" ಶಂಖ "

" ಶಂಖ "

ಚಿತ್ರ

ಶಂಖ

ಹಾಗೆಯೆ ನೋಡಿದರೆ

ಅದೊಂದು ಖಾಲಿ

ಸಾಗರ ಜನ್ಯ ವಸ್ತು

 

ಅದಕೆ

ಉಸಿರು ತುಂಬಿದೆವೋ

ಅದು ದಶ ದಿಕ್ಕಿಗೂ

ಮಾರ್ನುಡಿಯುತ್ತೆ

 

ನಿನಾದ

ಗಾಳಿಯ ಹಿನ್ನೆಲೆಯಲ್ಲಿ

ಹಾಗೆಯೆ ರೂಪ ತಾಳಿದೆ

ಅದರ ಹಿತವಾದ ನಾದ

ಕಿವಿದುಂಬುತ್ತೆ

 

ಮೌನ

ಯಾವತ್ತೂ ಮೌನವಲ್ಲ

ಅದರಲೊಂದು ನಾದವಿದೆ

ಲಯವಿದೆ ಲಾಲಿತ್ಯವಿದೆ

ಕೇಳುವ ಸಂಸ್ಕಾರ ಬೇಕಷ್ಟೆ!

 

ಜಗದಲ್ಲಿ

ಯಾವುದೂ ಖಾಲಿಯಲ್ಲ

ನಿರ್ವಾತದಲೊಂದು

ಅವಕಾಶವಿದೆ ಅದನು

ನೋಡಲು ಒಳಗಣ್ಣು ಬೇಕು

 

ಭಕ್ತ

ದೇವರು ಪ್ರೇಮಿಗಳೂ ಅಷ್ಟೆ

ಭಕ್ತನ ಮೌನ ಪ್ರಾರ್ಥನೆ

ದೇವರನ್ನು ತಲುಪುತ್ತೆ

ಪ್ರೇಮಿಗಳ ಪರಸ್ಪರ ಮೌನಕ್ಕೆ

ಇಬ್ಬರೂ ಕೊಂಡಿಯಾಗುತ್ತಾರೆ

 

ಇದು ಜೀವನ

ಶಂಖ ಜೀವನದ

ಒಂದು ರೂಪಕ ಅಷ್ಟೆ

 

 (   ಚಿತ್ರ ಕೃಪೆ : ಅಂತರ್ ಜಾಲ    )                 

                                                                               ***

 

 

Rating
No votes yet

Comments

Submitted by partha1059 Sat, 02/08/2014 - 17:21

ಮೌನ
ಯಾವತ್ತೂ ಮೌನವಲ್ಲ
ಅದರಲೊಂದು ನಾದವಿದೆ
ಲಯವಿದೆ ಲಾಲಿತ್ಯವಿದೆ
ಕೇಳುವ ಸಂಸ್ಕಾರ ಬೇಕಷ್ಟೆ!
‍‍===
ಹೌದು ಸಾರ್ ಮೌನ ಯಾವಾಗಲು ಮೌನವಲ್ಲ ಅದಕ್ಕೆ ಒಂದು ದ್ವನಿ ಇದೆ

Submitted by H A Patil Sat, 02/08/2014 - 19:08

In reply to by partha1059

ಪಾರ್ಥಸಾರಥಿ ಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಮೌನಕ್ಕೆ ಒಂದು ಧ್ವನಿಯಿದೆ ಎಂಬುದನ್ನು ತಾವು ಒಪ್ಪಿದ್ದೀರಿ, ಕವನವನ್ನು ಸೂಕ್ಷ್ಮವಾಗಿ ಗ್ರಹಿಸುವ ಮತ್ತು ಪ್ರತಿಕ್ರಿಯಿಸುವ ಬದ್ಧತೆಗೆ ವಂದನೆಗಳು.

Submitted by nageshamysore Sat, 02/08/2014 - 17:32

ಪಾಟೀಲರೆ ನಮಸ್ಕಾರ. ನಿರ್ವಾತವಿದ್ದರೂ ನಿಶ್ಯಬ್ದವಲ್ಲ ಅದರಲ್ಲಿ ಸಂವಹಿಸುವ ತರಂಗಗಳೆ ಬೇರೆಯ ತರ. ಶಂಖನಾದ ಶಂಖದಲ್ಲಿ ಯಾವಾಗಲೂ ಇದ್ದರೂ ಶಬ್ದದ ವ್ಯಕ್ತ ರೂಪ ತಾಳುವುದು ಕೊರಳಿನ ಶಕ್ತಿಯ ದೂಡುವಿಕೆಯಿಂದ. ಅಂತೆಯೆ ಕಾಣದವರನ್ನು ಮುಟ್ಟಬೇಕಿದ್ದರೆ ಆ ಅಧಿಕ ಶಕ್ತಿಯ ಬಳಕೆ ಅಗತ್ಯ - ಇಲ್ಲದಿದ್ದರೆ, ಪ್ರಸ್ತುತವಿರುವ ಸತ್ಯವೂ ನಿಶ್ಯಬ್ದದಂತೆ ಮೌನವಾಗಿ ಅವ್ಯಕ್ತವಾಗಿ ಕಾಣುತ್ತದೆ. ಅದನ್ನು ಸೊಗಸಾಗಿ ಬಿಂಬಿಸಿದ ಸರಳ ಕವನ ಚೆನ್ನಾಗಿದೆ :-)

Submitted by H A Patil Sat, 02/08/2014 - 19:12

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಕವನದ ಬಗೆಗಿನ ನಿಮ್ಮ ಗ್ರಹಿಕೆ ಮತ್ತು ಸೂಕ್ಷ್ಮ ಒಳನೋಟಗಳನ್ನು ಅರಸುವ ಹಾಗೂ ನಿಮ್ಮ ಭಾವನೆಗಳ ಅಭಿವ್ಯಕ್ತಿ ಕ್ರಮಕ್ಕೆ ತುಂಬಾ ಧನ್ಯವಾದಗಳು.

Submitted by kavinagaraj Mon, 02/10/2014 - 14:51

ಸುಶಂಖನಾದ! ಹಿತವಾಗಿದೆ, ಪಾಟೀಲರೇ.

Submitted by H A Patil Mon, 02/10/2014 - 21:14

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು ಕವನದ ಮೆಚ್ಚುಗೆಗೆ ಧನ್ಯವಾದಗಳು

Submitted by ravindra n angadi Wed, 02/12/2014 - 14:55

In reply to by H A Patil

ಹೃದಯ ಪೂರ್ವಕ ನಮಸ್ಕಾರ ಸರ್
ಸರ್ ಜೀವನ ಒಂದು ಶಂಕ ಅದನ್ನು ಉದುವನು ಬಗವಂತ ಒಂದೂಂದು ಜೀವರಾಶಿಯಲಿ ಒಂದು ಸ್ವರ ಹುಟ್ಟಿಸಿ ಸಂತೋಷ ಪಡುವನು. ತುಂಬಾ ಚನ್ನಾಗಿದೆ ಸರ್ ಕವನ.

Submitted by H A Patil Wed, 02/19/2014 - 10:22

In reply to by ravindra n angadi

ರವೀಂದ್ರ ಅಂಗಡಿಯವರಿಗೆ ವಂದನೆಗಳು, ಕವನವನ್ನು ನೀವು ಭಿನ್ನ ನೆಲೆಯಲ್ಲಿ ಗ್ರ್ಹಹಿಸಿರುವುದು ಸಂತಸಕರ ಕವನದ ಮೆಚ್ಚುಗೆಗೆ ಧನ್ಯವಾದಗಳು,.