ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಾಗರೀಕ ಜವಾಬ್ದಾರಿಗಳು

ದಿನನಿತ್ಯದ ಜೀವನದಲ್ಲಿ ನಾವು ತೊಂದರೆಗಳಾದಾಗ ಹಲವು ಬಾರಿ ಸರ್ಕಾರವನ್ನು, ಸುತ್ತಮುತ್ತವಿರುವವರನ್ನು ಆಗಾಗ ದೂಷಿಸುತ್ತ, ಬೈದುಕೊಳ್ಳುತ್ತಾ ಇರುವುದು ಸರ್ವೇಸಾಮಾನ್ಯ. ತಕ್ಷಣದ ವಿವೇಚನೆಗೆ, ಕಾಮನ್ ಸೆನ್ಸಿಗೆ ಇವುಗಳಿಗೆಲ್ಲ ನಾವು ಜವಾಬ್ದಾರರಲ್ಲ ಅನ್ನಿಸುತ್ತದೆ, ಉದಾಹರಣೆಗೆ ನೀರು ಪೋಲು ಮಾಡುವುದು, ರಸ್ತೆಯನ್ನು ಅಗೆದು ಸರಿಯಾಗಿ ಮುಚ್ಚದೇ ಹೋಗುವುದು, ಕಂಡ ಕಂಡ ಹೊತ್ತಿನಲ್ಲಿ ವಿದ್ಯುತ್ ಕಡಿತ, ವಾಹನ ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಇತ್ಯಾದಿ..

ಆದರೆ ಅವುಗಳ ಬಗ್ಗೆ ಸ್ವಲ್ಪ ನಿಧಾನಕ್ಕೆ ಯೋಚಿಸಿದಾಗ ನೇರವಾಗಿಯೋ/ಪರೋಕ್ಷವಾಗಿಯೋ ಇದೇ ಆರೋಪಗಳಲ್ಲಿ ದೋಷಮುಕ್ತರಲ್ಲವೆನ್ನುವುದು ನಾಗರೀಕರಿಗೆ ಸುಮಾರು ಪಾಲಿಗೆ ಸತ್ಯ.

ಇಲ್ಲಿ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ.
೧. ಮನೆಯಲ್ಲಿನ ಬೋರ್‍ವೆಲ್ ನೀರಿನ ಬಳಕೆಯನ್ನು ಗಮನಿಸಿ: ಸೈಟ್ ನಿಮ್ಮದೇ, ಬಾವಿ ತೆಗೆಸಿದ್ದು ನೀವೇ , ಪಂಪು ವಿದ್ಯುತ್ತಿನ ಖರ್ಚು ನಿಮ್ಮದೇ ಇರಬಹುದು,ಆದರೆ ಅಂತರ್ಜಲ ನಿಮ್ಮದೇ? ಅದನ್ನು ಸ್ವಂತ ಆಸ್ತಿಯಂತೆ ಉಪಯೋಗಿಸುವುದು ಎಷ್ಟು ಸರಿ, ಅದೂ ಅಲ್ಲದೆ ಅಂತರ್ಜಲಕ್ಕೆ ನೀರು ವಾಪಾಸಾಗಲು ನಿಮ್ಮ ಯಾವುದೇ ಚಟುವಟಿಕೆ ಕಾರಣವಲ್ಲದಿದ್ದಾಗ ಎಲ್ಲರಿಗೂ ಸೇರಬೇಕಾಗಿರುವ ಅಂತರ್ಜಲವನ್ನು ಬೋರಿನ ಒಡೆಯಾರಿಗಿ ನಾವು ಒಬ್ಬರೇ ದೋಚಿದಂತಾಗುವುದಿಲ್ಲವೇ? ಬೇಕಿದ್ದರೆ ಎಲ್ಲರೂ ಹಾಗೆಯೇ ಉಪಯೋಗಿಸಿಕೊಳ್ಳಲಿ ಎನ್ನುವುದು ಧಿಮಾಕಿನ ಮಾತಲ್ಲವೇ?
೨. ಪದೇ ಪದೇ ಕರೆಂಟ್ ಹೋಗುತ್ತದೆ, ಇನ್ವರ್ಟರ್/ಬ್ಯಾಟರಿ ಉಪಯೋಗಿಸುತ್ತೇವೆ: ಅಲ್ಲ, ಲೋಡ್ ಶೆಡ್ಡಿಂಗ್ ಮಾಡುವುದು ಯಾಕೆ? ನಮ್ಮಲ್ಲಿರುವ ಸಂಪನ್ಮೂಲಗಳು ಕೆಲವೊಮ್ಮೆ ನಮ್ಮ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ, ಅದಕ್ಕೆ

ವಿದ್ಯುತ್ ಬಳಕೆಯನ್ನು ಕಡಿತಗೊಳಿಸಬೇಕೆಂದಲ್ಲವೇ. ಹಾಗಿರುವಾಗ ಬೇರೆಯವರು ದೀಪ ಆರಿಸಲ್ಲ, ಸುಮ್ಮನೆ ಉರಿಸುತ್ತಾರೆಂದು ಗೊಣಗುವ ನಾವು ಕರೆಂಟ್ ಹೋದಾಗ ಮೊದಲೆ ಚಾರ್ಜ್ ಆಗಿರುವ ಬ್ಯಾಟರಿಯನ್ನುಪಯೋಗಿಸಿ ಕರೆಂಟ್ ಹೋದರೂ ದೀಪ ಆರದ ಹಾಗೆ ನೋಡಿಕೊಂಡರೆ ವಿದ್ಯುತ್ ಬಳಕೆಯಲ್ಲಿ ಕಡಿತವಾದರೂ ಎಲ್ಲಾಯಿತು ಸ್ವಾಮಿ? ಬಳಸುವುದಕ್ಕಿಂತ ಹೆಚ್ಚಾಗಿಯೇ ಉಪಯೋಗಿಸಿಕೊಳ್ಳಲಿಲ್ಲವೆ? ಹೀಗಿದ್ದೂ ಕರೆಂಟ್ ತೆಗೀತಾರೆ ಅನ್ನುವುದು ಎಷ್ಟು ಸರಿ?
೩. ಹಳ್ಳಿ ಕಡೆ ಜನ ಅನಧಿಕೃತವಾಗಿ ಕಾಡು ಕಡಿದೋ ಕಂಡವರ ಜಮೀನನ್ನು ಕಬಳಿಸಿ ಖಾಸಗೀ ಆಸ್ತಿ ಮಾಡಿಕೊಂಡರೆಂದು ಪತ್ರಿಕೆಗಳಲ್ಲಿ ಓದುತ್ತೇವೆ, ರಸ್ತೆ ಬದಿಯ ಗಾಡಿ ಅಂಗಡಿಯವರಿಂದ ಓಡಾಡುವುದೇ ಕಷ್ಟ ಅಂತ ಬೈಕೋತೀವಿ, ಆದರೆ ನಮ್ಮ ಮನೆಯೆದುರು ಸುಂದರವಾಗಿ ನಾಲ್ಕು ಗಿಡ ಹಾಕಿಬಿಡುವ ಅಂತ ರೋಡಿನ ಅಂಚಿನ ತನಕ ಒಂದು ೭-೮ ಅಡಿ ಅಗಲದ ಫುಟ್‍ಪಾತನ್ನು ಕಬಳಿಸಿ ಹೂಗಿಡ ನಿಟ್ಟು ಖಾಸಗಿ ಉದ್ಯ್ಯಾನ ನಿರ್ಮಿಸುತ್ತೇವೆ, ಬೇರೆಯವರು ಹೂಕೀಳುತ್ತಾರೆ ಅಂತ ಹೊಯ್ಕತೀವಿ, ಇಲ್ಲ, ಮನೆ ಮುಂದೇನೆ ವಾಹನಗಳನ್ನು ರೋಡಿನ ತನಕ ನಿಲ್ಲಿಸಿ ಆರಾಮಾಗಿ ಮನೆಗೆ ಹೋಗಿಬಿಡ್ತೀವಿ, ಇಲ್ಲ ಅಂದರೆ, ಗಾಡಿಗಳು ಮನೆಯಿಂದ ನೆಟ್ಟಗೆ ರೋಡಿಗೇ ಇಳಿಯಬೇಕು, ಹಾಗೆ ಗೇಟಿಂದ ರೋಡಿಗೆ ಕಲ್ಲು ಚಪ್ಪಡಿ ಹಾಕ್‍ಬಿಡ್ತೀವಿ, ಇದು ಕಬಳಿಕೆ ಅಲ್ವಾ ಸ್ವಾಮಿ? ಇದ್ಯಾವುದೂ ಇಲ್ಲ ಅಂದರೆ ರೋಡಿನ ತನಕ ಶ್ಯಾಮಿಯಾನ ಹಾಕಿರುವ ಹೋಟೆಲ್‍ಗಳಲ್ಲಿ ಫುಟ್‍ಪಾತ್‍ನಲ್ಲಿ ನಿಂತುಕೊಂಡು ದೋಸೇ ತಿನ್ನೋಲ್ವ?
೪. ರೋಡ್ ಸರಿಯಿಲ್ಲ, ರಿಪೇರಿ ಮಾಡಿಲ್ಲ, ತೊಟ್ಟಿ ಕ್ಲೀನ್ ಮಾಡಿಲ್ಲ ಹೀಗೆ ನೂರೆಂಟು ತೊಂದರೆಗಳನ್ನು ಕಂಡವರ ಮುಂದೆಲ್ಲ ಹೇಳ್ಕೋತಾನೆ ಇರ್ತೀವಿ, ಒಮ್ಮೆಯಾದರೂ ಸಂಘಟಿತರಾಗಿ ಹೋಗಿ ವಾರ್ಡ್ ಸದಸ್ಯರ ಹತ್ತಿರ ಹೋಗಿ ಜಾಣ್ಮೆಯಿಂದ ಕೆಲಸ ಸಾಧಿಸಿಕೊಂಡು ಬರುತ್ತೇವೆಯೇ?

ಹೀಗೆ ಸುಮಾರು ಉದಾಹರಣೆಗಳನ್ನು ಕೊಡಬಹುದು, ದೈನಂದಿನ ಬದುಕಿನಲ್ಲಿ ಜವಾಬ್ದಾರಿನೇ ಇಲ್ಲದ ನಮ್ಮ ನಡುವಳಿಕೆಯಿಂದ ನಾವು ನಮ್ಮ ದೇಶದ ಸಮಸ್ತ ಜನರ ಆಸ್ತಿ ಮತ್ತು ಪರಿಸರವನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ನುಂಗುಹಾಕ್ತಿದ್ದೇವೆ. ಬೇಜವಾಬ್ದಾರಿಯಿಂದ ನುಸುಳಿಕೊಳ್ಳುವುದು ಬೇಡ, ತಪ್ಪು ಅಂತ ಗೊತ್ತಿದ್ದೂ ಸಮರ್ಥಿಸಿಕೊಳ್ಳುವುದು ಬೇಡ, ಇವುಗಳನ್ನೇ ದೇಶಕ್ಕೆ ಮಾಡುವ ಸೇವೆ ಅಂತಾನೋ ಅಥವ ಇದೇ ತ್ಯಾಗಾನೋ ಅನ್ಕೊಂಡೋ ಮನಸ್ಸಿನಲ್ಲಿ ಬೈಕಂಡಾದರೂ ಪರವಾಗಿಲ್ಲ, ಈ ತರಹದ ಕೆಲಸಗಳನ್ನೆಸಗುವುದು ಬೇಡ, ಬದಲಾಗೋಣ, ಕಾರ್ಯತತ್ಪರರಾಗೋಣ. ಬದಲಾಗದಿದ್ದವರಿಗೆ ತಿಳಿಸೋಣ,ಕೇಳದಿದ್ದರೆ ಕೈಲಾಗುವ ಮಟ್ಟಿಗೆ ಚುನಾವಣೆಯಲ್ಲಿ ಸೋಲಿಸುವುದು, ಅವರ ದುಖಾನಿಗೇ ಹೋಗದೇ ಬುದ್ಧಿ ಕಲಿಸುವ.

ನಮ್ಮದು ಪ್ರಗತಿಶೀಲ ದೇಶ. ಪ್ರಗತಿಶೀಲ ದೇಶದ ಪ್ರಜೆಗಳಾದ್ದರಿಂದ ಅಮೇರಿಕದವರಂತೆಯೋ ಪಶ್ಚಿಮ ಯೂರೋಪಿನ ದೇಶಗಳಂತೆಯೋ ನಾವು ಆರಾಮಾಗಿರುವುದು ತಪ್ಪಾಗುತ್ತದೆ. ಮುಂದೆ ಹೋಗಬೇಕು, ಮುಂದಿನ ಜನಾಂಗಕ್ಕೂ ಸ್ವಲ್ಪ ಉಳಿಸಬೇಕೆಂದಾದರೆ ಇಷ್ಟರ ಮಟ್ಟಿಗೆ ಕಾಳಜಿವಹಿಸಬೇಕು, ತೊಂದರೆ/ಕಷ್ಟ ಅನುಭವಿಸಬೇಕು, ತ್ಯಾಗ ಮಾಡಬೇಕು - ನಮ್ಮ ದೇಶ ಅಂತ ಇದ್ದರೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು

Shyam Kishore's picture

ಶ್ಯಾಮ್ ಕಶ್ಯಪ ಅವರೇ,

ಒಳ್ಳೆಯ ವಿಚಾರಧಾರೆ. ಸ್ವಲ್ಪ ಹೊತ್ತು ಯೋಚಿಸಲೇಬೇಕಾದ ವಿಚಾರ. ನಮಗೆ (ನಮಗೆ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ, ನನ್ನನ್ನೂ ಸೇರಿಸಿಕೊಂಡು!) "ನಾಗರಿಕ ಹಕ್ಕು"ಗಳ ಬಗ್ಗೆ ಇರುವಷ್ಟು ಕಾಳಜಿ "ನಾಗರಿಕ ಕರ್ತವ್ಯ"ಗಳ ಬಗ್ಗೆ ಇಲ್ಲ ಅಂದರೆ ತಪ್ಪಾಗಲಾರದು.

೧. ಅಂತರ್ಜಲದ ಬಗ್ಗೆ ನೀವು ಬರೆದಿರುವಂತೆ ನಾವು ಆದಷ್ಟೂ ಬೇಗ ಎಚ್ಚರಗೊಳ್ಳಬೇಕು. ಬೋರ್ ತೋಡುವುದು ನಿಲ್ಲಿಸಬೇಕು ಅಂತಲ್ಲ, ಆದರೆ "ಮಳೆಕೊಯ್ಲು" ಬಗ್ಗೆ ಗಮನ ಹರಿಸಬಹುದಲ್ಲವೇ? ಈಗಂತೂ ಇದರ ಬಗ್ಗೆ ಸಹಾಯ ಮಾಡಲು ನಮ್ಮಲ್ಲಿ ಸಾಕಷ್ಟು ಪರಿಣಿತರಿದ್ದಾರೆ.

೨. ಆದರೆ ಬಹಳ ಬೇಸರ ತರುವ ವಿಷಯ ಅಂದರೆ ನಮ್ಮದೇ ಆದ ದ್ವಂದ್ವ ನೀತಿಗಳು (double standards). ಉದಾಹರಣೆಗೆ: ಎರಡು ವರ್ಷದ ಹಿಂದೆ ಒಮ್ಮೆ ಭಾರತಕ್ಕೆ ಬರುವಾಗ ನಾನು ಹೊರಡುವ ಜಾಗದಿಂದ ಇನ್ನೂ ಒಬ್ಬ ಯುವಕ ಹೊರಟಿದ್ದ. ಭಾರತೀಯನಾದ್ದರಿಂದ ಪರಿಚಯ, ಮಾತು ಬೆಳೆಯಿತು. ನಾನೂ ಸುಮ್ಮನೇ ಗಮನಿಸುತ್ತಿದ್ದೆ. ವಿದೇಶದಲ್ಲಿದ್ದಾಗ (ವಿಮಾನ ನಿಲ್ದಾಣದಲ್ಲಿ) ಆತ ಏನೇ ತ್ಯಾಜ್ಯ ವಸ್ತುಗಳಿದ್ದರೂ ಹುಡುಕಿಕೊಂಡು ಹೋಗಿ ಕ.ಬು.ಯಲ್ಲಿಯೇ ಹಾಕಿ ಬರುತ್ತಿದ್ದ. ದೆಹಲಿ ವಿಮಾನ ನಿಲ್ದಾಣ ಬಂತು. ಸಾಮಾನುಗಳನ್ನು ತೆಗೆದುಕೊಳ್ಳಲು ಕಾಯುತ್ತಿದ್ದಾಗ ಆತ ತನ್ನ ಜೇಬಿನಿಂದ ಒಂದಷ್ಟು ಬೇಡದ ಚೀಟಿಗಳನ್ನು ತೆಗೆದು ಏನೂ ಸಂಕೋಚವೇ ಇಲ್ಲದೆ ನಿಂತಲ್ಲೇ ಬಿಸಾಡಿದ. ನನಗೆ ಬಹಳ ಬೇಸರವಾಯಿತು. ಏನಾದರೂ ಅಂದುಕೊಳ್ಳಲಿ ಅಂತ ಆತನ ಮುಂದೆಯೇ ಆ ಚೀಟಿಗಳನ್ನು ಆರಿಸಲು ಶುರು ಮಾಡಿದೆ. ಅಲ್ಲಿದ್ದ ಕೆಲವರು ಆತನ ಕಡೆಗೇ ಗಮನಿಸಲು ಆರಂಭಿಸಿದರು. ಅಗಾತ ಎಚ್ಚೆತ್ತು ತಾನೂ ಕಸವನ್ನು (ತಾನೇ ಎಸೆದ ಕಸ) ಆರಿಸಲು ಮುಂದಾದ. ಆಗ ಕೇಳಿದೆ "ಅಲ್ಲ, ನೀವೇ ವಿದೇಶದಲ್ಲಿ ಹುಡುಕಿಕೊಂಡು ಹೋಗಿ ಕಸ ಎಸೆಯುತ್ತಿದ್ದಿರಿ. ಇಲ್ಲಿ ನೋಡಿದರೆ ಹೀಗೆ. ಯಾಕೆ ಹೀಗೆ?". ಆಗ ಆತ ನನ್ನತ್ತ "ಗುರಾಯಿಸಿದ್ದು" ನೋಡಬೇಕಿತ್ತು. "ಯಾವುದೋ ಪಳೆಯುಳಿಕೆ" ಅನ್ನುವಂತೆ ನೋಡಿದ. Embarassed

೩. ವಿದ್ಯಾವಂತರಾದ ನಾವೇ ಹೀಗೆ ಮಾಡಿದರೆ ಹೇಗೆ? ನನಗನ್ನಿಸುತ್ತೆ, ಇನ್ನೊಬ್ಬರತ್ತ ಬೆಟ್ಟು ಮಾಡಿ ತೋರಿಸುವ ಬದಲು ಮೊದಲು ನಮ್ಮ ಮನೆಯಿಂದ ಪ್ರಾರಂಭ ಮಾಡೋಣ. "ಮನೆ ಗೆದ್ದು ಮಾರು ಗೆದೆ" ಅಲ್ಲವೇ? ಬಹುಶಃ ಕ್ರಮೇಣ ಎಲ್ಲವೂ ಸರಿಯಾಗಬಹುದು. ಈಗ ಆಗುತ್ತಿರುವುದು ಎಲ್ಲರೂ ಉಪದೇಶ ಮಾಡಲು ನೋಡುತ್ತೇವೆಯೇ ವಿನಃ ಮಾಡಿ ತೋರಿಸಲು ಅಲ್ಲ. ನಾವು ನಮ್ಮ ಮನೆಯಲ್ಲಿ ಒಂದು ನಿರ್ಧಾರ ತೆಗೆದುಕೊಂಡಿದ್ದೇವೆ. ಯಾರಿಗೂ ಹೇಳಬಾರದು; ಮಾಡಿ ತೋರಿಸಬೇಕು ಅಂತ. (ಸ್ವಪ್ರಶಂಸೆಗಲ್ಲ ಈ ಮಾತು, ಕೇವಲ ನಾವು ಆಚರಿಸುತ್ತಿರುವುದನ್ನು ಹೇಳಲು ಅಷ್ಟೆ. ಅಲ್ಲದೇ ಇದು ನಡೆದ ಘಟನೆಯಾದ್ದರಿಂದ ನನಗೆ ಹೇಳಲೇಬೇಕು ಅಂತ ಅನ್ನಿಸಿದೆ) ಎಲ್ಲಿಗಾದರೂ ಹೊರಗೆ ಹೋದಲ್ಲಿ (ಉದ್ಯಾನವನ, ಪ್ರೇಕ್ಷಣೀಯ ಸ್ತಳ ಹೀಗೆ) ಅಲ್ಲಿ ನಮ್ಮಿಂದ ಏನೇ ಕಸ ಆದರೂ (ತಿಂಡಿ ತಿಂದ ಪೇಪರ್ ತಟ್ಟೆಗಳು, ನೀರಿನ ಲೋಟ ಇತ್ಯಾದಿ) ನಾವೇ ಅವನ್ನು ಆರಿಸಿ, ಒಂದು ಚೀಲಕ್ಕೆ ಹಾಕಿ ಅದನ್ನು ಅಲ್ಲಿಯೇ ಎಲ್ಲಾದರೂ ಒಂದು ಕಸದ ಬುಟ್ಟಿಗೆ ಹಾಕುತ್ತೇವೆ. ಇದೇ ರೀತಿ ಇನ್ನೂ ಹಲವು ಸಣ್ನ ಪುಟ್ಟ ಸಂಗತಿಗಳನ್ನು ರೂಢಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೀವಿ. ಇದು ಎಷ್ಟು ಪರಿಣಾಮಕಾರಿಯಾಗಿದೆ ಅಂದರೆ, ಹೋದ ವರ್ಷ ಒಂದು ಪ್ರವಾಸ ಹೋಗಿದ್ದಾಗ, ಒಂದು ಜಾಗದಲ್ಲಿ ನಾವು ತಿಂಡಿ ತಿನ್ನಲು ಕುಳಿತೆವು. ಇನ್ನೂ ಸುಮಾರು ಜನ ಅಲ್ಲೇ ತಿಂಡಿ ತಿನ್ನುತ್ತಿದ್ದರು. ತಿಂಡಿ ತಿಂದ ನಂತರ ನಾವು ಮಾಮೂಲಿನಂತೆ ಎಲ್ಲ ಕಸವನ್ನೂ ಚೀಲವೊಂದಕ್ಕೆ ಹಾಕುವುದನ್ನು ನೋಡಿ, ನಮ್ಮ ಪಕ್ಕದಲ್ಲಿ ತಿಂಡಿ ತಿನ್ನುತ್ತಿದ್ದ ಇನ್ನೊಂದು ಗುಂಪಿನಲ್ಲಿದ್ದ ಚಿಕ್ಕ ಹುಡುಗನೊಬ್ಬ ಬಂದು "ಅಂಕಲ್, ನನಗೂ ಒಂದು ಕವರ್ ಕೊಡಿ. ನಾನೂ ನಮ್ಮ ಕಸ ಆರಿಸಿ ಹಾಕುವೆ" ಅಂದ. ಎಲ್ಲರಿಗೂ ಎಷ್ಟು ಆಶ್ಚರ್ಯವಾಯಿತು ಅಂದರೆ, ನೀವೇ ಯೋಚಿಸಿ, ಎಲ್ಲಕ್ಕಿಂತ ಮೊದಲು ಅದು ಪ್ರೇರಣೆ ನೀಡಿದ್ದು ಒಂದು ಎಳೆಯ ಮನಸ್ಸಿಗೆ! ನಾವೇನೂ ಅಲ್ಲಿ ಭಾಷಣ ಮಾಡಿರಲಿಲ್ಲ. ನಮ್ಮ ಪಾಡಿಗೆ ನಾವು ಮಾಡಿದ್ವಿ ಅಷ್ಟೆ.

ಅಂದಿನಿಂದ ನನ್ನ (ನಮ್ಮ) ನಂಬಿಕೆ ಇನ್ನಷ್ಟು ಬಲವಾಗಿದೆ. ನಾವೇ ಮಾಡಿ ತೋರಿಸುವುದು ಎಲ್ಲಕ್ಕಿಂತ ಸುಲಭ, ಸರಳ ಮಾರ್ಗ ಅಂತ.

- ಶ್ಯಾಮ್ ಕಿಶೋರ್

Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು

H.S.R.Raghavendra Rao's picture

ಇಲ್ಲಿರುವುದು ಬಹಳ ಸರಿಯಾದ ಅಭಿಪ್ರಾಯ. ಇದು ವಿದ್ಯಾವಂತ ನಾಗರಿಕರ ಕನಿಷ್ಠ ಕರ್ತವ್ಯ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ನಗರ ನೈರ್ಮಲ್ಯವನ್ನು ಕೆಡಿಸುತ್ತಿರುವವರ ಸಮಸ್ಯೆ ಬೇರೆಯದೇ ಆಗಿದೆ. ಇಂಥ ತಿಳಿವಳಿಕೆಯನ್ನು ಮೂಡಿಸುವುದರಲ್ಲಿ ನಮ್ಮ ವಿದ್ಯಾಭ್ಯಾಸ ಮತ್ತು ಕಾನೂನುಗಳು ವಿಫಲವಾಗಿವೆ. ಇಂಥ ಅಭ್ಯಾಸಗಳು ಮೊದಲು ಭಯದಿಂದಲೇ ಶುರುವಾದರೂ ಕ್ರಮೇಣ ನಾವು ಅವುಗಳಿಗೆ ಹೊಂದಿಕೊಳ್ಳುತ್ತೇವೆ. ಏಕೆಂದರೆ, ಇದು ನೈತಿಕತೆಗಿಂತ ಭಿನ್ನವಾದ ಒಳ್ಳೆಯ ಅಭ್ಯಾಸ ಮತ್ತು ದುರಭ್ಯಾಸಗಳ ಪ್ರಶ್ನೆ.

H.S.Raghavendra Rao

Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು

ಶ್ಯಾಮ ಕಶ್ಯಪ's picture

ಶ್ಯಾಮ್ ಕಿಶೋರ್ ಮತ್ತು ರಾಘವೇಂದ್ರರಾಯರ ಅನಿಸಿಕೆಗಳಿಗೆ ಧನ್ಯವಾದಗಳು. ನಮ್ಮಲ್ಲಿ ಸಿವಿಕ್ ಸೆನ್ಸ್ ಹಿಂದಿನ ತಲೆಮಾರುಗಳಲ್ಲಿ ಹೇಗಿತ್ತೋ ನಾ ಕಾಣೆ, ಆದರೆ ಈಗಂತು ತೀರ ಕೆಟ್ಟು ಹೋಗುತ್ತಿರುವುದು ದಿನನಿತ್ಯ ಕಾಣುತ್ತಲೇ ಇರುತ್ತೇವೆ. ಆದರೆ ಇಲ್ಲಿ ನನ್ನ ಉದ್ದೇಶವು ಬಹಳ obvious ಆಗಿ ಕಾಣುವ ನಮ್ಮ ಭಂಡತನವಾಗಲಿ ಅಥವ ನಮ್ಮ ದುರಾಭ್ಯಾಸಗಳ ಚರ್ಚೆಯಾಗಲೀ ಅಲ್ಲ. ಅವುಗಳ ವಿಷಯದಲ್ಲಿ ಮಾತಾಡುವ ಅಗತ್ಯವೇ ಇಲ್ಲ. ಶ್ಯಾಮ್ ಕಿಶೋರ್ ಹೇಳುವಂತೆ ಬರೆಯುವುದಕ್ಕಿಂತ ನಮ್ಮನ್ನು ನಾವು ಸರಿಪಡಿಸಿಕೊಳ್ಳುವುದೇ ಹೆಚ್ಚು ಸೂಕ್ತ.

ಆದರೆ ಮೇಲೆ ನಾನು ಕೊಟ್ಟ ಉದಾಹರಣೆಗಳಲ್ಲಿ ತಕ್ಷಣಕ್ಕೆ ಸರಿ/ತಪ್ಪುಗಳ ನಿರ್ಧಾರವಾಗಲೀ ನಮ್ಮ ಕೃತ್ಯದಿಂದಾಗುವ ಹಾನಿಯಾಗಲಿ ಅಥವ ಸರಿಪಡಿಸಿಕೊಳ್ಳುವ ಕ್ರಮವಾಗಲೀ ಹೊಳೆಯುವುದಿಲ್ಲ, ನಾವು ಯೋಚಿಸಿಕೊಳ್ಳುವುದಕ್ಕೂ ಹೋಗುವುದಿಲ್ಲ. ನಮ್ ಮನೆಯನ್ನೊಡಗೂಡಿದಂತೆ ಎಲ್ಲರ ಮನೆಗಳಲ್ಲೂ ಕಾಣಬಹುದಾದಂತದ್ದೇ ವಿಚಾರಗಳು ಮತ್ತೆ.

ಸಿವಿಕ್ ಸೊಸೈಟಿಗಳಲ್ಲಿ ಇಲ್ಲಿ ಬರೆದಿರುವ 'public commons' ಬಹುಚರ್ಚಿತ ವಿಚಾರವೇ.. ಆದರೆ ಅದು ಬಳಕೆದಾರರ ದೃಷ್ಟಿಕೋನದಿಂದ, ಖಾಸಗೀಕರಣದ ಚರ್ಚೆಯಲ್ಲಿ ಕಾರ್ಪೊರೇಟ್‍ಗಳ ಜವಾಬ್ದಾರಿ ಮುಂತಾದ ಸ್ವಂತವನ್ನು ಬದಿಗಿಟ್ಟು ಯೋಚಿಸುವ ವಿಷಯಗಳಲ್ಲಿಯೇ ಉಲ್ಲೇಖಿತವಾಗುತ್ತದೆ ವಿನ: ಅದನ್ನು ವೈಯುಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕೇವಲ ಕಲವರ 'ಪ್ರಗತಿಪರತೆಯ ಶೋಕಿ'ಯಾಗಿಯೇ ಉಳಿದಿದೆ. ಉದಾಹರಣೆಗೆ ಶ್ಯಾಮ್ ಕಿಶೋರ್ ಪ್ರಸ್ತಾಪಿಸಿದ ಮಳೆಕೊಯ್ಲು. ಇದಲ್ಲದೇ ಇದೇ ತರಹದ ಇನ್ನು ಹಲವು ಬಗೆಯ ಫ್ಯಾಷನ್ನುಗಳಿವೆ ಪ್ರಗತಿಪರ circlesನಲ್ಲಿ. ಇವು ಹೀಗೆ ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಅನುಷ್ಠಾನಕ್ಕೆ ಬಂದಿರುವುದೇ ಸಮಸ್ಯೆ. ಅದಕ್ಕೇ ಶೋಕಿ, ಫ್ಯಾಷನ್ನುಗಳಾಗಿಯೇ ಉಳಿದಿವೆ ಅಂದಿದ್ದು. ಇದರಲ್ಲಿ ಬದಲಾವಣೆ ಅಗತ್ಯ, ಅನಿವಾರ್ಯ ಕೂಡ.

ಹಾಗೆಯೇ ಇಲ್ಲ ವಿಷಯಗಳಲ್ಲಿಯೂ ತಂತ್ರಜ್ಞಾನ ನಮ್ಮ ನೆರವಿಗೆ ಬರುತ್ತದೆ ಎಂದು ನಂಬಬಾರದು, ಕೆಲವೊಮ್ಮೆ ನಮ್ಮ ಕೆಲವು ಬೇಕುಗಳನ್ನು ತ್ಯಜಿಸಲೂಬೇಕಾಗಬಹುದು, ಇದಕ್ಕೆ ತ್ಯಾಗ ಅಗತ್ಯ ಅಂತ ನನ್ನ ಅನಿಸಿಕೆ.

ಶ್ಯಾಮ ಕಶ್ಯಪ
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು

ASHOKKUMAR's picture

ವಿದ್ಯುತ್ ಬಳಕೆ ಬಗ್ಗೆ ಒಂದು ವಿಚಾರ: ವಿದ್ಯುತ್ ಕಡಿತ ಮಾಡುವುದು peak hour ಬೇಡಿಕೆ ಪೂರೈಸಲು ಸಾಧ್ಯವಾಗದಾಗ. inverterನ್ನು charge ಮಾಡುವುದು non-peak hourನಲ್ಲಿ. ಹಾಗಾಗಿ ಇದು ಸಮಸ್ಯೆ ತರದು ಅಲ್ಲವೇ?

Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು

ಶ್ಯಾಮ ಕಶ್ಯಪ's picture

Non peak hourನಲ್ಲಿ ಇನ್ವರ್ಟಾರ್ ಚಾರ್ಜ್ ಆದರೆ Peak hourನಲ್ಲ ಖಂಡಿತ ಬಳಕೆ ಕಡಿಮೆಯಾಗುತ್ತದೆ. ಆದರೆ ಇದರಿಂದ ದಿನದ ಇರುವ Demand, non peak hourಗಳಲ್ಲಿ ಹಂಚಿಹೋಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ. ಇಡೀ ಕೇರಿನವರೆಲ್ಲ ಹೀಗೆ non peak hourಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುತ್ತಿದ್ದರೆ ಅದೂ ಕೂಡ peak hour ನಂತೆಯೇ ಆಗುತ್ತದೆಯಷ್ಟೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು

manju mysooru's picture
 ಶ್ಯಾಮ್,
ಬಹಳ ಉತ್ತಮವಾದ ವಿಶ್ಲೇಷಣೆ. ಇದಕ್ಕಿಂತ ಉತ್ತಮವಾಗಿ ಹೇಳಲು/ಬರೆಯಲು ಸಾಧ್ಯವಿಲ್ಲ ಅನ್ಸತ್ತೆ!

Re: ನಾಗರೀಕ ಜವಾಬ್ದಾರಿಗಳು

anupkumart's picture

ನೀವು ಹೇಳಿದ್ದು ಸರಿಯಿದೆ. ಆದರೆ ಈ ಸಮಸ್ಯೆಗೆ ಏನು ಮಾಡುವುದು?

ನಮ್ಮಲ್ಲಿರುವ ಎಲ್ಲಾ ರಾಜಕಾರಣಿಗಳೂ ಭ್ರಷ್ಟರಾಗಿರುವಾಗ ನಾವು ಮತ ಚಲಾಯಿಸಿದರೂ ಚಲಾಯಿಸದಿದ್ದರೂ ಅಧಿಕಾರಕ್ಕೆ ಬರುವವನು ಒಬ್ಬ ಅಯೋಗ್ಯನೆ.

ನನಗೆ ತಿಳಿದ ಮಟ್ಟಿಗೆ ನಮ್ಮಲ್ಲಿ ಒಗ್ಗಟ್ಟು ಕಡಿಮೆ (ಇಲ್ಲವೇ ಇಲ್ಲ ಅನ್ನಿಸುತ್ತಿದೆ). ಹಾಗಾಗಿ ಇಷ್ಟೆಲ್ಲಾ ತೊಂದರೆಗಳು. ಕಳೆದ ವಾರ ಬಸ್ಸಿನ ದರ ಇಳಿಕೆ ಆಗಲಿಲ್ಲ. ನಾವೆಲ್ಲ ಸುಮ್ಮನೆ ಇದ್ದೇವೆ. ಇದೇ ಬೇರೆ ರಾಜ್ಯದಲ್ಲಾಗಿದ್ದಿದ್ದರೆ ಕತೆಯೇ ಬೇರೆಯಾಗುತ್ತಿತ್ತು.

ನಮ್ಮ ಸಮಾಜದಲ್ಲಿ ಹೇಗಿದೆ ಅಂದರೆ, ಶ್ರೀಮಂತರು ಶ್ರೀಮಂತರಾಗಿಯೇ, ಬಡವರು ಬಡವರಾಗಿಯೇ, ಹಳ್ಳಿಯವರು ಹಳ್ಳಿಯವರಾಗಿಯೇ, ಭ್ರಷ್ಟಾಚಾರಿಗಳು ಭ್ರಷ್ಟಾಚಾರಿಗಳಾಗಿಯೇ ಇರುತ್ತಾರೆ ! ಸಂಪದ ತಂಡದಾರು ಕೆ.ಎಸ್.ನಿಸ್ಸಾರ ಅಹಮದರನ್ನು ಸ್ಪಂದಿಸಿದ್ದಾಗ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.