26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಶೈವಮತದ ಹಲವು ಮುಖಗಳು: ಭಾಗ ೫ ವೀರಶೈವಮತ

August 11, 2012 - 6:15am
makara

    ವೀರಶೈವಮತವನ್ನು 'ಲಿಂಗಾಯತ ಧರ್ಮ' ಅಥವಾ 'ಪಂಗಡ'ವೆಂದೂ ಕರೆಯಲಾಗಿದ್ದು, ಇದು ಶೈವಮತಗಳಲ್ಲಿನ ಒಂದು ವೈವಿಧ್ಯತೆಯಾಗಿದೆ ಮತ್ತು ಇದು ದಕ್ಷಿಣ ಭಾರತದ ಕರ್ಣಾಟಕ ಪ್ರಾಂತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಸಂಪ್ರದಾಯವಾದಿಗಳು ಈ ಧರ್ಮವು ಅನುಭಾವಿಗಳಾದ ರೇವಣಾರಾಧ್ಯ, ಮರುಳಾರಾಧ್ಯ, ಪಂಡಿತಾರಾಧ್ಯ ಮೊದಲಾದವರಿಂದ ಸ್ಥಾಪಿಸಲ್ಪಟ್ಟ ಪುರಾತನ ಧರ್ಮವೆಂದು ಪ್ರತಿಪಾದಿಸಿದರೆ, ಇನ್ನಿತರರು ಅದನ್ನು ವೀರಶೈವ ಧರ್ಮದ ಪೌರಾಣಿಕತೆಯನ್ನು ನಿರೂಪಿಸಲು ಈ ಕಾಲ್ಪನಿಕ ವ್ಯಕ್ತಿಗಳನ್ನು ಚಿತ್ರಿಸಲಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಆದರೆ ಎಲ್ಲರೂ ಒಪ್ಪಬಹುದಾದಂತಹ ಸಂಗತಿಯೇನೆಂದರೆ, ದೊರೆ ಬಿಜ್ಜಳನ (ಆಳ್ವಿಕೆಯ ಕಾಲ ಕ್ರಿ.ಶ. ೧೧೫೭ ರಿಂದ ೧೧೬೭) ಮಹಾಮಂತ್ರಿಯಾಗಿದ್ದ ಕ್ರಿ.ಶ. ೧೧೬೮ ಶಿವಕೈರಾದ ಬಸವಣ್ಣ ಅಥವಾ ಬಸವ ಎಂದೂ ಕರೆಯಲ್ಪಡುವ ಬಸವೇಶ್ವರರು, ಅದರ ಸ್ಥಾಪಕರಲ್ಲದಿದ್ದರೂ ವೀರಶೈವ ಮತದ ಪ್ರಧಾನ ಸಂಯೋಜಕರು ಮತ್ತು ಸುಧಾರಕರು. 

       ಅಲ್ಲಮ ಪ್ರಭು, ಚನ್ನಬಸವಣ್ಣ, ಮತ್ತು ಮಹಿಳಾ ಸಂತರಾದ ಅಕ್ಕ ಮಹಾದೇವಿಯಂತಹ ಮುನ್ನೂರಕ್ಕೂ ಅಧಿಕ ಸಂತರ ಸಮೂಹವೇ ಲಿಂಗಾಯತ ಚಳುವಳಿಯನ್ನು ಶ್ರೀಮಂತಗೊಳಿಸಿದೆ. ಈ ಮಹನೀಯರು ಅವರ ಕಾಲದ   ಜನರ ಸಾಮಾಜಿಕ ಮತ್ತು ಧಾರ್ಮಿಕ ಜೀವನ ಶೈಲಿಗಳಲ್ಲಿ ಕ್ರಾಂತಿಯನ್ನುಂಟು ಮಾಡಿದರು. 
 
ಪ್ರಧಾನ ತತ್ವಗಳು
 
        'ವೀರಶೈವಮತ'ದ ವಿಶೇಷ ಲಕ್ಷಣವೆಂದರೆ ಅದು 'ಶಿವಲಿಂಗ' ಅಥವಾ 'ಲಿಂಗ'ಕ್ಕೆ ವಿಶೇಷ ಮಹತ್ವವನ್ನು ನೀಡಿ, ಅದನ್ನು ಅತ್ಯಂತ ಪವಿತ್ರಭಾವನೆ ಕಾಣುವುದಲ್ಲದೆ, ಶ್ರದ್ಧಾ ಭಕ್ತಿಗಳಿಂದ ಪೂಜಿಸುತ್ತಾರೆ; ಆದ್ದರಿಂದ ಇದಕ್ಕೆ 'ಲಿಂಗಾಯತ ಮತ' (ಲಿಂಗವನ್ನು ಮೂಲಾಧಾರವೆಂದು ತಿಳಿಯುವ ಮತ) ಎಂದು ಕರೆದಿರುವುದು ಅತ್ಯಂತ ಸೂಕ್ತವಾಗಿದೆ. 'ಲಿಂಗ'ವನ್ನು ಯೋಗ್ಯ ಗುರುವಿನಿಂದ  ದೀಕ್ಷೆಯ ಮೂಲಕ ಪಡೆದುಕೊಂಡ ನಂತರ ಅದನ್ನು ದೇಹದಲ್ಲಿ ಯಾವಾಗಲೂ ಧಾರಣೆ ಮಾಡಬೇಕು, ಇದರಿಂದ ದೇಹದ ಪ್ರತಿ ಅಂಗವೂ ಶುದ್ಧಿಯಾಗುತ್ತದೆ. 
 
         ಈ ಧರ್ಮದ ಪ್ರಧಾನ ತತ್ವಗಳೆಂದರೆ: ಶಿವನು ಸರ್ವಶ್ರೇಷ್ಠನಾದ ಭಗವಂತ. ಲಿಂಗವು ಅವನ ಪ್ರಧಾನ ಪ್ರತೀಕ ಅಥವಾ ಚಿಹ್ನೆ. 'ನಮಃ ಶಿವಾಯ' ಎನ್ನುವ ಪಂಚಾಕ್ಷರಿ ಮಂತ್ರವು ಮೋಕ್ಷಸಾಧಕವಾದ ಆಧ್ಯಾತ್ಮಿಕ ಸೂತ್ರ. 'ಪಂಚಾಚಾರ'ಗಳು ಮತ್ತು 'ಅಷ್ಟಾವರಣ'ಗಳು ಮುಖ್ಯವಾದ ಸದಾಚಾರ ಸಂಹಿತೆಗಳು. 'ಶಕ್ತಿವಿಶಿಷ್ಠಾದ್ವೈತ'ವು ಈ ಪದ್ಧತಿಯ ಮೂಲ ಸಿದ್ಧಾಂತ. 
 
         ಸೃಷ್ಟಿ ಕ್ರಿಯೆಯನ್ನು ಕುರಿತು ಕಾಶ್ಮೀರ ಶೈವಮತವು ಪ್ರತಿಪಾದಿಸಿರುವ ೩೬ ತತ್ವಗಳನ್ನೇ ವೀರಶೈವಮತವು ಅಳವಡಿಸಿಕೊಂಡಿದೆ. 
 
ಅನುಸರಿಸಬೇಕಾದ ನೀತಿ ನಿಯಮಾವಳಿಗಳು:
 
     ಮೂರು ರೀತಿಯ ಮಲಗಳು (ಈ ಮೊದಲೇ ತಿಳಿಸಿರುವ - ಆಣವಮಲ, ಮಾಯೀಯಮಲ ಮತ್ತು ಕರ್ಮಮಲ) ಇಲ್ಲದಿದ್ದರೆ ಜೀವಿ ಅಥವಾ ಪಶು(ವ್ಯಕ್ತಿ)ವು ಶಿವ(ಪತಿ)ನಷ್ಟೇ ಮೇಧಾವಿಯಾಗಿರುತ್ತಿದ್ದ. ಈ ಮಲಗಳಿಂದ ವಿಮುಕ್ತನಾಗಲು, ವ್ಯಕ್ತಿಯು ಸಕಾಲದಲ್ಲಿ ಯೋಗ್ಯ ಗುರುವಿನ ಮೂಲಕ ದೀಕ್ಷೆಯನ್ನು ಪಡೆಯಬೇಕು. ದೀಕ್ಷೆಯು ಸರಳವಾದ ಧಾರ್ಮಿಕ ವಿಧಿಯಾಗಿದ್ದು, ಗುರುವು ಲಿಂಗವನ್ನು ಪೂಜಿಸಿ ಅದನ್ನು ಶಿಷ್ಯನ ಕೊರಳಿಗೆ ಕಟ್ಟುತ್ತಾನೆ; ಅದು ಅವನ ಕೊರಳಲ್ಲಿ ಕಂಠಾಭರಣದಂತೆ ತೂಗಾಡುತ್ತಿರುತ್ತದೆ. ಲಿಂಗವನ್ನು ಸಾಮಾನ್ಯವಾಗಿ ಬೆಳ್ಳಿಯ ಕರಡಿಗೆಯಲ್ಲಿ ಇರಿಸಿರುತ್ತಾರೆ. ಈ ಮೂಲಕ ಗುರುವು "ನಮಃ ಶಿವಾಯ" ಎನ್ನುವ ಮಂತ್ರೋಪದೇಶವನ್ನು ಕೊಡುವುದಲ್ಲದೆ ಆಧ್ಯಾತ್ಮಿಕ ಶಕ್ತಿಯನ್ನೂ ಶಿಷ್ಯನಿಗೆ ಧಾರೆಯೆರೆಯುತ್ತಾನೆ. ಮಹಿಳೆಯರೂ ಕೂಡಾ ಈ ಪಂಗಡದಲ್ಲಿ ದೀಕ್ಷೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. 
 
   ದೀಕ್ಷೆಯನ್ನು ಪಡೆದುಕೊಂಡ ವ್ಯಕ್ತಿಯು ವೀರಶೈವಮತವು ಪ್ರಚುರಪಡಿಸಿರುವ, 'ಪಂಚಾಚಾರ'ಗಳೆಂದು ಕರೆಯಲ್ಪಡುವ ಐದು ನಿಯಮಗಳನ್ನು ಪಾಲಿಸುವುದಲ್ಲದೆ ತನ್ನನ್ನು ತಾನು 'ಅಷ್ಟಾವರಣ'ಗಳಿಂದ (ಎಂಟು ರೀತಿಯ ಕವಚಗಳಿಂದ) ಕಾಪಾಡಿಕೊಳ್ಳಬೇಕು. 
 
ಪಂಚಾಚಾರಗಳು ಈ ರೀತಿ ಇವೆ:
 
೧) ಲಿಂಗಾಚಾರ - ಪ್ರತಿನಿತ್ಯವೂ ತನಗೆ ದೀಕ್ಷೆಯಲ್ಲಿ ಕೊಟ್ಟ ಲಿಂಗವನ್ನು ಪೂಜಿಸುವುದು.
೨) ಸದಾಚಾರ - ಹಣವನ್ನು ನೀತಿಯುಕ್ತ ಮಾರ್ಗದಿಂದ ಗಳಿಸಬೇಕು ಮತ್ತು ಉಳಿಕೆಯನ್ನು ಅವಶ್ಯಕತೆಯಿದ್ದವರಿಗೆ ಮತ್ತು ಜಂಗಮರಿಗೆ (ಸಂಚಾರಿಗಳಾದ ಧರ್ಮೋಪದೇಶಕರು) ಸಹಾಯ ಮಾಡಲು ಉಪಯೋಗಿಸಬೇಕು.
೩) ಶಿವಾಚಾರ - ಎಲ್ಲಾ ಲಿಂಗಾಯತರನ್ನು ಶಿವಸಮಾನರೆಂದು ಭಾವಿಸಿ ಒಂದೇ ರೀತಿಯಾಗಿ ಕಾಣಬೇಕು.
೪) ಭೃತ್ಯಾಚಾರ - ಶಿವ ಮತ್ತು ಅವನ ಭಕ್ತರಲ್ಲಿ ದೈನ್ಯತೆಯನ್ನು ಬೆಳೆಸಿಕೊಳ್ಳಬೇಕು. 
೫) ಗಣಾಚಾರ - ತನ್ನ ಧರ್ಮವನ್ನು ಅತ್ಯಂತ ಉತ್ಸಾಹದಿಂದ ಕಾಪಾಡಬೇಕು, ತನ್ನ ದೇವರು ಮತ್ತು ಧರ್ಮದ ಅವಹೇಳನೆ ಮಾಡುವವರ ಅಥವಾ ಅಗೌರವದಿಂದ ಕಾಣುವವರ ವಿರುದ್ಧ ಪ್ರತಿಭಟಿಸಬೇಕು ಮತ್ತು ಪ್ರಾಣಿಹಿಂಸೆಯನ್ನು ಸಹಿಸಬಾರದು. 
 
ಅಷ್ಟಾವರಣಗಳು ಯಾವುವೆಂದರೆ: 
 
೧) ಗುರು - ಗುರುವಿನಲ್ಲಿ ನಂಬಿಕೆ ಮತ್ತು ಗೌರವಗಳನ್ನಿಡುವುದು.
೨) ಲಿಂಗ - ಲಿಂಗವನ್ನು ಪೂಜ್ಯ ಭಾವನೆ ಮತ್ತು ಭಕ್ತಿಭಾವದಿಂದ ಕಾಣುವುದು.
೩) ಜಂಗಮ - ವಿರಕ್ತರಲ್ಲಿ ಮತ್ತು ಜಂಗಮರಲ್ಲಿ ಭಕ್ತಿಯನ್ನಿರಸಬೇಕು.
೪) ಪಾದೋದಕ - ಗುರು ಅಥವಾ ಜಂಗಮರ ಪಾದಗಳನ್ನು ತೊಳೆದ ನೀರಿನಿಂದ ತನ್ನನ್ನು ಪ್ರೋಕ್ಷಿಸಿಕೊಳ್ಳುವುದು ಅಥವಾ ಆ ನೀರನ್ನು ಸೇವಿಸುವುದು. 
೫) ಪ್ರಸಾದ - ಪೂಜೆಗೆ ನೈವೇದ್ಯವಾಗಿ ಇರಿಸಿದ ಆಹಾರವನ್ನು ಸ್ವೀಕರಿಸುವುದು. 
೬) ಭಸ್ಮ - ಪ್ರವಿತ್ರ ಭಸ್ಮವನ್ನು (ವಿಭೂತಿಯನ್ನು) ಹಣೆಗೆ ಮತ್ತು ದೇಹದ ಇತರ ಭಾಗಗಳಲ್ಲಿ ವಿಧಿಪೂರ್ವಕವಾಗಿ ಧರಿಸುವುದು. 
೭) ರುದ್ರಾಕ್ಷ - ರುದ್ರಾಕ್ಷಿಯ ಮಣಿಹಾರದಿಂದ ಜಪವನ್ನು ಕೈಗೊಳ್ಳುವುದು ಮತ್ತು ರುದ್ರಾಕ್ಷಿಯನ್ನು ದೇಹದಲ್ಲಿ ಧರಿಸುವುದು.
೮) ಮಂತ್ರ - ದೀಕ್ಷಾ ಗುರುವಿನ ಆದೇಶದಂತೆ ಪಂಚಾಕ್ಷರಿ ಮಂತ್ರವಾದ 'ನಮಃ ಶಿವಾಯ'ವನ್ನು ಪದೇ ಪದೇ ಹೇಳಿಕೊಳ್ಳುತ್ತಿರುವುದು. 
 
   'ಪಂಚಾಚಾರ'ಗಳು ಮತ್ತು 'ಅಷ್ಟಾವರಣ'ಗಳು 'ವೀರಶೈವ' ಅಥವಾ 'ಲಿಂಗಾಯತ'ನನ್ನು ಎಲ್ಲಾ ವಿಧವಾದ ಮಲಗಳಿಂದ ಶುದ್ಧಗೊಳಿಸುವುದರಿಂದ - ಕಡೇ ಪಕ್ಷ ತಾತ್ವಿಕವಾಗಿ - ಅವನು ಯಾವುದೇ ರೀತಿಯ ಶಾಸ್ತ್ರವಿಧಿತ/ಧಾರ್ಮಿಕ ಸೂತಕಗಳನ್ನು ಆಚರಿಸಬೇಕಾಗಿಲ್ಲ ಮತ್ತು ಸತ್ತನಂತರ ಅವನ ದೇಹವನ್ನು ಸುಡುವ ಅವಶ್ಯಕತೆಯಿಲ್ಲ. ಆದಕಾರಣ ಅದನ್ನು ಹೂಳುತ್ತಾರೆ. 
 
ಶಕ್ತಿವಿಶಿಷ್ಟಾದ್ವೈತದ ಸಿದ್ಧಾಂತಗಳು
 
      ರಾಮಾನುಜರ 'ವಿಶಿಷ್ಟಾದ್ವೈತ' ಪದ್ಧತಿಯಂತೆ ವೀರಶೈವರೂ ಕೂಡಾ ಒಂದು ರೀತಿಯ ವಿಶಿಷ್ಟಾದ್ವೈತ ತತ್ವವನ್ನು ಒಪ್ಪಿಕೊಳ್ಳುತ್ತಾರೆ ಆದರೆ ಇದು ಅದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ರಾಮಾನುಜರ ವಿಶಿಷ್ಟಾದ್ವೈತ ಪದ್ಧತಿಯಲ್ಲಿ, ಬ್ರಹ್ಮವು ಅದ್ವೈತಿ (ದ್ವಿತೀಯವಿಲ್ಲದ್ದು) ಆದರೆ ವಿಶೇಷವಾದದ್ದು (ವಿಶಿಷ್ಟ); ಏಕೆಂದರೆ ಅದರಲ್ಲಿ ಪ್ರಕೃತಿ (ಚಿತ್) ಮತ್ತು ಜೀವರುಗಳು (ಅಚಿತ್) ಎನ್ನುವ ಎರಡು ಅಂಶಗಳು ಅವನೊಳಗೆ ಅಂತರ್ಗತವಾಗಿ ಬೇರ್ಪಡಿಸಲಾಗದ ಸಂಗತಿಗಳಾಗಿ ಇವೆ. ಆದರೆ ವೀರಶೈವ ಮತದಲ್ಲಿ, ವಿಶಿಷ್ಟತ್ವವು ಕೇವಲ ಅವನ 'ಶಕ್ತಿ'ಗೆ ಪರಿಮಿತವಾಗಿದೆ; ಅಂದರೆ ಶಿವನ ಆ ಶಕ್ತಿಯಿಂದ ಈ ಪ್ರಪಂಚದ ಸೃಷ್ಟಿ, ಸ್ಥಿತಿ ಮತ್ತು ಲಯಗಳು ಉಂಟಾಗುತ್ತವೆ. ಬ್ರಹ್ಮ ಅಥವಾ ದೇವರು ಮತ್ತು ಅವನ ಶಕ್ತಿಯು ಬೇರೆಯಲ್ಲ (ವಿಭಿನ್ನವಲ್ಲ); ಬೆಂಕಿ ಮತ್ತು ಅದರ ಶಾಖದಂತೆ ಅಥವಾ ಬೆಳಕು ಮತ್ತು ಸೂರ್ಯನ ಹಾಗೆ. ಮತ್ತು ಬ್ರಹ್ಮನಿಗೆ ಯಾವಾಗಲೂ ತನ್ನ ಶಕ್ತಿಯ ಕುರಿತಾಗಿ ಅರಿವಿರುತ್ತದೆ. ಆದ್ದರಿಂದ ಇಲ್ಲಿ ವಿಶಿಷ್ಟತ್ವವು ಅಂತರ್ಗತವಾಗಿರುವ ಶಕ್ತಿಯ ಕುರಿತಾಗಿ ಕೇವಲ ವಿಮರ್ಶೆ ಅಥವಾ 'ಸ್ವಯಂಪ್ರಜ್ಞೆ'ಗೆ  ಪರಿಮಿತವಾಗಿದೆ. ಆದ್ದರಿಂದ ಈ ಪದ್ಧತಿಗೆ 'ಶಕ್ತಿವಿಶಿಷ್ಟಾದ್ವೈತ' ಎಂದು ಹೆಸರಾಗಿದೆ. 
 
ಷಟ್‍ಸ್ಥಲ ಸಿದ್ಧಾಂತ
 
        ವೀರಶೈವ ಪಂಗಡದಲ್ಲಿ 'ಶಿವ' ಅಥವಾ 'ಬ್ರಹ್ಮ'ವು ಸ್ಥಲವೆಂದು ಕರೆಯಲ್ಪಟ್ಟಿದೆ. ಅವನು 'ಸ್ಥಲ'ನು ಏಕೆಂದರೆ ಅವನು ಆಕಾಶ ಅಥವಾ ಸ್ಥಲದಂತೆ ಎಣೆಯಿಲ್ಲದವನು ಅಥವಾ ಅನಂತನು. ಸ್ಥಲ ಪದದ ನಿಷ್ಪತ್ತಿಯಿಂದಲೂ ಅದನ್ನು ಯಾವುದರಿಂದ ಪ್ರಪಂಚವು ಆವಿರ್ಭಾವಗೊಂಡು, ನೆಲೆಗೊಂಡು ಮತ್ತು ಯಾವುದರಲ್ಲಿ ಲಯವಾಗುತ್ತದೋ ಅದು ಸ್ಥಲ ಎಂದು ಅರ್ಥೈಸಬಹುದು. (ಸ್ಥ = ನೆಲೆಗೊಂಡ; ಲ=ಲೀನವಾಗುವ/ಲಯವಾಗುವ). 
 
          'ಷಟ್‍ಸ್ಥಲ ಸಿದ್ಧಾಂತ'ದ ಪ್ರಕಾರ, ಶಿವನು ತನ್ನನ್ನು ತಾನು ಎರಡು ರೂಪಗಳಾಗಿ ವಿಭಾಗಿಸಿಕೊಳ್ಳುತ್ತಾನೆ, ಅವೆಂದರೆ - 'ಲಿಂಗ' ಮತ್ತು 'ಅಂಗ', ಇದರಲ್ಲಿ ಮೊದಲನೆಯದು ತಾನೇ ಆದರೆ ಎರಡನೆಯದು 'ಜೀವ'ನು. ಇವೆರಡೂ ಮುಂದಿನ ಹಂತದಲ್ಲಿ ಮೂರು ಮೂರು ಭಾಗಗಳಾಗಿ ವಿಭಜಿಸಲ್ಪಡುತ್ತವೆ; ಅದರಲ್ಲಿ ಲಿಂಗವು - 'ಇಷ್ಟಲಿಂಗ', 'ಪ್ರಾಣಲಿಂಗ' ಮತ್ತು 'ಭಾವಲಿಂಗ'ವಾದರೆ, ಅಂಗವು - 'ತ್ಯಾಗಾಂಗ', 'ಭೋಗಾಂಗ' ಮತ್ತು 'ಯೋಗಾಂಗ'ವಾಗುತ್ತದೆ. 
 
     ಯಾವಾಗ ಜೀವಿಯು ಈ ಪ್ರಪಂಚದ ಮೇಲಿನ ಮಮತೆಯನ್ನು ತೊರೆಯುತ್ತಾನೆಯೋ, ಆಗ ಅವನು 'ತ್ಯಾಗಾಂಗ'ನೆಂದು ಕರೆಯಲ್ಪಟ್ಟು, ಗುರುವು ಅವನಿಗೆ ದೀಕ್ಷಾಸಮಯದಲ್ಲಿ 'ಇಷ್ಟಲಿಂಗ'ವನ್ನು ಕೊಡುತ್ತಾನೆ; ಅದು ಅವನಿಗೆ ಉಪಾಸನೆ ಅಥವಾ ಪೂಜೆಗೆ ಸಾಧನವಾಗುತ್ತದೆ. ಯಾವಾಗ ಜೀವಿಯು ಇಷ್ಟಲಿಂಗದ ಉಪಾಸನೆಯಿಂದ ಪರಿಶುದ್ಧನಾಗಿ, ಅವನು ಪ್ರಾಪಂಚಿಕ ಭೋಗಗಳನ್ನು ಶಿವನ ಕೃಪೆಯೆಂದು ತಿಳಿದು ಅನುಭವಿಸುತ್ತಾನೆಯೋ, ಆಗ ಅವನು 'ಭೋಗಾಂಗ'ನಾಗಿ 'ಪ್ರಾಣಲಿಂಗ' (ಅವನ ಹೃದಯದಲ್ಲಿ ಸ್ಥಾಪಿಸಲ್ಪಟ್ಟ ಶಿವ)ವನ್ನು ಅರಿಯುತ್ತಾನೆ. ಯಾವಾಗ ಅವನು ಮತ್ತಷ್ಟು ಉನ್ನತಿಯನ್ನು ಹೊಂದಿ, ಅತ್ಯುನ್ನತವಾದ ಪ್ರಜ್ಞೆಯನ್ನು ಸಹಸ್ರಾರದಲ್ಲಿ ಪಡೆಯುತ್ತಾನೋ, ಆಗ ಅವನನ್ನು 'ಯೋಗಾಂಗ'ನೆಂದು ಕರೆಯುತ್ತಾರೆ ಮತ್ತು ಅವನು 'ಪರಮಾನಂದ'ವನ್ನು ಅನುಭವಿಸುತ್ತಾ 'ಭಾವಲಿಂಗ'ವೆಂದು ಕರೆಯಲ್ಪಡುವ ಶಿವನೊಂದಿಗೆ ತಾದಾತ್ಮ್ಯವನ್ನು ಹೊಂದುತ್ತಾನೆ. 
 
ಉಪಸಂಹಾರ
 
  ಪ್ರಾಚೀನ ಶೈವಮತದಲ್ಲಿ ಬೇರೂರಿದ್ದ ವೀರಶೈವ ಧರ್ಮವು ಸಂತರ ಸಮೂಹದಿಂದ ಪೋಷಿಸಲ್ಪಟ್ಟಿತು. ಅದು ಸಾಮಾಜಿಕ ಸಮಾನತೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದು, ಕೆಲಸ (ಕಾಯಕ) ಮಾಡುವುದರ ಮೇಲೆ ಒತ್ತು ಕೊಟ್ಟು, 'ಕಾಯಕ'ವನ್ನು ಕೇವಲ ಸಾಮಾಜಿಕ ಕರ್ತವ್ಯವಾಗಿಯಲ್ಲದೆ ಆಧ್ಯಾತ್ಮಿಕ ಉನ್ನತಿಯ ಭಾಗವಾಗಿಯೂ ಕೂಡಾ ಪ್ರಚುರಪಡಿಸಿದ್ದರಿಂದ ಅದು ಬೃಹತ್ ಸಂಖ್ಯೆಯ ಅನುಯಾಯಿಗಳನ್ನು ಪಡೆದುಕೊಂಡಿತು. ಸಾಮಾಜಿಕ ಕ್ರಾಂತಿಯ ಅದರ ಭಾಗಗಳು ಮಸುಕಾಗಿ ಹೋಗಿದ್ದರೂ (ಜಾತಿ ವ್ಯವಸ್ಥೆಯು ಇಂದೂ ಕೂಡಾ ಹಿಂದೂ ಸಮಾಜದಲ್ಲಿ ಪ್ರಬಲವಾಗಿರುವುದರಿಂದ) ಅದರ ಇತರೇ ಸಾಮಾಜಿಕ-ಧಾರ್ಮಿಕ ಅಂಶಗಳು ಖಂಡಿತವಾಗಿಯೂ ಹಿಂದೂ ಧರ್ಮವನ್ನು ಶ್ರೀಮಂತಗೊಳಿಸಿವೆ. 
                                 
                                                              ******
ಹಿನ್ನುಡಿ
 
        ಎರಡು ಪ್ರಮುಖ ಪಂಗಡಗಳಾದ ವಿಷ್ಣು ಮತ್ತು ಶಕ್ತಿ (ಅಥವಾ ದೇವಿ), ಶಿವನ ಪಂಗಡ (ಅಥವಾ ಶೈವಮತ) ಕೂಡಾ ಹಿಂದೂ ಧರ್ಮದ ಸಂಪ್ರದಾಯ ಮತ್ತು ಆಧ್ಯಾತ್ಮಿಕ ಉನ್ನತಿಗೆ ತನ್ನ ಕಾಣಿಕೆಯನ್ನು ಸಲ್ಲಿಸಿದೆ. ಇದರ ಮೂಲವು ವೇದಗಳಲ್ಲಿ ಅಡಗಿದ್ದರೂ ಇದು ಎರಡನೇ ಸಾಲಿನ ಶಾಸ್ತ್ರಗ್ರಂಥಗಳಾದ ಆಗಮಗಳು, ಪುರಾಣಗಳು ಮುಂತಾದವುಗಳಿಂದ ಪೋಷಿಸಲ್ಪಟ್ಟು ಶೈವಮತವು ಬಹುಜನರ ಮನ್ನಣೆಯನ್ನು ಗಳಿಸುವುದಲ್ಲದೆ ಅಪಾರ ಜನಪ್ರಿಯನ್ನು ಪಡೆದ ಪದ್ಧತಿಯಾಗಿದೆ. ಅದಲ್ಲದೆ ಹಿಂದೂ ಧರ್ಮದ ಇತರ ಪದ್ಧತಿಗಳು, ಪಂಗಡಗಳು ಮತ್ತು ಉಪಪಂಗಡಗಳೊಂದಿಗೆ ಹದವಾಗಿ ಮಿಳಿತಗೊಂಡಿದೆ. 
 
----------------------------------------------------------------------------------
ವಿ.ಸೂ.: ಇದು 'Facets of Saivism - Swami Harshananda' ಎನ್ನುವ ಆಂಗ್ಲ ಭಾಷೆಯ ಪುಸ್ತಕದ ಅನುವಾದದ ಭಾಗ. ಪ್ರಕಟಣೆ ಶ್ರೀ ರಾಮಕೃಷ್ಣ ಆಶ್ರಮ, ಬೆಂಗಳೂರು (ಪುಟಗಳು ೪೪ ರಿಂದ ೫೬)
----------------------------------------------------------------------------------
 ಈ ಸರಣಿಯ ಹಿಂದಿನ ಲೇಖನ ಶೈವಮತದ ಹಲವು ಮುಖಗಳು: ಭಾಗ ೪ಕ್ಕಾಗಿ ಈ ಕೆಳಗಿನ ಕೊಂಡಿಯನ್ನು ನೋಡಿ 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ksraghavendranavada on

ಇದೇನು ಐದೇ ತರಗತಿಗಳಿಗೆ ಮುಗಿಸಿ ಬಿಟ್ರಲ್ಲ ಸಾರ್!
ಈ ತರಗತಿಯ ಪಾಠ ಚೆನ್ನಾಗಿ ತಲೆಗೆ ಹೋಯಿತು.. ಏಕೆ೦ದರೆ ಸವಿಸ್ತಾರವಾಗಿ ವೀರಶೈವ ಧರ್ಮದ ಬಗ್ಗೆ ಹೇಳಿದ್ದೀರಿ. ವೀರಶೈವ ಧರ್ಮದ ಸ೦ಸ್ಠಾಪಕರು ಯಾರು? ಬಸವೇಶ್ವರರಿಗಿ೦ತಲೂ ಮೊದಲು ವೀರಶೈವ ಧರ್ಮ ಇತ್ತು ಎ೦ಬುದು ದಿಟ!

ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಒಮ್ಮೆ ಒಬ್ಬ ಪಾದ್ರಿ ಧರ್ಮೋಪದೇಶ ಮಾಡಬೇಕೆಂದು ಒಂದು ಊರಿಗೆ ಹೋದನಂತೆ. ಅವನು ನಿರೀಕ್ಷಿಸಿದಂತೆ ಅಲ್ಲೇನು ಹೆಚ್ಚು ಜನರಿರದೆ ಕೇವಲ ಒಬ್ಬನೇ ಒಬ್ಬ ಕುರುಬನಿದ್ದನಂತೆ. ಪಾದ್ರಿ ಒಬ್ಬನೇ ಇರುವುದನ್ನು ನೋಡಿ ಇಲ್ಲೇನು ಧರ್ಮೋಪದೇಶ ಮಾಡುವುದು ಎಂದುಕೊಂಡು ಹಿಂದೆ ಹೋಗುತ್ತಿದ್ದಾಗ ಆ ಕುರಿ ಕಾಯುವವನು ತಡೆದು, ಅಲ್ಲಾ ಸ್ವಾಮಿ ಕುರಿಗೆ ಮೇವು ಹಾಕಲು ಬಂದ ಮೇಲೆ ಒಂದೇ ಒಂದು ಕುರಿಯಿದೆಯೆಂದು ಕುರುಬ ಹಿಂದೆ ಹೋಗುತ್ತಾನೆಯೇ? ಇಲ್ಲವಲ್ಲ ಅವನು ಇದ್ದ ಒಂದೇ ಕುರಿಗೆ ಮೇವು ಹಾಕಿ ಹೋಗುತ್ತಾನೆ ಎಂದು ಪಾದ್ರ ಮರು ಉತ್ತರಿಸಿ ಅವನಿಗೆ ಧರ್ಮೋಪದೇಶ ಮಾಡಲು ಷುರುವಿಟ್ಟುಕೊಂಡ. ಸ್ವಲ್ಪ ಸಮಯವಾದ ಮೇಲೆ, ಆ ಕುರುಬ ಅವರನ್ನು ತಡೆದು, ಇನ್ನು ಸಾಕು ಮಾಡಿ ಸ್ವಾಮಿ ನಿಮ್ಮ ಧರ್ಮೋಪದೇಶ ಎಂದನಂತೆ. ಆಗ ಆ ಪಾದ್ರಿ ನೀನೇ ತಾನೇ ಒಂದೇ ಕುರಿಯಿದ್ದರೂ ಅದಕ್ಕೇ ಮೇವು ಹಾಕಬೇಕು ಅಂತಾ ಹೇಳಿದ್ದು ಅಂದನಂತೆ. ಆಗ ಆ ಕುರುಬ ಅದೇನೋ ಸರಿ ಸ್ವಾಮಿ ಒಂದಿಡೀ ಮಂದೆಗಾಗುವಷ್ಟು ಒಂದೇ ಕುರಿಗೆ ಹಾಕಿದರೆ ಹೇಗೆ? ಎಂದು ಪ್ರಶ್ನಿಸಿದಾಗ ಆ ಪಾದ್ರಿ ಏನೂ ಮಾತನಾಡದೇ ಸುಮ್ಮನೇ ಹೊರಟು ಹೋದನಂತೆ.

(ಅದಕ್ಕೇ ಎಲ್ಲಾ ಕುರಿಗಳಿಗೆ ಹಾಕಬೇಕಾದಷ್ಟನ್ನು ಕೆಲವೇ ಕುರಿಗಳಿಗೆ ಹಾಕಿ ಅಜೀರ್ಣ ಮಾಡಿಸುವುದು ಬೇಡವಲ್ಲ ನಾವಡರೇ :))

ಆ ಪುಸ್ತಕದಲ್ಲಿ ಲಭ್ಯವಿದ್ದ ಮಾಹಿತಿಯನ್ನಷ್ಟೇ ಇಲ್ಲಿ ಪ್ರಚುರಪಡಿಸಿದ್ದೇನೆ. ಮುಂದಿನ ವಾರದಿಂದ ಇನ್ನೊಂದು ಮಾಲಿಕೆಯನ್ನು ಪ್ರಾರಂಭಿಸುತ್ತಿದ್ದೇನೆ. ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು.

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಅ೦ತೂ ಇ೦ತೂ ಪಾದ್ರಿ -ಕುರು ಅ೦ತೆಲ್ಲಾ ಹೇಳಿ.. ನಮ್ಮನ್ನು ಕುರಿಗಳನ್ನಾಗಿ ಮಾಡಿಬಿಟ್ರಿ! ಪರೋಕ್ಷವಾಗಿ ಕರೆದು ಬಿಟ್ರೀ!!
ಭೇಷ್ ಶ್ರೀಧರರೇ.. ಭೇಷ್.. ಹಹಹ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ನಾವಡರೇ,
ಮೂಲತ: ನಾವು ಕುರಿಗಳಲ್ಲ; ಆದರೆ ಮೂರು ರೀತಿಯ ಮಲಗಳಿಂದ ನಮ್ಮ ನೈಜ ಸ್ವರೂಪವನ್ನು ಮರೆತು ಬಿಟ್ಟಿದ್ದೇವೆ. ಯೋಗ ಮತ್ತು ಗುರುವಿನ ಕ್ರುಪೆಯಿಂದ ಈ ಮಲಗಳನ್ನು ಹೋಗಲಾಡಿಸಿಕೊಂಡರೆ ನಮ್ಮ ದೈವತ್ವದ ಅರಿವು ನಮಗಾಗುವುದು. :)

(ನಾವು ಪಶುಪತಿಗಳೆ ಆದರೆ ಮಾನಸಿಕ ಅಶುದ್ಧತೆಗಳಿಂದ ಪಶುವೆಂಬ ಭ್ರಮೆಯಲ್ಲಿದ್ದೇವೆ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Krishna Kulkarni on

ವಿಷಯದ ಚಿಂತನೆ-ಅದನ್ನು ಸಂಗ್ರಹಿಸಿದ ರೀತಿ-ಅಷ್ಟೇ ಉತ್ತಮವಾದ ನಿಮ್ಮ ಭಾವಾನುವಾದ ನಿಜಕ್ಕೂ
ನಮ್ಮಂಥ ಇತಿಹಾಸ ಪ್ರೇಮಿಗಳಿಗೆ ಒಂದು ಅತ್ಯುತ್ತಮ ಲೇಖನವಾಗಿತ್ತು. ನನ್ನ ಅಮೌಲ್ಯ ಸಂಗ್ರಹದಲ್ಲಿ ಆಗಾಗ ತಿರುವಿಹಾಕಲು ಸೇರ್ಪಡಿಸಿದೆ.
ಧನ್ಯವಾದಗಳು,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಕುಲಕರ್ಣಿಗಳೆ,
ನಿಮ್ಮ ಅಭಿಪ್ರಾಯ ಮತ್ತು ಉತ್ಸಾಹಕ್ಕೆ ನಾನು ಚಿರರುಣಿ. ನಿಮ್ಮ ಗೀತೆಯ ಗುಟ್ಟು 2; ಇದೀಗ ತಾನೇ ಓದಿದೆ. ಚೆನ್ನಾಗಿ ಮೂಢಿ ಬರುತ್ತಿದೆ, ತಪ್ಪದೇ ಮುಂದುವರೆಸಿಕೊಂಡು ಹೋಗಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಮುಗಿದು ಹೋಯಿತು!

ನಾನು ವೀರಶೈವ ಧರ್ಮದ ಬಗ್ಗೆ ಮತ್ತು ಸ್ವಲ್ಪ ವಿವರ ನಿರೀಕ್ಷಿಸಿದ್ದೆ. ಅದರಲ್ಲಿಯು ಬಸವಣನವರು ಮತ್ತು ಅವರಿಗಿಂತ ಮುಂಚೆ ಇರಬಹುದಾದ ಧರ್ಮ ಆಚರಣೆಯ ಬಗ್ಗೆ. ಏಕೆಂದರೆ ಬಸವಣ್ಣನವರ ಕಾಲಮಾನಕ್ಕಿಂತ ಮುಂಚೆಯು ವೀರಶೈವ ಧರ್ಮವಿತ್ತು ನನಗ ಅದರ ಪೂರ್ಣ ಚಿತ್ರ ಗೊತ್ತಿಲ್ಲ.

ಇರಲಿ ನೀವು ಮುಂದೆ ಎಂದಾದರು ಸ್ಪೆಶಲ್ ಕ್ಲಾಸ್ ತೆಗೆದುಕೊಳ್ಳುತ್ತೀರಲ್ಲ ಆಗ ತಿಳಿದರಾಯಿತು.

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಪಾರ್ಥಸಾರಥಿಗಳೆ,
ಈ ಸರಣಿ ಬೇಗನೇ ಮುಗಿಸಿದ್ದಕ್ಕೆ ಕ್ಷಮೆಯಿರಲಿ. ಬಸವಣ್ಣನವರ ಸಮಕಾಲೀನ ಜೀವನ ಪದ್ಧತಿ ಮತ್ತು ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಅಲ್ಲಮ ಪ್ರಭುವಿನ ಮೂಲಕ ಬಹುದೊಡ್ಡ ಸರಣಿಯನ್ನೇ ಸೋಮಶೇಖರಯ್ಯನವರು ಬರೆದಿದ್ದಾರಲ್ಲ. ಸಂಪದವನ್ನು ಸ್ವಲ್ಪ ಹಿಂದೆ ತಿರುವಿ ಹಾಕಿ; ಅದರಲ್ಲಿ ಎಲ್ಲಾ ವಿಚಾರಗಳನ್ನು ಅತ್ಯುತ್ತಮವಾಗಿ ಮತ್ತು ಪೂರ್ಣ ವಿವರಗಳೊಂದಿಗೆ ಅವರು ಬರೆದಿದ್ದಾರೆ. ಮುಂದಿನ ವಾರದಿಂದ ಇನ್ನೊಂದು ವಿಷಯದ ಮೇಲೆ ತರಗತಿಗಳು ಪ್ರಾರಂಭವಾಗುತ್ತವೆ. :))

ನಿಮ್ಮ ಉತ್ಸಾಹ, ಆಸಕ್ತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ವೀರಶೈವ ದರ್ಮದ ಬಗ್ಗೆ 05 ಕಂತುಗಳಲ್ಲಿ ಪ್ರಕಟವಾದ ನಿಮ್ಮ ಲೇಖನದಿಂದ ಕೆಲವು ತಿಳಿಯದಿದ್ದ ವಿಷಯಗಳು ತಿಳಿಯಿತು ಆದರೂ ಬೇಗ ಮುಗಿಸಿದಿರೇನು ಅನ್ನಿಸುತ್ತದೆ (ಕುರಿಗಳು ಕಮ್ಮಿ ಇದೆ ಅಂತನಾ ...!! ತಮಾಷೆಗೆ ಹೇಳಿದೆ)
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸತೀಶರೆ ನಿಮ್ಮ ಆಸಕ್ತಿಗೆ ಧನ್ಯವಾದಗಳು. ನಾನು ಇದನ್ನು ಕಡಿಮೆ ಕಂತುಗಳಲ್ಲಿ ಮುಗಿಸಿದ್ದು ಕುರಿಗಳ ಸಂಖ್ಯೆಯ ಕೋನದಿಂದ ಅಲ್ಲ ಆದರೆ ಈ ಕುರುಬನ ಇರುವ ಮೇವಿನ ಸ್ಟಾಕ್ ಖಾಲಿ ಆಗಿ ಹೋಗಿದೆ :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on

1.
ರೇವಣಾರಾಧ್ಯ, ಒಬ್ಬ ಕುರುಬ‌
ಮರುಳಾರಾಧ್ಯ, ಒಬ್ಬ ದಲಿತ‌
ಪಂಡಿತಾರಾಧ್ಯ ಒಬ್ಬ ಆನ್ದ್ರ ಬ್ರಾಹ್ಮಣ
ಇವರೆಲ್ಲ ಸ್ಪಷ್ಟವಾಗಿ, ಅಲ್ಲಮ ಪ್ರಭು, ಚನ್ನಬಸವಣ್ಣ, ಅಕ್ಕ ಮಹಾದೇವಿಯರಂತೆ, ಬಸವಣ್ಣನವರ ಸಮಕಾಲೀನರು.

2.
"ಅದರ ಸ್ಥಾಪಕರಲ್ಲದಿದ್ದರೂ ವೀರಶೈವ ಮತದ ಪ್ರಧಾನ ಸಂಯೋಜಕರು ಮತ್ತು ಸುಧಾರಕರು."

ಈ ಸಾಲನ್ನ ಸ್ವಲ್ಪ ಸರಿಪಡಿಸೋನ! ಹೀಗೆ! "ಅದರ ಸ್ಥಾಪಕರಲ್ಲೊಬ್ಬರಲ್ಲಷ್ಟೇ ಅಲ್ಲದೆ, ಸಮಾಜ‌ ಸುಧಾರಕರೂ ಹೌದು"

3. "ಆದ್ದರಿಂದ ಇದಕ್ಕೆ 'ಲಿಂಗಾಯತ ಮತ' (ಲಿಂಗವನ್ನು ಮೂಲಾಧಾರವೆಂದು ತಿಳಿಯುವ ಮತ) ಎಂದು ಕರೆದಿರುವುದು ಅತ್ಯಂತ ಸೂಕ್ತವಾಗಿದೆ".

ಈ ರೀತಿಯ ಉಲ್ಲೇಖ ಏಲ್ಲಿಯಾದರೂ ಕಂದಿದ್ದರೆ ದಯವಿಟ್ಟು ತಿಳಿಸಿ.

4. 'ಷಟ್‍ಸ್ಥಲ ಸಿದ್ಧಾಂತ'ದ ಪ್ರಕಾರ, ಶಿವನು ತನ್ನನ್ನು ತಾನು ಎರಡು ರೂಪಗಳಾಗಿ ವಿಭಾಗಿಸಿಕೊಳ್ಳುತ್ತಾನೆ,
ಈ ಸಾಲಿನಲ್ಲಿ "ಷಟ್‍ಸ್ಥಲ" ಅನ್ನೋ ಪದ ನಿಜಕ್ಕೂ ಹೊಂದುತ್ತ? ನನಗಂತೂ ಸರಿಕಾಣಲ್ಲ. "ಬಚ್ಚ ಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು" ಅನ್ನೋ ವಚನಕ್ಕೂ ವಇರುದ್ದವಾಗಿದೆಯಲ್ವಾ ಮೇಲಿನ‌ ಸಾಲು.

5. "ಪ್ರಾಚೀನ ಶೈವಮತದಲ್ಲಿ ಬೇರೂರಿದ್ದ ವೀರಶೈವ ಧರ್ಮವು ಸಂತರ ಸಮೂಹದಿಂದ ಪೋಷಿಸಲ್ಪಟ್ಟಿತು."

ಇದಕ್ಕೆ (ಪ್ರಾಚೀನ ಶೈವಮತದಲ್ಲಿ ಬೇರೂರಿದ್ದ ವೀರಶೈವ ಧರ್ಮವು ಅನ್ನೋದಕ್ಕೆ ) ನಿಮಗೆ ಏನಾದರೂ ಕುರುಹು ಸಿಕ್ಕಿದೆಯ? ಸಿಕ್ಕಿದ್ರೆ ಹಂಚಿಕೊಳ್ಳಿ. ಚರ್ಚೆಮುಂದುವರಿಸೋಣ‌.

6.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

1. ರೇವಣಾರಾಧ್ಯ, ಪಂಡಿತಾರಾಧ್ಯ ಮತ್ತು ಮರುಳಾರಧ್ಯರು ಕಾಲ್ಪನಿಕ ವ್ಯಕ್ತಿಗಳೆಂದು ಕೆಲವರು ಅಭಿಪ್ರಾಯ ಪಟ್ಟಿರುವುದರಿಂದ (ಮೂಲ ಲೇಖಕರ ಪ್ರಕಾರ) ಅದರ ಬಗ್ಗೆ ಎರಡೂ ರೀತಿಯ ಅಭಿಪ್ರಾಯಗಳನ್ನು ಕೊಡಲಾಗಿದೆ.
2. ಇವರು ಬಸವಣ್ಣನವರ ಸಮಕಾಲೀನರೆಂದು ನೀವು ಅಭಿಪ್ರಾಯ ಪಟ್ಟಿರುವುದರಿಂದ ನೀವು ಹೇಳಿದಂತೆ ಬದಲಾಯಿಸಿಕೊಂಡು ಓದಲು ಅಡ್ಡಿಯೇನಿಲ್ಲ. ಆದರೆ ಬಸವಣ್ಣನವರು ವೈದಿಕ ಧರ್ಮದ ಪ್ರಕಾರ ಉಪನಯನ ಕಾರ್ಯವನ್ನು ನಿರಾಕರಿಸಿವುದು ಅವರಿಗೆ ಜಾತವೇದ ಮುನಿಗಳು ಲಿಂಗ ಧಾರಣೆ ಮಾಡಿದ್ದರಿಂದ ಎಂದು ಪ್ರಾಥಮಿಕ ಶಾಲಾ ಪಠ್ಯ ಪುಸ್ತಕದಲ್ಲಿ ಓದಿದ ನೆನಪು (1977 ನೆ ಇಸವಿಯಲ್ಲಿ ನನ್ನ‌
ಏಳನೇ ತರಗತಿಯ ಪಠ್ಯ.) ಇದನ್ನು ನಿಜವೆಂದು ಒಪ್ಪಿಕೊಂಡರೆ ವೀರಶೈವ ಧರ್ಮವು ಬಸವಣ್ಣನವರಿಗಿಂತ ಮುಂಚಿನದೆಂದು ಅರ್ಥವಾಗುತ್ತದೆ ಎಲ್ಲವೇ? ಆದ್ದರಿಂದ ಅದನ್ನು ಪ್ರಾಚುರ್ಯಕ್ಕೆ ತಂದರೆನ್ನುವುದು ಸೂಕ್ತವೆಂದು ಕೊಳ್ಳುತ್ತೇನೆ.
3. ನೀವು ಪ್ರಸ್ತಾವಿಸಿರುವ ವಾಕ್ಯದ ಮೊದಲ ವಾಕ್ಯದಲ್ಲಿ ವೀರಶೈವರು ಶಿವಲಿಂಗ ಅಥವಾ ಲಿಂಗವನ್ನು ಗೌರವಾದರಗಳಿಂದ ಪೂಜಿಸುವುದರಿಂದ ಅವರಿಗೆ ಈ ಪ್ರಯೋಗ ಸೂಕ್ತವಾಗಿದೆ ಎಂದು ತಿಳಿಸಲಾಗಿದೆ.
4. ನಾವು ಮೂರು ರೀತಿಯ ಮಲಗಳಿಂದ ಆವರಿಸಲ್ಪಟ್ಟಿರುವುದರಿಂದ ನಮಗೆ ನಮ್ಮ ನಿಜವಾದ ಸ್ವರೂಪದ ಅರಿವಾಗದು. ಅದರ ಸಾಕ್ಷಾತ್ಕಾರವಾಗಬೇಕಾದರೆ ಈ ಮಲಗಳನ್ನು ಹೋಗಲಾಡಿಸಿಕೊಳ್ಳಬೇಕು ಎನ್ನುತ್ತಾರೆ. ಅದರೆ ಪ್ರಕಾರ ಶಿವ ಮತ್ತು ಜೀವ ಬೇರೆಯಲ್ಲ; ಈ ರೀತಿ ಬೇರೆಯಾಗಿ ಕಾಣುತ್ತಿರುವುದು ಈ ಮೂರು ರೀತಿಯ ಕಶ್ಮಲಗಳಿಂದ ಎನ್ನುವುದು ಷಟ್ ಸ್ಥಲ ಸಿದ್ಧಾಂತ ಹಿಂದಿರುವ ತತ್ವ್. ಇನ್ನು ಶಿವನು ಚೇತನಾಸ್ವರೂಪಿ ಅಥವಾ ಜ್ಯೋತಿ ಸ್ವರೂಪನಾಗಿರುವುದರಿಂದ ನೀವು ಕೊಟ್ಟಿರುವ ಅಲ್ಲಮನ ವಚನದಿಂದ ವ್ಯತ್ಯಾಸವೇನೂ ಉಂಟಾಗದು.
5. ಕಾಶ್ಮೀರ ಶೈವ ತತ್ವದ 36 ಸಿದ್ದಾಂತವನ್ನು ಯಥಾವತ್ತಾಗಿ ಲಿಂಗಾಯತ ಮತವು ಒಪ್ಪಿಕೊಂಡಿರುವುದರಿಂದ ಈ ಮಾತಿಗೆ ಪುಷ್ಟಿ ಕೊಡುತ್ತದೆ. ಇದೇ ಸರಣಿಯ 2ನೇ ಲೇಖನವನ್ನು ಓದಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on

1. ರೇವಣಾರಾಧ್ಯ, ಪಂಡಿತಾರಾಧ್ಯ ಮತ್ತು ಮರುಳಾರಧ್ಯರು ಇವರ್ಯಾರೂ ಕಾಲ್ಪನಿಕ ವ್ಯಕ್ತಿಗಳಲ್ಲ.

ಕುರುಬನಾಗಿದ್ದ ರೇವಣಸಿದ್ದನೇ ರೇಣುಕಾಚಾರ್ಯ‌
ರೇವಣಸಿದ್ದನಿಂದ ದೀಕ್ಶೆ ಪಡೆದ ಮರುಳಸಿದ್ದ ನೆ ಮರುಳಾರಧ್ಯ
ಇವ‌ರ‌ ಬ‌ಗ್ಗೆ ಜ‌ನ‌ಪ‌ದ‌ ಕಾವ್ಯಗಳು ಸಿಗ್ತವೆ.. ಆಸಕ್ತಿ ಇದ್ರೆ ಕೇಳಿ ನಾನೆ ಒಮ್ಮೆ ಬರೀತೀನಿ... ಯಾವಗ್ಲಾದ್ರೂ!

ಇಲ್ಲಿ ಗ‌ಮ‌ನಿಸ‌ಬೇಕಾಗಿದ್ದು ..,ಬ‌‌ಸ‌ವಣ್ಣನ‌ ಸ‌ಮಕಾಲೀನ‌ರಾದ ಕೆಲವರನ್ನು ಪೌರಾಣಿಕ ವ್ಯಕ್ತಿಗಳಾಗಿ ಚಿತ್ರಿಸಲಾಯಿತು!

2. "ಅವರಿಗೆ ಜಾತವೇದ ಮುನಿಗಳು ಲಿಂಗ ಧಾರಣೆ "
ಜಾತ‌ವೇದ‌ ಮುನಿಗ‌ಳು ಬ‌ಸ‌ವಣ್ಣನ‌ವ‌ರ‌ ಗುರುಗ‌ಳು ಸ‌ರಿ... ಆದ‌ರೆ ಅವ‌ರೇ ಲಿಂಗ‌ ದೀಕ್ಸ್ಹೆ ಕೊಟ್ರು ಅನ್ನೋದು ಅದೆಷ್ಹ್ಟು ಸ‌ರಿ?
ಉಪ‌ನ‌ಯ‌ನ‌ ತಿರಸ್ಕರಿಸೋದು ಲಿಂಗದಾರಣೆಗೋಸ್ಕರ ಅಲ್ಲ .. ಅಕ್ಕನಿಗೊಂದು! ತನಗೊಂದ?! ಅನ್ನೋ ( ಇದು ಒನ್ದು ಕಾರಣ ಅಷ್ಟೇ) ಕಾರಣದಿಂದ.

ಉಳಿದ‌ಂತೆ...
ಷಟ್ ಸ್ಥಲ ಸಿದ್ದಾಂತದ ಗುರಿ ಮೋರು ಮಲಗಳನ್ನು ಕಳೆದುಕೊಳ್ಳುವಿದು ಮತ್ತು ಅದರರೊಂದಲೇ ಲಿಂಗಾಮ್ಗ ಸಾಮರಸ್ಯ ಬರುತ್ತೆ ಅನ್ನೋದು ಸತುಮ್ಬ ಸರಳೀಕರಣ. ಈ ಸರಳೀಕರಣದ ಬಗ್ಗೆ ನಾನು ಹೇಳೀದ್ದು!

ಷಟ್ ಸ್ಥಲ ಸಿದ್ದಾಂತಕ್ಕೆ ಆ 36 ತತ್ವಗ‌ಳು ಅದೆಸ್ಹ್ತು ಪೂರ‌ಕ‌ವೋ ನಾನ‌ರಿಯೆ!.
ಆ ತತ್ವಗಳು ಸಕ್ತಿ ವಿಸಿಷ್ಟಾದ್ವೈತ ಕ್ಕೆ ಬೇಕಗಬಹುದು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

>>5. "ಪ್ರಾಚೀನ ಶೈವಮತದಲ್ಲಿ ಬೇರೂರಿದ್ದ ವೀರಶೈವ ಧರ್ಮವು ಸಂತರ ಸಮೂಹದಿಂದ ಪೋಷಿಸಲ್ಪಟ್ಟಿತು."
ಇದಕ್ಕೆ (ಪ್ರಾಚೀನ ಶೈವಮತದಲ್ಲಿ ಬೇರೂರಿದ್ದ ವೀರಶೈವ ಧರ್ಮವು ಅನ್ನೋದಕ್ಕೆ ) ನಿಮಗೆ ಏನಾದರೂ ಕುರುಹು ಸಿಕ್ಕಿದೆಯ? ಸಿಕ್ಕಿದ್ರೆ ಹಂಚಿಕೊಳ್ಳಿ. ಚರ್ಚೆಮುಂದುವರಿಸೋಣ‌.<<
ಸವಿತೃ ಅವರೆ,
ನಿಮ್ಮ ಮೇಲಿನ ಪ್ರಶ್ನೆಗೆ ಉತ್ತರವಾಗಿ ನಾನು ಈ ಕೆಳಗಿನ ಉತ್ತರವನ್ನು ಕೊಟ್ಟಿದ್ದು. ಅದರ ಪ್ರಕಾರವೇ ಉತ್ತರಗಳನ್ನು ಓದಿಕೊಳ್ಳಿ.

೫. ಕಾಶ್ಮೀರ ಶೈವ ತತ್ವದ 36 ಸಿದ್ದಾಂತವನ್ನು ಯಥಾವತ್ತಾಗಿ ಲಿಂಗಾಯತ ಮತವು ಒಪ್ಪಿಕೊಂಡಿರುವುದರಿಂದ ಈ ಮಾತಿಗೆ ಪುಷ್ಟಿ ಕೊಡುತ್ತದೆ. ಇದೇ ಸರಣಿಯ 2ನೇ ಲೇಖನವನ್ನು ಓದಿ
http://sampada.net/b...

ಇನ್ನು ರೇವಣಾರಾಧ್ಯ, ಪಂಡಿತಾರಾಧ್ಯ ಮತ್ತು ಮರುಳಾರಾಧ್ಯ ಇವರ ಬಗ್ಗೆ ನಿಮ್ಮಿಂದ ಖಂಡಿತವಾಗಿ ಬರಹಗಳನ್ನು ಸಂಪದದಲ್ಲಿ ಎದುರು ನೋಡುತ್ತೇನೆ. ಅದರಿಂದ ವೀರಶೈವ ಧರ್ಮದ ಬಗ್ಗೆ ನನ್ನ ತಿಳಿವಳಿಕೆಯೂ ಹೆಚ್ಚುತ್ತದೆ.

ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by jayaprakash M.G on

ಶ್ರೀಧರ ಬಂಡ್ರಿಯವರೆ ನಮಸ್ತೆ, ವೀರಶೈವ ಧರ್ಮದ ಬಗ್ಗೆ ತಿಳಿಸಿರುವುದು ಸಂತೋಷ.ಅವಸರದಲ್ಲಿ ಮುಗಿಸಿ ಚರ್ಚೆಗೆ ಸಾಕಷ್ಟು ಅವಕಾ
ಶ ಕಲ್ಪಿಸಿರುವಿರಿ.ವಿಷಯ ಸಂಗ್ರಹಣೆ ಕುತೂಹಲಕ್ಕಾಗಿ ಈ ಪ್ರಶ್ನೆ,ಸಾಕಷ್ಟು ಜೈನ ಬಸದಿಗಳು ಬೇರೆ ಬೇರೆ ಹೆಸರಿನ ಶಿವಮಂದಿರಗಳಾಗಿರುವುದು ಸರಿಯೇ?ಸರಿಯಿದ್ದಲ್ಲಿ ಈಗಿನ ಲಿಂಗಾಯತರು ಜೈನಧರ್ಮದಿಂದ ಮತಾಂತರ ಹೊಂದಿದವರೆಂದು ತಿಳಿಯಬೇಕೆ,ಈಗಿರುವ ಉಜ್ಜಿನಿ ದೇವಸ್ಥಾನವು ವೃಷಭನಾಥ ದೇವಾಲಯವೆಂದೂ,ಮೂಲವು ಮಹಾಕಾಲ ಉಜ್ಜೈನಿಯೆಂದೂ ಹೇಳುವುದು ಸರಿಯೇ,ಕನ್ನಡ ಸಾಹಿತ್ಯದಲ್ಲೂ ಜೈನ ಮತ್ತು ವೀರಶೈವ ಕವಿಗಳ ಸಂಖೆ ಹೆಚ್ಚೆನ್ನುವುದು ಸರಿಯಿದ್ದಲ್ಲಿ ಇಡಿಯಾಗಿ ಜೈನಮತದ ಲಿಂಗಾಯತ ಮತಾಂತರಕ್ಕೆ ಬಸವಾದಿ ಶರಣರ ಪ್ರಭಾವ ಕಾರಣವೆ ಅಥವಾ ಬೇರೇನಾದರೂ ಐತಿಹಾಸಿಕ ಕಾರಣಗಳಿವೆಯೇ?
ದಯವಿಟ್ಟು ತಿಳಿಸಿ ಸಾಧ್ಯವಾದಲ್ಲಿ 6ನೇ ಕಂತು ಬಂದರೆ ಉತ್ತಮ. ಮತ್ತೊಮ್ಮೆ ನಮಸ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಜಯಪ್ರಕಾಶ್ ಅವರೆ,
ತಡವಾಗಿ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತಿರುವುದಕ್ಕೆ ಕ್ಷಮೆಯಿರಲಿ. ಈ ಲೇಖನ ಸರಣಿಯು ಶೈವ ಮತದ ವಿವಿಧ ಮುಖಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಬರೆಯಲಾಗಿತ್ತು. ಹಾಗಾಗಿ ಇದರಲ್ಲಿ ಆಧ್ಯಾತ್ಮಿಕ ವಿಷಯಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ, ಸಾಂದರ್ಭಿಕವಾಗಿಯಷ್ಟೇ ಕೆಲವೊಂದು ಐತಿಹಾಸಿಕ ವಿಷಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇರಲಿ, ಇಲ್ಲಿ ಒಂದು ವಿಷಯವನ್ನು ಪ್ರಸ್ತುತ ಪಡಿಸಲು ಇಷ್ಟಪಡುತ್ತೇನೆ, ಅದೇನೆಂದರೆ ಆದಿ ಶಂಕರರು ಧರ್ಮವನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರಾಚುರ್ಯಕ್ಕೆ ತರಬೇಕೆಂದುಕೊಂಡು ಉತ್ತರದ ಬದರಿನಾಥ, ದಕ್ಷಿಣದ ಶೃಂಗೇರಿ, ಪಶ್ಚಿಮದ ದ್ವಾರಕೆ ಮತ್ತು ಪೂರ್ವದ ಪುರಿಯಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದರು. ಮಧ್ಯ ಭಾಗದಲ್ಲೂ ಪೀಠವೊಂದರ ಅವಶ್ಯಕತೆಯಿದೆ ಎಂದು ಕಂಚಿಯಲ್ಲೂ ಒಂದು ಪೀಠದ ಸ್ಥಾಪನೆಯಾಯಿತು. ಬಹುಶಃ ಇವರು ಬೌದ್ಧ ಮತದ ವಿಹಾರಗಳಿಂದ ಸ್ಪೂರ್ತಿ ಪಡೆದಿರಬಹುದು. ಇದೇ ರೀತಿ ವೀರಶೈವ ಮತದಲ್ಲಿ ದೇಶವನ್ನು ಅಡ್ಡವಾಗಿ ಐದು ಭಾಗಗಳಾಗಿ ವಿಭಜಿಸಿ ಉತ್ತರದ ತುತ್ತತುದಿಯಲ್ಲಿ ಕೇದಾರ ಪೀಠ, ಉತ್ತರದ ಮಧ್ಯ ಭಾಗಕ್ಕೆ ಕಾಶಿ ಪೀಠ, ಮಧ್ಯ ಭಾಗಕ್ಕೆ ಉಜ್ಜೈನಿ (ಮಧ್ಯ ಪ್ರದೇಶ), ದಕ್ಷಿಣ ಮಧ್ಯಭಾಗಕ್ಕೆ ಶ್ರೀಶೈಲ ಪೀಠ ಮತ್ತು ದಕ್ಷಿಣಕ್ಕೆ ಬಾಳೇಹೊನ್ನೂರಿನಲ್ಲಿ ರಂಭಾಪುರಿ ಪೀಠವನ್ನು ಸ್ಥಾಪಿಸಿದ್ದಾರೆ. ಈ ಮಠಗಳಿಗೆ ಆಚಾರ್ಯರಾದವರೆ ಪಂಚಾಚಾರ್ಯರು. ಇವಕ್ಕೆ ತಮ್ಮದೇ ಆದ ಶಾಖಾ ಮಠಗಳೂ ಇದ್ದವು. ಈ ಉಜ್ಜೈನಿಯ ಒಂದು ಶಾಖಾಮಠವೇ ಈಗ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿರುವ ಉಜ್ಜನಿಯಲ್ಲಿರುವ ಪೀಠ. ಮಧ್ಯಭಾರತದಲ್ಲಿ ಹಲವಾರು ಚಾರಿತ್ರಿಕ ಕಾರಣಗಳಿಂದ ಅಲ್ಲಿನ ಪೀಠದ ಕಾರ್ಯಕಲಾಪಗಳು ಸ್ಥಗಿತಗೊಂಡಾಗ ಇಲ್ಲಿದ್ದ ಶಾಖಾಮಠವೇ ಪೂರ್ಣಪ್ರಮಾಣದ ಪೀಠವಾಯಿತು. ಈ ಮಠಗಳ ಆಧೀನಕ್ಕೆ ಒಳಪಡದೆ ಸ್ವತಂತ್ರವಾಗಿ ಧರ್ಮ ಪ್ರಚಾರವನ್ನು ಕೈಗೊಂಡದ್ದೇ ವಿರಕ್ತ ಮಠಗಳು. ಇವಕ್ಕೆ ಉದಾಹರಣೆಯಾಗಿ ಮೃತ್ಯುಂಜಯ ಮಠ, ಮೂರು ಸಾವಿರ ಮಠ ಇವುಗಳನ್ನು ಹೆಸರಿಸಬಹುದು. ಉಜ್ಜೈನಿ ಪೀಠದಿಂದ ಅಭಿಪ್ರಾಯ ಭೇದ ಹೊಂದಿ ತಮ್ಮದೇ ಮಠವನ್ನು ಸ್ಥಾಪಿಸಿಕೊಂಡವರು ಸಹೋದರರು (ಕಾಲಾನುಕ್ರಮದಲ್ಲಿ ಇವರು ಸಾದರು ಎಂದು ರೂಪಾಂತರವಾಗಿದ್ದಾರೆ). ಈ ಸಾದರ ಮಠವು ಈಗಿನ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ತಾಲೂಕಿನ ಸಿರಿಗೇರಿಯಲ್ಲಿದೆ. ಅದೇ ರೀತಿ ಶ್ರೀಶೈಲ ಪೀಠದಿಂದ ಹೊರಬಂದವರು ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿರುವ ನೊಣಬ ಲಿಂಗಾಯತರು.

ಈ ಹಿನ್ನಲೆಯನ್ನು ಹೇಳುವ ಉದ್ದೇಶವಿಷ್ಟೇ ಬಳ್ಳಾರಿ ಜಿಲ್ಲೆಯಲ್ಲಿರುವ ಮಠ ಮೂಲಮಠವಲ್ಲ ಎನ್ನುವುದು. ಇನ್ನು ನೀವು ಪ್ರಸ್ತಾಪಿಸಿರುವಂತೆ ಅದು ಜೈನ ಮಂದಿರವೆನ್ನುವ ವಿಷಯ ನಿಜವಿರಬಹುದು. ಅದೇ ರೀತಿಯ ದೇವಾಲಯಗಳು ನಿಮಗೆ ಹರಪನಹಳ್ಳಿ ತಾಲೂಕಿನ ಅಂಬಳಿ, ಮೊದಲಾದ ಊರುಗಳಲ್ಲಿ ದೊರಕುತ್ತದೆ. ಒಂದು ಕಾಲದಲ್ಲಿ ಸಂಪೂರ್ಣವಾಗಿ ವೈದಿಕ ಅಥವಾ ಇತರೇ ಸನಾತನ ಧರ್ಮಗಳು ಕರ್ನಾಟಕದಲ್ಲಿ ಇದ್ದವು. ಒಂದು ಮತ್ತು ಎರಡನೇ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ಬೌದ್ಧ ಮತವು ಪ್ರಾಚುರ್ಯಕ್ಕೆ ಬಂದರೆ ಕರ್ನಾಟಕ ಮತ್ತು ಆಂಧ್ರ ಪ್ರಾಂತ್ಯಗಳಲ್ಲಿ ಗುಜರಾತಿನ ಮೂಲಕವಾಗಿ ಜೈನ ಧರ್ಮ ಪ್ರಾಚುರ್ಯಕ್ಕೆ ಬಂತು. ಕನ್ನಡದಲ್ಲಿ ಪ್ರಥಮ ಸಾಹಿತ್ಯ ಹುಟ್ಟಿದ್ದೇ ಜೈನರ ಧಾರ್ಮಿಕ ಗ್ರಂಥಗಳಿಂದ. ಮುಂದೆ ಜೈನ ಬಿಟ್ಟಿದೇವನು ರಾಮಾನುಜರ ವಿಚಾರಗಳಿಂದ ಅಥವಾ ಅವರು ನಡೆಸಿದರೆಂದು ಹೇಳುವ ಪವಾಡದಿಂದಾಗಿ ವೈಷ್ಣವನಾದದ್ದು ತಮಗೆ ತಿಳಿದೇ ಇದೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ವೀರಶೈವ ಧರ್ಮದ ಪ್ರಭಾವವು ಉಂಟಾಗಿ ಬಹಳ ಜನರು ಅದರಿಂದ ಆಕರ್ಷಿತರಾದುದಲ್ಲದೆ ಅದರ ಅನುಯಾಯಿಗಳಾದರು. ಜೈನ ಧರ್ಮದ ಅವನತಿಯ ನಂತರ ಮತ್ತೆ ಸನಾತನ (ವೈದಿಕ ಧರ್ಮವು) ಪ್ರಾಬಲ್ಯ ಪಡೆದು ಮತ್ತೆ ತದನಂತರ ಕಾಲದಲ್ಲಿ ವೀರಶೈವ ಧರ್ಮವು ಪ್ರಾಚುರ್ಯಕ್ಕೆ ಬಂತು. ಹಾಗಾಗಿ ಇಂದಿಗೂ ನಿಮಗೆ ಲಿಂಗಾಯತರಲ್ಲಿ ಎಲ್ಲಾ ಕುಲಕಸುಬಿನ ಜಾತಿಗಳು ಉಪಜಾತಿಗಳಾಗಿ ಹಾಗೇ ಉಳಿದುಕೊಂಡು ಬಿಟ್ಟಿವೆ.

ಪ್ರತಿಕ್ರಿಯೆ ಬಹಳ ಉದ್ದವಾಗಿರುವುದಕ್ಕೆ ಬೇಸರಿಸಬೇಡಿ. ನಿಮ್ಮ ವಿಶಿಷ್ಟ ಶೈಲಿಯ ಪದ್ಯಗಳೊಂದಿಗೆ ಮತ್ತೆ ಸಂಪದದಲ್ಲಿ ಸಕ್ರಿಯರಾಗಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

>>ಇದೇ ರೀತಿ ವೀರಶೈವ ಮತದಲ್ಲಿ ದೇಶವನ್ನು ಅಡ್ಡವಾಗಿ ಐದು ಭಾಗಗಳಾಗಿ ವಿಭಜಿಸಿ ಉತ್ತರದ ತುತ್ತತುದಿಯಲ್ಲಿ ಕೇದಾರ ಪೀಠ, ಉತ್ತರದ ಮಧ್ಯ ಭಾಗಕ್ಕೆ ಕಾಶಿ ಪೀಠ, ಮಧ್ಯ ಭಾಗಕ್ಕೆ ಉಜ್ಜೈನಿ (ಮಧ್ಯ ಪ್ರದೇಶ), ದಕ್ಷಿಣ ಮಧ್ಯಭಾಗಕ್ಕೆ ಶ್ರೀಶೈಲ ಪೀಠ ಮತ್ತು ದಕ್ಷಿಣಕ್ಕೆ ಬಾಳೇಹೊನ್ನೂರಿನಲ್ಲಿ ರಂಭಾಪುರಿ ಪೀಠವನ್ನು ಸ್ಥಾಪಿಸಿದ್ದಾರೆ.>>
ಈ ಉಜ್ಜೈನಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿದೆ. ಮಧ್ಯಪ್ರದೇಶದಲ್ಲಿ ಅಲ್ಲ! ಪ೦ಚಾಚಾರ್ಯ ಪೀಠಗಳಲ್ಲಿ ಉಜ್ಜೈನಿಯೂ ಒ೦ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

>>ಈ ಉಜ್ಜೈನಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿದೆ. ಮಧ್ಯಪ್ರದೇಶದಲ್ಲಿ ಅಲ್ಲ! ಪ೦ಚಾಚಾರ್ಯ ಪೀಠಗಳಲ್ಲಿ ಉಜ್ಜೈನಿಯೂ ಒ೦ದು.<<
ನಾವಡರೆ,
ಈ ವಿಷಯ ಆಶ್ಚರ್ಯವಾದರೂ ಸತ್ಯ. ಈಗ ಇರುವುದು ಶಾಖಾಮಠ ಮಾತ್ರವೇ! ಕೆಲವು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿರುವ ಉಜ್ಜನಿ ಮಠಕ್ಕೆ ಹೋದಾಗ ಈ ವಿಷಯ ತಿಳಿಯಿತು. ಮೂಲ ಉಜ್ಜೈನಿ ಮಠವಿದ್ದ ಸ್ಥಳವೂ ಈಗ ಪತ್ತೆಯಾಗಿದೆಯಂತೆ. ಅದನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನೂ ಇಲ್ಲಿಯ ಮಠದವರು ಕೈಗೊಂಡಿದ್ದಾರೆಂದು ಕೇಳಿದ್ದೇನೆ. ಉಳಿದಂತೆ ವೀರಶೈವರ ಪಂಚಪೀಠಗಳಲ್ಲಿ ಉಜ್ಜೈನಿಯೂ ಒಂದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by jayaprakash M.G on

ಶ್ರೀಧರರೇ ನಿಮ್ಮಲ್ಲಿ ವೀರಶೈವ ಧರ್ಮದ ಮಾಹಿತಿಯ ಮಹಾಪೂರವೆ ಇದೆ ದಯವಿಟ್ಟು ಮತ್ತೊಂದು ಮಾಹಿತಿ, ಕರ್ನಾಟಕದ ಉಜ್ಜಿನಿಯ ದೇವಸ್ಥಾನದ ಗೋಪುರಕ್ಕೆ ಪ್ರತಿ ವರ್ಷ ರಥೋತ್ಸವದ ಮರುದಿವಸ ತೈಲಾಭಿಷೇಕ ಮಾಡುತ್ತಾರೆ.ಮಜ್ಜನದ ಪರಿಣಾಮವಾಗಿ ಗೋಪುರದಲ್ಲಿ ಕೆತ್ತನೆಯಾಗಿರುವ ದೇವತೆಗಳು ಸರಿಯಾಗಿ ಗೋಚರಿಸುವುದಿಲ್ಲ.ಈ ಮಜ್ಜನಕ್ಕೆ ಮೊದಲ ತೈಲವಾಗಿ ಜರಿಮಲೆಯ ಪಾಳೆಗಾರರ ವಂಶಜರು ತಂದು ಕೊಡುವ ಪರಿಪಾಠವಿದೆಎಂದೂ ಮತ್ತು ಅವರು ದೇವರ ದರ್ಶನ ಪಡೆಯದೆ ತೆರಳುವ ಸಂಪ್ರಾದಯದ ಇದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಮಾಹಿತಿ ಇದ್ದರೆ ತಿಳಿಸಬೇಕಾಗಿ ವಿನಂತಿ. ವಂದನೆಗಳೊಂದಿಗೆ ಜಯಪ್ರಕಾಶ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಜಯಪ್ರಕಾಶರೆ,
ನಿಮ್ಮ ಮರುಪ್ರತಿಕ್ರಿಯೆಗೆ ವಂದನೆಗಳು. ನಾನು ಕಂಪನಿಯ ಕಾರ್ಯನಿಮಿತ್ತವಾಗಿ ಕರ್ನಾಟಕ ಹಾಗೂ ದೇಶದ ವಿವಿಧ ಭಾಗಗಳಲ್ಲಿ ತಿರುಗುತ್ತಿದ್ದಾಗ ಗಮನಿಸಿದ ಮತ್ತು ತಿಳಿದುಕೊಂಡ ವಿಚಾರಗಳ ಆಧಾರದ ಮೇಲೆ ನನ್ನ ಪ್ರತಿಕ್ರಿಯೆಯನ್ನು ಕೊಟ್ಟಿದ್ದೇನೆಯೇ ಹೊರತು ನನಗೆ ವೀರಶೈವ ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇನ್ನು ನೀವು ಪ್ರಸ್ತಾಪಿಸಿರುವ ಜರಿಮಲೆ ಪಾಳೆಯಗಾರರು ಉಜ್ಜನಿ ಮರುಳಸಿದ್ದೇಶ್ವರ ಸ್ವಾಮಿಯನ್ನು ಕಡೆಗಣಿಸಿದ್ದರಿಂದ ಅವರಿಗೆ ಯುದ್ಧವೊಂದರಲ್ಲಿ ಸೋಲಾಯಿತಂತೆ; ಆಗ ಅವರು ಸ್ವಾಮಿಯನ್ನು ತೈಲಾಭಿಷೇಕ ಮಾಡಿ ತಮ್ಮ ಪಾಪವನ್ನು ತೊಳೆದುಕೊಳ್ಳುವುದಾಗಿ ಬೇಡಿಕೊಂಡಾಗ ಮತ್ತೆ ಇವರಿಗೆ ಜಯವುಂಟಾಯಿತಂತೆ ಆದ್ದರಿಂದ ಈ ಪರಿಪಾಠ ಆಚರಣೆಯಲ್ಲಿದೆ ಎಂದು ನಾನೂ ಕೇಳಿದ್ದೇನೆ. ಆದರೆ ಸರಿಯಾದ ಮಾಹಿತಿ ಇಲ್ಲ. ನಾನು ಕೂಡ್ಲಿಗಿಯವನಾದರೂ ಕೂಡಾ ನಾನು ಒಂದನೇ ತರಗತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ (ಚಿತ್ರದುರ್ಗ, ಮೈಸೂರು ಮತ್ತು ಧಾರವಾಡಗಳಲ್ಲಿ) ಓದಿದ್ದರಿಂದ ಸ್ಥಳೀಯ ಐತಿಹಾಸಿಕ ವಿಷಯಗಳ ಬಗ್ಗೆ ಹೆಚ್ಚು ತಿಳಿಯದು :(( ಈ ಸಾರಿ ಊರಿಗೆ ಹೋದಾಗ ಹೆಚ್ಚಿನ ವಿಷಯಗಳನ್ನು ತಿಳಿಯಲು ಪ್ರಯತ್ನಿಸುತ್ತೇನೆ.
ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಜಯಪ್ರಕಾಶರಿಗೆ ನಮಸ್ಕಾರಗಳು.

>>ಸಾಕಷ್ಟು ಜೈನ ಬಸದಿಗಳು ಬೇರೆ ಬೇರೆ ಹೆಸರಿನ ಶಿವಮಂದಿರಗಳಾಗಿರುವುದು ಸರಿಯೇ?ಸರಿಯಿದ್ದಲ್ಲಿ ಈಗಿನ ಲಿಂಗಾಯತರು ಜೈನಧರ್ಮದಿಂದ ಮತಾಂತರ ಹೊಂದಿದವರೆಂದು ತಿಳಿಯಬೇಕೆ,ಈಗಿರುವ ಉಜ್ಜಿನಿ ದೇವಸ್ಥಾನವು ವೃಷಭನಾಥ ದೇವಾಲಯವೆಂದೂ,>>
ಇದಕ್ಕಿರುವ ಆಧಾರಗಳೇನು? ಯಾವುದಾದರೂ ಐತಿಹಾಸಿಕ ದಾಖಲೆಗಳಿವೆಯೇ?
ಇದ್ದರೆ ಹ೦ಚಿಕೊಳ್ಳಿ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by jayaprakash M.G on

ಈ ರೀತಿಯ ಉದಾಹರಣೆಗಳಲ್ಲಿ ಶ್ರೀಧರರು ತಿಳಿಸಿರುವ ಹರಪನಹಳ್ಳಿ ಭಾಗದಲ್ಲಿರುವ ಬಾಗಳಿಯ ದೇವಸ್ಥಾನ ಮತ್ತು ಹಡಗಲಿಯ ಮೈಲಾರ ಹಾಗು ಕುರುವತ್ತಿಯ ಬಸವೇಶ್ವರ ದೇವಸ್ಥಾನಗಳು. ಇಲ್ಲಿಯ ಮೂಲ ವಿಗ್ರಹಗಳು ಮತ್ತು ಗರ್ಭಗುಡಿಯ ದ್ವಾರಗಳ ಹಾಗು ದೇವತೆಗಳ ಪ್ರಭಾವಳಿಗಳಲ್ಲಿ ನೋಟಕ್ಕೆ ವತ್ಯಾಸ ಕಾಣುವೂದಾದರು ಈ ವಿಷಯಗಳಲ್ಲಿ ಸಂಶೋಧನೆಯ ಅವಶ್ಯಕತೆ ಹಾಗೂ ಖಚಿತತೆ ಬೇಕಾಗುತ್ತದೆ. ಅಲ್ಲದೆ ವಿಷಯದ ಸೂಕ್ಷ್ಮತೆಯೂ ಇರುವುದರಿಂದ ಸಂಶೋಧಿತ ವಿವರಣೆಗಳು ಬೇಕು. ಆದುದರಿಂದ ಈ ಕ್ಷೇತ್ರದಲ್ಲಿ ಅಧಿಕೃತ ಸಂಶೋಧನಾ ಪ್ರಭಂದಗಳ ಬಗ್ಗೆ ತಿಳಿಯಬೇಕಾಗಿದೆ.ಸಂಪದದ ಬಳಗದಲ್ಲಿ ಈ ಮಾಹಿತಿ ತಿಳಿದವರು ತಿಳಿಸಬೇಕಾಗಿ ವಿನಂತಿ ವಂದನೆಗಳೊಂದಿಗೆ ಜಯಪ್ರಕಾಶ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.