ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಇಂತದ್ದೊಂದು ಪುಸ್ತಕ ಓದಿದೆ!!

ಭೈರಪ್ಪನವರ ಯಾವುದೇ ಕಾದಂಬರಿ ನನ್ನನ್ನು ಕಾಡದೇ ಬಿಟ್ಟಿಲ್ಲ. ಪ್ರತಿ ಬಾರಿಯೂ ಅವರ ಬರಹಗಳನ್ನು ಓದಿದಾಗ, ಒಂದೆರೆಡು ದಿನಗಳು ಏನೂ ಓದದೆ ಅದರಲ್ಲೇ ಮುಳುಗಿರುತ್ತಿದ್ದೆ. ಸುತ್ತಮುತ್ತಲಿನ ಜನರಲ್ಲಿ ಕಾದಂಬರಿಯ ಪಾತ್ರಗಳನ್ನು ಹುಡುಕ ತೊಡಗುತ್ತಿದ್ದೆ. ಯಾವುದೋ ಹೋಲಿಕೆ ಸಿಕ್ಕಂತಾಗಿ, ಓದುವಾಗ ಹೊಳೆಯದ್ದು ಇದ್ದಕ್ಕಿದ್ದಂತೆ ನೆನಪಾದಂತಾಗಿ ರೋಮಾಂಚನಗೊಳ್ಳುತ್ತಿದ್ದೆ.

’ವಂಶವೃಕ್ಷ’ ಇತ್ತೀಚೆಗೆ ನಾನು ಓದಿದ ಪುಸ್ತಕ. ಮನುಷ್ಯನ ಧಾರ್ಮಿಕ ನಂಬಿಕೆಗಳ ಬಗ್ಗೆ, ಅವುಗಳ ಸಾಧ್ಯಾಸಾಧ್ಯತೆಗಳ ಬಗ್ಗೆ, ಧರ್ಮ ಸೂಕ್ಷ್ಮಗಳು- ಅವು ಆಸ್ತಿಕನಿಗೆ ಈಡು ಮಾಡುವ ಗೊಂದಲಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಡುವ ಕಾದಂಬರಿ ವಂಶವೃಕ್ಷ. ಕಾದಂಬರಿ ಇತಿಹಾಸ ಪರಿಚಯದಿಂದ ಶುರುವಾಗುತ್ತದಾದರೂ ಕತೆ ಮುಂದುವರೆಯುತ್ತ ಹೋದಂತೆ ಹೊಸ ಹೊಸ ಮಗ್ಗುಲನ್ನು ಪಡೆಯುತ್ತ ಹೋಗಿ ನಾವು ಯೋಚಿಸಿರದ ತಿರುವುಗಳನ್ನು ಪಡೆದುಕೊಂಡು ಭೈರಪ್ಪನವರ ಕಾದಂಬರಿಗಳಲ್ಲಿ ಯಾವಾಗಲೂ ಆಗುವಂತೆ ಓದುಗರು ಯಾವುದೇ ಕನ್ ಕ್ಲೂಶನ್ನಿಗೂ ಬರಲಾಗದ ಘಟ್ಟದಲ್ಲಿ ಮುಕ್ತಾಯ ಕಂಡುಬಿಡುತ್ತದೆ. ಭೈರಪ್ಪನವರ ಈ ಶೈಲಿಯನ್ನು ನಾನು ಮತ್ತೆ ಮತ್ತೆ ಮೆಚ್ಚುತ್ತೇನೆ. ಪ್ರತಿ ಕಾದಂಬರಿಯಲ್ಲು ಭೈರಪ್ಪನವರು ಇನ್ನಷ್ಟು ಆಪ್ತರಾಗುತ್ತಾರೆ.

ಕತೆಯಲ್ಲಿ ಬಹಳಷ್ಟು ಪ್ರಧಾನ ಪಾತ್ರಗಳಿವೆಯಾದರೂ ಶ್ರೀನಿವಾಸ ಶೋತ್ರಿಗಳದ್ದು ಕಾದಂಬರಿಯಲ್ಲಿ ವಿಶಿಷ್ಟ ಸ್ಥಾನ. ಭೈರಪ್ಪನವರ ಹೆಚ್ಚು ಚಿಂತನೆಗಳು ಈ ಪಾತ್ರದ ಮೂಲಕ ಹೊಮ್ಮುತ್ತವೆ. ತಮ್ಮ ಜೀವನದ ಕೊನೆ ದಿನಗಳವರೆಗೆ ಧರ್ಮನಿಷ್ಠರಾಗಿ ಬದುಕಿದ ಶೋತ್ರಿಗಳ ಬದುಕಿನಲ್ಲಿ ಅವರ ನಂಬಿಕೆಗಳನ್ನೆ ಪರೀಕ್ಷೆಗೊಡ್ಡುವ, ಕಾದಂಬರಿಯಿಡೀ ಆಶ್ಚರ್ಯವೆನಿಸುವಂತಹ ಅವರ ವ್ಯಕ್ತಿತ್ವಕ್ಕೇ ಸವಾಲೆಸಗುವ ಸನ್ನಿವೇಶವನ್ನು, ಅದನ್ನು ಶೋತ್ರಿಗಳು ನಿಭಾಯಿಸುವ ರೀತಿಯನ್ನು. ಆ ಸನ್ನಿವೇಶ ಶೋತ್ರಿಗಳಿಗೆ ಉಂಟುಮಾಡುವ ಗೊಂದಲಗಳನ್ನು ಓದುಗರ ಮನಸ್ಸಿನಲ್ಲಿ ಮೂಡಿಸುತ್ತಾ ಹೋಗುತ್ತಾರೆ ಭೈರಪ್ಪ. ಎಲ್ಲಿಯೂ ಕೃತಕವೆನಿಸದೆ, ಆಸ್ತಿಕತೆಗೂ ನಾಸ್ತಿಕ ಲೇಪನವನ್ನು ಮಾಡಿ ಅದೊಂದು ಲಾಜಿಕಲ್ ವೀವ್ ಇಟ್ಟುಕೊಂಡೇ ಕಾದಂಬರಿಯು ಮುಂದುವರೆಯುತ್ತದೆ.

ನಾಸ್ತಿಕರಾದವರಿಗೆ ಆಸ್ತಿಕರ ವಿಚಾರಗಳು ಯಾವಾಗಲೂ ಕ್ಷುಲ್ಲಕವೇ. ಅಥವ ನಾನು ನಾಸ್ತಿಕಳಾದ್ದರಿಂದ ನನಗೆ ಹಾಗನ್ನಿಸುವುದೇನೋ? ಇರಲಿ. ಆದರೆ ಆಸ್ತಿಕತೆಯಲ್ಲಿ ಯಾವುದೇ ಗೊಂದಲಗಳಿರುವುದಿಲ್ಲವೆಂದು ನಾಸ್ತಿಕರು (ನಾನು) ನಂಬುತ್ತಾರೆ. ವಂಶವೃಕ್ಷವು ಈ ಕಲ್ಪನೆಗಳನ್ನು ಮೀರಿ ವಿಭಿನ್ನವಾದ ಆಸ್ತಿಕತೆಯನ್ನು ಅದರಲ್ಲಿನ ಗೊಂದಲಗಳನ್ನು ಪರಿಚಯಿಸುತ್ತದೆ. ಧರ್ಮದ ಉಲ್ಲಂಘನೆ ಅಥವಾ ಪಾಲನೆಯ ಸೂಕ್ಷ್ಮ ತಂತುಗಳನ್ನು ತಾಕುತ್ತದೆ. ಕಾದಂಬರಿಯ ಬಗ್ಗೆ ಇನ್ನೂ ಹೆಚ್ಚಿನ ಸಂಗತಿಗಳನ್ನು ಬರಯಬೇಕಿನಿಸಿದರೂ ಅವೆಲ್ಲವೂ ನಿರರ್ಥಕ. ನೀವೊಮ್ಮೆ ಆ ಕಾದಂಬರಿ ಓದಿ. ಅಥವಾ ಇದಕ್ಕೂ ಮೊದಲೇ ಓದಿರುವಿರಾದರೆ ನಿಮ್ಮ ಅನುಭವ ಹಂಚಿಕೊಳ್ಳಿ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಇಂತದ್ದೊಂದು ಪುಸ್ತಕ ಓದಿದೆ!!

thesalimath's picture

ನಾನು ಗಮನಿಸಿರುವ ಹಾಗೆ ಭೈರಪ್ಪನವರ ಕಾದಂಬರಿಗಳಲ್ಲಿ ಯಾವುದೇ ವಿಷಯದ ಎರಡೂ ಮಗ್ಗಲುಗಳ ವಿಮರ್ಶೆ ನಡೆಯುತ್ತದೆ. ಕೊನೆಗೆ ಸಾತ್ವಿಕ ಅಥವಾ ಬಹುಜನಜನಿತ ಎನ್ನಬಹುದಾದ ತತ್ವಗಳ ಮೇಲುಗೈ ಆಗುತ್ತದೆ. ಅಥವಾ ಭೈರಪ್ಪನವರು ನಂಬಿರುವ ತತ್ವಗಳ ಮೇಲುಗೈ ಆಗುತ್ತದೆ ಎನ್ನಬಹುದೇನೋ! ಏಕೆಂದರೆ ಅವರ ಕಾದಂಬರಿಗಳಲ್ಲಿ ಮೇಲುಗೈ ಹೊಂದಿರುವ ತತ್ವಗಳ ಬಗ್ಗೆ ಧನಾತ್ಮಾಕ ಅಂಶಗಳನ್ನು ಅವರ ಭಾಷಣ ಹಾಗೂ ಇತರೆ ಲೇಖನಗಳಲ್ಲಿ ಓದಿದ್ದೇನೆ. ಇದಕ್ಕೆ ಉದಾಹರಣೆ ಎಂದರೆ ಸಾರ್ಥದಲ್ಲಿ ಬರುವ ವಾಮಾಚಾರ ಮತ್ತು ಸಾತ್ವಿಕ ಸಾಧನೆಗಳ ಬಗೆಗಿನ ಚರ್ಚೆ, ಬೌದ್ಧ ಮತ್ತು ಹಿಂದೂ ಮತಗಳ ವಿವಾದ, ಆವರಣದಲ್ಲಿ ಹಿಂದೂ ಮುಸ್ಲಿಂ ಧರ್ಮಗಳ ವಿಮರ್ಶೆ, 'ದಾಟು'ದಲ್ಲಿ ವರ್ಣಗಳ ವಿಶ್ಲೇಷಣೆ , ವಂಶವೃಕ್ಷದಲ್ಲಿ ನೀವು ಹೇಳಿದ ಆಸ್ತಿಕ ನಾಸ್ತಿಕ ವಿವಾದ, ದೂರ ಸರಿದರು ಇತ್ಯಾದಿಗಳಲ್ಲಿ ಇದೆ ರೀತಿಯ ವಿಶ್ಲೇಷಣೆ ಗಳಿವೆ. ಭೈರಪ್ಪನವರ ಪ್ರಗಲ್ಭ ಬರವಣಿಗೆಯ ತಾಕತ್ತೆಂದರೆ ಅದು ನಿಮಗೆ ಎರಡೂ ಕಡೆಯ ಬಲವಾದ ಪರಿಚಯವನ್ನು ಮಾಡಿಸುತ್ತದೆ.

ಸಾರ್ಥದಲ್ಲಿ ವಾಮಾಚಾರದ ವಿಶ್ಲೇಷಣೆ ಮಾಡುವಾಗ ನೀವು ವಾಮಾಚಾರಿ ಗಳಾಗಿಬಿದುತ್ತೀರಿ. ಆವರಣದಲ್ಲಿ ಹಿಂದೂ ದೇವರ ಬಗೆಗೆ ಬರೆಯುವಾಗ ಹೌದು ನಿಜ ಹಿಂದೂಗಳಲ್ಲಿ ದೇವರ ಕಲ್ಪನೆಯೇ ಸುಳ್ಳು ಎನಿಸಿಬಿಡುತ್ತದೆ. ಆದೆ ಸಾತ್ವಿಕತೆಯ ಮಹತ್ವ ಹೇಳುವಾಗ, ಹಿಂದೂ ಧರ್ಮದ ಮಹತ್ವ ಹೇಳುವಾಗ ಹಿಂದೆ ನಾವಂದುಕೊಂಡದ್ದು ಎಷ್ಟು ಸುಳ್ಳು ಅನ್ನಿಸಿಬಿಡುತ್ತದೆ. ಇದು ಭೈರಪ್ಪನವರ ಲೇಖನಿಯ ವೈಶಿಷ್ಟ್ಯ. amaizing and superb!!!!

ಸಾಧ್ಯವಾದರೆ ಕುವೆಂಪುರವರ "ನನ್ನ ದೇವರು" ಕಥೆಯನ್ನು ಓದಿರಿ. ultimate story!!!

ಉ: ಇಂತದ್ದೊಂದು ಪುಸ್ತಕ ಓದಿದೆ!!

ಹೇಮ ಪವಾರ್'s picture

ಸರ್, ನಾನು ಸಾರ್ಥ ಓದಿಲ್ಲ, ಆವರಣ ಮತ್ತು ನಾನು ಇದುವರೆಗೂ ಓದಿರುವ ಭೈರಪ್ಪನವರ ಕಾದಂಬರಿಗಳ ಮಟ್ಟಿಗೆ ಯೋಚಿಸುವುದಾದರೆ ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ. ಕುವೆಂಪುರವರ ನನ್ನ ದೇವರು ಓದಲು ಯತ್ನಿಸುವೆ. ಧನ್ಯವಾದಗಳು

ಉ: ಇಂತದ್ದೊಂದು ಪುಸ್ತಕ ಓದಿದೆ!!

thesalimath's picture

"ನನ್ನ ದೇವರು ಮತ್ತು ಇತರ ಕಥೆಗಳು" ಎಂಬುದು ಕಥಾ ಸಂಕಲನದ ಹೆಸರು.( ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ) . ಇನ್ನೊಂದು ಕಥೆ "ಆದರ್ಶ ಸಾಧನೆ" . the best!!!

ಉ: ಇಂತದ್ದೊಂದು ಪುಸ್ತಕ ಓದಿದೆ!!

Seetharmorab's picture

ಹೇಮ...
ಭೈರಪ್ಪನವರ ಭೀಮಕಾಯದಿಂದ ಹಿಡಿದು ಆವರಣದತನಕ ಎಲ್ಲಾ ಕಾದಂಬರಿಗಳೂ ನನ್ನ ಹತ್ತಿರ ಇವೆ ಅವರ ಕಥೆಗಳಲ್ಲಿ ಹತ್ತಿರದಿಂದ ಪಾತ್ರಗಳನ್ನು ನೋಡುತ್ತೀವಿ. ಅವರ ಕಥೆಗಳು ಬಹಳ ಯೋಚಿಸುವಂತೆ ಮಾಡುತ್ತದೆ.

ಸೀತ ಆರ್. ಮೊರಬ್

ಉ: ಇಂತದ್ದೊಂದು ಪುಸ್ತಕ ಓದಿದೆ!!

ಹೇಮ ಪವಾರ್'s picture

ಮೇಡಂ ನಿಮ್ಮ ಅಡ್ರೆಸ್ ಕೊಡಿ :)

ಉ: ಇಂತದ್ದೊಂದು ಪುಸ್ತಕ ಓದಿದೆ!!

uniquesupri's picture

ನಿಮ್ಮ ಓದನ್ನು ನಮ್ಮೆಲ್ಲರೊಡನೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
ನನ್ನ ಸೀಮಿತ ಓದಿನ ಆಧಾರದಲ್ಲಿ ಹೇಳುವುದಾದರೆ ಭೈರಪ್ಪನವರ ಕುಸುರಿ ಕೆಲಸ ಅದ್ಭುತವಾದದ್ದು. ಶೈಲಿ, ತಂತ್ರ, ಸನ್ನಿವೇಶವನ್ನು ಕಟ್ಟಿಕೊಡುವಲ್ಲಿನ ಶ್ರದ್ಧೆ... ಭಾವನೆಗಳ ಹೊಯ್ದಾಟವನ್ನು ನಿರೂಪಿಸುವಾಗಿನ ನಿಖರತೆ, ವಿವಿದ ವಾದಗಳನ್ನು ನಿಭಾಯಿಸುವಾಗ ತೋರುವ ನಿರ್ಲಿಪ್ತತೆ ನನಗೆ ಇಷ್ಟವಾಗಿದೆ.
ಆದರೂ ಮನದ ಮೂಲೆಯಲ್ಲೆಲ್ಲೋ ಇವರು ಸನಾತನಿಯಾಗಿ ನನಗೆ ಈ ಕತೆಯನ್ನೆಲ್ಲಾ ಹೇಳುತ್ತಿದ್ದಾರೆಯೋ ಅಂತ ತೋರುತ್ತೆ, ಅನಂತಮೂರ್ತಿ ಮುಂತಾದವರನ್ನು ಓದುವಾಗ ನಿರೂಪಕನ ಹಿಂದೆ ಆಧುನಿಕತೆಯ, ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತಿನಿಧಿಯ ನೆರಳು ಕಂಡಂತೆ... ಬಹುಶಃ ಅದು ನನ್ನದೇ ಪೂರ್ವಾಗ್ರಹವಿರಬಹುದು, ಇಲ್ಲ ಆ ಲೇಖಕರಲ್ಲಿ ನಾನು ಗುರುತಿಸಿದ ದೋಷವೇ ಇರಬಹುದು. ಸ್ಪಷ್ಟವಾಗಲು ಹೆಚ್ಚು ಓದಬೇಕು.

ಉ: ಇಂತದ್ದೊಂದು ಪುಸ್ತಕ ಓದಿದೆ!!

vinutha.mv's picture

ಭೈರಪ್ಪನವರ ಬರವಣಿಗೆಯೇ ಅಂತದ್ದು. ಒಂದು ವಿಷಯದ ಸುತ್ತ ಎಲ್ಲ ದಿಕ್ಕುಗಳಲ್ಲಿ ಆಲೋಚಿಸುವಂತೆ ಪಾತ್ರಗಳ ಸೃಷ್ಟಿಯಾಗಿರುತ್ತದೆ. ನಾ ಕಂಡಂತೆ, ಅವರು ತಮ್ಮ ಪಾತ್ರಗಳ ಮೂಲಕ ಪ್ರಕೃತಿ ಸಹಜ ಭಾವನೆಗಳಿಗೆ ಧರ್ಮದ ಬೆಂಬಲವನ್ನು ಪುಷ್ಟೀಕರಿಸುತ್ತಾರೆ. ಅಂಧಾನುಕರಣೆಗಳ ವಿರುದ್ಧ ಧ್ವನಿಯೆತ್ತುತ್ತಾರೆ. ಹಿಂದಿನ - ಇಂದಿನ ಪೀಳಿಗೆಯ ಕೊಂಡಿಯಾಗಿದ್ದಾರೆ. ಸ್ತ್ರೀ ಪಾತ್ರಗಳಿಗೆ ಅವರ ಕಾದಂಬರಿಗಳಲ್ಲಿ ವಿಶೇಷ ಮಹತ್ವವಿದೆಯೆಂದು ಕಾಣುತ್ತದೆ. ನಾಯಿನೆರಳು, ಗೃಹಭಂಗ, ವಂಶವೃಕ್ಷ ಎಲ್ಲದರಲ್ಲೂ ಇದನ್ನು ಕಾಣಬಹುದು. ವಂಶವೃಕ್ಷದಲ್ಲೇ, ಶೋತ್ರಿಗಳಷ್ಟೇ ಮುಖ್ಯವಾದ ಪಾತ್ರ ಅವರ ಸೊಸೆಯದು, ಹೆಂಡತಿಯದು ಹಾಗೂ ಕೆಲಸದಾಕೆಯದು. (ಕ್ಷಮಿಸಿ, ನನಗೆ ಪಾತ್ರಗಳು ನೆನಪಿನಲ್ಲಿವೆಯೇ ಹೊರತು, ಪಾತ್ರದ ಹೆಸರುಗಳಲ್ಲ, ಸ್ವಲ್ಪ ವೀಕ್ ಹೆಸರು ಜ್ಞಾಪಕ ಇಟ್ಟುಕೊಳ್ಳುವುದರಲ್ಲಿ :) ) ಜೊತೆಗೆ ಸಂಶೋಧನಾರ್ಥಿಯಾಗಿ ಬಂದಿದ್ದ ಆ ಶ್ರೀಲಂಕೆಯ ಮಹಿಳೆ, ಹಾಗೂ ಆಕೆಯ ಸುತ್ತ ಬರುವ ಪಾತ್ರಗಳಲ್ಲೂ, ಧರ್ಮ ಜಿಜ್ಞಾಸೆಯೊಂದಿಗೆ, ಒಂದು ಹಂತದಲ್ಲಿ ಭಾವನೆಗಳೆ ಗೆಲ್ಲುತ್ತವೆಯೆನ್ನಬಹುದು. ಗಂಡ-ಹೆಂಡತಿ, ತಾಯಿ - ಮಗು ಸಂಬಂಧಗಳು, ಧರ್ಮ, ಕರ್ತವ್ಯ, ಸಂವೇದನೆಗಳು ಬಹಳ ಚೆನ್ನಾಗಿ ವ್ಯಕ್ತವಾಗಿದೆ.
ನನ್ನನ್ನು ಬಹಳ ದಿನಗಳವರೆಗೆ ಹಿಡಿದಿಟ್ಟ ಭೈರಪ್ಪನವರ ಕಾದಂಬರಿಯೆಂದರೆ ’ತಂತು’. ನಮ್ಮ ಸಾಮಾಜಿಕ ಹಾಗೂ ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಬೆಸೆದುಕೊಂದಿರುವ ರಾಜಕೀಯದ ಘೋರ ಮುಖದ ಪರಿಚಯ. ಏನೂ ಮಾಡಲಾಗದ ಅಸಹಾಯ ಪರಿಸ್ಥಿತಿಯಲ್ಲಿ ಹಪತಪಿಸುವಂತೆ ಮಾಡುತ್ತದೆ.
ಹಳೆಯ ಓದಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ನಿಮಗೆ ಧನ್ಯವಾದಗಳು.

ಉ: ಇಂತದ್ದೊಂದು ಪುಸ್ತಕ ಓದಿದೆ!!

ಹೇಮ ಪವಾರ್'s picture

ವಿನುತ, ಹೌದು ತಂತು ಕೂಡ ಒಂದು ಅತ್ಯುತ್ತಮ ಕೃತಿ. ತುಂಬ ಹಿಂದೆ ಓದಿದ್ದೆ. ನೆನಪಿಸಿದ್ದಕ್ಕೆ ಧನ್ಯವಾದಗಳು. :)

ಉ: ಇಂತದ್ದೊಂದು ಪುಸ್ತಕ ಓದಿದೆ!!

ಪಂಚರಂಗಿ's picture

ಸಾಂಸಾರಿಕ ತಳಹದಿಯ ಮೇಲೆ ರೂಪುಗೊಂಡ ಕಾದಂಬರಿಗಳಾದ ಅಂಚು ಮತ್ತು ಗ್ರಹಣ ಕೂಡ ತುಂಬಾ ಸತ್ವಶಾಲಿಯಾಗಿದೆ......
ಪಾತ್ರಗಳು ಬಹಳ ಕಾಡುತ್ತವೆ...... ತಮಗೆ ಸಂಬಂಧ ಪಡದ ವಿಷಯಗಳಿಗೆ ಮೂಗು ತೂರಿಸಿ ವಿವಾದ ಸೃಷ್ಟಿಸಿ, ಕ್ಷಣಕ್ಕೊಮ್ಮೆ ಬಣ್ಣ ಬದಲಾಯಿಸುವ ಊಸರವಳ್ಳಿಗಳಂತಿರುವ ಅನೇಕ ಸಾಹಿತಿಗಳಿಗಿಂತ ತಾವು ನಂಬಿಕೊಂಡು ಬಂದಿರುವ ತತ್ವಗಳಿಗೆ ಸದಾ ಬದ್ಧವಾಗಿರುವ ಭೈರಪ್ಪನವರು ನಿಜಕ್ಕೂ ಶ್ರೇಷ್ಥರು.........

ಪಂಚರಂಗಿ:)

ಉ: ಇಂತದ್ದೊಂದು ಪುಸ್ತಕ ಓದಿದೆ!!

Seetharmorab's picture

ಹೇಮ...
ಅದಕ್ಕೇನಂತೆ ಧಾರಾಳವಾಗಿ ಕೊಡುತ್ತೀನಿ ಬರ್ಕೊಳ್ಳಿ ಹೈದರಾಬಾದ್ ................
..................................

ಸೀತ ಆರ್. ಮೊರಬ್

ಉ: ಇಂತದ್ದೊಂದು ಪುಸ್ತಕ ಓದಿದೆ!!

aniljoshi's picture

ಹೇಮ ಅವರೆ,

>> ಆದರೆ ಆಸ್ತಿಕತೆಯಲ್ಲಿ ಯಾವುದೇ ಗೊಂದಲಗಳಿರುವುದಿಲ್ಲವೆಂದು ನಾಸ್ತಿಕರು (ನಾನು) ನಂಬುತ್ತಾರೆ.
ಹೌದೆ ? ಆಸ್ತಿಕತೆಯ (ಹಾಗೂ ಅದರ ಆಚರಣೆಗಳ) ಗೊಂದಲಗಳಿಂದಾಗಿ ನಾಸ್ತಿಕತೆಯತ್ತ ಹೊರಳುವದು ಹೆಚ್ಚು ಅಂದೊಕೊಂಡಿದ್ದೆ!

ವಂಶವೃಕ್ಷ ನನ್ನ ಮೆಚ್ಚಿನ ಕಾದಂಬರಿಗಳಲ್ಲೊಂದು. ಮನಸ್ಸಿನ ತೊಳಲಾಟಗಳನ್ನು ಭೈರಪ್ಪ ಎಷ್ಟು ಎಳೆ ಎಳೆಯಾಗಿ ಬಿಡಿಸಿಡುತ್ತಾರಲ್ಲ ಅನಿಸಿತ್ತು. ಇನ್ನೂ ಸನಾತನಿ/ಎಡ/ಬಲ ಲೇಬಲ್ಲುಗಳ ಅರಿವು ಬರುವ ಮುಂಚೆಯೇ ಓದಿದ್ದೆ. ಕತೆಗಾರನ ನಂಬಿಕೆಗಳ ಬಗ್ಗೆ ಅಷ್ಟು ಯೋಚಿಸಿರಲಿಲ್ಲ. ಇತ್ತೀಚೆಗೆ ಆವರಣದ ಸಂದರ್ಭದಲ್ಲಿ ಭೈರಪ್ಪನವರ ಪಾತ್ರಗಳು ಅವರ (ಭೈರಪ್ಪನವರ) ನಂಬಿಕೆಗಳನ್ನು ಮೀರಿ ಹೋಗುವದಿಲ್ಲ ಅನ್ನುವ ಅರ್ಥದ ಮಾತು ಕೇಳಿ ಬಂದಾಗ (ಬಹುಶಃ ಅನಂತಮೂರ್ತಿಯವರು ಹೇಳಿದ್ದು) ಹೌದಲ್ಲ ಅನಿಸಿತ್ತು.

- ಅನಿಲ