೬೨. ಶ್ರೀ ಲಲಿತಾ ಸಹಸ್ರನಾಮ ೨೦೮ರಿಂದ ೨೧೩ನೇ ನಾಮಗಳ ವಿವರಣೆ

೬೨. ಶ್ರೀ ಲಲಿತಾ ಸಹಸ್ರನಾಮ ೨೦೮ರಿಂದ ೨೧೩ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೦೮ - ೨೧೩

Māheśvarī माहेश्वरी (208)

೨೦೮. ಮಾಹೇಶ್ವರೀ

             ಮಾಹೇಶ್ವರವು ಶಿವನ ಒಂದು ರೂಪವಾಗಿದೆಯಾದ್ದರಿಂದ ಅವನ ಪತ್ನಿಯು ಮಾಹೇಶ್ವರೀ. ಮಹಾನಾರಾಯಣ ಉಪನಿಷತ್ತು (೧೨.೧೭), "ಅವನು (ಮಾಹೇಶ್ವರನು) ಪರಮೋನ್ನತ ದೇವನಾಗಿದ್ದು ಅವನು ವೇದೋಚ್ಛಾರಣೆಯ ಪೂರ್ವದಲ್ಲಿ ಉಚ್ಛರಿಸುವ ॐ (ಓಂ)ಕಾರಕ್ಕೆ ಅತೀತನಾಗಿದ್ದಾನೆ ಮತ್ತು ಈ ಓಂಕಾರವು ಧ್ಯಾನ ಸಮಯದಲ್ಲಿ ಮೂಲ ಕಾರಣನಲ್ಲಿ ಲಯವಾಗಿ ಹೋಗುತ್ತದೆ" ಎಂದು ಹೇಳುತ್ತದೆ. ಶಿವನ ಮಾಹೇಶ್ವರ ರೂಪವು ಪರಮೋನ್ನತವಾದದ್ದು ಮತ್ತು ಅವನು ತ್ರಿಗುಣಗಳಾದ ಸತ್ವ, ರಜೋ ಮತ್ತು ತಮೋ ಗುಣಗಳಿಗೆ ಅತೀತನಾಗಿದ್ದಾನೆ. ಶಿವನ ಮಾಹೇಶ್ವರ ರೂಪವು ಲಿಂಗಾಕಾರವಾಗಿದೆ ಮತ್ತು ಶಿವನ ಈ ಲಿಂಗರೂಪದಲ್ಲಿ ಎಲ್ಲಾ ದೇವಾನು ದೇವತೆಗಳು ಉಪಸ್ಥಿತರಾಗಿದ್ದಾರೆಂದು ಲಿಂಗ ಪುರಾಣವು ಹೇಳುತ್ತದೆ. ಲಿಂಗವನ್ನು ದೇವಿಯ ಶ್ರೀ ಚಕ್ರಕ್ಕೆ ಹೋಲಿಸಬಹುದು. 

Mahādevī महादेवी (209)

೨೦೯. ಮಹಾದೇವೀ

             ಶಿವನನ್ನು ಮಹಾದೇವ ಎಂದೂ ಕರೆಯಲಾಗಿದ್ದು ಅದು ಶಿವನ ಚಾಂದ್ರ ರೂಪವನ್ನು (ಇದು ಶಿವನ ಎಂಟನೆಯ ರೂಪವಾಗಿದ್ದು ಅವನ ಹೆಂಡಿತಿಯು ರೋಹಿಣಿಯಾದರೆ ಅವರಿಬ್ಬರ ಮಗನು ಗ್ರಹವಾಗಿರುವ ಬುಧನಾಗಿದ್ದಾನೆ) ಪ್ರತಿನಿಧಿಸುತ್ತದೆ ಮತ್ತವನ ಅರ್ಧಾಂಗಿಯು ಮಹಾದೇವಿಯೆನಿಸುತ್ತಾಳೆ. ಮಹಾ ಎಂದರೆ ಅತ್ಯುನ್ನತವಾದದ್ದು ಮತ್ತು ದೇವಿಯು ಪರಮೋನ್ನತಳಾದವಳಾದ್ದರಿಂದ ಆಕೆಯನ್ನು ಮಹಾದೇವಿಯೆಂದು ಕರೆಯಲಾಗಿದೆ.

             ಲಿಂಗ ಪುರಾಣದ ಪ್ರಕಾರ ಶಿವನಿಗೆ ಎಂಟು ವಿಶ್ವರೂಪಗಳಿವೆ ಮತ್ತು ಅವು ಯಾವುವೆಂದರೆ, ೧. ಶರ್ವ - ಭೂಮಿ ರೂಪ, ೨. ಭವ - ಜಲ ರೂಪ, ೩. ರುದ್ರ - ಅಗ್ನಿ ರೂಪ, ೪. ಉಗ್ರ - ವಾಯು ರೂಪ, ೫. ಭೀಮ - ಆಕಾಶ ರೂಪ, ೬. ಪಶುಪತಿ - ಆತ್ಮ ರೂಪ, ೭. ಈಶಾನ - ಸೌರ ಅಥವಾ ಸೂರ್ಯನ ರೂಪ ಮತ್ತು ಮಹಾದೇವ - ಚಾಂದ್ರ ಅಥವಾ ಚಂದ್ರನ ರೂಪ.

            ಶಿವ ಮತ್ತು ಶಕ್ತಿಯರಿಬ್ಬರೂ ತಮ್ಮ ಕಿರೀಟ ಭಾಗದಲ್ಲಿ ಚಂದ್ರನನ್ನು ಧರಿಸಿದ್ದಾರೆನ್ನುವುದು ಅತ್ಯಂತ ಗಮನಾರ್ಹವಾಗಿದೆ. ಚಂದ್ರನು ಎರಡು ಗುಣಗಳನ್ನು ಪ್ರತಿನಿಧಿಸುತ್ತಾನೆ, ಮೊದಲನೆಯದು ಶೀತಲ (ತಣ್ಣಗಿನ) ಸ್ವಭಾವ ಮತ್ತು ಎರಡನೆಯದು ಬುದ್ಧಿವಂತಿಕೆ.

Mahālakṣmī महालक्ष्मी (210)

೨೧೦. ಮಹಾಲಕ್ಷ್ಮೀ

            ವಿಷ್ಣುವಿನ ಮಹಾನ್ ಹೆಂಡತಿಯೇ ಮಹಾಲಕ್ಷ್ಮೀ; ಸ್ಥಿತಿಕಾರಕನಾಗಿ ಶಿವನು ವಿಷ್ಣುವಾಗಿ ಆವಿರ್ಭಾವ ಹೊಂದಿದಾಗ ಅವನ ಹೆಂಡತಿಯು ಮಹಾ ಲಕ್ಷ್ಮೀ. ಲಿಂಗ ಪುರಾಣದ ಪ್ರಕಾರ ಮಹಾಲಕ್ಷ್ಮಿಯು ಈ ಜಗತ್ತಿನ ಮಾತೆಯಾಗಿದ್ದಾಳೆ. "ಸಕಲ ಗುಣಗಳನ್ನು ಹೊಂದಿರುವ, ತ್ರಿಗುಣಗಳನ್ನೆಲ್ಲ ಹೊಂದಿರುವ, ಸಕಲವನ್ನೂ ದಯಪಾಲಿಸುವ ಮತ್ತು ಸರ್ವಾಂತರಯಾಮಿಯಾದ ಲಕ್ಷ್ಮಿಯು ನನ್ನ ಪಾಪಗಳನ್ನು ವಿನಾಶಗೊಳಿಸಲಿ" ಎನ್ನುವ ಒಂದು ಸ್ತುತಿಯು ನಮಗೆ ಲಿಂಗಪುರಾಣದಲ್ಲಿ ಸಿಗುತ್ತದೆ.

            ಮಹಾಲಕ್ಷ್ಮೀ ಎಂದರೆ ಹದಿಮೂರು ವರ್ಷದ ಬಾಲೆ ಎನ್ನುವ ಅರ್ಥವೂ ಇದೆ. ‘ಮಹಾಲಕ್ಷ್ಮೀ’ಯನ್ನು ಚಾಂದ್ರಮಾನದ ಹದಿಮೂರನೇ ದಿನವಾದ ತ್ರಯೋದಶಿಯಂದು ಅವಳ ಬೀಜವಾದ ಶ್ರೀಂ (श्रीं) ಮೂಲಕ ಪೂಜಿಸಿದರೆ ಅವರಿಗೆ ಸಂಪತ್ತಿನ ಕೊರೆತೆಯಾಗಲಿ ಅಥವಾ ಶುಭಪ್ರದವಾದ ವಸ್ತುಗಳ ಕೊರತೆಯಾಗಲಿ ಇರುವುದಿಲ್ಲ.

Mṛḍapriyā मृडप्रिया (211)

೨೧೧. ಮೃಡಪ್ರಿಯಾ

            ಶಿವನು ತನ್ನ ಸಾತ್ವಿಕ ರೂಪದಲ್ಲಿ ಮೃಡನ್ ಎಂದು ಕರೆಯಲ್ಪಡುತ್ತಾನೆ ಆದ್ದರಿಂದ ಶಿವನನ್ನು ಇಷ್ಟಪಡುವ ದೇವಿಯು ಮೃಡಪ್ರಿಯಳೆಂದು ಕರೆಯಲ್ಪಟ್ಟಿದ್ದಾಳೆ. ಮೃಡ ಎಂದರೆ ಆನಂದ; ಇದು ಸತ್ವಗುಣದ ಒಂದು ಲಕ್ಷಣವಾಗಿದ್ದು ಇದು ಕರುಣೆ ಅಥವಾ ದಯೆ, ಕೃಪೆ ಮೊದಲಾದವುಗಳನ್ನು ಬಿಂಬಿಸುತ್ತದೆ ಮತ್ತು ಪ್ರಿಯವೆಂದರೆ ಇಷ್ಟಪಡುವುದೆಂದರ್ಥ. ಈ ನಾಮದ ಒಟ್ಟಾರೆ ಅರ್ಥವೆಂದರೆ ಶಿವನು ಈ ಪ್ರಪಂಚವನ್ನು ಮಮತೆಯಿಂದ ನೋಡುತ್ತಾನೆ ಮತ್ತು ಆತನ ಭಾರ್ಯೆಯಾದ ದೇವಿಯು ಅವನ ಈ ಕ್ರಿಯೆಯನ್ನು ಪ್ರೀತಿಸುತ್ತಾಳೆ. ಎಷ್ಟೇ ಆಗಲಿ ಆಕೆ ಜಗದ ಮಾತೆಯಲ್ಲವೇ?

Mahā-rūpā महारूपा (212)

೨೧೨. ಮಹಾ-ರೂಪಾ

             ದೇವಿಗೆ ಮಹಾನ್ ರೂಪವಿದೆ. ಇಲ್ಲಿ ಗಮನಿಸ ಬೇಕಾದ ಅಂಶವೇನೆಂದರೆ ಈ ಎಲ್ಲಾ ನಾಮಗಳು ಮಹಾ ಶಬ್ದದಿಂದ ಪ್ರಾರಂಭವಾಗುತ್ತವೆ; ಇದು ಆಕೆಯ ಪರಮೋನ್ನತ ಸ್ಥಾನವನ್ನು ಸೂಚಿಸುತ್ತವೆ. ಕೃಷ್ಣನು ಈ ಪರಮ ರೂಪವನ್ನು ಹೀಗೆ ವಿವರಿಸುತ್ತಾನೆ, "ಹುಟ್ಟಿಗೆ ಮೂಲ ಕಾರಣವಾದ ಸಂಪೂರ್ಣ ಭೌತಿಕ ವಸ್ತುವನ್ನು ಬ್ರಹ್ಮವೆಂದು ಕರೆಯಲ್ಪಟ್ಟಿದೆ ಮತ್ತು ಈ ಬ್ರಹ್ಮದೊಳಗೆ ನಾನು ಆವರಿಸಿದ್ದೇನೆ ಮತ್ತು ಎಲ್ಲಾ ಜೀವಿಗಳ ಹುಟ್ಟನ್ನು ರೂಪಿಸುತ್ತಿದ್ದೇನೆ" (ಭಗವದ್ಗೀತ ೧೪.೩)

            ಮುಂಡಕ ಉಪನಿಷತ್ತು (೧.೧.೯) ಹೀಗೆ ಹೇಳುತ್ತದೆ, "ತಸ್ಮಾದೇತದ್ ಬ್ರಹ್ಮ ನಾಮ ರೂಪಮನ್ನಮ್ ಚ ಜಾಯತೇ" ಅಂದರೆ ಆ ಬ್ರಹ್ಮದಿಂದ (ಪರಾ ಬ್ರಹ್ಮದಿಂದ) ಈ ಅಪರಾ ಬ್ರಹ್ಮವು ನಾಮ, ರೂಪ ಮತ್ತು ಆಹಾರವಾಗಿ ಗುರುತಿಸಲ್ಪಟ್ಟದ್ದು ಆವಿರ್ಭಾವವಾಗುತ್ತದೆ". ದೇವಿಗೆ ಈ ತೆರನಾದ ಮಹತ್ ರೂಪವಿದೆ ಮತ್ತು ಈ ಅತ್ಯುನ್ನತವಾದ ಮಹತ್ ಎನ್ನುವುದು ಸೃಷ್ಟಿಗೆ ಮೂಲ ಕಾರಣವಾಗಿದೆ.

           ಮಹತ್ ಎಂದರೆ ಎಣೆಯಿಲ್ಲದ್ದು ಮತ್ತು ಇದು ಬುದ್ಧಿ ಅಥವಾ ಬುದ್ಧಿವಂತಿಕೆಯ ತತ್ವವನ್ನು ಸೂಚಿಸುತ್ತದೆ. (ಸಾಂಖ್ಯ ತತ್ವದ ಪ್ರಕಾರ ಪ್ರಕೃತಿಯಿಂದ ಉದ್ಭವವಾಗುವ ೨೩ ತತ್ವಗಳಲ್ಲಿ ಇದು ಎರಡನೆಯದಾಗಿದೆ ಮತ್ತು ಇದರಿಂದ ಅಹಂಕಾರ ಅಥವಾ ನಾನು ಎನ್ನುವ ತತ್ವ ಮತ್ತು ಮನಸ್ಸು ಉತ್ಪನ್ನವಾಗುತ್ತವೆ).

Mahāpūjyā महापूज्या (213)

೨೧೩. ಮಹಾಪೂಜ್ಯಾ

             ದೇವಿಯು ಮಹಾತ್ಮರಾದ ಋಷಿ ಮುನಿಗಳಿಂದ ಪೂಜಿಸಲ್ಪಡುತ್ತಾಳೆ. ಈ ಋಷಿ ಮುನಿಗಳಿಗೆ ಉಪದೇವತೆಗಳು ಮತ್ತು ದೇವತೆಗಳಿಗಿಂತ ಹೆಚ್ಚಿನದಾದ ಜ್ಞಾನವು ಇರುತ್ತದೆ. ಅವರು ಯಾರೆಂದರೆ ಅವರನ್ನು ಪೂಜಿಸುವುದಿಲ್ಲ ಅವರು ಪೂಜೆಗೆ ಯೋಗ್ಯರಾದವರನ್ನು ಮಾತ್ರವೇ ಪೂಜಿಸುತ್ತಾರೆ. ಕೆಲವೊಂದು ವ್ಯಾಖ್ಯಾನಗಳ ಪ್ರಕಾರ ದೇವಿಯು ಬ್ರಹ್ಮ, ವಿಷ್ಣು, ಶಿವರಿಂದ ಪೂಜಿಸಲ್ಪಡುತ್ತಾಳಾದ್ದರಿಂದ ಆಕೆಯು ಮಹಾಪೂಜ್ಯಳಾಗಿದ್ದಾಳೆ. ಇದರ ಅರ್ಥವೇನೆಂದರೆ ವಿವಿಧ ಕರ್ತವ್ಯಗಳನ್ನು ನಿರ್ವಹಿಸಲು ನಿಯೋಜಿಸಲ್ಪಟ್ಟ ವಿವಿಧ ದೇವರುಗಳು ಆಕೆಯನ್ನು ಪೂಜಿಸುತ್ತಾರೆ ಮತ್ತು ದೇವಿಯ ಸರ್ವಶ್ರೇಷ್ಠತೆ ಅಥವಾ ಆಕೆಯ ಪರಮೋನ್ನತ ಸ್ಥಾನವನ್ನು ಸೂಚಿಸುವ ಹೇಳಿಕೆಯಾಗಿದೆ.

            ದೇವಿಯನ್ನು ಮಂತ್ರ, ಲೋಹ ಮತ್ತು ಅನರ್ಘ್ಯ ರತ್ನಗಳಿಂದ ಪೂಜಿಸುವ ದೇವಾನುದೇವತೆಗಳು ಮತ್ತು ಇತರರ ಬಗೆಗೆ ಹಲವಾರು ಉಲ್ಲೇಖಗಳಿವೆ. ಅವು ಈ ರೀತಿಯಾಗಿವೆ. ೧. ಶಿವ - ಮಂತ್ರ, ೨.ಬ್ರಹ್ಮ- ಶೈಲ ಅಥವಾ ಶಿಲೆ ೩. ವಿಷ್ಣು - ನೀಲಿ ಶಿಲೆ (ಹರಳು), ೪. ಕುಬೇರ - ಸುವರ್ಣ (ಬಂಗಾರ), ೫.ವಿಶ್ವೇದೇವತೆಗಳು - ಬೆಳ್ಳಿ (ರಜತ), ೬. ವಾಯು - ತಾಮ್ರ, ೭. ವಸು - ಹಿತ್ತಾಳೆ, ೮. ವರುಣ - ಸ್ಪಟಿಕ, ೯. ಅಗ್ನಿ - ರತ್ನಗಳು, ೧೦. ಶಕ್ರ (ಇಂದ್ರ) - ಮುತ್ತುಗಳು, ೧೧. ಸೂರ್ಯ - ಹವಳ, ೧೨. ಸೋಮ (ಚಂದ್ರ) - ಇಂದ್ರ ನೀಲವೆನ್ನುವ ಒಂದು ರೀತಿಯಾದ ನೀಲಿ ಹರಳು, ೧೩. ಗ್ರಹಗಳು - ಇತರೇ ಹರಳುಗಳು, ೧೪. ರಾಕ್ಷಸರು - ತವರ (Tin), ೧೫. ಪಿಶಾಚರು - ವಜ್ರ ಅಥವಾ ವಜ್ರದಂತೆ ಗಟ್ಟಿಯಾಗಿರುವ ರತ್ನಗಳು ೧೬. ಮಾತೃಗಣಗಳು - ಕಬ್ಬಿಣ.

******

           ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 208-213 http://www.manblunder.com/2009/09/lalitha-sahasranamam.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
No votes yet

Comments

Submitted by makara Sun, 07/07/2013 - 19:23

ಆತ್ಮೀಯ ಸಂಪದಿಗರೆ,
ದೇವಿಯ ಪೂಜೆಗೆ ವಿವಿಧ ದೇವಾನು ದೇವತೆಗಳು ಬಳಸುವ ರತ್ನ, ಮಣಿ ಹಾಗೂ ಲೋಹಗಳು ಇವುಗಳ ಕುರಿತಾದ ಕೆಲವೊಂದು ಅನುಮಾನಗಳಿವೆ. ಅವುಗಳ ಕುರಿತು ಹೆಚ್ಚಿನ ವಿವರಗಳಿಗೆ ಮೂಲ ಲೇಖಕರಾದ ಶ್ರೀಯುತ ವಿ. ರವಿಯವರನ್ನು ಸಂಪರ್ಕಿಸಿದ್ದೇನೆ. ಅವುಗಳಲ್ಲಿ ಕೆಲವೊಂದು ಅನುಮಾನಗಳನ್ನು ಅವರು ಪರಿಷ್ಕರಿಸಿದ್ದಾರೆ; ಇನ್ನೊಂದೆರಡು ವಿಷಯಗಳಲ್ಲಿ ಸ್ಪಷ್ಟನೆ ದೊರೆತಿಲ್ಲ; ಅವುಗಳಿಗೆ ಸೂಕ್ತ ಪರಿಷ್ಕಾರ ದೊರೆತ ನಂತರ ಅವನ್ನು ಇಲ್ಲಿ ಸೇರಿಸುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by makara Mon, 07/08/2013 - 10:08

In reply to by makara

ನವರತ್ನಗಳ ಕುರಿತಂತೆ ಹಾಗೂ ಅವುಗಳ ಸಂಸ್ಕೃತ ಹೆಸರುಗಳ ಕುರಿತಾಗಿ ಶ್ರೀಯುತ ರವಿಯವರಲ್ಲಿ ಕೆಲವೊಂದು ಅನುಮಾನಗಳನ್ನು ಪ್ರಸ್ತಾವಿಸಿದ್ದೆ. ಅವರ ಉತ್ತರ ಸಿಕ್ಕಿದ ನಂತರ ನಾನು ಇಲ್ಲಿ ಕೊಟ್ಟಿರುವ ಅನುವಾದ ಸರಿಯಿದೆ ಎಂದು ಮನದಟ್ಟಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳಿಗೂ ತಮ್ಮದೇ ಆದ ರತ್ನ/ಹರಳುಗಳಿವೆ. ಸೂರ್ಯನಿಗೆ ಮಾಣಿಕ್ಯ (ಪದ್ಮರಾಗ), ಚಂದ್ರನಿಗೆ ಮಣಿ/ಮುತ್ತು, ಬುಧನಿಗೆ ಮರಕತ (ಪಚ್ಚೆ) ಎನ್ನುವ ಹಸಿರು ಹರಳು, ಶುಕ್ತನಿಗೆ ವಜ್ರ, ಕುಜನಿಗೆ ಹವಳ (ಪ್ರವಳ), ಗುರುವಿಗೆ ಪುಷ್ಯರಾಗ, ಶನಿದೇವರಿಗೆ ಇಂದ್ರನೀಲ (ಒಂದು ವಿಧವಾದ ನೀಲಿ ಹರಳು) ಮತ್ತು ರಾಹುಕೇತುಗಳಿಗೆ ಗೋಮೇಧಿಕ ಮತ್ತು ವೈಢೂರ್ಯಗಳು ಇವೆ. ಆದರೆ ಅವರು ಪ್ರಸ್ತಾವಿಸಿರುವಂತೆ ವಿವಿಧ ಗ್ರಹಗಳಿಗೂ ಮತ್ತು ಅವುಗಳು ಇಲ್ಲಿ ದೇವಿಯ ಪೂಜೆಗೆ ಬಳಸುವ ಹರಳುಗಳಿಗೂ ಸಂಭಂದವಿಲ್ಲದೇ ಇರುವುದರ ಕುರಿತಾಗಿ ಅವರ ಮುಂದೆ ನನ್ನ ಅನುಮಾನವನ್ನಿಟ್ಟಿದ್ದೆ. ಅದಕ್ಕೆ ಅವರು ಈ ಹರಳುಗಳನ್ನು ಆಯಾ ಗ್ರಹಗಳು ದೇವಿಯ ಪೂಜೆಗೆ ಬಳಸುವ ಹರಳುಗಳಷ್ಟೇ ಆದರೆ ಅದಕ್ಕೂ ಒಂದು ಗ್ರಹದ ದೋಷ ಪರಿಹಾರರ್ಥವಾಗಿ ಉಪಯೋಗಿಸುವ ಹರಳಿಗೂ ನೇರ ಸಂಭಂದವಿಲ್ಲವೆಂದು ತಿಳಿಸಿರುತ್ತಾರೆ. ಇದರ ಬಗೆಗೆ ಓದುಗರಿಗೆ ಏನಾದರೂ ಹೆಚ್ಚಿನ ಮಾಹಿತಿ ಇದ್ದರೆ ತಿಳಿಸಿಕೊಡಿ.
ಎಲ್ಲಾ ಸಂಪದಿಗರಿಗೂ ವಂದನೆಗಳು, ಶ್ರೀಧರ್ ಬಂಡ್ರಿ

Submitted by nageshamysore Mon, 07/08/2013 - 05:33

ಶ್ರೀಧರರೆ, ಲಲಿತಾ ಸಹಸ್ರನಾಮ ೨೦೮ - ೨೧೩ - ತಮ್ಮ ಪರಿಶೀಲನೆ / ಅವಗಾಹನೆಗೆ ಸಿದ್ದ. ವೆಬ್ಸೈಟಿನ ಕೊಂಡಿಯನ್ನು ಕೊನೆಯಲ್ಲಿ ಸೇರಿಸಿದ್ದೇನೆ - ನಾಗೇಶ ಮೈಸೂರು

ಲಲಿತಾ ಸಹಸ್ರನಾಮ ೨೦೮ - ೨೧೩
----------------------------------------------------

೨೦೮. ಮಾಹೇಶ್ವರೀ
ಓಂಕಾರಾತೀತ ಪರಮೋನ್ನತ ಶಿವರೂಪ ಮಾಹೇಶ್ವರ
ಸತ್ವ ರಾಜೋ ತಮೋ ತ್ರಿಗುಣಾತೀತ ಶಿವಲಿಂಗಾಕಾರ
ಶ್ರೀಚಕ್ರ ಸಮಾನ ಲಿಂಗರೂಪದೆ ಸರ್ವದೇವ ಉಪಸ್ಥಿತ
ಶಿವನಸತಿ ಶಿವನೊಂದು ರೂಪ ಮಾಹೇಶ್ವರಿ ಶ್ರೀಲಲಿತ!

೨೦೯. ಮಹಾದೇವೀ  
ಶೀತಲ ಚತುರ ಚಂದ್ರಮ ಶಿವ ಶಕ್ತಿ ಕಿರೀಟಾಭರಣ 
ಶಿವನಷ್ಟಮ ವಿಶ್ವರೂಪ ಮಹಾದೇವ ಚಂದ್ರಾಭರಣ
ಮಹಾದೇವನ ಅರ್ಧಾಂಗಿ ಮಹಾದೇವೀ ಶ್ರೀ ಲಲಿತ
ಅತ್ಯುನ್ನತವೆ ಮಹಾ ಪರಮೋನ್ನತವೆ ಶ್ರೀದೇವಿ ವ್ರತ!

೨೧೦. ಮಹಾಲಕ್ಷ್ಮೀ
ಸ್ಥಿತಿಕಾರಕ ರೂಪದ ವಿಷ್ಣು ಘನ ಸತಿ ಮಹಾಲಕ್ಷ್ಮೀ
ಸರ್ವಗುಣಸಂಪನ್ನೆ ತ್ರಿಗುಣೆ ಸರ್ವ ಸಂಪದ್ದಾಯಿನಿ
ಪಾಪವಿನಾಶಿನಿ ಸರ್ವಾಂತರ್ಯಾಮಿ ಲಕ್ಷ್ಮಿರೂಪಿಣಿ
ಪೂಜಿಸೆ ತ್ರಯೋದಶಿಗೆ ಶುಭಸಂಪತ್ ಸಮೃದ್ದಿನಿ!

೨೧೧. ಮೃಡಪ್ರಿಯಾ  
ಶಿವ ಸತ್ವಗುಣ ಲಕ್ಷಣ ಮೃಡವೆಂದರೆ ಆನಂದ
ದಯೆ ಕೃಪೆ ಕರುಣಾದಿ ಪ್ರತಿಬಿಂಬಿತಾಮೋದ
ಜಗವನೆಲ್ಲ ದೃಷ್ಟಿಸೊ ಶಿವಕಾರುಣ್ಯದ ಮಮತೆ 
ಮೃಡ ಕ್ರಿಯಾಸಂಪ್ರೀತೆ ಮೆಚ್ಚಿ ಶಿವನಾ ಲಲಿತೆ!

೨೧೨. ಮಹಾ-ರೂಪಾ  
ಜನನ ಮೂಲಕಾರಣ ಸಂಪೂರ್ಣ ವಸ್ತುವೆ ಬ್ರಹ್ಮ
ಪರಾ ಸೃಜಿತ ಭೌತಿಕ ರೂಪವಾಗಿ ಅಪರಾ ಬ್ರಹ್ಮ
ಬ್ರಹ್ಮಾಂತರ್ಗತ ಸೃಷ್ಟಿ ಸ್ಥಿತಿ ಲಯ ಪರಮೋನ್ನತ
ನಿಯಂತ್ರಣಾ ಸಾಮರ್ಥ್ಯ ಮಹಾರೂಪ ಶ್ರೀಲಲಿತ!

೨೧೩. ಮಹಾಪೂಜ್ಯಾ  
ದೇವಾಧಿದೇವತೆಗಳ ಮೀರಿದ ಜ್ಞಾನವಾಗಿ ಮಹತ್ತರ
ಋಷಿ ಮುನಿ ಮಹಾತ್ಮರ ಪೂಜೆ ಯೋಗ್ಯರಿಗೆ ಮಾತ್ರ
ತ್ರಿಮೂರ್ತಿಗಳಿಂದಲು ಲಲಿತೆಯಾಗಿ ಪೂಜಾಯೋಗ್ಯ 
ವಿಧದೇವತ ಮಹಾತ್ಮಾಸಮೇತ ದೇವಿ ಮಹಾಪೂಜ್ಯ!

https://ardharaatriaalaapagalu.wordpress.com/%e0%b3%ac%e0%b3%a8-%e0%b2%…

Submitted by nageshamysore Mon, 07/08/2013 - 05:54

In reply to by nageshamysore

ಶ್ರೀಧರರೆ, >>>>೨೦೯. ಮಹಾದೇವೀ 
ಶೀತಲ ಚತುರ ಚಂದ್ರಮ ಶಿವ ಶಕ್ತಿ ಕಿರೀಟಾಭರಣ <<<<<
ಕಿರೀಟ ಅಷ್ಟು ಸೂಕ್ತವಲ್ಲದಿದ್ದರೆ ಕೆಳಗಿನ ಸಾಲಿನ ಹಾಗೆ 'ಮುಕುಟ' ಬಳಸಬಹುದು. ಅಲಂಕಾರಿಕವಾಗಿ ಸದ್ಯಕ್ಕೆ 'ಕಿರೀಟ'ವನ್ನೆ ಉಳಿಸಿಕೊಂಡಿದ್ದೇನೆ

"ಶೀತಲ ಚತುರ ಚಂದ್ರಮ ಶಿವಶಕ್ತಿ ಮುಕುಟಾಭರಣ"

Submitted by makara Mon, 07/08/2013 - 09:57

In reply to by nageshamysore

ನಾಗೇಶರೆ, ೨೦೮ರಿಂದ ೨೧೩ರ ಕವನಗಳ ಕೆಲವೊಂದು ವಿಷಯಗಳು ನಿಮ್ಮ ಅವಗಾಹನೆಗೆ.

೨೦೮. ಮಾಹೇಶ್ವರೀ
ಓಂಕಾರಾತೀತ ಪರಮೋನ್ನತ ಶಿವರೂಪ ಮಾಹೇಶ್ವರ
ಸತ್ವ ರಾಜೋ ತಮೋ ತ್ರಿಗುಣಾತೀತ ಶಿವಲಿಂಗಾಕಾರ
ರಾಜೋ=ರಜೋ
ಶ್ರೀಚಕ್ರ ಸಮಾನ ಲಿಂಗರೂಪದೆ ಸರ್ವದೇವ ಉಪಸ್ಥಿತ
ಲಿಂಗರೂಪದೆ=ಲಿಂಗರೂಪದಿ
ಶಿವನಸತಿ ಶಿವನೊಂದು ರೂಪ ಮಾಹೇಶ್ವರಿ ಶ್ರೀಲಲಿತ!
ಶಿವನೊಂದು=ಶಿವನದೊಂದು

೨೦೯. ಮಹಾದೇವೀ
ಶೀತಲ ಚತುರ ಚಂದ್ರಮ ಶಿವ ಶಕ್ತಿ ಕಿರೀಟಾಭರಣ
ಕಿರೀಟಾಭರಣಕ್ಕಿಂತ ಮುಕುಟಾಭರಣವೇ ಚೆನ್ನಾಗಿದೆ

೨೧೦. ಮಹಾಲಕ್ಷ್ಮೀ
ಸ್ಥಿತಿಕಾರಕ ರೂಪದ ವಿಷ್ಣು ಘನ ಸತಿ ಮಹಾಲಕ್ಷ್ಮೀ
ಸರ್ವಗುಣಸಂಪನ್ನೆ ತ್ರಿಗುಣೆ ಸರ್ವ ಸಂಪದ್ದಾಯಿನಿ
ಪಾಪವಿನಾಶಿನಿ ಸರ್ವಾಂತರ್ಯಾಮಿ ಲಕ್ಷ್ಮಿರೂಪಿಣಿ
ಲಕ್ಷ್ಮಿರೂಪಿಣಿ=ಲಕ್ಷ್ಮೀರೂಪಿಣಿ
ಪೂಜಿಸೆ ತ್ರಯೋದಶಿಗೆ ಶುಭಸಂಪತ್ ಸಮೃದ್ದಿನಿ!
ಸಮೃದ್ದಿನಿ=ಸಂವರ್ಧಿನಿ ಸೂಕ್ತವಾಗಬಹುದೆನಿಸುತ್ತಿದೆ.

೨೧೨. ಮಹಾ-ರೂಪಾ
ಜನನ ಮೂಲಕಾರಣ ಸಂಪೂರ್ಣ ವಸ್ತುವೆ ಬ್ರಹ್ಮ
ಪರಾ ಸೃಜಿತ ಭೌತಿಕ ರೂಪವಾಗಿ ಅಪರಾ ಬ್ರಹ್ಮ
ಬ್ರಹ್ಮಾಂತರ್ಗತ ಸೃಷ್ಟಿ ಸ್ಥಿತಿ ಲಯ ಪರಮೋನ್ನತ
ನಿಯಂತ್ರಣಾ ಸಾಮರ್ಥ್ಯ ಮಹಾರೂಪ ಶ್ರೀಲಲಿತ!
ಸಾಮರ್ಥ್ಯ= ಸಮರ್ಥ ಹೆಚ್ಚು ಸಮಂಜಸವೆನಿಸುತ್ತದೆ?

೨೧೩. ಮಹಾಪೂಜ್ಯಾ
ದೇವಾಧಿದೇವತೆಗಳ ಮೀರಿದ ಜ್ಞಾನವಾಗಿ ಮಹತ್ತರ
ಋಷಿ ಮುನಿ ಮಹಾತ್ಮರ ಪೂಜೆ ಯೋಗ್ಯರಿಗೆ ಮಾತ್ರ
ತ್ರಿಮೂರ್ತಿಗಳಿಂದಲು ಲಲಿತೆಯಾಗಿ ಪೂಜಾಯೋಗ್ಯ
ವಿಧದೇವತ ಮಹಾತ್ಮಾಸಮೇತ ದೇವಿ ಮಹಾಪೂಜ್ಯ!

ಇಲ್ಲಿ ಕಡೆಯ ಸಾಲಿನಲ್ಲಿ ಕೊಟ್ಟಿರುವ ವಿಷಯವು ಮೊದಲನೇ ಸಾಲಿನಲ್ಲಿ ಹೇಳಲ್ಪಟ್ಟಿದೆಯಾದ್ದರಿಂದ ದೇವಿಯನ್ನು ತ್ರಿಮೂರ್ತಿಗಳೂ ಸೇರಿದಂತೆ ಇತರ ದೇವಾನು ದೇವತೆಗಳು ಅನರ್ಘ್ಯ ರತ್ನಗಳು ಅಥವಾ ಮಣಿಮಾಣಿಕ್ಯಗಳು ಮೊದಲಾದ ವಸ್ತುಗಳಿಂದ ಪೂಜಿಸುತ್ತಾರೆನ್ನುವ ಅರ್ಥಬರುವ ಸಾಲುಗಳಿದ್ದರೆ ಚೆನ್ನ.

ವೆಬ್‌ಸೈಟಿನ ಕೊಂಡಿಯನ್ನು ಕೊಟ್ಟು ಒಳ್ಳೇ ಕೆಲಸ ಮಾಡಿದ್ದೀರ. ಕೊಂಡಿಯನ್ನು ಪರಿಷ್ಕತ ರೂಪದ ನಂತರ ಕೊಟ್ಟರೆ ಚೆನ್ನಾಗಿರುತ್ತದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Mon, 07/08/2013 - 18:03

In reply to by makara

ಶ್ರೀಧರರೆ, ೨೦೮ರಿಂದ ೨೧೩ರ ಕವನಗಳ ಮರುಪರಿಷ್ಕರಣೆ / ಅವಗಾಹನೆಗೆ :-) (ನಿಮ್ಮ ಸಲಹೆಯಂತೆ ಕೊಂಡಿಯನ್ನು ಕೊನೆಯಲ್ಲಿ ಸೇರಿಸುತ್ತೇನೆ) , ವಂದನೆಯೊಂದಿಗೆ , ನಾಗೇಶ ಮೈಸೂರು

೨೦೮. ಮಾಹೇಶ್ವರೀ
ಓಂಕಾರಾತೀತ ಪರಮೋನ್ನತ ಶಿವರೂಪ ಮಾಹೇಶ್ವರ
ಸತ್ವ ರಜೋ ತಮೋ ತ್ರಿಗುಣಾತೀತ ಶಿವ ಲಿಂಗಾಕಾರ
ಶ್ರೀಚಕ್ರ ಸಮಾನ ಲಿಂಗರೂಪದಿ ಸರ್ವದೇವ ಉಪಸ್ಥಿತ
ಶಿವಸತಿ ಶಿವನದೊಂದು ರೂಪ ಮಾಹೇಶ್ವರಿ ಶ್ರೀಲಲಿತ!

೨೦೯. ಮಹಾದೇವೀ 
ಶೀತಲ ಚತುರ ಚಂದ್ರಮ ಶಿವಶಕ್ತಿ ಮುಕುಟಾಭರಣ
ಶಿವನಷ್ಟಮ ವಿಶ್ವರೂಪ ಮಹಾದೇವ ಚಂದ್ರಾಭರಣ
ಮಹಾದೇವನ ಅರ್ಧಾಂಗಿ ಮಹಾದೇವೀ ಶ್ರೀ ಲಲಿತ
ಅತ್ಯುನ್ನತವೆ ಮಹಾ ಪರಮೋನ್ನತವೆ ಶ್ರೀದೇವಿ ವ್ರತ!

೨೧೦. ಮಹಾಲಕ್ಷ್ಮೀ
ಸ್ಥಿತಿಕಾರಕ ರೂಪದ ವಿಷ್ಣು ಘನ ಸತಿ ಮಹಾಲಕ್ಷ್ಮೀ
ಸರ್ವಗುಣಸಂಪನ್ನೆ ತ್ರಿಗುಣೆ ಸರ್ವ ಸಂಪದ್ದಾಯಿನಿ
ಪಾಪವಿನಾಶಿನಿ ಸರ್ವಾಂತರ್ಯಾಮಿ ಲಕ್ಷ್ಮೀರೂಪಿಣಿ
ಪೂಜಿಸೆ ತ್ರಯೋದಶಿಗೆ ಶುಭಸಂಪತ್ ಸಂವರ್ಧಿನಿ!

೨೧೨. ಮಹಾ-ರೂಪಾ
ಜನನ ಮೂಲಕಾರಣ ಸಂಪೂರ್ಣ ವಸ್ತುವೆ ಬ್ರಹ್ಮ
ಪರಾ ಸೃಜಿತ ಭೌತಿಕ ರೂಪವಾಗಿ ಅಪರಾ ಬ್ರಹ್ಮ
ಬ್ರಹ್ಮಾಂತರ್ಗತ ಸೃಷ್ಟಿ ಸ್ಥಿತಿ ಲಯ ಪರಮೋನ್ನತ
ನಿಯಂತ್ರಣಾ ಸಮರ್ಥೆ ಮಹಾ ರೂಪ ಶ್ರೀಲಲಿತ!

೨೧೩. ಮಹಾಪೂಜ್ಯಾ
ದೇವಾಧಿದೇವತೆಗಳ ಮೀರಿದ ಜ್ಞಾನವಾಗಿ ಮಹತ್ತರ
ಋಷಿ ಮುನಿ ಮಹಾತ್ಮರ ಪೂಜೆ ಯೋಗ್ಯರಿಗೆ ಮಾತ್ರ
ತ್ರಿಮೂರ್ತಿಗಳಿಂದಲು ಲಲಿತೆಯಾಗಿ ಪೂಜಾಯೋಗ್ಯ
ಅನರ್ಘ್ಯರತ್ನ ಮಣಿಮಾಣಿಕ್ಯ ಅರ್ಪಣಾರ್ಚನೆ ಸಾನಿಧ್ಯ!

 

Submitted by nageshamysore Mon, 07/15/2013 - 19:30

In reply to by nageshamysore

ಶ್ರೀಧರರೆ, 62ನೆ  ಈ ಪರಿಷ್ಕರಿಸಿದ ಆವೃತ್ತಿ ಸೂಕ್ತವಿದೆಅರೆ,  ಇದಕ್ಕೂ ಅಂತಿಮ ಕೊಂಡಿಯನ್ನು ಕೊಟ್ಟುಬಿಡಬಹುದೆಂದು ಕಾಣುತ್ತದೆ. ಆಗ 60-67 ಒಂದೆ ಸಾಲಿನಲ್ಲಿ ಮುಗಿದಂತಾಗುತ್ರದೆ. - ನಾಗೇಶ ಮೈಸೂರು

೨೧೩. ಮಹಾಪೂಜ್ಯಾ
:
;
ತ್ರಿಮೂರ್ತಿಗಳಿಂದಲು ಲಲಿತೆಯಾಗಿ ಪೂಜಾಯೋಗ್ಯ
ಅನರ್ಘ್ಯರತ್ನ ಮಣಿಮಾಣಿಕ್ಯ ಅರ್ಪಣಾರ್ಚನೆ ಸಾನಿಧ್ಯ!
ನಾಗೇಶರೆ, ಈ ಪಂಕ್ತಿಯ ಕಡೆಯ ಎರಡು ಸಾಲುಗಳು ಅದೇಕೋ ಸಂಪೂರ್ಣ ಅರ್ಥವನ್ನು ಬಿಂಬಿಸುತ್ತವೆಂದು ಅನಿಸಲಿಲ್ಲ; ಅದಕ್ಕಾಗಿ ಸ್ವಲ್ಪ ಕಾಲ ಅದನ್ನು ತಡೆಹಿಡಿಯುವುದು ಒಳಿತೆನಿಸಿತು. ಈ ವಿಧವಾಗಿ ಅರ್ಥ ಬರುವಂತೆ ಸೂಕ್ತ ಪದಗಳಿಂದ ಸ್ವಲ್ಪ ಮಾರ್ಪಡಿಸಿ:
ಬ್ರಹ್ಮ ವಿಷ್ಣು ರುದ್ರಾದಿ ತ್ರಿಮೂರ್ತಿಗಳಿಂದಲೂ ಸೇವಿತ
ಧನ್ಯ ಶ್ರೀ ಲಲಿತಾಂಬಿಕಾ ರತ್ನ ಮಣಿಮಾಣಿಕ್ಯಾದಿ ಪೂಜಿತ

ಶ್ರೀಧರರೆ, ಮಹಾಪೂಜ್ಯದ ಈ ಆವೃತ್ತಿ ಸೂಕ್ತ ಕಾಣುವುದೆ ನೋಡಿ?- ನಾಗೇಶ ಮೈಸೂರು
೨೧೩. ಮಹಾಪೂಜ್ಯಾ
ದೇವಾಧಿದೇವತೆಗಳ ಮೀರಿದ ಜ್ಞಾನವಾಗಿ ಮಹತ್ತರ
ಋಷಿ ಮುನಿ ಮಹಾತ್ಮರ ಪೂಜೆ ಯೋಗ್ಯರಿಗೆ ಮಾತ್ರ
ತ್ರಿಮೂರ್ತಿಗಳಿಂದಲು ಲಲಿತೆಯಾಗಿ ಪೂಜಾಯೋಗ್ಯ
ಬ್ರಹ್ಮ ವಿಷ್ಣು ರುದ್ರಾದಿ ತ್ರಿಮೂರ್ತಿಗಳಿಂದಲೂ ಸೇವಿತ
ರತ್ನಮಣಿಮಾಣಿಕ್ಯಾದಿ ಪೂಜಿತ ಮಹಾಪೂಜ್ಯಾ ಲಲಿತ!

ನಾಗೇಶರೆ,
ಪರಿಷ್ಕೃತ ರೂಪ ಈಗ ಚೆನ್ನಾಗಿ ಮೂಡಿ ಬಂದಿದೆ. ಆದರೂ ಕಡೆಯ ಸಾಲನ್ನು ಈ ವಿಧವಾಗಿ ಮಾರ್ಪಡಿಸಿದರೆ ಹೆಚ್ಚು ಸೂಕ್ತವಾಗಬಹುದೆನಿಸುತ್ತದೆ.
ರತ್ನಮಣಿಮಾಣಿಕ್ಯಾದಿ ಅರ್ಚಿತ ಮಹಾಪೂಜ್ಯಾ ಶ್ರೀ ಲಲಿತ!
ಇದರೊಂದಿಗೆ ೬೫ರವರೆಗಿನ ಪರಿಷ್ಕರಣೆ ಅಂತಿಮಗೊಳಿಸಿದಂತಾಗುತ್ತದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ನಿಮ್ಮ ಸಲಹೆಯಂತೆ ಮಹಾಪೂಜ್ಯವನ್ನು ತಿದ್ದಿದ್ದೇನೆ. ಅಂತಿಮ ಕೊಂಡಿಯನ್ನು ಸೇರಿಸುತ್ತಿದ್ದೇನೆ (ಯಾಕೊ ಕೆಲವು ಪ್ರತಿಕ್ರಿಯೆಯಡಿ ಲಿಂಕು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಮತ್ತೆ ಗಮನಿಸಬೇಕು) - ನಾಗೇಶ ಮೈಸೂರು
೨೧೩. ಮಹಾಪೂಜ್ಯಾ
ದೇವಾಧಿದೇವತೆಗಳ ಮೀರಿದ ಜ್ಞಾನವಾಗಿ ಮಹತ್ತರ
ಋಷಿ ಮುನಿ ಮಹಾತ್ಮರ ಪೂಜೆ ಯೋಗ್ಯರಿಗೆ ಮಾತ್ರ
ಬ್ರಹ್ಮ ವಿಷ್ಣು ರುದ್ರಾದಿ ತ್ರಿಮೂರ್ತಿಗಳಿಂದಲೂ ಸೇವಿತ
ರತ್ನಮಣಿಮಾಣಿಕ್ಯಾದಿ ಅರ್ಚಿತ ಮಹಾಪೂಜ್ಯಾ ಶ್ರೀ ಲಲಿತ!
ಅಂತಿಮ ಕೊಂಡಿ:
 
https://ardharaatria...