~
ಶಹಬ್ಬಾಶ್ ಮುಂಬೈಕಾರ್!
ಮುಂಬೈನಲ್ಲಿ ಜೂನ್ 11, 2006 ರ ಸಂಜೆ 6-20 ರಿಂದ 6-32 ರ ವರೆಗೆ ಕೇವಲ ಹನ್ನೆರಡೇ ನಿಮಿಷಗಳಲ್ಲಿ 7 ಬಾರಿ ಸಂಭವಿಸಿದ ಭಾರಿ ಸ್ಫೋಟಕ್ಕೆ 200ಕ್ಕೂ ಹೆಚ್ಚು ಮುಗ್ಧ ಜನರು ಸಾವನ್ನಪ್ಪಿರುವ ಸುದ್ದಿ ಬೆಳಗಿನ ಪತ್ರಿಕೆಗಳಲ್ಲಿ ಅಚ್ಚಾಗಿ ಅದರ ಶಾಯಿ ಆರುವ ಮುನ್ನವೇ ಜುಲೈ 12ರ ಬೆಳಗ್ಗೆ ಅಲ್ಲಿನ ಜನಜೀವನ ಮಾಮೂಲಿ ಸ್ಥಿತಿಗೆ ಬಂದಾಗಿತ್ತು.
ಅದೇ ಮುಂಬೈ ಸೆಂಟ್ರಲ್-ವಿರಾರ್ ಮಾರ್ಗದ ರೈಲುಗಳಲ್ಲಿ ಜನ ಮತ್ತೆ ತಮ್ಮ "ರೋಜ್ ಕಾ ರೋಟಿ" ಗಾಗಿ ಪಯಣ ಬೆಳೆಸಿದರು. ನಿನ್ನೆಯ ಘಟನೆಗೆ ಬೆದರಿ ಯಾರೂ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಬಹುತೇಕ ಎಲ್ಲಾ ಕಚೇರಿಗಳಲ್ಲಿ ಮಹಿಳೆಯರೂ ಸೇರಿದಂತೆ ಹಂಡ್ರೆಡ್ ಪರ್ಸೆಂಟ್ ಅಟೆಂಡೆನ್ಸ್. ಅದೇ ಮುಂಬೈಕಾರರ ಸ್ಪೆಶಾಲಿಟಿ.
ಇದೇ ನಮ್ಮ ಬೆಂಗಳೂರಿನಲ್ಲಾಗಿದ್ದರೆ?
ಘಟನೆಯ ಹಿಂದೆಯೇ ಬಂದ್‌ಗೆ ಕರೆ. ಪೊಲೀಸರತ್ತ ಕಲ್ಲು ತೂರಾಟ, ಹಿಂಸಾಚಾರ. ಶಾಲಾ-ಕಾಲೇಜುಗಳಿಗೆ ರಜೆ. ಅಂಗಡಿ-ಮುಂಗಟ್ಟುಗಳಿಗೆ ಅಘೋಷಿತ ಬಂದ್. ಉಗ್ರಗಾಮಿಗಳ ದುಷ್ಕೃತ್ಯಕ್ಕಿಂತಲೂ ನಮ್ಮವರ ಉಪಟಳವೇ ಸಹಿಸದಂತಾಗಿ ಬಿಡುತ್ತಿತ್ತು.
ಮುಂಬೈನಲ್ಲಿ ನಿನ್ನೆ ಬಾಂಬ್ ಸ್ಫೋಟಿಸಿದಾಗಿನಿಂದ ನಡೆದ ಬೆಳವಣಿಗೆಗಳನ್ನು ನೋಡಿದರೆ ಮುಂಬೈಗರಿಂದ ನಾವು ಕಲಿಯಬೇಕಿರುವುದು ತುಂಬಾ ಇದೆ ಅನ್ನಿಸುತ್ತದೆ.
ಘಟನಾ ಸ್ಥಳಕ್ಕೆ ಪೊಲೀಸರು ತಲುಪುವ ಮೊದಲೇ ರೇಲ್ವೆ ಹಳಿಯ ಅಕ್ಕಪಕ್ಕದ ಮನೆಯಲ್ಲಿದ್ದವರು ಜನರ ನೆರವಿಗೆ ಧಾವಿಸಿಯಾಗಿತ್ತು. ತೀವ್ರವಾಗಿ ಗಾಯಗೊಂಡವರಿಗೆ ಕೆಲವರು ಸ್ಥಳದಲ್ಲೇ ಶುಶ್ರೂಷೆ ಮಾಡಿದರೆ, ಇನ್ನು ಹಲವರು ತಮ್ಮ ಮೊಬೈಲ್ ಫೋನ್ ನೀಡಿ ಅವರ ಮನೆಯವರೊಂದಿಗೆ ಮಾತನಾಡಲು ಸಹಾಯ ಮಾಡುತ್ತಿದ್ದರು. ಸತ್ತ ನತದೃಷ್ಟರ ಮೃತದೇಹಗಳನ್ನು ಸಾಗಿಸಲು ಕೆಲವರು ತಮ್ಮ ಮನೆಯಲ್ಲಿನ ಬೆಡ್ ಶೀಟ್ ಒದಗಿಸಿದರು, ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ದಾರಿಪಾಲಾಗಿದ್ದ ಜನರಿಗೆ ತಮ್ಮ ಸ್ವಂತ ವಾಹನಗಳಲ್ಲಿ ಮನೆ ಮುಟ್ಟಿಸಿದವರು ಇನ್ನಾರೋ.
ಒಬ್ಬರಿಗೊಬ್ಬರಿಗೆ ನಂಟಿಲ್ಲ. ಆದರೂ ಊರೆಲ್ಲಾ ನೆಂಟರು. ಮುಂಬೈ ಮಣ್ಣಿನ ಗುಣವೇ ಅಂಥದ್ದು. ಕ್ಷಣಮಾತ್ರದಲ್ಲಿ ಅದು ನಿಮ್ಮನ್ನು ಆತ್ಮೀಯರನ್ನಾಗಿಸಿಬಿಡುತ್ತದೆ.
ಸ್ಫೋಟದ ಗಾಯಾಳುಗಳಿಗೆ ರಕ್ತದ ಅಗತ್ಯವಿದೆ ಎಂದು ರೇಡಿಯೊ-ಟಿವಿಗಳಲ್ಲಿ ಪ್ರಸಾರವಾಗಿದ್ದೇ ತಡ. ಮುಂಬೈ ಆಸ್ಪತ್ರೆಗಳಿಗೆ ರಕ್ತದಾನಿಗಳ ಪ್ರವಾಹವೇ ಹರಿದು ಬಂತು. ರಕ್ತದ ಬಾಟಲಿಗಳು ತುಂಬಿ ತುಳುಕುವಷ್ಟು ರಕ್ತ ಭರ್ತಿಯಾಯಿತು. ಕೊನೆಗೆ ಆಸ್ಪತ್ರೆಯವರೇ "ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವಷ್ಟು ರಕ್ತ ಸಂಗ್ರಹವಾಗಿದೆ. ಸದ್ಯಕ್ಕೆ ರಕ್ತದ ಅವಶ್ಯಕತೆಯಿಲ್ಲ" ಎಂದು ಮಾಧ್ಯಮಗಳ ಮೂಲಕ ತಿಳಿಸಿ, ಒತ್ತಾಯಪೂರ್ವಕವಾಗಿ ರಕ್ತದಾನ ನಿಲ್ಲಿಸಬೇಕಾಯಿತು.
ಅದು ಮುಂಬೈಕಾರರ "ರಕ್ತ ಸಂಬಂಧ".
"ಎಷ್ಟೇ ಬಾಂಬ್ ಗಳು ಸ್ಫೋಟಗೊಂಡರೂ ನಾವು ಧೃತಿಗೆಡುವುದಿಲ್ಲ" ಎಂಬ ಸಂದೇಶ ಸಾರುವಂತೆ ಎಂದಿನಂತೆ ಇಂದೂ ತಮ್ಮ ಜೀವನ ಆರಂಭಿಸಿರುವ ಮುಂಬೈ ಜನರ ಸ್ಫೂರ್ತಿ ಕಂಡು ಉಗ್ರಗಾಮಿಗಳು ಕೈ ಕೈ ಹಿಸುಕಿಕೊಂಡಿರಬೇಕು. ಉಗ್ರರೂ ಮನುಷ್ಯರೇ. ಅವರಿಗೂ ಹೆಂಡತಿ, ಮಕ್ಕಳು, ತಂದೆ, ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಇದ್ದಾರೆ. ಬಾಂಬ್ ದಾಳಿಗೆ ಸಿಲುಕಿ ಸತ್ತವರೂ ಕೂಡ ಇಂಥದೇ ಸಂಬಂಧವಿರುವ ಮನುಷ್ಯರು. ಇವರ ಬಂಧುಗಳ ಶಾಪ ದುಷ್ಟರಿಗೆ ತಟ್ಟದೇ ಇದ್ದೀತೆ? ಮುಂಬಾದೇವಿ ಅವರನ್ನು ಕ್ಷಮಿಸಿಯಾಳೆ?
ಮುಂಬೈನಲ್ಲಿ ಸ್ಫೋಟ ಸಂಭವಿಸಿದ ದಿನವೇ ಶ್ರೀನಗರದಲ್ಲೂ ಸ್ಫೋಟ ಸಂಭವಿಸಿದೆ. ಅಲ್ಲೂ ಕೂಡ ಮುಗ್ಧರ ಮೇಲೆ. ಆದರೆ ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬುದು ನಮಗೆಲ್ಲ ಗೊತ್ತೇ ಇದೆ.
ಮುಗ್ಧ, ಬಡ, ಅಲ್ಪಸಂಖ್ಯಾತ ಹಿಂದೂಗಳನ್ನು ರಾಕ್ಷಸರೂಪಿ ಉಗ್ರಗಾಮಿಗಳು ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಸಾಯಿಸುತ್ತಿದ್ದರೆ, ಅಲ್ಲಿನ ಜನ ಬಹಿರಂಗವಾಗಿ ಎದೆ-ಎದೆ ಬಡಿದುಕೊಂಡು ಉಗ್ರರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ.
ಅದೇ ಮುಂಬೈಗೂ-ಶ್ರೀನಗರಕ್ಕೂ ಇರುವ ವ್ಯತ್ಯಾಸ.
ಮುಂಬೈಕಾರರಿಗೆ ಶಹಬ್ಬಾಶ್ ಎಂದರೆ ಕಾಶ್ಮೀರಿಗಳಿಗೆ ಏನೆನ್ನಬೇಕು?

- ವಿಶ್ವನಾಥ ರವರ ಬ್ಲಾಗ್
- Login or register to post comments
- 2158 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಮತ್ತೆ ಮತ್ತೆ ಓದಬೇಕೆನ್ನಿಸುವ ಭಾವುಕ ಭಾಷೆ ನಿಮ್ಮದು ವಿಶ್ವನಾಥರೆ.
ನಿಮ್ಮ ಬರವಣಿಗೆಯಲ್ಲಿ ಸಾತ್ವಿಕ ಭಾವ ಎದ್ದು ಕಾಣುತ್ತದೆ. ಘಟನೆಗಳ ಸೂಕ್ಷ್ಮತೆ ಅಡಗಿರುತ್ತದೆ. ಓದುಗರಲ್ಲಿ ರೋಮಾಂಚನಗೊಳಿಸುತ್ತದೆ. ಇನ್ನಷ್ಟು ಬರೆಯಿರಿ.
ಅಹೋರಾತ್ರ
aabhariyagiddene
nanna baravanigegalannella nodi bennu thattuththiruva nimage thumba dhanyavadagalu ahoratrare. nimmanthavara protsaha iddare nanage inno bareyuvase.
nimma protsaha, salahe. preeti sada heege irali.
Sadhyavadare nanna blog goo bheti kodi.
http://vishwaputa.blogspot.com
nanna system nalli font samasyeyindagi kannadadalli bareyalagadiddudakke kshameyirali.
namaskara.
-Vishwanath
ಸಲಾಮ್ ಮುಂಬೈ
ಮುಂಬೈಕರ್ಗೆ ಬೆಂಗಳೂರಿಗನ ನಮಸ್ಕಾರಗಳು, ಜೈ ಭಾರತಿ, ಸಲಾಮ್ ಮುಂಬೈ.....
ಬನ್ನಿ ಹೊಸ ನಾಡು ಕಟ್ಟೋಣ
thanks
Sanganagowdre,
Blog odiddakke dhanyavaadagalu.
vishwanath
ಮುಂಬೈ ಸರಣಿ ಸ್ಫೋಟ ! ಜುಲೈ ೨೦೦೬ !
ವಿಶ್ವನಾಥರಿಗೆ ವಂದನೆಗಳು.
ಮತ್ತೊಂದು 'ಸರಣಿ ಬಾಂಬ್' ಸಿಡಿತ. ಮತ್ತೆ ಎಲ್ಲಾ ತಹಬಂದಿಗೆ ಬಂದಿದೆ. ಹೆದರ ಬೇಡಿ. ಇದು ಮುಂಬೈಕರ್ ರಿಗೆ ತಿಳಿದ 'ಜೀವನ ಕಲಾ ಸಹಜ ಯೋಗ' ದ ಕಂಠಪಾಠ !!
ತಟಕು, ಬಾಲಂಗೋಚಿಯಂತಹ ಜಾಗದಲ್ಲಿ, ೬೦% ಗುಡಿಸಲು, ಫುಟ್ಪಾತ್ ಮೇಲೇ ಜೀವಿಸುತ್ತಿರುವ ಜನರು ಈ ಮಂತ್ರವನ್ನು ಪಾಲಿಸದೆ ವಿಧಿಯಿಲ್ಲ ! ದಂಗೆ, ದರೊಡೆ, ಸುಲಿಗೆ, ವಂಚನೆ, ಅಪಘಾತಗಳು, ಪ್ರತಿವರ್ಷದ ಮಳೆಗಳು, ಅರ್ಥಹೀನ ಬಂದ್ ಗಳು,ದೈನಿಂದಿನ ಕಾರ್ಪಣ್ಯದಲ್ಲಿ ಜೀವನೋತ್ಸಾಹ ವನ್ನು ಹೊಂದುವಕಲೆಯನ್ನು ಅವರಿಗೆ ಪ್ರಕೃತಿದೇವಿಯೇ ಕೊಟ್ಟಿರಲಿಕ್ಕೂ ಸಾಕು !
ನಾನು, ೧೯೯೩ ರ, ೧೧-೧೨ ಸರಣಿ ಬಾಂಬ್ ಸ್ಪೊಟದ ಸಮಯದಲ್ಲಿ ಬಹಳ ಹತ್ತಿರದಿಂದ ಇದನ್ನು ನೋಡಿದ್ದೇನೆ. ಮತ್ತೆ, ೩ ವರ್ಷಗಳ ಹಿಂದೆ ಆದ, 'ಘಾಟ್ಕೋಪರ್ ಬಸ್' ನಲ್ಲಿ ಇಟ್ಟ ಬಾಂಬ್ ಪರಿಣಾಮ ಏನು ಕಡಿಮೆಯದೇ ? ಮತ್ತೆ ೨ ನೇ ಬಾರಿ ಘಾಟ್ಕೋಪರ್ ಸ್ಟೇಷನ್ ಬಳಿ ಬಸ್ ಸ್ಟಾಪ್ ನ ಹತ್ತಿರ ಆದ ಸಿಡಿತಕ್ಕೆ ನಾನು ಬಲಿಯಾಗ ಬೇಕಿತ್ತು. ಅದೇನು 'ದೇವರ ದಯ'ವೋ ತಿಳಿಯದು ! ಆ ಬಸ್ಸಿನ ಕ್ಯೂ ನಲ್ಲಿ ನಿಂತಿದ್ದವನು, ಕಾಯಲು ಬೇಸರವಾಗಿ ಹತ್ತಿರ ಇನ್ನೊಂದು 'ಬಸ್ ಸ್ಟಾಪ್' ಗೆ ಹೊಗಿ ಬೇರೆ ಬಸ್ ತೆಗೆದು ಕೊಂಡೆ ! ಮನೆಗೆ ಬಂದು ಕಾಫಿ ಕುಡಿಯಲು ಕುಳಿತಿದ್ದಾಗ ನಮ್ಮ ಪಡೋಸಿನವರು, "ದೆಖೊ ಅಂಕಲ್, ಘಾಟ್ಕೋಪರ್ ಮೆ ಬಂಬ್ ಫುಟ್ ಗಯಾ, ಆಕೆ ದೇಖೋ" (देखो अंकल, घाट्कॊपर मे, बंब फुट गया, आके दॆखोना)ಎಂದು, ಪುಟ್ಟ 'ಅಂಜಲಿ' , ಮನೆಯವರೆಲ್ಲಾ ಕುಳಿತು ನೋಡುತ್ತಿದ್ದ, ಟೀ.ವಿ.ಕಡೆಗೆ ತೋರಿಸಿದಳು. ನನ್ನ ಎದೆ 'ಝಲ್ 'ಎಂದಿತು; ಆ ಬಸ್ ಗಾಗಿಯೇ ನಾನು ಮತ್ತು ನನ್ನಂತೆ ಹಲವರು ಕಾಯುತ್ತಿದ್ದದ್ದು ! 'ಕ್ಯು' ನಲ್ಲಿ ನಿಂತಿದ್ದವರಿಗೆ ಸಿಡಿತದಿಂದ ಬಹಳ ಗಾಯ ವಾಯಿತೆಂದು ನಂತರ ಮಾರನೆದಿನದ 'ದಿನ ಪತ್ರಿಕೆ'ಯಲ್ಲಿ ಓದಿ ತಿಳಿದೆ !
ಇನ್ನು 'ಶ್ರೀನಗ'ರದ ವಿಷಯ ! ಅದೊಂದು ಎಂದೂ ಮುಗಿಯದ, ನಮ್ಮ ದೇಶದ ವೀರ ಸಿಪಾಯಿಗಳನ್ನು ಈ ಅರ್ಥಹೀನ ಕೆಲಸಕ್ಕೆ ಬಲಿಕೊಡುತ್ತಿರುವ "ಹೃವಯ ವಿದ್ರಾವಕ ಕಥೆ," ಏಂದು ವಿವರಿಸಬಹುದೇನೋ !? ಅದರ ಬಗ್ಗೆ ಮಾತನಾಡದಿರುವುದೆ ಮೇಲು ಎಂದು ನನ್ನ ಅಭಿಪ್ರಾಯ !
ರಾತ್ರಿ, ೨ ಘಂಟೆ ಗೆ ಹೆಣ್ಣು ಮಕ್ಕಳು ಕೂಡ ನಿರ್ಭಯವಾಗಿ ರೈಲು, ಟ್ಯಾಕ್ಸಿ ,ಗಳಲ್ಲಿ ಸುತ್ತಾಡುತ್ತಿದ್ದುದ್ದನ್ನು ಜ್ಞಾಪಿಸಿಕೊಂಡರೆ ಬಹಳ ವಿಷಾದವಾಗುತ್ತದೆ ! ಬಹುಶಃ ಇಂದಿನ ಮುಂಬೈ ಹಾಗಿಲ್ಲ ವೆನ್ನುವುದು ನನ್ನಂತಹ ೪೦ ವರ್ಷಕ್ಕು ಮಿಗಿಲಾಗಿ ವಾಸಿಸುತ್ತಿರುವವರ ಅಂಬೋಣ !
ಮತ್ತೊಮ್ಮೆ ಮುಂಬೈಕರ್ ರ "ಜೀವನೋತ್ಸಾಹ"ದ ಹೊನಲಿಗೆ, ಅವರ ಸಹಾಯಹಸ್ತಕ್ಕೆ, ಅವರ ಕಳಕಳೀ ಸ್ವಭಾವಕ್ಕೆ ಶರಣು ! ಸಿದ್ಧಿವಿನಾಯಕನ ಕರುಣೆ ಎಲ್ಲರ ಮೇಲೂ ಇರಲಿ !!, सलाम मुम्बै !
ಪವಾಡ
ಪ್ರಿಯ ವೆಂಕಟೇಶರೇ,
ನಮಸ್ಕಾರ.
Nanna Computer kettu hogiddarinda uttarisalu thadavayithu. Adakkagi kshameyirali.
"ಶಹಬ್ಬಾಶ್ ಮುಂಬೈಕಾರ್" ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ಓದಿದ ಬಳಿಕ ಒಂದುಕ್ಷಣ ದಂಗಾಗಿ ಹೋದೆ. ಮುಂಬೈನಲ್ಲಿ ಸಂಭವಿಸಿದ ಭೀಕರ ಸ್ಫೋಟಗಳಲ್ಲಿ ಒಂದಾದ ಘಾಟ್ಕೋಪರ್ ಬಾಂಬ್ ಸ್ಫೋಟದ ಘಟನೆಯಲ್ಲಿ ನೀವು ಪಾರಾಗಿದ್ದು ಪವಾಡವೆಂದೇ ಹೇಳಬಹುದು. ಉದ್ದ ಕ್ಯೂನಲ್ಲಿ ನಿಲ್ಲಲು ಬೇಸರಿಸಿಕೊಂಡು ಹೋದದ್ದೇ ನಿಮ್ಮನ್ನು ಕಾಪಾಡಿದೆ. ಆದದ್ದೆಲ್ಲ ಒಳ್ಳೆಯದಕ್ಕೆ ಎಂದು ಇದಕ್ಕೇ ಹೇಳುತ್ತಾರೇನೋ.
ಸರ್, ನೀವು ಹೇಳಿದ್ದು ನಿಜ. ಇಕ್ಕಟ್ಟಿನ ಜಾಗದಲ್ಲಿ ಬದುಕುವುದು ಮುಂಬೈಗರಿಗೆ ಅನಿವಾರ್ಯ ಮತ್ತು ರೂಢಿಯಾಗಿಬಿಟ್ಟಿದೆ. ಮುಂಬೈ ಕೇವಲ ಮಹಾರಾಷ್ಟ್ರದ ರಾಜಧಾನಿಯಷ್ಟೇ ಅಲ್ಲ ಅದೊಂದು ಮಿನಿ ಇಂಡಿಯಾ. ಎಲ್ಲಾ ಭಾಷೆ, ಧರ್ಮ, ಜನಾಂಗದ ಜನರನ್ನೂ ನಾವು ಅಲ್ಲಿ ಕಾಣಬಹುದು. ಬಹುಶಃ ಇದೇ ಅವರಿಗೆ ಪರಸ್ಪರ ಸಹಾಯ ಮಾಡಲು ಸ್ಫೂರ್ತಿಯಾಗಿರಬಹುದು.
ನಿಮ್ಮ ಪ್ರೀತಿ-ಪ್ರತಿಕ್ರಿಯೆಗೆ ಧನ್ಯವಾದಗಳು.
ನಮಸ್ಕಾರ.
-ವಿಶ್ವನಾಥ
ಮುಂಬೈಕರ್......
ವಿಶ್ವನಾಥರಿಗೆ ನಮಸ್ಕಾರ. ಹೊಸ ಪರಿಚಯ, ಒಂದು 'ಬಾಂಬ್ ಸ್ಫೋಟ'ದಿಂದ ಆಗಿದೆ ! ಅದು ನಿಮ್ಮ ಪ್ರೀತಿಯ ನಗೆಬುಗ್ಗೆಯ, 'ಹೂವಿನ ಪಟಾಕಿಯಂತಾಗಲಿ. 'ಸುರು- ಸುರು ಬತ್ತಿ' ಯಾಗಲಿ, ಮತಾಪಿನಂತೆ ಪ್ರಜ್ವಲಿಸಲಿ !
ನಾನು ನನ್ನ ಪುಟದಲ್ಲಿ ನೆನ್ನೆ ನೋಡಿದೆ. ಆದರೆ ಅರ್ಥವಾಗಲಿಲ್ಲ. ಕ್ಷಮೆಯಿರಲಿ, ತಡಮಾಡಿ ಸಂಪರ್ಕಿಸಿದ್ದಕ್ಕೆ. ನಿಮಗೆ ತಿಳಿಸಿದಂತೆ ಮುಂಬೈ ಜೀವನ, ಸಂತೆಯಲ್ಲಿ ಜೀವಿಸಿದಂತೆ ! ಎಲ್ಲೆಲ್ಲೂ ಜನ,ಜನ !
ಫ್ಲಾಟ್ ಗಳಲ್ಲಿ ವಾಸಿಸುವ ಜನಕ್ಕೆ, ಒಬ್ಬರು ಸತ್ತರೂ, ಎಷ್ಟು ಕಷ್ಟ ! ಹೆಣ ಸುಡುವವರೆಗೂ, ಓಡಾಡಲು ಜಾಗವೆಲ್ಲಿ ? ಅದರಿಂದ ಪಕ್ಕದಮನೆಯವ, ಶತ್ರುವಾದರು, ಸಹಾಯಕ್ಕೆ ಬರುವುದು, ಮೊದಲು ಅವನೇ ! ಅವನು, ಅವನ ಮಕ್ಕಳು, ಅದೇ ತಟಕು ಜಾಗದಲ್ಲಿ ಹೆದರಿಕೆ ಇಲ್ಲದೆ ಓಡಾಡ ಬೇಕಲ್ಲ ! ಇದನ್ನು 'ವಾಸ್ತವ' ಎನ್ನುವುದಕ್ಕಿಂತ, 'ಅನಿವಾರ್ಯ' ಎನ್ನುವುದು ಉತ್ತಮ, ಎಂದು ನನಗೆ ಅನ್ನಿಸುವುದು.
ಬೇರೆ ಊರಿನಲ್ಲಿ ಹೆಣ ಎತ್ತುವವರೆಗೆ, ಅಲ್ಲಿ -ಇಲ್ಲಿ ಓಡಾಡಿ ಕೊಂಡು ಕಾಲ ಕಳೀಬಹುದೇನೋ ! ಇಲ್ಲಿ ಸಾಧ್ಯವೇ ? ಅಲ್ಲಿ ಸಹಾಯ, ಹೊಂದಾಣಿಕೆ, ಈ ತರಹದ ಪದಗಳು ಕೇಳಿಬರುತ್ತವೆ !
ನಾನು ನಮ್ಮ ಪಡೋಸಿಗಳನ್ನು ಒಂದು ವರ್ಷದಿಂದ ನೋಡಿಲ್ಲ ! ಅವರಿಗೂ, ನನಗೂ ಅದರ ಅಗತ್ಯ ಇದ್ದಂತೆ ತೋರಿಲ್ಲ ! 'ಅನುಕೂಲ ಸಿಂಧು,' ಅಲ್ಲದೆ ಮತ್ತೇನು ?
ಇನ್ನು, ಘಾಟ್ಕೋಪರ್, 'ಬಸ್ಸಿನ ಬಾಂಬ್ ಸ್ಫೋಟ'ದ ಬಗ್ಗೆ : ಸಾಯಂಕಾಲ ಆಫಿಸ್ ಮುಗಿದಮೇಲೆ ಬಸ್ಸಿಗಾಗಿ 'ಕ್ಯು' ನಲ್ಲಿ ನಿಲ್ಲುವುದು, ಎಲ್ಲಾ ಊರಿನಲ್ಲಿಯೂ ಸರ್ವೆಸಾಮಾನ್ಯದ ಸಂಗತಿ. ಏನೊ ದೇವರಿಗೆ ಈ 'ಬಡಪಾಯಿ' ಈಗ ಸಾಯುವುದು ಬೇಡ ಅನ್ನಿಸಿರಬಹುದು ! ಅಲ್ಲವೆ ?
ಕಾಶ್ಮೀರ
ಕಾಶ್ಮೀರದ ಸಮಸ್ಯೆಯೇ ಬೇರೆ. ಅದನ್ನು ಮುಂಬಯಿ ಅಥವಾ ದೇಶದ ಇನ್ನಿತರ ಭಾಗಗಳೊಂದಿಗೆ ಹೋಲಿಸಲಾಗುವುದಿಲ್ಲ. ಸ್ವಾತಂತ್ರ್ಯದ ಸಮಯದಲ್ಲಿ ರಾಜಾ ಹರಿಸಿಂಗರು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಸಮಸ್ಯೆ ಉಲ್ಬಣಗೊಂಡಿತು. ಅದೂ ಅಲ್ಲದೇ ಪಕ್ಕದ ರಾಷ್ಟ್ರಗಳೂ ಇಲ್ಲಿಯ ಜನಗಳಿಗೆ ಸಹಾಯಿಸುತ್ತಿರುವುದರಿಂದ ಉಗ್ರಗಾಮಿ ಚಟುವಟಿಕೆಗಳು ಜಾಸ್ತಿಯಾಯಿತು. ಆ ಪ್ರಾಂತ್ಯದಲ್ಲಿರುವ ಜನಗಳೂ ಸೇರಿರುವುದರಿಂದ ಉಗ್ರಗಾಮಿಗಳನ್ನು ಪ್ರತ್ಯೇಕಿಸುವುದು ಸ್ವಲ್ಪ ಕಷ್ಟವೇ. ಈಗಾಗಲೇ ಆ ಪ್ರಾಂತ್ಯದ ಪಂಡಿತ ಸಮುದಾಯದ ಜನರೆಲ್ಲರೂ ವಲಸೆ ಹೋಗಿಯಾಗಿದೆ. ಇದರ ಬಗ್ಗೆ ಆಶ್ರಯದಲ್ಲಿ ನಾನೊಂದು ಲೇಖನ ಬರೆದಿದ್ದೆ, ಸಮಯವಾದಾಗ ಓದಬಹುದು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net