ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಕಂಸಾಳೆ - ಜನಪದ ಕಲೆಯ ಬಗ್ಗೆ
ಕಂಸಾಳೆ ನಮ್ಮ ಜನಪದ ಕಲೆಗಳಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಬಹುಶಹ ಎಲ್ಲ ಕಂಸಾಳೆಯವರು ಹಾಡುವುದು ಮಾದೇಶ್ವರನನ್ನು ಕುರಿತೇ.
ಡಿಎಲೈನಲ್ಲಿ ಹುಡುಕಿದಾಗ ಈ ಹೊತ್ತಗೆ ಸಿಕ್ಕಿತು
http://www.new.dli.ernet.in/scripts/FullindexDefault.htm?path1=/data/upload/0028/112&first=1&last=395&barcode=2040100028107
ಕಂಸಾಳೆ ಕಲಾವಿದರು ಕಂಡುಬರುವುದು ಮೈಸೂರು, ಮಂಡ್ಯ, ಬೆಂಗಳೂರು(ಈಗ ರಾಮನಗರ ಜಿಲ್ಲೆ), ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ. ಕಂಸಾಳೆ ಎನ್ನುವುದು'ಕಾಂಸ್ಯತಾಳ' ಎಂಬುದರ ತದ್ಬವ. ಅಂದ್ರೆ ಕಂಚಿನ ತಾಳ.
ಈ ಕಂಸಾಳೆಯಲ್ಲಿ ತುಂಬ ನಿಮ್ಮನ್ನು ಸೆಳೆಯುವುದು ಬೀಸು ಕಂಸಾಳೆ.
ಇದನ್ನೇ ನಮ್ಮ ಸಿನಿಮಾದವರು ಬಳಸಿದ್ದಾರೆ. ನೀವು ಇದನ್ನು ಕೇಳಿರಬಹುದು.
"ಕೋಲುಮಂಡೆ ಜಂಗಮದೇವರು ಕ್ವಾರಣ್ಯಕ್ಕೆ ದಯ ಮಾಡವರೊ
ಕ್ವಾರಣ್ಯ ನೀಡಮ್ಮ ಕೋಡುಗಲ್ಲ ಮ್ಯಾಲೆ..."
ಇಲ್ಲಿ ಕ್ವಾರಣ್ಯ ಅಂದ್ರೆ ಕರುಣೆಯಿಂದ ನೀಡುವ ಭಿಕ್ಶೆ. ಇದಕ್ಕೆ 'ಕೋರನ್ನ' ಅಂತಾನೂ ಕರೆತಾರಂತೆ. (ಕೋರನ್ನ= ಕೋರಿ/ಬೇಡಿದವನಿಗೆ ನೀಡುವ ಅನ್ನ)
ಒಂದು ಮಾದರಿ ಕಂಸಾಳೆ ಹಾಡು:-
"ನೆನೆದವರ ಮನೆಯೊಳಗಿದ್ದು
ಮರೆತವರ ಮನೆಯ ಮುರುದು
ನಂಬಿದವರ ಮನೆಯಲಿ ಗುರುವೆ
ತುಂಬಿ ತುಳುಕಾಡುತವೆ."
ನುಡಿ/ಬಾಶೆಯ ಬಳಕೆ ನೋಟದಿಂದ ನೋಡಿದಾಗ ಈ ಕಂಸಾಳೆ ಪದಗಳಿಗೆ ತನ್ನದೇ ಆದ ಒಳನುಡಿ ಬಳಕೆ ಇರುವುದು ಗೊತ್ತಾಗುತ್ತದೆ. ಕೆಲವು ಮಾದರಿಗಳು
ಅಟ್ಟಿ(ಮನೆ)
ಅಮ್ಮಿ(ಪ್ರೀತಿಗೆ ಹೆಣ್ಣು ಮಕ್ಕಳನ್ನು ಕರೆಯುವುದು)
ಆತ್ರಿಸಿ( ಆತುರ-ಇಸು)
ಈರತ್ಕಟ್ಟೆ( ವಿರಕ್ತ ಕಟ್ಟೆ)
ಉರುಳಗ( ಊಳಿಗ)
ಊಬತ್ತಿ( ವಿಭೂತಿ)
ಐಲು( ಹುಚ್ಚು)
ಐಕ್ಳು( ಐಕಳು, ಮಕ್ಕಳು)
ಒಗ್ತಾನ(ಒಗೆತನ)
ಕುರ್ಜಿನ( ಕುರುಜು, ತೇರಿನ ಮಾಳ)
ಕೊಟಾರ( ಕಣ)
ಕೌದಿ(ಸಣ್ಣ ಸಣ್ಣ ಬಟ್ಟೆಯಿಂದ ಹೊಲಿದ ಹೊದಿಕೆ)
ಗುಳ್ಲು( ಗುಡಿಸಲು)
ಚಿಟುಗರು(ಶಿಷ್ಯರು)
ಚೊಳ್ಳೆಸಾರು( ನೀರಾದ ಸಾರು)
ಪಳ್ಳಿಮನೆ( ಪಾಠಶಾಲೆ)
ಬರಗ(ಬರ್ಗ, ವ್ಯಾಘ್ರ)
ಮಸದೀಪು( ಪಂಜು)
ಸೀತಾಳ ಚಪ್ಪರ( ಹೊಂಗೆ,ಬಸರಿ, ಮಾವಿನಸೊಪ್ಪಿನ ಚಪ್ಪರ, ಹಸಿರುವಾಣಿ ಚಪ್ಪರ)
ಹುಟ್ಟರೆಕಲ್ಲು( ಉದ್ಭವಿಸಿದ ಬಂಡೆ)
ಹಿಂಚರಿ ( ಹಿಂದುಗಡೆ)

- ವೈಭವ ರವರ ಬ್ಲಾಗ್
- Login or register to post comments
- 559 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕಂಸಾಳೆ - ಜನಪದ ಕಲೆಯ ಬಗ್ಗೆ
ನಿಮ್ಮ ಜಾನಪದ ಅರಿವಿಗೆ ನನ್ನ ವಂದನೆಗಳು. ಕಂಸಾಳೆ ಜಾನಪದ ಕಲೆಗಳಲ್ಲಿ ಒಂದು. ಬಹು ಇಂದಿನಿಂದಲೂ ನಮ್ಮ ಹಳ್ಳಿಗಳಲ್ಲಿ ಬಳಕೆಯಲ್ಲಿ ಇದ್ದಂತಹ ಒಂದು ನಂಬಿಕೆ. ಮಾದೇಶ್ವರನ ಒಕ್ಕಲುಗಳು ಈ ಕಲೆಯನ್ನು ಆಡುತ್ತಾರೆ. ಇವರಷ್ಟೆ ಅಲ್ಲದೆ ಬೇರೆ ಬುಡಕಟ್ಟುಗಳಲ್ಲಿ ಸಹ ಈ ಕಲೆ ಇದೆ. ಈ ಕಲೆಯ ಮುಖ್ಯ ಉದ್ದೇಶ ದೈವಿ ಕಲ್ಪನೆ ಒಂದಾದರೆ, ಬುಡಕಟ್ಟು ಸಂಸ್ಕೃತಿಯಲ್ಲಿ ತಮ್ಮ ಜೀವನದ ಒಂದು ಚಟುವಟಿಕೆಯಾಗಿ ಈ ಕಲೆ ಕಂಡು ಬರುತ್ತದೆ.
ಉ: ಕಂಸಾಳೆ - ಜನಪದ ಕಲೆಯ ಬಗ್ಗೆ
"ಕೋಲುಮಂಡೆ ಜಂಗಮದೇವರು ಕ್ವಾರಣ್ಯಕ್ಕೆ ದಯ ಮಾಡವರೊ
ಕ್ವಾರಣ್ಯ ನೀಡಮ್ಮ ಕೋಡುಗಲ್ಲ ಮ್ಯಾಲೆ..."
ಇಲ್ಲಿ "ಕೋಲುಮಂಡೆ" ಎ೦ದರೇನು?
ಅನ೦ತ
ಉ: ಕಂಸಾಳೆ - ಜನಪದ ಕಲೆಯ ಬಗ್ಗೆ
ಈ ಪದ ನನ್ನ ಗಮನ ಸೆಳೆಯಿತು.
ತಮಿಳಿನಲ್ಲೂ ಶಾಲೆಗೆ ಪಳ್ಳಿಕ್ಕೂಡಂ ಎಂದು ಕರೆಯಲಾಗುತ್ತೆ - ಇದು ಕನ್ನಡದಲ್ಲೂ ಇದೆ ಎನ್ನುವುದು ತಿಳಿದಿರಲಿಲ್ಲ.
-ಹಂಸಾನಂದಿ
ಉ: ಕಂಸಾಳೆ - ಜನಪದ ಕಲೆಯ ಬಗ್ಗೆ
ಹಂಸಾನಂದಿ,
ಇಂದಿಗೂ ಗುಂಡ್ಲುಪೇಟೆ, ಕಬ್ಬಳ್ಳಿ, ಬೇಗೂರು ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಸ್ಕೂಲನ್ನು 'ಪಳ್ಳು' ಅಂತಾನೆ ಹೇಳಾದು.
ಉ: ಕಂಸಾಳೆ - ಜನಪದ ಕಲೆಯ ಬಗ್ಗೆ
" ಕಂಸಾಳೆ ಎನ್ನುವುದು'ಕಾಂಸ್ಯತಾಳ' "
ದಿಟವಾಗ್ಲೂ? ನಂಗೆ ಐಬು ಕಂಡದೆ ಇಲ್ಲಿ!
ಕಂಸ ಅಂದ್ರೆ bracket ಅಂತ ಅರಿತವಯ್ತೆ, ಅದಕ್ಕೆ ಕಂಸಾಳೆ ತಟ್ಟೆಗಳು bracket ಹಂಗೆ ಇರ್ತಾವೆ. ನಂಗೆ ಕಂಸ ಇದಕ್ಕೂ ಕಂಸಾಳೆಗೂ ನಂಟು ಕಾಣ್ತಯ್ತೆ.
ಕಾಂಸ್ಯತಾಳದ ತದುಬವ, ಕಂಸಾಳೆ ಆಗೋದು ಬಲು ವಿಚಿತಿರ ಅನ್ನಿಸ್ತಯ್ತೆ.
ಕಾಂಸ್ಯತಾಳ => ಕಂಸೆತಾಳ/ಕಂಸೆದಾಳ ಹಿಂಗೇಗಾರ ಆಗಬೋದಲ್ವಾ!! ಕಾಂಸ್ಯತಾಳದಲ್ಲಿ 'ತ' ಹೆಂಗೆ ಬಿದ್ದು ಹೋಯ್ತದೆ? ಇಂತ ತದುಬವಕ್ಕೆ ಬೇರೆ ಎದಾರ ಮಾದರಿಯುಂಟಾ?
ಉ: ಕಂಸಾಳೆ - ಜನಪದ ಕಲೆಯ ಬಗ್ಗೆ
ಊಬತ್ತಿ( ವಿಭೂತಿ)
ಇದು 'ಹೂಬತ್ತಿ' ಇರ್ಬೇಕು. ಹೂಬತ್ತಿ ಅಂದ್ರೆ ಹತ್ತಿಯಾಗೆ ಹೊಸೆದ ಹಣತೆಯ ಬತ್ತಿ. ಹಾಗೆ ದೇವರಿಗೇರಿಸೋ 'ಗೆಜ್ಜೆವಸ್ತ್ರ' ಎಂದು ಕರೆಯೋ ಹತ್ತಿಸರ.!!
ಹತ್ತಿಸರ ಹಾಕೋದು ಮೈಸೂರು ಕಡೆಯ ನೇಮ ಅಲ್ವರಾ!!
ಉ: ಕಂಸಾಳೆ - ಜನಪದ ಕಲೆಯ ಬಗ್ಗೆ
ಊಬತ್ತಿ=ಊದುಬತ್ತಿ(ಅಗರಬತ್ತಿ) ಆಗಿರಬಾರದೇಕೆ?
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಕಂಸಾಳೆ - ಜನಪದ ಕಲೆಯ ಬಗ್ಗೆ
"ಊಬತ್ತಿ=ಊದುಬತ್ತಿ(ಅಗರಬತ್ತಿ) ಆಗಿರಬಾರದೇಕೆ?"
ಹೀಗೆ ನುಡುವಿನ 'ತ''ದು' ಬಿಟ್ಟು ಹೋಗೋ ತೆರದವುಗಳನ್ನು ನಾನು ಕಂಡಿಲ್ಲ. ಇಂತವೇ ಆದ ಮಾದರಿಗಳನ್ನು ನೀಡ್ರಿ.
ಆದ್ರೆ ಹೂ => ಊ, ಹಬ್ಬ => ಅಬ್ಬ ಹೀಗೆ 'ಹ'ಸೊಲ್ಲು ಆಡು ಮಾತಿನಾಗೆ ಬಿದ್ದು ಹೋಗೋದು ಮಾಮೂಲಿ, ಈ ಕಡೆ.
ಇರಲಿ..
ವಿಭೂತಿ ಇದು ಇಬೂತಿ/ಈಬೂತಿ/ಈಬುತಿ ಆಯ್ತದೆ ಅಂತ ಕೇಳಿ ಗೊತ್ತು.
ಉ: ಕಂಸಾಳೆ - ಜನಪದ ಕಲೆಯ ಬಗ್ಗೆ
ಕನ್ನಡದಲ್ಲಿ 'ವ' ಇಂದ ಸುರುವಾಗುವ ಸಕ್ಕದದ ಪದಗಳು ಸ್ವರಗಳಿಂದ ಸುರುವಾಗೋದು.
ವಿದ್ಯಾ - ಇದ್ಯೆ
ವಿಬೂತಿ - ಇಬೂತಿ, ಉಬೂತಿ - ಊಬತ್ತಿ
ವೀರಪ್ಪ - ಈರಪ್ಪ
ವಿರಕ್ತಕಟ್ಟೆ - ಈರತ್ಕಟ್ಟೆ
ಇನ್ನೊಂತರದಲ್ಲಿ
ವನ - ಬನ
ವಸಂತ - ಬಸಂತ
ವಿಙ್ಞಾನ - ಬಿನ್ನಣ
ಒಟ್ಟಿನಲ್ಲಿ 'ವ' ಇಂದ ಸುರುವಾಗುವ ಎಲ್ಲ ಸಕ್ಕದಪದಗಳು ಕನ್ನಡದಲ್ಲಿ 'ಬ' , 'ಇ' ಅತ್ವ 'ಉ' ಇಂದ ಸುರುವಾಗುತ್ತವೆ.