ಯುಗಾದಿ : ಅಂದು-ಇಂದು

ಯುಗಾದಿ : ಅಂದು-ಇಂದು

ಚಿತ್ರ

ಯುಗಾದಿ - ಚೈತ್ರ ಮಾಸದ ಮೊದಲ ದಿನ . ಹಿಂದೂಗಳಿಗೆ ಹೊಸ ವರುಷದ ಹರುಷ. ಜ್ಯೋತಿಷ್ಯ ಶಾಸ್ತ್ರದ  ಪ್ರಕಾರ ಇಂದು ಅಶ್ವಿನಿ ನಕ್ಷತ್ರಕ್ಕೆ ಸೂರ್ಯ ಪ್ರವೇಶಿಸಿದಾಗ ಭೂಮಿಯ ಮೇಲಿನ ಗಿಡ ಮರಗಳು ಚಿಗುರೊಡೆಯಲಾರಂಭಿಸುತ್ತವೆ. ಹಾಗಾಗಿ ಈ ದಿನವನ್ನು ವರ್ಷಾರಂಭ ಎಂದು ಆಚರಿಸುತ್ತಾರೆ. ಇವೆಲ್ಲ ಮಾಹಿತಿಗಳು , ಯುಗಾದಿಯ ಹಿನ್ನೆಲೆಗಳೆಲ್ಲ ಇತ್ತೀಚೆಗಷ್ಟೇ ತಿಳಿದು ಬಂದದ್ದು. ಬಾಲ್ಯದಲ್ಲಿ ನಮಗೆ ಯುಗಾದಿಯೆಂದರೆ ಹೊಸಬಟ್ಟೆ-ಒಬ್ಬಟ್ಟು ಎಂದಷ್ಟೇ ಗೊತ್ತಿದ್ದುದ್ದು. ಯುಗಾದಿಯೆಂದರೆ ಮನೆಯಲ್ಲಿ ಸಂಭ್ರಮ-ಸಡಗರ. ತಿಂಗಳ ಮುಂಚೆಯೇ ಹಬ್ಬದ ತಯಾರಿ ಶುರುವಾಗುತ್ತಿತ್ತು. ಆಗೆಲ್ಲ ನಮಗೆ ಹೊಸ ಬಟ್ಟೆಯ ಭಾಗ್ಯ ಬರುತ್ತಿದ್ದುದು ವರ್ಷಕ್ಕೆ ಮೂರೇ ಬಾರಿ. ಗಣೇಶ ಹಬ್ಬಕ್ಕೆ, ದೀಪಾವಳಿಗೆ ಮತ್ತು ಯುಗಾದಿಗೆ‌. ಹಾಗಾಗಿ ಈ ಹಬ್ಬ ಅಂದರೆ ಸ್ವಲ್ಪ ಹೆಚ್ಚು ವಿಶೇಷವಾಗಿತ್ತು. ಅಪ್ಪ ಅಮ್ಮ ಇಬ್ಬರು ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳ ದೊಡ್ಡ ಪಟ್ಟಿಯೇ ತಯಾರಿಸುತ್ತಿದ್ದರು. ಹಬ್ಬದ ಹಿಂದಿನ ದಿನ ಯಾರಿಗೂ ನಿದ್ದೆ ಬರುತ್ತಿರಲಿಲ್ಲ.
ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆಯೇ ಬಿಸಿ ಹರಳೆಣ್ಣೆಯನ್ನು ಮೈಗೆ ಹಚ್ಚಿ ಮಾಲೀಷ್ ಮಾಡ್ತಾ ಇದ್ದರು ಅಪ್ಪ. ಮಹಡಿಯ ಮೇಲೆ ನಿಂತು ಪೈಲ್ವಾನರಂತೆ ಫೋಸ್ ಕೊಡುತ್ತಿದ್ದೆವು. ಅಪ್ಪ ಬಾಗಿಲಿಗೆ ಮಾವಿನ ತೋರಣ ಕಟ್ಟುತ್ತಿದ್ದರೆ, ನಾವಿಬ್ಬರೂ ಸಮನಾದ ಚಿಗುರೆಲೆಗಳನ್ನು ಆಯ್ದು ಕೊಡಬೇಕಿತ್ತು. ಅಮ್ಮ ಪೂಜೆ ಮುಗಿಸಿ, ಬೇವು ಬೆಲ್ಲವನ್ನು ಕೈಗಿತ್ತು "ಬೇವಿನ ಎಲೆ ಬಿಸಾಡಿದ್ರೆ ದೇವ್ರು ಕಣ್ಣು ಕಿತ್ಕೋತಾರೆ" ಅಂತ ಗದರಿಸುತ್ತಿದರು. ಇನ್ನು ಒಬ್ಬಟ್ಟು ತಯಾರಾಗುವುದರೊಳಗೆ ಅರ್ಧ ಹೂರಣವೇ ಖಾಲಿಯಾಗಿರುತಿತ್ತು. ಮನೆಯವರೆಲ್ಲ ಒಟ್ಟಿಗೆ ಕುಳಿತು ಹಬ್ಬದೂಟ ಸವಿಯುವುದರಲ್ಲಿ ಸಿಗುತ್ತಿದ್ದ ಖುಷಿಯೇ ಬೇರೆ. ಊಟ ಮಾಡಿ ಕ್ರಿಕೆಟ್ ಆಡಲು ಮನೆ ಬಿಟ್ಟರೆ ಮತ್ತೆ ಮನೆ ಸೇರುತ್ತಿದ್ದದ್ದು ರಾತ್ರಿಯೇ.. ಬಾಲ್ಯದ ಅಭೂತ ಪೂರ್ವ ಕ್ಷಣಗಳಲ್ಲಿ ಈ ಯುಗಾದಿಯೂ ಒಂದು.
ಆಧುನಿಕತೆಯ ಹೊರತೆಯೋ, ನಮ್ಮ ಜೀವನ ಶೈಲಿಯ ಬದಲಾವಣೆಯೋ, ಈ ನಡುವೆ ಯುಗಾದಿಯು ವರ್ಷದಿಂದ ವರ್ಷಕ್ಕೆ ತನ್ನ ನೈಸರ್ಗಿಕ ಸತ್ವವನ್ನು ಕಳೆದುಕೊಳ್ಳುತ್ತಿದೆಯೇನೋ ಅನ್ನೋ ಭಾಸ. ತಿಂಗಳಿಗೊಮ್ಮೆ mandatory shopping ಮಾಡೋ ಈಗಿನ ಮಕ್ಕಳಿಗೆ ಯುಗಾದಿಗೆ ಹೊಸ ಬಟ್ಟೆ ಕೊಡಿಸಿದಾಗ ಆಗೋ ಖುಷಿಯ ಅನುಭವವೇ ಗೊತ್ತಿಲ್ಲ. ಬಾಗಿಲಿಗೆ ಕಟ್ಟೋ ತೋರಣವೂ ಕೂಡ ಪ್ಲಾಸ್ಟಿಕ್! ಹಣ-ಹೆಸರಿನ ಹಿಂದೆ ಓಡುತ್ತ ಕುಟುಂಬದ ಜೊತೆಗಿನ ಬಂಧವನ್ನು ನಾವೆಲ್ಲ ಮರೆಯುತ್ತಿದ್ದೇವೆ. ಮೊನ್ನೆ ಅಮ್ಮನಿಗೆ ಫೋನ್ ಮಾಡಿ ಹೇಗಿದೆ ಹಬ್ಬದ ತಯಾರಿ ಎಂದು ಕೇಳಿದರೆ "ಏನೋ ಪರವಾಗಿಲ್ಲ, ಹಬ್ಬ ಮಾಡಲೇಬೇಕಲ್ಲ ಅಂತ ಮಾಡ್ತಾ ಇದೀವಿ ಅಷ್ಟೇ" ಎಂದು ಹತಾಶೆಯ ದನಿಯಲ್ಲಿ ಹೇಳಿದ್ದರು. ಹಬ್ಬವೆಂದರೆ ಊಟ ನಿದ್ದೆ ಬಿಟ್ಟು ಆಚರಿಸುತ್ತಿದ್ದ ನಮ್ಮಮ್ಮ ಕೂಡ ಇಷ್ಟೊಂದು ನಿರುತ್ಸಾಹಕರಾಗಿದ್ದಾರೆ. ವಾಟ್ಸಾಪ್ ಸಂದೇಶದಲ್ಲಿನ ಇಮೋಜಿಯಲ್ಲಿ ಇರುವ ಉತ್ಸಾಹ ನಿಜ ಜೀವನದಲ್ಲಿ ಯಾರಿಗೂ ಇಲ್ಲ.
ಹಬ್ಬಗಳನ್ನು ಆಚರಿಸೋದು ಸಂಪ್ರದಾಯಕ್ಕಾಗಲ್ಲ. ನಮ್ಮ ಕೆಲಸಗಳು, ಒತ್ತಡಗಳು, ನೋವುಗಳಿಂದ ಒಂದು ದಿನ ದೂರವಿರಲು, ಮನೆಯವರೆಲ್ಲರೂ ಸೇರಿ ಮನದಾಳದಿಂದ ಮಾತನಾಡಲು.. ಇವೆಲ್ಲರ ಮಧ್ಯದಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದ ಆ ಮುಗ್ಧತೆಯನ್ನು, ಉತ್ಸಾಹವನ್ನು ನಮ್ಮಿಂದ ದೂರವಿರಲು ಬಿಡಬಾರದು. ಆ ಮುಗ್ಧತೆ ನಮ್ಮಿಂದ ದೂರವಾದರೆ ನಾವು ಮೃಗಿಗಳಾಗಿಬಿಡುತ್ತೇವೆ. Dont let the grow within you to grow.. ಆನಂದಿಸಿ, ಅನುಭವಿಸಿ, ವಿಜೃಂಭಿಸಿ..
ಸರ್ವರಿಗೂ ಯುಗಾದಿ ಹಬ್ಬದ ಶುಭಾಷಯಗಳು..
 
PC:Google

Rating
No votes yet