February 20, 2012 - 8:30am
ಒಳಗೆ ನುಗ್ಗುತ ದಟ್ಟ ಕಾಡಿನ
ಕೊಳಗಳೊಳಗಡೆ ಮುಳುಗಿ ಪರ್ವತ
ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ;
ತಿಳಿವೆ ಕಾಣದ ಜಡಮತಿಗಳಿವು
ತಿಳಿಯರಯ್ಯೋ ಮನದ ಕೊಳದಲ-
ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು!
ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ ಶಿವಾನಂದಲಹರಿ, ಶ್ಲೋಕ ೯):
ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ ||
-ಹಂಸಾನಂದಿ
ಕೊ: ಹಿಂದೆ ಈ ಪದ್ಯವನ್ನೊಮ್ಮೆ ಅನುವಾದಿಸಿದ್ದೆ. ಆದರೆ ಈ ವಾರದ ಪದ್ಯಪಾನಕ್ಕೆಂದು ಅದೇ ಅನುವಾದವನ್ನು ಬದಲಾಯಿಸಿ ಭಾಮಿನೀ ಷಟ್ಪದಿಗೆ ಅಳವಡಿಸಿದ್ದೇನೆ - ಶಿವರಾತ್ರಿಯ ಈ ದಿನದಂದು.
ಚಿತ್ರ: http://en.wikipedia....
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:










ಪ್ರತಿಕ್ರಿಯೆಗಳು
ಉ: ಶಿವನ ಪೂಜೆಯ ಹೂ
ತಿಳಿವೆ ಕಾಣದ ಜಡಮತಿಗಳಿವು
ತಿಳಿಯರಯ್ಯೋ ಮನದ ಕೊಳದಲ-
ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು!
------------------------------------------------------------------
>>> ಅದು ದಿಟವಾದ ಮಾತು..
ಹಂಸನ0ದಿ ಅವ್ರೆ ಶಿವರಾತ್ರಿ ಸಂದರ್ಭದಲ್ಲಿ ಒಳ್ಳೆಯ ಕವನ ರಚಿಸಿದ್ದೀರಿ..
ತುಂಬಾ ಚೆನ್ನಾಗಿದೆ...
>>>. ಆ ಮೇಲೆ ನಾ ಮರು ಛಾಪಿಸಿದ ನಿಮ್ಮ ಕವನದ ಸಾಲ್‌ಗಳು ನನಗೆ
ಬಸವಣ್ಣ ಅವ್ರ
------------------------------------------------------------------------
ಎನ್ನ ಕಾಲೇ ಕಂಬ ಶಿರವೇ ಹೊನ್ನ ಕಲಶವಯ್ಯ ..... ನೆನಪಿಸಿತು.
-----------------------------------------------------------------------
***********ನಿಮಗೆ ಮಹಾ ಶಿವರಾತ್ರಿಯ ಶುಭಾಶಯಗಳು ************
ಆ ಪರಮಾತ್ಮನು ನಿಮ್ಮೆಲ್ಲರಿಗೆ ಸಕಲ ಸನ್ ಮಂಗಳವನ್ನುಂಟು ಮಾಡಲಿ...
ಉ: ಶಿವನ ಪೂಜೆಯ ಹೂ
ಹಂಸಾನಂದಿಯವರೆ ಆದಿಶಂಕರಾಚಾರ್ಯರ ಶಿವಾನಂದಲಹರಿಯ ಛಂದೋಬದ್ಧವಾದ ಸೊಗಸಾದ ಅನುವಾದ ಭಾವತುಂಬಾ ಚೆನ್ನಾಗಿದೆ.
ಧನ್ಯವಾದಗಳು.
ಉ: ಶಿವನ ಪೂಜೆಯ ಹೂ
ಧನ್ಯವಾದಗಳು, ಸಪ್ತಗಿರಿವಾಸಿ ಮತ್ತು ಪದ್ಮ ಅವರೆ.
ಉ: ಶಿವನ ಪೂಜೆಯ ಹೂ
ಪದ್ಯದ ಭಾವವು ಸುಂದರ ಹಾಗೆ ನಿಮ್ಮ ಅನುವಾದ ಸಹ !
ಉ: ಶಿವನ ಪೂಜೆಯ ಹೂ
ತುಂಬ ಸುಂದರಭಾವ -- ಸಂಸ್ಕೃತ ಮೂಲದಲ್ಲೂ ಅದರ ಅನುವಾದದಲ್ಲೂ. ಧನ್ಯ ಹಂಸಾನಂದಿಯವರೆ
ಉ: ಶಿವನ ಪೂಜೆಯ ಹೂ
ಹಂಸಾನಂದಿಯವರೆ,
ಆದಿಶಂಕರಾಚಾರ್ಯರ ಕಾಲದಿಂದಲೂ ಎಷ್ಟು ಬುದ್ಧಿಮಾತು ಹೇಳಿದರೂ ಜನ ಬದಲಾಗಲಿಲ್ಲ.
ಪರ್ವತ ಏರುವ ಬದಲು ಪಕ್ಕದ ಮನೆ ಗೇಟು ಏರಿ ಹೂವಕೊಯ್ವರು ಶಿವನ ಪೂಜೆಗೆ..ಬಹುಷಃ ಮನದ ಕೊಳ ಬತ್ತಿ ಹೋಗಿಹುದು.
ಶಿವರಾತ್ರಿ ದಿನ ಜನಗಳ ನಡುವೆ ಒದ್ದಾಡಿ ಒಳಗೆ ನುಗ್ಗುತ (ದಟ್ಟ ಕಾಡಿನ)ದೇವಸ್ಥಾನ ಹೊಕ್ಕಿ ಪೂಜಿಸುವರು- ಯಾಕೆ- ಮನದಲ್ಲಿ ಮನೆಯಲ್ಲಿ ಪೂಜಿಸಲು ಶಿವನಿಗೆ ಮೆಚ್ಚಿಗೆಯಾಗದೆ?
-ಗಣೇಶ.