ಶ್ಯಾಮ ಕಶ್ಯಪ
ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.
ವರ್ಣಭೇದ ಈಗ ಕ್ರಿಕೆಟ್‍ನಲ್ಲೂ
ಭಾರತೀಯ ಮಾಧ್ಯಮಗಳು ಮತ್ತು ಅವು ಬಿತ್ತರಿಸುವ ಅಂತರ್ರಾಷ್ಟ್ರೀಯ ವರದಿಗಳನ್ನು ಬಿಟ್ಟರೆ ಮಿಕ್ಕವರು ಸುಮಾರು ಜನ ಭಾರತೀಯ ತಂಡವನ್ನು, ಹರ್ಭಜನ್ ಸಿಂಗ್‍ರನ್ನು ವಿಶೇಷ ಪದಗಳಿಂದ ಬಯ್ಯುತ್ತಿದ್ದಾರೆ. ನಮ್ಮ ಕ್ರಿಕೆಟ್ಟಿಗರೂ ರೇಸಿಸ್ಟ್ ಭಾಷೆ ಬಳಸುತ್ತರೆಯೇ ಎಂಬು ಸಣ್ಣ ಅನುಮಾನ ನಮ್ಮ ಹೃದಯದಲ್ಲೂ ಹುಟ್ಟಿದೆ. ಕ್ರಿಕೆಟ್ಟಿನ ನೆಪದಲ್ಲಾದರೂ ಭಾರತೀಯರು ರೇಸಿಸಂ ಬಗ್ಗೆ ಗಹನವಾಗಿ ಯೋಚಿಸುತ್ತಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ನಾವೇ ಶೋಷಿತರಾಗ್ಯೂ ನಮ್ಮ ಮಾತನ್ನು ಬೇರೆಯವರು ನಂಬದೇ ನಮ್ಮನ್ನೆ ಆರೋಪಿಸಿದರೆ ಹೇಗೆನ್ನಿಸಬಹುದೆಂದು ಈಗಲಾದರೂ ನಾವು ತಿಳಿಯಬಹುದೇನೊ. ದಲಿತರ ಬಗ್ಗೆಯೋ ಗಿರಿಜನರ ಬಗ್ಗೆಯೋ ವಿಕಲಾಂಗರ ಬಗ್ಗೆಯೋ ಅಥವ ಹೆಣ್ಣಿನ ಬಗ್ಗೆಯೋ ನಾವು ಕೇವಲವಾಗಿ ಮಾತಾಡುವಾಗ ಈ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದರೆ ನಾವುಗಳು ನಮ್ಮ ಮನಸ್ಸನ್ನು ಶುದ್ಧೀಕರಿಸಿಕೊಳ್ಳಬಹುದೇನೋ.
ಬಿ.ಬಿ.ಸಿ, ಸಿ.ಎನ್.ಎನ್ ಮುಂತಾದ ವಿದೇಶಿ ಪ್ರಸಾರಗಳಲ್ಲಿ ಬಿಳಿ ಜನರು ಹರ್ಭಜನ್ ಸಿಂಗ್‍ರ ವರ್ತನೆಯನ್ನು (ಅದನ್ನು ಅವರು ಮಾಡಿದ್ದೇ ಆದರೆ ಎಂಬ ಕ್ಲಾಸ್ ಸೇರಿಸಿ) ತೀವ್ರವಾಗಿ ಖಂಡಿಸಿದರು. ನಿಯಮದಂತೆ ಹರ್ಭಜನ್ ಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಒತ್ತಿ ಒತ್ತಿ ಹೇಳಿದ್ದನ್ನು ಟೀವಿಯಲ್ಲಿ ನೋಡಿದೆ. ಇತರರ ವಿಷಯ ಬಂದಾಗ ಹೀಗೆ ವರ್ಭಭೇದದ ವಿರುದ್ಧ ನಿಲುವನ್ನು ನಿರ್ದಾಕ್ಷಿಣ್ಯವಾಗಿ ಇವರು ತೆಗೆದುಕೊಳ್ಳುವುದು ಹೊಸದೇನಲ್ಲ ಬಿಡಿ. ಆದರೆ ಇವರ ಇತ್ತೀಚಿನ ಶತಮಾನಗಳ ವರ್ತನೆಯನ್ನು ಸುಮ್ಮನೆ ಒಮ್ಮೆ ನೆನಪಿಸಿಕೊಳ್ಳುವ.
ಭಾರತವನ್ನೊಳಗೊಂಡಂತೆ ಜಗತ್ತಿನ ಬಹುಭಾಗದ ಜನರ ಮೇಲೆ ವರ್ಣಭೇದ ನೀತಿ, ಅಮಾನುಷ ವರ್ತನೆ, ಧಗೆ, ಮೋಸ ದಬ್ಬಾಳಿಕೆ ಇತ್ಯಾದಿಗಳನ್ನು ಮೂರು-ನಾಲ್ಕು ಶತಮಾನಗಳ ತನಕ ಎಸಗಿದ್ದು ಇವರೆ. ಜಪಾನಿನ ಮೇಲೆ (ಜರ್ಮನಿಯನ್ನು ಬಿಟ್ಟು) ಅಣುಬಾಂಬ್ ಉಡಾಯಿಸಿದ್ದೂ ಇವರೆ. ತಾವು ಮನಬಂದಂತೆ ಭೂಮಿಯನ್ನು ಬಗೆದು, ಇಂಧನಕ್ಕೆ ಉಪಯೋಗಿಸಿ ಮಾರಕ ಅನಿಲಗಳನ್ನು ಆಕಾಶಕ್ಕೆ ಹೊರಸೂಸಿದ್ದೂ ಇವರೆ. ಆದರೆ ಇವೆಲ್ಲ ತಪ್ಪಲ್ಲ. ಅಪರಾಧಗಳಲ್ಲ. ಅಲ್ಲ... ಆ ಕಾಲಕ್ಕೆ ಇವುಗಳ ವಿರುದ್ಧ ನಿಯಮಗಳಿರಲಿಲ್ಲವಲ್ಲ, ಅದಕ್ಕೆ ಇವರು ಮಾಡಿದಾಗ ಇವ್ಯಾವುದಕ್ಕೂ ಶಿಕ್ಷೆಯಿಲ್ಲ. ಆದರೆ ಇನ್ನು ಮುಂದೆ ನಾವುಗಳು ಮಾತ್ರ ಈ ತರಹ ಮಾಡುವಂತಿಲ್ಲ ಅಷ್ಟೆ.
ಮಜ ಎಂದರೆ, ಬಿಳಿ ಜನ ಜಗಳ ಮಾಡುವುದಕ್ಕೆ ಆಯ್ಕೆ ಮಾಡಿಕೊಳ್ಳುವ ಘಟನೆಗಳು. ತಮ್ಮ ಉಡುಪು ಧರಿಸುವ ವೈಖರಿಯಿಂದಲೇ ಶೋಷಣೆಗೆ ಹಲವು ಬಾರಿ ತುತ್ತಾಗಿರುವ ಕೋಮಿನ ಒಬ್ಬ ಮನುಷ್ಯ, ಗುಲಾಮಗಿರಿಗೆ ತಳ್ಳಲ್ಪಟ್ಟ ಮತ್ತೊಂದು ಕೋಮಿನ ಮನುಷ್ಯನ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ ಎಂಬ ಕಾರಣಕ್ಕಾಗಿ ಇಷ್ಟು ದೊಡ್ಡ ಗಲಾಟೆ ಬಿಳಿ ಜನರದ್ದು. ಹರ್ಭಜನ್ ಮತ್ತು ಸೈಮಂಡ್ಸ್ ಇಬ್ಬರ ಕೋಮಿನ ವಿಷಯದಲ್ಲೂ ತಪ್ಪು ಮಾಡಿ, ಶಿಕ್ಷೆಯಿಲ್ಲದೇ ಪರಾರಿಯಾಗಿದ್ದ ಬಿಳಿ ಮಂದಿ ಈಗ ಇವರ ಮಧ್ಯ ನ್ಯಾಯ ಮಾಡಲು ಉತ್ಸುಕರಾಗಿ ಮುಂದಾಗಿರುವುದು ನಿಮ್ಮನ್ನು ಕಿಚಾಯಿಸುವುದಿಲ್ಲವೇ.
ಅದು ಹೋಗಲಿ, ಅಲ್ಲಾರಿ ಸೈಮಂಡ್ಸ್, ನಿಮ್ಮಷ್ಟೇ ಕಪ್ಪಗಿರುವ ಮತ್ತೊಬ್ಬ ಮನುಷ್ಯ ನಿಮ್ಮನ್ನು ಮಂಗ ಅಂದರೆ ನಿಮಗೆ ಇಷ್ಟು ಬೇಜಾರಾಯ್ತು. ತಡ್ಕೊಳಕ್ಕೇ ಆಗ್ಲಿಲ್ಲ. ನಿಮ್ಮ ತಂಡದ ಆಟಗಾರರ ಪೂರ್ವಜರು ನಿಮ್ಮ ಜನಾಂಗವನ್ನು ನಡೆಸಿಕೊಂಡ ರೀತಿಯ ಬಗ್ಗೆ ನಿಮಗೇನು ಸಿಟ್ಟೇ ಇಲ್ವೆ? ಅವರು ಮಾಡಿದ್ದು ತಪ್ಪಲ್ವೆ? ಇನ್ನೂ ಅವರ ಜೊತೆಗೇ ಇದ್ದುಕೊಂಡು ಅವರ ಒಟ್ಟಿಗೆ ಅದ್‍ಹೇಗ್ರಿ ಆಟ ಆಡ್ತೀರ?
ಆಸ್ಟ್ರೇಲಿಯಾದಲ್ಲಿ ಆಡುವುದು ಕ್ರಿಕೆಟ್ ಅಲ್ಲ. ಅದರ ತರಹವೇ ಇರುವ ಮತ್ತೊಂದು ಆಟ: ಇದು ವಿ. ಇ. ಕ್ರಿಕೆಟ್ (ವಿವೇಚನೆ ಇಲ್ಲದ ಕ್ರಿಕೆಟ್). ಹಂಗೆ ನೋಡ್ತಾ ಹೋದ್ರೆ ಇವೆಲ್ಲವೂ ಬಿಳಿಜನರ ಧೂರ್ತತೆಗೆ ಹಿಡಿದ ಕನ್ನಡಿ, ಇಷ್ಟೆಲ್ಲಾ ಗೊತ್ತಿದ್ದು ನಾವುಗಳು ಕೇವಲ ಆಸ್ಟ್ರೇಲಿಯ ಸೀರೀಸ್ ಬಹಿಷ್ಕರಿಸುತ್ತೇವೆ ಅಂತ ಹೇಳೋದು ಕೂಡ ಡೋಂಗಿತನವೇ. ನಾವು ಈ ದುರುಳರ ವಿರುದ್ಧ ನಿಜವಾಗಿಯೂ ಏನಾದ್ರೂ ಕ್ರಾಂತಿಕಾರಿ ಹೆಜ್ಜೆ ಇಡಬೇಕು ಅಂದ್ರೆ ಈ ಬಿಳಿಜನ ಕಂಡುಹಿಡಿದ ಕ್ರಿಕೆಟ್ ಎಂಬ ಆಟವನ್ನೇ ಬಹಿಷ್ಕರಿಸಬೇಕು; ಅಥವ ಈ ಬಿಳಿಯರನ್ನೇ ಈ ಆಟದಿಂದ ಬಹಿಷ್ಕರಿಸಬೇಕು.

- ಶ್ಯಾಮ ಕಶ್ಯಪ ರವರ ಬ್ಲಾಗ್
- Login or register to post comments
- 352 hits
- Email this blog





RSS:
ಪ್ರತಿಕ್ರಿಯೆಗಳು
ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ
ಕ್ರಿಕೆಟನ್ನು,ಬಿಳಿಯರನ್ನು ಬಹಿಷ್ಕರಿಸುವುದು ಸರಿಯಲ್ಲ.ಎಗರಾಡುವವರನ್ನು,ಅದರಲ್ಲೂ ಆಷ್ಟ್ರೇಲಿಯಾದವರನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡಬೇಕು.ಭಾರತ(+ ಮಾಜೀ ಕ್ರಿಕೆಟಿಗರೆಲ್ಲ ಇದೇ ಪ್ರಥಮ ಬಾರಿಗೆ ಒಟ್ಟಾಗಿ) ವಿರೋಧಿಸುತ್ತಿರುವುದು ಖುಷಿಯ ಸಂಗತಿ.
ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ
ಸದ್ಯಕ್ಕೆ ಚಿನ್ನಿ - ದಾ೦ಡು - -ಲಗೋರಿ ಆಟವನ್ನೇ ಆಡುವ೦ತೆ ಕಾನೂನು ಮಾಡಬೇಕು ಅ೦ತೀರೋ ?
ಯಾವುದನ್ನಾದರೂ ಬಹಿಷ್ಕಾರ ಹಾಕೋದು ಸುಲಭವೇ ? ನಾವು ಬಿಳಿಯರನ್ನು ಬಹಿಷ್ಕರಿಸಬೇಕು ಅ೦ದರೆ ಅದು ಕೂಡ ವರ್ಣ ಬೇಧದ೦ತೆ ಕಾಣುತ್ತದೆ. ಸಮಸ್ಯೆ ಕ್ರಿಕೇಟ್ ನಲ್ಲಿಯಲ್ಲಾ ಮನಸ್ಸಿನಲ್ಲಿರೋದು.
ಅಲ್ಲಿಯೇ ಇದ್ದು ಅವರನ್ನು ಗೆದ್ದು ಬರೋದು ಸರಿ ಅನ್ಸತ್ತೆ .. ಸುಮ್ಮನೇ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ ಪ್ರಯೋಜನವಿಲ್ಲಾ.
ಆಟ ಆಡೋದೆ ನಮ್ಮ ಭಾವನೆಗಳನ್ನು ಗೆಲ್ಲುವುದಕ್ಕೋಸ್ಕರ ಅಲ್ಲವೇ ? ಮತ್ತೆ ನಮ್ಮ ಭಾವನೆಗೆ ಸೋತರೆ ಹೇಗೆ ?
ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ
ಇದು ಯಾವ ವರ್ಣದ ಭೇದ?
ಅಲ್ಲಿರುವುದು.. ಜನಾಂಗ ಭೇದ/ನಿಂದನೆ(race, not color )
ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ
ಪ್ರತಿಕ್ರಿಯಿಸಿದವರೆಲ್ಲರಿಗೂ ಧನ್ಯವಾದಗಳು.
ನಾನು ಬರೆಯುತ್ತಿರುವುದು ವರ್ಣಭೇದ ಮಾಡುತ್ತಲೆ. ಇದನ್ನು ಎತ್ತಿ ತೋರಿದ ಮುರಳಿಗೆ ವಂದನೆಗಳು. ಹಾಗೆಯೇ ಮಹೇಶ್‍ಗೆ: ಜನಾಂಗೀಯ ಭೇದ ಇಲ್ಲವೆಂದಿಲ್ಲ ಅದೂ ಸೇರಿದೆ. ಇಲ್ಲಿ ಇದ್ದು ಕಾಣುವುದು ವರ್ಣ. ಜನಾಂಗ, ಮತಗಳು ನಂತರ ಬರುತ್ತವೆ. ಆದ್ದರಿಂದ ವರ್ಣಭೇದ ಎಂಬ ಶಬ್ದವನ್ನು ಬಳಸಿದೆ.
ಇಡೀ ಬಿಳಿಯ ಜನಾಂಗವನ್ನೇ ಸಂಶಯದಿಂದ ಯಾಕೆ ನೋಡಬೇಕು ಎಂಬುದನ್ನು ಒಂದೆರೆಡು ಕಡೆ ಹೇಳಿದ್ದೇನೆ. ನಮ್ಮ ಮತ್ತು ಅವರ, ಇಬ್ಬರ ಮನಸ್ಸಿನಲ್ಲೂ ಸಮಸ್ಯೆಯಿದೆ ಎಂಬುದೂ ಅಲ್ಲಿಯೇ ತಿಳಿಯುತ್ತದೆ. ಅದಿರಲಿ.
ಒಂದು ಆಟವನ್ನು ಬಹಿಷ್ಕರಿಸುವುದಕ್ಕೆ ಅಥವ ಮತ್ತೊಬ್ಬರೊಡನೆ ಆ ಆಟವನ್ನು ಆಡದೇ ಇರುವುದಕ್ಕೆ ಕಾನೂನು ತಂದೇನು ಬಹಿಷ್ಕಾರ ಮಾಡಬೇಕಾಗಿಲ್ಲ. ಮನಸ್ಸಿನಲ್ಲಿದ್ದರೆ ಸಾಕು. ಆಟವನ್ನು ಆಡದಿದ್ದರೆ ಸಾಕು. ನಾನು ಕೇವಲ ’ಕ್ರಿಕೆಟ್ ಎಂಬ ಒಂದು ಆಟ’ದ ಬಗ್ಗೆ ಮಾತಾಡುತ್ತಿಲ್ಲ ಎಂಬುದನ್ನು ಮೇಲಿನ ಲೇಖನದಿಂದಲೇ ನೀವು ಊಹಿಸಬಲ್ಲಿರಿ ಎಂದುಕೊಳ್ಳುತ್ತೇನೆ.
ಇನ್ನು ಈ ವಿಷಯದಲ್ಲಿ ನನ್ನ ಸ್ಪಂದನೆ ತೀರಾ ಭಾವನಾತ್ಮಕವಾಯಿತು, ಸರಿಯಲ್ಲ ಎಂದು ಓದುಗರಿಗೆ ಅನ್ನಿಸಿದರೆ ಸರಿ; ನಿಮ್ಮಿಷ್ಟ. ಇವರು ಮಾಡುತ್ತಾ ಬಂದಿರುವುದನ್ನು ತಿಳಿದೂ, ಹಲವೆಡೆ ಹಲವು ವಿಚಾರಗಳಲ್ಲಿ ಭಾವನಾತ್ಮಕವಾಗಿ ಸ್ಪಂದಿಸಿಯೂ, ಯಾಕೆ ಇವರ ವಿಷಯದಲ್ಲಿ ಭಾವನಾರಹಿತರಾಗಿ, ಅವೇಶರಹಿತವಾಗಿ ನೋಡಬೇಕು ಎಂಬ ಪ್ರಶ್ನೆಯ ಉತ್ತರ ನಿಮಗೆ ಬಿಟ್ಟದ್ದು.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ
ಒಂದು ತಮಾಷೆಯನ್ನು ಎಲ್ಲ ಮರೆತ ಹಾಗೆ ಕಾಣುತ್ತದೆ...
’ಕೋತಿ’ ಎಂದಿನಿಂದ ಮನುಷ್ಯ ಜನಾಂಗಕ್ಕೆ (Race) ಸೇರಿದೆ?
ಇದೇ ರೀತಿ, ಯಾರೆ ಆಗಲಿ, ಸೈಮಂಡ್ಸ್ ನನ್ನು ಬಿಟ್ಟು, ಇತರ ಬಿಳಿಯರನ್ನು ’ಕೋತಿ’ ಎಂದು ಕರೆದಿದ್ದರೆ, ಜನಾಂಗ ನಿಂದನೆ ಎನ್ನುತ್ತಿದ್ದರೆ?
ಕುಂಬಳಕಾಯಿ ಕಳ್ಳನ ಕಥೆಯಂತೆ ತೋರುತ್ತದೆ...
--ಶ್ರೀ