ಹೊರಟಿದ್ದೇನೋ ನಿಜ ನಾನು
ಅದಾವುದೋ ಗಮ್ಯದೆಡೆಗೆ..
ಹೆಜ್ಜೆಯ ಮುಂದೊಂದು ಹೆಜ್ಜೆ
ದಾರಿ ಯಾವುದೆಂದು ತಿಳಿಯಲಿಲ್ಲ..
ಮತ್ತೊಮ್ಮೆ ನನ್ನನ್ನೇ ಕೇಳಿಕೊಂಡೆ
ಹೋಗಲೇಬೇಕ? ಹೋದರೇನು ದಕ್ಕೀತು
ಅಥವಾ ದಕ್ಕಿದರೆ ಮಾತ್ರ ಹೋದದಕ್ಕೆ ಬೆಲೆಯ?
ಇಷ್ಟಕ್ಕೂ , ದಾರಿ ಯಾವುದೆಂದು ಇನ್ನೂ ತಿಳಿಯಲಿಲ್ಲ..
ಯಾರೋ ಮುಂದೊಬ್ಬ ಹೋಗಿದ್ದನಂತೆ
ಅವನು ಹೆಜ್ಜೆ ಇರಿಸಿದಲ್ಲಿ ನೆಲ ಸ್ವಲ್ಪ ಸವೆದಿದೆ
ಅದುವೇ ದಾರಿ ಅಂತ ಜನ ಅನ್ನುತ್ತಾರೆ
ನನಗದು ದಾರಿ ಅಂತ ಅನಿಸುವುದಿಲ್ಲ
ಅವನು ಹೋದ ಮಾತ್ರಕ್ಕೆ ಅದು ದಾರಿಯ?
ಅವನು ಹೋಗದೆ ನಾನು ಹೋಗಿದ್ದರೆ?
ಅಥವಾ ನಾನೇ ಬೇರೆಯದೇ ದಿಕ್ಕಿನಲ್ಲಿ ನಡೆದಿದ್ದರೆ?
ದಾರಿ ಇನ್ನೂ ಇರುತ್ತಿತ್ತ? ಹಾಗಂತ ಮತ್ತೆ ಕೇಳಿಕೊಂಡೆ
ಸವೆದದ್ದಷ್ಟೇ ದಾರಿಯೆಂದಾದರೆ
ಅವೆಲ್ಲ ನನ್ನನ್ನು ಗಮ್ಯಕ್ಕೆ ಕೊಂಡೊಯ್ಯಬಲ್ಲವಾ?
ಅಥವಾ ಹೇಗೆ ನಡೆದರೂ ಗಮ್ಯವನ್ನು
ತಲುಪಬಲ್ಲೆ ಎಂದಾದರೆ ದಾರಿಯ ಹಂಗು ಬೇಕಾ?
ಅವ ನಡೆದಲ್ಲಿ ನಾ ನಡೆದರೆ
ಅದು ನನಗೆ ದಾರಿ, ಆದರೆ ಅವನಿಗೆ?
ದಾರಿಯ ಹಂಗಿದ್ದರೆ ತಾನೇ ಕಚ್ಚಿಕೊಳ್ಳುವುದು
ಸರಿ ದಾರಿ, ತಪ್ಪು ದಾರಿ ಎಂಬ ಸಂಕೀರ್ಣತೆಗಳೆಲ್ಲ?
ಕಾಡುವ ಪ್ರಶ್ನೆಗಳನ್ನೆಲ್ಲ ಇದ್ದಲ್ಲೇ ಬಿಟ್ಟು
ಮುಂದೆ ನಡೆಹಾಕಿದೆ..ಹೆಜ್ಜೆಯೊಂದಿಟ್ಟಂತೆ
ಮತ್ತೆ ದಾರಿ ಯಾವುದೆಂದು ತಿಳಿಯಲಿಲ್ಲ..
ಪರವಾಗಿಲ್ಲ, ಈಗ ದಾರಿ ಯಾವುದೆಂದು
.....ತಿಳಿಯುವುದೂ ಬೇಕಾಗಿಲ್ಲ...









ಪ್ರತಿಕ್ರಿಯೆಗಳು
ಉ: ಸವೆದದ್ದಷ್ಟೇ ದಾರಿ... ?
ವಿನಾಯಕ ಅವರೇ
ಉತ್ತಮ ಕವನ, ಅತ್ಯುತ್ತಮ ಕೊನೆ
ವಿಚಿತ್ರ ಎಂದರೆ ಇದೇ ರೀತಿಯ ಕವನವೊಂದು ನಾನೂ ಆರಂಭಿಸಿದ್ದೇನೆ
ನೋಡೋಣ ಯಾವಾಗ ಹೇಗೆ ಪೂರ್ತಿಯಾಗುತ್ತೋ
ಇನ್ನೊಂದು ಹೀಗಿದೆ http://sampada.net/b...
ಧನ್ಯವಾದಗಳು
ಉ: ಸವೆದದ್ದಷ್ಟೇ ದಾರಿ... ?
ನಿಜ ಗೋಪಿನಾಥ್ , ನಿಮ್ಮ ಕವನದಲ್ಲಿ ಹೇಳಿದಂತೆ ಅನಿರೀಕ್ಷಿತವೊಂದೇ ನಾವು ಈ ಬದುಕಿನಲ್ಲಿ ನಿರೀಕ್ಷಿಸಬಹುದಾದದ್ದು... ಒಂದೊಮ್ಮೆ ಹಿಂತಿರುಗಿ ನೋಡಿದರೆ ಊಹಾತೀತವಾಗಿ ನಾವು ನಡೆದು ಬಂದಿರುತ್ತೇವೆ..
ಅಂದ ಹಾಗೆ, ನಿಮ್ಮ ಕವನವನ್ನೂ ಕಾತರದಿಂದ ನಿರೀಕ್ಷಿಸುತ್ತೇನೆ :-)
ಉ: ಸವೆದದ್ದಷ್ಟೇ ದಾರಿ... ?
ಗುರಿ ಯಾವುದೆಂಬ ಅರಿವಿದ್ದಾಗ
ದಾರಿಯ ಅರಿವೂ ಇರಬೇಕಾಗುವುದು
ಆ ರಿವಿನ ಕೊರತೆ ನಮ್ಮಲ್ಲಿದ್ದಾಗ
ಅರಿವು ನೀಡುವವರು ಬೇಕಾಗಬಹುದು
ಅನ್ಯರನು ತಮ್ಮ ಗುರಿಯೆಡೆಗೆ ಸಾಗಿಸಿದ ದಾರಿ
ಅನ್ಯರು ತಮ್ಮ ಗುರಿ ತಲುಪಲು ಸವೆಸಿದ ದಾರಿ
ನಮಗೂ ಅದೇ ಗುರಿಯನ್ನು ತಲುಪಲು ಸಹಕಾರಿ
ಗುರಿಗಳು ಬೇರೆ ಬೇರೆಯಾಗಿದ್ದರೆ
ಬೇರೆ ಬೇರೆಯಾಗಿರಬಹುದು ದಾರಿಗಳು
ಹಳೆ ಗುರಿಗಳೆಡೆಗೆ ಹೊಸದಾರಿಗಳ
ಹುಡುಕಲೂಬಹುದಲ್ಲ ನಾವುಗಳು
ದಾರಿಗಳ ಹಂಗು ಇರಬಾರದು ನಿಜ
ಸರಿ ತಪ್ಪುಗಳ ಪ್ರಜ್ಞೆ ಇರುವುದು ಸಹಜ
- ಆಸು ಹೆಗ್ಡೆ
ಉ: ಸವೆದದ್ದಷ್ಟೇ ದಾರಿ... ?
ತಿದ್ದುಪಡಿ:
<<ಆ ರಿವಿನ ಕೊರತೆ ನಮ್ಮಲ್ಲಿದ್ದಾಗ>>
ಆ ಅರಿವಿನ ಕೊರತೆ ನಮ್ಮಲ್ಲಿದ್ದಾಗ
ಉ: ಸವೆದದ್ದಷ್ಟೇ ದಾರಿ... ?
ಗುರಿಯ ಅರಿವು ಇದ್ದರೂನೂ ನನಗೆ
ದಾರಿಯ ಅರಿವಿನ ಕೊರತೆಯಲ್ಲ,
ದಾರಿಯ ಇರವಿನ ಕೊರತೆ..
ಅನ್ಯರು ಹೋದ ದಾರಿಯಲ್ಲ ನನ್ನದು,
ಸವೆಸಿದ್ದು ಬಿಡಿ, ಹೆಜ್ಜೆ ಗುರುತುಗಳೂ ಮುಚ್ಚಿ ಹೋದಲ್ಲಿ
ಯಾವುದು ದಾರಿ? ಯಾವುದು ಆಧಾರಿ?
ಆ ಸೂರ್ಯನೇ ನನ್ನ ಗುರಿಯೆಂದಾದರೆ
ಆ ದಾರಿಯ ಅರಿವಿರುವುದು ಮನೋಜವಗೆ ಮಾತ್ರ
ಅವ ಹೋದ ದಾರಿ ನನಗಂತೂ ತಿಳಿದಿಲ್ಲ...
ತಿಳಿದವರೂ ಇರಲಿಕ್ಕಿಲ್ಲ..
"ಹೊಸ ದಾರಿ " ಎಂದು ನೀವು ಹೇಳಬಹುದು
ನಾನು ಹೋಗಿ ತಲುಪಿದ ಮೇಲೆ
ಆದರೆ ಮೊದಲು ಹೋಗುವ ನನಗೆ, ಅದು ದಾರಿಯ?
ಅಥವಾ ಗುರಿಯೆಡೆಗಿನ
ದಾರಿಯ ಹಂಗಿಲ್ಲದ ಪಯಣವ?
ಉ: ಸವೆದದ್ದಷ್ಟೇ ದಾರಿ... ?
ಕಲಿತದ್ದು ಹಿಂದೆ, ಕಲಿಯಬೇಕಾಗಿರುವದು ಮುಂದೆ,
ಮುಂದಡಿ ಇಡುವಾಗ ಹಿಂದೆ ತಿರುಗೊಮ್ಮೆ ನೋಡಿ, ಮುಂದಿನ ದಾರಿ ನಿರ್ಧರಿಸುವದೆ ಜೀವನ.
ಚೆನಾಗಿದೆರೀ ಕವನ.
-ಅಶ್ವಿನಿ
ಉ: ಸವೆದದ್ದಷ್ಟೇ ದಾರಿ... ?
ಚೆನ್ನಾಗಿದೆ ವಿನಾಯಕ್......:)
ಉ: ಸವೆದದ್ದಷ್ಟೇ ದಾರಿ... ?
ನಿಂತಲ್ಲೇ ನಿಂತು ದಾರಿ ಯಾವುದೆಂದು ಯೋಚಿಸುತ್ತಲೇ ಇರುವುದಕ್ಕಿಂತ ಹೆಜ್ಜೆ ಮುಂದಿಡುವುದು ಒಳ್ಳೆಯದು. -:)
ಉ: ಸವೆದದ್ದಷ್ಟೇ ದಾರಿ... ?
ಹೌದು ನಾಗರಾಜರೆ, ನನ್ನ ಅಂಬೋಣವೂ ಅದೇ.. :-)
ಉ: ಸವೆದದ್ದಷ್ಟೇ ದಾರಿ... ?
ವಿನಾಯಕ್ ಸರಿಯಾಗಿದೆ ನಿಮ್ಮ ಚಿಂತನೆ. ಕುರಿಗಳು ಸುಮ್ಮನೆ ಒಂದರ ಹಿಂದೆ ಒಂದು ಹೋಗುವ ಹಾಗೆ ನಾವು ಕುರುಡಾಗಿ ಹೋಗಬಾರದು. ಉದ್ದೇಶ ಈಡೇರುವುದೇ ಎಂದು ವಿಚಾರ ಮಾಡಿ ನಮ್ಮ ದಾರಿಯನ್ನು ನಾವು ಹಿಡಿಯಬೇಕು.
ಉ: ಸವೆದದ್ದಷ್ಟೇ ದಾರಿ... ?
@ ಅಶ್ವಿನಿ, ಪವಿತ್ರ, ತೇಜಸ್ವಿ,
ಓದಿ ಪ್ರತಿಕ್ರಿಯಿಸಿದ್ದಕ್ಕೆ ನನ್ನಿ :-)