ಅಪ್ಪಯ್ಯ ಹೇಳಿದ್ದ ಕತೆ- ೦೧
ಸೊಸೈಟಿ ಅಕ್ಕಿ!
ಒಂದು ಹಳ್ಳಿ. ಅಲ್ಲಿನ ಓರ್ವ ಗೃಹಸ್ಥರ ಮನೆಗೆ ರಾತ್ರಿ ಹೊತ್ತು ಓರ್ವ ಸಾಧು ಭೇಟಿ ನೀಡುತ್ತಾರೆ. ಪಾದಚಾರಿಯಾಗಿ ಒಂದೂರಿನಿಂದ ಇನ್ನೊಂದೂರಿಗೆ ಸಾಗುತ್ತಿದ್ದ ಅವರು ಆ ರಾತ್ರಿಯನ್ನು ಆ ಮನೆಯಲ್ಲಿ ಕಳೆಯುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಅದಕ್ಕೆ ಒಪ್ಪಿದ ಗೃಹಸ್ಥರು, ಅವರಿಗೆ ಊಟದ ಹಾಗೂ ಮಲಗುವ ವ್ಯವಸ್ಥೆ ಮಾಡಿಕೊಡುತ್ತಾರೆ. ಮುಂಜಾನೆ ಸಾಧುಗಳಿಗೆ ಸ್ನಾನ ಮಾಡಲು ಬಿಸಿ ನೀರು ತುಂಬಿದ ಬಾಲ್ದಿ ಹಾಗೂ ಒಂದು ಕಂಚಿನ ತಂಬಿಗೆ ನೀಡುತ್ತಾರೆ. ಆ ಸಾಧು ಸ್ನಾನ ಮುಗಿಸಿ ಬಂದು, ಚಹಾ ಸೇವನೆ ಮಾಡಿ, ಆ ಗೃಹಸ್ಥರಿಗೆ ಮತ್ತವರ ಮನೆಯವರಿಗೆಲ್ಲಾ ಕೃತಜ್ಞತೆಗಳನ್ನು ತಿಳಿಸಿ, ಮುಂದಿನ ಊರಿಗೆ ಪಯಣ ಬೆಳೆಸುತ್ತಾರೆ.
ಅರ್ಧ – ಒಂದು ಘಂಟೆಯ ನಂತರ ಆ ಸಾಧು ಮರಳಿ ಆ ಗೃಹಸ್ಥರ ಮನೆಯ ಬಾಗಿಲಲ್ಲಿ ನಿಂತು ಆ ಗೃಹಸ್ಥರನ್ನು ಕರೆಯುತ್ತಿರುತ್ತಾರೆ. ಗೃಹಸ್ಥರು ಓಡೋಡಿ ಬಂದು, “ಏನಾಯ್ತು ಸ್ವಾಮಿಗಳೇ, ನಮ್ಮಿಂದ ಏನಾದರೂ ಅನಾಚಾರ ಆಯ್ತೇ?” ಎಂದು ಕೇಳಿದರು. ಅದಕ್ಕೆ ಆ ಸಾಧು “ಏನಿಲ್ಲ, ತಾವು ನೀಡಿದ್ದ ಕಂಚಿನ ತಂಬಿಗೆಯನ್ನು, ನಾನು ನನಗರಿವಿಲ್ಲದಂತೆಯೇ ನನ್ನ ಜೋಳಿಗೆಯಲ್ಲಿ ಇರಿಸಿಕೊಂಡು ತೆರಳಿದ್ದೆ, ಅಲ್ಲೆಲ್ಲೋ ನದೀ ತೀರದಲ್ಲಿ, ಮಲವಿಸರ್ಜನೆ ಮುಗಿಸಿದ ನನಗೆ ಥಟ್ಟನೇ ಅರಿವಾಯ್ತು. ಹಾಗಾಗಿ ಅದನ್ನು ತಮಗೆ ಒಪ್ಪಿಸಲು ಮರಳಿ ಬಂದೆ”. ಅಂದರು. ಆ ಗೃಹಸ್ಥರು “ಪರವಾಗಿಲ್ಲ ಬಿಡಿ ಅದರಲ್ಲೇನಂತೆ” ಎಂದು ಮರುನುಡಿದರು.
ಆಗ ಆ ಸಾಧು “ತಾವು ಅನ್ನಕ್ಕೆ ಬಳಸಿದ ಅಕ್ಕಿ ಎಲ್ಲಿಯದು. ಯಾರ ಸಂಪಾದನೆ ಹೇಳ್ತೀರಾ?” ಎಂದು ಕೇಳಿದಾಗ, ತಬ್ಬಿಬ್ಬಾದ ಆ ಗೃಹಸ್ಥ “ನನ್ನ ಹಿರಿಯ ಮಗ ಇಲ್ಲೇ ಪಟ್ಟಣದಲ್ಲಿ ಸೊಸೈಟಿಯಲ್ಲಿ ಕೆಲಸ ಮಾಡುತ್ತಾನೆ. ಅಕ್ಕಿ ಗೋಧಿ ಸಕ್ಕರೆ ಎಲ್ಲಾ ಆತನೇ ತರುವುದು ನಮ್ಮ ಮನೆಗೆ” ಅಂದರು. “ಹೂಂ.. ಯಜಮಾನರೇ ಅದಕ್ಕೇ ನೋಡಿ, ಲೆಕ್ಕ ತಪ್ಪಿಸಿ ತಂದಿರುವ ಅಕ್ಕಿಯಿಂದ ತಯಾರಿಸಿದ ಭೋಜನ ಸ್ವೀಕರಿಸಿದ ನನಗೂ ಕಳ್ಳಬುದ್ಧಿ ಬಂದು ಬಿಡ್ತು, ತಮ್ಮ ತಂಬಿಗೆಯನ್ನೇ ಕೊಂಡೊಯ್ದಿದ್ದೆ, ಮಲ ವಿಸರ್ಜನೆಯಾದ ಮೇಲೆ ತಪ್ಪಿನ ಅರಿವಾಯ್ತು” ಅಂದರು.
ಅಗ ಆ ಗೃಹಸ್ಥರಿಗೆ ತಮ್ಮ ತಪ್ಪಿನ ಅರಿವಾಯ್ತು. ಆ ಸಾಧುಗಳ ಕ್ಷಮೆ ಕೋರಿ, ಇನ್ನೆಂದೂ ಅಂತಹ ಅಕ್ರಮಕ್ಕೆ ಬೆಂಬಲ ಕೊಡುವುದಿಲ್ಲ. ನನ್ನ ಮಗನಿಗೆ ಇಂದೇ ಬುದ್ಧಿ ಹೇಳುತ್ತೇನೆ” ಎಂದು ಪಶ್ಚಾತ್ತಾಪ ಪಟ್ಟರು.
*****
ಸೊಸೈಟಿ ಅಕ್ಕಿ!
June 17, 2012 - 4:19pm
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಸೊಸೈಟಿ ಅಕ್ಕಿ!
ಆಸುರವರೆ
ನಿಮ್ಮ ಅಪ್ಪಾಜಿಯವರು ಹೇಳಿರುವ
ಉತ್ತಮ ನೀತಿ ಹೇಳುವ ಕತೆ
ಮನಕ್ಕೆ ಸಂತಸ ಕೊಟ್ಟಿತು.
ಹಾಗೆ
ಯೋಚನೆಗು ಹಚ್ಚಿತು.
ಅಲ್ಲ ಸೊಸೈಟಿ ಅಕ್ಕಿ ಕದ್ದು ತಂದ ಆ ಅಕ್ಕಿಯೆ ಹಾಗೆ ಮಾಡಿತಲ್ಲ
ಪಾಪ
ಇನ್ನು ಆ ಸಾಧು ಬಳ್ಳಾರಿಯ ಜನಾರ್ಧನ ರೆಡ್ಡಿಗಳ ಮನೆಯಲ್ಲೊ
ಚೆನ್ನೈನ ರಾಜನ ಮನೆಯಲ್ಲೊ
ಬೇಡ ಬಿಡಿ
ನಮ್ಮ ಯಡಿಯೂರಪ್ಪನವರ ಮನೆಯಲ್ಲೊ ಅನ್ನ ತಿಂದರೆ ಏನು ಗತಿ.
.
ನಮ್ಮ ಮಠ ಮಾನ್ಯಗಳ ಸನ್ಯಾಸಿ ಸ್ವಾಮಿಗಳೆಲ್ಲ ಒಮ್ಮೆ ಈ ಕತೆಯ ಬಗ್ಗೆ ಚಿಂತನೆ ನಡೆಸಿದಲ್ಲಿ ಚೆನ್ನಾಗಿರುತ್ತೇನೊ
ವಂದನೆಗಳೊಡನೆ
ಪಾರ್ಥಸಾರಥಿ
ಉ: ಸೊಸೈಟಿ ಅಕ್ಕಿ!:ಸಿರಿ ಸುಖ ಸಂಪತ್ತು ,ಚಿನ್ನದ ತಂಬಿಗೆ...!!
+೧ -
ಸಖತ್...!!
ಈ ಬರಹ ಓದಿ ಅಂತ್ಯಕ್ಕೆ ಬರುವಾಗ ನನಗೂ ಗುರುಗಳಿಗೆ ಬಂದ ಭಾವವೇ ಬಂತು...
ಬಹುಶ ಓದುವ ಹಲವರಿಗೆ ಹಾಗೆಯೇ ಅನ್ನಿಸಬಹ್ದು...
ಉತ್ತಮ ನೀತಿ ಕಥೆ...
ಸೊಸೈಟಿ ಅಕ್ಕಿ ತಿಂದ ಸ್ವಾಮೀಜಿ ಬಹುಶ ಆ ಮನೆಯವರಿಗೆ ಸಿರಿ ಸುಖ ಸಂಪತ್ತು ಉತ್ತಮ ಅಕ್ಕಿ ನೀಡುವನೋ?
ಕ0ಚಿನ ತಂಬಿಗೆ ಅಂತಾ ಹೇಳಿ, ಚಿನ್ನದ ತಂಬಿಗೆ ನೀಡುವರೇನೋ ಅಂದುಕೊಂಡಿದ್ದೆ.........
ಆದರೆ....!!
ಅಂದ್ ಹಾಗೆ ನಿಮ್ಮಿಂದ ಕವನಗಳ ಹೊರತಾಗಿ ಈ ತರಹದ ಬರಹ ಕಂಡು, ಓದಿ ಬಹು ದಿನಗಳೆ ಆಗಿತ್ತು.....!!
ಶುಭವಾಗಲಿ...
\|/
ಉ: ಸೊಸೈಟಿ ಅಕ್ಕಿ!:ಸಿರಿ ಸುಖ ಸಂಪತ್ತು ,ಚಿನ್ನದ ತಂಬಿಗೆ...!!
ಧನ್ಯವಾದಗಳು
ಉ: ಸೊಸೈಟಿ ಅಕ್ಕಿ!
ತಮ್ಮ ಮನದಲ್ಲಿ ಹೊಸ ಯೋಚನೆಗಳಿಗೆ ಈ ಕತೆ ನಾಂದಿ ಹಾಡಿತು.
ತಾವು ನುಡಿದಂತೆ ಎಲ್ಲರೂ ಈ ಬಗ್ಗೆ ಚಿಂತನೆ ನಡೆಸಲೆಂದು ಹಾರೈಸೋಣ.
ಧನ್ಯವಾದಗಳು.
-ಆಸು ಹೆಗ್ಡೆ
ಉ: ಸೊಸೈಟಿ ಅಕ್ಕಿ!
ಆಸು ಅವರೆ ,
ಸರಳವಾದ ನೀತಿಬೊಧಕ ಕಥೆಇದು. ಶಾಲೆಯ ಪಠ್ಯಪುಸ್ತಕಕ್ಕೆ ಸೇರಿಸಿದರೆ ಕೆಲವು ಮಕ್ಕಳಾದರೂ ಪ್ರಾಮಾಣಿಕತೆ ಕುರಿತು ಅರಿವನ್ನು ಪಡಿಯಬಹುದು.
ವಂದನೆಗಳು
ಉ: ಸೊಸೈಟಿ ಅಕ್ಕಿ!
ಹೂಂ.. ತಮ್ಮ ಮಾತು ನಿಜ.
ಆದರೆ ಪಠ್ಯಪುಸ್ತಕಗಳಲ್ಲಿ, ಸುಳ್ಳು ಕತೆಗಳೇ ತುಂಬಿಹೋಗಿವೆ.
ಧನ್ಯವಾದಗಳು
-ಆಸು ಹೆಗ್ಡೆ
ಉ: ಸೊಸೈಟಿ ಅಕ್ಕಿ!
ವಾಹ್ ಅನ್ನುವಂತಿದೆ ಕಥೆ :)
ಉ: ಸೊಸೈಟಿ ಅಕ್ಕಿ!
"ವಾಹ್!" ಅನ್ನಿ... ಅಂದು ಬಿಡಿ... ಒಮ್ಮೆಯಾದರೂ. :) :)
ಆಂಗ್ಲ ಭಾಷೆಯಲ್ಲಿ ಹೇಳುತ್ತಾರೆ: "I would like to thank..." ಹೀಗೆ ಹೇಳುವವರು ನಿಜವಾಗಿ ಧನ್ಯವಾದ ಅರ್ಪಿಸುವುದು ಯಾವಾಗ?
ಧನ್ಯವಾದಗಳು.
-ಆಸು ಹೆಗ್ಡೆ
ಉ: ಸೊಸೈಟಿ ಅಕ್ಕಿ!
ಆಸು ಅವರೆ,
ಯಾರ ಮನೆಯಲ್ಲಿ ಅಂದರೆ ಅವರ ಮನೆಯಲ್ಲಿ ಊಟ ಮಾಡಬಾರದೆಂದು ಹಿರಿಯರೊಬ್ಬರು ಹೇಳುತ್ತಿದ್ದರು. ನಿಮ್ಮ ಕತೆ ಓದಿದ ಮೇಲೆ ಅದರ ನಿಜವಾದ ಅರ್ಥ ಗೊತ್ತಾಯಿತು.
ಉ: ಸೊಸೈಟಿ ಅಕ್ಕಿ!
ಹೂಂ... ಆ ಹಿರಿಯರ ಮಾತು ನಿಜ.
ಧನ್ಯವಾದಗಳು.
ಉ: ಸೊಸೈಟಿ ಅಕ್ಕಿ!
ಇಂದಿನವರಿಗೆ ಈ ಕಥೆಯ ಹಿಂದಿನ ನೈತಿಕತೆ ಅರ್ಥವಾಗುತ್ತದೋ ಇಲ್ಲವೋ , ಎಂಬಷ್ಟರಮಟ್ಟಿಗೆ ಹದಗೆಟ್ಟಿದೆ ವಾತಾವರಣ . ಈಗ ಸೊಸೈಟಿ ಅಕ್ಕಿ ಕದಿಯುವುದು ಮುಖ್ಯವಲ್ಲ . ಕಾನೂನಿನ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಕದಿಯುವುದು ಮುಖ್ಯ ಎಂಬಷ್ಟಕ್ಕೆ ನಿಂತಿದೆ ನಮ್ಮ ನೈತಿಕ ಮೌಲ್ಯ ಅಥವಾ ಮಾಡಿದ ತಪ್ಪನ್ನು ನ್ಯಾಯಾಲಯದ ಗಮನಕ್ಕೆ ತರದಂತೆ ಜಾಣ್ಮೆ ವಹಿಸುವವರ ಮರ್ಜಿಯಲ್ಲಿ ಬದುಕುವುದನ್ನು ಕಲಿಯಬೇಕು ಎಂಬಷ್ಟಕ್ಕೆ ಸೀಮಿತವಾಗಿದೆ ಜನಜೀವನ
ಉ: ಸೊಸೈಟಿ ಅಕ್ಕಿ!
ತಮ್ಮ ವಿಮರ್ಶಾತ್ಮಕ ಹಾಗೂ ಸಹಮತ ಪೂರಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು
-ಆಸು ಹೆಗ್ಡೆ
ಉ: ಸೊಸೈಟಿ ಅಕ್ಕಿ!
ಸಕತ್ ಹೆಗಡೆಯವರೇ
ಉ: ಸೊಸೈಟಿ ಅಕ್ಕಿ!
ಧನ್ಯವಾದಗಳು
ಉ: ಸೊಸೈಟಿ ಅಕ್ಕಿ!
ಹಿರಿಯರು ಹೇಳಿದ ಹಾಗೆ ಈ ಕಥೆ ಮೊದಲೇ ಪಠ್ಯಪುಸ್ತಕಕ್ಕೆ ಸೇರಿದ್ದರೆ ನಿನ್ನೆಯ ಮಕ್ಕಳು (ಇಂದಿನ ಭ್ರಷ್ಟ ನಾಯಕರು) ಪ್ರಾಮಾಣಿಕರಾಗಿರುತ್ತಿದ್ದರೇನೋ??!!
ಕಥೆ ಚೆನ್ನಾಗಿದೆ.
ಉ: ಸೊಸೈಟಿ ಅಕ್ಕಿ!
ನಿಜ ನಿಜ
ಆದರೆ?
ಧನ್ಯವಾದಗಳು.
ಉ: ಸೊಸೈಟಿ ಅಕ್ಕಿ!
ಚಿಕ್ಕ, ಚೊಕ್ಕ, ಅದ್ಭುತ ಕತೆ !