂದ ಕೇಳುತ್ತಿದ್ದರು ಎನ್ನುತ್ತಾರೆ. ರಾಮಕೃಷ್ಣ ಪರಮಹಂಸರು ತಮ್ಮ ಹೆಸರನ್ನು ರಾಮ್ ಕೆಸ್ಟೋ ಎಂದು ಬರೆಯುತ್ತಿದ್ದರಂತೆ.
ಇದಕ್ಕೂ ಮುಂಚೆ ಶಶಿಧರ್ ಎನ್ನುವವರು ಮುಕುಂದೂರು ಸ್ವಾಮಿಗಳ ಪುಸ್ತಕದ ಬಗ್ಗೆ ಒಳ್ಳೆಯ ಲೇಖನ ಬರೆದಿದ್ದರು. ನಿಮ್ಮಿಂದ ಹೊಸ ವಿಷಯಗಳನ್ನು ತಿಳಿಯಬಹುದು ಎಂದು ಆಶಿಸುತ್ತೇನೆ. ಧನ್ಯವಾದಗಳು,
=ಶ್ರೀಧರ್ ಬಂಡ್ರಿ
ಉ: ಮುಕುಂದೋರು ಸ್ವಾಮಿಗಳು ಒಂದು ನೆನಪು
ಆತ್ಮೀಯ ಶ್ರೀಧರ್,
ಯೇಗ್ ದಾಗೆಲ್ಲಾ ಐತೆ, ಪುಸ್ತಕ ಓದಿದ ಮೇಲೆ ಶ್ರೀ ಮುಕುಂದೂರು ಸ್ವಾಮಿಗಳು ನಮ್ಮ ಜಿಲ್ಲೆಯ ನನ್ನ ಹುಟ್ಟೂರಿನ ಸಮೀಪದ ಮುಕುಂದೂರು ಬೆಟ್ಟದಲ್ಲಿದ್ದರು ಅಲ್ಲದೆ ಅರಸೀಕೆರೆ ತುಮಕೂರು ಸುತ್ತ ಮುತ್ತ, ಓಡಾಡುತ್ತಾ ಕೊನೆಗೆ ಬಾಣಾವರದ ಹತ್ತಿರ ಶರೀರತ್ಯಾಗ ಮಾಡಿದರು, ಎಂಬ ವಿಷಯ ತಿಳಿದಾಗ ನನ್ನ ಮಿತ್ರರೊಡಗೂಡಿ ನಿನ್ನೆ ಭಾನುವಾರ ಬಾಣಾವರದ ಸಮೀಪ ಇರುವ ಆಶ್ರಮಕ್ಕೆ ಹೋಗಿದ್ದೆ. ಅಲ್ಲಿನ ಕೆಲವರನ್ನು ಮಾತನಾಡಿಸಿ ಮಾಹಿತಿಯ ದೃಷ್ಟಿಯಿಂದ ಕೆಲವು ವೀಡಿಯೋ ಕೂಡ ನನ್ನ ಬ್ಲಾಗ್ blog.vedasudhe.com ನಲ್ಲಿ ಪ್ರಕಟಿಸಿರುವೆ. ಸಂಪದದಲ್ಲಿ ಮತ್ತೆರಡು ಲೇಖನ ಬರೆದಿರುವೆ. ಇನ್ನೂ ಹಲವಾರು ಭಾಗಗಲಲ್ಲಿ ಬರೆಯುವೆ.ಶಶಿಧರ್ ಅವರು ಬರೆದಿರುವ ಲೇಖನದ ಕೊಂಡಿಯನ್ನು ದಯಮಾಡಿ ಕೊಡಿ.
ಉ: ಮುಕುಂದೋರು ಸ್ವಾಮಿಗಳು ಒಂದು ನೆನಪು
http://sampada.net/%...
ಕೊಂಡಿ ಇಲ್ಲಿದೆ :
ಉ: ಮುಕುಂದೋರು ಸ್ವಾಮಿಗಳು ಒಂದು ನೆನಪು
ಧನ್ಯವಾದಗಳು ಶ್ರೀನಾಥ್.
ಉ: ಮುಕುಂದೋರು ಸ್ವಾಮಿಗಳು ಒಂದು ನೆನಪು
ನಿಮ್ಮ ಅನುಭವ ಸರಣಿ ಚೆನ್ನಾಗಿ ಮೂಡೀ ಬರುತ್ತಿದ್ದೆ ... ನಿಮ್ಮ ಸಾಧನೆಗೆ ನನದೊಂದು ಅಳಿಲು ಸೇವೆ ಅಷ್ಟೇ ... ಧನ್ಯೋಸ್ಮಿ
ಕ್ಱುಷ್ಣ ಶಾಸ್ತ್ರಿಗಳ ಪುಸ್ತಕ ಒಳ್ಳೆಯ ಅನುಭವ ನೀಡುತ್ತದೆ ...
ಉ: ಮುಕುಂದೋರು ಸ್ವಾಮಿಗಳು ಒಂದು ನೆನಪು
ಹರಿಹರಪುರದ ಶ್ರೀಧರ್ ಸರ್,
ಶಶಿಧರ್ ಅವರು ಮುಕುಂದೂರು ಸ್ವಾಮಿಗಳ ಯೇಗ್ದಾಗೆಲ್ಲಾ ಐತೆ ಪುಸ್ತಕದ ಬಗೆಗಿನ ಬರಹಕ್ಕೆ ಕೆಳಗಿನ ಕೊಂಡಿಯನ್ನು ನೋಡಿ:
http://sampada.net/%...
ವಂದನಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ಮುಕುಂದೋರು ಸ್ವಾಮಿಗಳು ಒಂದು ನೆನಪು
ಆತ್ಮೀಯ ಶ್ರೀಧರ್,
ಈಗಾಗಲೇ ಶ್ರೀನಾಥ್ ಭಲ್ಲೆ ಲಿಂಕ್ ಕೊಟ್ಟಿದ್ದಾರೆ. ಧನ್ಯವಾದಗಳು. ಆಶ್ರಮಕ್ಕೆ ಕಳೆದ ಭಾನುವಾರ ಕವಿನಾಗರಾಜ್ ಮತ್ತು ಮಿತ್ರ ಡಾ.ಶ್ರೀವತ್ಸ ಎಸ್.ವಟಿ ಯವರೊಡನೆ ಹೋಗಿ ಬಂದೆವು. ಇಂದು ಯಾಕೋ ಸ್ವಾಸ್ಥ್ಯ ಉತ್ತಮವಾಗಿಲ್ಲ. ಹಾಗಾಗಿ ಒಂದೆರಡು ದಿನದಲ್ಲಿ ಮುಕುಂದೂರು ಸ್ವಾಮೀಜಿಯವರ ಬಗ್ಗೆ ಮುಂದುವರೆಸುವೆ.
ಉ: ಮುಕುಂದೋರು ಸ್ವಾಮಿಗಳು ಒಂದು ನೆನಪು
ಹೌದು
ಯೇಗ್ದಾದೆಲ್ಲ ಐತೆ ಪುಸ್ತಕದ ಬಗೆ ಹಿಂದೆ ಇಬ್ಬರು ಬರೆದಿದ್ದಾರೆ , ಅಬ್ದುಲ್ ಹಾಗು ಶಶಿದರ್ ಹಾಲಾಡಿಯವರು
'ಯೇಗ್ದಾಗೆಲ್ಲ ಐತೆ" ಅನ್ನುವಾಗ ಅಲ್ಲಿ ಬೇರೆ ಅರ್ಥ ಇದೆ ಅನ್ನಿಸುತ್ತೆ. ಯೇಗುವುದು ಅಂದರೆ ಕಷ್ಟದ ಜೊತೆ ಯೇಗುವುದು ಹೋರಾಡುವುದು. ಅಂದರೆ ನೀವು ಹೋರಾಟ ನಡೆಸಿದಂತೆ ಜೀವನ ಅಥವ ಯೇಗಿದಂತೆ ಎಂದು ನಾನು ಅರ್ಥಮಾಡಿಕೊಂಡಿದ್ದೆ,
ನಾನು ಈ ಪುಸ್ತಕ ಓದಿದೆ ಕೆಲವು ತಿಂಗಳ ಕೆಳಗೆ. ನೀವು ಬರೆಯುತ್ತಿರುವ ಬರಹ ಆಸಕ್ತಿಧಾಯಕ ಅನ್ನಿಸುತ್ತಿದೆ ಮುಂದುವರೆಸಿ. ಜೋತೆಗೆ ಸಂಪದಿಗ ನಾಗರಾಜರು ಬೇರೆ ಜೊತೆಗಿದ್ದಾರೆ !
ಅನುಮಾನ: ಹಿಂದೆ 'ಮುಕುಂದೂರು' ಎಂದೆ ಬರೆದಿದ್ದಾರೆ ಶಶಿದರರವರು ನೀವು 'ಮುಕುಂದೋರು' ಎನ್ನುವಿರಿ ಯಾವುದು ಸರಿ.
ಪಾರ್ಥಸಾರಥಿ
ಉ: ಮುಕುಂದೋರು ಸ್ವಾಮಿಗಳು ಒಂದು ನೆನಪು
ಟೈಪಿಂಗ್ ದೋಷದಿಂದ ಮುಕುಂದೋರು ಎಂದಾಗಿದೆ. ಮುಕುಂದೂರೇ ಸರಿ.ಪ್ರತಿಕ್ರಿಯೆಗೆ ಧನ್ಯವಾದಗಳು