ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ?
ಎಂದಿದ್ದಕ್ಕೆ, 'ಹುಡುಗಿಯಾದ್ರೆ ಎರಡು ಕೊಂಬ? ಸಮಾನತೆ ಬೇಕು ಅಂತೀರ ಮತ್ತೆ ಹೀಗೆ
ರಿಸರ್ವೇಶನ್ನು ಕೇಳ್ತೀರ' ಅಂತಂದು ನಕ್ಕಿದ್ದ. ಹೌದಲ್ವ ಹುಡುಗಿ ಎಂದ ಮಾತ್ರಕ್ಕೆ
ಆಕೆಯನ್ನು ವಿಶೇಷವಾಗಿ ಉಪಚರಿಸಬೇಕಿತ್ತು ಅಂತ ನನಗನ್ನಿಸಿದ್ದೇಕೆ? ಪುರುಷರೊಡನೆ
ಸಮಾನತೆ ಬಯಸುವ ನಾವು, ಇತರ ಪುರುಷರಂತೆ ನಮ್ಮನ್ನು ಕಂಡಾಗ ಸ್ತ್ರೀ ಶೋಷಣೆ
ಅಂದುಕೊಂಡುಬಿಡುತ್ತೇವಲ್ಲ? ಸ್ತ್ರೀ ಪುರುಷ ಸಮಾನತೆಯ ಬಗ್ಗೆ ನನ್ನದು ಮೊದಲಿನಿಂದಲೂ
ಗೊಂದಲದ ಅಭಿಪ್ರಾಯಗಳೇ. ಸ್ಪಷ್ಟವಾಗಿ ಏನನ್ನು ತೀರ್ಮಾನಿಸಿಕೊಳ್ಳಲಾಗದೆ
ಚಡಪಡಿಸುತ್ತೇನೆ.
ಮೊನ್ನೆ ಟಿವಿ ಚಾನೆಲ್ ಒಂದರಲ್ಲಿ ವೈಶ್ಯಾವಾಟಿಕೆಯ ಕುರಿತು ಚರ್ಚಿಸುತ್ತಿದ್ದರು.
ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾಜದ ಸ್ವಾಸ್ಥ್ಯ ಚರ್ಚೆಯ ಪ್ರಮುಖ ವಿಷಯವಾಗಿತ್ತು.
ವೈಶ್ಯಾವಾಟಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಯುವತಿ, ತಾನು ಸ್ವಇಚ್ಛೆಯಿಂದ ಈ
ಕೆಲಸಕ್ಕೆ ಬಂದಿದ್ದಾಗಿಯೂ, ಇತರ ಎಲ್ಲಾ ಕೆಲಸಗಳಂತೆ ಜೀವನ ನಿರ್ವಹಣೆಗಾಗಿ ತಾನು ಈ
ಕೆಲಸವನ್ನು ಆರಿಸಿಕೊಂಡಿರುವೆ, ತನ್ನ ವೃತ್ತಿಯ ಬಗ್ಗೆ ಪಶ್ಚಾತಾಪವಾಗಲೀ ದುಃಖವಾಗಲೀ
ತನಗೆ ಇಲ್ಲವೆಂದೂ ಹೇಳುತ್ತಿದ್ದಳು. ಚರ್ಚೆ ಮುಂದುವರೆದು ಸಮಾಜದ ಸ್ವಾಸ್ಥ್ಯದ ಬಗ್ಗೆ
ಹೊರಳಿತು. ವೈಶ್ಯಾವಾಟಿಕೆಗೆ ಬಂದವರೆಲ್ಲಾ ತಮ್ಮ ಇಚ್ಛೆಯಿಂದ ಬಂದಿರುವುದಿಲ್ಲ,
ಕೆಲವರನ್ನು ಬಲತ್ಕಾರವಾಗಿ ವೈಶ್ಯಾವಾಟಿಕೆಗೆ ಇಳಿಸುತ್ತಾರೆ. ಅದನ್ನು ಇತರ
ವೃತ್ತಿಗಳಂತೆ ಪರಿಗಣಿಸಲು ಸಾಧ್ಯವಿಲ್ಲ. ವೈಶ್ಯಾವಾಟಿಕೆಯಂತಹ ಕೊಳಕನ್ನು ಒಳಗೊಂಡಿರುವ
ಸಮಾಜದಲ್ಲಿ ಬದುಕುವುದು ಕಳವಳಕಾರಿಯೆಂದೂ, ಅದು ಪೇಯ್ಡ್ ರೇಪ್ (ಹಣನೀಡಿ
ಅತ್ಯಚಾರವೆಸಗುವುದು) ಎಂದು, ಬಲತ್ಕಾರವಾಗಿಯಾಗಲೀ ಸ್ವ ಇಚ್ಛೆಯಿಂದಾಗಲೀ
ವೈಶ್ಯಾವಾಟಿಕೆಯಿಂದ ಸಮಾಜದ ಮೇಲಾಗುವ ಪರಿಣಾಮಗಳು ಯೋಚಿಸುವಂತಹುದ್ದು.
ವೈಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಲೀ, ಒಪ್ಪಿಕೊಳ್ಳುವುದಾಗಲೀ
ಗೊಂದಲದ ವಿಷಯವೇ ಎಂಬ ಕನ್ ಕ್ಲೂಶನ್ ನಿಂದ ಚರ್ಚೆ ಮುಗಿದಿತ್ತು.
ಸ್ತ್ರೀಸ್ವಾತಂತ್ರ್ಯದ ಬಗ್ಗೆ ಅವರ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಅನೇಕ
ಗೊಂದಲಗಳುಂಟಾದವು. ಸಮಾಜದ ಸ್ವಾಸ್ಠ್ಯದ ವಿಷಯ ಬಂದಾಗ ಹೆಣ್ಣಿನ ಜೀವನ ಕ್ರಮವೇ ಅಷ್ಟು
ಪ್ರಾಮುಖ್ಯತೆ ಪಡೆದುಕೊಂಡುಬಿಡುತ್ತದಲ್ಲ? ಗಂಡಸು ಹೇಗಿದ್ದರು ಸಹಿಸುವ ಸಮಾಜ ಹೆಣ್ಣಿನ
ನಡತೆಯಿಂದ, ಆಕೆಯ ಜೀವನಕ್ರಮದಿಂದಲೇ ಅದರ ಆರೋಗ್ಯವನ್ನು ನಿರ್ಧರಿಸಿಕೊಳ್ಳೋದು ಏಕೆ?
ಹೆಣ್ಣಿನ ಹಲವು ನಿಲುವುಗಳಿಗೆ, ಅಭಿಪ್ರಾಯಗಳಿಗೆ ಮೈಲಿಗೆಯ ಆರೋಪ ಹೊರಿಸಿ, ಆಕೆ ಹೀಗೆ
ಇರಬೇಕು ಎಂದು ಅವಳ ಮೇಲೆ ಬಂಧನಗಳನ್ನು ಹೇರಿ ಅವಳ ಮನಸಿನಲ್ಲಿ ತಾನು ಅಬಲೆ
ನಿಸ್ಸಾಹಯಕಳು ಎಂಬತಹ ಭಾವನೆಗಳನ್ನು ಬೆಳೆಸುವ ಸಮಾಜ ಹೆಣ್ಣನ್ನು ಮಾತ್ರ
ನಿಯಂತ್ರಣದಲ್ಲಿಡಲು ಮಾಡಿರುವ ಹೇರಿಕೆಗಳಲ್ಲವೇ? ಇಂತಹ ಹೇರಿಕೆಗಳನ್ನು ಮೀರಿದ ಹೆಣ್ಣು
ಸಮಾಜದ ದೃಷ್ಟಿಯಲ್ಲಿ ಕೀಳು ಅನಿಸಿಬಿಡುತ್ತಾಳೆ! ಒಂದೇ ಗಂಡಿಗೆ ನಿಷ್ಠಳಾದ ಹೆಣ್ಣು
ಪತಿವ್ರತೆಯಾಗಿ ಆರೋಗ್ಯ ಸಮಾಜದ ಪ್ರತೀಕವಾದಂತೆ, ವಿವಿಧ ಕಾರಣಗಳಿಂದ ವೈಶ್ಯಾವೃತ್ತಿಗೆ
ಇಳಿದ ಹೆಣ್ಣು ಸಮಾಜದ ಸ್ವಾಸ್ಥ್ಯ ಕೆಡಿಸಿಬಿಡುತ್ತಾಳೆ!! ಒಂದಕ್ಕಿಂತ ಹೆಚ್ಚು
ಹೆಣ್ಣುಗಳ ಸಂಪರ್ಕ ಹೊಂದಿಯೂ ಗಂಡಸೊಬ್ಬ ಗೃಹಸ್ಥನಾಗಿ ಬಾಳುವುದು ಸಾಧ್ಯವಿದೆಯಾದರೇ,
ಹೆಣ್ಣಿಗೇಕೆ ಇದು ಸಾಧ್ಯವಿಲ್ಲ? ಇಷ್ಟಕ್ಕೂ ವೈಶ್ಯಾವಾಟಿಕೆ ಹೆಣ್ಣಿಂದ ಮಾತ್ರ
ಸಾಧ್ಯವಾಗುತ್ತದೆಯೇ? ಹೆಣ್ಣಿನಷ್ಟೇ ಗಂಡೂ ಸಹ ಅದರಲ್ಲಿ ಭಾಗಿಯಾಗಿರುತ್ತಾನಲ್ಲ
ಅವನನ್ನು ಪ್ರಶ್ನಿಸದ ಸಮಾಜ ಹೆಣ್ಣನ್ನೇಕೆ ದೂರುತ್ತದೆ? ಹೆಣ್ಣು ತನ್ನ ಮೈ
ಮಾರಿಕೊಳ್ಳುತ್ತಾಳೆಂದರೆ, ಕೊಂಡು ಕೊಳ್ಳುವವನು ಗಂಡಲ್ಲವೇ?
ಒಬ್ಬ ಪುರುಷ ಅನೇಕ ಹೆಂಗಸರೊಂದಿಗಿದ್ದಾಗ್ಯೂ ಸ್ತ್ರೀ ಆತನನ್ನು ಒಪ್ಪುತ್ತಾಳೆಂದರೆ
ಸ್ತ್ರೀಯ ಅದೇ ಪ್ರವೃತ್ತಿಯನ್ನು ಪುರುಷನ್ಯಾಕೆ ಕಡೆಗಣಿಸಬೇಕು ಎಂಬುದು ನನ್ನ ಬೇಸಿಕ್
ಪ್ರಶ್ನೆಯಾದರೂ, ನನ್ನಲ್ಲಿನ ಗೊಂದಲ ಅಷ್ಟೇ ಅಲ್ಲ. ಸಮಾನತೆ ಅಂದರೆ ಸ್ತ್ರೀಯು
ಪುರಷನಿಂದ ಸಾಧ್ಯವಾಗುವುದನ್ನೆಲ್ಲ ಮಾಡುವುದಷ್ಟೇ ಎಂದರ್ಥವೇ? ಅದೇ ನಿಜವಾದರೆ ಸ್ತ್ರೀ
ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥವೇನಿದೆ? ಸ್ತ್ರೀಯೊಬ್ಬಳು ಪುರುಷನ ಫ್ಲರ್ಟಿಂಗನ್ನು
ಸಹಿಸಿಕೊಂಡು ತಾನು ಪತಿವ್ರತೆಯಾಗಿ ಉಳಿಯುವುದು ಸಾಧ್ಯವಿದೆ ಎಂದಾದರೆ, ಆ ಸ್ಥಿತಿ
ಅವಳಿಗೆ ಸಮಾಜದಲ್ಲಿ ಭದ್ರತೆ ಮತ್ತು ಗೌರವ ತಂದುಕೊಡುತ್ತಿದೆಯಲ್ಲ. ಸಮಾಜವೆಂದರೇ
ಕೇವಲ ಪುರುಷರೆಂದಲ್ಲ, ಸಮಾಜವು ಸ್ತ್ರೀಪುರುಷರಿಬ್ಬರನ್ನೂ ಒಳಗೊಂಡಿರುತ್ತದೆ. ಹಲವು
ಗಂಡಸರ ಸಂಬಂಧವಿರಿಸಿಕೊಳ್ಳುವ ಹೆಣ್ಣನ್ನು ಕೀಳು ಎಂದು ಭಾವಿಸುವುದು ಸಮಾಜದ
ಪುರುಷರಷ್ಟೇ ಅಲ್ಲ, ಪತಿವ್ರತೆ ಎನಿಸಿಕೊಂಡಿರುವ ಇತರ ಸ್ತ್ರೀಯರ ನಿಲುವೂ ಇದೇ
ಆಗಿರುತ್ತದೆ. ಅಲ್ಲದೇ ನಮ್ಮ ಸಮಾಜಕ್ಕೆ ಪಾತಿವ್ರತ್ಯದ ಶೀಲ ಮುಂತಾದ ಕಲ್ಪನೆಗಳು
ಇರುವುದರಿಂದಲೇ ಇತರ ಪಾಶ್ಚಾತ್ಯ ದೇಶಗಳಿಗೆ ಸಾಧ್ಯವಾಗದ ಕುಟುಂಬವ್ಯವಸ್ಥೆ ನಮ್ಮ
ದೇಶದಲ್ಲಿ ಸಾಧ್ಯವಾಗಿರುವುದು. ಸ್ತ್ರೀ ಪುರುಷ ಸಮಾನತೆ ಸಾಧಿಸಿದ ಅಥವಾ ಸಾಧಿಸಿದೆ
ಎನ್ನಲಾದ ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ತೀರ ಶಾಲೆಯ ಮಕ್ಕಳಿಗೆ ಊಟದಲ್ಲಿ Anti
pregnancy pill ಗಳನ್ನು ಹಾಕಿಕೊಡುತ್ತಾರೆಂದರೆ, ನಮ್ಮ ಕುಟುಂಬ ವ್ಯವಸ್ಥೆಯಿಂದ
ಹಾಗು ಅದರಿಂದ ಉಳಿದಿರುವ ಸಮಾಜದ ಸ್ವಾಸ್ಥ್ಯದಿಂದ ನಮ್ಮ ಹಾಗೂ ನಮ್ಮ ಮುಂದಿನ
ಪೀಳಿಗೆಗೆ ಎಷ್ಟು ಅನುಕೂಲವಾಗುತ್ತಿದೆಯಲ್ಲವೇ?
ಸಮಾನತೆ ಮತ್ತು ಸ್ತ್ರೀ ಸ್ವಾತಂತ್ರ್ಯ ಎರಡೂ ಒಂದಕ್ಕೊಂದು ಪೂರಕ. ಸಮಾಜದ ಸ್ವಾಸ್ಥ್ಯ
ಕೆಡಿಸುವುದಾಗಲೀ ಉಳಿಸುವುದಾಗಲೀ ಹೆಣ್ಣಿನ ಕೈಯಲ್ಲಿ ಸಾಧ್ಯವೆನ್ನುವುದಾದರೆ ಅದು
ಸ್ತ್ರೀ ಕುಲಕ್ಕೆ ಸಂದ ಗೌರವವಲ್ಲವೇ? ಹೀಗೆ ಎರಡೂ ಕೋನಗಳಲ್ಲಿ ಯೋಚಿಸಿದಾಗ ಯಾವುದು
ಸರಿ ಎಂದು ತೀರ್ಮಾನಿಸಲಾಗದೆ ಮತ್ತೆ ಮತ್ತೆ ಅದೇ ಗೊಂದಲದ ಗುಂಡಿಗೆ ಬೀಳುತ್ತೇನೆ.
- ಹೇಮ ಪವಾರ್'s blog
- Login or register to post comments
- 848 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಹೇಮವ್ವೋ
ನೀ ಯೋಳಾದು ದಿಟ ಅದ್ ಬುಡು, ಆದ್ರಾ ನೀ ಬರ್ದಿರೋ ಬ್ಲಾಗಿನಾಗ ಅಂಥ ಒಸಾದೇನು ನಾಕಾಣೆ, ಯಾಕಂದ್ರ ನೀ ಯೋಳಾದ ಎರಡೆ ತರ, ಒಂದು ಎಣ್ ಐಕ್ಳು ಗಂಡ್ ಐಕ್ಳೂ ಎಲ್ಲಾ ಒಂದೇಯಾ, ಅವ್ರಿಗೊಂದು ನ್ಯಾಯಾವ, ಇವ್ರಿಗೊಂದು ನ್ಯಾಯಾವ ಯಾಕ್ ಮಾಡ್ತಿರಿ ಸಿವಾ, ಗಂಡುಸ್ರು ಏಟ್ ಮಂದಿನಾ ಬೇಕಾದ್ರೂ ಯೆಂಡ್ತಿ ಮಾಡ್ಕಾಬೋದು, ಆದ್ರೆ ಯೊಂಗುಸ್ರುಗ್ಯಾಕಾಗಕ್ಕಿಲ್ಲ, ಯೊಣ್ ಐಕ್ಳ ಯಾಕ್ ವೇಸ್ಯೆರು ಅಂತೀರಿ ಅದಾ ಗಂಡ್ ಮಾಡುದ್ರಾ ಯಾಕ್ ಯೇನು ಯೇಳಾಂಗಿಲ್ಲ ಅಂತಾ ಆಟೇಯಾ, ಬೊರೀ ಅದ್ಂಗೆ ಇಂಗೆ ಅನ್ಕೊಂಡ್ ಬೇಸ್ರಾ ಮಾಡ್ಕೊಳ್ಳೋಕಿಂತಾ ನಮ್ ಯೊಂಗುಸ್ರು ಈ ವರ್ಸದಾಗ ಈ ಸಾಧ್ನೇಯಾ ಮಾಡವ್ರೇ, ಇಂತುದ್ರಾಗ ಮುಂದ್ ಬಂದವ್ರೆ ಅಂತ್ ಬರೆಯವ್ವೋ, ಯೋಂಗುಸ್ರ ವಿಸ್ಯ ಬಂದ್ರಾ ವೇಸ್ಯಾವಾಟಿಕೆ ಬುಟ್ಟ್ರ ಮತ್ತಿನ್ನೇನು ಯಾಕ್ ನಮ್ ಜನಕ್ ಕಾಣಕ್ಕಿಲ್ವೋ ಅದ್ರಾಗ ಯೋಂಗುಸುರುದು ತಪ್ಪ್ ಅದೇ, ಗಂಡುಸ್ರುದು ತಪ್ಪದೇ ಅಂತ ಯೋಳೋದು ಸರಿಯಿಲ್ಲವ್ವೋ, ನಾವ್ಯಾರು ನಿಂಕಾಗಲಿ ಯೊಂಗುಸ್ರುಗಾಗಲಿ ಮುಂದ್ಬರ್ಬೋಡಿ ಅಂತ್ ಯೋಳೀಲ್ಲವ್ವೋ,
ಕೆಲ್ವು ಯೊಂಗುಸ್ರುನ ನೋಡಿನವ್ವೋ ಅವ್ರು ಇಂಗ್ ಯೋಗುಸ್ರು ಸ್ವಾತಂತ್ರ ಓಯ್ತು, ಅದಿಲ್ಲ ಇದಿಲ್ಲ ಅಂತಾ ಯೋಳ್ದೆನೇ ಸುಮ್ನ ತಮ್ ಬೇಕಾದ್ ಕೆಲ್ಸಾವ ಬೇಕಾಧಂಗ್ ಯೇಂಗ್ ಮಾಡ್ಕೊಂಡ್ ಓಯ್ತಾರೆ ನೋಡಿದ್ಯಾವ್ವ ನೀ, ನೀ ಪ್ಯಾಟೆಲಿ ಕುಂತ್ಕೊಂಡು ಸ್ವಾತಂತ್ರ್ಯಾವ ಸಮಾನತೆಯ ತಂದುಬುಡ್ತಿನಿ ಅಂದ್ರಾ ಆಯ್ತೇನವ್ವ, ನಮ್ ಅಳ್ಳೀನಾಗ್ ಬಂದ್ ನೋಡವ್ವ್ ಯೋಂಗುಸ್ರು ಅವ್ರಿಗ್ ಬೇಕಾದಂಗ್ ಆರಾಮಾಗ ತಮ್ ಕೆಲ್ಸ ಬೊಗಸೆ ಮಾಡ್ಕೊಂಡ್ ಅದೇನೋ ಯೋಳ್ತಾರೆಲ್ಲಾ ಯ್ಯಾಪಿಯಾಗಿವ್ರವ್ವೋ, ನೀ ಒಸಿ ನಮ್ ಅಳ್ಳೀಗಳ್ಕಡೆ ಬಂದ್ ನೋಡವ್ವ,
ಇಂಗ್ ಯೋಳ್ತಿನಿ ಅಂತಾ ಬೇಜಾರ್ ಆಗ್ಬೇಡವ್ವೋ ನಾನ್ ನೋಡಿದ್ ಸತ್ಯಾವ ನಿಂಕ್ ಯೋಳಿವ್ನಿ, ಆಟೆಯಾ....
ಯೋಳಕ್ ಇನ್ನೂ ಬೇಜಾನ್ ಅವೆ ಆದ್ರೆ ನಿಂಕ್ ಯೋಚಿಸಿ ನೋಡಾಕ್ ಬುಡ್ಬೇಕಲ್ಲಾ ಅಂತ್ ಸುಮ್ನಿವ್ನಿ, ಆಟೆಯಾ..
ಯೋಚಿಸ್ ಒಂದ್ ಒಳ್ಳೆ ದಿನಾವ ನೋಡಿ ಅಳ್ಳೀಗಳ್ ತಕ್ ಬಂದ್ ಓಗವ್ವೋ
ಸೋಮಾರಿಕಟ್ಟೆ
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಹೇಮವ್ವೋ ---
ಪೆದಣ್ಣಾ -- ಇನ್ನು ತಲೆಗೆ ಬಿಳಿ ಕೂದಲು ಬ೦ದಿಲ್ಲಾ ಆಗಲೇ ಅವ್ವಾ ಅ೦ತಿಯಲ್ಲಾ .. ?
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಸೋಮಾರಿ ಕಟ್ಟೆಯವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. >>>ಆದ್ರಾ ನೀ ಬರ್ದಿರೋ ಬ್ಲಾಗಿನಾಗ ಅಂಥ ಒಸಾದೇನು ನಾಕಾಣೆ,>>> ನಾನು ಹೊಸ ವಿಷಯ ಬರ್ದಿದ್ದೀನಿ, ಬರೀತೀನಿ ಅಂತ ಎಲ್ಲು ಹೇಳಿಲ್ವೇ? ಇರ್ಲಿ. ನನ್ನದು ಬರೀ ವೈಶ್ಯಾವಾಟಿಕೆಯ ಬಗ್ಗೆ ಪ್ರಶ್ನೆಯಲ್ಲ, ಸಮಾಜದ ರೀತಿನೀತಿಗಳು ಗಂಡು ಹಾಗು ಹೆಣ್ಣಿಗೆ ಅನ್ವಯಿಸುವ ವ್ಯತ್ಯಾಸವನ್ನು ಕುರಿತ ಗೊಂದಲಗಳು. ಅದು ಹಳ್ಳಿಯವರಿಗೆ ಬೇರೆ ಪಟ್ಟಣದವರಿಗೆ ಬೇರೆ ಅಂತಿರೋಲ್ಲ. ಹೆಣ್ಣು ಎಲ್ಲಿದ್ದರು ಹೆಣ್ಣೆ ಅಲ್ವೇ?
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ನಿನ್ನೆ ರಾರ್ತಿಯಷ್ಟೇ ಈ ವಿಷಯದ ಕುರಿತು ಸಂಪದಿಗರಿಗೆ ಪ್ರಶ್ನೆಯೊಂದನ್ನು ಕೇಳೋಣ ಅಂತಂದುಕೊಂಡಿದ್ದೆ. ಸಂಪದ ಓಪನ್ ಮಾಡಿದ್ರೆ ನಿಮ್ಮ ಬ್ಲಾಗ್! ನನ್ನ ಪ್ರಶ್ನೆ ಏನು ಅಂದ್ರೆ ಸೂಳೆ ಅಂದ್ರೆ ಯಾರು?ಅಥವಾ ಯಾರನ್ನ ಸೂಳೆ ಅಂತ ಯಾರನ್ನ ಅನ್ನುತ್ತಾರೆ?ಅನ್ನಬೇಕು? ಮತ್ತು ಸೂಳೆ ಅನ್ನೋದು ಸ್ತ್ರೀಲಿಂಗ. ಇದರ ಪುಲ್ಲಿಂಗ ಏನು? ಉತ್ತರ ಅಥವಾ ಪ್ರತಿಕ್ರಿಯೆಗಳು ಸಭ್ಯತೆ ಮೀರದಿರಲಿ.ಆಟ್‍ಲೀಸ್ಟ್ ಈ ವಿಷಯದಲ್ಲಿ ತಮಾಷೆಯ ಉತ್ತರಗಳು ಬೇಡ.
ಹೇಮಾ,ಸಮಾನತೆ ಜನ್ಮಜಾತವಾಗಿ ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಎಲ್ಲರಿಗೂ ದೊರೆತಂಥದ್ದು. ಅದನ್ನು ಯಾರು ಯಾರಿಗೂ ಕೊಡಬೇಕಾಗಿಲ್ಲ ಅಲ್ಲವೆ? ಯಾಕೆ ಹೆಣ್ಣು ಕೆಲವು ನಿರ್ಬಂಧನಗಳಿಗೆ ಒಳಪಟ್ಟಳು ಅನ್ನೋದನ್ನ ನಿಮ್ಮೊಂದಿಗೆ ಇನ್ನೊಂದು ದಿನ ಚರ್ಚಿಸುವ ಆಸೆ ನನಗೆ. ಸಧ್ಯಕ್ಕೆ ನನ್ನ ೧ ಸರಳ ಪ್ರಶ್ನೆಯನ್ನು ನಿಮ್ಮ ಲೇಖನದ ಮೂಲಕ ಸಂಪದ ಸ್ನೇಹಿತರ ಮುಂದಿಡಬಯಸುತ್ತೇನೆ. ಉತ್ತರಿಸಿಯಾರು ಎಂಬ ನಿರೀಕ್ಷೇಯಲ್ಲಿ...
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಇಂಗ್ಲಿಷ್ನಲ್ಲಿ Gigalo ಅಂಥ ಕರಿತಾರೆ, ಆದ್ರೆ ಕನ್ನಡದಲ್ಲಿ ಗೊತ್ತಿಲ್ಲ? ಪದವೇ ಇಲ್ಲ ಅಂಥ ಅನ್ಸುತ್ತೆ?
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಪ್ರಿಯ ಜಯಲಕ್ಷ್ಮಿ ಯವರೆ ..... ಸೂ.... ಅನ್ನೋ ಪದದ ಬದಲಿಗೆ ನೀವು ವೇಶ್ಯೆ ಅನ್ನೋ ಪದ ಬಳಸಬೇಕಿತ್ತು ಅಂತ ನನ್ನ ಅನಿಸಿಕೆ . ಆ ಪದ ಕೇಳೋಕೇ ಅಸಭ್ಯವಾಗಿದೆ. ತಪ್ಪು ತಿಳೀಬೇಡಿ. ಬ್ಲಾಗನ್ನೋದು ಎಲ್ಲರೂ ನೋಡುವ ತಾಣವಾಗಿರುವುದರಿಂದ , ನಮ್ಮ ಬರವಣಿಗೆ , ನಮ್ಮ ಭಾಷೆಯ ಬಳಕೆಯಲ್ಲೂ ಎಚ್ಚರವಿರಲಿ ಅನ್ನೋದು ನನ್ನ ಆಶಯ . ಏನಂತೀರಿ ?
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಹೌದು ನೀವು ಹೇಳೋದು ಸರಿ ಭವಾನಿಯವರೆ
ಅದು ಅಷ್ಟೂ ಸಮಂಜಸ ಅಲ್ಲಾ
ಅರವಿಂದ್
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಭವಾನಿ, ನಿಮ್ಮ ಮಾತಿಗೆ ಎರಡು ವಿಭಿನ್ನ ಉತ್ತರಗಳು ದೊರೆತಿವೆ. ಅವುಗಳಲ್ಲಿ ಆಯ್ದುಕೊಳ್ಳುವ ವಿವೇಚನೆ ನಿಮಗೆ ಬಿಟ್ಟದ್ದು. ಈಗ ವಿಷಯ ಚರ್ಚೆಯಾದರೆ ಒಳ್ಳೆಯದಲ್ಲವೆ? ಎಲ್ಲರೂ ಅಂದುಕೊಳ್ಳುವುದೇನು ಅಂದರೆ ಇದೇನು ಉತ್ತರ ಗೊತ್ತಿಲ್ಲದ ಪ್ರಶ್ನೆಯೇ? ಅಂತ. ಆದರೆ ಅಂದುಕೊಂಡಷ್ಟು ಸುಲಭದ ಉತ್ತರವೂ ಅಲ್ಲ ಅನ್ನುವ ಕಾರಣಕ್ಕೆ ಕೇಳಿದ್ದು.ಒಂದೇ ವಾಕ್ಯದಲ್ಲಿ ಕೊಡಬಹುದಾದ ಉತ್ತರ ಅದಲ್ಲ ಅಂತ ನನ್ನ ಭಾವನೆ. ನೀವೇನಂತೀರಿ ಭವಾನಿ? ಉತ್ತರಿಸಲು ಮುಜುಗರ ಪಟ್ಟರೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತೆ. ಬಲವಂತವಿಲ್ಲ,ಆದರೆ ಸಾಮಾಜಿಕ ಕಳಕಳಿಯ ಬಗ್ಗೆ ಪುಟಗಟ್ಟಲೆ ಬೇರೆಲ್ಲ ವಿಷಯಗಳ ಬಗ್ಗೆ ಬರೆಯಬಹುದಾದರೆ ಇದ್ಯಾಕೆ ಬೇಡ? ಉತ್ತರಗಳ ನಿರೀಕ್ಷೆಯಲ್ಲಿದ್ದೇನೆ.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಪ್ರಿಯ ಜಯಲಕ್ಷ್ಮೀ ಅವರೇ .... ನಾನು ನಿಮ್ಮ ಅಭಿಪ್ರಾಯಗಳ ವಿರುದ್ಧವಾಗಿ ಹೇಳ್ತಿಲ್ಲ. ನನ್ನದೊಂದೇ ಕೋರಿಕೆ ಬ್ಲಾಗಲ್ಲಿ ಬರೆಯೋವಾಗ ಸೂ.... ಬದಲಾಗಿ ವೇಶ್ಯೆ ಅನ್ನೋ ಪದ ಬಳಸಿ ಅಂತಷ್ಟೇ..ನಿಮ್ಮ ವಿವೇಚನಾ ಲಹರಿಗೆ ಹೊಳೆದ ವಿಷಯ ಅಪ್ರಸ್ತುತವೇನಲ್ಲ. ಆ ವಿಚಾರದಲ್ಲಿ ನನ್ನದೂ ಸಮ್ಮತಿ ಇದೆ. ಉತ್ತರ ಸಿಕ್ಕಿದೆ ಅಂದುಕೊಳ್ತೇನೆ.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಭವಾನಿ ಲೋಕೇಶ್ :
>> ಸೂ.... ಅನ್ನೋ ಪದದ ಬದಲಿಗೆ ನೀವು ವೇಶ್ಯೆ ಅನ್ನೋ ಪದ ಬಳಸಬೇಕಿತ್ತು ಅಂತ ನನ್ನ ಅನಿಸಿಕೆ . ಆ ಪದ ಕೇಳೋಕೇ ಅಸಭ್ಯವಾಗಿದೆ.
ನನಗೆ ವೇಶ್ಯೆ, ಗಣಿಕಾ ಸ್ತ್ರೀ, ಇನ್ನಿತರ ವೈಭವದ ಪದಗಳಿಗಿಂತ ಸೂಳೆ ಎಂಬ ಪದವೇ ಹೆಚ್ಚು ಆಪ್ಯಾಯಮಾನ ಅನಿಸುತ್ತೆ. ಉಳಿದ ಪದಗಳಲ್ಲಿ ಪದವೈಭವ ಇದ್ದರೆ ಸೂಳೆ ಪದ ಏನನ್ನೂ ಮರೆಮಾಚದೆ ಸರಳವಾಗಿದೆ.
ಜಯಲಕ್ಷ್ಮಿ:
>>> ಸೂಳೆ ಅಂದ್ರೆ ಯಾರು? ಅಥವಾ ಯಾರನ್ನ ಸೂಳೆ ಅಂತ ಯಾರನ್ನ ಅನ್ನುತ್ತಾರೆ?ಅನ್ನಬೇಕು? ಮತ್ತು ಸೂಳೆ ಅನ್ನೋದು ಸ್ತ್ರೀಲಿಂಗ. ಇದರ ಪುಲ್ಲಿಂಗ ಏನು?
ಪ್ರತ್ಯೇಕ ಚರ್ಚೆ ಪ್ರಾರಂಭಿಸಿ. ಅಲ್ಲಿ ಚರ್ಚಿಸೋಣ. ಇಂತಹ ಪ್ರಮುಖ ಚರ್ಚೆ ಸುಮ್ಮನೆ ಪ್ರತಿಕ್ರಿಯೆಗಳ ಎಡೆಯಲ್ಲಿ ಕಳೆದು ಹೋಗುವುದು ಬೇಡ.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಗುರು ಬಾಳಿಗ ಅವರೇ , ಮುಕ್ತವಾದ ಚರ್ಚೆ ಸಾಗಲಿ.... ಸ್ವಾಗತ
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಹೌದು ಜಯಲಕ್ಷ್ಮಿಯವರೆ,
’ಸೂಳೆ’ ಅನ್ನುವುದರ ಬದಲಿಗೆ ನೀವು ’ವೇಶ್ಯೆ’ ಅನ್ನುವ ಪದವನ್ನು ಬಳಸಬೇಕಿತ್ತು. ಅಥವಾ ’ಗಣಿಕಾ ಸ್ತ್ರೀ’ ಎಂದು ಹೇಳಿದ್ದರೆ ಕಿವಿಗಳಿಗೆ (ಕಣ್ಣುಗಳಿಗೆ) ಇನ್ನೂ ಸುಮಧುರವಾಗಿ ಕೇಳುತ್ತಿತ್ತೇನೊ... ಅಥವಾ ಅಸ್ಖಲಿತ ಆಂಗ್ಲದಲ್ಲಿ Prostitute ಅಥವಾ Whore ಎಂದಿದ್ದರೂ ಆಗುತ್ತಿತ್ತು. ನಮಗೆಲ್ಲ ಈ ’ಸೂಳೆ’ ಅನ್ನುವ ಪದ ಇಷ್ಟವಾಗುವುದಿಲ್ಲ. ಆ ಕೆಲಸವೇ ಅಸಭ್ಯವಾಗಿದ್ದರೇನಾಯ್ತು. ನಾವು ಬಳಸುವ ಶಬ್ದ ಯಾವತ್ತೂ ಅಸಭ್ಯವಾಗಿರಬಾರದು. ಅಲ್ವೇ?
ಸಮಾನತೆ ಜನ್ಮಜಾತವಾಗಿ ಎಲ್ಲರಿಗೂ ದೊರೆತಿರುವುದು ನಿಜ. ಆದರೆ ಹೆಣ್ಣು, ಶಾರೀರಿಕವಾಗಿ ಗಂಡಸಿಗೆ ಸಮಾನಳಲ್ಲ ಎನ್ನುವ ಕಾರಣಕ್ಕಾಗಿ, ಬಹುಶ: ಗಂಡಸು ಅವಳನ್ನು dominate ಮಾಡುತ್ತ ಬಂದಿರಬಹುದೇನೋ. ಆಕೆ ಹೊರಗಿನ ಪ್ರಪಂಚದಲ್ಲಿ Dominate ಆಗದಿರಲಿ ಎಂಬ ಕಾರಣದಿಂದಾಗಿ ಪುರುಷ ಅವಳನ್ನು ಮನೆಯ ನಾಲ್ಕು ಗೋಡೆಗಳೊಳಗೆ ಇಡಲು ಬಯಸಿದ್ದಿರಬಹುದೇನೋ.. ತಲೆತಲಾಂತರಗಳಿಂದ ಹೆಂಗಸು ಕೂಡ ಅದನ್ನೇ ಪಾಲಿಸುತ್ತ ಬಂದಿರುವುದರಿಂದ, ಕಾಲ ಕ್ರಮೇಣ ಅದೇ ನಿಯಮವಾಗಿರಬಹುದು. ಇನ್ನು ಮುಸ್ಲಿಂ ಪ್ರಪಂಚದಲ್ಲಿ ನೋಡಿದರೆ, ಹೆಂಗಸಿಗೆ ಒಂದು ವ್ಯಕ್ತಿತ್ವವೇ ಇಲ್ಲದಂತೇ ನೋಡಿಕೊಳ್ಳಲಾಗಿದೆ.
ಹೀಗೆ ಸ್ತ್ರೀ- ಪುರುಷ ಸಮಾನತೆಯ ಬಗ್ಗೆ ಯುಗಗಳಿಂದ ವಾಗ್ವಾದ ನಡೆಯುತ್ತಲೇ ಇದೆ. ಆದರೆ ಇಂದಿನ ಯುಗದಲ್ಲಿ ಅದೊಂದು ಸಮಸ್ಯೆಯೇ ಅಲ್ಲ. At least ಸಾಮಾಜಿಕ ಸಮಸ್ಯೆ ಆಗಿ ಉಳಿದಿಲ್ಲ. ವೈಯಕ್ತಿಕ ನೆಲೆಯಲ್ಲಿ ಅದೊಂದು ಸಮಸ್ಯೆ ಆಗಿರಬಹುದೇನೋ. ಅದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಇನ್ನು Male Prostitute ಗೆ ಕನ್ನಡದಲ್ಲಿ ಯಾವುದೇ ಶಬ್ದವಿದ್ದಂತಿಲ್ಲ. ಆದರೆ Male Prostitutes ಅಥವಾ Gigolos ಇರುವುದಂತೂ ನಿಜ.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಧನ್ಯವಾದ ಅವಿನಾಶ್ ಅವರೇ.... ಆ ಪದಕ್ಕೆ ವಾಸ್ತವವಾಗಿ ಕುಣಿಯುವವಲು ಅನ್ನುವ ಅರ್ಥವೇ ಇರಬಹುದು . ಆದ್ರೆ ಕೆಲವು ಪದಗಳು ಬಳಕೆಯಲ್ಲಿ ತಮ್ಮ ಮೂಲಾರ್ಥವನ್ನು ಕಳೆದುಕೊಂಡು ಆಡುಭಾಷೆಯ ಅರ್ಥವನ್ನೇ ಹೆಚ್ಚು ಪ್ರತಿಪಾದಿಸುತ್ತವೆ. ಇನ್ನು ಹೆಣ್ಣು, ಶೋಷಣೆ ಇತ್ಯಾದಿ ಇತ್ಯಾದಿ .... ಎಲ್ಲವೂ ಚರ್ಚಿತ ವಿಷಯಗಳೇ ಆದರೂ ಇವತ್ತಿನ ಮಟ್ಟಿಗೆ ಹೆಣ್ಣಿಗೆ ಸಾಕಷ್ಟು ಸಮಾನ ಅವಕಾಶಗಳು ಸಿಗುತ್ತಿರುವುದನ್ನೂ ನಾವು ಅಲ್ಲಗಳೆಯಲಾಗುವುದಿಲ್ಲ ಅಲ್ಲವೇ?
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ನಿಮ್ಮೊಂದಿಗೆ ಇದರ ಬಗ್ಗೆ ಹೆಚ್ಚಿನ ಚರ್ಚೆಗೆ ನನಗೂ ಉತ್ಸಾಹವಿದೆ ಜಯಲಕ್ಷ್ಮೀಯವರೇ. ಇನ್ನೊಬ್ಬರು ಕರುಣಿಸಿ ನೀಡಿದರೆ ಅದು ಸ್ವಾತಂತ್ರ್ಯ ಹೇಗಾದೀತು? ಗಂಡಿನ ಜೊತೆ ಸ್ಪರ್ಧಿಸುವುದೇ, ಅಥವ ಗಂಡು ಮಾಡಬಹುದಾದದ್ದನೆಲ್ಲ ಮಾಡ ಹೊರಟರೆ ಸಮಾನತೆ ಸಾಧಿಸಿದ ಹಾಗಾಗುತ್ತದೆಯೇ ಎಂಬುದು ನನ್ನ ಪ್ರಶ್ನೆ. ನಿಮ್ಮ ಪ್ರಶ್ನೆಗಳು ಅದಕ್ಕೆ ಪೂರಕವಾಗಿದೆ, ನಿಮಗೆ ತೃಪ್ತಿಕರ ಉತ್ತರಗಳನ್ನು ಸಂಪದಿಗರು ನೀಡಿದ್ದಾರೆಂದುಕೊಳ್ಳುತ್ತೇನೆ. ಧನ್ಯವಾದಗಳು.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಸೂಳೆ-> ಇದು ಸಂಸ್ಕೃತದ ಸೂಡ್=ಕುಣಿ ಶಬ್ದದಿಂದ ಬಂದಿದ್ದು. ಹಿಂದೆ ಸ್ತ್ರೀಯರನ್ನು ದೇವಸ್ಥಾನದಲ್ಲಿ ಉತ್ಸವಗಳಲ್ಲಿ ಕುಣಿಯಲು ಬೞಸಿಕೊಳ್ಳುತ್ತಿದ್ದರಂತೆ. ಅವರಿಗೆ ಸೂಡಾ->ಸೂಳಾ->ಸೂಳೆ ಎನ್ನುತ್ತಾರಂತೆ ಎಂದು ಓದಿದ ನೆನಪು. ಮನುಷ್ಯನನ್ನು ಬಿಟ್ಟು ಬೇಱೆ ಜೀವ ಜಂತುಗಳಲ್ಲಿ ಹೆಣ್ಣನ್ನು ಓಲೈಸಲು ಗಂಡುಗಳು ಹಾಡುತ್ತವೆ(ಗಂಡುಕೋಗಿಲೆ, ಕಪ್ಪೆ) ಕುಣಿಯುತ್ತವೆ (ನವಿಲು, ಹಂಸ). ಅದೇಕೋ ಸ್ತ್ರೀಯದ ದೌರ್ಬಲ್ಯವೋ ನಾ ಕಾಣೆ, ಮನುಷ್ಯರಲ್ಲಿ ಗಂಡಸನ್ನು ಓಲೈಸಲು ಹೆಣ್ಣು ತನ್ನನ್ನು ಅಲಂಕಾರ ಇತ್ಯಾದಿಗಳಿಂದ ಕಷ್ಟ ಪಡುವುದಱಿಂದ ಗಂಡಸಿಗಾಗಿ ಕುಣಿಯಲೂ ಬೇಕಾಗುತ್ತದೇನೋ. ಅಥವಾ ಹೆಂಗಸರನ್ನು ಗಂಡಸರು ಅವರ ತಾಳಕ್ಕೆ ತಕ್ಕಂತೆ ಕುಣಿಸುತ್ತಾರೋ ಏನೋ ನಾ ಕಾಣೆ.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಸ್ತ್ರೀ - ಸಮಾನತೆಯ ಹೋರಾಟ ಇರುವುದು ಪುರುಷ ಪ್ರಧಾನ ಸಮಾಜದ ವ್ಯವಸ್ಥೆಯ ವಿರುದ್ದ ಪುರುಷ ಪ್ರಧಾನ ವ್ಯವಸ್ಥೆ ಎಂದರೆ ಪುರುಷ ಕೇಂದ್ರಿತ ಮೌಲ್ಯಗಳನ್ನೂ ಎತ್ತಿ ಹಿಡಿಯುವ ವ್ಯವಸ್ಥೆ ಎಂದ ಅರ್ಥವೇ ಹೊರೆತು ಎಲ್ಲ ಪುರುಷರು ಎಂದಾಗಲ್ಲಿ ಪುರುಷರು ಮಾತ್ರವೆ೦ದಾಗಲ್ಲಿ ಎ೦ದ ಅರ್ಥವಲ್ಲ, ಎಷ್ಟೋ ಬಾರಿ ಅನೇಕ ಪುರುಷರು ಸ್ತ್ರೀಪರ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ, ಅನೇಕ ಸ್ತ್ರೀಯರು ಪುರುಷ ಪ್ರದಾನ ಮೌಲ್ಯಗಳನ್ನೂ ಎತ್ತಿ ಹಿಡಿಯುತ್ತಾರೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ , ಆದರೆ ಅವರು ಪುರುಷ ಪ್ರದಾನ ವ್ಯವಸ್ಥೆಯಾ ಕೈಗೊ೦ಬೆಗಲಾಗಿ ಇರುವುದಿಲ್ಲ ಎ೦ಬುದನ್ನು ಮರೆಯೂವ೦ತಿಲ್ಲ....
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ನನ್ನದು ಮೂಲ ಪ್ರಶ್ನೆ ಜ್ಞಾನಮೂರ್ತಿಯವರೇ, ಸ್ತ್ರೀಯರ ಹೋರಾಟ, ಪುರುಷರ ಸಹಕಾರದ ಬಗ್ಗೆ ನನ್ನ ತಕರಾರಿಲ್ಲ ಆದರೆ ಹೋರಾಟಕ್ಕೆ ಕಾರಣವಾಗುವ ಸಮಾನತೆ ಮತ್ತು ಸ್ವಾತಂತ್ರ್ಯಗಳನ್ನು ಹೇಗೆ ಅರ್ಥೈಸಿಕೊಳ್ಳಬಹುದು ಎಂಬುದರ ಬಗ್ಗೆ ದ್ವಂದ್ವವಿದೆ. ನಿಮಗೆ ಅರ್ಥವಾಯಿತೆಂದುಕೊಳ್ಳುತ್ತೇನೆ. ಧನ್ಯವಾದಗಳು.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
<< ಕೆಲವರಿಗೆ ಸೂಳೆ ಎಂಬ ಇಷ್ಟವಾಗುವುದಿಲ್ಲ???
ದಿನಾ ಅವಳನ್ನು ಜನ ಅದೇ ರೀತಿ ಕರೆಯೋದು ... ನಮಗೆ ಕೇಳಲಿಕ್ಕೆ ಚೆನ್ನಾಗಿಲ್ಲ ಎಂದು ಬೇರೆ ಪದ ಹಾಕಿ ಅಂತಿರಲ್ಲ, ಎನು ಹೇಳಬೇಕೋ ಗೊತ್ತಾಗ್ತಿಲ್ಲ.>
ಹೇಮಾರವರೆ,
ಸ್ತ್ರೀ ಸ್ವಾತಂತ್ರ್ಯ ಬೇಕು ಅಂತಿರ,
<<ವೈಶ್ಯಾವಾಟಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಯುವತಿ, ತಾನು ಸ್ವಇಚ್ಛೆಯಿಂದ ಈ ಕೆಲಸಕ್ಕೆ ಬಂದಿದ್ದಾಗಿಯೂ......
ಅವಳ ಸ್ವಇಚ್ಛೆಯಿಂದ ಬಂದರೆ "......ವಿವಿಧ ಕಾರಣಗಳಿಂದ ವೈಶ್ಯಾವೃತ್ತಿಗೆ ಇಳಿದ ಹೆಣ್ಣು ಸಮಾಜದ ಸ್ವಾಸ್ಥ್ಯ ಕೆಡಿಸಿಬಿಡುತ್ತಾಳೆ!"
ನನ್ನ ಅನಿಸಿಕೆ ನಿಜ ಹೇಳಬೇಕು ಅಂದ್ರೆ ಅವಳ ಅಷ್ಟಾದರು ಹೇಳಿದ್ದಾಳೆ. ಹೇಳದೆ ಮಾಡುವವರು ಬೇಕಾದಷ್ಟುಜನ ಇದ್ದಾರೆ ...ವೈಶ್ಯಾವಾಟಿಕೆಯನ್ನೇ>
ಸಮಾನತೆ :
ಮನೆ ಮನೆ ಇಂದ ಬರಬೇಕಾದ ವಿಷಯ ಇದು ... ನೀವು ಸಮಾಜದಲ್ಲಿ ಎನೇ ರೂಲ್ ಮಾಡಿದ್ರು ಮನೇಲಿ ಗಂಡ ಹೆಂಡತಿಗೆ ಸಮಾನತೆ ಕೊಡುವುದು ಹೆತ್ತವರು ಗಂಡು ಹಾಗು ಹೆಣ್ಣು ಅನ್ನದೆ ಮಕ್ಕಳನ್ನು ನೋಡಿದರೆ ಸಮಾಜ ಸರಿಯಾಗುತ್ತದೆ... ಅದು ಅವರಲ್ಲಿಯೇ ಬರಬೇಕು!!!!
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಹೇಮಾ,
ನನ್ನ ತಾಯಿಯ ಹತ್ತಿರ ಈ ವಿಷಯದ ಬಗ್ಗೆ ಮಾತಾಡುತ್ತಿದ್ದಾಗ ಅವರು ಹೇಳಿದ ಮಾತಿದು ಹಿಂದೆಲ್ಲಾ ಸ್ತ್ರೀ-ಪುರುಷರ ನಡುವೆ ಸಮಾನತೆ ಎಂಬ ಘೋಷಣೆಗಳಿಲ್ಲದೆ ನಮ್ಮ ಸಮಾಜದಲ್ಲಿ ಸಮಾನತೆ ಹಾಸುಹೊಕ್ಕಾಗಿತ್ತು. ಎಷ್ಟೋ ಮಹಿಳೆಯರಿಗೆ ಆಗ ಉಪನಯನ ಕೂಡಾ ಆಗಿತ್ತಂತೆ (ಗಾರ್ಗಿ ಮುಂತಾದವರು) ಇನ್ನೊಮ್ಮೆ ಇದರ ಬಗ್ಗೆ ವಿವರವಾಗಿ ಬರೆಯುತ್ತೇನೆ. ಹಾಗಾಗಿ ಈ ಸ್ತ್ರೀ ಶೋಷಣೆ ಇವೆಲ್ಲ ಇತ್ತೀಚೆಗಷ್ಟೆ ಶುರುವಾಗಿರೋದು. ನಮ್ಮಲ್ಲಿ ಬಾಲ್ಯವಿವಾಹ, ವಿಧವೆಯರನ್ನು ಕುರೂಪಗೊಳಿಸುವುದು , ಮುಂತಾದವು ಶುರುವಾಗಿದ್ದು ನಮ್ಮ ದೇಶಕ್ಕೆ ಬೇರೆಯವರು ದಂಡೆತ್ತಿ ನಮ್ಮ ಹೆಂಗಸರನ್ನು ಎತ್ತೊಯ್ಯಲ್ಲಿಕ್ಕೆ ಶುರು ಮಾಡಿದ ಮೇಲಂತೆ. ನಮ್ಮ ಸ್ತ್ರೀಯರ ಸೌಂದರ್ಯ ಬಹಳ ಪ್ರಖ್ಯಾತಿಯಾದ ಕಾರಣ ನಮ್ಮ ಹೆಂಗಸರನ್ನು ನಮ್ಮ ನಾಡಿನಲ್ಲೇ ಉಳಿಸಿಕೊಳ್ಳಲು, ಮತ್ತು ನಮ್ಮ ಹೆಂಗಸರ ಗೌರವವನ್ನು ಕಾಪಾಡಿಕೊಳ್ಳಲು ಹೀಗೆಲ್ಲಾ ಶುರುವಾಗಿದ್ದು ಎಂಬುದು ಅವರ ಅನಿಸಿಕೆ.
ಇನ್ನು ವೇಶ್ಯಾವಾಟಿಕೆಯ ಕುರಿತು ಮಾತಾಡುವುದಾದರೆ ಹಿಂದೆಲ್ಲಾ ವೇಶ್ಯೆಯರನ್ನು ಬಹಳವಾಗಿ ಗೌರವಿಸುತ್ತಿದ್ದರು. ಯಾರೂ ಕೂಡ ಅದರ ಬಗ್ಗೆ ಚಕಾರವೆತ್ತುತ್ತಿರಲ್ಲ. ನಮ್ಮ ಸಮಾಜದ ಸ್ವಾಸ್ತಕ್ಕಾಗಿ ಈ ವೃತ್ತಿ ಎಂಬುದನ್ನು ಎಲ್ಲರು ನಂಬಿದ್ದರು. ಈ ವೇಶ್ಯೆಯರು ಕೂಡಾ ತಮ್ಮ ವೃತ್ತಿಯನ್ನು ಅಷ್ಟೇ ಪ್ರೀತಿಯಿಂದ, ಶ್ರದ್ಧೆಯಿಂದ ಮಾಡುತ್ತಿದ್ದರು. ಇವರ ಸ್ಪೂರ್ತಿಯಿಂದಾಗಿಯೇಎಷ್ಟೋ ಮಹಾಕಾವ್ಯಗಳ, ಸಾಹಿತ್ಯರಚನೆಗಳ ಸೃಷ್ಠಿಯಾಗಿವೆ. ಈ ವೇಶ್ಯೆಯರು ಕೂಡ ಅಷ್ಟೆ, ತಮ್ಮ ಸಂಪಾದನೆಯಲ್ಲಿ ಎಷ್ಟೋ ಕೆರೆಕಟ್ಟೆಗಳನ್ನು ಕಟ್ಟಿಸಿದ್ದಾರೆ, ದಾನಧರ್ಮಗಳನ್ನು ಮಾಡಿದ್ದಾರೆ.
ನನ್ನ ಅನಿಸಿಕೆಯ ಪ್ರಕಾರ ಯಾವ ವೃತ್ತಿಯೇ ಆಗಲಿ, ಅದು ಬಲವಂತದ್ದಾದರೆ ಅದು ತಪ್ಪೇ. ವೇಶ್ಯಾವಾಟಿಕೆಯಿಂದಾಗಿ ನಮ್ಮ ಸಮಾಜದ ಸ್ವಾಸ್ತ್ಯ ಅದು ಹೇಗೆ ಹಾಳಾಗುತ್ತದೆ ಅನ್ನುವುದು ನನ್ನ ಪ್ರಶ್ನೆ. ಎಷ್ಟೋ ಪಾಶ್ಚಾತ್ಯ ದೇಶಗಳಲ್ಲಿ ವೇಶ್ಯಾವಾಟಿಕೆಯನ್ನು ಕಾನೂನಿನ ಪ್ರಕಾರ ಮಾನ್ಯಗೊಳಿಸಲಾಗಿದೆ. ಆದರೆ ಆ ವೃತ್ತಿಗೆ ಬಲವಂತವಾಗಿ ಮಹಿಳೆಯರನ್ನು ಎಳೆತರುವುದು ಅಷ್ಟೇ ಹೇಯಕರ. ಇನ್ನು ಪುರುಷ ವೇಶ್ಯೆಯರ ಬಗ್ಗೆ ಮಾತಾಡುವುದಾದರೆ, ಹಿಂದೆಯೂ ರಾಜ ಮಹಾರಾಜರ ಕಾಲದಲ್ಲಿ ತಮ್ಮ ಪತಿಯರು ದಂಡ ಯಾತ್ರೆಗಳಿಗೆಲ್ಲಾ ಹೋದಾಗ ರಾಣಿಯರು ಪುರುಷ ವೇಶ್ಯೆಯರನ್ನು ಇಟ್ಟುಕೊಳ್ಳುತ್ತಿದ್ದರು. ಈಗಲೂ ಕೂಡ ನಮ್ಮ ಹಳ್ಳಿಗಳಲ್ಲಿ ಕೂಡಾವಳಿ ಪದ್ಧತಿಯಿದೆ. ಗಂಡ ಸತ್ತರೆ ಆತನ ಅಣ್ಣ ತಮ್ಮಂದಿರೊಡನೆ ಆ ಹೆಣ್ಣು ಕೂಡಾವಳಿ ಮಾಡಿಕೊಳ್ಳಬಹುದು. ಅದನ್ನು ಆ ಹೆಣ್ಣು(ಆತನ ಪತ್ನಿಯು ಕೂಡಾ) ಬಹಳ ಸಹಜವಾಗಿ ಒಪ್ಪಿಕೊಳ್ಳುತ್ತಾಳೆ (ಇದು ನಾನು ಕಣ್ಣಾರೆ ಕಂಡ ಫಟನೆ).
ನಮ್ಮ ಕುಟುಂಬ ವ್ಯವಸ್ಥೆ ನಿಜವಾಗಲೂ ನಮಗೆಲ್ಲಾ ಒಂದು ವರವೇ ಸರಿ. ಆದರೆ ನಮ್ಮಲ್ಲಿ ಹುಳುಕು ಇಲ್ಲವೆಂದಲ್ಲ. ಎಷ್ಟೋ ಅತ್ಯಾಚಾರಗಳು, ವೇಶ್ಯಾವಾಟಿಕೆಗಳಿಗೆ ನೂಕಲ್ಪಡುತ್ತಿರುವ ಹೆಂಗಸರು, ಇದೆಲ್ಲಾ ತಮ್ಮ ಕುಟುಂಬದವರಿಂದಾಗಿಯೇ ಎಂಬುದು ಕೂಡಾ
ಅಷ್ಟೆ ಕಟು ಸತ್ಯ
ದೀರ್ಘ ಪ್ರತಿಕ್ರಿಯೆ ನೀಡಿದಕ್ಕಾಗಿ ಕ್ಷಮಿಸಿ. ತಿಳಿದವರು ತಪ್ಪುಗಳಿದ್ದರೆ ತಿದ್ದಿ.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಸುಮಾರು ಹೊಸ ವಿಷಯಗಳು ಗೊತ್ತಾಯ್ತು, ಧನ್ಯವಾದಗಳು...
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಧನ್ಯವಾದಗಳು ಅರವಿಂದ ರವರೇ
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಇಂಚರರವರೆ,
ನಿಮ್ಮ ಅಮ್ಮನಿಗೆ ಬುದ್ದಿಗೆ ನನ್ನ ಒಂದು ನಮನ.
ಊರಿನ ದಾರಿಯನು ಯಾರು ತೋರಿದರೇನು
ಸಾರಾಯದ ನಿಜವ ತೋರುವನಾರಾದರೇನು
ಆತನೇ ನಿಜವಾದ ಗುರುವು ಸರ್ವಙ್ಞ್ನ.
ಹೆಣ್ಣಿನ ಕಷ್ಟ ಒಂದು ಹೆಣ್ಣೇ ಅರಿಯಬಲ್ಲಳು .... ನೀವು ಅವರನ್ನು ಕೇಳಿದ್ದಕ್ಕೆ ನಿಮ್ಮ ಧೈರ್ಯವನ್ನು ಮೆಚ್ಚಲೇಬೇಕು !!!!!
Hats off (Wish sampada had that symbol) to your mother.
ನಮ್ಮಜ್ಜಿ ಇಗಲೂ ನಾನು ಹಳ್ಳಿಗೆ ಹೋದರೆ ಅದೇ ಹೇಳುತ್ತಾರೆ .....
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಧನ್ಯವಾದಗಳು ವಾಸುರವರೇ. ನಿಮ್ಮ ಪ್ರತಿಕ್ರಿಯೆಯನ್ನು ನಮ್ಮಮ್ಮನಿಗೆ ತೋರಿಸಿದಕ್ಕೆ ಬಹಳ ಖುಷಿಯಾದರು. ಬಹಳ ಸಣ್ಣ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರೂ, ನಮಗೆಲ್ಲಾ ವಿದ್ಯೆ, ವಿವೇಚನಾ ಶಕ್ತಿಯನ್ನು ಕೊಟ್ಟ ನಮ್ಮಮ್ಮನಿಗೆ ನಾನು ಕೂಡ ಚಿರ ಋಣಿ.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
ಹೆಣ್ಣು, ಸಮಾನತೆ, ಸ್ವಾತಂತ್ರ್ಯದ ಚರ್ಚೆಯಲ್ಲಿ ನಾನಿದುವರೆಗೂ ಅಷ್ಟು ಸ್ಪಷ್ಟವಾಗಿ ಕೇಳಿರದಿದ್ದ ಧ್ವನಿಯಿದು.
ಒಂದು ಕಾಲದಲ್ಲಿ ನಮ್ಮ ಸಮಾಜ ಸಮಾನತೆಯನ್ನು ಹೊಂದಿತ್ತು ಆದರೆ ಅದು ಹಾಳಾಗಿದೆ ಎಂಬುದು ಈ ಧ್ವನಿಯ ಅರ್ಥ ಎಂದು ಭಾವಿಸಿರುವೆ.
ಆದರೆ ‘ಒಂದು ಕಾಲದಲ್ಲಿ ಇತ್ತು’ ಎನ್ನುವುದು ಸಂಶೋಧನೆಗಳ ಮುಖಾಂತರ ನಾವು ವಿಮರ್ಶಿಸಬೇಕು. ನಮ್ಮ ಯುಟೋಪಿಯನ್ ಕಲ್ಪನೆಯನ್ನು ನಾವು ನಮ್ಮ ಇತಿಹಾಸದಲ್ಲಿ ಕಾಣುವ ವ್ಯರ್ಥ ಪ್ರಯತ್ನವಾಗಬಾರದು.
ಆದರೂ ನಮ್ಮಲ್ಲಿ ನಮ್ಮ ಸಂಸ್ಕೃತಿ ಹಾಗೂ ಹಿಂದಿನ ಸಮಾಜವನ್ನು ಅಧ್ಯಯನ ಮಾಡಲಿಕ್ಕೆ ದೇಶೀಯ ಮಾನದಂಡಗಳನ್ನು ಸಮರ್ಪಕವಾಗಿ ಬಳಸಿಲ್ಲ ಅನ್ನಿಸುತ್ತದೆ.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
>>>ಒಬ್ಬ ಪುರುಷ ಅನೇಕ ಹೆಂಗಸರೊಂದಿಗಿದ್ದಾಗ್ಯೂ ಸ್ತ್ರೀ ಆತನನ್ನು ಒಪ್ಪುತ್ತಾಳೆಂದರೆ ಸ್ತ್ರೀಯ ಅದೇ ಪ್ರವೃತ್ತಿಯನ್ನು ಪುರುಷನ್ಯಾಕೆ ಕಡೆಗಣಿಸಬೇಕು ಎಂಬುದು ನನ್ನ ಬೇಸಿಕ್ ಪ್ರಶ್ನೆಯಾದರೂ<<
ಒಂದು ಹೆಣ್ಣು ಇದಕ್ಕೆ ಒಪ್ಪುತ್ತಾಳೆ ಅಂತ ಒಂದು ಹೆಣ್ಣಾಗಿ ಹೇಗೆ ಒಪ್ಪಿಕೊಳ್ಳುತ್ತಿರಾ ನೀವೂ,ಇದನ್ನು ಒಂದು ಹೆಣ್ಣೆ ಅಲ್ಲ ಗಂಡು ಕೂಡ ಒಪ್ಪೊಲ್ಲ ,ನಮ್ಮಲ್ಲಿ ಹೆಣ್ಣಾಗಲಿ ಅಥವಾ ಗಂಡಾಗಲಿ ವೆಶ್ಯೆ ವೃತ್ತಿಯಲ್ಲಿದ್ದಾರೆ ಅಂದರೆ ಯಾರೂ ಕೂಡ ಅವರಿಗೆ ಗೌರವ ಕೊಡಲ್ಲ ಮತ್ತು ಅದನ್ನೂ ಯಾರೂ ಒಪ್ಪಿಕೊಳ್ಳಲ್ಲ
>>ಸಮಾನತೆ ಅಂದರೆ ಸ್ತ್ರೀಯು ಪುರಷನಿಂದ ಸಾಧ್ಯವಾಗುವುದನ್ನೆಲ್ಲ ಮಾಡುವುದಷ್ಟೇ ಎಂದರ್ಥವೇ? ಅದೇ ನಿಜವಾದರೆ ಸ್ತ್ರೀ ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥವೇನಿದೆ?<<
ನಿಮ್ಮ ಮಾತಿನ ಸ್ತ್ರೀಯ ನಿಜವಾದ ಸ್ವಾತಂತ್ರ್ಯ ಅಂದರೆ ಏನು ?
--ಗೌಡ್ರು
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
>>>ಒಂದು ಹೆಣ್ಣು ಇದಕ್ಕೆ ಒಪ್ಪುತ್ತಾಳೆ ಅಂತ ಒಂದು ಹೆಣ್ಣಾಗಿ ಹೇಗೆ ಒಪ್ಪಿಕೊಳ್ಳುತ್ತಿರಾ ನೀವೂ>>
ನನ್ನ ಒಪ್ಪಿಗೆಯ ಪ್ರಶ್ನೆಯಲ್ಲ ಗೌಡರೆ. ಶೀಲದ ವಿಷಯ ಬಂದಾಗ ಹೆಣ್ಣೊಬ್ಬಳಿಗೆ ಇರುವ ನಿರ್ಭಂದ ನಮ್ಮ ಸಮಾಜದಲ್ಲಿ ಗಂಡಿಗಿಲ್ಲ. ಒಂದೇ ಮನೆಯಲ್ಲಿ ಒಬ್ಬನೇ ವ್ಯಕ್ತಿಯ ಇಬ್ಬರು ಹೆಂಡತಿಯರು ವಾಸಿಸುವುದನ್ನು ನಾನು ನೋಡಿದ್ದೇನೆ. ಅದನ್ನು ಹೆಣ್ಣು ಮನಃ ಪೂರ್ವಕವಾಗಿ ಒಪ್ಪದೆ ಹೋದರೂ, ಆಕೆಗೆ ಆ ವಿಷ್ಯದ ಬಗ್ಗೆ ಆಕ್ಷೇಪವಿಲ್ಲದೆ ಇರುವ ಘಟನೆಗಳನ್ನು ಗಮನಿಸಿದ್ದೇನೆ. ಅಲ್ಲದೆ ನನ್ನ ಹೋಲಿಕೆ ಬರಿಯ ವೈಶ್ಯೆಯ ವಿಷಯದಲ್ಲಲ್ಲ ಗಂಡಿಗೂ ಹೆಣ್ಣಿಗೂ ಇರುವ ಸಮಾನತೆಯ ದ್ವಂದ್ವದ ಬಗ್ಗೆ.
>>>ನಿಮ್ಮ ಮಾತಿನ ಸ್ತ್ರೀಯ ನಿಜವಾದ ಸ್ವಾತಂತ್ರ್ಯ ಅಂದರೆ ಏನು ?>> ನನ್ನ ಲೇಖನದ ತಲೆಬರಹ ಗಮನಿಸಿ ನನಗೂ ನಿಜಕ್ಕೂ ಸ್ತ್ರೀ ಸ್ವಾಂತಂತ್ರ್ಯ ಇಂತದ್ದೇ ಅಂತ ತೀರ್ಮಾನಿಸುವಲ್ಲಿ ಗೊಂದಲವಿದೆ ಎಂದು ಹೇಳಿರುವುದು.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
>>ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ?...
ಹುಡುಗಿ ಎಂಬ ಕಾರಣಕ್ಕೆ ಒರಟಾಗಿ ಮಾತಾಡಬಾರದು ಎನ್ನುವುದು ಸಮಾನತೆಯ ದೃಷ್ಟಿಯಿಂದ ಸರಿಯಲ್ಲ ಎಂದು ನನ್ನ ಅಭಿಪ್ರಾಯವೂ ಹೌದು. ಆದರೆ ಒರಟು ಮಾತು ಶಿಷ್ಟಾಚಾರದ ದೃಷ್ಟಿಯಿಂದ, ಯಾರೊಂದಿಗೆ ಆಡಿದರೂ ತಪ್ಪೇ. ಆದರೆ ಅವಳು ಹುಡುಗಿ ಎಂಬ ಕಾರಣದಿಂದ ಅವಳೊಂದಿಗೆ ಒರಟಾಗಿ ಮಾತಾಡಿದ್ದಾದರೆ, ಅದು ಸಮಾನತೆಗೆ ವಿರುದ್ಧವಾಗುತ್ತದೆ.
>>ಸಮಾನತೆ ಅಂದರೆ ಸ್ತ್ರೀಯು ಪುರಷನಿಂದ ಸಾಧ್ಯವಾಗುವುದನ್ನೆಲ್ಲ ಮಾಡುವುದಷ್ಟೇ ಎಂದರ್ಥವೇ? ಅದೇ ನಿಜವಾದರೆ ಸ್ತ್ರೀ
ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥವೇನಿದೆ?
ಸಮಾನತೆ ಅಂದರೆ ಸ್ತ್ರೀ-ಪುರುಷರು ಎಲ್ಲ ರೀತಿಯಲ್ಲೂ (ಉದಾ: ಸಾಮಾಜಿಕ, ಆರ್ಥಿಕ, ರಾಜಕೀಯ) ಸಮಾನರು. ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಸ್ತ್ರೀ ಸ್ವಾತಂತ್ರ್ಯ ಬೇಕಾಗುತ್ತದೆ.
ಉದಾಹರಣೆಗೆ, ವಿದ್ಯಾಭ್ಯಾಸ-ಉದ್ಯೋಗ: ಸಮಾನತೆ ಇಲ್ಲದಿದ್ದಾಗ, ಪುರುಷರಿಗೆ ವಿದ್ಯಾಭ್ಯಾಸಕ್ಕೆ ಯಾವ ಅಡೆತಡೆಯೂ ಇರುವುದಿಲ್ಲ, ಸ್ತ್ರೀಯರಿಗೆ ಅವಕಾಶಗಳು ಸೀಮಿತವಾಗಿರುತ್ತವೆ. ಸಮಾನತೆ ಸಾಧ್ಯವಾಗಿರುವ ಸಂದರ್ಭದಲ್ಲಿ ಸ್ತ್ರೀ-ಪುರುಷರಿಬ್ಬರಿಗೂ ವಿದ್ಯಾಭ್ಯಾಸಕ್ಕೆ ಸಮಾನ ಅವಕಾಶಗಳಿರುತ್ತವೆ. ನಾವಿರುವುದು ಇವೆರಡೂ ಅಲ್ಲದ ಸನ್ನಿವೇಶದಲ್ಲಿ: ಸಮಾನತೆ ಇಲ್ಲದ ಸ್ಥಿತಿಯಿಂದ ಸಮಾನತೆ ಇರುವ ಸ್ಥಿತಿಯ ಕಡೆ ಹೋಗುತ್ತಿದ್ದೇವೆ. ಪುರುಷರಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚು ಅವಕಾಶಗಳಿದ್ದವು. ಈಗ ಸ್ತ್ರೀಯರಿಗೂ ಅವಕಾಶಗಳು ಲಭ್ಯವಿವೆ. ಸ್ತ್ರೀಯರು ವಿದ್ಯಾಭ್ಯಾಸ/ಉದ್ಯೋಗದ ಅವಕಾಶಗಳನ್ನು ಉಪಯೋಗಿಸಿಕೊಂಡಾಗ, ’ಮಕ್ಕಳನ್ನು/ಮನೆಯನ್ನು ನಿರ್ಲಕ್ಷಿಸುತ್ತಿದ್ದಾಳೆ, ತಾನೂ ಗಂಡಸು ಅಂದುಕೊಂಡಿದ್ದಾಳೆ, ಗಂಡಸಿನೊಂದಿಗೆ ಸ್ಪರ್ಧೆಗಿಳಿದಿದ್ದಾಳೆ”, ಇತ್ಯಾದಿ ಮಾತುಗಳು ಕೇಳಿಬರುತ್ತವೆ. ಈ ಸಂದರ್ಭದಲ್ಲಿ ಸ್ತ್ರೀ ಏನು ಮಾಡಬೇಕು? ನನ್ನ ಅಭಿಪ್ರಾಯದಲ್ಲಿ, ಸ್ತ್ರೀ ಇಂಥ ಸಾಮಾಜಿಕ ಅಡೆ-ತಡೆಗಳಿಗೆ ಬಗ್ಗದೆ, ತನಗೆ ಬೇಕಾದ ಹಾಗೆ ಬದುಕಬೇಕು.
ಈಗ ವಿದ್ಯಾಭ್ಯಾಸ/ಉದ್ಯೋಗದ ಜಾಗದಲ್ಲಿ ’ಕುಡಿತ’, ’ಲೈಂಗಿಕ ಸ್ವಾತಂತ್ರ್ಯ’ ಎಂದು ಓದಿಕೊಳ್ಳಿ :-).
>>ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ತೀರ ಶಾಲೆಯ ಮಕ್ಕಳಿಗೆ ಊಟದಲ್ಲಿ Anti-pregnancy pill ಗಳನ್ನು ಹಾಕಿಕೊಡುತ್ತಾರೆಂದರೆ..
ಇದನ್ನು ನೀವೆಲ್ಲಿ ಕೇಳಿದಿರಿ/ಓದಿದಿರಿ? ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅತೀವ ಕಾಳಜಿ ಇರುವ ಅಮೆರಿಕಾದಲ್ಲಿ ಇಂಥ ಘಟನೆ ನಡೆದಿದೆ ಎಂದು ನಂಬಲು ಕಷ್ಟ. ಇದು ಸರ್ವೇಸಾಮಾನ್ಯವಾದ ಆಚರಣೆಯಂತೂ ಖಂಡಿತ ಅಲ್ಲ.
>>ನಮ್ಮ ಕುಟುಂಬ ವ್ಯವಸ್ಥೆಯಿಂದ ಹಾಗು ಅದರಿಂದ ಉಳಿದಿರುವ ಸಮಾಜದ ಸ್ವಾಸ್ಥ್ಯದಿಂದ ನಮ್ಮ ಹಾಗೂ ನಮ್ಮ ಮುಂದಿನ
ಪೀಳಿಗೆಗೆ ಎಷ್ಟು ಅನುಕೂಲವಾಗುತ್ತಿದೆಯಲ್ಲವೇ?...
ನಮ್ಮ ಕುಟುಂಬ ವ್ಯವಸ್ಥೆ ಸ್ತ್ರೀಯರ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯಗಳ ತ್ಯಾಗಗಳನ್ನು ಅವಲಂಬಿಸಿದೆ. ಇಂಥ ತ್ಯಾಗಗಳನ್ನು ಮಾಡಲು ಆಧುನಿಕ ಸ್ತ್ರೀ ಸಿದ್ಧಳಿಲ್ಲ. ಸ್ತ್ರೀಯಿಂದ ಇಂಥ ತ್ಯಾಗಗಳನ್ನು ಅಪೇಕ್ಷಿಸದ ಕುಟುಂಬ ವ್ಯವಸ್ಥೆಯನ್ನು ಕಟ್ಟುವುದು ಹೇಗೆ ಎನ್ನುವುದು ನಮ್ಮ ಹಾಗೂ ಮುಂದಿನ ಪೀಳಿಗೆಯ ಸ್ತ್ರೀ-ಪುರುಷರ ಮುಂದಿರುವ ಸವಾಲಾಗಿದೆ.
ಉ: ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-
>>ಇದನ್ನು ನೀವೆಲ್ಲಿ ಕೇಳಿದಿರಿ/ಓದಿದಿರಿ? ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅತೀವ ಕಾಳಜಿ ಇರುವ ಅಮೆರಿಕಾದಲ್ಲಿ ಇಂಥ ಘಟನೆ ನಡೆದಿದೆ ಎಂದು ನಂಬಲು ಕಷ್ಟ. ಇದು ಸರ್ವೇಸಾಮಾನ್ಯವಾದ ಆಚರಣೆಯಂತೂ ಖಂಡಿತ ಅಲ್ಲ.>>>
ಸರ್ ಇದನ್ನು ನಾನು ಖ್ಯಾತನಾಮರೊಬ್ಬರ ಲೇಖನದಲ್ಲಿ ಓದಿದ್ದೇನೆ (ಹೆಸರು ಮರೆತಿದೆ ಕ್ಷಮಿಸಿ, ಆ ಲೇಖನ ನನ್ನ ಬಳಿ ಇದೆ ನಿಮಗೆ ಬೇಕಾದಲ್ಲಿ ಆ ಲೇಖನ ಹುಡುಕಿ ಮೇಲ್ ಮಾಡಬಲ್ಲೆ).
ಈಗ ವಿದ್ಯಾಭ್ಯಾಸ/ಉದ್ಯೋಗದ ಜಾಗದಲ್ಲಿ ’ಕುಡಿತ’, ’ಲೈಂಗಿಕ ಸ್ವಾತಂತ್ರ್ಯ’ ಎಂದು ಓದಿಕೊಳ್ಳಿ :) >>
ನಿಮ್ಮ ವಾದ ಸರಣಿ ಹಿಡಿಸಿತು. ನನ್ನಲ್ಲಿನ ಗೊಂದಲಗಳೂ ಅವೆ ಸರ್ :)
ಉ: ಹೇಮ ಅವರೇ...............
ಹೇಮ
ನಿಮ್ಮ ಲೇಖನ ಓದಿದಾಗ ನನಗೆ ಏರ್ ಶೋನಲ್ಲಿ ಸಿಕ್ಕ ಹೆಣ್ಣಿನ ವಾದಸರಣಿ ನೆನಪಾಯ್ತು
ಹೌದು ಎಲ್ಲೋ ಭಾರತೀಯ ಸ್ತ್ರೀಯರು ಸರ್ವ ಸ್ವಾತಂತ್ರ್ಯದ ಜೊತೆಗೆ ತಮಗೆ ದುರ್ಲಭವಾದ ಲೈಂಗಿಕ ಸ್ವಾತಂತ್ರ್ಯವನ್ನೂ ಬಯಸುತ್ತಿದ್ದ್ದಾರೆ ಎನಿಸುತ್ತಿದೆ.
>>"ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ?
ಎಂದಿದ್ದಕ್ಕೆ, 'ಹುಡುಗಿಯಾದ್ರೆ ಎರಡು ಕೊಂಬ? ಸಮಾನತೆ ಬೇಕು ಅಂತೀರ ಮತ್ತೆ ಹೀಗೆ
ರಿಸರ್ವೇಶನ್ನು ಕೇಳ್ತೀರ' ಅಂತಂದು ನಕ್ಕಿದ್ದ. ಹೌದಲ್ವ ಹುಡುಗಿ ಎಂದ ಮಾತ್ರಕ್ಕೆ
ಆಕೆಯನ್ನು ವಿಶೇಷವಾಗಿ ಉಪಚರಿಸಬೇಕಿತ್ತು ಅಂತ ನನಗನ್ನಿಸಿದ್ದೇಕೆ? "
ಹೆಣ್ಣು ಪ್ರಕೃತಿ ದತ್ತವಾಗಿ ಕೋಮಲೆ ಎಲ್ಲೋ ಒಂದೆರೆಡು ಕಡೆ ಲೇಡಿ ರಾಂಬೋಗಳಿದ್ದರೂ ಇದು ನಿಜ. ಯಾವುದೇ ಮಾತಿಗೂ ಅತೀ ಬೇಗ ಬೇಸರಿಸಿಕೊಳ್ಳುವುದು ಹೆಣ್ಣೇ, ಅಳುವುದೂ ಕೂಡ ಹೆಣ್ಣೇ. ನಮ್ಮ ಶರೀರ ನೈಸರ್ಗಿಕವಾಗಿ ಒರಟು ಧಾಳಿಗಳನ್ನು ತಡೆಯಲು ಅಶಕ್ತ .ಹಾಗಾಗಿ ಆ ನಿಟ್ಟಿನಲ್ಲಿ ಹೆಣ್ಣಿನ ಜೊತೆ ಒರಟಾಗಿ ಮಾತನಾಡುವುದು ತೊಂದರೆಗಳನ್ನು ಕೊಡಬಹುದು
ಇನ್ನೂ ವೈಶ್ಯಾವಾಟಿಕೆಯನ್ನು ಸಮರ್ಥಿಸುವ ನಿಮ್ಮ ಎರೆಡನೆ ಪ್ಯಾರ ಬಗ್ಗೆ
ಒಂದಕ್ಕಿಂತ ಹೆಚ್ಚು ಹೆಣ್ಣುಗಳ ಸಂಪರ್ಕ ಹೊಂದಿಯೂ ಗಂಡಸೊಬ್ಬ ಗೃಹಸ್ಥನಾಗಿ ಬಾಳುವುದು ಸಾಧ್ಯವಿದೆಯಾದರೇ,
ಹೆಣ್ಣಿಗೇಕೆ ಇದು ಸಾಧ್ಯವಿಲ್ಲ? ಒಬ್ಬ ಪುರುಷ ಅನೇಕ ಹೆಂಗಸರೊಂದಿಗಿದ್ದಾಗ್ಯೂ ಸ್ತ್ರೀ ಆತನನ್ನು ಒಪ್ಪುತ್ತಾಳೆಂದರೆ
ಸ್ತ್ರೀಯ ಅದೇ ಪ್ರವೃತ್ತಿಯನ್ನು ಪುರುಷನ್ಯಾಕೆ ಕಡೆಗಣಿಸಬೇಕು
ನಾನು ಮದುವೆಯಾಗಿರದಿದ್ದರೆ ಅಂತಹವಿಷಯ ತಿಳಿದ ನಂತರ ಆ ಗಂಡನ್ನು ನಾನಂತೂ ಖಂಡಿತಾ ಮದುವೆಯಾಗೋದಿಲ್ಲ. ನನ್ನ ಹಾಗೆಯೆ ಎಲ್ಲಾ ಹೆಂಗಸರೂ ಹುಡುಗಿಯರೂ ಹಾಗೆ ನೀವು ಯೋಚಿಸುತ್ತೀರಾ ಅಲ್ಲವೇ
ಆದರೂ ಈ ಕಟ್ಟು ಪಾಡುಗಳು ಹೆಣ್ಣಿನ ಕಡೆಗೆ ತುಸು ಹೆಚ್ಚೇ ಎಂಬುದನ್ನೂ ಅಲ್ಲಗೆಳೆಯುವುದಿಲ್ಲ .
ಈಗೀಗ ಟ್ರೆಂಡ್ ಬದಲಾಗುತ್ತಿದೆ. ಈಗ ಲೀವ್ ಇನ್ ಟುಗೆದರ್ ಎಂಬ ಕಾನ್ಸೆಪ್ಟ್ ಜನಪ್ರಿಯವಾದಷ್ಟು ನೀವು ಮತ್ತು ಆ ಏರ್ ಷೋನ ಹೆನ್ನು ಹೇಳಿದ ಎಲ್ಲಾ ಬದಲಾವಣೆಗಳೂ ಸಾಧ್ಯವಾಗುವ ಲಕ್ಷಣಗಳು ಕಾಣುತ್ತಿವೆ
ಆರು ವರ್ಷದ ಹಿಂದೆ ನಾನು ಕೆಲಸ ಮಾಡುತ್ತಿದ್ದ ಕಡೆ ನನ್ನ ಸ್ನೇಹಿತನೊಬ್ಬ" ಅದು ಹೇಗೆ ಅಷ್ಟು ವರ್ಷ ಏನು ಗೊತ್ತಿಲ್ಲದ ಒಬ್ಬರೇ ಸಂಗಾತಿಯ ಜೊತೆ ಬಾಳುತ್ತೀರೋ " ಎಂದು ಲೇವಡಿ ಮಾಡಿದ ಅದು ಮದುವೆಯ ಬಗ್ಗೆ
"ನೀನು ಈಗಾಗಲೆ ಬೇರೆಯವರ ಸಂಭಂಧ ಹೊಂದಿರುವ ಹೆಣ್ಣಿನ ಜೊತೆ ಮದುವೆಯಾಗಲು ಬಯಸುತ್ತೀಯಾ? " ಎಂದು ಕೇಳಿದ್ದೆ
ಅದಕ್ಕೆ ಅವನು ಕೊಟ್ಟ್ಟ ಉತ್ತರ ನಿಜಕ್ಕೂ ಮೆಚ್ಚುವಂತಹದ್ದು
"ನಾನು ಹುಡುಗಿಯ ಇತಿಹಾಸ ನೋಡುವುದಿಲ್ಲ . ಏನಿದ್ದರೂ ಮದುವೆಯಾದ ಮೇಲೆ ನನಗೆ ನಿಷ್ಟೆಯಾಗಿರುತ್ತಾಳೆ ಎಂಬುದು ಮುಖ್ಯ" ಎಂದಿದ್ದ
"ಹಾಗಿದ್ದರೆ ನೀನು ನಿನ್ನ ಹೆಂಡತಿಗೆ ನಿಷ್ಟೆಯಾಗಿರುತ್ತೀಯ ಎಂದಾಯ್ತು" ಎಂದಾಗ
ನಗುತ್ತಾ ಅಲ್ಲಗೆಳೆದಿದ್ದ
ಇದು ಆರು ವರ್ಷದ ಹಿಂದಿನ ಮಾತು ಈಗಿನ್ನೂ ಈ ಆಲೋಚನೆಗಳು ಬದಲಾಗಿ ಮದುವೆಯಾದ ಮೇಲೂ ಒಬ್ಬರಿಗಿಂತ ಹೆಚ್ಚಿನ ಮಂದಿಯ ಜೊತೆಗೆ ಸಂಬಂಧವಿರಿಸಿಕೊಳ್ಳುವುದು ಹೈಟೆಕ್ ಆಗಿದೆ
ಈಗೀಗ ಬೆಂಗಳೂರಿನಲ್ಲೂ ಹೆಂಡತಿಯರ ಬದಲಾವಣೆಗಳು ಕಾಣತೊಡಗಿವೆ
ಅಂದರೆ ಲೈಂಗಿಕ ಸ್ವಾತಂತ್ರ್ಯ ಹೆಂಗಳೆಯರ್ರಿಗೂ ಸಿಗುತ್ತಿವೆ ಎಂದರ್ಥವಲ್ಲವೇ
ಆದರೆ ಹೇಮ ಏನೇ ಹೇಳಿ ನನ್ನ ಮನಸಿನಲ್ಲಿ ಹೆಣ್ನಾಗಲಿ ಗಂಡಾಗಲಿ ಸ್ವಾತಂತ್ರ್ಯವೆಂಬ ಹುಚ್ಚು ಅಲೆಯಲ್ಲಿ ಹೆಚ್ಚು ಹೆಚ್ಚು ಬೇಡುತ್ತ ಹಾರಿ ಹೋಗಿ ಕೊನೆಗೊಮ್ಮೆ ದೊಪ್ಪೆಂದು ಬಿದ್ದಾಗ ಎತ್ತಲು ಯಾವ ಹುಚ್ಚರೂ ಬರುವುದಿಲ್ಲ ಎಂಬುದು ನನ್ನ ಅನಿಸಿಕೆ.
ಹೆಣ್ಣಾಗಲಿ ಗಂಡಾಗಲಿ ಲೈಂಗಿಕ ಸ್ವಾತಂತ್ರ್ಯ ಅಥವ ಮುಕ್ತ ಲೈಂಗಿಕತೆಯ ಬೆನ್ನ ಹಿಂದೆ ಬಿದ್ದರೆ ಅದು ಸಾಮಾಜಿಕ ಸ್ವಾಸ್ತ್ಯವನ್ನಷ್ಟೇ ಅಲ್ಲ ಅವರದೇ ಸ್ವತಹ ದೈಹಿಕ, ಮಾನಸಿಕ ಸ್ವಾಸ್ತ್ಯವನ್ನೂ ಕೆಡಿಸಬಹುದು.
ಆದ್ದರಿಂದ ನೀವು ಹೇಳಿದ ವೈಶ್ಯಾವಾಟಿಕೆ ಅದು ಹೆಣ್ಣಿನದಗಿರಲಿ ಗಂಡಿನದಾಗಿರಲಿ ಅದು ಬ್ಯಾನ್ ಆಗಬೇಕು.
ಲೈಂಗಿಕ ಸ್ವಾತಂತ್ರ್ಯವನ್ನೇ ಸ್ವಾತಂತ್ರ್ಯ ಎಂದು ಭಾವಿಸದೆ ಕೆಳವರ್ಗದ ಕೆಲವು ಕ್ಷೇತ್ರಗಳಲ್ಲಿ ಹೆಣ್ಣು ಗಂಡಿನ ನಡುವೆ ಇರುವ ತಾರತಮ್ಯ ನಿವಾರಿಸುವತ್ತ ಹೆಜ್ಜೆ ಹಾಕಿದರೆ ಸ್ತ್ರೀ ಸ್ವಾತಂತ್ರಕ್ಕೂ ಅರ್ಥ ಬಂದೀತು
ಕಟ್ಟಡ ಕಟ್ಟುವ ಕೂಲಿಯಾಳುಗಳಲ್ಲಿ ಹೆಣ್ಣಾಳುಗಳಿಗೆ ಕಡಿಮೆ ಕೂಲಿ , ಜೊತೆಗೆ ಮೇಸ್ತ್ರಿಯ ಕಾಟ
ಗಾರ್ಮೆಂಟ್ಸ್ಗಳಲ್ಲಿ ಸೂಪರ್ ವೈಸರ್ ಗಳ ಕಾಟ (ಇಲ್ಲಿಯೂ ಹೆಣ್ಣು , ಸೂಪರ್ವೈಸರ್ ನ ಜೊತೆ ಮಲಗಿದರೆ ಏನು ತೊಂದರೆ ಅದೂ ಲೈಂಗಿಕ ಸ್ವಾತಂತ್ರ್ಯವಲ್ಲವೇ ಎನ್ನಬೇಡಿ, ಶೀಲದ ಕಾನ್ಶಿಯಸ್ ನಮಗಿಂತ ಅವರಲ್ಲಿ ಹೆಚ್ಚು)
ಹೀಗೆ ಇಲ್ಲಿ ನೆಟ್‍ನಲಿ ಬರೆದು ಹೈಟೆಕ್ ಆಗಿರುವ ನಮ್ಮಗಳಗಿಂತ ಕೆಳ ವರ್ಗದಲ್ಲಿ ಲೈಂಗಿಕ ಕಿರುಕುಳ ತಾರತಮ್ಯ ಎದುರಿಸುತಿರುವ ಆ ಹೆಣ್ಣುಗಳ ಸ್ವಾತಂತ್ರ್ಯದ ಅಗತ್ಯ ಹೆಚ್ಚಿದೆ