ಶ್ಯಾಮ ಕಶ್ಯಪ
ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.
ಪೂರ್ವಗ್ರಹಗಳು
ಇದು ನಾನು ಇತ್ತೀಚೆಗೆ ಸಂಪದದಲ್ಲಿ ಬರೆದ ಬ್ಲಾಗ್‍ನ ಒಂದು ವೈಯುಕ್ತಿಕ critic. ಜೊತೆಗೆ http://sampada.net/node/532#comment-689 ನಲ್ಲಿ ಇಸ್ಮಾಯಿಲರ ಅನಿಸಿಕೆಗಳಿಗೆ ಸಂಬಂಧಿಸಿದಂತೆ ನನ್ನ ಯೋಚನೆಗಳು. ಪತ್ರಕರ್ತರು ಬರೆಯುವ ವರದಿಗಳು biased ಆಗಿದ್ದರೂ ಕೊನೇಪಕ್ಷ ಅವರಿಗೆ ಅದರ ಅರಿವಾದರೂ ಇರುತ್ತದೆಯಲ್ಲವೆ. ನಮ್ಮಂತಹ ಜನಸಾಮನ್ಯರು ಯಾವುದೋ ಆದರ್ಶಕ್ಕೆ ಶರಣಾಗಿ ತಮಗೆ ಗೊತ್ತಿಲ್ಲದೇ ತಮ್ಮ ಮಾತುಕಥೆಗಳಲ್ಲಿ ಆ ಆದರ್ಶದ ಪ್ರತಿಪಾದಕರಾಗುತ್ತೇವೆ. ನಮ್ಮ ಲೇಖನಗಳಲ್ಲಿಯೂ ಇದೇ ನ್ಯೂನತೆಗಳಿದ್ದೇ ಇರುತ್ತವೆ. ಸಣ್ಣಪುಟ್ಟ ಕಾರ್ಯಗಳಲ್ಲಿ ಇದರ ಪರಿಣಾಮಗಳು ಹೆಚ್ಚೇನು ಆಗದಿದ್ದರೂ, scientific papers, journals ಮುಂತಾದವುಗಳ ಗತಿಯೇನು? ಇಲ್ಲಿ ಪತ್ರಿಕೋದ್ಯಮದ ಗಂಧವೇ ಇಲ್ಲದ ವಿಷಯಪರಿಣಿತರು ತಮ್ಮ ಪೂರ್ವಗ್ರಹಗಳಿಂದ ಪ್ರೇರಿತರಾಗಿ ಸಮಾಜದ ಮೇಲೆ ಗಾಢವಾದ ಪ್ರಭಾವ ಬೀರಬಹುದಾದ ವಿಷಯಗಳಲ್ಲಿ ತಮ್ಮ ಸ್ವಂತದ evangelical ಆದರ್ಶಗಳನ್ನು ಸೇರಿಸಿ ಬರೆಯುವುದು ಎಷ್ಟರ ಮಟ್ಟಿಗೆ ಸರಿ... ಉದಾಹರಣೆಗೆ ನನ್ನ ಲೇಖನಗಳಲ್ಲಿ ಸಮಾಜವಾದ ಕಮ್ಯೂನಿಸಮ್ ಗಳ ಛಾಯೆ ಕಾಣುವುದನ್ನು ನನಗೆ ತಪ್ಪಿಸಲಾಗುವುದಿಲ್ಲ.. ಆದರೆ ಈ ಬರಹಗಳಲ್ಲಿ ಬರುವ ವಾದಗಳು ಇದೇ ಸರಿ ಎಂಬಂತೆ ತೋರುವುದು ಓದುಗರ ಮನಸ್ಸನ್ನು ಈ ಆದರ್ಶಗಳತ್ತ ಸೆಳೆಯುವ cheap ವಿಧಾನವಾಗಿರುತ್ತವೆ. ವಿಷಯದ ಬಗ್ಗೆ ಆಳವಾದ ಜ್ಞಾನವಿರುವಂತೆ ಬರೆಯುವ ಲೇಖಕ, ವಿಷಯದ ಜೊತೆಗೇ ತನಗೆ ಅಷ್ಟು ಚೆನ್ನಾಗಿ ಗೊತ್ತಿರದ ಆದರ್ಶಗಳನ್ನು ಗೊತ್ತಿಲ್ಲದೇ (ಅದರ ಮೋಹದಿಂದ ಆಕರ್ಷಿತನಾಗಿ) ಸೇರಿಸುತ್ತಾನೆ. ವಿಷಯದ ಮಹತ್ವ ಮರೆತು ಕೊನೆಗೆ ಇದು ಆದರ್ಶಗಳ ಸಮರವಾಗುತ್ತದೆ. ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆ outlook ಪತ್ರಿಕೆಯಲ್ಲಿ ಬಂದ ಒಂದು ಲೇಖನ. ಲೇಖಕರು ಹೇಳಬೇಕಾದದ್ದು, ಭಾರತದಲ್ಲಿ ಅಭಿವೃದ್ಧಿ ಕೇವಲ ನಗರದ elite ಗಳಿಗೆ ಸೇರಿದೆ. ಗ್ರಾಮೀಣ ಭಾರತ ಇನ್ನೂ ಕಡುಬಡತನದಲ್ಲಿದೆ. ಆದರೆ ಪತ್ರಕರ್ತರಿಗೆ ಇದರ ಯೋಚನೆಯೇ ಇಲ್ಲ. ಗ್ರಾಮೀಣ ಭಾರತವನ್ನು ಇವರು ಕಡೆಗಣಿಸಿದ್ದಾರೆ ಎಂದು.ಅವರು ಕೊಡುವ ಉದಾಹರಣೆಗಳು ಮಾತ್ರ, ಅವರ ಪೂರ್ವಗ್ರಹದಿಂದಲೋ ಎಂಬಂತೆ ಕೇವಲ ಆಂಧ್ರ ಮತ್ತು ಅದೇ ತರಹದ ಬಲ ಪಂಥೀಯ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಸಂಬಂಧಿಸಿರುವಂತಾದ್ದು. ಬಂಗಾಲ ಅಥವ ಕೇರಳದಲ್ಲಿ ಸಾಕಷ್ಟು ಬಡತನ ಮತ್ತು ಇತರ ನ್ಯೂನತೆಗಳಿದ್ದರೂ ಇವುಗಳನ್ನು ಲೇಖಕ ಪ್ರಸ್ತಾಪಿಸುವುದಿಲ್ಲ. ಸೂಕ್ಷ್ಮವಾಗಿ ನೋಡಿದರೆ, ಲೇಖಕರ bias ಎದ್ದು ಕಾಣುತ್ತದೆ. ಆದರೆ, ಇದೇ ವರದಿಗೆ ಓದುಗರು ತಮ್ಮ ಅಭಿಮತ ವ್ಯಕ್ತಪಡಿಸಬೇಕಾದರೆ, ಗ್ರಾಮೀಣ ಭಾರತದ ತೊಂದರೆಗಳು ಮುಖ್ಯವಾಗದೇ ಲೇಖಕರ ಪೂರ್ವಾಗ್ರಹಗಳೇ ಹೆಚ್ಚು ಮಹತ್ವ ಪಡೆಯುತ್ತವೆ. ಲೇಖಕರ ವ್ಯಕ್ತಿತ್ವದ ಮೇಲೆ ದಾಳಿಯಾಗುತ್ತದೆ. ಆದರ್ಶಗಳಲ್ಲಿ ಯಾವುದು ದೊಡ್ಡದು, ಯಾವುದು ಕ್ಷುಲ್ಲುಕ ಎಂಬುದರ ಚರ್ಚೆಗಳು ಶುರುವಾಗುತ್ತವೆ. ಆದರೆ ಗ್ರಾಮೀಣ ಭಾರತದ ಪರಿಸ್ಥಿತಿ (ಕೊನೆಗೆ ಸತ್ಯವಾಗು ಉಳಿಯುವುದೂ ಇದೊಂದೇ) ಓದುಗರಿಗೆ ಮರತೇ ಹೋಗುತ್ತದೆ. ಜಗತ್ತಿನಲ್ಲಿ ಇಂದು ನಾವು ಸೆಣೆಸುತ್ತಿರುವ ಮಹತ್ತರ ತೊಂದರೆಗಳಲ್ಲೆಲ್ಲಾ ತಳದಲ್ಲಿ ಮನುಕುಲ ಎದುರಿಸುತ್ತಿರುವ ನಿಜವಾದ ತೊಂದರೆಗಳಾಗದೆ ಐಷಾರಾಮಿನಲ್ಲಿ ಕುಳಿತ ಕೆಲವೇ ಕೆಲವು ಜನರ ವೈಯುಕ್ತಿಕ ಆದರ್ಶಗಳ ಹಣಾಹಣಿಯಷ್ಟೆ. ಆದ್ದರಿಂದ ಪತ್ರಕರ್ತರಿಗಿದ್ದಷ್ಟೇ (ಅಥವ ಇನ್ನೂ ಹೆಚ್ಚು) ಪೂರ್ವಗ್ರಹಗಳು ವೈಯುಕ್ತಿಕ ಗುರಿಗಳು ವಿಷಯಪರಿಣಿತರಿಗೂ ಇರುತ್ತವೆ. ಇದರಿಂದಾಗಿ ನಿಜವಾದ ವಿಷಯ ಮುಚ್ಚಿ ಹೋಗುವ ಸಂಭವನೀಯತೆಯೂ ಹೆಚ್ಚೇ. ಇದನ್ನು ಶ್ರೀಸಾಮಾನ್ಯ ಮೆಟ್ಟಿನಿಲ್ಲಬೇಕಾದರೆ ಅವನ ಅನಿಸಿಕೆಗಳನ್ನು ತೊಡರಿಲ್ಲದೇ ವ್ಯಕ್ತಪಡಿಸುವ ಅವಕಾಶ ಸಿಗಬೇಕು. ಇವತ್ತಿಗೂ ತಂತ್ರಾಂಶಗಳು ಅವನಿಗೆ ತೊಡಕೇ. ಶ್ರೀಸಾಮಾನ್ಯ ಇದಕ್ಕೆ ಹೇಗೆ ಉತ್ತರಿಸುವನೋ ನೋಡಬೇಕು.

- ಶ್ಯಾಮ ಕಶ್ಯಪ ರವರ ಬ್ಲಾಗ್
- Login or register to post comments
- 753 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಪೂರ್ವಾಗ್ರಹಗಳನ್ನು ಕುರಿತು
ಶ್ಯಾಮ ಅವರು ಬಹಳ ಗಹನವಾದ ಪ್ರಶ್ನೆಯನ್ನು ಎತ್ತಿದ್ದಾರೆ. bias ಅಥವಾ ಪೂರ್ವಾಗ್ರಹವಿಲ್ಲದೆ ಬದುಕುವುದು, ಮಾತಾಡುವುದು, ಬರೆಯುವುದು ಸಾಧ್ಯವೇ ಇಲ್ಲವೆಂದು ತೋರುತ್ತದೆ.
ನಾವು ಯಾವುದನ್ನು ವಾಸ್ತವ ಎಂದುಕೊಂಡಿದ್ದೇವೆಯೋ ಅದು ನಮ್ಮ ಮನಸ್ಸಿನೊಳಗೆ ನಾವು ರೂಪಿಸಿಕೊಂಡಿರುವ ಚಿತ್ರಗಳ, ಆಲೋಚನೆಗಳ, ವಿಚಾರಗಳ ಮೊತ್ತವಷ್ಟೇ.
ಅಲ್ಲಮನ ಒಂದು ವಚನದ ಸಾಲು ನೆನಪಿಗೆ ಬರುತ್ತಿದೆ. "ಈರೇಳು ಭುವನಂಗಳು ಕಣ್ಣ ಕರಿಯ ನಾಳದೊಳಗೆ ಅಡಗಿದವು" ಅನ್ನುತ್ತಾನೆ ಅವನು. ಹದಿನಾಲ್ಕು ಲೋಕಗಳೆಂಬವು ನೋಡುವ ಕಣ್ಣಿನೊಳಗೆ ಅಡಗಿವೆಯಂತೆ. ಎಲ್ಲ ಗ್ರಹಿಕೆಯೂ ಹೀಗೆ ನೋಡುವ ಮನಸ್ಸಿನ ಬಣ್ಣ, ಮಿತಿಗಳಿಗೆ ಒಳಪಟ್ಟೇ ಇರುವಾಗ ಪೂರ್ವಾಗ್ರಹವನ್ನು ತಪ್ಪಿಸಿಕೊಳ್ಳುವುದು ಹೇಗೆ?
ನಮ್ಮ ಶಿಕ್ಷಣ, ಸಂಸ್ಕೃತಿ, ಮನೆ, ಎಲ್ಲವೂ "ಬದುಕನ್ನು ಹೀಗೆ ನೋಡಿ" ಎಂದು ಎಳೆಯ ಮನಸ್ಸುಗಳ ಮೇಲೆ ಇಂಪ್ರೆಸ್ ಮಾಡಿ ತಿದ್ದುವುದರಲ್ಲೇ ತೊಡಗಿದೆ ಅಲ್ಲವೆ?
ಬಹುಶಃ ನಮ್ಮಲ್ಲಿ ಪೂವ್ರಾಗ್ರಹಗಳು ಇವೆ ಎಂಬ ಅರಿವನ್ನು ಎಚ್ಚರವಾಗಿಟ್ಟುಕೊಳ್ಳುವುದಷ್ಟೇ ನಮಗೆ ಸಾಧ್ಯ ಅನ್ನಿಸುತ್ತದೆ.
ಅಂಥ ಎಚ್ಚರವೇ ನಮ್ಮ ಮನಸ್ಸನ್ನು ಮುಕ್ತವಾಗಿಡಲು ನೆರವಾಗುತ್ತದೆ. ಅಷ್ಟಕ್ಕೂ "ಮುಕ್ತಿ" ಎಂಬ ಮಾತಿನ ನಿಜವಾದ ಅರ್ಥ, ನನ್ನ ಮಟ್ಟಿಗೆ, ಮನಸ್ಸಿನೊಳಗೆ ನಾವು ಕಟ್ಟಿಕೊಂಡಿರುವ ಸರಿ ತಪ್ಪುಗಳ, ಒಳಿತು ಕೆಡುಕುಗಳ ಪೂವ್ರಾಗ್ರಹಗಳಿಂದ ಮುಕ್ತವಾಗುವುದಲ್ಲದೆ ಬೇರೇನೂ ಅಲ್ಲ.
ಇದು ಬಹುಶಃ ಒಂದು ನಿರಂತರ ಪ್ರಕ್ರಿಯೆ, process. ಆದ್ದರಿಂದಲೇ ಆಧ್ಯಾತ್ಮವಾದಿಗಳು ಹೇಳುವ ಮುಕ್ತಿ ಬರೀ ಸುಳ್ಳು. ಎಂದೋ ಒಂದು ಬಾರಿ, ಯಾವುದೋ ಒಂದು ಕ್ಷಣ ಮುಕ್ತಿ ಸಿಕ್ಕಿಬಿಡುತ್ತದೆ ಅನ್ನುವುದು ಸುಳ್ಳು. ಪ್ರತಿಕ್ಷಣವೂ ನಮ್ಮ ನಮ್ಮ ಪೂರ್ವಾಗ್ರಹಗಳಿಂದ ಬಿಡುಗಡೆ ಪಡೆಯುತ್ತಲೇ ಇರಬೇಕು ಅಂತ ಕಾಣುತ್ತದೆ.
ಶ್ಯಾಮ ಅವರು ಹೇಳುವ ವಿಷಯ ಪರಿಣತರು ಕೇವಲ ವಿಷಯ ಪರಿಣತರಷ್ಟೇ ಹೊರತು ಇಡೀ ತಮ್ಮ ವ್ಯಕ್ತಿತ್ವದ ಬಗ್ಗೆ ಎಚ್ಚರವನ್ನು ಇಟ್ಟುಕೊಂಡ "ವಿದಗ್ಧ"ರು [ವಿ-ದಗ್ಧ=ಚೆನ್ನಾಗಿ ಸುಟ್ಟು, ಬೆಂದು ಪಕ್ವವಾದ] ಅಲ್ಲ. ವಿಷಯವೊಂದರ ಬಗ್ಗೆ ಪರಿಣತಿ ಇಡೀ ಬದುಕಿನ ಬಗ್ಗೆ ಬೆಳೆಯುವ ಪರಿಣತಿಯೂ ಅಲ್ಲ. ತಾವು ಆಯ್ದುಕೊಂಡ ವಿಷಯದ ವ್ಯಾಪ್ತಿಯ ಹೊರಗೆ "ಪರಿಣತರು" ಅತ್ಯಂತ ಎಳಸಾಗಿರುವುದೂ ಸಾಧ್ಯ.
ಪೂರ್ವಾಗ್ರಹವನ್ನು ಮೀರಬೇಕೆನ್ನುವ ಆಸೆ ಪೂರ್ವಾಗ್ರಹವನ್ನು ಅರಿತು ಅದರ ಬಗ್ಗೆ ಎಚ್ಚರವನ್ನು ಬೆಳೆಸಿಕೊಳ್ಳುವುದರಿಂದ ತೊಡಗಿ ಇಡೀ ನಮ್ಮ ಬದಕಿನ ಪ್ರಯೋಗದ ತಳಹದಿಯಾಗಬೇಕೋ ಏನೋ! ಅಥವಾ ಹೊರನೋಟದ ಸ್ಥೂಲ ಪೂರ್ವಾಗ್ರಹಗಳು, ಎಡಪಂಥ, ಬಲಪಂಥ ಇತ್ಯಾದಿ ಗೊತ್ತಾಗುವ ಹಾಗೆ ನಮ್ಮ ಆಳದ ಪೂರ್ವಾಗ್ರಹಗಳು ಗೊತ್ತೇ ಆಗುವುದಿಲ್ಲವೋ ಏನೋ! ನಮ್ಮಂಥ ಜನಸಾಮಾನ್ಯರು ಪೂರ್ವಾಗ್ರಹಗಳಿಲ್ಲದೆ ಬದುಕುವುದು ಸಾಧ್ಯವಿಲ್ಲವೇ ಇಲ್ಲವೋ ಏನೋ!
ಇಂಥ ಎಲ್ಲ ಆಲೋಚನೆಗಳನ್ನು ಶ್ಯಾಮ ಅವರ ಬರಹ ಪ್ರೇರಿಸಿತು.