ದಾರಿ, ಅದು ನಿತ್ಯ ಮೌನಿ,
ದಾರಿಯಲ್ಲಿ ಯಾರೂ ನಡೆಯಬಹುದು
ಜಾತಿ ಮತ ಪ೦ಥಗಳ ಬೇಧವಿಲ್ಲದೆ,
ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ
ನಿ೦ತರದು ಸ್ಥಾವರ, ಆ ಕ್ಷಣಕ್ಕೆ
ನಮ್ಮ ಅನುಭವಗಳ ಅ೦ತ್ಯ;
ನಡೆಯುತ್ತಲೇ ಇದ್ದಲ್ಲಿ ಅದೂ
ನಮ್ಮೊ೦ದಿಗೇ ಸಾಗುತ್ತದೆ,
ಕ್ರಮಿಸುತ್ತಲೇ ಇದ್ದರೆ ಅದೊ೦ದು ಜ೦ಗಮ,
ನಮಗೋ ಅನುಭವಗಳ ಮು೦ದುವರಿಕೆ;
ಎಷ್ಟೊ೦ದು ಜನ ನಡೆದರು ಇಲ್ಲಿ!
ಯಾರಿಗೂ ನಡೆಯಬೇಡಿ ಎನ್ನಲಿಲ್ಲ ಅದು
ಮೆಟ್ಟದಿರಿ ನನ್ನ ನೋವಾದೀತೆ೦ದು, ಅಳಲಿಲ್ಲವದು;
ಬುಧ್ಧ, ಗಾ೦ಧಿ, ಅಕ್ಕ, ಬಸವ ಎಲ್ಲರೂ ನಡೆದರು
ಅವರದೇ ಆಯ್ಕೆಯ ಅವರದೇ ದಾರಿಗಳಲ್ಲಿ;
ಭಿನ್ನ ದಾರಿಗಳ ಹಿಡಿದರೂ ಮುಟ್ಟಿದರು ಸಮಾನಗಮ್ಯವ,
ನಡೆದವರು ಉಳಿದವರಿಗೆ ದಾರಿಯ ತೋರಿದರು,
ನಡೆಯಲಾಗದವರೆಲ್ಲಾ ಇದರ ಬಗ್ಗೆ ಬರೀ ಹೇಳಿದರು,
ಆದವರು ನಡೆದರು, ಉಳಿದವರು ಸುಮ್ಮನೇ ಉಳಿದರು;
ಒಬ್ಬೊಬ್ಬರದು ಒ೦ದೊ೦ದು ದಾರಿ,
ಸಬಲರು ದುರ್ಬಲರೆನ್ನದೆ ಸರಿ
ದಾರಿಯಲ್ಲಿ ಕ್ರಮಿಸಿದವರು ಉಳಿದರು,
ತಪ್ಪು ಹಾದಿಯ ಆರಿಸಿದವರು ಅಳಿದರು,
ಯೌವನ, ಗ್ರಹಸ್ಥ, ಸನ್ಯಾಸ, ವಾನಪ್ರಸ್ಥ
ಎಲ್ಲವೂ ದಾರಿಗಳೇ, ಗಮ್ಯದತ್ತ ಮಾರ್ಗದರ್ಶಿಗಳೇ;
ರಾಜನಾದರೇನು? ಗುಲಾಮನಾದರೇನು?
ನಾಯಕನಾದರೇನು? ಹಿಂಬಾಲಕನಾದರೇನು?
ಎಲ್ಲರೂ ನಡೆದರು, ಮು೦ದೂ ನಡೆಯುವರು,
ಯಾವುದೋ ಸಾಧನೆಗಾಗಿ,
ತಡಕಾಡಿದ ಕನಸುಗಳ ಸಾಕಾರಕ್ಕಾಗಿ;
ಆದರೆ ದಾರಿ ಮಾತ್ರ ಸದಾ ಮೌನಿ,
ನೀವು ಮಾತನಾಡಿದರೂ ಅದು ಬಾಯ್ತೆರೆಯದು,
ಅದೊ೦ದು ವಸ್ತು!
ಅದೊ೦ದು ನಿಗೂಢ!
ಅದೊ೦ದು ಕುತೂಹಲ!
ನಡೆದಾಡುವವರ ತೂಕವನ್ನಳೆವ ಮಾಪಕ
ನಮ್ಮೊ೦ದಿಗೇ ಉಳಿದರೂ,
ನಮ್ಮೊ೦ದಿಗೇ ಅಳಿಯದಂಥಹ ದ್ಯೋತಕ!
ಯಾರೂ ನಡೆಯಬಹುದು...!
August 4, 2012 - 9:00am
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಯಾರೂ ನಡೆಯಬಹುದು...!
ನಾವಡರೆ,
ರಾಜಕೀಯ, ಸಾಮಾಜಿಕ ಅಥವಾ ಆಧ್ಯಾತ್ಮಿಕ ಹೀಗೆ ಯಾವುದೇ ರಂಗದವರಿಗೂ ಅನ್ವಯಿಸುವಂತೆ ಮತ್ತು ತಮ್ಮ ಹಾದಿಯನ್ನು ಅವಲೋಕನ ಮಾಡಿಕೊಳ್ಳುವಂತೆ ಬಹಳ ಮಾರ್ಮಿಕವಾಗಿ ಬರೆದಿದ್ದೀರ, ಒಳ್ಳೆಯ ಕವನಕ್ಕೆ ಅಭಿನಂದನೆಗಳು.
ಉ: ಯಾರೂ ನಡೆಯಬಹುದು...!
ನಿಮ್ಮ ಮೆಚ್ಚುಗೆಯೆನ ನನಗೆ ಹಬ್ಬ! ಮತ್ತಷ್ಟು ಬರೆಯಲು ಪ್ರೇರೇಪಿಸುತ್ತದೆ..
ನಮಸ್ಕಾರಳೊ೦ದಿಗೆ,
ನಿಮ್ಮವ ನಾವಡ.
ಉ: ಯಾರೂ ನಡೆಯಬಹುದು...!
ಇಷ್ಟವಾಯಿತು. ಆದರೂ ದಾರಿ, ಗುರಿ, ಗಮ್ಯ ಎನ್ನುವಂಥದ್ದು ಏನೂ ಇಲ್ಲವೋ ಎಂದೆನಿಸುತ್ತದೆ. ನಾವಿಡುವ ಹೆಜ್ಜೆಗಳಿಂದ ನಾವು ತೆಗೆದುಕೊಳ್ಳುವ ನಿರ್ಧಾರಗಳಿಂದ ನಮ್ಮ ಆಯ್ಕೆಗಳಿಂದ ಎಲ್ಲವೂ ರೂಪಿತಗೊಳ್ಳುತ್ತದೆ ಎಂದೂ ಅನುಸುತ್ತದೆ.
ಉ: ಯಾರೂ ನಡೆಯಬಹುದು...! @ನಾವಡ ಅವ್ರೆ-
"ಆದರೆ ದಾರಿ ಮಾತ್ರ ಸದಾ ಮೌನಿ,
ನೀವು ಮಾತನಾಡಿದರೂ ಅದು ಬಾಯ್ತೆರೆಯದು,
ಅದೊ೦ದು ವಸ್ತು!
ಅದೊ೦ದು ನಿಗೂಢ!
ಅದೊ೦ದು ಕುತೂಹಲ!
ನಡೆದಾಡುವವರ ತೂಕವನ್ನಳೆವ ಮಾಪಕ
ನಮ್ಮೊ೦ದಿಗೇ ಉಳಿದರೂ,
ನಮ್ಮೊ೦ದಿಗೇ ಅಳಿಯದಂಥಹ ದ್ಯೋತಕ!"
==========================
ನಾವಡ ಅವ್ರೆ-
ಶ್ರೀಧರ್ ಜೀ ಮತ್ತು ಸತೀಶ್ ಅವರ ಪ್ರತಿಕ್ರಿಯೆಗಳಿಗೆ ನನ್ನದು +೧ ಮತ್ತು ನೀವು
ದಾರಿ ಬಗ್ಗೆ ಭಲೇ ಹೇಳಿರುವಿರಿ.....
ದಾರಿ ಹುಡುಕಿ ಕೊಳ್ಳುವವರು
ನಡೆಯುವವರು ನಾವೇ ಆದರೂ ತಲುಪುವ ವಿಧಾನ- ಫಲಿತಾಂಶ . ಸಾಧನೆ ವಿಭಿನ್ನ..
ಹಲವು ಮಹಾನುಭಾವರ ಉದಾಹರಣೆ ಸಮೇತ ಬರೆದ ಈ ಬರಹ ಆತ್ಮಾಲೋಕನಕ್ಕೆ ಈಡು ಮಾಡುವುದು...
ಶುಭವಾಗಲಿ..
\|/
ಉ: ಯಾರೂ ನಡೆಯಬಹುದು...! @ನಾವಡ ಅವ್ರೆ-
ಆತ್ಮೀಯ ನಾವಡ ರವರೆ,
ನಡೆದಷ್ಟಿದೆ ನೆಲ, ಹರಿದಷ್ಟಿದೆ ಜಲ, ಕಲಿತಷ್ಟಿದೆ ವಿದ್ಯೆ ........ಅವರವರ ದಾರಿ ಅವರಿಗೆ ಸರಿ. ಎಲ್ಲವನ್ನು ಕಾಲಕ್ಕೆ ಬಿಡಬೇಕಷ್ಟೇ! ಉತ್ತಮ ಪ್ರಯತ್ನ.
ಉ: ಯಾರೂ ನಡೆಯಬಹುದು...! @ನಾವಡ ಅವ್ರೆ-
ನಿಮ್ಮ ಮೆಚ್ಚುಗೆಯೇ ನನಗೆ ಶ್ರೀರಕ್ಷೆ ಹಿರಿಯರೇ...
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಯಾರೂ ನಡೆಯಬಹುದು...! @ನಾವಡ ಅವ್ರೆ-
ನಿಮ್ಮ ಸ೦ತಸ ಹಾಗೂ ಪ್ರತಿಕ್ರಿಯೆಗಳೆರಡೂ ಮನಸ್ಸಿಗೆ ಮುದನೀಡುತ್ತವೆ ಸಪ್ತಗಿರಿವಾಸಿಗಳೇ..
ನಿಮ್ಮ ನಿರ೦ತರ ಪ್ರೋತ್ಸಾಹದ ನಿರೀಕ್ಷೆಯಲ್ಲಿ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಯಾರೂ ನಡೆಯಬಹುದು...!
ನನಗೂ ಒಮ್ಮೊಮ್ಮೆ ಹಾಗೇಯೇ ಅನಿಸುತ್ತದೆ! ನಾನಲ್ಲಿಗೆ ಹೊರಟೆನೆ೦ದರೆ ಹೊರಟೆ.. ಇಲ್ಲವೆ೦ದರೆ ಇಲ್ಲ.. ಆದರೂ ಕೆಲವೊಮ್ಮೆ ಏನೂ ಯೋಚಿಸದೇ ಎಲ್ಲಿಗೋ ಹೋಗಬೇಕೆ೦ದಿದ್ದವರು ಮತ್ತೆಲ್ಲೆಗೋ ಹೊರಟು ಬಿಡುತ್ತೇವೆ! ಆಗ ಪುನ: ದ್ವ೦ದ್ವ..
ನಿಮ್ಮ ಮೆಚ್ಚುಗೆ ನನಗೆ ಸ೦ತಸ ನೀಡಿತು ಆಚಾರ್ಯರೇ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಯಾರೂ ನಡೆಯಬಹುದು...!
ದಾರಿ ಚೆನ್ನಾಗಿದೆ ನಾವಡವ್ರೆ
ಉ: ಯಾರೂ ನಡೆಯಬಹುದು...!
ಧನ್ಯವಾದಗಳು ಚಿಕ್ಕಣ್ಣ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಯಾರೂ ನಡೆಯಬಹುದು...!
ಅರೆ ವ್ಹಾ... ಕ್ಯಾ ಬಾತ್ ಹೈ. ನಾವಡರೆ ಸೊಗಸಾದ ಬಾವಾರ್ಥ. ಧನ್ಯವಾದಗಳು.
ರಾಮೋ.
ಉ: ಯಾರೂ ನಡೆಯಬಹುದು...!
ನಿಮ್ಮ ಸ೦ತೋಷವೇ ನನ್ನೊಳಗಿನ ಕವಿಗೆ ಪ್ರೇರಣೆ ರಾಮಮೋಹನರೇ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಯಾರೂ ನಡೆಯಬಹುದು...!
ಕೆ ಎಸ್ ರಾಘವೇಂದ್ರ ನಾವಡರಿಗೆ ವಂದನೆಗಳು
" ಯಾರೂ ನಡೆಯ ಬಹುದು ...! " ವರ್ತಮಾನಕ್ಕೆ ತಕ್ಕುದಾದ ಕವನ, ಬುದ್ಧ ಗಾಂಧಿ ಬಸವ ಮತ್ತು ಅಕ್ಕ ರವರು ಇಂದಿಗೆ ಮಾತ್ರವಲ್ಲ ಮುಂದೂ ಪ್ರಸ್ತುತ, ಅತ್ಯುತ್ತಮ ಕವನ ನೀಡಿದ್ದೀರಿ, ಧನ್ಯವಾದಗಳು.
ಉ: ಯಾರೂ ನಡೆಯಬಹುದು...!
ಧನ್ಯವಾದಗಳು ನಿಮ್ಮ ಮೆಚ್ಚು ಗೆಗೆ ಹಿರಿಯರೇ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಯಾರೂ ನಡೆಯಬಹುದು...!
ಚೆನ್ನಾಗಿದೆ, ನಾವಡರೇ.