ಕಮಲದೆಸಳನು ಹೋಲ್ವ ಚೆಲುವ ಬೆರಳಲ್ಲಿ
ಪಿಡಿದಿರುವ ಪೊಂಗೊಳಲಿನಿಂಪು ದನಿಯಲ್ಲಿ
ಸವಿಯನ್ನೆ ಸುರಿಯುತಿಹ ನಸುನಗುವ ಮೊಗದ
ಹವಳದುಟಿಗಳ ಸೊಗವು ಸೆರೆಗೊಂಡಿತೆನ್ನ!
ಸಂಸ್ಕೃತ ಮೂಲ (ಲೀಲಾ ಶುಕನ ಕೃಷ್ಣಕರ್ಣಾಮೃತ, ಆಶ್ವಾಸ೧-೫೨):
ಕರಕಮಲ ದಲಕಲಿತ ಲಲಿತತರ ವಂಶೀ
ಕಲನಿನದ ಗಳದಮೃತ ಘನಸರಸಿ ದೇವೇ |
ಸಹಜರಸ ಭರಭರಿತ ದರಹಸಿತ ವೀಥೀ
ಸತತವಹದಧರಮಣಿ ಮಧುರಿಮಣಿ ಲೀಯೇ ||-ಹಂಸಾನಂದಿ
ಕೊ: ಸಾಮಾನ್ಯವಾಗಿ ಅನುವಾದಿಸುವಾಗ ಮೂಲದಲ್ಲಿಲ್ಲದ ಪದಗಳನ್ನು ಸೇರಿಸುವುದೂ, ಮೂಲದಲ್ಲಿರುವ ಪದಗಳನ್ನು (ಅಥವಾ ಅರ್ಥವನ್ನೂ) ಪೂರಾ ಬಿಟ್ಟುಬಿಡಬಾರದೆಂಬುದೊಂದು ಕಟ್ಟುಪಾಡು. ಆದಷ್ಟೂ ನಾನು ಇದಕ್ಕೆ ಕಟ್ಟುಬೀಳಲು ಪ್ರಯತ್ನಿಸುವುದಾದರೂ, ಈ ಬಾರಿ ಹಾಗೆ ಮಾಡಲಿಲ್ಲ
ಕೊ.ಕೊ: ಮೂಲದಲ್ಲಿರುವ ೫/೫/೫/೪ ಮಾತ್ರೆಗಳ ಓಟವನ್ನು ಇದ್ದಿದ್ದರಲ್ಲಿ ಉಳಿಸುವ ಪ್ರಯತ್ನ ಮಾಡಿದ್ದೇನೆ.
ಚಿತ್ರ ಕೃಪೆ: ಮಿತ್ರ ಸುಯೋಗ್ ಗೈಧಾನಿ ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ , ನಿಜ ಹೇಳಬೇಕೆಂದರೆ, ಈ ಚಿತ್ರವನ್ನು ನೋಡಿದ ಮೇಲೆ, ಇದಕ್ಕೆ ತಕ್ಕ ಪದ್ಯವನ್ನು ಹುಡುಕಲೇಬೇಕೆಂದು ಕೃಷ್ಣಕರ್ಣಾಮೃತದಲ್ಲಿ ಅನೇಕ ಹೊಸ ಪದ್ಯಗಳನ್ನು ಓದಿ, ನಂತರ ನನಗೆ ಬಹಳ ಹಿಡಿಸಿದ್ದೂ, ಮತ್ತೆ ನನ್ನ ಅನುವಾದಿಸುವ ಅಳವಿಗೆ ಸ್ವಲ್ಪವಾದರೂ ದಕ್ಕೀತೆಂದು ಈ ಪದ್ಯವನ್ನು ತೆಗೆದುಕೊಂಡೆ. ಎಷ್ಟೆಂದರೂ ಮೂಲ ಮೂಲವೇ, ಅನುವಾದ ಅನುವಾದವೇ. ಮೂಲದಲ್ಲಿರುವ ಲಾಲಿತ್ಯ ನನ್ನ ಅನುವಾದದಲ್ಲಿ ಇಲ್ಲವೆನಿಸಿದರೂ, ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ, ಈ ಅನುವಾದ ಮಾಡುವಿಕೆಯೇನೋ ನನಗೆ ಬಹಳ ಸಂತಸ ಕೊಟ್ಟಿತು!









ಪ್ರತಿಕ್ರಿಯೆಗಳು
ಉ: ಸೆರೆ
ಅನುವಾದ ಚೆನ್ನಾಗಿ ಮೂಡಿ ಬಂದಿದೆ. ನನಗೆ ಪದ್ಯಗಳನ್ನು ಓದುವ ಮೊದಲು ಅದರ ಛಂದಸ್ಸನ್ನು ತಿಳಿಯುವ ಅಭ್ಯಾಸ. ಮಾತ್ರೆಗಳ ಓಟದ ಪರಿಚಯ ಕೊಟ್ಟಿದ್ದು ತುಂಬಾ ಒಳ್ಳೆಯದಾಯಿತು.
ಉ: ಸೆರೆ
ಚೆನ್ನಾಗಿದೆ, ಮೂಲದ ಗತಿ ಉಳಿಸಿಕೊಂಡಿದ್ದು.
ಸತತವಹದಧರಮಣಿ ಮಧುರಿಮಣಿ ಲೀಯೇ ಎಂದಾಗಬೇಕಿತ್ತು
( ಒಂದು ದ ಬಿಟ್ಟು ಹೋಗಿದೆ ಮತ್ತು ಣೀ ದೀರ್ಘ ಬೇಡ)
ಉ: ಸೆರೆ
ತಿದ್ದಿದ್ದೇನೆ. ಧನ್ಯವಾದಗಳು.
ಉ: ಸೆರೆ
ತಿದ್ದಿದ್ದೇನೆ. ಧನ್ಯವಾದಗಳು.
ಉ: ಸೆರೆ
ಒಂದು ಅದ್ಭುತ ಕಾವ್ಯದ ಅದ್ಭುತ ಅನುವಾದ.
ಕಾಯ್ದಿಟ್ಟುಕೊಳ್ಳುತ್ತಿದ್ದೇನೆ. ಮುಂದಿನದು ಬೇಗ ಬರಲಿ...
ಕೃಷ್ಣ