ಸಣ್ಣಕತೆ : ನೆನಪು

ಸಣ್ಣಕತೆ : ನೆನಪು

ನೆನಪು
=====

ಅಪ್ಪ ಈ ಜಾಗ ಅದೆಷ್ಟು ಸುಂದರ ಅಲ್ವಾ? 
’ 
ಅಪ್ಪ  ಮೌನವಾಗಿ ಸುತ್ತಲೂ ನೊಡುತ್ತಿದ್ದ.
ಅಪ್ಪನ ಮೌನದಲ್ಲಿ ನಿರ್ಧಾರವಿತ್ತು

ಜುಳು ಜುಳು ಶಬ್ದ ಮಾಡುತ್ತ ಹರಿಯುತ್ತಿರುವ ನದಿ. ಸುತ್ತಲೂ ಸುಂದರ ಕಾನನ. ಪಕ್ಷಿಗಳ ಕಲರವ. ಬೆಟ್ಟಗುಡ್ಡಗಳ ಮೋಹಕ ದೃಷ್ಯ. ನೋಡಿದಷ್ಟು ನೋಡಲೇ ಬೇಕೆನಿಸುವ ಪರಿಸರ. 

ಅಪ್ಪ ಈ ನದಿಯನ್ನು ನೋಡು ಅದೆಷ್ಟು ಮನಮೋಹಕ. ನಾವು ಇರುವ ಸ್ಥಳದಲ್ಲಿಯಾದರೆ ಕುಡಿಯುವ ನೀರಿಗೂ ಎಂತದೋ ಕಾಟ. ಅಲ್ಲಿರುವ ಅಷ್ಟು ಜನರಿಗೂ ಅದೇ ಜೀವ. ಬೇಸಿಗೆ ಬಂತೆಂದರೆ ಅಷ್ಟೆ, ಹನಿ ಹನಿ ನೀರಿಗೂ ಪರದಾಟ. ಹಾಗೆ ನೋಡಿದರೆ ನಾವಿರುವ ಜಾಗದಿಂದ ಬಲು ದೂರವೇನು ಇಲ್ಲ. ಇಲ್ಲಿಯ ನದಿ ನೋಡಿದರೆ ಸಂತೋಷ ಮೈದುಂಬುತ್ತದೆ. 

ಹುಡುಗನ ಮಾತಿಗೆ ನದಿ ಮುದದಿಂದ ಉಬ್ಬಿತು. ಅದಕ್ಕೊಂದು ಆಮೋದ, ನುಲಿತ. 

ಕೆಲವೇ ದಿನದಲ್ಲಿ ಅವರ ವಾಸಸ್ಥಳ ಬದಲಾಗಿ ನದಿಯ ದಡಕ್ಕೆ ಬಂದು ಸೇರಿದರು. ಅವರ ಹಿಂದೆ ನಿಧಾನಕ್ಕೆ ಚಿಕ್ಕ ಹಳ್ಳಿಯೆ ನಡೆದುಬಂದಿತು. ಅಲ್ಲಿ ಮನೆಗಳಾದವು. ಅವರ ಹಿಂದೆಯೆ ಸಾಕಿದ ದನಗಳು ಪ್ರಾಣಿಗಳು . ಸಕಲ ಸಂಪತ್ತು. 

ಅಲ್ಲಿದ್ದ ಹಕ್ಕಿಗಳೀಗ ಬೇರೆ ಸ್ಥಳ ಹುಡುಕಿ ಹೊರಟಿದ್ದವು.  ಜನರ ಮಾತಿನ ಶಭ್ದ ಪ್ರಾಣಿಗಳ ಕೂಗು ನಾಯಿಗಳ ಬೊಗಳುವಿಕೆ ಎಲ್ಲವನ್ನು ಸೇರಿ ಅಲ್ಲಿ ಸದಾ ನೆಲೆಸಿದ್ದ ಮೌನವನ್ನು ಹೊರದೂಡಿದ್ದವು. ಹಾಡುಹಗಲೇ ಕೇಳುತ್ತಿದ್ದ ನದಿಯ ಜುಳು ಜುಳು ಈಗ ನಡುರಾತ್ರಿಗೆ ಮಾತ್ರ ಮೀಸಲಾಯಿತು. 

ದಿನ ದಿನಕ್ಕೆ ಜನ ಹೆಚ್ಚಾದರು, ನದಿಯ ನೀರು ಕಲುಶಿತವಾಯಿತು. 

ಹಾಗೆ ಅಲ್ಲಿ ನೆಲೆಸಿದ್ದ ಜನರ ಮನಸು ನುಡಿ ಆಚರಣೆಗಳು ಸಹ ಕಲುಶಿತಗೊಂಡಿತು. ಅಟ್ಟದಲ್ಲಿ ಸಾಕಷ್ಟು ಕೂಡಿಟ್ಟರು ಮತ್ತಷ್ಟಕ್ಕೆ ಹೋರಾಟ. ಅಕ್ಕ ಪಕ್ಕದ ಜನರ ನೆಲವೂ ತನಗೇ ಸೇರಬೇಕೆನ್ನುವ  ಆಸೆಪುರಕ ಜನರ ತವಕ. ಆಸೆ ತೀರದಾಗ ತೋರುವ ಕ್ರೌರ್ಯ. ಜಗಳ ಹೋರಾಟ ಕೊಲೆಗಳಿಗೆ ಇಂತಹುದೆ ಎಂದು ಕಾರಣವೇನಿಲ್ಲ ನೀರು,ನೆಲ, ಧರ್ಮ, ಬಾಷೆ, ಜಾತಿ ಎಲ್ಲ ಕಾರಣಕ್ಕೂ ಹೋರಾಟ ದ್ವೇಷ ಯುದ್ದ ಕೊಲೆ . 
 
ಪಕ್ಕದಲ್ಲಿದ್ದ ನದಿಗೆ ಸಹನೆ ಮೀರಿ ಹೋಯಿತು. ಎಷ್ಟು ಎಂದು ಇವರ ಗಲಾಟೆ ಸಹಿಸುವುದು. ಇದ್ದುಕೊಂಡು ಹೋಗಲಿ ಎಂದರೆ ತನ್ನನ್ನೆ ಮಾರಿಕೊಳ್ಳುವ ಜನ ಇವರು, 
ಪ್ರಕೃತಿಗೆ ಶಾಪ ಇವರು 
ದೈವ ಸೃಷ್ಟಿಯ ವಿಕೃತಿ ಇವರು 
ಇನ್ನು ಸಹಿಸುವುದು ಬೇಡ ಅಂದುಕೊಂಡಿತು. 
ಮರುಕ್ಷಣದಲ್ಲಿ ಅದರಲ್ಲಿ ಅದೆಲ್ಲಿ ತುಂಬಿ ಬಂದಿತೊ ಜಲಪೂರ. ಆಳೆತ್ತರದ ಅಲೆಗಳು , ಕಣ್ಣು ಕುಕ್ಕುವ ರೌದ್ರತೆ. ಎಲ್ಲವನ್ನೂ ಏಕಾಪೋಶನೆ ತೆಗೆದುಕೊಳ್ಳುವ ಉತ್ಸಾಹ. 

ದಡದಲ್ಲಿದ್ದ ಜನರರನ್ನೆಲ್ಲ ಒರೆಸಿ ಹಾಕಿತು, ನದಿಯ ಪ್ರವಾಹ, ಅವರು ನಿರ್ಮಿಸಿದ, ಮನೆ ಮಠ, ದೇವಾಲಯ ಶಾಲೆಯೆನ್ನದೆ ಎಲ್ಲವನ್ನು ಕಿತ್ತೊಗೆಯಿತು. ಅದರ ರೋಷ ತೀರಲಿಲ್ಲ. ಅವರು ಸಾಕಿದ್ದ ಪ್ರಾಣಿಗಳನ್ನು ಕೊಚ್ಚಿಹಾಕಿತು. ಮನುಜ ಸಾಕಿದ ಪ್ರಾಣಿಗಳಿಗು ಅವನದೇ ದುರ್ಗುಣ ಬಂದಿರುತ್ತೆ ಎಂದು ನದಿಯ ಅನುಭವ. 

ಎಲ್ಲವನ್ನು ಕಿತ್ತೊಗೆದ ನಂತರ ಅದರ ಕೋಪ ತಣಿಯಿತು. ನಿಧಾನಕ್ಕೆ ತನ್ನ ಪ್ರವಾಹವನ್ನು ತಗ್ಗಿಸಿತು. ಕೆಲವೇ ದಿನ ಮತ್ತೆ ಸಹಜ ಸ್ಥಿತಿಗೆ ತಲುಪಿತು ಅದರ ಹರಿವು. ಈಗ ಸುತ್ತ ಮುತ್ತಲೂ ಮತ್ತೆ ಅದೇ ಮೌನ. ಜನ ಜೀವನವಿದ್ದ ಗುರುತು ಇಲ್ಲದಂತೆ ಅಳಿದು ಹೋಗಿದೆ. ಕಷ್ಟಪಟ್ಟು ಹುಡುಕಿದರೆ ಅಲ್ಲೊಂದು ಇಲ್ಲೊಂದು ಕುರುಹುಗಳು ನದಿಯ ಪೌರುಷದ ಸಂಕೇತದಂತೆ ಉಳಿದಿತ್ತು. ನದಿಯ ಮನ ಶಾಂತವಾಯಿತು. ಮತ್ತೆ ಜುಳು ಜುಳು ವಿನಾದ ದೂರಹೋಗಿದ್ದ ಹಕ್ಕಿಗಳ ಗುಂಪು ಮತ್ತೆ ಬಂದು ನೆಲಸಿದವು, ಮರಗಿಡಗಳು ಪೊದೆಗಳು ಮತ್ತೆ ತನ್ನ ಒಡೆತನವನ್ನು ಸ್ಥಾಪಿಸಿದವು. 
ಅದೆಷ್ಟೋ ದಶಕಗಳು ಕಳೆದುಹೋದವು. ದಾರಿಯಲ್ಲಿ ನಡೆದು ಹೊರಟಿದ್ದ ಯಾರೋ ಅಪ್ಪ ಮಗನಿರಬಹುದು , ಹಾದಿ ಮಧ್ಯದ ನದಿಯ ದಡದಲ್ಲಿ ನಿಂತರು .

ಜುಳು ಜುಳು ಶಬ್ದ ಮಾಡುತ್ತ ಹರಿಯುತ್ತಿರುವ ನದಿ. ಸುತ್ತಲೂ ಸುಂದರ ಕಾನನ. ಪಕ್ಷಿಗಳ ಕಲರವ. ಬೆಟ್ಟಗುಡ್ಡಗಳ ಮೋಹಕ ದೃಷ್ಯ. ನೋಡಿದಷ್ಟು ನೋಡಲೇ ಬೇಕೆನಿಸುವ ಪರಿಸರ......
ಅಪ್ಪ ಈ ಜಾಗ ಅದೆಷ್ಟು ಸುಂದರ ಅಲ್ವಾ? 
’       
ಅಪ್ಪ  ಮೌನವಾಗಿ ಸುತ್ತಲೂ ನೊಡುತ್ತಿದ್ದ 
ಅಪ್ಪನ ಮೌನದಲ್ಲಿ ನಿರ್ಧಾರವಿತ್ತು

ನದಿ ಅದೇನೊ ನೋವಿನಿಂದ ಹಳೆಯ ನೆನಪಿನಿಂದ ನರಳಿತು. 

Rating
No votes yet

Comments

Submitted by nageshamysore Mon, 07/14/2014 - 18:41

ಮಾನವ ಜೀವಿಯ ಅನಗತ್ಯ ನೆನಪುಗಳು, ಕಲಿತ ಪಾಠಗಳು, ಕಾಲದ ಪ್ರವಾಹದಲ್ಲಿ ಕೊಚ್ಚಿಹೋಗಿ, ಹೊಸ ಸಂತತಿಗಳಲ್ಲಿ ಮತ್ತೆ ಅದೆ ಆಸೆ, ಆಕಾಂಕ್ಷೆ, ಸ್ವಾರ್ಥಗಳ ರೂಪದಲ್ಲಿ ಅನಾವರಣಗೊಳ್ಳುವ ಬಗೆಯನ್ನು  ಮಾರ್ಮಿಕವಾಗಿ ಬಿಂಬಿಸಿದ ಕಥೆ. ಎಲ್ಲದಕ್ಕೂ ಮೂಕಸಾಕ್ಷಿಯಾಗಿ ವೇದನೆ, ಯಾತನೆಯನ್ನನುಭವಿಸುವುದು ಹೀಗೆ ಪರೆಪದೆ ಅತ್ಯಾಚಾರಕ್ಕೊಳಗಾಗುವ ನದಿಯಂತಹ ಮೂಕ ನಿಸರ್ಗದ ಹಣೆಬರಹವೆ ಸರಿ!

Submitted by partha1059 Tue, 07/15/2014 - 10:41

In reply to by nageshamysore

ಹೌದು ನಾಗೇಶರೆ ನಿಸರ್ಗ‌ ಎಷ್ಟು ಸಾರಿ ಪಾಠ‌ ಹೇಳಿಕೊಟ್ಟರು, ನೆನಪಿಡದ‌ , ಅನುಸರಿಸದ‌
ದಡ್ಡ‌ ವಿಧ್ಯಾರ್ಥಿ ಮನುಷ್ಯ‌ ಎನ್ನುವ‌ ನಿಮ್ಮ‌ ಮಾತು ನಿಜ‌
‍‍_ ಪಾರ್ಥಸಾರಥಿ

Submitted by makara Mon, 07/14/2014 - 19:03

ಆಲೋಚನೆಗೆ ಹಚ್ಚುವ ನೀತಿ ಕಥೆಗೆ ಧನ್ಯವಾದಗಳು ಪಾರ್ಥರೆ. ನಿಮ್ಮ ಕಥೆ ಓದಿದ ಮೇಲೆ ಸಾಂದರ್ಭಿಕವಾಗಿ ಸಂಸ್ಕೃತ ಸುಭಾಷಿತವೊಂದರ ನೆನಪಾಯಿತು. ಅದು ಹೀಗೆ ಹೇಳುತ್ತದೆ, ಕೋಪಿಷ್ಟರು ಬೆಂಕಿಯಂತೆ ಮತ್ತು ಸಜ್ಜನರು ನೀರಿನಂತೆ. ಕೋಪಿಷ್ಟರು ಬೆಂಕಿಯಂತೆ ವೃಕ್ಷವನ್ನೆಲ್ಲಾ ಸುಟ್ಟು ಬೂದಿ ಮಾಡಿದರೂ ಸಹ ಅದರ ಬುಡವನ್ನು ಸುಡಲಾರರು. ಆದರೆ ನೀರಿಗೆ ಕೋಪ ಬಂತೆಂದರೆ ಅದು ವೃಕ್ಷವನ್ನು ಸಮೂಲಾಗ್ರವಾಗಿ (ಬೇರು ಸಹಿತ) ಕಿತ್ತು ಹಾಕಿಬಿಡುತ್ತದೆ.

Submitted by partha1059 Tue, 07/15/2014 - 10:43

In reply to by makara

ಬೇರು ಸಮೇತ‌ ಕಿತ್ತು ಹಾಕಿದರು ಮತ್ತೆ ಮತ್ತೆ ಚಿಗುರುವ‌ ರಕ್ತಬೀಜಾಸುರನ‌ ತಲೆಯಂತೆ ಈ ಮನುಷ್ಯನೆಂಬ‌ ಸ್ಱುಷ್ಟಿಯ‌ ಸ್ವಭಾವ‌
ಧನ್ಯವಾದಗಳು