' ಸಾವಿರದ ಗಡಿ ದಾಟಿದ ಹಾಯ್ ಪಯಣ ’

' ಸಾವಿರದ ಗಡಿ ದಾಟಿದ ಹಾಯ್ ಪಯಣ ’

ಹಾಯ್ ಬೆಂಗಳೂರು ಕನ್ನಡ ವಾರ ಪತ್ರಿಕೆಯ ಸಾವಿರ ಗಡಿ ಮುಟ್ಟಿದ ಸಂಚಿಕೆ ನನ್ನ ಮುಂದಿದೆ. ಪತ್ರಿಕೆಯ ಈ ಧೀರ್ಘ ಪಯಣ ಅದು ಸಾಗಿ ಬಂದ ದಾರಿಯ ದಾಖಲೆಯ ಒಂದು ಮೈಲಿಗಲ್ಲು. ಪತ್ರಿಕೆ ಯಾವುದೇ ಇರಲಿ ಆ ಪತ್ರಿಕೆಯ ಸಂಪಾದಕ, ಪತ್ರಿಕಾ ಬಳಗ ಮತ್ತು ಅದರ ಓದುಗರ ಪಾಲಿಗೆ ಅದೊಂದು ಅಭೂತಪೂರ್ವ ಕ್ಷಣ. ಎಲ್ಲ ಅಡೆತಡೆ ಮತ್ತು ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆ ಪತ್ರಿಕೆಯೊಂದನ್ನು ಹುಟ್ಟು ಹಾಕಿ ಯಶಸ್ಸಿನೆಡೆಗೆ ಅದನ್ನು ತೆಗೆದುಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಓದುಗರನ ಮನ ತಲುಪಬೇಕು ಅವರು ಪತ್ರಿಕೆಯನ್ನು ಕೊಂಡೋದುವಂತೆ ಮಾಡಬೇಕು. ಜೊತೆಗೆ ಅವರು ಆ ಪತ್ರಿಕೆಯ ಓದುಗರಾಗಿ ಮುಂದುವರೆಯ ಬೇಕು ಇದೊಂದು ನಿರಂತರ ಬೌದ್ಧಿಕ, ವರ್ತಮಾನದ ಆಗು ಹೋಗುಗಳ ಬಗೆಗೆ ಗಮನ ಹರಿಸುವ ಅವುಗಳ ಒಳ ಹೊಕ್ಕು ನೋಡುವ ಗ್ರಹಿಸುವ ಮತ್ತು ಅಕ್ಷರರೂಪಕ್ಕಿಳಿಸುವ ವರದಿಗಾರರು ಅಂಕಣಕಾರರು ಬೇಕು. ಈ ಹಂತದಲ್ಲಿ ಪತ್ರಿಕೆಯ ಪರಂಪರ ರೂಪಗೊಳ್ಳುವ, ಮುಂದುವರೆಯುವ, ವಿಘಟನೆಗೊಳ್ಳುವ ಮತ್ತ ಸಂಯೋಜನಗೊಳ್ಳುವ ಒಂದು ನಿರಂತರ ಪ್ರಕ್ರಿಯೆ ನಡೆಯುತ್ತಲೆ ಇರುತ್ತದೆ. ಇದು ಆ ಪತ್ರಿಕೆಯ ಸಂಪಾದಕನ ಪಾಲಿಗ ಒಂದು ಸವಾಲಿನ ಕೆಲಸ. ಒಂದು ಸಣ್ಣ ಕೊಂಡಿ ಕಳಚಿದರೂ ಆತ ಪರದಾಡಬೇಕು. ಈ ಸಂಧರ್ಭದಲ್ಲಿ ಕನ್ನಡ ಪತ್ರಿಕೆಗಳ ಹುಟ್ಟು ಮತ್ತು ಅವು ಸಾಗಿಬಂದ ಪರಂಪರೆ ಸುಮ್ಮನೆ ನನ್ನ ಕಣ್ಮುಂದೆ ಸರಿದು ಹೋದವು. ಅದನ್ನು ತಮ್ಮೊಂದಿಗೆ ಹಂಚಿ ಕೊಳ್ಳುವುದೆ ಈ ಬರಹದ ಉದ್ದೇಶ.

     ದಿನ ಪತ್ರಿಕೆಗಳು ವಾರ ಪತ್ರಿಕೆಗಳು ಮತ್ತು ಮಾಸಿಕಗಳಿಗೆ ಅವುಗಳದೆ ಆದ ಪ್ರಾಮುಖ್ಯತೆಗಳಿರುತ್ತವೆ ಜೊತೆಗೆ ಕಾಲದ ಸೀಮಿತತೆ ಕೂಡ. ದಿನ ವಾರ ತಿಂಗಳುಗಳು ಅವುಗಳ ಕಾಲಮಿತಿ. ಹೊಸವು ಬಂದೊಡನೆ ಹಳೆಯವು ಹಿಂದೆ ಸರಿದು ಬಿಡುತ್ತವೆ. ಈಗ್ಗೆ ಸುಮಾರು ಐವತ್ತು ವಷ೵ಗಳ ಹಿಂದೆ ಸಂಯುಕ್ತ ಕನಾ೵ಟಕ, ಪ್ರಜಾವಾಣಿ ದಿನ ಪತ್ರಿಕೆಗಳು, ವಾರ ಪತ್ರಿಕೆ ಕಮ೵ವೀರ ಮತ್ತು ಕಸ್ತೂರಿ ಮಾಸ ಪತ್ರಿಕೆಗಳು ರಾಜ್ಯಾದ್ಯಂತ ಪ್ರಚಲಿತದಲ್ಲಿದ್ದ ಪತ್ರಿಕೆಗಳು. ಆಗ ಕಸ್ತೂರಿ’ಯನ್ನು ಕನ್ನಡದ ರೀಡರ್ಸ್ ಡೈಜೆಸ್ಟ್ ಎಂದು ಕರೆಯಲಾಗುತ್ತಿತ್ತು. ನಂತರ ಕಳೆದ ಶತಮಾನದ ಆರನೇ ದಶಕದ ಪೂರ್ವಾರ್ಧದ ಸಮಯವೆಂದು ಕಾಣುತ್ತದೆ ಪ್ರಜಾವಾಣಿ ಪತ್ರಿಕೆ ಬಳಗ ಸುಧಾ ವಾರ ಪತ್ರಿಕೆಯನ್ನು ಹೊರತಂತು. ವರ್ಣರಂಜಿತ ಪುಟಗಳು, ಧಾರಾವಾಹಿಗಳು, ಸಿನೆಮಾ ಸುದ್ದಿಗಳು, ರಾಜಕೀಯ ವಿಶ್ಲೇಷಣೆಗಳು ಇನ್ನಿತರ ಅಂಕಣಗಳು ಓದುಗರನ್ನು ವಿಶೇಷವಾಗಿ ರಂಜಿಸಿದ್ದವು. ನಾನು ಎಸ್.ಎಲ್.ಭೈರಪ್ಪನವರ ಕಾದಂಬರಿ ಜಲಪಾತ, ಟಿ.ಕೆ.ರಾಮರಾಯರ ಕಾದಂಬರಿಗಳಾಧ ಕೋವಿ ಕುಂಚ ಮತ್ತು ಬಂಗಾರದ ಮನುಷ್ಯ ಮತ್ತು ಕೆ.ಟಿ.ಗಟ್ಟಿಯವರ ಶಬ್ದಗಳು ಮುಂತಾದ ಕೃತಿಗಳನ್ನು ಓದಿದ್ದು ಸುಧಾ ಪತ್ರಿಕೆ ಯಲ್ಲಿಯೆ. ನಂತರ ಇದೇ ಬಳಗ ಮಯೂರ ಮಾಸಿಕವನ್ನು ಹೊರತಂತು ಇಂದಿಗೂ ಮಯೂರ ಒಂದು ಮೌಲ್ಯಯುತ ದಾಖಲೆ ಯೋಗ್ಯ ಪತ್ರಿಕೆ. ನಂತರದಲ್ಲಿ ಉದಯವಾಣಿ ದಿನಪತ್ರಿಕೆಯ ಬಳಗ ತರಂಗವೆಂಬ ವಾರಪತ್ರಿಕೆ ಮತ್ತು ತುಷಾರವೆಂಬ ಮಾಸಪತ್ರಿಕೆಗಳನ್ನು ಹೊರತಂತು. ಅವುಗಳದೂ ಕೂಡ ಯಶಸ್ಸಿನೆಡೆಗಿನ ಹಾದಿಯೆ, ಅವುಗಳೂ ಸಹ ಇಂದಿಗೂ ಜನಪ್ರಿಯತೆ ಮತ್ತು ಪಸ್ರಸ್ತುತೆಗಳನ್ನು ಉಳಿಸಿ ಕೊಂಡಂತಹವುಗಳು. ಓದುಗ ವೃಂದ ಹೆಚ್ಚಿ ಎಲ್ಲ ಪತ್ರಿಕಗಳು ಹೊಸ ದಿಕ್ಕಿನೆಡೆಗೆ ಮುಖ ಮಾಡಿದ ಕಾಲಘಟ್ಟ. ಪ್ರಜಾವಾಣಿ ಸಾಪ್ತಾಹಿಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದ ಪ್ರಗತಿಪರ ಲೇಖಕ ಪಿ.ಲಂಕೇಶ ಕೆಲವೊಂದು ವೈಚಾರಿಕ ಕಾರಣಗಳಿಗಾಗಿ ಅಲ್ಲಿಂದ ಹೊರ ಬಂದು ತಮ್ಮದೆ ಆದ ‘ಲಂಕೇಶ ಪತ್ರಿಕೆಯನ್ನು 1980ರ ಸುಮಾರಿಗೆ ಪ್ರಾರಂಭಿಸಿದ ನೆನಪು. ಅದು ಕನ್ನಡದ ಪ್ರಥಮ ಟ್ಯಾಬ್ಲಾಯಿಡ್ ಪತ್ರಿಕೆ.

     ಅದೊಂದು ಸೂಕ್ಷ್ಮ ಕಾಲಘಟ್ಟ ನಮ್ಮ ದೇಶದ ರಾಜಕೀಯ ಸ್ವಾತಂತ್ರ ಪೂರ್ವದ ಮೌಲ್ಯಗಳನ್ನು ಹಿಂದೆ ಬಿಟ್ಟು ರೂಕ್ಷವಾಗುತ್ತ ಜನಪರ ನಿಲುವುಗಳಿಂದ ದೂರವಾಗುತ್ತ. ವ್ಯವಸ್ಥೆ ಭ್ರಷ್ಟವಾಗುತ್ತ ಸಾಗಿದ್ದ ಕಾಲ. ನೆಹರೂ ಕಂಡ ಕಂಡ ಕನಸುಗಳು ಬರಿಯ ಕಿನಸುಗಳೆ ಆಗಿ, ಶಾಸ್ತ್ರೀಜಿ ಮೌಲ್ಯಯುತ ರಾಜಕಾರಣದ ಒಂದು ಶೋಪೀಸ್ ಆಗಿ, ಗಾಂಧೀಜೀ ಕಂಡ ರಾಮರಾಜ್ಯದ ಕನಸು ನನಸಾಗದೆ ನಮ್ಮ ದೇಶ ಅವ್ಯವಸ್ಥೆಯಿಂದ ಕುವ್ಯವಸ್ಥೆಯೆಡೆಗೆ ಸಾಗಿದ್ದ ಕಾಲ. ಅದರ ಪರಿಣಾಮವೆ 1975 ರಲ್ಲಿ ನೆಹರೂ ವಂಶದ ಕುಡಿ ಶ್ರೀಮತಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು. ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಕಾಂಗ್ರೆಸ್ ಸದುದ್ದೇಶದಿಂದಲೆ ದೇಶದ ಚುಕ್ಕಾಣಿ ಹಿಡಿದು ದೇಶದ ಆಬಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಪ್ರಾರಂಭಿಸಿದ್ದು ಸುಳ್ಲಲ್ಲ. ಕ್ರಮೇಣ ಅದು ಜಡ್ಡುಗಟ್ಟುತ್ತ ಸಾಗಿ ನೈತಿಕ ಮೌಲ್ಯಗಳಿಲ್ಲದವರೂ ದೇಶದ ರಾಜಕಾರಣದ ಮುಂಚೂಣಿಗೆ ಬಂದು ವ್ಯವಸ್ಥೆ ಭ್ರಷ್ಟವಾಗುತ್ತ ಎಲ್ಲ ಸೂಕ್ಷ್ಮತೆಗಳನ್ನು ಕಳೆದು ಕೊಳ್ಳುತ್ತ ಸಾಗಿದ್ದ ರಾಜಕೀಯದ ಸತ್ವ ಪರೀಕ್ಷೆಯ ಜೊತೆಗೆ ಧೃವೀಕರಣದ ಕಾಲ ಅದಾಗಿತ್ತು. ಡಾ.ರಾಮ ಮನೋಹರ ಲೋಹಿಯಾ, ಜಯ ಪ್ರಕಾಶ ನಾರಾಯಣ ಮತ್ತು ನಮ್ಮ ರಾಜ್ಯಮಟ್ಟದಲ್ಲಿ ಶಾಂತವೇರಿ ಗೋಪಾಲ ಗೌಡರು ರಾಜಕೀಯಕ್ಕೆ ಹೊಸ ಭಾಷ್ಯ ಬರೆಯಲು ಹೊರಟಂತಹ ಭ್ರಷ್ಟತೆಯನ್ನು ಒಪ್ಪಿಕೊಂಡು ಅನೇಕರು ಅದನ್ನು ಒಪ್ಪಿ ಸಾಗಿದ್ದಂತಹ ಕಾಲ. ನಮ್ಮ ರಾಜಕೀಯ ವ್ಯವಸ್ಥೆಗೆ ಮತ್ತು ನಾಯಕರಿಗೆ ಸೌಮ್ಯ ಭಾಷೆ ನಾಟದಷ್ಟು ಚರ್ಮ ದಪ್ಪವಾಗಿದ್ದ ಕಾಲ. ಈ ಸೌಮ್ಯ ಮಾರ್ಗವನ್ನು ಬಿಟ್ಟು ರಾಜಕಾರಣಿಗಳ ದಪ್ಪ ಚರ್ಮವನ್ನು ಬೇಧಿಸಿ ಮೆದುಳಿಗೆ ತಾಗುವ ಒಂದು ಭಾಷಾ ಕ್ರಮವನ್ನು ಲಂಕೇಶ ಜಾರಿಗೆ ತಂದರು. ಮೊದ ಮೊದಲು ಇದನ್ನು ಅರಗಿಸಿ ಕೊಳ್ಳುವುದು ಸ್ವಲ್ಪ ಕಷ್ಟವಾದರೂ ನಂತರ ಅವರ ನಡೆ ಮತ್ತು ಭಾಷಾ ಪ್ರಯೋಗ ಸರಿಯೆನ್ನಿಸ ಹತ್ತಿದ್ದು ನಿಜ. ಗುಂ, ಬಂ. ಕಾತಿ ಎಂಬ ನಿಕ್ ನೇಮ್ ಗಳಿಂದ ಪ್ರಮುಖ ರಾಜಕಾರಣಿಗಳನ್ನು ಝಾಡಿಸುತ್ತ ಪ್ರತ್ರಿಕೋದ್ಯಮದ ನಡೆಗೆ ಮತ್ತು ಭಾಷೆಗೆ ಬಿಸಿ ಮುಟ್ಟಿಸಿದವರು ಲಂಕೇಶ. ವಸ್ತು ನಿಷ್ಟ ಗ್ರಹಿಕೆ ಒಳ್ಳೆಯದನ್ನು ಮೆಚ್ಚುವ ಕೆಟ್ಟದನ್ನು ನಿರ್ಭಿಡೆಯಿಂದ ನಿರ್ದಾಕ್ಷಣ್ಯವಾಗಿ ಖಂಡಿಸುತ್ತ ಸಾಗಿದ ಪತ್ರಿಕೆ ಪತ್ರಿಕಾ ಕ್ಷೇತ್ರದಲ್ಲಿ ಒಂದು ಹೊಸ ಭಾಷ್ಯವನ್ನೆ ಬರಯಿತು.

     ವ್ಯಕ್ತಿ ನಿಷ್ಟೆ, ಸ್ವಾಮಿನಿಷ್ಟೆ ಬಯಸುವ ಏಕ ಸ್ವಾಮಿತ್ವದ ರಾಜಕಾರಣ ದೇಶದಲ್ಲಿ ವಿಜ್ರಂಭಿಸಿದ್ದ ಕಾಲ, ಪರಿಣಾಮವೆ ದೇವರಾಜು ಅರಸರ ಸ್ಥಾನಕ್ಕೆ ಆರ್.ಗುಂಡೂರಾವ್ ಬಂದದ್ದು. ಅವರ ಆಡಳಿತ ಕಾಲದಲ್ಲಿ ನಡೆದ ನರಗುಂದದಲ್ಲಿ ರೈತ ಚಳುವಳಿಯ ಸಂಧರ್ಭದಲ್ಲಿ ಅಲ್ಲಿಯ ತಹಸಿಲ್ದಾರನ ಅವಿವೇಕದ ನಡೆ, ರೊಚ್ಚಿಗೆದ್ದ ರೈತ ಸಮೂಹ ಪರಿಸ್ಥಿತಿ ನಿಯಂತ್ರಿಸಲು ಸಬ್ ಇನಸ್ಪೆಕ್ಟರ ಒಬ್ಬ ನಡೆಸಿದ ಗೋಲಿಬಾರ್ ಪರಿಣಾಮ ರೈತನೊಬ್ಬನ ಸಾವು. ಇಡೀ ರೈತ ಸಮೂಹ ಸುಸಂಘಟಿತವಾಗಿ ತನ್ನ ಹೋರಾಟ ಪ್ರಾರಂಭಿಸಿದ ಕಾಲ. ಬದಲಾವಣೆಯ ಕಾಲದ ಸೂಕ್ಷ್ಮತೆಯನ್ನು ಗ್ರಹಿಸದೆ ಅಧಿಕಾರದ ಬಲದಿಂದ ಎಲ್ಲವನ್ನು ನಿಗ್ರಹಿಸುತ್ತೇನೆ ಎಂದು ಹೊರಟ ಆಗಿನ ಮುಖ್ಯ ಮಂತ್ರಿ. ಆಗ ದೇಶದ ಎಲ್ಲ ರಾಜ್ಯಗಳಲ್ಲಿ ಇಂತಹದೆ ಪರಿಸ್ಥಿತಿ. ಆಗ ಆ ಪತ್ರಿಕೆ ತಳೆದ ನಿಲುವು ತನ್ನದೆ ಒರಟು ಶೈಲಿಯಲ್ಲಿ ಅಂದಿನ ದೇಶದ ಮತ್ತು ರಾಜ್ಯದ ರಾಜಕಾರಣವನ್ನು ಚುಚ್ಚುತ್ತ ಜಾಗೃತಿಯನ್ನು ಮಾಡುತ್ತ ರಾಜಕೀಯದಲ್ಲಿ ಬದಲಾವಣೆಯನ್ನು ತಂದದ್ದು ಸಣ್ಣ ಸಾಧನೆಯಲ್ಲ. ಗುಂಡೂರಾವ್ ಸೋತು ನೇಫಥ್ಯಕ್ಕೆ ಸರಿದ ಆ ಸಂಧರ್ಭದಲ್ಲಿ ಮರುವಾರವೆ ತಮ್ಮ ಪತ್ರಿಕೆಯ ಸಂಪಾದಕೀಯದಲ್ಲಿ ಗುಂಡೂರಾವ್ ಒಬ್ಬ ಸಾಮಾನ್ಯ ಬಸ್ ಏಜೆಂಟ್ ಆಗಿ ಬದುಕು ಪ್ರಾರಂಭಿಸಿ ರಾಜ್ಯದ ಮುಖ್ಯಮಂತ್ರಿ ಪದವಿಗೇರಿದ ಬಗೆಯನ್ನು ನಮ್ಮ ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಯ ಸೌಂದರ್ಯ ವೆಂದು ಮೆಚ್ಚಿ ಕೊಳ್ಳುತ್ತಾರೆ. ಆತ ಒಬ್ಬ ಹುಂಬ ರಾಜಕಾರಣಿಯಾಗಿದ್ದರೂ ಇಂದಿರಾರೆಡೆಗಿನ ಅವರ ನಿಷ್ಟೆಯನ್ನು ಮೆಚ್ಚಿ ಬರೆದ ಅವರು ಎಂದಿಗೂ ಆತ ಮಿತ್ರ ದ್ರೋಹಿಯಾಗಿರಲಿಲ್ಲ ಎಂದು ದಾಖಲಿಸುತ್ತಾರೆ. ಸರಿ ತಪ್ಪು ಏನೇ ಇರಲಿ ಸದನದಲ್ಲಿ ಅವರು ತಮ್ಮ ರಾಜಕೀಯ ಮಿತ್ರರಾದ ಎಫ್.ಎಂ.ಖಾನ್, ಅರಸು ರವರ ಅಳಿಯ ನಟರಾಜ ಮತ್ತು ಸಾಮಾಜಿಕ ಮತ್ತು ಸಾಹಿತ್ಯ ಕುರಿತ ಅವರ ಬರಹಗಳು ಎಲ್ಲರನ್ನು ಆಕರ್ಷಿಸಿದವು. ಪತ್ರಿಯೊಂದನ್ನು ನಡೆಸಿ ಮನುಷ್ಯ ಬದುಕು ಕಟ್ಟಿಕೊಳ್ಳ ಬಹುದು ಭ್ರಷ್ಟ ವ್ಯವಸ್ಥೆಯನ್ನು ಕೊನೆಗೊಳಿಸಬಹುದು ಎಂದು ಸಾಧಿಸಿ ತೋರಿಸಿದ್ದು ಲಂಕೇಶ.

     ತದ ನಂತರದಲ್ಲಿ ಬಿ.ವಿ.ವೈಕುಂಠರಾಜುರವರ ವಾರಪತ್ರಿಕೆ, ಇಂದೂಧರ ಹೊನ್ಮಾಪುರರ ಸಂಕ್ರಾಂತಿ, ವಡ್ಡರ್ಸೆ ರಘುರಾಮ ಶೆಟ್ಟರ ಮುಂಗಾರು ದಿನಪತ್ರಿಕೆಗಳು ಹೊಸ ದಿಕ್ಕಿನೆಡೆಗೆ ಪತ್ರಿಕೋದ್ಯವನ್ನು ಮುಖ ಮಾಡಿಸಿದ್ದು ಒಂದು ಇತಿಹಾಸ. ಲಂಕೇಶ, ವಡ್ಡರ್ಸೆ ಮತ್ತು ವೈಕುಂಠರಾಜುರವರುಗಳು ಬಂದದ್ದು ಪ್ರಜಾವಾಣಿ ಪತ್ರಿಕೆಯಿಂದಲೆ ಎಂಬುದು ಗಮನಿಸ ಬೇಕಾದ ಅಂಶ. ನಾನೂ ಸಹ ಅವರು ಬದುಕಿರುವವರೆಗೂ ಅವರ ಬರಹದ ಮೋಡಿಗೆ ಮತ್ತು ವೈಚಾರಿಕತೆಗೆ ಒಳಗಾದವನೆ ಎಂದು ಹೇಳಿಕೊಳ್ಳಲು ಹಿಂಜರಿಕೆಯಿಲ್ಲ. ಅನಂತಮೂರ್ತಿ, ಲಂಕೇಶ ಮತ್ತು ತೇಜಸ್ವಿ ಅವರುಗಳು ತಮ್ಮ ಕಾಲಘಟ್ಟದ ತಲೆಮಾರನ್ನು ತಿದ್ದಿದವರು ಎಂಬುದು ಗಮನಿಸ ಬೇಕಾದ ಅಂಶ. ಹೀಗೆಂದಾಕ್ಷಣ ಇದನ್ನು ಶರಣಾಗತಿಯೆಂದು ಭಾವಿಸುವುದೂ ಸಹ ತಪ್ಪಾಗುತ್ತದೆ. ಅವರ ಪತ್ರಿಕೆಯ ಸಂಪಾದಕೀಯ, ಛೇ! ಛೇ!, ತುಂಟಾಟ ಹೊಸತನದ ಜೀವನ್ಮುಖಿ ಚಿಂತನೆಗಳಾಗಿದ್ದವು. ಸಮಸ್ಥಿತಿಯಲ್ಲಿ ಬರೆಯಲು ಲಂಕೇಶ ಕುಳಿತಾಗ ಅವರೊಬ್ಬ ಅದ್ಭುತ ಬರಹಗಾರ. ಅವರಲ್ಲಿಯೂ ಆಗಾಗ ಈರ್ಷೆ ಮೂಡುತ್ತಿತ್ತು ತಮ್ಮ ಸಮಕಾಲೀನರ ಕುರಿತು ಕೆಳಮಟ್ಟದಲ್ಲಿ ಬರೆಯುತ್ತಿದ್ದರು, ಇವರಿಗಾದರೋ ತಮ್ಮದೇ ಆದ ಪತ್ರಿಕೆಯಿತ್ತು ಓದುಗ ಸಮೂಹವಿತ್ತು ಇವರಿಂದ ಟೀಕೆಗೆ ಒಳಗಾದವರಿಗೆ ?ಹೀಗೆಯೆ ಒಮ್ಮೆ ಹಾ.ಮಾ.ನಾಯಕರ ಕುರಿತು ಇವರು ಬರಯುತ್ತಾರೆ ಈ ಕುರಿತು ನಾಯಕರು ನ್ಯಾಯಾಲಯದ ಮೆಟ್ಟಲೇರುತ್ತಾರೆ, ಅಲ್ಲ ನಾಯಕರಿಗೆ ಜಯ ಸಿಗುತ್ತದೆ. ಲಂಕೇಶ ಕ್ಷಮೆ ಕೋರುತ್ತಾರೆ ಅಲ್ಲದೆ ನ್ಯಾಯಾಲಯದ ಆದೇಶದಂತೆ ಅದನ್ನು ತಮ್ಮ ಪತ್ರಿಕೆಯಲ್ಲಿ ಕೂಡ ಪ್ರಕಟಿಸುತ್ತಾರೆ. ಇದು ಲಂಕೇಶರನ್ನು ತೆಗಳಲು ಮತ್ತು ನಾಯಕರನ್ನು ಹೊಗಳಲು ಅಂತಲ್ಲ ಅವರೂ ಸಹ ನಮ್ಮಂತೆ ಯಕಶ್ಚಿತ್ ಹುಲು ಮಾನವರು ಎಂಬುದನ್ನು ವಿವರಿಸಲು ಅಷ್ಟೆ. ಅವರ ಪತ್ರಿಕೆ ಅನೇಕ ಹೊಸ ವೈಚಾರಿಕ ವಿಶಿಷ್ಟ ಶೈಲಿಯ ಬರಹಗಾರರನ್ನು ಕನ್ನಡಕ್ಕೆ ಪರಿಚಯಿಸಿತು. ಹೆಸರಿಸುವುದಾದಲ್ಲಿ ಸಾರಾ ಅಬೂಬಕ್ಕರ್, ವೈದೇಹಿ, ಭಾನು ಮುಷ್ತಾಕ್, ಮೊಗಳ್ಳಿ ಗಣೇಶ, ನಾಗತಿಹಳ್ಳಿ ಚಂದ್ರಶೇಖರ, ಚಂದ್ರಶೇಖರ ಆಲೂರ, ಬಿ.ಚಂದ್ರೇಗೌಡ ಮುಂತಾದವರನ್ನು ಹೆಸರಿಸಬಹುದು. ಲಂಕೇಶರು ಸಂಪಾದಕರಾಗಿರುವರೆಗೂ ನಾನು ಆ ಪತ್ರಿಕೆಯ ಕಾಯಂ ಓದುಗನಾಗಿದ್ದೆ. ಆ ನಂತರವೂ ಕೆಲ ವಾರ ಆ ಪತ್ರಿಕಯನ್ನು ಓದುತ್ತಿದ್ದೆ. ಯಾಕೋ ಆ ಪತ್ರಿಕೆಯ ಆತ್ಮವೇ ಹೊರಟು ಹೋದ ಭಾವ ಬಂದು ಅದರೊಂದಿಗಿನ ನನ್ನ ಭಾವನಾತ್ಮಕ ಸಂಬಂಧವನ್ನು ಕಡಿದು ಕೊಳ್ಳುವಲ್ಲಿ ಬಹಳ ವ್ಯಥೆಯಾಯಿತು.

     ಮತ್ತೆ ಹಾಯ್ ಪತ್ರಿಕೆಯ ವಿಷಯಕ್ಕೆ ಬರುತ್ತೇನೆ. ಬಹುಶಃ 2000 ನೇ ಇಸವಿಯ ಪ್ರಾರಂಭಿಕ ತಿಂಗಳುಗಳು ಎಂದು ಕಾಣುತ್ತದೆ ಲಂಕೇಶ ಇನ್ನೂ ಇದ್ದರು. ಆಗ ಹಾಯ್ ಬೆಂಗಳೂರ್ ವಾರಪತ್ರಿಕೆಯ ಸಂಚಿಕೆಯೊಂದು ನನ್ನ ಓದಿಗೆ ದೊರೆಯಿತು. ಆಗ ಆ ಪತ್ರಿಕೆಗೆ ಇನ್ನೂ ಪೂರ್ಣ ಪ್ರಮಾಣದ ಆಕಾರ ಬಂದಿರಲಿಲ್ಲವೆಂದು ನನ್ನ ಅನಿಸಿಕೆ. ಅದರಲ್ಲಿ ಬಂದಿದ್ದ ಕ್ರೈಮ್ ವರದಿಗಳು ನನಗೆ ಅಷ್ಟಾಗಿ ಇಷ್ಟವಾಗಲಿಲ್ಲ. ಆದರೆ ಅದರಲ್ಲಿಯ ಬೆಳಗೆರೆಯವರ ಒಂದು ಬರಹ ನನ್ನ ಗಮನ ಸೆಳೆಯಿತು.ಅದು ಸುಬ್ರಹ್ಮಣ್ಯದ ಶ್ರೀ ವಿದ್ಯಾಭೂಷಣ ಸ್ವಾಮಿಗಳು ಸನ್ಯಾಸಕ್ಕೆ ವಿದಾಯ ಹೇಳಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ವಿಷಯ ಕುರಿತಂತೆ ಬರೆದುದು. ಅದರಲ್ಲಿ ಲೇಖಕರ ನಿಲುವು ಮತ್ತು ಅದರ ಕುರಿತಾದ ವಸ್ತುನಿಷ್ಟ ಅಭಿವ್ಯಕ್ತಿ ನನಗೆ ಹಿಡಿಸಿತು. ಅದರ ಮರು ವಾರವೆ ಲಂಕೇಶ ಪತ್ರಿಕೆಯಲ್ಲಿ ಲಂಕೇಶ ಮತ್ತು ಆ ಪತ್ರಿಕೆಯ ಅಂಕಣಕಾರರೊಬ್ಬರು ಬೆಳಗೆರೆ ಕುರಿತಾಗಿ ಕಟುವಾಗಿ ಬರೆದಿದ್ದರು. ಯಾಕೋ ನನಗೆ ಅದು ಸ್ವಲ್ಪ ಅತಿರೇಕದ ಬರವಣಿಗೆ ಎನಿಸಿತ್ತು. ಅವರು ಸಹ ಪತ್ರಿಕೆಯ ಸಂಪಾದಕನೊಬ್ಬನ ಕುರಿತು ಅಗತ್ಯಕ್ಕೂ ಮೀರಿ ವೈಯಕ್ತಿಕವಾಗಿ ಟೀಕಿಸಿ ಬರೆದಿದ್ದರು. ನನಗೆ ಒಂದು ಕ್ಷಣ ಆಶ್ಚರ್ಯವಾಗಿತ್ತು. ಒಂದು ನಾಡು ಕಂಡ ಶ್ರೇಷ್ಟ ಬರಹಗಾರ ಅಷ್ಟು ಕೆಳ ಮಟ್ಟಕ್ಕಿಳಿದು ಬರೆಯಬಹುದೆ ಎಂದು. ಈ ತೇಜೋವಧೆ ಅಷ್ಟಕ್ಕೆ ಮುಗಿಯಲಿಲ್ಲ ಅದು ಮುಂದಿನ ಸಂಚಿಕೆಯ ವರೆಗೂ ಮುಂದುವರೆಯಿತು ಎಂದು ಕಾಣುತ್ತದೆ. ಈ ಟೀಕೆ ಟಿಪ್ಪಣೆ ಅವರ ವಸ್ತುನಿಷ್ಟ ಬರಹದ ಒಂದು ರೂಪವೆಂದು ಗ್ರಹಿಸಬೇಕೆಂದರೂ ಮನ ಒಪ್ಪುತ್ತಿರಲಿಲ್ಲ. ಅವರ ಬರಹಗಳು ಮೊದಲಿನ ತೂಕ ಕಳೆದು ಕೊಳ್ಳುತ್ತಿರುವಂತೆ ಸೃಷ್ಟಿಸಿತ್ತು ಎನ್ನಬಹುದು. ಮುಂದೆ ಕೆಲ ಸಮಯದಲ್ಲಿಯೆ ಲಂಕೇಶ ಇಲ್ಲವಾದರು ಅವರಿಲ್ಲದ ಪತ್ರಿಕೆಯನ್ನು ಊಹಿಸಿ ಕೊಳ್ಳುವುದೂ ಕಷ್ಟವಿತ್ತು. ಮುಂದೆ ನಾನೂ ಸಹ ಇಲ್ಲಿಂದ ವರ್ಗಾವಣೆಗೊಂಡು ಬೇರೆಡೆಗೆ ತೆರಳಿದ ನನಗೆ ಅಲ್ಲಿ ಈ ವಾರಪತ್ರಿಕೆ ದೊರೆಯುತ್ತಿರಲಿಲ್ಲ. ಹೊರ ಜಗತ್ತಿನ ಆಗು ಹೋಗುಗಳ ಕುರಿತ ವೈಚಾರಿಕ ಸೂಕ್ಷ್ಮ ಒಳನೋಟಗಳು ತಿಳಿಯದ ಒಂದು ನಿರ್ಜೀವ ನಿಶ್ಚಲ ಸ್ಥಿತಿಯದು.

     ಸುಮಾರು ಹತ್ತು ವರ್ಷಗಳ ಹಿಂದೆ ಎಂದು ಕಾಣುತ್ತದೆ, ನನ್ನ ಸಹೋದ್ಯೋಗಿಯೊಬ್ಬರು ಶಿವಮೊಗ್ಗದಿಂದ ಬರುವಾಗ ತಂದ ಹಾಯ್ ಪತ್ರಿಕೆ ನನ್ನ ಓದಿಗೆ ದೊರೆಯಿತು. ಸುಮ್ಮನೆ ಅದರ ಪುಟಗಳನ್ನು ತೆರೆಯುತ್ತ ಹೋದೆ. ಒಂದು ಅಂಕಣದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಅರ್ನೆಷ್ಟ್ ಹೆಮಿಂಗ್ವೆ ಕುರಿತಾಗಿ ಬರೆದಿದ್ದು ಅದರಲ್ಲಿ ಆತನ ಬದುಕು ಮತ್ತು ಬರಹ ಕುರಿತಂತೆ ಅಂಕಣದ ಮಿತಿಯಲ್ಲಿಯೆ ಚೆನ್ನಾಗಿ ಬರೆದಿದ್ದರು. ಹಾಗಯೆ ನಾಗತಿಹಳ್ಳಿ ಚಂದ್ರಶೇಖರ, ಚಂದ್ರಶೇಖರ ಆಲೂರು, ಜಾನಕಿ ಮತ್ತು ಆರ್.ಟಿ.ವಿಠಲಮೂರ್ತಿಯವರ ಅಂಕಣ ಬರಹಗಳು ಆಕರ್ಷಿಸಿದವು. ಕ್ರೈಮ್ ವರದಿಗಳ ಜೊತೆಗೆ ಸಂಪಾದಕರ ಖಾಸ್ ಬಾತ್, ಸಾಫ್ಟ್ ಕಾರ್ನರ್, ಹಲೋ ಮತ್ತು ಬಾಟಮ್ ಐಟಮ್ ಕಾಲಂಗಳು ನನ್ನನ್ನು ಬೆರಗು ಗೊಳಿಸಿದವು. ಆ ಕ್ಷಣಕ್ಕೆ ಸ್ವಲ್ಪ ಉತ್ಪ್ರೇಕ್ಷೆ ಎನಿಸಿದರೂ ಲಂಕೇಶ ಖಾಲಿ ಮಾಡಿದ ಜಾಗವನ್ನು ಬೆಳಗೆರೆ ತಂಬಿದ್ದಾರೆ ಎನಿಸಿತ್ತು. ಎಡ ಬಲಗಳ ನೆಲೆಯಲ್ಲಿ ಶಾಶ್ವತವಾಗಿ ಸ್ಥಾಪಿತರಾಗದೆ ಆ ಎರಡರಲ್ಲಿಯ ಲೋಪ ದೋಷಗಳನ್ನು  ಖಂಡಿಸುತ್ತ ಒಳ್ಳೆಯದನ್ನು ಬೆಂಬಲಿಸುತ್ತ ಬಂದಿರುವ ಅವರ ಬರವಣಿಗೆಯ ಧೋರಣೆ ನನಗಿಷ್ಟವಾಗಿ ಅಂದಿನಿಂದ ಇಂದಿನ  ವರೆಗೂ ನಾನು ಆ ಪತ್ರಿಕೆಯ ಕಾಯಂ ಓದುಗನಾಗಿದ್ದೇನೆ.  ಮುಂದೆ ಬಂದ ನಾಗರಾಜ ಹವಾಲ್ದಾರ, ಕೇಶವರೆಡ್ಡಿ ಹಂದ್ರಾಳ ಮುಂತಾದವರ ಅಂಕಣ ಬರಹಗಳು ಚೆನ್ನಾಗಿ ಮೂಡಿ ಬರುತ್ತಿವೆ ಎಂದು ನನ್ನ ಅನಿಸಿಕೆ.

     ಹಿಮಾಲಯದೆಡೆಗೆ ಅವರ ಪಯಣ ಅಲ್ಲಿಯ ಅವರ ಜೀವನಾನುಭವ, ಪಾಕಿಸ್ತಾನ, ಅಫಗಾನಿಸ್ತಾನ ಮತ್ತು ಇಸ್ರೇಲ್ ದೇಶಗಳಿಗೆ ಹೋಗಿದ್ದು ಆ ಕುರಿತು ತಮ್ಮ ಅನುಭವಗಳನ್ನು ತಮ್ಮ ಅಂಕಣಗಳಲ್ಲಿ ಮನಮುಟ್ಟುವಂತೆ ಅಕ್ಷರ ರೂಪಕ್ಕಿಳಿಸಿದ್ದು, ಅವುಗಳ ಓದೇ ಒಂದು ರೀತಿಯ ವಿಶಿಷ್ಟ ಅನುಭವವನ್ನು ಕೊಡುವಂತಹುದು. ಜೊತೆಗೆ ಅವರ ರಚನೆಗಳಾದ ಹಿಮಾಲಯನ್ ಬ್ಲಂಡರ್ 1962 ರಲ್ಲಿ ಚೈನಾ ಆಕ್ರಮಣ ಸಂಧರ್ಭದಲ್ಲಿ ನಮ್ಮ ಸೇನೆ ಪಟ್ಟ ಪಾಡನ್ನು ಮನ ಕಲಕುವಂತೆ ನಿರೂಪಿಸಿದರೆ, ರೇಶ್ಮೆ ರುಮಾಲ್ ನೀರುವ ಅನುಭವವೆ ಬೇರೆ ತರಹದ್ದು. ಅದರಲ್ಲಿ ಬರುವ ಪಾತ್ರಗಳು ಅವುಗಳ ಗುಣ ಸ್ವಭಾವಗಳು ಎಲ್ಲ ಮಾನವೀಯ ಗುಣಗಳ ನಿರೂಪಣೆ ಅವು ಮೂಡಿಸುವ ಬೆರಗು ಕಟ್ಟಿ ಕೊಡುವ ಪಾತಕ ಲೋಕದ ಚಿತ್ರಣಗಳು ಒಮ್ಮೊಮ್ಮೆ ನಡುಕ ಹುಟ್ಟಿಸಿ ಬಿಡುತ್ತವೆ, ಅಷ್ಟು ಪರಿಣಾಮಕಾರಿಯಾದ ಬರಹದ ಶೈಲಿ ಅವರದು. ಅವರ ಒಂದೊಂದು ಕೃತಿಯೂ ಒಂದೊಂದು ವಿಶಿಷ್ಟ ಬಗೆಯದು. ಅವರ ಸಾಹಸ ಅಲ್ಲಿಗೆ ಮುಗಿಯುವದಿಲ್ಲ ಸಹ್ಯಾದ್ರಿ ಪರ್ವತ ಶ್ರೇಣಿಯ ಹಳಿಯಾಳ ದಾಂಡೇಲಿ ವಿಭಾಗದ ದಟ್ಟ ಕಾನನದ ಮಧ್ಯೆ ಜಮೀನು ಖರೀದಿಸಿ ಅಲ್ಲಿ ವಸತಿ ನಿರ್ಮಿಸಿಕೊಂಡು ಅಲ್ಲಿ ವಾಸ್ತವ್ಯ ಹೂಡಿ ಬರವಣಿಗೆ ಮಾಡಿದ್ದು ಆ ಕಾಡಿನ ಪರಿಸರದಅನುಭವ ಜೊತೆಗೆ ಆ ದಟ್ಟ ಕಾನನದ ಪರಿಸರದಲ್ಲಿ ಹೆಂಡತಿ ಮಗಳನ್ನು ಕಳೆದುಕೊಂಡು ಏಕಾಂಗಿಯಾಗಿ ವಾಸವಾಗಿ ರಾಜರ್ಷಿಯಂತೆ ಬಾಳಿದ ಭಾರತೀಯ ಸೇನೆಯ ಉನ್ನತ ಅಧಿಕಾರಿ, ಮಾಜಿ ಲೋಕಸಭಾ ಸದಸ್ಯ ಮತ್ತು ಆಂಗ್ಲ ಬರಹಗಾರ ಮನೋಹರ ಮಾಳ್ಗಾಂವಕರರ ಕುರಿತ ಬರವಣಿಗೆಯ ರೋಚಕತೆಯೆ ಒಂದು ವಿಶಿಷ್ಟ ಅನುಭವ ನೀಡು ವಂತಹುದು. ಬೆಳಗೆರೆಯವರ ಬರಹದ ಬಿಸುಪು ಇನ್ನೂ ಮನದಲ್ಲಿ ಹಾಗಯೆ ಅಚ್ಚೊತ್ತಿವೆ, ಅವುಗಳನ್ನು ನೆನಪಿಸಿಕೊಂಡರೆ ಅಲ್ಲಿ ಆ ದಟ್ಟ ಕಾಡಿನ ವೈಭವದ ನಿರೂಪಣೆ ಮನಃ ಪಟಲದ ಮುಂದೆ ತೆರೆದು ಕೊಳ್ಳುತ್ತವೆ.

     ಪತ್ರಿಕಾ ರಂಗದ ಬದುಕು ಹೂವಿನ ಹಾಸಿಗೆಯಲ್ಲ ಮೈಯೆಲ್ಲ ಕಣ್ಣಾಗಿ ಮುಂದುವರಿಯಬೇಕು. ಸಮಾಜ ವಿರೋಧಿಗಳು ಪಾತಕಿಗಳು ಭ್ರಷ್ಟ ರಾಜಕಾರಣಿಗಳು ಅಧಿಕಾರಿ ವರ್ಗದವರ ಕುರಿತು ಬರೆಯುವಾಗ ಬರುವ ಬೆದರಿಕೆ ಆಮಿಷಗಳನ್ನು ಮೀರಿ ಅವುಗಳನ್ನು ಸಮಾಜದ ಮುಂದೆ ತನ್ನ ಪತ್ರಿಕೆಯ ಮೂಲಕ ತೆರೆದಿಡುವುದು ಅಷ್ಟು ಸುಲಭದ ಕೆಲಸವಲ್ಲ ಮಾನ ನಷ್ಟ ಮೊಕದ್ದಮೆಗಳು ಅವುಗಳನ್ನು ಎದುರಿಸಲು ರಾಜ್ಯದ ನ್ಯಾಯಾಲಯಗಳಿಗೆ ಅಲೆದಾಟ, ಅದೊಂದು ಕತ್ತಿಯಂಚಿನ ಮೇಲಿನ ನಡಿಗೆ. ಈ ಎಲ್ಲ ಅಡೆತಡೆಗಳಿಂದ ವಿಚಲಿತರಾಗದೆ ಹಾಯ್ ಬೆಂಗಳೂರ ನಂತಹ ಟ್ಯಾಬ್ಲಾಯಿಡ್ ಪತ್ರಿಕೆಯನ್ನು ನಡೆಸಿಕೊಂಡು ಬಂದದ್ದು, ಮಧ್ಯದಲ್ಲಿ ಎಲ್ಲಿಯೂ ನಿಲ್ಲದ ಸಾವಿರ ವಾರಗಳ ನಿರಂತರ ಪಯಣಕ್ಕೆ ಓದುಗರ ಪರವಾಗಿ ನನ್ನದೊಂದು ಮೆಚ್ಚುಗೆ. ಈ ಪತ್ರಿಕೆ ಮತ್ತು ಸಂಪಾದಕರ ಕುರಿತು ಬರಯಲು ಇನ್ನೂ ಸಾಕಷ್ಟು ವಿಷಯಗಳಿವೆ ಆದರೆ ಇಷ್ಟು ಸಾಕು. ಪತ್ರಿಕೆಯ ಪಯಣ ಹೀಗೆಯೆ ನಿರಂತರವಾಗಿರಲಿ ಎನ್ನುವ ಸದಾಶಯದೊಂದಿಗೆ.

                                                                                                                                   *

 

 

Rating
Average: 4 (1 vote)

Comments

Submitted by venkatb83 Fri, 12/26/2014 - 19:47

In reply to by kavinagaraj

ಹಿರಿಯರೇ-ನಾನೂ ಸಹ ಹಾಯ್ ಬೆಂಗಳೂರು ಮತ್ತು ಲಂಕೇಶ್ ಪತ್ರಿಕೆ- ವಾರ ಪತ್ರಿಕೆ ,ಸುಧಾ -ಮಯೂರ- ತುಷಾರ -ಮಲ್ಲಿಗೆ -ಕಸ್ತೂರಿ -ಕರ್ಮವೀರ-ವೀ ಆರ್ ಎಲ್ ಅವರ ಭಾವನ -ಓ ಮನಸೇ ಇತ್ಯಾದಿ ವಾರಪತ್ರಿಕೆ-ಮಾಸ ಪತ್ರಿಕೆಗಳ ಬರಹ ಓದಿರುವೆ -ಈಗಲೂ ಓದುತ್ತಿರುವೆ..ಲಂಕೇಶ್ ಅವರು ನಿಧನರಾಗುವ ಕೆಲವೇ ದಿನಗಳ ಮೊದಲು ಅವರ ಲಂಕೇಶ್ ಪತ್ರಿಕೆ ಓದುವ ಅಭ್ಯಾಸ ಬೆಳೆಯಿತು-ಅದ್ಕೆ ಕಾರಣ ಸುಮಾರು 1 ತಿಂಗಳು ನಾನು ಮೆಡಿಕಲ್ ಒಂದರಲ್ಲಿ ನನ್ನ ಆಂಗ್ಲ ಜ್ಞಾನ ಬೆಳೆಯಲು ಅಲ್ಲಿ ಕೆಲ್ಸಕ್ಕೆ ಸೇರಿದ್ದು ಮೆಡಿಕಲ್ ಯಜಮಾನ ಜಯರಾಮ ಶೆಟ್ಟಿ ಎಂದು-ಲಂಕೇಶ್ ಅವರ ಅಭಿಮಾನಿ ಓದುಗರಾಗಿದ್ದರು-ಹಾಯ್ ಬೆಂಗಳೂರು ಸಹಾ ಓದುತ್ತಿದ್ದರುನಮಗೂ ಆ ಓದಿನ ರುಚಿ ಹತ್ತಿತು..!! ಲಂಕೇಶ್ ಅವರ್ ನಿಧನ ದಿನ ಜಯರಾಮ್ ಅವರು ಹೇಳಿದ್ದು 'ಈ ಯಪ್ಪ ಲಂಕೇಶು ನಿರ್ಭೀತ ನಿರ್ಭಿಡೆ ಮನುಷ್ಯ -ಆದರೆ ವ್ಯಕ್ತಿಗತ ದ್ವೇಷಕ್ಕೆ -ರವಿ ಬೆಳಗೆರೆ ಅವರ ಪತ್ರಿಕೆ -ವರ ಬರವಣಿಗೆಗೆ ಜನ ಆಕರ್ಷಿತರಾಗಿದ್ದು ನೋಡಿ ಅಸೂಯೆಯಿಂದ ಬಲು ಕೆಟ್ಟದಾಗಿ ನಿಂದಿಸಿ ಬರೆದರು'ಅದು ಯಾರೂ ಒಪ್ಪಲಾಗದ್ದು ಎಂದರು..ಆಗ ಈಗಿನಂತೆ ಚಾನೆಲ್ಲುಗಳ ಆರ್ಭಟ ಇರಲಿಲ್ಲ-ಆದರೂ ಇದ್ದ 1-2 ಚಾನೆಲ್ಲುಗಳು ಲಂಕೇಶ್ ಅವರನ್ನು ಬಹು ವಿಧವಾಗಿ ಗುಣಗಾನ ಮಾಡಿದ ನೆನಪು..ಹಾಗೆಯೇ ರವಿ ಬೆಳಗೆರೆ -ಲಂಕೇಶ್ ಅವರ ನಡುವಿನ ಅಕ್ಷರ ಕಾಳಗ -ಲಂಕೇಶ್ ಅವರ ಸಾವಿನ ನಂತರ ಅವರ ಮಕ್ಕಳಿಂದ ಮುಂದುವರೆಯಿತು...:((( ಆದರೂ ನನಗೆ ನೆನಪಿದ್ದ ಹಾಗೆ ಬೆಳಗೆರೆ ಅವರು ಲಂಕೇಶ್ ಅವರನ್ನು ನನ್ನ ಗುರು ಎಂದೇ ಕರೆದು ಬರೆಯುತ್ತಿದ್ದರು.... ಗುಂಡೂರಾಯರನ್ನ 'ಗುಂ' ಎಂದು ಬಂಗಾರಪ್ಪ ಅವರನ್ನ 'ಬಂ' ಎಂದು ಕರೆದವರು ಲಂಕೇಶ್ ಅವರು-ಅದೊಮ್ಮೆ ವಿಧಾನ ಪರಿಷತ್ತಿನ ಮಹಿಳಾ ಸದಸ್ಯೆ ಒಬ್ಬರ ಸೀರೆ ಬಗ್ಗೆ ಏನೋ ಬರೆದು ಅವರು ಪರಿಷತ್ತಿನಲ್ಲಿ ಅತ್ತು ಕರೆದು -ಲಂಕೇಶ್ ಅವರನ್ನ ಪರಿಷತ್ತಿಗೆ ಕರೆಸಿ ವಾಗ್ಧಂಡನೆ ವಿಧಿಸಬೇಕು ಎಂದ ನೆನಪು...!! ಮನುಷ್ಯ ಸಹಜ ಈರ್ಷ್ಯೆ ಮೊದಲಿಗೆ ಲಂಕೇಶ್ ಅವರಲ್ಲಿ ಹಾಗೂ ನಂತರ ಬೆಳಗೆರೆ ಅವ್ರಲ್ಲೂ ಬಂತು...ಬೆಳಗೆರೆ ಅವ್ರ ಬಹುಪಾಲು ಬರಹಗಳನ್ನು ಲೈಬ್ರರಿಯಲ್ಲಿ ಓದಿರುವೆದ್ರಲ್ಲಿ ಇಸ್ಟ ಆಗಿದ್ದು 'ಮಾಟಗಾತಿ' ಪುಸ್ತಕ ಮತ್ತು ಅವರ ಪತ್ರಿಕೆಯ 'ಕೇಳಿ' ಪ್ರಶ್ನೋತ್ತರ ಅಂಕಣ (ಅದರಲ್ಲಿ ದೇವೇ ಗೌಡರು-ಅವರ ಮಕ್ಕಳು-ಎಸ್ಸೆಂ ಕೃಷ್ಣ -ಯೆಡಿಯೂರಪ್ಪ -ಇತ್ಯಾದಿ ರಾಜ್‌ಕಾರಣಿಗಳ ಬಗ್ಗೆ ) ಭಲೇ ನಗೆ ಉಕ್ಕಿಸುತ್ತಿತ್ತು....!!
ಆದರೆ ಬರ್ತಾ ಬರ್ತಾ ರಾಯರ ಕುದುರೆ ........ಆಯ್ತು ಎನ್ನೋ ಹಾಗೆ ರವಿ ಬೆಳಗೆರೆ ಅಂತ ಬರ್ಹಗಾರರ ಬರಹಗಳೇ ರಸಾಹೀನವಾದವು-ಅದೇ ಏಕತಾನತೆ -ಕಾಣಿಸುತ್ತಿತ್ತು.. ಈ ಮಧ್ಯೆ ಅವರು ವಿದೇಶ ಪ್ರವಾಸ ಮಾಡಿ-ಬುಕ್ಕುಗಳ ಪ್ರಕಟಣೆ-ಹೊಸ ಪತ್ರಿಕೆ (ಓ ಮನಸೇ )ನಡೆಸಿ ಎಲ್ಲೆಡೆ ಕಾಲಿಟ್ಟು ಎಲ್ಲ ಕಡೆಯೂ ಕಲಸುಮೆಲಸು ಆಯ್ತು....ಕೊನೆಗೆ ಕ್ರೈಂ ಸ್ಟೋರಿ ಸಹಾ ನಡೆಸಿಕೊಟ್ಟರು... ಕನ್ನಡ ಬರಹ ಪ್ರಪಂಚದಲ್ಲಿ ಲಂಕೇಶ್ ಮತ್ತು ಬೆಳಗೆರೆ ಅವ್ರಿಗೆ ಒಳ್ಳೆ ಓದುಗ ಅಭಿಮಾನಿ ಬಳಗ ಇರೋದು ಸತ್ಯ ...ಈಗ ಬೆಳಗೆರೆ ಅವರುಫೇಸ್‌ಬುಕ್ಕಲ್ಲಿ ಬಿಜಿ ...!! ಅಂದಿನ ಪತ್ರಿಕಾ ರಂಗದ ಬೆಳವಣಿಗೆಗಳ ಬಗ್ಗೆ ಬಲು ಆಸಕ್ತಿಕರವಾದ ಮಾಹಿತಿಗಳನ್ನು ಬಲು ಆಸ್ಥೆಯಿಂದ ಹುಡುಕಿ -ನೆನಪಿನಾಳದಿಂದ ಹೆಕ್ಕಿ ನಮಗಾಗಿ ಬರ್ಹವಾಗಿಸಿದ್ದೀರಿ..
ನನ್ನಿ
ಶುಭವಾಗಲಿ
\|/

Submitted by H A Patil Sat, 12/27/2014 - 20:32

In reply to by venkatb83

ಸಪ್ತಗಿರಿ ಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿ ಸಂತಸವಾಯಿತು, ಇತ್ತೀಚೆಗೆ ನೀವು ಸಂಪದಕ್ಕೆ ಅಪರೂಪವಾಗಿ ಬಿಟ್ಟಿದ್ದೀರಿ, ನೀವು, ಪಾರ್ಥಸಾರಥಿ, ಗಣೇಶ, ಶ್ರೀದರ ಬಂಡ್ರಿಯವರು, ಕಾಮತರು, ಮತ್ತು ಇಟ್ನಾಳ ಮುಂತಾದವರು ಇಲ್ಲದೆ ಸಂಪದ ಬಡವಾಗಿದೆ, ಕವಿ ನಾಗರಾಜರು ಮಾತ್ರ ನಿಯಮಿತವಾಗಿ ಸಂಪದಕ್ಕೆ ಬರುತ್ತಾರೆ. ನೀವು ಪ್ರತಿಕ್ರಿಯೆಯಲ್ಲಿ ಎಲ್ಲ ಅಂಶಗಳು ಸರಿ. ನಿಮ್ಮ ವಿಮರ್ಶಾತ್ಮಕ ಪ್ರತಿ ಕ್ರಿಯೆ ಮನಕ್ಕೆ ಮುದ ನೀಡಿತು. ನಿಮ್ಮಂತಹ ಗಂಭೀರ ಓದುಗರು ಮತ್ತು ಪ್ರತಿಕ್ರಿಯಿಸುವವರು ಅಪರೂಪ. ಧನ್ಯವಾದಗಳು.

Submitted by H A Patil Sat, 12/27/2014 - 20:18

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ನಿಮ್ಮ ಅಶಯ ನನಗೆ ಅರ್ಥವಾಯಿತು, ಕೆಲವು ಕೊರತೆಗಳ ಮತ್ತು ಪ್ರತಿಕೂಲ ಪರಿಸ್ಥಿತಿಗಳ ಮದ್ಯೆಯೂ ಪತ್ರಿಕೆ ಸಾಗಿಬಂದ ನಿರಂತರ ಪಯಣ ಕುರಿತು ದಾಖಲಿಸ ಬೇಕೆನಿಸಿತು ಆ ಕ್ಷಣದಲ್ಲಿ ಮೂಡಿ ಬಂದ ಲೇಖನವಿದು, ಧನ್ಯವಾದಗಳು.