. 'ಶಾಂತಿಯ ಆಶಾಕಿರಣ ' (ಅಮನ್ ಕಿ ಆಶಾ) - ಮೂಲ ಗುಲ್ಜಾರ ಸಾಹಬ್,

. 'ಶಾಂತಿಯ ಆಶಾಕಿರಣ ' (ಅಮನ್ ಕಿ ಆಶಾ) - ಮೂಲ ಗುಲ್ಜಾರ ಸಾಹಬ್,

ಚಿತ್ರ

ಗುಲ್ಜಾರರು ಬರೆದ,  ಭಾರತ ಪಾಕಿಸ್ತಾನಗಳ ಬಾಂಧವ್ಯಕ್ಕಾಗಿ ಟೈಮ್ಸ್ ಆಫ್ ಇಂಡಿಯಾ ಹಾಗೂ ಪಾಕಿಸ್ತಾನದ ಜಂಗ್ ಸಮೂಹದ ಪತ್ರಿಕೆಗಳ ಜಂಟಿ ಸಹಯೋಗದಲ್ಲಿ ನಡೆದ ‘ಅಮನ್ ಕಿ ಆಶಾ’ ಕಾರ್ಯಕ್ರಮಗಳ ಸರಣಿ ಶೀರ್ಷಿಕೆ ಗೀತೆಯ ಅನುವಾದ

. 'ಶಾಂತಿಯ ಆಶಾಕಿರಣ ' (ಅಮನ್ ಕಿ ಆಶಾ)

                         ಅನುವಾದ : ಲಕ್ಷ್ಮೀಕಾಂತ ಇಟ್ನಾಳ

ನೋಡು ನೋಡಲ್ಲಿ ನೆರಳುಗಳ ಕೆಲವು, ದೂರ ದೂರದಲ್ಲಿ

ಕೂಗಿ ಕರೆದರೂ ಗತ ಕಾಲದಂತೆ ಮತ್ತಾರೂ ಬರಲಿಲ್ಲ ಇಲ್ಲಿ

ಬನ್ನಿ ಬಾರಿಸೋಣ ಢೋಲು, ಹಾಸೋಣ ನದಿಯನ್ನು ಮತ್ತಿಲ್ಲಿ

ಮದರಂಗಿ ಹಚ್ಚುತ್ತ, ಮಧುರ ಹಾಡುಗಳ ಕುಣಿ ಕುಣಿದು ಹಾಡಿಲ್ಲಿ

ಮಾಳಿಗೆಗಳೇರಿ, ಗಾಳಿಪಟ ಹಾರಿಸಿರಿ, ಓಣಿ ಜನವೆಲ್ಲ ಮತ್ತಿಲ್ಲಿ

 

ಸ್ವರ್ಗಸೀಮೆಯಿದು, ಸಂಚು, ಹೊಂಚುಗಳಿಗೆ ಜಗವೇಕೆ ಇಲ್ಲಿ

ಬನ್ನಿ ಗೆಳೆಯರೆ, ಆಡೋಣ ಕಬಡ್ಡಿ ಸರಹದ್ದಿನ ಗೆರೆಯಲ್ಲಿ

ಬಂದ ಬಂದವರೆಲ್ಲ ಮರಳಲಾರದೇ ಇರಲಿ ಅತಿಥಿಯಾಗಿಲ್ಲಿ

ನಜರಿನಲ್ಲೆ ಇರುವೆ, ನಜರಿಗೆ ಬೀಳದಿದ್ದರೂ ನೀನು

ನೀನಿಲ್ಲದಲ್ಲೂ , ಧ್ವನಿಗೂಡುವೆವು ನಿನ್ನ ದನಿಗೆ ನಾವು

ನಜರಿನಲ್ಲೆ ಇರುವೆ, ನಜರಿಗೆ ಬೀಳದಿದ್ದರೂ ನೀನು

ಈ ಹಾಡು ಕರೆಯುವುದು, ಈ ಹಾಡು ಮೊರೆಯುವುದು

ಬಾರದಿದ್ದರೂ ನೀನು ಇಲ್ಲಿ

 

ಇರುವುದಾದರೆ ಇರಲಿ ಗೆರೆಗಳಿವು ನೆಲದಲ್ಲಿ ಮಾತ್ರವಿರಲಿ

ಇಳಿಯದಿರಲಿ ಇಳಿಯದಿರಲಿ ಯಾರ ಎದೆಯಾಳದಲ್ಲಿ !

(ಚಿತ್ರ ಕೃಪೆ : ಅಂತರ್ಜಾಲದಿಂದ)

Rating
No votes yet

Comments

Submitted by abdul Sat, 01/31/2015 - 14:35

ನಜರಿನಲ್ಲೆ ಇರುವೆ, ನಜರಿಗೆ ಬೀಳದಿದ್ದರೂ ನೀನು....
"ನಜರ್" ಪದವನ್ನು ಭಾಷಾಂತರ ಮಾಡದ್ದಕ್ಕೆ ಕಾರಣ?
ಲಕ್ಷ್ಮಿಕಾಂತ್, ಅನುವಾಕ್ಕೆ ಮೂರು 'ಚಿಕ್ಕೆ'ಗಳನ್ನು ಕೊಟ್ಟಿದ್ದೇನೆ, ಇನ್ನಷ್ಟು ಉತ್ತಮ ಪಡಿಸಬಹುದಿತ್ತು -)
ವಂದನೆಗಳು,
ಅಬ್ದುಲ್

ಇಟ್ನಾಳರೆ,
ಅಬ್ದುಲ್ ಅವರು ಹೇಳಿದಂತೆ "ನಜರ್" ಶಬ್ದ, ನನಗೂ ಸ್ವಲ್ಪ ಕಿರಿಕಿರಿ ಅನಿಸಿತು. ಸಾಧ್ಯವಾದರೆ ಕವನ ತಿದ್ದಿ ಪ್ರತಿಕ್ರಿಯೆಯಲ್ಲೇ ಹಾಕಿ...
ಪಾಕಿಗಳು ಎಂದಿಗೂ ಬದಲಾಗುವುದಿಲ್ಲ. :(https://www.youtube.com/watch?v=wRExSOpFWcI

ತಮ್ಮ ಪ್ರತಿಕ್ರಿಯೆಗಳಿಗೆ ಧನ್ಯ ಅಬ್ದುಲ್ ರವರೇ ಹಾಗೂ ಗಣೇಶ ಜಿ, ತಮ್ಮ ವಿಶ್ಲೇಷಣಾತ್ಮಕ ಪ್ರತಿಕ್ರಿಯೆಗೆ ಧನ್ಯ. 'ಈ ಮೊದಲು ದೃಷ್ಟಿಯಲ್ಲೆ ಇರುವೆ, ದೃಷ್ಟಿಗೆ ಬೀಳದಿದ್ದರೂ ನೀನು, 'ನೋಟದಲ್ಲೆ ಇರುವೆ, ನೋಟಕೆ ಸಿಗದಿದ್ದರೂ ನೀನು' ಎಂದು ಅನುವಾದಿಸಿ ನೋಡಿದ್ದೆ. ಆದರೆ ಯಾಕೋ 'ನಜರು' ಕೂಡ ಶತಮಾನಗಳಿಂದ ಕನ್ನಡದಲ್ಲಿ ಧಾರಾಳವಾಗಿ ಬಳಸುವುದನ್ನು ಮನಗಂಡು, ಉದಾ: ನಿಮ್ಮ ನಜರು ತುಸು ನನ್ನ ಮಗನ ಮೇಲಿರಲಿ,, ....ಅವನ ನಜರು ಸರಿ ಇಲ್ಲ, ....ಏನು ಮಾರಾಯರೆ, ಏನ್ ಸಮಾಚಾರ? ನಜರಿಗೆ ಬಿದ್ದೇ ಇಲ್ಲ, ....ಸಾವಕಾರ ನಜರು ಆಕಿ ಮ್ಯಾಲ ಬಿದ್ದದ...ಇತ್ಯಾದಿ,,,.ಹೀಗಾಗಿ ಇದು ಅನ್ಯ ಪದವಲ್ಲವೆಂಬುದು ನನ್ನ ಅನಿಸಿಕೆ ಅಷ್ಟೆ. .. ತೌಲನಿಕವಾಗಿಯೂ 'ನಜರು' ಗೆ ಇರುವ ವಜನು 'ನೋಟ' ವಾಗಲಿ, 'ದೃಷ್ಟಿ'ಯಾಗಲಿ ಹೊಂದಿರುವುದಿಲ್ಲವೆನಿಸಿ, 'ನಜರು' ವನ್ನೇ ಉಪಯೋಗಿಸಿದೆ. ಆದರೆ, ಸಹೃದಯ ಮಿತ್ರರ ಆಶಯದಂತೆ, ಅಪ್ಪಟ ಕನ್ನಡ ಧಾತುವಿನ ಪದವನ್ನೇ ಬಳಸಿ, ಅನುವಾದದಲ್ಲಿ ಬಳಸುತ್ತೇನೆ. ಧನ್ಯವಾದ ಆತ್ಮೀಯ ಅಬ್ದುಲ್ ಜಿ, ಹಾಗೂ ಗಣೇಶ ಜಿ. ಗುಡ್ ಆಬ್ಲರ್ವೇಶನ್. ಅಂದಹಾಗೆ ಇಲ್ಲಿ ಇನ್ನೊಂದು ಮಾತು ಹೇಳಲೇಬೇಕು...'ಗುಲ್ಜಾರರು ಅನ್ಯಪದಗಳನ್ನು ತಮ್ಮ ಕಾವ್ಯಗಳಲ್ಲಿ ಸಲೀಸಾಗಿ ಬಳಸುವುದನ್ನು ಕಂಡಿದ್ದೇನೆ. ಉದಾ: ಕಜರಾ ರೆ ಕಜರಾ ರೆ ಹಾಡಿನಲ್ಲಿ, ಬರುವ ಈ ಸಾಲು ಗಮನಿಸಿ, 'ಪರ್ಸನಲ್ ಸೆ ಸವಾಲ್ ಕರೆತೇ ಹೋ', ಇಲ್ಲಿ 'ಪರ್ಸನಲ್' ಗೆ ಪರ್ಯಾಯ ಅವರಿಗೆ ಹಿಂದಿ ಶಬ್ದಕೋಶದಲ್ಲಿ ಸಿಗದಿರುವುದು ಈ ಪದಬಳಕೆಗೆ ಕಾರಣವೆಂದು ಅವರು ಒಂದು ಕಡೆ ಹೇಳಿದ್ದಿದೆ. ಇಂತಹ ವಿಷಯಗಳ ಚರ್ಚೆ ಸಂಪದದಲ್ಲಿ ಹೆಚ್ಚು ಹೆಚ್ಚು ನಡೆಯಲಿ ಎಂದು ಆಶಿಸುತ್ತ, ತಮಗೆ ವಂದನೆಗಳು.

ಇಟ್ನಾಳರೆ, ನಜರು ಶಬ್ದದ ಬಳಕೆ ಬಗ್ಗೆ ತಮ್ಮ ಉತ್ತರ ನೋಡಿದ ಮೇಲೆ ಸರಿಯೆನಿಸಿತು. ಆದರೆ...
>>>ಕಜರಾ ರೆ ಕಜರಾ ರೆ ಹಾಡಿನಲ್ಲಿ, ಬರುವ ಈ ಸಾಲು ಗಮನಿಸಿ, 'ಪರ್ಸನಲ್ ಸೆ ಸವಾಲ್ ಕರೆತೇ ಹೋ', ಇಲ್ಲಿ 'ಪರ್ಸನಲ್' ಗೆ ಪರ್ಯಾಯ ಅವರಿಗೆ ಹಿಂದಿ ಶಬ್ದಕೋಶದಲ್ಲಿ ಸಿಗದಿರುವುದು ಈ ಪದಬಳಕೆಗೆ ಕಾರಣವೆಂದು ಅವರು ಒಂದು ಕಡೆ ಹೇಳಿದ್ದಿದೆ.
-ಇದು ಮಾತ್ರ ತಪ್ಪು. ಹಿಂದಿ ಮತ್ತು ಉರ್ದುವಿನಲ್ಲಿ ಪ್ರಚಂಡರಾಗಿರುವ ಗುಲ್ಜಾರ್, ಪರ್ಸನಲ್ ಗೆ ಪರ್ಯಾಯ ಪದ ಸಿಗಲಿಲ್ಲ ಎನ್ನುವುದು. ಕಾವ್ಯ ಬರೆಯುವುದಕ್ಕೂ ಸಿನೆಮಾಗೆ ಹಾಡು ಬರೆಯುವುದಕ್ಕೂ ವ್ಯತ್ಯಾಸವಿದೆ. ಸಾಮಾನ್ಯ ಬಳಕೆಯಲ್ಲಿರುವ ಪದಗಳ ಉಪಯೋಗ ಸನ್ನಿವೇಶಕ್ಕೆ ತಕ್ಕಂತೆ ಉಪಯೋಗಿಸುವೆ ಅಂದಿರುವರು. ಕಜ್ ರಾ ರೆ...ಹಾಡಿನ ಬಗ್ಗೆ ಇಲ್ಲಿ ಓದಿ- http://www.livemint.com/Leisure/fEZBiYCAbOdPLGCPoyOO3H/Gulzar--Words-sho...

ಆತ್ಮೀಯ ಗಣೇಶ್ ಜಿ, ಧನ್ಯವಾದಗಳು. ನಿಜ ನೀವಂದದ್ದು, ಅವರು ಸನ್ನಿವೇಶಕ್ಕೆ ತಕ್ಕಂತೆ ಎಂದಿರುವುದನ್ನು, ನಾನು ಆ ರೀತಿ ಓದಿದಂತೆ ತಿಳಿದಿದ್ದೆ. ಬಹುಶ: ನಾನು ನುಸ್ರತ್ ಮುನ್ನಿ ಕಬೀರ್ ರ ಇನ್ ದಿ ಕಂಪನಿ ಆಫ್ ಎ ಪೊಯೆಟ್ ನಲ್ಲಿ ಇದನ್ನೇ ಓದಿದ್ದು, ಹಾಗೆ ತಿಳಿದಿದ್ದುದನ್ನು ಸರಿಪಡಿಸಿರುವುದಕ್ಕೆ ತಮಗೆ ಅಭಿನಂದನೆಗಳು ಮಿತ್ರರೆ.

Submitted by kavinagaraj Sun, 02/01/2015 - 13:41

>>ಇರುವುದಾದರೆ ಇರಲಿ ಗೆರೆಗಳಿವು ನೆಲದಲ್ಲಿ ಮಾತ್ರವಿರಲಿ
ಇಳಿಯದಿರಲಿ ಇಳಿಯದಿರಲಿ ಯಾರ ಎದೆಯಾಳದಲ್ಲಿ !>>
ಮನಮುಟ್ಟುವ ಸಾಲುಗಳು. ಧನ್ಯವಾದ, ಇಟ್ನಾಳರೇ.

ಹಿರಿಯ ಕವಿಗಳು, ಲೇಖಕರು, ಚಿಂತಕರಾದ ಸಹೃದಯತೆಯ ಕವಿನಾ ಸರ್ ಜಿ, ತಮ್ಮ ಪ್ರತಿಕ್ರಿಯೆಗೆ ವಂದನೆಗಳು ಸರ್.

Submitted by swara kamath Sun, 02/01/2015 - 19:29

ಕವಿ ಗುಲ್ಜಾರ್ ಅವರ ಆಶಯದಂತೆ ಜಗದ ಜನ ಸ್ಪಂದಿಸಿದರೆ ಇನ್ನೊಂದು ಸ್ವರ್ಗದ ನೆನಪೇ ಬಾರದು.ದ್ವೇಷ, ಈರ್ಷೆ ,ಹಿಂಸೆಯಿಂದ ದೂರ ಸರಿದು ಸೋದರ ಭಾವದಿಂದ ಕೈಜೋಡಿಸಿದಾಗ ಮಾತ್ರ ಈ ಧರೆಯ ಮೇಲೆ ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬಹುದು.
ಕವನದ ಅನುವಾದ ಸರಳವಾಗಿ ಅರ್ಥಪೂರ್ಣವಾಗಿದೆ ಇಟ್ನಾಳರೆ, ವಂದನೆಗಳು .ರಮೇಶ ಕಾಮತ್

ರಮೇಶ್ ಕಾಮತ ರವರೇ, ತಮ್ಮ ಪ್ರೀತಿಪೂರ್ವಕ ಮೆಚ್ಚುಗೆಗೆ ಕೃತಜ್ಞತಾ ಪೂರ್ವಕ ವಂದನೆಗಳು ಸರ್.

Submitted by H A Patil Tue, 02/03/2015 - 20:21

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಅಮನ್ ಕಿ ಆಶಾ ಕವನದ ಅನುವಾದ ಜೊತೆಗೆ ನಜರ್ ಪದದ ಬಳಕೆಯ ಬಗೆಗೆ ನಡೆದ ವಿಚಾರ ವಿನಿಮಯ ಖುಷಿ ನೀಡಿತು, ಜಯಪುರದ ತಮ್ಮ ಪ್ಪವಾಸ ಮತ್ತು ಅಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಹೇಗಿತ್ತು, ನಿಮ್ಮ ಅನುಭವಗಳನ್ನು ಸಂಪದಿಗರೊಂದಿಗೆ ಹಂಚಿಕೊಳ್ಳಬಹುದೆ