19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ರಾಜಕಾರಣದಲ್ಲಿ ಧರ್ಮ ಎಷ್ಟಿರಲಿ?

March 4, 2012 - 8:57pm
abdul

“ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಪಡಬೇಕಿಲ್ಲ ” – ಈ ಮಾತನ್ನು ಕ್ರೈಸ್ತ ಮೂಲಭೂತವಾದಿ ಇವಾನ್ಜೆಲಿಸ್ಟ್ (ಧರ್ಮಪ್ರಚಾರಕ) ಜೆರ್ರಿ ಫಾಲ್ವೆಲ್, ಅಥವಾ ಟೆರ್ರಿ ಜೋನ್ಸ್ ರಂಥವರು  ಹೇಳಿದ್ದರೆ ಚಿಂತೆ ಇರಲಿಲ್ಲ, ಏಕೆಂದರೆ ಇವರುಗಳು ಹೀಗೆ ಮಾತನಾಡಿದಾಗಲೇ ಚೆನ್ನ. ಅಸಹನೆಯೇ ಅವರ ಉಸಿರು, ಹಾಗಾಗಿ ಅವರ ಬಾಯಲ್ಲಿ ನೀಟ್ ಆಗಿ ಫಿಟ್ ಅಗೋ ಮಾತುಗಳು ಅವು. ಆದರೆ ಈ ಮಾತನ್ನು ಸೆಕ್ಯುಲರ್ ದೇಶ ಎಂದು ಹೆಮ್ಮೆ ಪಡುವ ಬ್ರಿಟನ್ ದೇಶದ ಪ್ರಧಾನಿ ಹೇಳಿದ್ದು ಎಂದಾದ ಮೇಲೆ ಈ ಮಾತಿನ ಕಡೆ ಸ್ವಲ್ಪ ಗಮನ ಅತ್ಯಗತ್ಯ.

“ಕಿಂಗ್ ಜೇಮ್ಸ್” ಬೈಬಲ್ ನ ೪೦೦ ವಾರ್ಷಿಕೋತ್ಸವದ ವೇಳೆ ‘ಚರ್ಚ್ ಆಫ್ ಇಂಗ್ಲೆಂಡ್’ ಗೆ ಸೇರಿದ ಪಾದ್ರಿಗಳನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು ಡೇವಿಡ್ ಕೆಮರೂನ್. ಇದೇ ಮಾತನ್ನು ನಮ್ಮ ದೇಶದ ಪ್ರಧಾನಿ ಹೇಳಿದ್ದಿದ್ದರೆ ಆಗುತ್ತಿದ್ದ ವೈಚಾರಿಕ ಅನಾಹುತ ಏನು ಎಂದು ಊಹಿಸಲು ಅಸಾಧ್ಯ. ಆದರೆ ಇಷ್ಟು ಮಾತ್ರ ಹೇಳಿ ಸುಮ್ಮನಾಗಲಿಲ್ಲ ಪ್ರಧಾನಿ. “ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಬೀಳಬೇಕಿಲ್ಲ... ನನ್ನನ್ನು ಅರ್ಥ ಮಾಡಿಕೊಳ್ಳಿ... ಮತ್ತೊಂದು ಧರ್ಮ ಅಥವಾ ಧರ್ಮವಿಲ್ಲದಿರುವಿಕೆಯ ವ್ಯವಸ್ಥೆ ಇರುವುದು ತಪ್ಪು ಎಂದು ನಾನು ಖಂಡಿತಾ ಹೇಳುತ್ತಿಲ್ಲ” ಇದು ಪ್ರಧಾನಿಗಳ ಪೂರ್ತಿ ಮಾತುಗಳು. ಈಗ ಸ್ವಲ್ಪ ಸಮಾಧಾನ. ಏಕೆಂದರೆ ಬ್ರಿಟನ್ ಬರೀ ಕ್ರೈಸ್ತರ ದೇಶವಲ್ಲ, ಅಲ್ಲಿ, ಹಿಂದೂಗಳೂ, ಮುಸ್ಲಿಮರೂ, ಯಹೂದಿಗಳೂ ಇನ್ನಿತರ ಹಲವು ಧರ್ಮೀಯರೂ, ಧರ್ಮವಿಲ್ಲದವರೂ ಸಾಮರಸ್ಯದಿಂದ ಬದುಕುವ ದೇಶ. ಹಾಗಾಗಿ ಎಲ್ಲರೂ, ಧರ್ಮವಿಲ್ಲದವರೂ, ತಾರತಮ್ಯವಿಲ್ಲದೆ ಸಮಾನಾವಕಾಶಗಳೊಂದಿಗೆ ಬದುಕಬಹುದು ಎನ್ನುವ ಆಶಯ ಪ್ರಧಾನಿಯದು. ಅದೇ ಅವರ ನಿರೀಕ್ಷೆಯೂ ಕೂಡಾ. ಆದರೆ ರಾಜಕಾರಣದಲ್ಲಿ ಧರ್ಮದ ಪಾತ್ರ ಎಷ್ಟಿರಬೇಕು ಎನ್ನುವುದು ಮುಗಿಯದ ಚರ್ಚೆ. “ರಾಜಕಾರಣ ಧರ್ಮವಲ್ಲ, ಅಥವಾ ಹಾಗೇನಾದರೂ ಆಗುವುದಾದರೆ ಅದು inquisition ಅಲ್ಲದೇ ಮತ್ತೇನೂ ಅಲ್ಲ” ಎಂದು ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ, ದಾರ್ಶನಿಕ ಅಲ್ಬರ್ಟ್ ಕ್ಯಾಮು ಹೇಳುತ್ತಾರೆ ( Politics is not religion, or if it is, then it is nothing but the Inquisition – albert camus, french philosopher). 

Inquisition ಎಂದ ಕೂಡಲೇ ಕಣ್ಣ ಮುಂದೆ ಬರೋದು ವ್ಯಾಟಿಕನ್ ಬೆಂಬಲಿತ ಸಾಮೂಹಿಕ ಹಿಂಸೆ, ಬರ್ಬರ ಶಿಕ್ಷೆ. ಕ್ರೈಸ್ತರಲ್ಲದವರೂ, ಕ್ಯಾಥೊಲಿಕ್ ಧರ್ಮದ ಚೌಕಟ್ಟಿಗೆ ಬರದ ಕ್ರೈಸ್ತರೂ inquisition ನ ಬರ್ಬರತೆ ಅನುಭವಿಸಿದರು. ಹಾಗಾಗಿ ರಾಜಕಾರಣದಲ್ಲಿ ಧರ್ಮ ಕೂಡದು ಎಂದು ಪಾಶ್ಚಾತ್ಯ ರಾಷ್ಟ್ರಗಳ ನಿಲುವು. ಇದು ಬರೀ ನಿಲುವು ಮಾತ್ರ, ಯಥಾಸ್ಥಿತಿ ಬೇರೆಯೇ ಎಂದು ದಿನನಿತ್ಯದ ವಿದ್ಯಮಾನಗಳು ನಮಗೆ ಹೇಳುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಬಲ ಪಂಥೀಯ ಇವಾನ್ಜೆಲಿಸ್ಟ್ ಗಳು ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಈಗ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಹಂತದಲ್ಲಿರುವ ಅಮೆರಿಕೆಯಲ್ಲಿ ಇವರ ಅಬ್ಬರ ತುಸು ಹೆಚ್ಚು.  ರಾಜಕಾರಣಿಗಳ ಕೈಗೆ ಧರ್ಮ ಸಿಕ್ಕಾಗ ಅದು ಚಿನ್ನದ ಸೌಂದರ್ಯ ಕಳೆದು ಕೊಂಡು ಕಳಪೆ ಉಕ್ಕಿನ ರೂಪ ಪಡೆದು ಕೊಳ್ಳುತ್ತದೆ ಎನ್ನುತ್ತಾರೆ ಲೇಖಕಿ ಯಾಸ್ಮೀನ್ ಅಲಿ ಭಾಯಿ. ಈಕೆ ಬ್ರಿಟನ್ ದೇಶದ ಪ್ರಸಿದ್ಧ ಲೇಖಕಿ. ಆಕರ್ಷಕ ಹೆಸರುಗಳೊಂದಿಗೆ ರಾಜಕಾರಣದಲ್ಲಿ ಧರ್ಮವನ್ನು ನುಸುಳಿಸಲು ಹವಣಿಸುವವರಿಗೆ ಈ ಮಾತುಗಳು ಬಹುಶಃ ಪಥ್ಯವಾಗಲಾರದು.
ಧರ್ಮದ ಸಾರವನ್ನು, ಸತ್ವವನ್ನು ಸಂಪೂರ್ಣವಾಗಿ ಅರಿತ ಹಿಂದೂ, ಮುಸ್ಲಿಂ, ಕ್ರೈಸ್ತ ಇನ್ನಿತರ ಧಮೀಯರಿಂದ ಯಾವುದೇ ತೊಂದರೆಯಿಲ್ಲ, ಆದರೆ ಅರೆಬರೆ ಕಲಿತು ‘ಪಾರ್ಟ್ ಟೈಂ’ ಧರ್ಮಾನುಯಾಯಿಗಳಿಂದ ಗಂಡಾಂತರ ಹೆಚ್ಚು ಎಂದು ಚಾರಿತ್ರಿಕ ಘಟನೆಗಳು ಸಾಕ್ಷಿಯಾಗಿವೆ. ಧರ್ಮವನ್ನು ‘ಆಫೀಮ್’ ಎಂದು ಕಡೆಗಣಿಸುವುದಾಗಲೀ, ತನ್ನ ಧರ್ಮವೇ ಶ್ರೇಷ್ಠ ಎಂದು ಇತರರ ಬದುಕನ್ನು ದುರ್ಭರಗೊಳಿಸುವುದಾಗಲೀ ಕೂಡದು ಎನ್ನುವ ವಿವೇಚನೆಯಿದ್ದರೆ ಸಾತ್ವಿಕ ಬದುಕು ಸರಾಗ, ವೈಯಕ್ತಿಕ ಬದುಕಿನಲ್ಲೂ, ರಾಜಕೀಯ ಕ್ಷೇತ್ರದಲ್ಲೂ.         

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಆರ್ ಕೆ ದಿವಾಕರ on

ಒಂದು ಮುಸಲ್ಮಾನ್ ರಾಷ್ಟ್ರದಲ್ಲಾಗಲೀ, ಕಿಲಿಸ್ತಾನ್ ರಾಷ್ಟ್ರದಲ್ಲಾಗಲೀ "ಧರ್ಮ", ರಾಜಕೀಯದಲ್ಲಿ ಅಷ್ಟಾಗಿ ಪ್ರಳಯ ಮಾಡಬೇಕಾದ್ದಿರುವುದಿಲ್ಲ. "ಧರ್ಮ"ದ ದುರ್ಬಳಕೆಗೆ ಯಥೇಚ್ಛ ಅವಕಾಶವಿರುವುದು, ಬಹುತ್ವವುಳ್ಳ ಮತ್ತು "ಧರ್ಮ" ಮತ್ತು "ರಾಜಕೀಯ" ಎಂಬ ಇಬ್ಬಂದಿತನದ ಭಾರತದಂತಹ ರಾಷ್ಟ್ರದಲ್ಲಿ. ’ಅನುಭವ’ (ಸಾರ್ವಜನಿಕ ಜಿವನವೆಂಬ ಯಾತನೆಯ)ದಿಂದ ಹೇಳುವುದದರೆ, ಇಲ್ಲಿ ಯಾವುದೇ "ಧರ್ಮ"ದ ಭಾವಾಶಯವೂ ಕೆಲಸ ಮಾಡುವುದಿಲ್ಲ. ಮತ-ಮತವೆಂದೂ, ಮತದೊಳಗೆ ಜಾತಿ-ಜಾತಿಯೆಂದೂ ಪಾಳೇಗಾರಿಕೆ ಮಾಡುವುದೇ ಇಲ್ಲಿನ "ಧರ್ಮ"ವೂ ಆಗಿದೆ; "ರಾಜಕಾರಣ"ವೂ ಆಗಿದೆ.
ಭಾರತೀಯ ಸಮಾಜ ಜೀವನದ ನಿಜವಾದ ಸೂತ್ರ, "ಸಂವಿಧಾನ". ಅದಕ್ಕೆ ಮೀರಿದ್ದು ಇನ್ನೇನೂ ಇರಬಾರದು. ಆದರೆ ಓಲೈಕೆ ರಾಜಕಾರಣ ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಯ ಕ್ಷಣಿಕತೆಯ ಅರಿವಿದ್ದರೂ ಅದಕ್ಕೇ ಶರಣಾಗುವ ನೆತಾರ ಸಮುದಾಯದ ವ್ಯಕ್ತಿಗತ ತೆವಲುಗಳು ಎಲ್ಲಾ ಧರ್ಮದ ಸಾರವನ್ನೂ ಜತೆಗೆ ಸಂವಿಧಾನದ ಸದಾಶಯವನ್ನೂ ಮಣ್ಣುಗೂಡಿಸುತ್ತಾ ನಡೆದಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by muneerahmedkumsi on

ರಾಜಕಾರಣದಲ್ಲಿ ಧರ್ಮ ಎಷ್ಟಿರಲಿ? ಎಂಭ ಪ್ರಶ್ನೆಗೆ ಉತ್ತರ ಸಂಪೂರಣವಾಗಿರಲಿ ಎಂಭ ನನ್ನ ಉತ್ತರ‌
ಎಲ್ಲಾ ರಾಜಕಾರಣಿಗಳಿಗೂ ಸರಿಕಾಣುವುದಿಲ್ಲ. ಧರ್ಮ ಅನ್ನುವುದು ಮನುಷ್ಯನ ಜೀವನ ಶೈಲಿ ಆಗಿದೆ.
ಧರ್ಮ ಅಂದರೆ, ಈ ಲೋಕದ ವಿಭುವಿಗೆ ಹೆದರಿ , ಅವನ ಆಜ್ನೇಯಂತೆ ಜೀವನದ ಎಲ್ಲಾಕ್ಷೇತ್ರ
ಗಳಲ್ಲಿ ಪರಿಶುದ್ಧ ಜೀವನ ನಡೆಸುವುದಾಗಿದೆ. ರಾಜಕಾರಣಿಗಳೂ ಇದರಿಂದ ಹೋರತಾಗಿಲ್ಲ
ಎಲ್ಲಿ ಧರ್ಮಪಾಲನೆ ಇರುವುದಿಲ್ಲವೋ ಅಲ್ಲಿ ಸುಳ್ಳು, ವಂಚನೆ , ಮೋಸ, ಭ್ರಷ್ಟಚಾರ, ಅಸೂಯೆ,
ಅನುಮಾನ, ಅಪನಂಬಿಕೆ, ಪೈಪೋಟಿ, ಅಧಿಕಾರದಾಹ, ದುರಾಸೆ, ತಂತ್ರ, ಕುತಂತ್ರ, ಧನದಾಹ‌
ಅತ್ಯಚಾರ, ಅನಾಚಾರ ಗಳಂತಹ ರಾಕ್ಷಸ ಗುಣಗಳು ಬಲಿಷ್ಟ್ಠವಾಗಿ, ಸಮಾಜದಲ್ಲಿ , ಶೋಶಣೆ ,ದಬ್ಬಾಳಿಕೆಯ ಆಡಳಿತದಲ್ಲಿ ಹಾಸುಹೊಕ್ಕಿ ಇಡೀಸಮಾಜವು ಹದಗೆಟ್ಟು ಅರಾಜಕತೆ
ಉದ್ಭವಿಸುವುದು. ದೇಶ ಪ್ರಗತಿಗಾಣದೆ ಬಡತನ, ಬವಣೆಗಳಿಂದ ತತ್ತರಿಸಿಹೋಗಿ ಗುಲಾಮಗಿರಿ
ಜಾರಿಯಾಗಿ,ಸಮಾಜವು ಕುಟುಂಬ ಆಡಳಿತಕ್ಕೆ ಬಲಿಯಾಗಿ, ಕ್ರಾಂತಿಗೆ ದಾರಿ ಆಗುವುದು. ಆದ್ದರಿಂದ‌
ರಾಜ್ಯಭಾರವೂ ಯಾವಾಗಲು ಧರ್ಮಬದ್ಧ ವ್ಯಕ್ತಿಯ ಕೈಯಲ್ಲಿರಬೇಕು. ಇತಿಹಾಸದಲ್ಲಿ ಕಣ್ಣಾಡಿಸಿ
ನೋಡಿ ಸುಭಿಕ್ಷತೆ ಇರುವಲ್ಲಿ ಧರ್ಮಾನುಯಾಯಿ ವ್ಯಕ್ತಿ ಆಡಳಿತದಲ್ಲಿರುವುದನ್ನು ನಾವು ಕಾಣ‌
ಬಹುದು. ಅಶೋಕನನ್ನು ಶಾಂತಿಪ್ರಿಯನನ್ನಾಗಿಸಲು ಧರ್ಮಕಾರಣವಾಯಿತು. ಹಾಗೆಯೇ
ಇಸ್ಲಾಮಿ ಇತಿಹಾಸದಲ್ಲಿ ಪ್ರಮುಖರಾದ ಉಮರ್ ಬಿನ್ ಅಬ್ದುಲ್ ಅಜೀಜ್ ರವರ ಆಡ್ಳಿತವನ್ನು
ನೋಡಿ ಅವರ ಜೀವನ ಎಷ್ಟು ಧರ್ಮಬದ್ಧವಾಗಿತ್ತು ಎಂದು.
ಪ್ರತಿಯೊಬ್ಬ ಮನುಷ್ಯನಿಗೋ ಧರ್ಮದ ಅವಷ್ಯಕತೆ ಇದೆ. ಎಲ್ಲಾರೂ ಮರಣದನಂತರ‌
ಸ್ವರ್ಗಕ್ಕೆಹೋಗಬೆಕಾಗಿದೆ, ಅವನು ಬಡವನಾದರೆನು, ರಾಜನಾದರೆನು, ಗುಲಾಮನಾದರು ಧರ್ಮದ ಅನುಸರಣೆಯಲ್ಲಿ ಸಮಾನತೆ ಇದೆ. ಯಾರೂ ಇದರಿಂದ ಪಲಾಯನವಾದವನ್ನು ಅನುಸರಿಸುವಂತಿಲ್ಲ.. ಆದ್ದರಿಂದ ರಾಜಕಾರಣದಿಂದ ಧರ್ಮವನ್ನು ದೂರವಿಡುವುದು ಒಂದು
ಮೋಸವಾಗಿದೆ. ಮತ್ತು ತಪ್ಪುಸಂದೇಶವಾಗಿದೆ. ಇಂದು ಮಠಾದಿಪತಿಗಳು ಧರ್ಮಭೋದನೆ
ಮಡುವಾಗ ರಾಜಕಾರಣಿಗಳಿಗೊಂದು , ಬೇರೆಯವರಿಗೊಂದು ರೀತಿಯಲ್ಲಿ ಭೋದನೆನೀಡಬಾರದು
ಕೇರಳದ ಪದ್ಮನಾಭ ದೇವಸ್ಥಾನದಲ್ಲಿರುವ ಸಂಪತ್ತು ಒಬ್ಬ ಧರ್ಮಾನುಯಾಯಿ ರಾಜನ‌
ಕೈಯಲ್ಲಿರುತ್ತಿದ್ದರೇ, ಅದು ಪ್ರಜೆಗಳ ಯೋಗಕ್ಷೇಮಕ್ಕಾಗಿ ವಿನಿಯೋಗ ವಾಗುತಿತ್ತು , ಸಮಸ್ಯೆಗೆ
ಕಾರಣವಾಗುತ್ತಿರಲ್ಲಿಲ್ಲ. ರಾಜ ರಾಷ್ಟ್ರದ ಸ್ವತ್ತು ಯಾವ ಕುಟುಂಬದ ಸ್ವತ್ತಲ್ಲ.. ಎಂದಿಗೂ
ರಾಜಕಾರಣವನ್ನು ಧರ್ಮದಿಂದ ಬೇರ್ಪಡಿಸಬೇಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gururajkodkani on

ವೈಯಕ್ತಿಕವಾಗಿ ಧರ್ಮವೆ೦ಬುದೇ ಈ ಜಗತ್ತಿನಲ್ಲಿರದಿದ್ದರೇ ಎಷ್ಟು ಚೆನ್ನಾಗಿರುತ್ತಿತ್ತು ಎ೦ದುಕೊಳ್ಳುತ್ತೇನೆ ಕೆಲವೊಮ್ಮೆ.ರಾಜಕಾರಣದಲ್ಲಿ ಧರ್ಮವೆ೦ಬುದು ಇರದಿದ್ದರೇ ಚೆನ್ನ.ದುರದೃಷ್ಟವಶಾತ ನಮ್ಮಲ್ಲಿ ಧರ್ಮವೇ ರಾಜಕಾರಣದ ಪ್ರಮುಖ ಅಸ್ತ್ರ.’ಧರ್ಮ’ವೆ೦ಬ ಶಬ್ದದ ಅರ್ಥ ನ್ಯಾಯ,ನಿಷ್ಟೆ ಎ೦ದುಕೊ೦ಡರೇ ಮುನೀರ್ ಅಹ್ಮದ ಉತ್ತರ ಸರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಆರ್ ಕೆ ದಿವಾಕರ on

"ವೈಯಕ್ತಿಕವಾಗಿ ’ಧರ್ಮ’ವೆಂಬುದೇ ಈ ಜಗತ್ತಿನಲ್ಲಿ ಇರದಿರುವುದೇ?! ಅದು ಸಾಧ್ಯವೇ? ಪಾರ‍್ಲಿಮೆಂಟ್‌ನಲ್ಲಿ ಸರ್ವಾನುಮತದ ಠರಾವು ಪಾಸ್‌ ಮಾಡಿ ಇಲ್ಲವಾಗಿಸಿಬಿಡಬಹುದಾದಂಥಾ "ವಸ್ತು"ವೇ, ’ಧರ್ಮ’? "ಧರ್ಮ" ಎಂಬ ಅಕ್ಷರಗುಚ್ಛ ಮನುಷ್ಯ ಸೃಷ್ಟಿಯಿರಬಹುದು; ಅದಕ್ಕೆ ಕೊಡಲಾಗುವ ’ಆ’ ಅಥವಾ ’ಈ’ ಎಂಬ ಹೆಸರೂ ಸಾಮಾಜಿಕವಾದದ್ದೇ ಇರಬಹುದು. ಆದರೆ "ಧರ್ಮ"ದ ತಿಳಿವು, Concept, ಯಾರೊಬ್ಬರದ್ದಲ್ಲ, ಮನುಷ್ಯ ಸಮಾಜ ಎಂಬ ಸಮುದಾಯ ಹುಟ್ಟಿದಂದಿನಿಂದಲೇ ಅದು ಇದ್ದುಕೊಂಡಿದೆ! ಮನುಷ್ಯ ಎಂಬ ವೈಯಕ್ತಿಕ ಪ್ರಾಣಿ ಅಪೂರ್ಣ. ಅದಕ್ಕೆ ಪೂರ್ಣತೆ ಬರುವುದು ಸಮಷ್ಟಿಯಲ್ಲಿ. ಆ ಸಮಷ್ಟಿಯನ್ನು ಸಮಷ್ಟಿಯಾಗಿ ಹಿಡಿದಿಟ್ಟಿರುವುದೇ ಅಥವಾ ’ಎತ್ತಿ ಹಿಡಿಯುವುದೇ’ ಧರ್ಮ. ಆ ಹೆಸರನ್ನು ಬೇರೆ ಉದ್ದೇಶಕ್ಕೆ, ಅದರಲ್ಲೂ ವೋಟಿನ ಉದ್ದೇಶಕ್ಕೆ ಬಳಸಿಕೊಳ್ಳುವುದು ಮಾನವತಾ ದ್ರೋಹ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by muneerahmedkumsi on

ಧರ್ಮವೆಂಬುದು ಮಾನವನ ಮಾನವ ಮೌಲ್ಯ ಗಳ ಪರಿಪಾಲನೆ ,ಮತ್ತು ಸ್ವಚ್ಚ ಬದುಕಿನ ಶಿಶ್ಠಚಾರ‌
ವಾಗಿದೆ. ಇದಕ್ಕೆ ದೇವಭಯ ಅತ್ಯಾವಶಕವಾಗಿದೆ. ಧರ್ಮ ಪಾಲನೆಯಿಂದ ಒಳ್ಳೆಯ ನಾಗರೀಕತೆ
ರೂಪಗೊಳ್ಳುತ್ತದೆ. ವಿಶ್ವದಲ್ಲಿ ಮಾನವನ ಆಗಮನ ವಾದನಂತರ ಮೊದಲು ವಿಕಾಸಗೋಂಡಿದ್ದು
ಧರ್ಮವೇ ಆಗಿದೆ. ನಂತರ ಕೈಗಾರಿಕ ಕ್ರಾಂತಿ ಮೂಡಿಬಂತು. ರಾಜಕಿಯದಿಂದ ಧರ್ಮ ಬೇರ್ಪಟ್ಟರೆ
ಅನಾಗರೀಕರು ಅಧಿಪತಿಗಳಾಗುತ್ತಾರೆ ಎಂಬುದನ್ನು ಮರೆಯಬೇಡಿ. ಈಗ ಆಗುತ್ತಿರುವುದು ಅದೇ
ಆಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.