ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಜಾಗತೀಕರಣದ ಸಂದರ್ಭದಲ್ಲಿ ದೇಶಪ್ರೇಮ, ಸ್ವಾವಲಂಬನೆ

ಸೂಚನೆ:
ಈ ತರಹದ ವೈಯುಕ್ತಿಕ ಅನಿಸಿಕೆಗಳನ್ನು ಹೊತ್ತುಗೊತ್ತಿಲ್ಲದೆ ಹಿಂದು ಮುಂದಿಲ್ಲದೇ ಪುರಾವೆಗಳಿಲ್ಲದೇ ಹಾಕುವುದು ಸರಿಯಲ್ಲ. ಆದರೆ ಮನಸ್ಸು ಅಪಕ್ವ ಮತ್ತು ಅಪೂರ್ಣವಾಗಿದ್ದಾಗ ಇರುವ ಯೋಚನೆಗಳನ್ನು ಹೊರಹಾಕಿದರೆ ಮುಂದೆ, ಬೆಳೆದು ಬಂದ ದಾರಿಯನ್ನು ನೋಡಲು ಅನುಕೂಲವಾಗುತ್ತದೆ. ಆದ್ದರಿಂದ ಇಗೋ ಇಲ್ಲಿದೆ, ಅರ್ಧ ಬೆಂದ ಅಂತರಾಳದ ಮಾತುಗಳು.

ಜಾಗತೀಕರಣದ ಸಂದರ್ಭದಲ್ಲಿ ದೇಶಪ್ರೇಮ, ಸ್ವಾವಲಂಬನೆ

"ಪರದೇಶಗಳ ಮೇಲಿನ ವೈರ ಸರಿ, ಆದರೆ ಶಾಂತಿಯುತ ದೇಶಪ್ರೇಮ, ಸ್ವಾವಲಂಬನೆ ಖಂಡನಾರ್ಹ"

ಜಾಗತಿಕ ಮಟ್ಟದಲ್ಲಿ ದೇಶಪ್ರೇಮ ಅಥವ nationalism ಅನ್ನು ತಿರುಚಿ ಅಪ್ರಗತಿಪರವೆಂಬ ಹೊಸ ಮುಖ ಕೊಡಲಾಗುತ್ತಿದೆ. ಮಾತೆತ್ತಿದರೆ ವಿಶ್ವಮಾನವ, global citizen ಎನ್ನುವ abstract ಪದಗಳು ನಮ್ಮ ಮುಖದ ಮೇಲೆರೆಚಲಾಗುತ್ತಿದೆ. ಭಾರತವೆಂದರೆ ಕೇವಲ ಅದರ ಸಾಂಸ್ಕೃತಿಕ ವಿವಿಧತೆ ಕೂಡಿಕೆ ಎಂದು ತಿಳಿದರೆ ಮಾತ್ರ ಈ identity ಸಾಧ್ಯ. ಭಾರತದಂತ ವೈವಿಧ್ಯಮಯ ದೇಶವನ್ನು ಒಂದಾಗಿ ಹಿಡಿದಿರುವುದೇ ಈ ರಾಷ್ಟ್ರೀಯತೆ. ನಮ್ಮನ್ನು ಸಾಂಸ್ಕೃತಿಕ ಅಭ್ಯಾಸಗಳ ಆಧಾರದಿಂದ ಒಡೆಯುವುದು ಬಹು ಸುಲಭ. ಹಿಂದಿ ಏಕೆ? ನಮ್ಮ ಒಡೆಯರ ಭಾಷೆಯಾದ ಇಂಗ್ಲೀಷಿಲ್ಲವೇ, ಭಾರತವೆಂಬ ದೇಶ ಐವತ್ತು ವರ್ಷಗಳ ಹಿಂದೆಲ್ಲಿತ್ತು ಹೀಗೆ ಕೆಲವು ಅಸಂಬದ್ಧ ಪ್ರಶ್ನೆಗಳನ್ನೆತ್ತಿದರೆ ಸಾಕು. ವಿಭಜನೆಯ ಬೀಜವನ್ನು ಮನಸ್ಸಿನಲ್ಲಿ ಬಿತ್ತಿದಂತೆಯೇ..

ಈ ವಿಚಾರದಲ್ಲಿ global gujju ಅಥವ ಜಾಗತಿಕ ತಮಿಳರು ಮೊದಲು ಎಂದು ದೇಶವನ್ನೊಡೆಯುವ ವಾದ ಮಾಡಾಬಹುದಾದರೂ ವಾಸ್ತವದಲ್ಲಿ ನಮ್ಮ ದೇಶದ ಮಿಕ್ಕಾವುದೇ ಜನಾಂಗವೂ ಹಿಂದೇನು ಬಿದ್ದಿಲ್ಲ. ಇಂದು 'ಕನ್ನಡಪ್ರೇಮಿ ಜಾಗತಿಕ ಪ್ರಜೆಗಳ ದೊಡ್ಡ ದಂಡೇ ಇದೆ. ಬರ್ತಾ ಬರ್ತ ಭಾರತೀಯರೂ ಇದನ್ನು ಒಪ್ಪಿಕೊಂಡಿರುವುದು ಕಂಡು ಬರುತ್ತದೆ. ಇವ ಭಾರತಕ್ಕೆ ಏನು ಮಾಡದಿದ್ದರೂ ಪರವಾಗಿಲ್ಲ. ಅಮೇರಿಕೆಗೆ ಹೋಗಿಯೂ ಕನ್ನಡ ಮರೆತಿಲ್ಲವಲ್ಲ; ಕನ್ನಡದಲ್ಲೇ ಬ್ಲಾಗ್ ಮಾಡ್ತಾನೆ, ಕನ್ನಡ ಯುವತಿಯೇ ಬೇಕಂತೆ ಪಾಪ, ಎನ್ನುವ ಹೊಗಳಿಕೆಯ ಮಾತುಗಳು ಹೆಚ್ಚಾಗುತ್ತಿವೆ. ಇಂದು ಕನ್ನಡಿಗನಾಗಿರುವುದಕ್ಕೆ ಮೊದಲು ಭಾರತೀಯನಾಗಿರಬೇಕೆಂಬ ನಿಯಮವಿಲ್ಲ. ರಾಷ್ಟ್ರೀಯತೆಗಿಂತ ನಮ್ಮ (pseudo?) ಸಂಸ್ಕೃತಿಯನ್ನು ಮಾರಾಟ ಮಾಡುವುದು ಸುಲಭ. ಇವನು ಅಮೇರಿಕದಲ್ಲಿದ್ದರೇನಂತೆ? ಅದಕ್ಕೂ ದೆಹಲಿಗೂ ಅಂತರವೇನು? ಅಲ್ಲೇ ಸಂಗೀತ ಕಲೀತಾನಂತೆ, ಅಲ್ಲಿಯೂ ಕೂಡ ಉದಯ ಟೀವಿ ಬರತ್ತಂತೆ, ಅವರ ಮನೆಯ ಹತ್ತಿರವೇ ದೋಸ ಕ್ಯಾಂಪ್ ಇದೆ ಅಂದರೆ ಸಾಕು ಮುಗಿದುಹೋಯಿತು. ಪರದೇಶಿ ಕನ್ನಡಿಗನಿಗೆ ತಾಯ್ನಾಡು ನೆನಪಾದಲ್ಲಿ ತಾಯ್ನಾಡಿನ ಸುಖವನ್ನೊದಗಿಸುವ ಐಷಾರಾಮುಗಳು ಸಿಕ್ಕರೆ ಮುಗಿಯಿತು, ಆ ಪ್ರಜೆಯ ಭಾರತೀಯತೆಯ ಪೂರೈಕೆಯಾಯಿತು, ಮಿಕ್ಕಂತೆ ಅವ ವಿಶ್ವಮಾನವನೇ.

'ದೇಶ' ಎಂಬ ಒಂದು ಯೋಚನೆಯನ್ನು ಒಡೆದರೆ ಏನೇನಾಗಬಹುದು ನೋಡಿ. ನಮ್ಮ ದೇಶದ ಸಾಮಾನು ಸರಂಜಾಮುಗಳನ್ನು ಕೊಳ್ಳಲೇಬೇಕಾಗಿಲ್ಲ. ನಮ್ಮ ದೇಶದಲ್ಲಿರಬೇಕಾಗಿಲ್ಲ, ದೇಶಕ್ಕಾಗಿ ಏನೂ ಮಾಡಬೇಕಿಲ್ಲ, ಆದರೂ ಬೇಕಾದಾಗ ಭಾರತೀಯತೆಯನ್ನು ನಮ್ಮ ಶಕ್ತ್ಯಾನುಸಾರ ಅನುಭವಿಸಬಹುದು. ಆಗ ನಮ್ಮ ದೇಶದ ಉನ್ನತಿಗಿಂತ ವೈಯುಕ್ತಿಕ ತೃಪ್ತಿ ಮುಖ್ಯವಾಗುತ್ತದೆ. 'ನನಗೆ ನಿಮ್ಮ ಪಾನಕ ಹಿಡಿಸುವುದಿಲ್ಲವಪ್ಪ, ನಾನು ಪರದೇಶೀ ಪಾನೀಯವನ್ನೇ ಕುಡಿಯುವುದು', ಅಲ್ಲಿನ ದನವನ್ನೇ ತಿನ್ನುವುದು, ಎಂದರಾಯಿತು. "ಒಂದು ಒಳ್ಳೆಯ product ಅನ್ನು ಅನುಭವಿಸುವ ಹಕ್ಕನ್ನೂ ಕೊಡದ ದೇಶಕ್ಕೋಸ್ಕರ ಇವನು ಯಾಕೆ ಹೊಡೆದಾಡಬೇಕು.. ತನ್ನ ಹೆಂಡತಿ ಮಕ್ಕಳನ್ನು ಸುಖವಾಗಿರುಸುವುದೇ ತಪ್ಪೇ ಹಾಗಾದರೆ" ಎಂದೆನ್ನುವ ವ್ಯಾಪಾರಿ ಇವನ ಹಿಂದೆಯೇ ವಾದ ಮಾಡುತ್ತಾನೆ. ರಾಷ್ಟ್ರೀಯತೆಯೆಂಬ ಒಂದು ಸಮಗ್ರ ವಿಚಾರವನ್ನು ವೈಯುಕ್ತಿಕ ಸ್ವಾತಂತ್ರ್ಯವೆಂಬ ಒಂದು ಸಣ್ಣ ಬೇಜವಾಬ್ದಾರಿ ಪದ ಹೇಗೆ ಸಮರ್ಪಕವಾಗಿ ಕೆಡುಹುತ್ತಿದೆ ನೋಡಿ. ಸ್ವಾವಲಂಬನೆ ಮತ್ತು ರಾಷ್ಟ್ರೀಯತೆ ಸಮ ಸಮವಲ್ಲ ನಿಜ. ಆದರೆ ಸ್ವಾವಲಂಬನೆ ದೇಶಪ್ರೇಮದ ಕನಿಷ್ಠ ಪ್ರಯೋಗ. ಇದೊಂದೇ ದೇಶವನ್ನು ಉದ್ಧಾರ ಮಾಡೀತು ಎನ್ನುವ ಸಂಕುಚಿತ ವಾದವಲ್ಲ ನನ್ನದು. ಆದರೆ ಸ್ವಾವಲಂಬನೆ ದೇಶಪ್ರೇಮಕ್ಕೆ ಅವಶ್ಯವಲ್ಲವೇ.

ಮನುಷ್ಯ ತಾನು ಭಾರತೀಯ ಅಥವ ಕನ್ನಡಿಗ ಎಂದಿನಿಸಿಕೊಳ್ಳಲು ಅವನು ಭೌತಿಕವಾಗಿ ಭಾರತದಲ್ಲಿರಲೇಬೇಕು. ಭಾರತೀಯತೆ ಎಂದರೆ ಜುಬ್ಬಾ ಪೈಜಾಮ ಹಾಕಿ ಅನಿವಾಸಿ ಭಾರತೀಯರೊಂದಿಗೆ ಪಾಟ್-ಲಕ್ ಮಾಡುವುದಲ್ಲ, ಅಥವ ಇಲ್ಲಿಂದ ತಿಂಗಳಿಗೈನೂರು ಡಾಲರ್ ಮನೆಗೆ ಕಳಿಸಿ ಕೈಕಟ್ಟಿ ಕೂರುವುದಲ್ಲ. ಭಾರತ ಎಂಬ 'ಹೊಸದೇಶ'ದ ಬಗ್ಗೆ ಹೆಮ್ಮೆಯಿದ್ದರೆ, ಭಾರತೀಯತೆಯನ್ನು ಆಹ್ಲಾದಿಸಿದಂತೆಯೇ ಅಲ್ಲಿಗೆ ವಾಪಾಸ್ಸಾಗಿ ಅದರ ಸೇವೆಯನ್ನೂ ಮಾಡಬೇಕು. ಭಾರತೀಯತೆಗೆ ಬೆಲೆ ಕಟ್ಟಲಾಗದು, ಕಟ್ಟಲೂಕೂಡದು.

ಎಂದು ಜಾಗತೀಕರಣದ ಪ್ರಗತಿಗೆ ರಾಷ್ಟ್ರೀಯತೆ ಕಂಟಕವೆಂದು ತೋರಿತೋ ಅಂದೇ ದೇಶವನ್ನು ಅದರ ಸಾಂಸ್ಕೃತಿಕ ಆಧಾರದ ಮೇಲೆ ಒಡೆಯಲಾರಂಭಿಸಲಾಗಿದೆ ಎಂದು ನನ್ನ ನಂಬಿಕೆ. ರಾಷ್ಟ್ರಗಳನ್ನು ಮತಗಳಾಧಾರದ ಮೇಲೆ ಒಡೆದಿರುವ ಪರಿಣಾಮವಿಂದು ನಮ್ಮ ಕಣ್ಮುಂದೆಯೇ ಇದೆ. ಇದೇನು ತಾನಾಗಿಯೇ ಆದದ್ದಲ್ಲ. ಇದರ ಹಿಂದೆ ಜಾಗತಿಕ ಮಾರುಕಟ್ಟೆಯನ್ನು ಕಬಳಿಸಲೆತ್ನಿಸಿದ ಹಲವು ಬಲಗಳ ಒಗ್ಗೂಡಿದ ಕೈಯಿದೆ. ವಂದನ ಶಿವ ತಮ್ಮ ಇತ್ತೀಚಿನ ಪುಸ್ತಕದಲ್ಲಿ (India divided) ಹೇಳಿದ್ದಾರೆ, ಗುಜರಾಥಿನ ನರಮೇಧಕ್ಕೂ ಜಾಗತೀಕರಣಕ್ಕೂ ಸಂಬಂಧವಿದೆ, ಜಾಗತೀಕರಣದ ಮೊದಲ ಸಾಂಸ್ಕೃತಿಕ ಹಾವಳಿ fundamentalism ಅಂತ.. ಇಂದಿನ ವಿಶ್ವಮಾನವರಿಗೆ ಇದು ಬಹಳ ಸಂಕುಚಿತ ನೋಟವೆನಿಸಬಹುದು. ಆದರೆ ಯೋಚಿಸಿದಷ್ಟೂ, ಇದೇನಂತಹ absurd ವಿಚಾರಧಾರೆಯೇನಲ್ಲ ಎಂದೆನಿಸುತ್ತಿದೆ.

ನಮ್ಮ ದೇಶ ಸ್ವರ್ಗವೆಂದು ನಾನೂ ಹೇಳುವುದಿಲ್ಲ. ದೇಶಪ್ರೇಮ, ರಾಷ್ಟ್ರೀಯತೆ ಪ್ರತಿಯೊಬ್ಬ ಪ್ರಜೆಯ ಮೇಲೆ ಹೆಚ್ಚಿನ ಜವಾಬ್ದಾರಿ ತರುತ್ತದೆ. ಆ ಜವಾಬ್ದಾರಿ ಕಠಿಣ. ಹಲವು ಹೊಸ ತೊಂದರೆಗಳನ್ನೆದುರಿಸಬೇಕಾಗುತ್ತದೆ, ತ್ಯಾಗ ಮಾಡಬೇಕಾಗುತ್ತದೆ. ಇವೆಲ್ಲಕ್ಕಿಂತ ಸುಲಭ ದಾರಿ ಜಾಗತೀಕರಣ. ಕೈಯಲ್ಲಿ ದುಡ್ಡಿದ್ದರೆ, ತಲೆಯಲ್ಲಿ ಬುದ್ಧಿಯಿದ್ದರೆ ಅತ್ಯಂತ ಐಷಾರಾಮಿನ ಜೀವನವನ್ನು ಇಷ್ಟಬಂದಂತಹ ದೇಶದಲ್ಲಿ ಕಳೆಯಬಹುದು. ಆ ದೇಶದ ಚರಿತ್ರೆ, ಅಲ್ಲಿಯ ಜನತೆಯ ಬಗ್ಗೆ ಆಸಕ್ತಿ, ಆ ದೇಶಕ್ಕಾಗಿ ಪ್ರೇಮ.. ಇದ್ಯಾವುದೂ ಬೇಕಾಗಿಲ್ಲ.
ಆದರೆ ರಾಷ್ಟ್ರೀಯತೆ ಎಂತಹ ಸುಂದರ ವಿಚಾರ, ಮೈಜುಮ್ಮಿಸುವ ಸವಾಲದು. ದಿನಾ ಮನೆಯಲ್ಲಿ home theater ನಲ್ಲಿ american football ನೋಡುವುದರಲ್ಲಿ ತೃಪ್ತಿಯಿರಬಹುದು, ಹಾಗೆಯೆ ಭಾರತದ ಹೊಲಸು ರಾಜಕೀಯವನ್ನು ಪ್ರತಿನಿತ್ಯ ಎದುರಿಸುವುದೂ ಆಹ್ಲಾದಕಾರಿಯೇನಲ್ಲ.. ಆದರೆ ದಿನದಂತ್ಯದಲ್ಲಿ, ಜೀವನದ ಸಂಜೆಯಲ್ಲಿ ಜೀವದ ಆಗುಹೋಗುಗಳನ್ನು ಮೆಲುಕು ಹಾಕಿ.. ನೆಮ್ಮದಿಯ ನಿಟ್ಟುಸಿರು ಬಿಡಲಾಗುವುದು ಸಮಾಜದ ಸೇವೆಯ ಕಾರ್ಯಗಳಿಗೆ ಮಾತ್ರ. ಜೀವನದಲ್ಲಿ ಎಲ್ಲರಿಗೂ ಗೊಂದಲವಿರುತ್ತದೆ ನಿಜ. ಆದರೆ ಈ ಗೊಂದಲಗಳನ್ನು ನಿವಾರಿಸುವಲ್ಲಿ ರಾಷ್ಟ್ರೀಯತೆ ಮಿಕ್ಕೆಲ್ಲ ಭಾವಗಳಿಗಿಂತ ಮುಂದೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಮನಕಲಕುವ ಆಲೋಚನೆಗಳು

ಮಹೇಶ ಭೋಗಾದಿ's picture

ಈ ಪ್ರಬಂಧದಲ್ಲಿ ನಾನು/ವು ತಿಳಿದಿದ್ದರೂ, ಗೊತ್ತಿಲ್ಲದಂತೆ ಇರುವ ಸಂಗತಿಗಳನ್ನು ಕೆದಕಿ, ನನ್ನ/ಮ್ಮ ಮನಸ್ಸಿಗೆ ಆಲೋಚನೆಗಳ ಹುಳಗಳನ್ನು ಬಿಡುತ್ತದೆ.

ಪ್ರಬಂಧದ ಶೈಲಿ ಮತ್ತು ವಸ್ತು ಬಹಳ ಗಂಭೀರವಾಗಿದ್ದರೂ, ಚೆಲುವಾಗಿದೆ. ಇದಕ್ಕೆ ಬರಹಗಾರನಿಗೆ ವಂದನೆಗಳು.

ನನ್ನ ಅನಿಸಿಕೆಯಲ್ಲಿ, ಪ್ರಸ್ತುತ ಸನ್ನಿವೇಶದಲ್ಲಿ ಪ್ರಾಂತೀಯತೆಯೇ ಮರೆಯುತ್ತಿರುವುದು.
DMKಯಿಂದ ತಮಿಳುನಾಡಿಗೆ ಕೇಂದ್ರದ ಹಣ.
TRSಯಿಂದ ಆಂದ್ರಕ್ಕೆ ಕೇಂದ್ರದ ಹಣ.
ಕರ್ನಾಟಕಕ್ಕೆ ಕೊಟ್ಟ ನೇರೆಪರಿಹಾರದ ಹಣ ವಾಪಸ್ ಕೇಳಿಕೆ.

ಹೀಗಿರುವಾಗ ಏನು ಮಾಡಬೇಕು.

ಸವಿಯೊದಗೆ,
ಮಹೇಶ

ಪ್ರಾಂತೀಯತೆ

ಶ್ಯಾಮ ಕಶ್ಯಪ's picture

ಮಹೇಶ,
ಧ್ಯನ್ಯವಾದಗಳು.
ಪ್ರಾಂತೀಯತೆ ಹಾಗು ರಾಜ್ಯಗಳ ಹಕ್ಕಿಗೆ ಹೋರಾಟ ಭಾರತದಂತಹ ಒಕ್ಕೂಟಕ್ಕೆ ಅನಿವಾರ್ಯವೇ. ಆದರೆ ಈ ಹೋರಾಟ ನಮ್ಮ ನ್ಯಾಯಯುತ ಪಾಲಿಗಿರಬೇಕೇ ಹೊರತು ಪರರಾಜ್ಯಗಳು ಮತ್ತವರ ಸಂಸ್ಕೃತಿಗಳ ವಿರುದ್ಧವಾಗಲೀ ಅಥವ ಅಹಮ್ಮಿನ ಸೆಣೆಸಾಗಲೀ ಆಗಬಾರದು.. ನಮ್ಮ ಇಂದಿನ ಪರಿಸ್ಥಿತಿಗೆ ನಾವಲ್ಲದೇ ಬೇರಾರು ಕಾರಣರಲ್ಲ ಹೌದಾ?

ರಾಜ್ಯಗಳ ಸೆಣೆಸಾಟ

ಮಹೇಶ ಭೋಗಾದಿ's picture

ಭಾರತವೊಂದು ರಾಜ್ಯಗಳ ಒಕ್ಕೂಟವೆಂದು ನೀವೆ ಹೇಳಿದ್ದೀರಿ. ನನಗೆ ರಾಷ್ಟ್ರೀಯತೆ, ಭಾರತೀಯತೆ, ರಾಷ್ಟ್ರೈಕ್ಯತೆ ಮುಂತಾದ ಸಂಗತಿಗಳನ್ನು ಚರ್ಚಿಸುವಾಗ, ನಾವು ಕನ್ನಡಿಗರು ನೆನಪಿನಲ್ಲಿಟ್ಟುಕೊಳ್ಳಬೇಕೆನಿಸುವ ಕೆಲವು ವಿಷಯಗಳು:

೧)ನಮ್ಮ ಕನ್ನಡವೂ ರಾಷ್ಟ್ರಭಾಷೆಯೆ, ಅದೂ ಯಾವ ಭಾರತೀಯ ಭಾಷೆಗೂ ಸ್ಥಾನಮಾನದಲ್ಲಿ ಕಡಮೆಯಿಲ್ಲ, ಇರಬಾರದು.
೨)ನಮ್ಮ ಸಂಸ್ಕೃತಿಯ ವಿಷಯದಲ್ಲಿ ಕೇಂದ್ರ ಸರಕಾರ ಯಾವುದಕ್ಕೂ ಕೈಯಾಡಿಸಬಾರದು (ಹಸ್ತಕ್ಷೇಪ)
೩)ಕನ್ನಡ ಚಲನಚಿತ್ರಗಳಿಗೂ ಅಂತರಾಷ್ಟ್ರೀಯ ಮಟ್ಟದ ಮನ್ನಣೆಗೆ ಹಿಂದಿಚಿತ್ರೋದ್ಯಮ ತೊಡಕಾಗಬಾರದು. ನೋಡಿ, ಕಳೆದ ವರುಷ ಕನ್ನಡದ "ಹಸೀನಾ" ಶ್ರೇಷ್ಠಚಿತ್ರವೆಂದು ರಾಷ್ಟ್ರಪಶಸ್ತಿಗಳಿಸಿತ್ತು, ಆದರೆ ಆಸ್ಕರ್‍ಗೆ ಹಿಂದಿಯ ಪಹೇಲಿಯನ್ನು ಆರಿಸಲಾಗಿತ್ತು.

ಕನ್ನಡಿಗರು ಎದುರಿಸುತ್ತಿರುವ ಸವಾಲುಗಳು.
೧) ಜಾಗತೀಕರಣದ ಜೊತೆಗೆ, ದೇಶದ ಹಲವಾರು ಪ್ರದೇಶದಿಂದ ವಲಸೆಬರುತ್ತಿರುವ ಕಾರ್ಮಿಕರು, ವ್ಯಾಪಾರಿಗಳು.
ಉ: ಪೋರಂ, ಬಿಗ್ ಬಜಾರ್‍ ಗಳಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಕನ್ನಡಿಗರಿಗೆ ಎಷ್ಟು ನಷ್ಟ.

ನಮ್ಮೂರಿನಲ್ಲಿ ಗಿರವಿಯಂಗಡಿಯಿಂದ ಶುರುಮಾಡಿದ ಹಿಂದಿಯವರು, ಇಂದು ದಿನಸಿಯಂಗಡಿಯನ್ನು ಅವರೇ ನಡಿಸುವಂತೆ ಮಾಡಿಬಿಟ್ಟಿದ್ದಾರೆ.

೨)ಪರಭಾಷಿಗರ ವಲಸೆಯ ಜೊತೆ, ಅವರ ಸಂಸ್ಕೃತಿಯೂ ವಲಸೆಯಾಗುತ್ತದೆ. ಅವರಿಗೆ ದಸರೆ, ಯೂಗಾದಿ, ಸಂಕ್ರಾಂತಿಗಿಂತ ಹೋಳಿಯೇ ದೊಡ್ಡ ಹಬ್ಬ.

೩)ಬಂದ ವಲಸಿಗರೂ ಎಂದೂ ನಮ್ಮ ಸಂಗೀತ, ಸಾಹಿತ್ಯ, ಚಿತ್ರಗಳು ಕೇಳರು, ಓದರು, ನೋಡರು. ಅವುಗಳಿಗೆ ಪ್ರೋತ್ಸಾಹಿಸರು. ಅಲ್ಲದೆ ಅವರ ಪ್ರದೇಶದ ಸಂಗೀತ ಶಾಲೆಗಳನ್ನು, ಅವರ ಭಾಷಾ ದಿನಪತ್ರಿಕೆಗಳನ್ನು, ಅವರ ಭಾಷಾಚಿತ್ರಗಳಿಗೆ ಉತ್ತೇಜನ ನೀಡುವರು.

ಆದ್ದರಿಂದ ನಮ್ಮತನ, ಕನ್ನಡತನವನ್ನು ಉಳಿಸಲೂ ನಾವೂ ಪ್ರಾಂತೀಯತೆಯನ್ನು ಬೆಳೆಸಲೇಬೇಕು, ಪ್ರಾಂತೀಯ ಮನೋಭಾವನೆಯನ್ನಿಟ್ಟುಕೊಳ್ಳಬೇಕು.

ಹೀಗೆ ಮುಂತಾದವು.....

ಸವಿಯೊದಗೆಗಳು,
ಮಹೇಶ

ಅನಿವಾಸಿಗಳು

benaka's picture

ಚಿಂತನೆ ಚೆನ್ನಾಗಿದೆ.
ಎಲ್ಲರಿಗೂ ತಮ್ಮ ತಮ್ಮ ದೇಶ-ಭಾಷೆಗಳ ಮೇಲೆ ಅಭಿಮಾನವಿರುವುದು ಸಹಜ. ಜಾಗತೀಕರಣಕ್ಕೆ ಒಳಗಾಗುವುದೆಂದರೆ 'ತಮ್ಮತನವನ್ನು ಬಿಡುವುದು' ಎಂದೇನೂ ಅರ್ಥವಲ್ಲ. ಅಥವಾ ಅನಿವಾಸಿಗಳು ಭಾರತದಲ್ಲಿದ್ದರಷ್ಟೇ ಭಾರತೀಯರೆಂಬುದೂ ಸರಿಯಲ್ಲ. ಯಾರು ಎಲ್ಲಿದ್ದರೂ, 'ಅವರು ಏನು ಮಾಡುತ್ತಾರೆಯೋ' ಅದರ ಮೇಲೆ ಅವರ ಭಾರತೀಯತೆ ನಿಂತಿದೆ. ಅದಕ್ಕೇ ಕುವೆಂಪು 'ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ಕನ್ನಡವಾಗಿರು' ಎಂದು ಹೇಳಿದ್ದು. ವಿಶ್ವಮಾನವತೆ ಬರಿಯ ಕಲ್ಪನೆಯಲ್ಲ; abstract concept ಕೂಡ ಅಲ್ಲ.

ಅದಿರಲಿ, ಇಷ್ಟೊಂದು ಸ್ವಾಭಿಮಾನಿಗಳಿರುವ ಭಾರತಕ್ಕೇಕೆ ಈ ದುಸ್ಥಿತಿ? ಕೇವಲ ಅನಿವಾಸಿಗಳು ಹಿಂದಿರುಗುವುದೊಂದೇ ಸ್ವಾವಲಂಬನೆಯಲ್ಲ! ಅನಿವಾಸಿಗಳು ತಿಂಗಳಿಗೊಂದಿಷ್ಟು ಡಾಲರ್ ಕಳುಹಿಸಿ ಸುಮ್ಮನೆ ಕೂರುವುದರಿಂದ ಸಮಾಜಸೇವೆ ಏನಾಗದಿದ್ದರೂ, ರಾಷ್ಟ್ರಕ್ಕೆ ವಿದೇಶೀ ವಿನಿಮಯದ ಗಳಿಕೆಯಾಗುತ್ತದೆ; ಇದು ಅನಿವಾಸಿಗಳ ಅಳಿಲುಸೇವೆ. ಒಳನಾಡಿನ ಸಮಾಜಸೇವಕರ 'ಸೇವೆ' ನಾವು ಕಾಣದ್ದೇನೂ ಅಲ್ಲ ಬಿಡಿ. ಎಲ್ಲರೂ ತಂತಮ್ಮ ಮನೆಗಾಗಿಯೇ ಮಾಡುವುದು; ಎಲ್ಲ ಮನೆಗಳೂ ಸಮೃದ್ಧವಾದರೆ ದೇಶವೂ ಸಮೃದ್ಧವಾಗುತ್ತದೆ. ಮನೆಮನೆಗಳ ಗುಂಪೇ ದೇಶ ಅಲ್ಲವೇ? ಅನಿವಾಸಿಗಳು ಹೊರಗೆ ದುಡಿವ ತಂದೆಯಂತೆ; ನಿವಾಸಿಗಳು ಮನೆಯ ಪೊರೆವ ತಾಯಿಯಂತೆ; ಇಡೀ ದೇಶ ಒಂದು ಕುಟುಂಬದಂತೆ. ಜವಾಬ್ದಾರಿ ಎಲ್ಲರಿಗೂ ಇದೆ; ಮಧ್ಯೆ ಶಕುನಿಗಳ ಕಾಟವೂ ಇದೆ. ಇವುಗಳ ಸಮತೋಲನವೇ ಸಂಸಾರ!

ನೀವು-ನಾವು ಬಯಸುವ ಈ ದೇಶದ 'ಅಭಿವೃದ್ಧಿ' ಗೆ ಬೇಕಾದದ್ದು 'ಹಣ'. ಎಲ್ಲರೂ ಈಗ ಅದರೆಡೆಗೆ ಗಮನ ಹರಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಸ್ವಾವಲಂಬನೆಗೆ ಬೇಕಾದದ್ದೂ ಅದೇ - ಝಣ ಝಣ ಕಾಂಚಾಣ. ಇಲ್ಲದಿದ್ದರೆ 'ಅಭಿವೃದ್ಧಿ' ಕೇವಲ ವೇದಿಕೆಯ ಮೇಲಿನ ಭಾಷಣ ಅಷ್ಟೇ! ಯಾವಾಗ ಅಲ್ಲಿ ಸಲ್ಲುವರು ಇಲ್ಲೂ ಸಲ್ಲುವಂತಾಗುತ್ತಾರೆಯೋ ಆಗ ಅನಿವಾಸಿಗಳು ತಾವಾಗಿಯೇ ಹಿಂದಿರುಗುತ್ತಾರೆ. ಅಲ್ಲಿಯವರೆಗೂ ಅನಿವಾಸಿಗಳು ಮಾಡುತ್ತಿರುವ ದೇಶತ್ಯಾಗವೂ ಒಂದು ತ್ಯಾಗ ಎಂದು ತಿಳಿದರೆ ಲೇಸು! ಕಲಿಗಾಲ ಸ್ವಾಮೀ!

ನಿಮ್ಮವ

ಬೆನಕ

ಸರಿಯಾದ ಮಾತು ಬೆನಕರೆ.

ahoratra's picture

ವಿವರಣೆ ತುಂಬಾ ಚೆನ್ನಾಗಿದೆ.

ಅಹೋರಾತ್ರ

@ಬೆನಕ,

ಶ್ಯಾಮ ಕಶ್ಯಪ's picture

@ಬೆನಕ,
ನಿಮ್ಮ ಮಾತುಗಳಿಗೆ ಧನ್ಯವಾದಗಳು.

Quote:
"ಜಾಗತೀಕರಣಕ್ಕೆ ಒಳಗಾಗುವುದೆಂದರೆ 'ತಮ್ಮತನವನ್ನು ಬಿಡುವುದು' ಎಂದೇನೂ ಅರ್ಥವಲ್ಲ. ಅಥವಾ ಅನಿವಾಸಿಗಳು ಭಾರತದಲ್ಲಿದ್ದರಷ್ಟೇ ಭಾರತೀಯರೆಂಬುದೂ ಸರಿಯಲ್ಲ. ಯಾರು ಎಲ್ಲಿದ್ದರೂ, 'ಅವರು ಏನು ಮಾಡುತ್ತಾರೆಯೋ' ಅದರ ಮೇಲೆ ಅವರ ಭಾರತೀಯತೆ ನಿಂತಿದೆ. ಅದಕ್ಕೇ ಕುವೆಂಪು 'ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ಕನ್ನಡವಾಗಿರು' ಎಂದು ಹೇಳಿದ್ದು."

-- ಇವುಗಳನ್ನೇ ನಾನು abstract ಅಂದದ್ದು. ತಮ್ಮತನ ಅಂದರೇನು? ಅನಿವಾಸಿ ಭಾರತೀಯರು ತಮ್ಮತನ ಉಳಿಸಿಕೊಳ್ಳುವುದಕ್ಕೆ ಮಾಡುತ್ತಿರುವುದೇನು, ಇವಗಳನ್ನು ನೋಡಿಯೇ (ಅವುಗಳ ಉದಾಹರಣೆಗಳು ಲೇಖನದಲ್ಲಿವೆ) ಈ ತರಹದ ಆಲೋಚನೆಗಳು ದೇಶಕ್ಕಿಂತ, ಸ್ವಂತ ಸಂಸ್ಕೃತಿಯ ಆಹ್ಲಾದನೆಗೆ ಹೆಚ್ಚು ಒತ್ತು ಕೊಡುತ್ತವೆ; ಇದರಿಂದ ಯಾರೂ ಭಾರತೀಯರಾಗಲೀ ಕನ್ನಡಿಗರಾಗಲಿ ಆಗುವುದಿಲ್ಲ ಅಂತ ನಾನು ಹೇಳಿದ್ದು.

Quote:
"ಅದಿರಲಿ, ಇಷ್ಟೊಂದು ಸ್ವಾಭಿಮಾನಿಗಳಿರುವ ಭಾರತಕ್ಕೇಕೆ ಈ ದುಸ್ಥಿತಿ? ಕೇವಲ ಅನಿವಾಸಿಗಳು ಹಿಂದಿರುಗುವುದೊಂದೇ ಸ್ವಾವಲಂಬನೆಯಲ್ಲ! ಅನಿವಾಸಿಗಳು ತಿಂಗಳಿಗೊಂದಿಷ್ಟು ಡಾಲರ್ ಕಳುಹಿಸಿ ಸುಮ್ಮನೆ ಕೂರುವುದರಿಂದ ಸಮಾಜಸೇವೆ ಏನಾಗದಿದ್ದರೂ, ರಾಷ್ಟ್ರಕ್ಕೆ ವಿದೇಶೀ ವಿನಿಮಯದ ಗಳಿಕೆಯಾಗುತ್ತದೆ;"

-- ಮೊದಲಾಗಿ, ಅನಿವಾಸಿಗಳು ವಾಪಸ್ಸು ಬರುವುದು ಸ್ವಾವಲಂಬನೆ ಅಂತ ನಾನು ಹೇಳಿಲ್ಲ. ಸ್ವಾವಲಂಬನೆ ಪದವನ್ನು ಅದರ popular meaning ನಲ್ಲಿರುವಂತೇ ಬಳಸಿರುವೆ (ನಮಗೆ ಬೇಕಾದ ಪದಾರ್ಥಗಳನ್ನು ನಾವೇ ತಯಾರಿಸಿ ನಾವೇ ಉಪಯೋಗಿಸಿಕೊಳ್ಳುವುದು).

ಇದು ಕರ್ನಾಟಕದಲ್ಲೇ ಇದ್ದು ಏನೂ ಮಾಡದಿರುವವರ ಮೇಲಿನ ಚರ್ಚೆಯಲ್ಲ.

ಅನಿವಾಸಿ ಭಾರತೀಯರ ಡಾಲರ್‍ನಿಂದ ರಾಷ್ಟ್ರಕ್ಕೆ ವಿದೇಶಿ ವಿನಿಮಯ ಆಗುವುದು ನಾನು ಕಾಣೆ. ಎಲ್ಲ ತಮ್ಮ ತಮ್ಮ ಮನೆಗೆ ದುಡ್ಡು ಕಳುಹಿಸುತ್ತಾರೆ. ಕೆಲವರು ಅದಕ್ಕೂ ಹಿಂದೂ ಮುಂದೂ ನೋಡುವುದುಂಟು.

Quote:
"ಎಲ್ಲ ಮನೆಗಳೂ ಸಮೃದ್ಧವಾದರೆ ದೇಶವೂ ಸಮೃದ್ಧವಾಗುತ್ತದೆ. ಮನೆಮನೆಗಳ ಗುಂಪೇ ದೇಶ ಅಲ್ಲವೇ? "

--ವಿದೇಶಿ ಡಾಲರ್ ಆಗಲೇ ಮೇಲ್ಮಟ್ಟದಲ್ಲಿರುವ ಮನೆಗಳಿಗೆ ಪಾರಿತೋಷಕವಾಗಿ ಸೇರುತ್ತವೆಯೇ ವಿನಹ ಹೆಚ್ಚಿನ ಉಪಯೋಗವಾಗದಿರದು. ಇದರಿಂದ haves and have nots ಮಧ್ಯದ ಆರ್ಥಿಕ ಹಂದರ ದೊಡ್ಡದಾಗುತ್ತದೆಯೇ ವಿನಹ ಕೆಳಗಿನವರು ಮೇಲೆ ಬರಲಾರರು. ಇದೇ ತರಹದ trickle down effect, ಹನಿ ಹನಿ ಕೂಡಿದರೆ ಹಳ್ಳ ಮುಂತಾದ ತತ್ವಗಳು ಜಾಗತೀಕರಣದ ವಿಷಯದಲ್ಲಿ ನಿಜ ಅಂತ ಹೇಳುವುದಕ್ಕೆ ಇದುವರೆಗೂ ಯಾವುದೇ ಬಲವಾದ ನಿದರ್ಶನಗಳಿಲ್ಲ. ಹೆಚ್ಚೆಂದರೆ ಇವು ಕಿವಿಗಳಿಗೆ ತಂಪು ಅಷ್ಟೆ.

Quote:
ನೀವು-ನಾವು ಬಯಸುವ ಈ ದೇಶದ 'ಅಭಿವೃದ್ಧಿ' ಗೆ ಬೇಕಾದದ್ದು 'ಹಣ'. ಎಲ್ಲರೂ ಈಗ ಅದರೆಡೆಗೆ ಗಮನ ಹರಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಸ್ವಾವಲಂಬನೆಗೆ ಬೇಕಾದದ್ದೂ ಅದೇ - ಝಣ ಝಣ ಕಾಂಚಾಣ. ಇಲ್ಲದಿದ್ದರೆ 'ಅಭಿವೃದ್ಧಿ' ಕೇವಲ ವೇದಿಕೆಯ ಮೇಲಿನ ಭಾಷಣ ಅಷ್ಟೇ!ಯಾವಾಗ ಅಲ್ಲಿ ಸಲ್ಲುವರು ಇಲ್ಲೂ ಸಲ್ಲುವಂತಾಗುತ್ತಾರೆಯೋ ಆಗ ಅನಿವಾಸಿಗಳು ತಾವಾಗಿಯೇ ಹಿಂದಿರುಗುತ್ತಾರೆ.

ಹೌದು ಸಾರ್. ದೇಶಾಭಿವೃದ್ಧಿಗೆ ಬೇಕಾದದ್ದು ಹಣವೇ. ಆದರೆ ಅನಿವಾಸಿಯರು ಭಾರತದಿಂದ ಓಟಕಿತ್ತುದದಕ್ಕೆ ಪ್ರಾಯಶ್ಚಿತ್ತ ಅಂತ ಕೊಟ್ಟ ಹಣ ಈ ಸತ್ಕಾರ್ಯಕ್ಕೆ ಬೇಡ. ಭಾರತದಲ್ಲಿ ನೆಲಸಲಿಕ್ಕೆ ತಮಗೆ ಸೂಕ್ತವಾದ ಸೌಕರ್ಯಗಳಿಲ್ಲ ಅಂತ ದೂರುವವರು ಅಂತಹ ಸೌಲಭ್ಯ ಕಲ್ಪಿಸಿಕೊಳ್ಳುವುದಕ್ಕೆ ಛಲವೆತ್ತಿ ಹೋರಾಡಬೇಕು. ಪಲಾಯನ ಮಾಡಿದವರ ಬಿಡಿಗಾಸಿನಿಂದಲೇ (ಅವರ ಲೆಕ್ಕದಲ್ಲಿ ಅವರು ಕೊಡುವುದು ಬಿಡಿಗಾಸೆ) ದೇಶಾಭಿವೃದ್ಧಿಯಾಗುವಂತಿದ್ದರೆ, ಅದು ನನಗೆ ಬೇಕಾಗಿಲ್ಲ.

@ಮಹೇಶ,

ರಾಷ್ಟ್ರಭಾಷೆ, ಶಾಸ್ತ್ರೀಯ ಭಾಷೆ ಇವೆಲ್ಲ ನಮ್ಮ ಪ್ರತಿಷ್ಠೆಗೇ ಹೊರತು ಭಾಷೆಗೆ ಇದ್ಯಾವುದೂ ಬೇಕಾಗಿಲ್ಲ ಅಲ್ಲವೆ. ಕನ್ನಡವು ಹಿಂದಿ ಅಥವ ಬೇರೆ ಭಾಷೆಗಿಂತ ಮೇಲು ಅಥವ ಸಮ ಅಂತ ಘೋಷಿಸಿದ ಮಾತ್ರಕ್ಕೆ ಅದರ ಸವಿಯು ಹೆಚ್ಚಾಗುವುದಿಲ್ಲ ಅಥವ ಕಡಿಮೆಯೂ ಆಗುವುದಿಲ್ಲ. ಅದು ಬೆಳೆಯುವುದು ಕನ್ನಡಿಗರು ಕನ್ನಡವನ್ನು ಹೆಚ್ಚಾಗಿ ಬಳಸಿದಾಗ ಮಾತ್ರ. ಅದಿರುವುದು ನಮ್ಮ ಕೈಯಲ್ಲೇ ಹೊರತು ಮಿಕ್ಕಾವ ಜನರೂ ಅದಕ್ಕೆ ಕಾರಣರಲ್ಲ. ಬೇರೆ ಬಾಷಿಗರು ನಮ್ಮ ಚಲನಚಿತ್ರ ನೋಡುತ್ತಿಲ್ಲ. ನಮ್ಮವರೇ ನೋಡದಿರುವಾಗ ಬೇರೆಯವರ ಮೇಲೆ ದ್ವೇಷ ಏಕೆ? ಪ್ರಾಂತೀಯತೆ ಇರಬಾರದು, ಎಲ್ಲ homogeneous ಆಗಿರಬೇಕು ಅಂತ ನನಗೂ ಅನ್ನಿಸುವುದಿಲ್ಲ. ಮೊದಲು ನಾವು ಸರಿಯಾಗೋಣ.

ಪ್ರತಿಷ್ಠೆ

ಮಹೇಶ ಭೋಗಾದಿ's picture

ನಮಗೆ ಪ್ರತಿಷ್ಠೆಬೇಕು. ನಮಗೆ ಕನ್ನಡಕ್ಕೆ ರಾಷ್ಟ್ರಭಾಷೆ, ಶಾಸ್ತ್ರೀಯ ಭಾಷೆಯೆಂಬ ಪ್ರತಿಷ್ಠಬೇಕು. ಇದು ಅಭಿಮಾನ, ಹೆಮ್ಮಯ ಮಾತು. ನಾವು ನಮ್ಮ ಅಭಿಮಾನವನ್ನು ಪ್ರಶ್ನಿಸಿಕೊಳ್ಳಬೇಕು.

ಶಾಸ್ತ್ರೀಯ ಭಾಷೆಪಟ್ಟದಿಂದಲೇ ಇಂದು ತಮಿಳಧ್ಯಯನಕ್ಕಾಗಿ ೫೦ಕೋಟಿ ರುಪಾಯಿಗಳನ್ನು ಕೇಂದ್ರ ಸರಕಾರ ಮೈಸೂರಿನ ಭಾರತೀಯ ಭಾಷಾ ಸಂಶೋಧನಾಲಯಕ್ಕೆ ಕೊಟ್ಟಿದ್ದು.

ಕನ್ನಡ ಮತ್ತು ತೆಲುಗಿಗೆ ಇನ್ನೇನು ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕುವುವು. ಇದು ಸಾಧ್ಯವಾಗುತ್ತಿರುವುದು ನಮ್ಮ ದೊಡ್ಡ ಬು(ಲ)ದ್ಧಿಜೀವಿ ವಿಚಾರವಾದಿ ಸಾಹಿತಿಗಳಿಂದಲ್ಲ. ಅಂತಹವರು ಅವೆಲ್ಲ ಕನ್ನಡಕ್ಕೆ ಯಾಕೆ, ನನಗೆ ಮಾತ್ರ ಒಂದು ದೊಡ್ಡ ಪ್ರಶಸ್ತಿಕೊಟ್ಟು ಬಿಡಿ ಎನ್ನುವವರೆ, ನಿಜ.

ಸರಿ. ಅದು ಯಾವ ಆಧಾರದ ಮೇಲೆ ನಾವು ಕನ್ನಡವನ್ನು ಹೆಚ್ಚು ಬಳಸುತ್ತಿಲ್ಲವೆಂದಿರಿ? ನಮ್ಮ ಜಿಲ್ಲೆಯಲ್ಲಿ ೯೮% ಕನ್ನಡಭಾಷಿಗರೆ ಇರುವುದು. ೮೦% ನಾಮಫಲಕಗಳು ಕನ್ನಡದಲ್ಲಿಯೆ ಇರುವುವು. ಇಂದಿಗೂ ನಮ್ಮ ಜಿಲ್ಲೆಯಲ್ಲಿ ಪ್ರತಿವರುಷ sslc ಯಲ್ಲಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಗಳಿಸುವ ೧೦--೨೦ ವಿದ್ಯಾರ್ಥಿಗಳಿದ್ದರೆ. ನಿಮಗೆ ಕನ್ನಡದ ಮೇಲೆ ಅಭಿಮಾನವಿದೆ. ಹಾಗೆ ಕನ್ನಡದ ಮೇಲೆ ಹಿಡಿತವೂ ಇದೆ. ಇದೊಂದೇ ಜಿಲ್ಲೆಯಲ್ಲ. ಕನ್ನಡವನ್ನು ಬಹಳ ಚೆನ್ನಾಗಿ ಮಾತಾಡುವ ಧಾರವಾಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮುಂತಾದ ಜಿಲ್ಲೆಗಳನ್ನು ನೋಡಿ. ಬರಿ ಬೆಂಗಳೂರಿನಲ್ಲಿ ಕುಳಿತು ಕನ್ನಡವಿಲ್ಲ, ಕನ್ನಡವಿಲ್ಲ ಎನ್ನುವುದು ಅರ್ಥಹೀನ. ಕನ್ನಡ ಕೇವಲ ಬೆಂಗಳೂರಿನದ್ದಲ್ಲ.

ಕನ್ನಡಚಿತ್ರಗಳನ್ನು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ ಹಾಗು ನೋಡುತ್ತೇವೆ. ಕನ್ನಡ ಸಿನಿಮಾಗಳನ್ನು ಜನರು ನೋಡದಿದ್ದರೆ ಇಷ್ಟೊಂದು ಕನ್ನಡಸಿನಿಮಾಗಳನ್ನು ಏಕೆ ಮಾಡುತ್ತಿದ್ದರು?

ಇದರ ಮುಂದೆ ನಾನು ಏನನ್ನು ಹೇಳೆನು. ಅಭಿಮಾನವಿಲ್ಲದ ವಿಚಾರವಾದಿತನ, ಬುದ್ಧಿಜೀವಿತನಕಕ್ಕೆ ಯಾವಾಗಲು ನಮ್ಮ ಧಿಕ್ಕಾರವೆ ಹೊರತು, ಪುರಸ್ಕಾರವಿಲ್ಲ.

ಸವಿಯೊದಗೆಗಳು,
ಮಹೇಶ

ಅನಿವಾಸಿ

benaka's picture

ನೀವು ಹೇಳುತ್ತಿರುವುದು ನನಗರ್ಥವಾಗುತ್ತದೆ; ಆದರೆ ಅವುಗಳಲ್ಲಿ ಬಹಳಷ್ಟು ಅಪ್ರಾಯೋಗಿಕ ಎಂಬುದೇ ಸಮಸ್ಯೆ.

೧. ಸಂಸ್ಕೃತಿಯ ಆಹ್ಲಾದನೆಗೆ ಒತ್ತುಕೊಡುವ ಅಂಶದಲ್ಲೇ ಅಡಗಿದೆ ರಹಸ್ಯ ಸ್ವಾಮೀ!
ಉದಾ: ತಂತ್ರಜ್ಞಾನಿ ಅನಿವಾಸಿಗೆ ಅಮೆರಿಕದಲ್ಲಿ 'ಮಸಾಲೆದೋಸೆ' ತಿನ್ನುವ ಆಸೆಯಾಗಿ, ಹತ್ತಿರದ ಭಾರತೀಯ ಉಪಾಹಾರಗೃಹಕ್ಕೆ ಹೋಗಿ ಕಂಠಪೂರ್ತಿ ತಿಂದು ಬರುವುದು - ತನ್ನ ಸಂಸ್ಕೃತಿಯ ಆಹ್ಲಾದನೆಯಿರಬಹುದು. ಅವನಿಂದ, ಅವನಂತಹವರಿಂದ ನಾಲ್ಕೈದು ಭಾರತೀಯ ಅಡಿಗೆಯವರಿಗೆ ಕೆಲಸ ದೊರಕಿತು; ಅಂಗಡಿಯ ಭಾರತೀಯ ಒಡೆಯನಿಗೆ ವ್ಯವಹಾರ ಗಿಟ್ಟಿತು; ಅವನ ದೋಸೆ, ಚಟ್ನಿ, ಸಾಂಬಾರಿಗಾಗಿ ಭಾರತೀಯ ದಿನಸಿಯವನ ವಿದೇಶೀ ವ್ಯಾಪಾರ ಶುರುವಾಯಿತು; ವಿದೇಶಕ್ಕೆ ಕಳಿಸಲೋಸುಗ ಒಳ್ಳೆಯ ಪದಾರ್ಥಗಳ ಕೃಷಿ ಹೆಚ್ಚಿ, ಭಾರತೀಯ ರೈತನಿಗೂ ಸಂತಸವಾಯಿತು! ಇದು ಊಹೆಯಲ್ಲ; ವಾಸ್ತವ ಸತ್ಯ! ಒಬ್ಬನ ಮಸಾಲೆದೋಸೆಯ ಆಸೆ ಎಷ್ಟು ಜನರಿಗೆ ಕೆಲಸ ನೀಡುತ್ತಿದೆ ಗೊತ್ತೇ? ಅವನಿಂದ ದೇಶಕ್ಕಾದ ಅಳಿಲುಸೇವೆ ಇದಲ್ಲವೇ?
ಇನ್ನು ಸಂಗೀತ, ನೃತ್ಯ, ಸಿನಿಮಾಗಳನ್ನು ಆನಂದಿಸುವುದಕ್ಕಾಗಿ ಹುಟ್ಟೂರಿನಿಂದ ಕಲಾವಿದರನ್ನು ಕರೆಸಿ ಮೆರೆಸುತ್ತಿದ್ದಾನೆ ನಮ್ಮ ಅನಿವಾಸಿ! ಕನ್ನಡದ ಜನ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರೋತ್ಸಾಹಿಸುವುದಕ್ಕಿಂತ ಅನಿವಾಸಿಗಳು ಮಾಡುತ್ತಿರುವುದು ಹೆಚ್ಚಿದೆ. ಕನ್ನಡಿಗರೇ ವೇಣು-ವೀಣೆ ಕಿತ್ತೆಸೆದು ಕೀ-ಬೋರ್ಡ್, ಗಿಟಾರ್, ಪಿಯಾನೋ ಹಿಡಿದಿರುವಾಗ, ಅನಿವಾಸಿಗಳು ಅದನ್ನು ಕಲಿತರೆ ಮುಖ ತಿರುವುದರಲ್ಲಿ ಅರ್ಥವಿಲ್ಲ.
ಒಳನಾಡಿನಲ್ಲಿ ನಮ್ಮತನವನ್ನು ಉಳಿಸುವುದು ಎಷ್ಟು ಮುಖ್ಯವೋ, ಹೊರನಾಡಿನಲ್ಲಿ ಅದನ್ನು ಬೆಳೆಸುವುದೂ ಅಷ್ಟೇ ಮುಖ್ಯ. ಹಿಂದೂ ಧರ್ಮಕ್ಕಿಂತ ಸಾರದಲ್ಲಿ ಅಷ್ಟೇನೂ ಬೇರೆಯಲ್ಲದ ಬೌದ್ಧಧರ್ಮ ಇಡೀ ವಿಶ್ವಕ್ಕೆ ಹರಡಿದ್ದೂ ಪ್ರಚಾರದಿಂದಲೇ; ನಮ್ಮ ಧರ್ಮ ಇಲ್ಲಿಯೇ ಉಳಿಯಿತು ಎಂಬುದರ ಹಿಂದಿನ ಸತ್ಯವೂ ಅದೇ.

೨. ವಿಶ್ವಮಾನವತಾವಾದ ಇಂದು ನೆನ್ನೆಯದಲ್ಲ; ವೇದಗಳಲ್ಲೂ ಉಲ್ಲೇಖ ಹೊಂದಿರುವ ಹಳೆಯ ಸತ್ಯ. ಹೆಸರೇ ಹೇಳುವಂತೆ ವಿಶ್ವಮಾನವನಿಗೆ ಪ್ರಾಂತ್ಯ-ಭಾಷೆಗಳ ಇತಿಮಿತಿಯಿಲ್ಲ. ಆದ್ದರಿಂದ ವಿಶ್ವಮಾನವ ಕನ್ನಡಿಗನೂ ಹೌದು; ಭಾರತೀಯನೂ ಹೌದು. ನೀವು ನಿಮ್ಮ ಉದಾಹರಣೆಗಳಿಂದ ಬೆರಳು ತೋರುತ್ತಿರುವುದು ವಿಶ್ವಮಾನವನಿಗಲ್ಲ; ಸೋಗಿನ ಬಹುರೂಪಿಗಳಿಗೆ. ಅಂಥಹವರನ್ನು ನಾನೂ ಕಂಡಿದ್ದೇನೆ. ಅವರಿಂದ ದೇಶಕ್ಕಿರಲಿ, ಸಂಸ್ಕೃತಿಗೂ ಅಪಾಯ. ಅವರು ವಾಪಸಾದರೆ ಇನ್ನೂ ಅಪಾಯ!

೩. ಅನಿವಾಸಿಗಳೆಂದರೆ ಕೇವಲ ತಂತ್ರಜ್ಞಾನಿಗಳಲ್ಲ; ವ್ಯಾಪಾರಿಗಳು-ವ್ಯವಹಾರಸ್ಥರೂ, ದೇಶಕ್ಕೆ ಕೆಲಸ ತರುವ ಉದ್ಯಮಿಗಳೂ ಇದ್ದಾರೆ. ವಿದೇಶೀ ವಿನಿಮಯ ಗಳಿಸಲು ಅವರನ್ನು ಇತ್ತ ಸೆಳೆಯುವ ಮಾರುಕಟ್ಟೆಯ ತಜ್ಞರಿದ್ದಾರೆ. ಇವರೆಲ್ಲರ ಒಟ್ಟು ಪ್ರತಿಫಲವೇ 'ಗಳಿಕೆ'. ಒಬ್ಬ ಅನಿವಾಸಿಯ ಒಂದು ಡಾಲರ್ ಜಮಾ ಕೂಡ ಆರ್ಥಿಕವಾಗಿ ಭಾರತವನ್ನು ಎತ್ತಿಹಿಡಿಯುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.

೪. ಪ್ರತಿ ಅನಿವಾಸಿಯೂ ತನ್ನಿಂದ ಇನ್ನೊಬ್ಬನಿಗೆ ಉಪಕಾರವಾಗುವಂತೆ ಮಾಡಲಾಗದಿದ್ದರೂ, ಅನಿವಾಸಿಗಳ ಗುಂಪಿನಿಂದ ಅದು ಸಾಧ್ಯವಾಗಿದೆ. ಕೆಳಗಿನವರು ಮೇಲೆ ಬಂದಿದ್ದಾರೆ, ಬರುತ್ತಿದ್ದಾರೆ; ಆದರೆ ಆರ್ಥಿಕ ಅಂತರ ಯಾವುದೇ ದೇಶದಲ್ಲೂ ಅನಿವಾರ್ಯ. ಇಲ್ಲದಿದ್ದರೆ ನಾವೂ ಸಂಪೂರ್ಣ ಕಮ್ಯುನಿಸ್ಟರಾಗಬೇಕಷ್ಟೇ. ಎಂಥಹ ಬಡರೈತನ ಮನೆಯಲ್ಲೂ ಬಣ್ಣದ ಟಿವಿ ಗಳು ಕಾಣತೊಡಗಿವೆ ಸ್ವಾಮೀ; ನಿರಾಶರಾಗಬೇಡಿ. ಇದಕ್ಕೆ ಕಾಲ ತಗುಲಬಹುದು; ಆದರೆ ಸರಿಯಾದ ದಿಕ್ಕಿನಲ್ಲಿದ್ದೇವೆ.

೫.ಅನಿವಾಸಿಗಳದು ಪ್ರಾಯಶ್ಚಿತ್ತದ ಹಣವಲ್ಲ; ಭಿಕ್ಷೆಯೂ ಅಲ್ಲ. ಕೆಲವರ 'ವಿದೇಶೀ ಮದ' ನಿಮಗೆ ಹೀಗೆನಿಸುವಂತೆ ಮಾಡಿರಬಹುದಾದರೂ, ಅದು ಭಾರತೀಯರದ್ದೇ ಹಣ. ಮೊದಲು ಹೊರನಾಡಿನವರೂ 'ನಮ್ಮವರೇ' ಎಂದು ಮನಗಾಣಬೇಕು. ನಾನು ಆಗಲೇ ಹೇಳಿದಂತೆ ಅವರು ಹೊರದುಡಿಯುವ ತಂದೆಯಂತೆ; ತಾಯಿಗೆ ತಂದೆಯ ದುಡ್ಡು ಭಿಕ್ಷೆಯಾಗಲಾರದು. ಆದರೆ ಹಣ ಪೋಲುಮಾಡಿ ಕುಟುಂಬವನ್ನು ಕಡೆಗಣಿಸುವ ತಂದೆಯೂ ಇದ್ದಾನೆ ಎಂದು ನನಗೆ ಗೊತ್ತು; ಎಲ್ಲರೂ ಹಾಗಲ್ಲ. 'ಈ ಛಲವೆತ್ತಿ ಹೋರಾಡುವ ಮಾತು' ಬೆಕ್ಕಿಗೆ ಗಂಟೆಕಟ್ಟುವ ಕೆಲಸ; ವೇದಿಕೆಗೆ ಭಾಷಣಕ್ಕೆ ಚೆನ್ನಾಗಿರುತ್ತದೆ. ತಮಗೆ ಬೇಕಾದ್ದನ್ನು ತಾವೇ ತಯಾರಿಸಲೂ ಹಣ ಬೇಕು ಸ್ವಾಮೀ. ಬೇರೆಯವರಿಂದ ಸಾಲ ಪಡೆದು ಅವರ ಎಲ್ಲ ಶರತ್ತುಗಳಿಗೆ ಒಪ್ಪಿಕೊಂಡು ಎಲ್ಲರ ತಲೆಯ ಮೇಲೆ ಋಣಭಾರ ಹೊರಿಸುವುದಕ್ಕಿಂತ ನಮ್ಮವರ ಹಣ ಉಪಯೋಗಿಸುವುದರಲ್ಲಿ ತಪ್ಪೇನೂ ಇಲ್ಲ.

ನಿಮ್ಮವ

 

ಬೆನಕ

ನಿಧಾನ ಗೆಳೆಯರೇ, ನಿಧಾನ

ಶ್ಯಾಮ ಕಶ್ಯಪ's picture

ಬೆನಕ,
ನನ್ನ ಮಾತುಗಳು ನಿಮಗಿನ್ನು ಅರ್ಥವಾಗಿಲ್ಲವೆಂದು ಭಾವಿಸುವೆ. ಅನಿವಾಸಿ ಭಾರತೀಯರು ಭಾರತೀಯತೆಯನ್ನು ಅನುಭವಿಸುವುದಕ್ಕಾಗಿ ಕೇವಲ ಈ ತರಹದ ಚಟುವಟಿಕೆಗಳನ್ನು ಮಾಡಿ ಸುಮ್ಮನಿದ್ದರೆ ಸಾಲದು ಅನ್ನುವುದಷ್ಟೆ ನನ್ನ ವಾದ. ಇನ್ನೇನು ಮಾಡಬೇಕು ಅಂತ ಕೇಳಿದರೆ ಅದಕ್ಕೆ ಒಂದು ಉದಾಹರಣೆ ನನಗೆ ತಿಳಿದ ಮಟ್ಟಿಗೆ ಲೇಖನದ ಕೊನೆಯಲ್ಲಿ ಕೊಟ್ಟಿದ್ದೇನೆ.

ನೀವು ನಿದರ್ಶಿಸಿರುವ 'trickle down effect' ಉದಾಹರಣೆಗಳು ದೇಶಕ್ಕೆ ಮಹತ್ವದ ಸಹಾಯವನ್ನು ತಂದಿರುವುದಕ್ಕೆ ಇದುವರೆಗೆ ಯಾವುದೇ ಗಟ್ಟಿಯಾದ ಪುರಾವೆಯಿಲ್ಲ. ಮೊದಲೇ ಹೇಳಿದಹಾಗೆ, ಇದು ಕಿವಿಗೆ ತಂಪು ತರುತ್ತದೆ ಅಷ್ಟೆ. ಅನಿವಾಸಿಗಳಿಂದ ದೇಶದ ಪ್ರಗತಿಯಾಗುತ್ತಿದೆಯೋ ಅಲ್ಲವೋ ಅದಲ್ಲ ನನ್ನ ಪ್ರಶ್ನೆ. ರಾಷ್ಟ್ರೀಯತೆ ಎಂಬ ಕಾನ್ಸೆಪ್ಟ್ ಜಾಗತೀಕರಣದ ಯುಗದಲ್ಲಿ ಹೇಗೆ commercialise ಆಗ್ತಾ ಇದೆ ಅನ್ನುವುದನ್ನ ಬರೆದಿದ್ದೇನ . ಅದರಿಂದ ಭಾರತಕ್ಕೇನಾಯಿತು ಅನ್ನುವ ಪ್ರಶ್ನೆಗಿಂತ ಈ ಬದಲಾವಣೆಯಿಂದ ಅನಿವಾಸಿ ಭಾರತೀಯರು ಯಾವುದನ್ನು ಭಾರತೀಯತೆ ಅಂದುಕೊಂಡು ಅನುಭವಿಸುತ್ತಿದ್ದಾರೆ ಎಂಬುದು ನನ್ನ ಆಸಕ್ತಿ. ಹಾಗಂದ ಮಾತ್ರಕ್ಕೆ ಅನಿವಾಸಿಯರಿಗೆ ಮಸಾಲೆದೋಸೆ ತಿನ್ನುವ ಹಕ್ಕಿಲ್ಲ ಅಂತಲ್ಲ ಸ್ವಾಮಿ. ದೋಸೆ ತಿಂದ ಮಾತ್ರಕ್ಕೆ ಕನ್ನಡಿಗ ಆಗಲ್ಲ ಅಂತ ಆಷ್ಟೆ.

Quote:
ಒಳನಾಡಿನಲ್ಲಿ ನಮ್ಮತನವನ್ನು ಉಳಿಸುವುದು ಎಷ್ಟು ಮುಖ್ಯವೋ, ಹೊರನಾಡಿನಲ್ಲಿ ಅದನ್ನು ಬೆಳೆಸುವುದೂ ಅಷ್ಟೇ ಮುಖ್ಯ. ಹಿಂದೂ ಧರ್ಮಕ್ಕಿಂತ ಸಾರದಲ್ಲಿ ಅಷ್ಟೇನೂ ಬೇರೆಯಲ್ಲದ ಬೌದ್ಧಧರ್ಮ ಇಡೀ ವಿಶ್ವಕ್ಕೆ ಹರಡಿದ್ದೂ ಪ್ರಚಾರದಿಂದಲೇ; ನಮ್ಮ ಧರ್ಮ ಇಲ್ಲಿಯೇ ಉಳಿಯಿತು ಎಂಬುದರ ಹಿಂದಿನ ಸತ್ಯವೂ ಅದೇ.

-- ಇದರ ಚರ್ಚೆ, ಇವಾಂಜೆಲಿಸಮ್ ಮುಂತಾದ ವಿಷಯಗಳಿಗೆ ನಾನು ಹೋಗುವುದಿಲ್ಲ.

Quote:
೩. ಅನಿವಾಸಿಗಳೆಂದರೆ ಕೇವಲ ತಂತ್ರಜ್ಞಾನಿಗಳಲ್ಲ; ವ್ಯಾಪಾರಿಗಳು-ವ್ಯವಹಾರಸ್ಥರೂ, ದೇಶಕ್ಕೆ ಕೆಲಸ ತರುವ ಉದ್ಯಮಿಗಳೂ ಇದ್ದಾರೆ. ವಿದೇಶೀ ವಿನಿಮಯ ಗಳಿಸಲು ಅವರನ್ನು ಇತ್ತ ಸೆಳೆಯುವ ಮಾರುಕಟ್ಟೆಯ ತಜ್ಞರಿದ್ದಾರೆ. ಇವರೆಲ್ಲರ ಒಟ್ಟು ಪ್ರತಿಫಲವೇ 'ಗಳಿಕೆ'. ಒಬ್ಬ ಅನಿವಾಸಿಯ ಒಂದು ಡಾಲರ್ ಜಮಾ ಕೂಡ ಆರ್ಥಿಕವಾಗಿ ಭಾರತವನ್ನು ಎತ್ತಿಹಿಡಿಯುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.

-- ಇದು ನನಗೂ ಗೊತ್ತು ಸ್ವಾಮಿ. ಅಮೇರಿಕದಲ್ಲಿ ಜಲಗಾರರಿಂದ ಹಿಡಿದು security advisor ಪದವಿಯ ತನಕ ಎಲ್ಲಾ ಸ್ಥರಗಳಲ್ಲಿ ದೇಸಿಗಳನ್ನು ನೋಡಿಯೇ ನನ್ನ ಯೋಚನೆಗಳು ರೂಪಗೊಂಡಿರುವುದು. ಜಾಗತಿಕ ಮಾರುಕಟ್ಟೆಯಿಂದ ದೇಶಕ್ಕೇನು ಸಿಕ್ಕಿದೆ ಎಂಬುದನ್ನು ನಾವು ಮತ್ತೊಂದೆಡೆ ಖಂಡಿತ ಚರ್ಚಿಸಬಹುದು. ಆ ವಿಷಯದಲ್ಲಿ ನಿಮ್ಮ ಅನಿಸಿಕೆಗಳೇನು ಎಂದು ತಿಳಿಯುವುದಕ್ಕೆ ನನಗೆ ಕುತೂಹಲವಿದೆ.

Quote:
೫.ಅನಿವಾಸಿಗಳದು ಪ್ರಾಯಶ್ಚಿತ್ತದ ಹಣವಲ್ಲ; ಭಿಕ್ಷೆಯೂ ಅಲ್ಲ. ಕೆಲವರ 'ವಿದೇಶೀ ಮದ' ನಿಮಗೆ ಹೀಗೆನಿಸುವಂತೆ ಮಾಡಿರಬಹುದಾದರೂ, ಅದು ಭಾರತೀಯರದ್ದೇ ಹಣ. ಮೊದಲು ಹೊರನಾಡಿನವರೂ 'ನಮ್ಮವರೇ' ಎಂದು ಮನಗಾಣಬೇಕು. ನಾನು ಆಗಲೇ ಹೇಳಿದಂತೆ ಅವರು ಹೊರದುಡಿಯುವ ತಂದೆಯಂತೆ; ತಾಯಿಗೆ ತಂದೆಯ ದುಡ್ಡು ಭಿಕ್ಷೆಯಾಗಲಾರದು. ಆದರೆ ಹಣ ಪೋಲುಮಾಡಿ ಕುಟುಂಬವನ್ನು ಕಡೆಗಣಿಸುವ ತಂದೆಯೂ ಇದ್ದಾನೆ ಎಂದು ನನಗೆ ಗೊತ್ತು;

-- ನನ್ನ ನಿಮ್ಮ ಅನುಭವ ಬೇರೆಯಿರಬಹುದು.

Quote:
'ಈ ಛಲವೆತ್ತಿ ಹೋರಾಡುವ ಮಾತು' ಬೆಕ್ಕಿಗೆ ಗಂಟೆಕಟ್ಟುವ ಕೆಲಸ; ವೇದಿಕೆಗೆ ಭಾಷಣಕ್ಕೆ ಚೆನ್ನಾಗಿರುತ್ತದೆ. ತಮಗೆ ಬೇಕಾದ್ದನ್ನು ತಾವೇ ತಯಾರಿಸಲೂ ಹಣ ಬೇಕು ಸ್ವಾಮೀ.

-- ಸ್ವಾಭಿಮಾನವಿರುವವರು ಮಾಡಿಯೇ ತೀರುತ್ತಾರೆ ಅನ್ನುವ ನಂಬಿಕೆ ನನಗಿದೆ. ನೋಡುವ.

ಮಹೇಶ,
ಕನ್ನಡ ಭಾಷೆಯ ಬಗ್ಗೆ ಅಭಿಮಾನ ಎಲ್ಲರಿಗೂ ಇದೆ. ಆದರೆ ಕನ್ನಡಕ್ಕೆ ರಾಷ್ಟ್ರಭಾಷೆಯ ಪಟ್ಟ ಎನ್ನುವ ವಿಷಯಕ್ಕಿಂತ ಮುಂಚೆ ಹಲವು ವಿಷಯಗಳಲ್ಲಿ ನಾವು ಹೋರಾಡಬೇಕಿದೆ. ಅದಕ್ಕೆ ನೀವು ಹೇಳಿದಂತೆಯೇ ಪ್ರಾಂತೀಯತೆಯೂ ಅವಶ್ಯವೆ. ಬೇರೆಯವರನ್ನು ದ್ವೇಷಿಸುವುದು ಬೇಡ ಅಷ್ಟೆ.

Quote:
ಬರಿ ಬೆಂಗಳೂರಿನಲ್ಲಿ ಕುಳಿತು ಕನ್ನಡವಿಲ್ಲ, ಕನ್ನಡವಿಲ್ಲ ಎನ್ನುವುದು ಅರ್ಥಹೀನ. ಕನ್ನಡ ಕೇವಲ ಬೆಂಗಳೂರಿನದ್ದಲ್ಲ.

- ಇದು ಯಾರಿಗೆ ಹೇಳುತ್ತಿದ್ದೀರ, ನಾನು ತಿಳಿಯೆ. ಕನ್ನಡವನ್ನು ಜನ ಬಳಸುತ್ತಿಲ್ಲ ಅಂತ ನಾನೆಲ್ಲೂ ಹೇಳಿಲ್ಲ. ಕನ್ನಡ ಭಾಷೆಯ ಉಳಿವಿಗೆ, ಪ್ರಗತಿಗೆ ಕನ್ನಡವನ್ನು ಬಳಸುವವರು ಹೆಚ್ಚಾದರೆ ಸಾಕು, ಅದಕ್ಕೆ ಪುರಸ್ಕಾರಗಳು ಅವಶ್ಯವಲ್ಲ. ಹಾಗಂತ ಕೊಡಬಾರದು ಅಂತಲ್ಲ. ಅದಕ್ಕಾಗಿ ಹೋರಾಡುವುದು ಬೇಡ. ಹೋರಾಡುವ ವಿಷಯಗಳು ಬೇಕಾದಷ್ಟಿವೆ. ನಮ್ಮ ಸಂಪನ್ಮೂಲಗಳನ್ನು ಅವಕ್ಕೆ ಬಳಸುವ. ಸುಮ್ಮನೇ symbolic ಆಗಿರುವ ವಿಷಯ ತೆಗೆದುಕೊಂಡು ತಲೆಕೆಡಿಸಿಕೊಳ್ಳಬಾರದು ಅಂತ ನನ್ನ ಅನಿಸಿಕೆ.
Quote:
ಇಷ್ಟೊಂದು ಕನ್ನಡಸಿನಿಮಾಗಳನ್ನು ಏಕೆ ಮಾಡುತ್ತಿದ್ದರು?

-- ಸ್ವಾಮಿ, ಬೇರೆ ಭಾಷೆಗಳ ಸಿನಿಮಾ ವಿಚಾರ ನನಗೆ ಗೊತ್ತಿಲ್ಲ. ನಮ್ಮ ನಿರ್ಮಾಪಕರ ಪಟ್ಟಿಯನ್ನು ನೋಡಿ. ಯಾರ್ಯಾರು ಯಾತಕ್ಕಾಗಿ ಚಲನಚಿತ್ರ ಮಾಡ್ತಾರೆ ಅಂತ ನಿಮಗೇ ಗೊತ್ತಾಗತ್ತೆ. ಜೊತೆಗೆ ಒಳ ಒಳಗೇ ಹೊಡೆದಾಡಿಕೊಳ್ಳೋ ಜನ ಕೂಲಾಗಿ ಬೇರೆಯವರ ಮೇಲೆ ಬೊಟ್ಟು ಮಾಡಿ ತೋರಿಸದ ತಕ್ಷಣ ನಾವು ಒಪ್ಪಿಕೊಳ್ಳಬೇಕಾಗಿಲ್ಲ ಅಲ್ಲವೆ. ಬೇರೆಯವರ ದೌಲತ್ತೂ ಇದೆ. ಆದರೆ ತಪ್ಪು ನಮ್ಮವರದ್ದೂ ಇಲ್ಲವೇ?
Quote:
ಅಭಿಮಾನವಿಲ್ಲದ ವಿಚಾರವಾದಿತನ, ಬುದ್ಧಿಜೀವಿತನಕಕ್ಕೆ ಯಾವಾಗಲು ನಮ್ಮ ಧಿಕ್ಕಾರವೆ ಹೊರತು, ಪುರಸ್ಕಾರವಿಲ್ಲ

-- ತಲೆಬಿಸಿ ಮಾಡಿಕೊಳ್ಳದೇ ನಿಧಾನವಾಗಿ ಶಾಂತಿಯಲ್ಲ್ಲಿ ಯೋಚಿಸಿ. ಆಮೇಲೆ ಧಿಕ್ಕಾರವೋ ಪುರಸ್ಕಾರವೋ ನೋಡೋಣ.

ನಮಸ್ಕಾರ.

ಆಶಾವಾದಿಗಳಾಗಿರಿ

benaka's picture

ಕಶ್ಯಪರೆ,

ಅನಿವಾಸಿಗಳಿಗೆ ದೇಶಪ್ರೇಮವಿಲ್ಲ; ಅಥವಾ ದೇಶಸೇವೆ ಮಾಡುವ ಮನಸಿಲ್ಲ ಎಂದು ನೀವು ತಪ್ಪಾಗಿ ತಿಳಿದಿರುವ ಕಾರಣವೇನೋ ಗೊತ್ತಿಲ್ಲ. ಅನಿವಾಸಿಗಳು ಅನುಭವಿಸುವ ದೇಶನಿಂದೆಯ ನೋವು ತಮಗಿನ್ನೂ ಸರಿಯಾಗಿ ತಿಳಿದಂತಿಲ್ಲ; ಇರಲಿ, ನಿಮ್ಮ ಅನುಭವ ಬೇರೆಯೇ ಇರಬಹುದು. ನಾನು ಮೊದಲೇ ಹೇಳಿದಂತೆ, ಅನಿವಾಸಿಗಳದು ಅಳಿಲುಸೇವೆ; ಅದೇ ಪರಿಪೂರ್ಣ ದೇಶೋದ್ಧಾರವಲ್ಲ. ನೀವು ಮಜ್ಜಿಗೆ ಕೇಳುತ್ತಿರುವುದು ರಾವಣನ ಹೊಟ್ಟೆಗೆಂದು ನೆನಪಿರಲಿ. ಅದಕ್ಕೆ ಅರೆಕಾಸು ಏನೇನೂ ಸಾಲದು. ಅನಿವಾಸಿಗಳು ಹಿಂದಿರುಗಿ ಏನನ್ನಾದರೂ ಮಾಡಬೇಕಾದರೆ, ಈ ಅರೆಕಾಸು ಸಾಲದು ಎಂದು ನೆನಪಿಡಿ; ಅದಕ್ಕಾಗಿ ಎಲ್ಲರೂ ಇನ್ನೂ ವಿದೇಶದಲ್ಲಿದ್ದಾರೆ. ಎಲ್ಲರೂ ದೇಶಪ್ರೇಮಿಗಳಲ್ಲದೆ ಇರಬಹುದು; ಎಲ್ಲರೂ ದೇಶತ್ಯಾಗಿಗಳಲ್ಲ.

ಎಷ್ಟೋ ಅನಿವಾಸಿಗಳು ಹಿಂದಿರುಗಿ ಏನನ್ನಾದರೂ ಮಾಡಲು ಹೋಗಿ, ಇನ್ನಿಲ್ಲದ ಕಷ್ಟಗಳನ್ನೆದುರಿಸಿ, ಯಾರ ಸಹಾಯವೂ ದೊರಕದೆ, ಬೇಸರಿಸಿ ಮತ್ತೆ ವಿದೇಶಕ್ಕೆ ವಾಪಸು ಹೋಗಿ ನೆಲೆಸಿದ್ದಾರೆ. ನಿಜವಾದ ಸಮಸ್ಯೆ ಇದು! ಸಹಕಾರ ಸಿಗುವುದಿಲ್ಲ! ಎಲ್ಲರೂ 'ನಮಗೇಕೆ?' ಎಂದಿರುವಾಗ, ಯಾರುತಾನೆ ಏನು ಮಾಡಲು ಸಾಧ್ಯ? ಕಚಡಾ ರಾಜಕಾರಣಿಗಳು, ರೌಡಿಇಸಂ, ಗೂಂಡಾಗಿರಿ, ಲಂಚಕೋರರುಗಳ ಮಧ್ಯೆ ಏನು ಮಾಡುವಿರಿ? ಅದಕ್ಕೇ ನಾನು ಹೇಳಿದ್ದು ಇದು ಬೆಕ್ಕಿಗೆ ಗಂಟೆ ಕಟ್ಟುವ ಕೆಲಸ ಎಂದು. ನೀವು ನೋಡುತ್ತಿರುವ ಸಮಸ್ಯೆ ಕೇವಲ ಒಂದು ಮುಖ ಮಾತ್ರ. ಅದಕ್ಕೆ ಇನ್ನೂ ಹತ್ತು ಹಲವು ಮುಖಗಳಿವೆ. ಎಲ್ಲವೂ ಸರಿಹೋಗಲು ಹಲವರ ಬಲಿದಾನ ಬೇಕು ಸ್ವಾಮೀ. ಯಾವಾಗಲೋ ಯಾರೋ ಎಲ್ಲೋ ಬಲಿಯಾದರೆ ಸಮಸ್ಯೆ ಬಗೆಹರಿಯದು; ಸಂಘೇ ಶಕ್ತಿಃ ಕಲೌ ಯುಗೇ - ಕಲಿಗಾಲದಲ್ಲಿ ಒಗ್ಗಟ್ಟಿನಲ್ಲಿ ಮಾತ್ರ ಬಲ. ಆ ಕ್ರಾಂತಿಗೆ ಸಕಾಲ ಬೇಕಾಗಿದೆ; ಅಲ್ಲಿಯವರೆಗೆ ಆಶಾವಾದಿಗಳಾಗಿರಿ!

ನನ್ನ ಮಾತಿನ ಸಾರಾಂಶ ಇಷ್ಟೇ: ಅನಿವಾಸಿಗಳ ಮೌನ ಹಾಗೂ ತಟಸ್ಥತೆ ಅವರ ದೇಶದ ಬಗೆಗಿನ ನಿರಾಸಕ್ತಿಯಲ್ಲ; ಅವರಿಗೆ ಅವಕಾಶ, ಸಹಕಾರ ಕೊಡುವುದು ನಿವಾಸಿಗಳ ಕರ್ತವ್ಯ.
ಅನಿವಾಸಿಗಳ ದೇಶಭಕ್ತಿ ಕೇವಲ ಬೂದಿಮುಚ್ಚಿದ ಕೆಂಡ; ಅದಕ್ಕೆ ಗಾಳಿ ಬೀಸುವಿರೋ, ನೀರೆರಚುವಿರೋ, ಅದನ್ನು ಹೇಗೆ ಬಳಸಿಕೊಳ್ಳುವಿರೋ ನಿವಾಸಿಗಳೇ ನಿಮಗೆ ಬಿಟ್ಟಿದ್ದು!

ಅಲ್ಲವೇ ಕಶ್ಯಪರೇ? ಸ್ವಲ್ಪ ನಿಧಾನವಾಗಿ ಯೋಚಿಸಿನೋಡಿ.

ನಿಮ್ಮವ

 

ಬೆನಕ