23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ರಾಮಾಯಣದಲ್ಲೊಂದು ಮಹಾಭಾರತ!

March 18, 2012 - 11:00am
hamsanandi

 ರಾಮಾಯಣದ ಕಥೆ ಕೇಳದ ಕನ್ನಡಿಗರು ಯಾರಿದ್ದಾರೆ? ಹಾಗೇ ರಾಮಾಯಣವನ್ನ ಬರೆದ   ವಾಲ್ಮೀಕಿಯ ಕಥೆಯೂ ಸುಪರಿಚಿತವೇ. ಬೇಡನಾಗಿದ್ದವ ನಂತರ ಮನಃಪರಿವರ್ತನೆಗೊಂಡು ವಾಲ್ಮೀಕಿಯಾಗಿ ರಾಮಾಯಣದಂತಹ  ಮಹಾಕಾವ್ಯನ್ನೇ ಬರೆದ. ಅದರಲ್ಲೂ, ಈ ರಾಮಾಯಣಕ್ಕೆ ಮಂಗಳ  ಹಾಡಿದ್ದು ಜೋಡಿ  ಹಕ್ಕಿಗಳಲ್ಲಿ ಒಂದನ್ನು ಬೇಡನೊಬ್ಬ  ಬಾಣದಲ್ಲಿ  ಹೊಡೆದು ಕೊಂದಾಗಲೇ. ಆಗ ವಾಲ್ಮೀಕಿಯ ಬಾಯಲ್ಲಿ ಹೊರಬಂದದ್ದು ಈ ಶ್ಲೋಕ:

 

 

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ |

ಯತ್ಕ್ರೌಂಚಮಿಥುನಾದೇಕಮವಧೀಃ ಕಾಮ ಮೋಹಿತಮ್ ||

 

"ಎಲೋ ಬೇಡನೇ! ಜೋಡಿ ಕ್ರೌಂಚಗಳಲ್ಲೊಂದನ್ನು ಕೊಂದ  ನೀನು ನೂರ್ಕಾಲದಲ್ಲೂ ಏಳಿಗೆಯನ್ನು ಹೊಂದದೇ ಹೋಗು" ಎಂಬ ಈ ದುಃಖದ, ಶಪಿಸುವ ಮಾತೇ ಛಂದೋಬದ್ಧವಾಗಿ ಮೂಡಿಬಂದಿದ್ದರಿಂದ ನಾರದನೇ, ವಾಲ್ಮೀಕಿಗೆ ಇದೇ ಅವನ ರಾಮಾಯಣಕ್ಕೆ ಮಂಗಳಾಚರಣೆಯಾಗಲಿ ಎಂದು ಹರಸಿದನಂತೆ. ಹಾಗೆಂದೇ ಈ ಶ್ಲೋಕಕ್ಕೆ ಬೇರೆ ಬೇರೆ ಅರ್ಥಗಳನ್ನೂ ಕೊಡುವುದುಂಟು. ಅದಿರಲಿ.

 

ಈಚೆಗೆ ಪದ್ಯಪಾನದಲ್ಲಿ, ರಾಮಾಯಣಕ್ಕೆ ಕಾರಣವಾದ ಈ ಘಟನೆಯಬಗ್ಗೆ, ಯಾವುದಾದರೂ ಒಂದು ಛಂದೋಬದ್ಧವಾದ ಪದ್ಯವನ್ನು ಬರೆಯಿರೆಂಬ ಸಮಸ್ಯೆ ಇತ್ತು - ಆದರೆ ಒಂದು  ಕರಾರು - ಪದ್ಯದಲ್ಲಿ "ಸುಯೋಧನ", "ಕರ್ಣ", "ದುಶ್ಯಾಸನ", "ಶಕುನಿ"  - ಈ ಪದಗಳು ಪದ್ಯಗಳಲ್ಲಿ ಇರಬೇಕು, ಅಂದರೆ, ರಾಮಾಯಣದಲ್ಲಿ, ಒಂದು ರೀತಿ ಮಹಾಭಾರತವನ್ನು ತರುವಂತೆಯೇ ಆಯ್ತಲ್ಲ!  ಇದೇ ತಾನೇ ಸಮಸ್ಯಾ ಪೂರಣದ ಮಜ !

 

 

ಇದನ್ನು ನಾನು ಬಿಡಿಸಿದ್ದು ಹೀಗೆ -ಈ ಭಾಮಿನಿಯ ಮೂಲಕ:

 

ಬೇಡನೋರ್ವನು ಮರದ ಮೇಗಡೆ 

ಜೋಡಿ ಶಕುನಿಯ ಕಂಡು ಒಮ್ಮೆಲೆ

ಹೂಡಿ ಶರವ ಸುಯೋಧನಂತೆಯೆ ಹೆದೆಯ ಸೆಳೆದಿರಲು

ಕೇಡಿಗನೆ! ದುಶ್ಯಾಸನನೆ! ನಿನ-

ಗೇಡು ಸಾಸಿರದಲ್ಲು ಏಳಿಗೆ

ಬೇಡವೆನುತಲಿ ಕರ್ಣಭೇದಿಪಶಾಪ ಮುನಿಯಿತ್ತ ||

 

-ಹಂಸಾನಂದಿ

 

ಕೊ: ಶಕುನದ ಹಕ್ಕಿ ಅಂತ ಹಕ್ಕಿಯೊಂದಿದೆ. ಅದೇ ಕ್ರೌಂಚವೇ ಅಲ್ಲವೇ ಅನ್ನುವುದು ಗೊತ್ತಿಲ್ಲ. ಆದರೆ, ಶಕುನಿ ಎಂದರೂ ಹಕ್ಕಿ ಅನ್ನುವ ಅರ್ಥವೂ ಇದೆ. ಸುಯೋಧನ  ಅನ್ನುವುದನ್ನು,  ಹೋರಾಟಗಾರ ಎಂಬ ಅರ್ಥದಲ್ಲೂ,  ದುಶ್ಯಾಸನ ಅನ್ನುವುದನ್ನು ಅಂಕೆಗೆ ಸಿಕ್ಕದವನು ಎಂಬ ಅರ್ಥದಲ್ಲೂ,  ಕರ್ಣ ಎನ್ನುವುದನ್ನು ಕಿವಿ ಎಂದೂ  ( ಎಲ್ಲವೂ ರೂಢ್ಯರ್ಥಗಳೇ )  ಬಳಸಿದ್ದೇನೆ.

 

ಕೊ.ಕೊ: ಏಡು ಅನ್ನುವ ಪದಕ್ಕೆ ಬರಹ ನಿಘಂಟು ಸಮಯ, ಕಾಲ ಎಂಬ ಅರ್ಥ ಕೊಡುತ್ತದೆ. ಮಾನಿಷಾದ ಶ್ಲೋಕದ “ಶಾಶ್ವತೀ ಸಮಾಃ” - ಅಂದರೆ  ಬಹುಕಾಲ - ಇದಕ್ಕೆ "ಏಡು ಸಾಸಿರ"  ಇದು ಸಮಾಂತರವಾಗಿದೆಯೆನ್ನಿಸಿ ಹಾಗೆ ಬಳಸಿದ್ದೇನೆ.

 

ಕೊ.ಕೊ.ಕೊ : ಪದ್ಯಪಾನದ ಜಾಲತಾಣಕ್ಕೇ ಹೋದರೆ ನೀವು ಇದೇ ಸಮಸ್ಯೆಗೆ ಬೇರೆ ಬೇರೆಯವರ ಉತ್ತರಗಳನ್ನೂ  ಓದಿ ಆನಂದಿಸಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

ಹಂಸಾನಂದಿ ಅವ್ರೆ-

ನನಗೆ ಈ ಛಂದೋಬದ್ಧವಾದ ಪದ್ಯದ ಬಗ್ಗೆ ಅಷ್ಟಾಗಿ ಅನುಭವವೂ ಇಲ್ಲ
ಆದರೆ ಆ ಸಮಸ್ಯೆಯನ್ನ
( ರಾಮಾಯಣಕ್ಕೆ ಕಾರಣವಾದ ಈ ಘಟನೆಯಬಗ್ಗೆ,
ಯಾವುದಾದರೂ ಒಂದು ಛಂದೋಬದ್ಧವಾದ ಪದ್ಯವನ್ನು ಬರೆಯಿರೆಂಬ ಸಮಸ್ಯೆ ಇತ್ತು )

ನೀವ್ ಬಗೆ ಹರಿಸಿದ ರೀತಿ -
ನೀವ್ ಬರೆದ ಆ ಪದ್ಯ ಅಚ್ಚರಿ ಮೂಡಿಸಿತು ಹಾಗೆಯೇ ನಿಮ್ಮ ಪಾಂಡಿತ್ಯದ ಪರಿಚಯವಾಯ್ತು...

ಮಹಾಭಾರತದ ಪಾತ್ರಗಳ ನಾಮಧೆಯಗಳನ್ನ ಬಳಸಿ ರಾಮಾಯಣದ ಸನ್ನಿವೇಶಕ್ಕೆ ಪದ್ಯ ಬರೆವುದು ಸುಲಭದ ಮಾತೆ?

ಶೀರ್ಷಿಕೆ ಓದಿ ಆಕರ್ಷಿತನಾಗಿ ಬಂದು ಪೂರ್ಣ ವಿವರಣೆ ಓದಿ ಬಲು ಖುಷಿ ಆಯ್ತು..

ಅದಾಗಲೇ ನಿಮ್ಮ ಕೆಲವು ಪದ್ಯಗಳನ್ನ ಓದಿರುವ ನಂಗೆ ಇದು ಅವೆಲ್ಲದಕ್ಕಿಂತ
ವಿಶೇಷ -
ವಿಭಿನ್ನ -
ವಿಶಿಸ್ತ
ಅನಿಸಿತು.. ..

ಶುಭವಾಗಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

+೧
ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಸಪ್ತಗಿರಿವಾಸಿ ಅವರೆ,

ಇದರಲ್ಲಿ, ನನ್ನ ಉತ್ತರದಲ್ಲಿ ಅಂತಹ ವಿಶೇಷವೇನಿಲ್ಲ ಅನ್ನಿಸುತ್ತೆ. ಆದರೂ ನಿಮ್ಮ ಅಭಿಮಾನದ ಮಾತುಗಳಿಗೆ ಧನ್ಯವಾದಗಳು.

ನೀವು ಪದ್ಯಪಾನ ತಾಣಕ್ಕೆ ಹೋಗಿ ನೋಡಿದರೆ, ಅಲ್ಲಿರುವ ಹಲವಾರು ಸಮಸ್ಯಾಪೂರಣಗಳಿಂದ, ನೀವು ಖಂಡಿತ ಬೆರಗುಗೊಳ್ಳಬಹುದು!

ಗಣೇಶ ಅವರೆ, ನಿಮಗೂ ಧನ್ಯವಾದಗಳು.

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಹಂಸಾನಂದಿ
ಅವ್ರೆ-

ನೀವೇನೋ ಹೇಳಬಹುದು ನಿಮ್ಮ ಈ ಪದ್ಯದಲ್ಲಿ ಏನೂ ವಿಶೇಷವಿಲ್ಲ, -ಅದು ವಿನಯವಂತಿಕೆಗೆ ನಿದರ್ಶನ--

ಆದರೆ ನನಗೆ ಮತ್ತು ಅದನ್ನ ಗಮನವಿಟ್ಟು ಓದಿದ ಯಾರಿಗಾದರೂ ಅದು ವಿಶೇಷವಾದದ್ದೆ ಅನಿಸದೇ ಇರದು...

ಆವೊತ್ತೊಮ್ಮೆಯೇ ನೀವ್ ಈ (ಪದ್ಯ ಪಾನ ) ಬಗ್ಗೆ ನನಗೆ ಹೇಳಿದ್ದೀರಿ ನಂಗೆ -

ನಾ ಆಗಾಗ ಅಲ್ಲಿ
http://padyapaana.com/

ಹೋಗಿ ಓದುತ್ತಿರುತ್ತೇನೆ...

ಒಳ್ಳೆಯ ವೆಬ್ ಸೈಟ್

http://padyapaana.co...

ಪದ್ಯ ಪಾನ ಸಮಸ್ಯೆ ಚಿತ್ರ - 'ಬೇಡತಿ' ಚಿತ್ರವೊಂದಕ್ಕೆ ಗಣೇಶ್ ಅನ್ನುವವರು ಒಂದು ಚಂದ ಪದ್ಯ ಬರ್ದಿದ್ದಾರೆ..
ನಂಗೆ ಸಂಶಯ ಆವ್ರು ನಮ್ಮ ಗಣೇಶ್ ಅಣ್ಣ ಅವ್ರೆ ಇರಬಹುದಾ ಅಂತ?
ಅದಕ್ಕೆ ಎಸ್ತೊಂದು ಪ್ರತಿಕ್ರಿಯೆಗಳು ಅಲ್ಲಿ ಬಂದಿವೆ.....

ಅಬ್ಬಬ್ಬ~!!!!
------------------------------------

87 Responses to “ಪದ್ಯ ಸಪ್ತಾಹ – ೩ – ೨೦೧೨ ::‌ ಚಿತ್ರಕ್ಕೆ ವರ್ಣನೆ”

ಗಣೇಶ್ says:
January 16, 2012 at 1:48 pm
ವಸಂತತಿಲಕ-ಕಂದ-ಸೀಸಚ್ಛಂದಸ್ಸುಗಳ ಈ ಮೂರು ಪದ್ಯಗಳು ಸಹೃದಯರಿಗೆ ತುಸು ಪೆದಸಾದರೂ ರುಚಿಸಿಯಾವೆಂಬ ಎಣಿಕೆಯಲ್ಲಿ ನಿವೇದಿಸುತ್ತಿದ್ದೇನೆ.

ಆಲೀಢಭಂಗಿ ಮಿಗಿಲಾಗಳಲವೇಲಸುಭ್ರೂ-
ಲೀಲಾಧನುಷ್ಯಕಿದೊ ಪೂಡುತೆ ತೀಕ್ಷ್ಣವೀಕ್ಷಾ-
ಕ್ಷ್ವೇಲಾಕ್ತಸಾಯಕಯುಗಂ ಮಿಗೆ ಸವ್ಯಸಾಚಿ-
ಶ್ರೀಲತ್ವಮಂ ಮೆರೆಯುವೀಕೆಗೆ ಲಕ್ಷ್ಯಮಾರಯ್?

ಬೇಡದ ವಧುವಲ್ತೆಂದುಂ
ಬೇಡರ ವಧುವೀಕೆ ಚಾಪಚಾಪಲೆಯಾಗಳ್|
ಬೇಡದರಾರ್ ಗುರಿಯಾಗಳ್
ಬೇಡರ ಬಾಣಕ್ಕೆ ಮದನನಯ್ಯನೆ ತುಯ್ದಂ!!
(ಶ್ರೀಕೃಷ್ಣನು ಬೇಡನೊರ್ವನ ಬಾಣಕ್ಕೆ ತುತ್ತಾದ ಎಳೆ ಇಲ್ಲಿದೆ. ಮುಖ್ಯವಾಗಿ ಯಮಕಾಲಂಕಾರದ ಸೊಗಸಿದರ ಹೃದಯ)

ನಿನ್ನಾಳಿಯರ್ಗೆ ಮತ್ತಾವ ಮತ್ತಮಯೂರಮಿನ್ನು ಬೇಕೆಂದು ನೀಂ ಬಂದೆಯಿಲ್ಲಿ?
ನಿನ್ನಯ್ಯನಾವ ಮತ್ತೇಭದಿಂ ಮಡಿಯುತ್ತೆ ಭಿನ್ನಕರ್ತವ್ಯಮಂ ನಿನ್ನೊಳಿತ್ತಂ?
ನಿನ್ನಾಣ್ಮನಿನ್ನಾವ ಶಾರ್ದೂಲಮಂ ಕಾದು ಖಿನ್ನನಾದಂ ತೊರೆದು ಬಿಯದಗೆಲಸಂ?
ನಿನ್ನ ಕಂದರ್ ಮತ್ತದಿನ್ನಾವ ಹರಿಣಿಯಿಂ ಗನ್ನಗೊಂಡಟ್ಟಿದರ್ ನಿನ್ನನಿಲ್ಲಿ?
ಪಂಚತನ್ಮಾತ್ರನಾರಾಚಪಂಚಕಧರೆ ಚಂಚರೀಕಾಳಿಗುಣಗಣ್ಯಚಾಪಹಸ್ತೆ
ಮಿಂಚೆ ಶೃಂಗಾರವೀರಮಾ ಪಾರ್ವತಿಯವೊಲ್ ಚಂಚದಾನಂದೆ ಯಾರಿವಳ್ ಪಾರ್ವತಿಯೆ ದಲ್!!
(ಇಲ್ಲಿ ವಿವಿಧಚ್ಛಂದಸ್ಸುಗಳ ಹೆಸರುಗಳನ್ನು ಶ್ಲೇಷಮಾರ್ಗದಲ್ಲಿ ತಂದಿರುವುದು ಗಮನಾರ್ಹ

--------------------------------------

ಶುಭವಾಗಲಿ

**************ಯುಗಾದಿಯ ಮುಂಗಡ ಶುಭಾಶಯಗಳು***************

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on

ಹಂಸಾನಂದಿಯವರು ಸಮಸ್ಯೆಯನ್ನು ಬಿಡಿಸಿದ ರೀತಿ ಚೆನ್ನಾಗಿದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಗಣೇಶ್ ಅಣ್ಣ ಅವ್ರ ಮರು ಪ್ರತಿಕ್ರಿಯೆಯಿಂದಾಗಿ ನಾ ಈ ಬರಹವನ್ ಮತ್ತೆ ನೋಡಿದೆ-

ಹಾಗೆಯೇ ಅಶೋಕ್ ಕುಮಾರ್ ಅವರು(ಬಹು ದಿನಗಳಿಂದ ಬರಹ ಬರೆಯುತ್ತಾ ಆಗ ತಪ್ಪದೇ ಹಲ ಬರಹಗಳನ್ನ ಓದಿ ಪ್ರತಿಕ್ರಿಯೆ ಕೊಡುತ್ತಿದ್ದವರು- ಈಗ ಬರೀ ಕುತೂಹಲಕಾರಿ ಬರಹ ಬರೆಯುತ್ತಾ ಅಪ್ಪಿ-ತಪ್ಪಿಯೂ( ರಾಮಾಯಣದಲ್ಲೊಂದು ಮಹಾಭಾರತ- ಇದು ಅಪವಾದ) ಪ್ರತಿಕ್ರಿಯಿಸದವರು) - ಈ ಪ್ರತಿಕ್ರಿಯೆ ಕೊಟ್ಟರೆ?
ನೀವೇ ಅದು ಆಗಿದ್ದರೆ ನನಗೆ ಅಚ್ಚರಿ...!!

ಶುಭವಾಗಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>>ಪದ್ಯ ಪಾನ ಸಮಸ್ಯೆ ಚಿತ್ರ - 'ಬೇಡತಿ' ಚಿತ್ರವೊಂದಕ್ಕೆ ಗಣೇಶ್ ಅನ್ನುವವರು ಒಂದು ಚಂದ ಪದ್ಯ ಬರ್ದಿದ್ದಾರೆ..
ನಂಗೆ ಸಂಶಯ ಆವ್ರು ನಮ್ಮ ಗಣೇಶ್ ಅಣ್ಣ ಅವ್ರೆ ಇರಬಹುದಾ ಅಂತ?
-ಸಪ್ತಗಿರಿವಾಸಿಯವರೆ,
ಅಬ್ಬಬ್ಬಾ.......
ಈ ಮೂರು ಪ್ಯಾರಾ ಓದಲು ನನಗೆ ಒಂದುವಾರ ಬೇಕಾಗಬಹುದು! ಇನ್ನು ಬರೆಯುವುದಾ?
ಅವರು ಗಣೇಶ್, ನಾನು ಗಣೇಶ.ಅವರು ಕವನ ಕಾವ್ಯದಲ್ಲಿ ಪ್ರತಿಭಾವಂತರು- ವ್ಯಾಕರಣ, ಛಂದಸ್ಸು, ಕವನ.. ಎಂದರೆ ಮೈಲು ದೂರ..ನಾನು. :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

;:())

ನೀವ್ ಸಹ ಸಾಮಾನ್ಯಾರೇನೂ ಅಲ್ಲ ಬಿಡಿ -!!

ನಿಮ್ಮ ಬಗ್ಗೆ ಇಡೀ ಸಂಪದದ್ಡ ಹಲವ್ರಿಗೆ ಕುತೂಹಲ ಹುಟ್ಟಿಸಿ(ಕಸ್ತೂರಿಯಲ್ಲಿ ಲಾಂಗೂಲಾಚಾರ್ಯ ಯಾರು ಅನ್ನೋದು ಗೊತ್ತಾದದ್ದು ಬಹು ತಡವಾಗಿ- ಲಾಂಗೂಲಾಚಾರ್ಯ- ಬೇರೆ ಯಾರೂ ಅಲ್ಲ ಅದರ ಸಂಪಾದಕ ಪಾ ವೆಂ ಆಚಾರ್ಯ ರೇ ಅಂತ!!) ಹುಟ್ಟಿಸುತ್ತಲೇ ಇರುವ, ನೀವ್ ಎಲ್ಲಿ ನಮಗೆ ಏಟುಕದ ನಕ್ಚತ್ರ ಆಗುವಿರೋ ಏನ್ನ್ವ ಭಾವ ನನಗೆ!!..

ಆಶಾವಾಧಿ ಆದುದರಿಂದ ನಿಮ್ಮ ಭೇಟಿ ಇಂದಲ್ಲದಿದ್ದರೆ ನಾಳೆ ಸಾಧ್ಯ ಅನ್ನೋದು ನನ್ನ ಭಾವನೆ..

ನಿಮ್ಮ ಪ್ರತಿಕ್ರಿಯೆ ಬಹು ತಡವಾಗಿ ಬಂದರೂ ಮನಸ್ಸಿಗೆ ಖುಷಿ ಆಯ್ತು..

>>>> ಆದರೆ ಈ ಬರಹವನ್ಣ ತಾವ್ ಬರೆದದ್ದು ಹಂಸ ನ0ದಿ ಅವ್ರೆ ಮರ್‍ತು ಹೋದರ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸಪ್ತಾಗಿರಿಗಳೆ,
ನಿಮ್ಮ ಗಣೇಶಾಭಿಮಾನವನ್ನು ಮೆಚ್ಚಲೇ ಬೇಕು. ಪದ್ಯಪಾನವನ್ನು ನಡೆಸಿಕೊಡುತ್ತಿರುವವರು ಎಲ್ಲರಿಗೂ ಪರಿಚಯವಿರುವ ಶತಾವಧಾನಿ ಗಣೇಶರು. ನಮ್ಮ ಸಂಪದದ ಗಣೇಶರೂ ಶತಾವಧಾನಿಗಳೇ ಅದು ಬೇರೆ ವಿಷಯ‍; ಇಲ್ಲದಿದ್ದರೆ ಅಷ್ಟೊಂದು ವಿಷಯಗಳಿಗೆ ಕೊಕ್ಕೆ ಹಾಕುತ್ತಿದ್ದರೆ..ಕ್ಷಮಿಸಿ...ಕೊಂಡಿಗಳನ್ನು ಕೊಡಲು ಸಾಧ್ಯವಾಗುತ್ತಿತ್ತೇ? ;))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.