Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಶ್ಯಾಮ ಕಶ್ಯಪ ರವರ ಬ್ಲಾಗ್

ಶ್ಯಾಮ ಕಶ್ಯಪ

ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.

ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು

February 26, 2007 - 12:02am — ಶ್ಯಾಮ ಕಶ್ಯಪ

ಗುನ್ನಾರ್ ಮಿರ್ಡಾಲ್ ಎನ್ನುವ ನೋಬೆಲ್ ಪ್ರಶಸ್ತಿ ವಿಜೇತರು 'Objectivity in Social Research' ಎನ್ನುವ ಭಾಷಣದಲ್ಲಿ ಹೇಳುತ್ತಾರೆ, ಸಮಾಜಕ್ಕೆ ಸಂಭಂದಪಡುವ ಯಾವುದೇ ನೀತಿಸಂಹಿತೆಯನ್ನು ನಾವು ಪರಿಶೀಲಿಸಬೇಕಾದರೆ, ಮೊದಲು ವಿಷಯದಲ್ಲಿ ನಮ್ಮ ಪೂರ್ವಾಗ್ರಹಗಳನ್ನು ಗೊತ್ತುಮಾಡಿಕೊಂಡು ಮುಂದುವರಿಯಬೇಕು ಅಂತ. ಈ ಕ್ರಮ ಇಂದು ಕಾವೇರಿ ನೀರಿನ ಹಂಚಿಕೆಯ ಸಮಸ್ಯೆಯನ್ನು ವಿಶ್ಲೇಷಿಸಬೇಕಾದರೆ ಬಹಳ ಪ್ರಸ್ತುತವಾಗಿದೆ. ಹಾಗಾಗಿ ನನ್ನ ಪೂರ್ವಾಗ್ರಹಗಳನ್ನು ಮೊದಲೇ ಹೇಳಿಕೊಂಡು ಮುಂದುವರೆಯುತ್ತೇನೆ.
೧. ಕಾವೇರಿ ನದಿಯು ದೇಶದ ಆಸ್ತಿಯೆಂದು ಒಪ್ಪಬಹುದಾದರೂ ತಮಿಳರ ಮುಂದೆ ತಲೆಬಾಗುವುದು (ಅದು ಯಾವುದೇ ವಿಷಯವಿರಲಿ) ಕಷ್ಟದ ಕೆಲಸವೆ.
೨. ಸ್ವತಃ ಚಳುವಳಿಯಲ್ಲಿ ಭಾಗವಹಿಸದೇ ಇರುವುದರಿಂದ ಇವನ್ನು ಹೇಳಲು ಒಂದು ಬಗೆಯ ಮುಜುಗರವಿದೆ. ಜೊತೆಗೆ, ಈ ವಿಷಯದಲ್ಲಿ ಇತರರು ಬರೆದುದ್ದನ್ನು ಕೂಲಂಕುಷವಾಗಿ ಓದದೇ ನನ್ನ ಆಲೋಚನೆಗಳನ್ನು ಪ್ರಕಟಿಸುತ್ತಿದ್ದೇನೆ. ಇದೂ ಮುಜುಗರದ ವಿಷಯವೇ.
೩. ಸುಸ್ಥಿರ ಕೃಷಿ, ಸ್ವಲ್ಪ ದೇಸಿ, ಸಮಾಜವಾದ, ಹೀಗೆ ನನ್ನ ಹಲವು ಒಲವುಗಳು ಕೆಲವೊಮ್ಮೆ objectivityಗೆ ಕಲ್ಲುಹಾಕಬಹುದು ಎನ್ನುವ ದಿಗಿಲೂ ಇದೆ.

ಅನಾದಿಕಾಲದಿಂದಿದ್ದ ನಮ್ಮ ದೇಶದ ಅಗಾಧ ವೈವಿಧ್ಯತೆಯು ರಾಷ್ಟ್ರಮಟ್ಟದ ರಾಜಕೀಯದಲ್ಲಿ ಪ್ರಕಟಗೊಳ್ಳುತ್ತಿರುವುದು ಇತ್ತೀಚಿಗಷ್ಟೆ. ಭಾರತವೆಂಬ ರಾಜ್ಯಗಳ ಒಕ್ಕೂಟದಲ್ಲಿ ಅಭಿವೃದ್ಧಿ ಎನ್ನುವುದು ಏನು, ಯಾರಿಗೆ ಮತ್ತು ಹೇಗೆ ಎನ್ನುವ ಪ್ರಶ್ನೆಗಳಿಗೆ ಪೂರ್ವನಿರ್ಧಾರಿತ, ಸಮಾನ ಉತ್ತರಗಳಿಲ್ಲ. ಆದರೆ ಅಧಿಕಾರದ ತೆಕ್ಕೆಯಲ್ಲಿ ಕೆಲವೇ ಸ್ಥಳಗಳ ಕೆಲವೇ ಜನ ಇದ್ದುದರಿಂದ ಕಳೆದ ೫೦ ವರ್ಷಗಳಲ್ಲಿ (ಬ್ರಿಟೀಷರಿದ್ದಾಗಲೂ) ಸುಮಾರಿಗೆ ಈ ಪ್ರಶ್ನೆಗಳಿಗೆ ಒಬ್ಬರೇ ಉತ್ತರಿಸುತ್ತಿದ್ದುದರಿಂದ ಅಂತಹ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ ಅಂತ ನನ್ನ ಭಾವನೆ. ಅಂದರೆ, ಹಿಂದೆ ನಾವೆಲ್ಲ ಒಮ್ಮತ ಹೊಂದಿದ್ದೆವು ಅಂತಲ್ಲ, ನಮ್ಮ ಧ್ವನಿಗಳನ್ನು ಅಷ್ಟೇನು ಕಷ್ಟವಿಲ್ಲದೇ ಮುಚ್ಚಿಸಬಹುದಾಗಿತ್ತು. ಅಭಿವೃದ್ಧಿಯ ದೃಷ್ಟಿಕೋನ ನಿಯಮಿತವಾಗಿತ್ತು ಅಂತ. ಆದರೆ ಪ್ರಾಂತೀಯ ರಾಜಕೀಯ, ಪ್ರಾಂತೀಯ ರಾಜಕಾರಣಿಗಳು ಕ್ರಮೇಣ ರಾಷ್ಟ್ರಮಟ್ಟದಲ್ಲಿಯೂ ಸಬಲರಾದ ಹಾಗೆ, ಅವರವರ ಆಸೆ ಆಕಾಂಕ್ಷೆಗಳೂ ದೇಶದ ಪ್ರಮುಖ ವಿಷಯಗಳಾಗುತ್ತಿವೆ. ಈ ಬದಲಾದ ಪರಿಸ್ಥಿತಿಯಿಂದ ಇಂದು ಕಾಣುತ್ತಿರುವ ಬಿಕ್ಕಟ್ಟುಗಳು ಹೆಚ್ಚು ಹೆಚ್ಚು ಕಳವಳಕಾರಿಯಾಗುತ್ತಿವೆ. ಆದರೆ ಕರ್ನಾಟಕದ ಒಳಗೆ, ಹಾಗು ಅದರ ಮಟ್ಟಿಗೆ ಇದು ಪ್ರಾಯಶಃ ಸುಳ್ಳೇನೋ.. ಮೊದಲಿಂದಲೂ ಒಂದಲ್ಲ ಒಂದು ವಿಷಯದಲ್ಲಿ ಹೋರಾಟ, ಚಳುವಳಿ ಇದ್ದಿದ್ದೇ, ಕರ್ನಾಟಕದ ಏಕೀಕರಣದಿಂದ ಹಿಡಿದು, ಇಂದಿನವರೆಗೂ. ಹಾಗೆಯೇ ತಮಿಳರ ಹೋರಾಟ, ಅವರದ್ದೇ ವಿಷಯಗಳಲ್ಲಿ. ಆದರೆ, ಬ್ರಿಟಿಷರ ಕಾಲದಲ್ಲಿ ಅದೃಷ್ಟದಿಂದ ತಮಿಳರಿಗೆ ನಮ್ಮವರಿಗೆ ವಿರುದ್ಧವಾಗಿ ಮೇಲುಗೈ ಸಿಕ್ಕಿತು. ಇದು ಇತರರಿಗೆ ಪ್ರತಿಕೂಲವೆಂದು ಅರಿತಿದ್ದೂ ತಮಗೆ ಅನುಕೂಲವೆಂದು ಸುಮ್ಮನಿದ್ದದು ತಮಿಳರ ನೈತಿಕ ತಪ್ಪು (ಇದನ್ನಿಂದು ಜಾಣ್ಮೆಯೆಂದೂ ಕರೆಯಬಹುದು)

The Earth has enough resources to meet everyone's needs, but not everyone's greed ಅಂತ ಯಾರೋ ಹೇಳಿದ ನೆನಪು. ಈ ವಾಕ್ಯದ ಅರ್ಥ ನಮ್ಮ ಇಂದಿನ ವಿಕೇಂದ್ರೀಕೃತ ಸಂದರ್ಭದಲ್ಲಿ ಹೆಚ್ಚಿನ ಮಹತ್ವ, ಹೊಸ ತಿರುವು ಪಡೆಯುತ್ತದೆ.
೧. ನಿಯಮಿತ ಸಂಪನ್ಮೂಲಗಳ ಪರಿಸ್ಥಿತಿಯಲ್ಲಿ, ನಮ್ಮ ನಮ್ಮ ಆಕಾಂಕ್ಷೆಗಳು ಬೇರೆಯವರ ಆಸೆಗಳಿಗೆ ಮುಳ್ಳಾಗುತ್ತದೆಯೆಂಬ ವಿಷಯ, ಕೆಲವೊಮ್ಮೆ ಕೇವಲ ಅಸಹಾಯಕತೆ, ಕೆಲವೊಮ್ಮೆ ಬೇಕೆಂದೇ ಇನ್ನೂ ಹೆಚ್ಚು ಸಂಪನ್ಮೂಲಗಳ ಬೇಡಿಕೆಗಳಾಗಿ ತಿರುಗುತ್ತವೆ.
೨. ಸಣ್ಣಪುಟ್ಟ ವಿಷಯಗಳಿಗೂ ದೊಡ್ಡದೊಡ್ಡವರ ಮಧ್ಯಸ್ಥಿಕೆ, ಒತ್ತಡಗಳು ಜಾಸ್ತಿಯಾಗುತ್ತವೆ.
(ಇದೇನು ನಿನ್ನೆ ಮೊನ್ನೆಯದಲ್ಲ. ಗೋಪಾಲಗೌಡರಿಗೇ ಜನರು ಈ ರೀತಿಯ ಒತ್ತಡ ಹೇರುತ್ತಿದ್ದುದ್ದನ್ನು ಕೆ.ವಿ ಸುಬ್ಬಣ್ಣ ನೆನೆಸಿಕೊಂಡಿದ್ದಾರೆ. ಆದರೆ ಅವರೇ ಹೇಳಿದ ಹಾಗೆ, ಅಂದು ಗೋಪಾಲಗೌಡರ ವಿವೇಚನೆ ಜಯಸಿತು, ವಿಧಾನಸಭಾ ಶಾಸಕರ ನಿಜವಾದ ಕರ್ತವ್ಯಗಳೇನು, ಅವರಿಗಿದ್ದ ಜನಬಲವು ಹೇಗೆ ಇಡೀ ರಾಜ್ಯದ ಒಳಿತಿಗಾಗಿ ಬಳಕೆಯಾಗಬೇಕು ಎಂದು ಅರಿತು ನೆಡೆದಿದ್ದರು. ಇಂದು, ಅವೆಲ್ಲ ಕನಸಿನ ಮಾತು.)

ಒಟ್ಟಿನಲ್ಲಿ, ನಮಗೆ ಇತರರ ಚಿಂತೆಯಿಲ್ಲ, ನಮ್ಮ ಓಟು ಬೀಳುವುದಾದರೆ ನಮ್ಮ ನಾಯಕರು ಇತರರ ಬದುಕನ್ನು ನಾಶಮಾಡಿಯಾದರು ನಮ್ಮನ್ನು ಸಂತೈಸಲು ಹಿಂದೆ ಮುಂದೆ ನೋಡುವುದಿಲ್ಲ. ರಾಷ್ಟ್ರಮಟ್ಟದ ಹಲವು ಸುದ್ಧಿಗಳಲ್ಲಿ ಈ ಧಾಟಿಯ decision making processಗಳನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ಕೆಲವೊಮ್ಮೆ ಇದೂ ಕಾಣಲಿಕ್ಕೆ ಸಿಗುವುದಿಲ್ಲ. ಇದನ್ನು ಮುಂದೆ ವಿವರಿಸುತ್ತೇನೆ.

ಇಂದು, ವಿಕೇಂದ್ರೀಕರಣದ ಕೆಲವೇ ಕೆಲವು ತೊಂದರೆಗಳಲ್ಲಿ ಒಂದಾದ ಸಂಪನ್ಮೂಲಗಳ 'Non-optimal usage'(ಇದೇನು ತೊಂದರೆಯೇ ಆಗಬೇಕಾಗಿಲ್ಲ, ಪರಿಹಾರಗಳು ಸಾಕಷ್ಟಿವೆ) ಸರ್ಕಾರದ ವಿಕೇಂದ್ರೀಕರಣದ ಮೊದಲ ಮಟ್ಟ (ರಾಜ್ಯಮಟ್ಟ) ದಲ್ಲಿಯೇ ಕಂಡುಬಂದಿದೆ. ಇಬ್ಬರ ನಿಲುವುಗಳೂ ಮತ್ತೊಬ್ಬರಿಗೆ ವ್ಯತಿರಿಕ್ತವಾಗಿದೆ. ಭಿನ್ನಮನೋಭಾವದ ಪ್ರಜಾಸಂಸ್ಥೆಗಳು ತಮ್ಮಲ್ಲಿಯೇ ಮಾತನಾಡಿ ಕೊಟ್ಟೂ, ಕೊಂಡೂ ಸಮಸ್ಯೆಯನ್ನು ಬಗೆಹರಿಸದೇ ಇರುವುದು ನಿಜವಾದ ತಪ್ಪು. ಈ ತಪ್ಪನ್ನು ವಿಕೇಂದ್ರೀಕರಣದ ನ್ಯೂನತೆಯೆಂದು ಸಬೂಬು ಹೇಳಿ, ಇಲ್ಲಿನ ವಾಸ್ತವವನ್ನು ಅರಿಯುವ ತಾಳ್ಮೆಯಿಲ್ಲದೇ, ಕೇಂದ್ರ ಸರ್ಕಾರವು ನಮ್ಮ್ ರಾಜ್ಯಗಳ ವಿಷಯದಲ್ಲಿ ಬೇಜವಾಬ್ದಾರಿಯಿಂದ ಅಧಿಕಾರ ಚಲಾಯಿಸಿರುವುದೂ ಇದೆ. ಜೊತೆಗೆ, ಸಬಲ ಪ್ರಾಂತೀಯ ಮಿತ್ರಪಕ್ಷವೂ ಕೇಂದ್ರದಲ್ಲಿರುವುದರಿಂದ ಈ ಮಲತಾಯಿಧೋರಣೆಗೆ ಮತ್ತೊಂದು ಮುಖ್ಯಕಾರಣವೂ ದೊರೆತಂತಾಗಿದೆ. ಇದು ಕೇಂದ್ರ ಮತ್ತು ಪ್ರಾಂತೀಯ ಪಕ್ಷಗಳ ನೈತಿಕ ಅಧಃಪತನದ ವಿಚಾರ.

ಕರ್ನಾಟಕದಲ್ಲಾದರೋ ಸಬಲವಾದ ಪ್ರಾಂತೀಯ ಪಕ್ಷವೇ ಇಲ್ಲ. ಇರಬೇಕೋ ಬೇಡವೋ ಎಂಬ ಪ್ರಶ್ನೆಗೆ ಉತ್ತರ ಕೊಡುವಾಗ, ಪ್ರಾಂತೀಯ ಪಕ್ಷವು ಅಸ್ತಿತ್ವದಲ್ಲಿದ್ದು ಏನು ಮಾಡಬೇಕು ಎಂಬುದು ಇತ್ಯರ್ಥವಾಗಬೇಕು. ಕೇಂದ್ರದಲ್ಲಿ ಕೂತು ನಮಗೆ ಸಿಗಬೇಕಾದ ಸಂಪನ್ಮೂಲಗಳೆಲ್ಲವನ್ನು ನಮಗೇ ಸಿಗುವಂತೆ ಮಾಡುವುದಷ್ಟೇಯೋ, ಅಷ್ಟೇ ಮಾಡುವುದಾದರೂ ನಮಗೆ ಸಿಗಬೇಕಾದದ್ದು ಅಂದರೇನು? ನಮ್ಮೆಲ್ಲ ಆಸೆ ಆಕಾಂಕ್ಷೆಗಳ ಪೂರೈಕೆಯೋ ಅಥವ ತೀರಾ ಕಷ್ಟವೆಂದಾಗ ಮಾತ್ರ ಮೂಗುತೂರಿಸಿ ಕೆಲಸ ಸಾಧಿಸಿಕೊಳ್ಳುವುದೋ.. ಅಥವ ಇದ್ಯಾವುದೂ ಅಲ್ಲದೇ, ಕೇವಲ ಅವರಿವರ ಪಕ್ಷಗಳುಹಿಂದೆ ಮಾಡಿರುವುದನ್ನೇ, ಈಗ ಮಾಡುತ್ತಿರುವುದನ್ನೇ ಮಾದರಿಯನ್ನಾಗಿಸಿ ಕಾರ್ಯಪ್ರವೃತ್ತರಾಗುವುದೇ ಮೊದಲಾದ ಪ್ರಶ್ನೆಗಳು ಬಗೆಹರಿಯಬೇಕು. ಆಗಲೇ ಅಂತಹ/ಇಂತಹ ಪಕ್ಷಗಳು ಬೇಕೋ ಬೇಡವೋ ನಿರ್ಧರಿತವಾಗಬಹುದು. (ಇಲ್ಲಿ, ಭಾರತದ ಅಭಿವೃದ್ಧಿಯು ಬ್ರಿಟಿಷರು ಹಾಕಿದ ಪಥದಲ್ಲಿಯೇ ಸಾಗಬೇಕೋ ಅಥವ ಗಾಂಧಿವಾದದ ಬೆಳಕಿನ್ನಲ್ಲಿ Smiling ಸಾಗಬೇಕೋ ಎನ್ನುವ ವಾದವು ಪ್ರಸ್ತುತ.)

ವಾಸ್ತವದಲ್ಲಿ ಇಂದಿಗೆ, ಕೇಂದ್ರದಲ್ಲಿ ನಮ್ಮನ್ನು ಪ್ರತಿಧ್ವನಿಸುವ ಪ್ರಾಂತೀಯ ಪಕ್ಷ ಕರ್ನಾಟಕದಲ್ಲಿ ಇಲ್ಲ. ಆದರೆ ಹಲವು ಪಕ್ಷಗಳಲ್ಲಿ ಹಲವು ನಾಯಕ ಧುರೀಣರಿಗೆ ಸಣ್ಣ ಪುಟ್ಟ ಪಕ್ಷಗಳಿಗಿರುವಷ್ಟು ಸ್ವಂತ ಪ್ರತಿಷ್ಠೆ ಇದೆ. ಅದನ್ನವರು ತಮಗೆ ತೊಂದರೆಯಾದಾಗಲೆಲ್ಲ ಸಾಕಷ್ಟು ಬಳಸಿಯೂ ಆಗಿದೆ. ಆದರೆ ಕಾವೇರಿ ವಿಷಯದಲ್ಲಿ ಇವೆಲ್ಲ ಕೇವಲ ಭಾಷಣಗಳಿಗೆ ಸೀಮಿತವಾದದ್ದು, ಈಗ ಅದೂ ಇಲ್ಲ, ದಿವ್ಯ ಮೌನ ಆಷ್ಟೇ. ಇದಕ್ಕೆ ಪರಿಹಾರ ಕೊಡುವ/ಸೂಚಿಸುವ ತಾಕತ್ತೇ ಇಲ್ಲ. ಯಾಕೆ? ಕಾವೇರಿ ಹಾಗು ಇತರ ನದಿಗಳ ಜಲಾಯನ ಪ್ರದೇಶಗಳಲ್ಲಿ ಕೆಲಸ ಮಾಡಿರುವ ಕೆಲವು ಸರ್ಕಾರಿ ನೌಕರರು ಹೇಳುವಂತೆ, ಇದಕ್ಕೆ ಕಾರಣ ಕೇಂದ್ರದ ಅಧಿಕೃತ ಒಪ್ಪಿಗೆ ತೆಗೆದುಕೊಳ್ಳದೇ, ಸರಿಯಾಗಿ ರಾಜಕೀಯ ಕಾರ್ಯತಂತ್ರಗಳನ್ನು ಯೋಜಿಸಿಕೊಳ್ಳದೇ ಜಲಾಶಯ ನಿರ್ಮಾಣ, ಅಭಿವೃದ್ಧಿ ಕಾರ್ಯಗಳನ್ನು ತಕ್ಷಣಕ್ಕೆ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಬಂದದು. ಇದರಲ್ಲಿ ಸರ್ವರೂ ಸಮಭಾಗಿಗಳಾಗಿರುವುದರಿಂದ ಈಗ ಎಲ್ಲರೂ ಮೂಖಪ್ರೇಕ್ಷಕರಾಗಿ ಉಳಿದುಕೊಂಡಿರುವ ಪರಿಸ್ಥಿತಿ. ಆದರೆ ಇದರಿಂದಲೂ ಪಾಠಕಲಿತಿರುವುದು ಡೌಟೇ. ಇರುವ ಅಧಿಕಾರವನ್ನು, accessabilityಯನ್ನೂ ಬಳಸಿಕೊಳ್ಳದೇ, ಜನಪ್ರತಿನಿಧಿಗಳಾದ ಮೇಲೆ ತೋರಿಸಬೇಕಾದ ಜವಾಬ್ದಾರಿಯನ್ನು ತೊರೆದು ಇನ್ನೂ ಜನರ ಕಣ್ಣಿಗೆ ಮಣ್ಣೆರೆಚುವ ಕಾರ್ಯದಲ್ಲಿ ತೊಡಗಿರುವುದು ಆತಂಕಕಾರಿ. ಇದಕ್ಕೆ ವ್ಯಾಪಕ ವಿರೋಧ ಅವಶ್ಯ.

ರಾಜಕೀಯವೇನಾದರೂ ಆಗಲಿ, ನಮ್ಮಲ್ಲಿ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ವ್ಯಾಪಕ ಚಳುವಳಿ ನಡೆಯುತ್ತಿದೆ. ಈ ಚಳುವಳಿಯಲ್ಲಿ ಭಾಗವಹಿಸದೇ, ಕಾವೇರಿ ನೀರನ್ನು ಈಗಲೂ ಬಳಸುತ್ತಿರುವ, ಮುಂದೆ ಈ ಹೋರಾಟದಿಂದ ಒಳಿತಾದರೆ, ಅದರಿಂದಲೂ ಉಪಯೋಗಪಡುವ ನಾನು, ನನ್ನಂಥವರು ಬಹುಶಃ ಈ ಮಾತುಗಳನ್ನಾಡಬಾರದು. ತಪ್ಪು ಅದು. ಆದರೆ ಇದೇ ತರಹದ ಮತ್ತೊಂದು ವಿಚಾರದಲ್ಲಿ ನಾನು ಕೆಲಸಮಾಡುತ್ತಿರುವುದರಿಂದ, ಸ್ವಲ್ಪವಾದರೂ ನೈತಿಕಹಕ್ಕಿದೆ ಎಂದು ತಿಳಿದು ಈ ಮಾತುಗಳನ್ನಾಡುತ್ತಿರುವೆ.

ಚಳುವಳಿ ಜೋರಾಗಿ ನಡೆಯುತ್ತಿದೆ. ಗಾಂಧೀಜಿ ಇಂದು ಇದ್ದಿದ್ದರೆ, ಬಹುಮಟ್ಟಿಗೆ ಅಹಿಂಸಾತ್ಮಕವಾದ, ಸೃಜನಶೀಲವಾದ ಈ ಚಳುವಳಿಯನ್ನು ನೋಡಿ ಅದರ ವೈಖರಿಯನ್ನು (ವೈಖರಿಯನ್ನು ಮಾತ್ರ) ಖುಷಿಪಡುತ್ತಿದ್ದರೋ ಏನೋ. ಆದರೆ, ಈ ಚಳುವಳಿಯು ಏತಕ್ಕೆ, ಏನನ್ನು ಸಾಧಿಸುತ್ತಿದೆ ಎಂಬುದರ ಚರ್ಚೆಯಾಗಬೇಕಾಗಿದೆ. ನನಗನ್ನಿಸುವ ಹಾಗೆ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಚಳುವಳಿ, ರೈತರ ಜೊತೆ ತಾವಿದ್ದೇವೆ ಅಂತ ೧. ರೈತರಿಗೆ ತೋರಿಸುವುದಕ್ಕೆ, ೨. ಪಾಲ್ಗೊಳ್ಳದೇ ಇರುವವರು, ಯಾರು ಯಾರು ಬಂದರು ಅಂತ ನಮ್ಮಂತೆ ಗಮನಿಸುತ್ತಿರುವವರು, ಇವರಿಗೆ ತೋರಿಸುವುದಕ್ಕೆ.

ಮಿತ್ರರೊಬ್ಬರು ಹೇಳಿದಂತೆ, ಈ ಚಳುವಳಿಯ ಸಿಟ್ಟು, ಚಳುವಳಿಯಲ್ಲಿ ಭಾಗವಹಿಸದೇ ಇರುವವರ ವಿರುದ್ಧ. ರಸ್ತೆ, ರೈಲು ರೋಕೋ ಇವೆಲ್ಲವೂ ಅಂತಹವರನ್ನು ಎಚ್ಚೆರಿಸುವುದಕ್ಕೆ, ಅವರು ಈ ವಿಷಯದಲ್ಲಿ ತಲೆಕೆಡೆಸಿಕೊಳ್ಳದೇ ಆರಾಮಾಗಿದ್ದಾರಲ್ಲ ಅನ್ನುವ ಸಿಟ್ಟಿಗೆ. ಇದು ಬೇಕಾದದ್ದೆ, ನಮ್ಮಂತವರನ್ನು ಬಡಿದೆಬ್ಬಿಸಲಿಕ್ಕೆ. ಆದರೆ ಇಡೀ ಚಳುವಳಿಯು ಇದಕ್ಕೆ ಸೀಮಿತವಾಗಬಾರದು. ಇದು ಚಳುವಳಿಯ ಸಂದೇಶಕ್ಕೆ ಪ್ರತಿಕೂಲವಾಗಿದೆ. ಉದಾಹರಣೆಗೆ, ಹೋರಾಟಕ್ಕೆ ಉತ್ತರ ಎನ್ನುವಂತೆ, ಮುನ್ನೆಚ್ಚೆರಿಕೆಗಾಗಿ ಕನ್ನಡ ಬಾವುಟವನ್ನು ಹಾಕಿ ಬೆಂಗಳೂರಿನಿಡೀ, ಕಂಡ ಕಂಡ ಅಂಗಡಿಗಳೂ ಮಳಿಗೆಗಳೂ ಸುಮ್ಮನಾಗಿ ಬಿಟ್ಟಿವೆ. ಚಳುವಳಿಗಾರರನ್ನು ಆಡಿಕೊಳ್ಳುತ್ತಿವೆ; ಇಷ್ಟೇ ತಾನೆ ನಿಮಗೆ ಬೇಕಾಗಿರುವುದು ಅನ್ನುವ ಹಾಗೆ. ರಾಷ್ಟ್ರೀಯ ಸುದ್ದಿ ಚ್ಯಾನೆಲ್ಲುಗಳು ಚಳುವಳಿಗಾರರನ್ನು 'pro-kannada activists' ಅಂತಲೇ ಸಂಭೋದಿಸಿವೆ. ಕವರೇಜಿನಲ್ಲಿ ಚಳುವಳಿಗೆ ಸಿಗಬೇಕಾದ ಮಾನ್ಯತೆ ಸಿಗದೆ, ಈ ಚಳುವಳಿಯಿಂದ ಯಾರು ಯಾರಿಗೆ ತೊಂದರೆ ಆಯಿತು ಅನ್ನುವುದನ್ನೆ ಪ್ರಮುಖವಾಗಿ ಬಿತ್ತರಿಸಿವೆ. ಒಟ್ಟಿನಲ್ಲಿ, ನಮ್ಮ ಚಳುವಳಿ ಕರ್ನಾಟಕದಲ್ಲಿ ಸೀಮಿತವಾಗಿ, ಅದರ ಮೈಗೆ ಬೇಡದ ಕಲೆ ತಟ್ಟಿ ಅದರ ನಿಜವಾದ ಸಂದೇಶ ಕಳೆದು ಹೋದಹಾಗಿದೆ. ವಾಟಾಳ್ ನಾಗರಾಜರನ್ನು ಈ ವಿಷಯದಲ್ಲಿ ಮೆಚ್ಚಬೇಕಾದದ್ದೇ. ಇಲ್ಲಿ ಮಾಡಬೇಕಾಷ್ಟು ಮಾಡಿ ದಿಲ್ಲಿಗೆ ಹೋಗಿ ಪ್ರತಿಭಟಿಸಿದ ಕೆಲವೇ ಕೆಲವರಲ್ಲಿ ಅವರೂ ಒಬ್ಬ. ಈ ತೀರ್ಪು, ಕೇವಲ ಕರ್ನಾಟಕಕ್ಕೆ ಸಂಭಂದಿಸಿದ್ದಲ್ಲ. ತೀರ್ಪು ಇತ್ಯರ್ಥವಾಗಿರುವುದು ದಿಲ್ಲಿಯಲ್ಲಿರುವ ನ್ಯಾಯಾಧಿಕರಣದಲ್ಲಿ. ಹೋರಾಟ ಅಲ್ಲಿಗೂ ಬಿಸಿ ಮುಟ್ಟಿಸುವಂತಾಗಬೇಕು. ತಮಿಳುನಾಡಿನ ತಮಿಳರಿಗೂ ನಾವೆಷ್ಟು ಕಷ್ಟಕ್ಕೊಳಗಾಗುತ್ತೇವೆ ಎಂಬುದರ ಅರ್ಥವಾಗಬೇಕು.

ಯಾವುದೇ ದೇಶದಲ್ಲಾಗಲೀ, ರಾಜ್ಯದಲ್ಲೇ ಆಗಲೀ, ಅಭಿವೃದ್ಧಿ ಸಮಾನವಾಗಿರುವುದಿಲ್ಲ. ಕೆಲವು ಪ್ರದೇಶಗಳು, ಕೆಲವು ಜನರು ಮಿಕ್ಕವರಿಗಿಂತ ಯಾವಾಗಲೂ ನೋಡಲಿಕ್ಕೆ ಹೆಚ್ಚು ಅನುಕೂಲವಾಗಿರುತ್ತಾರೆ, ನಿಜ. ಆದರೆ, ಇದೇ ನಿಸರ್ಗದ ನಿಯಮವೆಂದು ತಿಳಿದು ನಾವು ಅಭಿವೃದ್ಧಿಯಲ್ಲಿ ಸಮಾನತೆಯೆಂಬುದನ್ನು ಮರೆಯುವುದು ಘೋರ ಅನಾಹುತವಾಗುತ್ತದೆ. ಕಾವೇರಿ ಜಲಾಯನ ಪ್ರದೇಶವು ಯಾವ ಬೆಳೆಯನ್ನು ಬೆಳೆಯಲು ಯೋಗ್ಯ, ಯಾವುದನ್ನು ಬೆಳೆದರೆ ದೇಶದ ಆಹಾರ ಪರಿಸ್ಥಿತಿ ಉತ್ತಮಗೊಳ್ಳುತ್ತದೆ, ಯಾವುದು ಜನರ, ಪರಿಸರದ, ಸುಸ್ಥಿರತೆಯ ದೃಷ್ಟಿಯಿಂದ ಒಳಿತು ಎಂಬುದೆಲ್ಲವೂ ಇತ್ಯರ್ಥವಾದ ಮೇಲೆಯೇ ಯಾರಿಗೆಷ್ಟು ನೀರು ಎಂಬುದರ ವಿಚಾರ. ಸುಮ್ಮನೇ ನಾವು ಇದೇ ಬೆಳೆ, ಇಷ್ಟೇ ಬೆಳೆಯಬೇಕು, ಇದರಲ್ಲಿ ರಾಜಿಯೇ ಇಲ್ಲ ಎನ್ನುವುದು ಪೊಗರಿನ ಮಾತು.

ಭಾರತದ, ಕರ್ನಾಟಕದ ಕೃಷಿಯ ಪರಿಸ್ಥಿತಿ ಇಂದು ಆತಂಕಕಾರಿಯಾಗಿದೆ. ಬೇರೆ ಕ್ಷೇತ್ರಗಳು ಬೆಳೆದಂತೆ ಕೃಷಿಕ್ಷೇತ್ರ ಬೆಳೆಯುವುದು ಕಷ್ಟ. ಇದಕ್ಕೆ ಸಧ್ಯಕ್ಕೆ ಸುಲಭವಾಗಿ ತೇಪೆ ಹಾಕಿ ತೊಂದರೆಗಳನ್ನು ವೃದ್ಧಿಸಿ ಮುಂದಕ್ಕೆ ಹಾಕುವುದಕ್ಕಿಂತ, ಇಂದೇ, ಕಷ್ಟವಾದರೂ, ಸುಸ್ಥಿರವಾದ ಉತ್ತರಗಳನ್ನು ಕಂಡುಕೊಳ್ಳವುದು ಅವಶ್ಯಕ. ಇಂದು, ಕಾಣದ, ಕೇಳದ ಬೆಳೆಗಳನ್ನು, ಮಾರಕ ಪದ್ಧತಿಗಳನ್ನು, ಹಿಂದುಮುಂದಿಲ್ಲದ ಕನಸುಗಳನ್ನು ರೈತ ಕಂಡಿದ್ದಾನೆ, ಜೂಜಾಡುವಂತೆ ಅಳವಡಿಸಿಕೊಂಡಿದ್ದಾನೆ. ಇದಕ್ಕೆ ಪೂರ್ತಿ ಹೊಣೆ ಅವನಲ್ಲದ್ದಿದ್ದರೂ ಅವನ ಜವಾಬ್ದಾರಿ ಸ್ವಲ್ಪವಾದರೂ ಇದೆ. ಸೊರಗುತ್ತಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹೇಗೆ ಸರ್ಕಾರ ನಡೆಸಲಾಗದೇ ಮಾರಿ ಕೈತೊಳೆದುಕೊಳ್ಳುತ್ತದೆಯೋ, ಹಾಗೆಯೇ, ಹಲವು ಬಾರಿ ನಷ್ಟದಲ್ಲಿ ನಡೆಯುತ್ತಿರುವ ಕೃಷಿಕ್ಷೇತ್ರವನ್ನು ಸಾಕುವುದೂ ಕಷ್ಟವೇ. ಯಾವುದು ಲಾಭಕಾರಿಯೋ ಅದರತ್ತ ಒಲವು ಜಾಸ್ತಿ. ಇಳುವರಿ, ಉತ್ಪಾದನೆ ಯಾವ ಸೀಮೆಯಲ್ಲಿ ಹೆಚ್ಚೋ ಆ ಸೀಮೆಯ ಕೃಷಿಗೆ ಹೆಚ್ಚು ಸವಲತ್ತು ಸಿಗುವುದು ಸಹಜವೇ. ನನಗೆ ತಿಳಿದ ಪ್ರಕಾರ ತಮಿಳುನಾಡಿನ ಕಾವೇರಿ ಜಲಾಯನ ಪ್ರದೇಶವು ಕರ್ನಾಟಕಕ್ಕಿಂತ ಹೆಚ್ಚು ಇಳುವರಿ ಕೊಡುತ್ತಿದೆ. (ತಪ್ಪಿದ್ದರೆ ತಿಳಿದವರು ತಿದ್ದುವುದು) ನಮ್ಮ ಭೂಮಿಯನ್ನು ಸಂಪದ್ಭರಿತವಾಗಿಸಬೇಕಾದರೆ, ನೀರು ಮುಖ್ಯವೇ, ಆದರೆ ಅದೊಂದೇ ಅಲ್ಲ, ಮಿಕ್ಕ ಹಲವು ವಿಷಯಗಳ ಕಾಳಜಿ, ಪರ್ಯಾಯ ಮಾರ್ಗಗಳ ಅರಿವು ಅಗತ್ಯ. ಇದಕ್ಕೆ ರೈತರು, ನಾಗರಿಕರು, ಜನನಾಯಕರು ಮುಕ್ತಮನಸ್ಸಿನಿಂದ ಚಿಂತಿಸುವುದು ಅವಶ್ಯ. ಹಾಗೆಯೇ ನೈಸರ್ಗಿಕ ಸಂಪನ್ಮೂಲಗಳ ಎಚ್ಚರಿಕೆಯ ಬಳಕೆ, ಜಾಗೃತ ಜನಸಮೂಹ, ಸಮುದಾಯಗಳು ಇಂತಹ ತೀರ್ಪುಗಳ ತೊಂದರೆಗಳನ್ನು ಎದುರಿಸುವಲ್ಲಿ, ಮುಂದೆ ನಡೆಯುವಲ್ಲಿ ಅತ್ಯವಶ್ಯಕ. ಎಲ್ಲವಕ್ಕೂ ಕೇಂದ್ರಕ್ಕೆ ಹೋಗುವುದು, 'independent studies' ಮುಂತಾದವಕ್ಕೆ ಕೈಹಾಕಿ ಕೈಸುಟ್ಟಿಸಿಕೊಳ್ಳುವುದು ಇವುಗಳಿಗಿಂತ, ಗತಿ, ವಿಗತಿಗಳಿಂದ ಸಂಗತಿಯಾಗುವಂತಹ ಮಧ್ಯಮಾರ್ಗವನ್ನಳವಡಿಸಿಕೊಳ್ಳುವ ಸಹಕಾರೀ ಮನೋಭಾವ ಮುಖ್ಯ. ಹಾಗೆಯೇ, ಕರ್ನಾಟಕದ ಬಲಗಳೇನು, ಅವುಗಳನ್ನು ಜಾಣ್ಮೆಯಿಂದ ಉಪಯೋಗಿಸಿ ನಮ್ಮ ಕುಂದುಕೊರತೆಗಳ ನಿವಾರಣೆಗೆ ಇತರರೊಡನೆ ಚುಕಾಸಿ ಮಾಡುವ ವಿಧಾನವು ಮುಖ್ಯವೇ. ಹೀಗೆ, ನಮ್ಮಲ್ಲಿಯೇ ಇಂತಹ ತೊಂದರೆಗಳನ್ನೆದುರಿಸಲು ಹಲವು ದಾರಿಗಳಿವೆ. ಕಾವೇರಿ ನ್ಯಾಯಾಧಿಕರಣದ ಈ ತೀರ್ಪು, ನಮ್ಮನ್ನೆ ನಾವು ಈ ನಿಟ್ಟಿನಲ್ಲಿ ಅಮೂಲಾಗ್ರವಾಗಿ ಪರಿಶೀಲನೆಗೆ ಒಳಪಡಿಸಿಕೊಳ್ಳಲು ಪ್ರೇರಪಿಸಲಿ ಎನ್ನುವುದು ನನ್ನ ಆಶಯ.

ಕಾವೇರಿ ನಮ್ಮದು, ನಮ್ಮ ಅಧಿಕಾರ ಎನ್ನುವುದು ಸರ್ವಥಾ ಸರಿಯಲ್ಲ. ನಾವೇನು ನೀರನ್ನು ಬೆವರಿಳಿಸಿ ಉತ್ಪಾದಿಸುತ್ತೀವೇ? ಕಾವೇರಿ ಭಾರತದ ಆಸ್ತಿ. ನದಿಯೊಂದು ಎರಡು ದೇಶಗಳಲ್ಲಿ ಹರಿದರೆ, ಆಗ ಅದು ಕೇವಲ ಒಂದು ದೇಶದ ಆಸ್ತಿಯೂ ಅಲ್ಲ. ಆದ್ದರಿಂದ, 'ಪ್ರಾಣ ಬಿಟ್ಟೇವು, ನೀರು ಕೊಡೆವು' ಅನ್ನುವುದಕ್ಕಿಂತ, ನಾವು ಸರಿಯಿದ್ದಲ್ಲಿ, 'ಪ್ರಾಣ ಹೋಗುತ್ತದೆ, ಅದಕ್ಕೆ ಇಷ್ಟೇ ನೀರು ಕೊಡುತ್ತೇವೆ' ಅನ್ನುವುದು ಹೆಚ್ಚು ಸೂಕ್ತ.

Ornamental seperator
  • ಶ್ಯಾಮ ಕಶ್ಯಪ ರವರ ಬ್ಲಾಗ್
  • Login or register to post comments
  • 782 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 26, 2007 - 2:24pm — anupkumart

Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು

anupkumart's picture

ನಿಜ. ಕಾವೇರಿ ಸಮಸ್ಯೆಯನ್ನು ೨ ಕಡೆಯ ರೈತರು ಕುಳಿತು ಚರ್ಚೆ ಮಾಡುವುದೇ ಸೂಕ್ತ. **** **** ರಾಜಕೀಯದವರನ್ನ ಹೊರಗೆ ಇಡಬೇಕು.

ಸೂಚನೆ: ಈ ಕಾಮೆಂಟು ನಿರ್ವಾಹಕರಿಂದ ಎಡಿಟ್ ಮಾಡಲ್ಪಟ್ಟಿದೆ. ಸಂಪದದಲ್ಲಿ ನಿಂದನೆಗಳನ್ನು ಬಳಸಿದಿರಿ. ಹೆಚ್ಚಿನ ಮಾಹಿತಿಗೆ ಈ ಪುಟ ನೋಡಿ

  • Login or register to post comments
  • link
  • Email this ಪ್ರತಿಕ್ರಿಯೆ
February 26, 2007 - 4:08pm — Sunil Jayaprakash

Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು

Sunil Jayaprakash's picture

ಶ್ಯಾಮ ಕಶ್ಯಪ wrote:
ಈ ಚಳುವಳಿಯ ಸಿಟ್ಟು, ಚಳುವಳಿಯಲ್ಲಿ ಭಾಗವಹಿಸದೇ ಇರುವವರ ವಿರುದ್ಧ. ರಸ್ತೆ, ರೈಲು ರೋಕೋ ಇವೆಲ್ಲವೂ ಅಂತಹವರನ್ನು ಎಚ್ಚೆರಿಸುವುದಕ್ಕೆ, ಅವರು ಈ ವಿಷಯದಲ್ಲಿ ತಲೆಕೆಡೆಸಿಕೊಳ್ಳದೇ ಆರಾಮಾಗಿದ್ದಾರಲ್ಲ ಅನ್ನುವ ಸಿಟ್ಟಿಗೆ. ಇದು ಬೇಕಾದದ್ದೆ, ನಮ್ಮಂತವರನ್ನು ಬಡಿದೆಬ್ಬಿಸಲಿಕ್ಕೆ. ಆದರೆ ಇಡೀ ಚಳುವಳಿಯು ಇದಕ್ಕೆ ಸೀಮಿತವಾಗಬಾರದು.

ಶ್ಯಾಮ್ ಕಶ್ಯಪ್, ನೀವು ಪ್ರಸ್ತಾಪಿಸಿದ, ರಕ್ತೇ ಕೊಟ್ಟೇವು, ನೀರು ಕೊಡೆವು ಎಂಬುದು ತಪ್ಪು ಎಂಬ ಮಾತಿಗೆ ನಾನೂ ದನಿಗೂಡಿಸುತ್ತೇನಾದರೂ ಮೇಲಿನ ಮಾತನ್ನು ನಾನು ಖಂಡಿತವಾಗಿಯೂ ಒಪ್ಪುವುದಿಲ್ಲ. ಇಡೀ ಚಳುವಳಿ ನೀವು ಪ್ರಸ್ತಾಪಿಸಿದಷ್ಟು ಸೀಮಿತವಾಗಿಲ್ಲ. ಮೈಸೂರು ಹೆದ್ದಾರಿಯಲ್ಲಿ ಅಡಿಗೆ ಮಾಡಿ, ತಮಿಳುನಾಡಿಗೆ ತೆರಳುತ್ತಿದ್ದ ಮಕ್ಕಳಿಗೆ ಊಟ ಬಡಿಸುವ ಮೂಲಕ ಪ್ರತಿಭಟನೆಗಳನ್ನು ಮಾಡಲಾಗಿದೆ. ಕಾವೇರಿ ಹೆಸರಿನಲ್ಲಿ ಇಲ್ಲಿಯವರೆಗೆ ನಡೆದ ಯಾವ ಪ್ರತಿಭಟನೆಯಲ್ಲಿಯೂ ಹಿಂಸೆಯಾಗಿಲ್ಲ. ಪ್ರತಿಭಟನೆ ಮಾಡುವವರೆಲ್ಲರೂ ಕರ್ನಾಟಕ ರಕ್ಷಣಾ ವೇದಿಕೆಯವರು, ವಾಟಾಳ್ ನಾಗರಾಜ್ ಚೇಲಾಗಳು ಎಂದೆಲ್ಲಾ ಕೆಟ್ಟದಾಗಿ ಯೋಚಿಸುವ ಕನ್ನಡಿಗರ ಸಂಖ್ಯೆಯೇನು ಕಡಿಮೆಯಿಲ್ಲ. ಇದು ಕೇವಲ ಅಪ್ರಬುದ್ಧತೆಯ ಲಕ್ಷಣವೆನ್ನುವುದನ್ನು ಒಪ್ಪಬೇಕಷ್ಟೇ. ಕಳೆದ ವಾರ, ನಾನು ಕಛೇರಿಗೆ ಬರುತ್ತಿದ್ದಾಗ ಒಂದೆಡೆ ಸಹಿ ಸಂಗ್ರಹ ಚಳುವಳಿ ನಡೆಯುತ್ತಿತ್ತು. ಇದರಿಂದಾಗಿ ನಾನು ಕಛೇರಿಗೆ ಸುಮಾರು ಎರಡೂವರೆ ತಾಸು ತಡವಾಗಿ ಬರಬೇಕಾಯಿತು. ಎರಡೇ ಎರಡು ನಿಮಿಷ ಟ್ರಾಫಿಕ್ ಜ್ಯಾಮಿಗೆ ರೋಸಿ, ಛೀ, ಥೂ, ಆಟೋದವರು ದರಿದ್ರದವರು ಎಂದೆಲ್ಲಾ ಓಗುಟ್ಟವ ಕನ್ನಡಿಗರಿಗೆ ಆಟೋದವರ ಕಷ್ಟ ಎಲ್ಲಿ ಅರ್ಥವಾಗಬೇಕು. ಪ್ರತಿಭಟನೆಯಿಂದ ಏನೂ ಕೆಲಸ ಆಗುವುದಿಲ್ಲ ಎಂಬ ಮಾತೆಲ್ಲ ಸುಳ್ಳು. ಕಡೇಪಕ್ಷ ಜನರಿಗೆ ನಮಗೆ ತೊಂದರೆಯಾಗಿದೆ ಎಂಬುದರ ಬಗ್ಗೆ ತಿಳಿವಳಿಕೆಯಾದರೂ ಬರುತ್ತದೆ. ಅಂದು ಇದೇ ಕಾರಣದಿಂದ ಕಛೇರಿಗೆ ಸುಮಾರಾಗಿ ತಡವಾಗಿ ಬಂದ ಇತರ ಸಹೋದ್ಯೋಗಿಗಳಿಗೆ ಅದರ ಹಿಂದಿನ ಉದ್ದೇಶ ತಿಳಿಹೇಳಿದ್ದೇನೆ. "ನಮ್ಮ ದೌರ್ಬಲ್ಯವೆಂದರೆ ಬೇರೆಯವರು ಎಲ್ಲಿ ಬೇಜಾರು ಮಾಡಿಕೊಂಡುಬಿಡುತ್ತಾರೋ ಏನೋ" ಅಂದುಕೊಂಡು ನಮ್ಮನ್ನು, ನಮ್ಮವರನ್ನು ನಾವೇ ಬಯ್ಯುವುದು, ಮತ್ತು ನಮ್ಮನ್ನು ನಾವೇ ಶಿಕ್ಷೆಗೊಳಪಡಿಸಿಕೊಳ್ಳುವುದು.
ಅಂದಹಾಗೆ, ಮುಖ್ಯವಾಗಿ ನಾವು ಗಮನಿಸಬೇಕಿರುವುದು ವರದಿಯನ್ನು ತಯಾರಿಸಿದ ಮುಖಂಡರುಗಳಲ್ಲೇ ಒಮ್ಮತವಿರಲಿಲ್ಲ ಎಂಬುದು. ಅನ್ಯಾಯವಾಗಿರುವದು ನಮಗೆ. ಕಾವೇರಿಯಂತಹ ವಿಷಯಗಳಲ್ಲಿ, ನನ್ನ ನಿಲುವಿನಿಂದ ನನ್ನ ಸಹೋದ್ಯೋಗಿಗಳಿಗೆ ಕಿರಿಕಿರಿಯಾಗುತ್ತದೆಯೇ ಎಂದು ಯೋಚಿಸುವುದು ಅಪ್ರಬುದ್ಧತೆಯ ಲಕ್ಷಣವಷ್ಟೇ. ಏಕೆಂದರೆ, ಬಹುತೇಕ ಕಂಪೆನಿಗಳಲ್ಲಿ, ವೈಯಕ್ತಿಕ ನಿಲುವುಗಳಿಗೆ ಅಡ್ಡಬರುವಂತಹ ನಿಯಮಗಳಿಲ್ಲ.

ಕಾವೇರಿ ಹೆಸರಿನಲ್ಲಿ ನಡೆಯುವ ಪ್ರತಿಭಟನೆಗಳು, ರಾಜಕೀಯ ಬಣ್ಣಕ್ಕೆ ತಿರುಗಿದರೆ ಅದಕ್ಕೆ ಹೊಣೆ ರಾಜಕೀಯ ಮುಖಂಡರಾಗುತ್ತಾರೆಯೇ ಹೊರತು, ರೈತರಾಗಲೀ, ಪ್ರತಿಭಟನಾಕಾರರಾಗಲೀ, ಪ್ರತಿಭಟನೆಯ ಉದ್ದೇಶವನ್ನಾಗಲೀ ಹೊಣೆಯಾಗಿಸಲು ಸಾಧ್ಯವಿಲ್ಲ. ಕಾವೇರಿ ಹೆಸರಿನಲ್ಲಿ ಇಲ್ಲಿವರೆಗೆ ನಡೆದ ಯಾವ ಪ್ರತಿಭಟನೆಗಲೂ ನನಗೆ ಅತಿಯಾಯಿತು ಎಂದೆನಿಸಲಿಲ್ಲ. ಕಾರಣ ಸುಸ್ಪಷ್ಟ. ಟ್ರಿಬ್ಯುನಲ್ ವರ್ಡಿಕ್ಟ್ ಅಂತು ಒಂಚೂರೂ ವೈಜ್ಞಾನಿಕವಾಗಿಲ್ಲ. ಅನ್ಯಾಯ ಆಗಿರುವದು ನಮಗೆ, ನಮ್ಮ ರೈತರಿಗೆ. ನೆನ್ನೆ ಭಾನುವಾರ, ಬೆಂಗಳೂರಿನಿಂದ ಘಾಟಿಗೆ ಹೋಗುವಾಗ, ಅಲ್ಲಲ್ಲಿ ಹೊಲ ಗದ್ದೆಯಲ್ಲಿ, ತೋಟಗಳಲ್ಲಿ ಬೆಳೆದಿದ್ದ ದ್ರಾಕ್ಷಿ, ಕಲ್ಲಂಗಡಿ, ಸೌತೇಕಾಯಿಗಳನ್ನು ಮಾರುವುದರ ಜೊತೆ, ರೈತರು ತೂಗುಬಿತ್ತಿಗಳನ್ನು ನೇತು ಹಾಕಿದ್ದರು. ಅವು ಫ್ಲೆಕ್ಸ್ ಬಾನರ್ರುಗಳಲ್ಲ, ಕೆಲವೆಡೆ chalk pieceನಿಂದ ಬರೆಯಲಾಗಿತ್ತು. ಇವನ್ನು ರಾಜಕೀಯ ಪ್ರೇರಿತ ಎಂದು ಹೇಗೆ ಹೇಳುವುದು. ಕಾವೇರಿ ತೀರ್ಪಿನಿಂದಾಗ ಅತಂತ್ರರಾಗಬಹುದೆಂಬ ಆತಂಕ ರೈತರನ್ನು ಕಾಡುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದಿತ್ತು. ಹಾಗೆಯೇ, ಮೈಸೂರಿನಲ್ಲಿಯೂ ನನ್ನ ಕೆಲವು ಇಂಜಿನಿಯರಿಂಗ್ ಓದುತ್ತಿರುವ ಸ್ನೇಹಿತರು ಪ್ರತಿಭಟನೆ ನಡೆಸಿದ್ದಾರೆ. ಇವುಗಳು ಯಾವುದೂ ಅತಿಯಾಯಿತು ಎನ್ನಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಕುಳಿತು ಸುಮ್ಮನೆ, ಪ್ರತಿಭಟನೆ ಹೆಚ್ಚಾಯಿತು ಎಂದರೆ ಅದಕ್ಕೆ ಯಾವ ಕವಡೆಯ ಕಿಮ್ಮತ್ತೂ ಸಿಗುವುದಿಲ್ಲ. ಏಕೆಂದರೆ ಬೆಂಗಳೂರು, ಕನ್ನಡಿಗರ ಹೆಮ್ಮೆ ಪಡಬೇಕಾದ ಊರು. ಕನ್ನಡಿಗರಿಗೆ ತೊಂದರೆಯಾದರೆ, ಈ ನಗರವನ್ನು ಬಳಸಿ ಕನ್ನಡಿಗರು ಹಕ್ಕೊತ್ತಾಯ ಮಾಡುವುದು ಕನ್ನಡಿಗರ fundamental right. ಅಂದ ಹಾಗೆ, ಬಹುತೇಕ ಕಂಪೆನಿಗಳು ಅವರಿಗಾದ ನಷ್ಟವನ್ನು ಬೇರೆ ರೀತಿಯಲ್ಲಿ ಸರಿದೂಗಿಸಿಕೊಂಡಿರುತ್ತಾರೆ. ಆ ದಿಸೆಯಲ್ಲಿ ನಾವು ನೀವು ಯೋಚನೆ ಮಾಡಬೇಕಿಲ್ಲ. ಏನೇ ಆದರೂ ಕನ್ನಡಿಗರಿಗೆ ಕೆಟ್ಟ ಹೆಸರು ಬರುವುದಿಲ್ಲ ಎಂದು ನಾವು ಯೋಚಿಸಬೇಕೇ ಹೊರತ್ತು, ಸ್ವಲ್ಪ ಪ್ರತಿಭಟನೆ ಮಾಡಿದರೂ ಕೆಟ್ಟೆ ಹಸರು ಬಂದು ಬಿಡುತ್ತದೆಯಪ್ಪಾ ಎಂದು ಯೋಚಿಸಬಾರದು.

ನಾನು ಹೇಳಬೇಕಿರುವುದಿಷ್ಟೇ, ನ್ಯಾಯವಂತೂ ಸಿಗಲಿಲ್ಲ, ಪ್ರತಿಭಟನೆಯ ಹಕ್ಕನ್ನೂ ಕಸಿದುಕೊಂಡು, ಪ್ರತಿಭಟನೆಗಳು ಅತಿಯಾಯಿತು ಎಂದು ಹೇಳುವ ದರ್ಪವನ್ನು ತೋರಲು ನನ್ನಿಂದ ಸಾಧ್ಯವಿಲ್ಲ. ಬೇರೆ ರಾಜ್ಯದ ರೈತರಿಗೂ ನಮ್ಮ ರಾಜ್ಯದ ರೈತರಿಗೂ ಇರುವ ಆರ್ಥಿಕ ಮಟ್ಟವನ್ನು ಅಭ್ಯಸಿಸಿದರೆ ಇವೆಲ್ಲ ತಿಳಿಯುವುದು. ಕರ್ನಾಟಕದ ಕೃಷಿಯ ಬಗ್ಗೆ ಪ್ರಸ್ತಾಪಿಸಿದರಿ. ಆದರೆ ಮಂಡ್ಯದಲ್ಲಿ ತಯಾರಾದ ಸಕ್ಕರೆಗೆ ಮಾರುಕಟ್ಟೆನ್ನೊದಗಿಸದೆ ಬೇರೆ ದೇಶದಿಂದ ಸಕ್ಕರೆಯನ್ನು ಆಮದು ಮಾಡಿಕೊಂಡ ನಿದರ್ಶನಗಳು ಎಷ್ಟೋ ಇವೆ. ಇಂತಹ ವಿವರಗಳನ್ನು ಪತ್ರಿಕೆಯವರೂ ಪ್ರಕಟಿಸುವುದಿಲ್ಲ. ಇಂಜಿನಿಯರುಗಳೂ ರೈತರ ಸಹಾಯಕ್ಕೆ ನಿಲ್ಲವುದಿಲ್ಲ. ಇಂತಹ ವರದಿಗಳನ್ನು ಪ್ರಕಟಿಸಿ ನಮ್ಮ ಎಂ.ಎಲ್. ಎ ಮತ್ತು ಎಂ.ಪಿಗಳಿಗೆ ರೈತಿರಿಂದಲೇ ಚುರುಕು ಮುಟ್ಟಿಸಲು ಸಾಧ್ಯವಿಲ್ಲವೇ ? ಇವುಗಳ ಪ್ರಸ್ತಾಪ ಮಾಡದೆ, ಸುಮ್ಮನೆ "ನಿನ್ನ ಪ್ರತಿಭಟನೆ ಹೆಚ್ಚಾಯಿತು, ತೆಪ್ಪಿಗರು" ಎಂದು ಹೇಳುವದಕ್ಕೆ ನನಗೆ ಖಂಡಿತ ಮನಸ್ಸು ಬರುವುದಿಲ್ಲ.

ಇಷ್ಟೆಲ್ಲ ಆಗುವಾಗಲೂ ನನಗನಿಸಿದ್ದ ಒಂದೇ ಒಂದು ಮಾತು ಏನು ಗೊತ್ತೇ. ಅಷ್ಟಕ್ಕೂ ಒಕ್ಕಲಿಗ ಸರ್ಕಾರವೇ ಇದ್ದು ಇನ್ನೂ ಒಂದು ತೀರ್ಪು ಹೊರಬಿದ್ದಿಲ್ಲ ಎಂದರೆ ಇದಕ್ಕಿಂತ ಬೇಜವಾಬ್ದಾರಿತನ ಇದೆಯೇ?

ರಕ್ತ ಕೊಟ್ಟೇವು, ಕಾವೇರಿ ಬಿಡೆವು ಎಂಬ ನಿಲುವು ೧೦೦ರಲ್ಲಿ ೧ ಪರ್ಸೆಂಟಿರಬಹುದೇ ಹೊರತ್ತು, ಪ್ರತಿಭಟನೆ ಮಾಡುವವರೆಲ್ಲರೂ ಹಾಗೆಯೇ ಇದ್ದಾರೆ ಎನ್ನುವುದು ತುಂಬಾ ತಪ್ಪು. ಹಾ! ನೀವು ಹಾಗೆ ಹೇಳಿದ್ದೀರಿ ಎಂದು ನಾನು ಹೇಳುತ್ತಿಲ್ಲ Eye-wink. ತಮಿಳುನಾಡಿಗೆ ಕಾವೇರಿಯ ಮೇಲೆ ಎಷ್ಟು ನ್ಯಾಯಯುತ ಹಕ್ಕಿದೆಯೂ ಅಷ್ಟೇ ಹಕ್ಕು ಕರ್ನಾಟಕ್ಕೂ ಇದೆ ಎಂಬುದೇ ಬಹುತೇಕ ಪ್ರತಿಭಟನಾಕಾರರ ಒಕ್ಕೊರಲಿನ ಅಭಿಪ್ರಾಯ. ಕರ್ನಾಟಕದ ಹೊಲಗಳಿಗೂ ಕಾವೇರಿ ಹರಿಯಬೇಕು. ಕರ್ನಾಟಕದ ಫಲವತ್ತತೆಯೂ ಹೆಚ್ಚಾಗಬೇಕು. ನಮ್ಮ ರೈತರು ಕೂಡ ಹಣ ಸಂಪಾದಿಸಿ ಇತರರ ಹಾಗೆ ಶ್ರೀಮಂತರಾಗಬೇಕು. ಮಣ್ಣು ಚೆನ್ನಿದ್ದು, ಕೇವಲ ನೀರಿನಿಂದಾಗಿ ಒಬ್ಬ ರೈತ ಬೆಳೆ ತೆಗೆಯಲಾಗಲಿಲ್ಲವೆಂದರೆ ಇದರಲ್ಲಿ ತಪ್ಪು ಯಾರದು ?

  • Login or register to post comments
  • link
  • Email this ಪ್ರತಿಕ್ರಿಯೆ
February 26, 2007 - 4:57pm — ಶ್ಯಾಮ ಕಶ್ಯಪ

Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು

ಶ್ಯಾಮ ಕಶ್ಯಪ's picture

ಸುನೀಲ್,
ನನ್ನ ಲೇಖನವನ್ನು ದಯವಿಟ್ಟು ಮತ್ತೊಮ್ಮೆ ಓದಿ. ನಾನೆಲ್ಲೂ ನಡೆಯುತ್ತಿರುವ ಚಳುವಳಿಯಿಂದ ನಮಗೆ, ಅಥವ ಬೆಂಗಳೂರಿನವರಿಗೆ ತೊಂದರೆಯಾಗುತ್ತಿದೆ ಎಂದಾಗಲೀ, ಚಳುವಳಿ ಅತಿಯಾಯಿತು, ಇವರ ಚಳುವಳಿಯ ಹಕ್ಕನ್ನೇ ಕೀಳಬೇಕು ಎಂದಾಗಲಿ ಹೇಳೇ ಇಲ್ಲ. ವ್ಯತಿರಿಕ್ತವಾಗಿ, ನೀವು ನಿಮ್ಮ ಅನಿಸಿಕೆಯಲ್ಲಿ ಹೇಳಿರುವ ಬಹಳಷ್ಟು ವಿಷಯವನ್ನು ನಾನೂ ಹೇಳಿರುವೆ. ಜೊತೆಗೆ, ಈ ಚಳುವಳಿಯು ಕರ್ನಾಟಕಕ್ಕೆ ಸೀಮಿತವಾಗಿರಬಾರದು ಎಂದು ಹೇಳಿರುವುದರ ಉದ್ದೇಶ ಕೂಡ ಸ್ಪಷ್ಟವಾಗಿದೆ. ಚಳುವಳಿ ಕರ್ನಾಟಕದಲ್ಲೇ ಸೀಮಿತವಾದರೆ, ಅದು ಬಹುಮಟ್ಟಿಗೆ ಕೇವಲ ಭಾಗವಹಿಸದೇ ಇರುವವರ ವಿರುದ್ಧದ ಸಿಟ್ಟಿನ ಪ್ರದರ್ಶನವಾಗುತ್ತದೆ ಅಂತ. (ಇದೂ ತಪ್ಪಲ್ಲ, ಆದರೆ ಸಾಧಿಸುವುದು ಇನ್ನೂ ಮಹತ್ತರವಾದದ್ದು ಅಂತಲೂ ಹೇಳಿರುವೆ)

ಮುಖ್ಯವಾಗಿ
೧.

Quote:
ಪ್ರತಿಭಟನೆಯ ಹಕ್ಕನ್ನೂ ಕಸಿದುಕೊಂಡು, ಪ್ರತಿಭಟನೆಗಳು ಅತಿಯಾಯಿತು ಎಂದು ಹೇಳುವ ದರ್ಪವನ್ನು ತೋರಲು ನನ್ನಿಂದ ಸಾಧ್ಯವಿಲ್ಲ

೨.
Quote:
ಬೆಂಗಳೂರಿನಲ್ಲಿ ಕುಳಿತು ಸುಮ್ಮನೆ, ಪ್ರತಿಭಟನೆ ಹೆಚ್ಚಾಯಿತು ಎಂದರೆ ಅದಕ್ಕೆ ಯಾವ ಕವಡೆಯ ಕಿಮ್ಮತ್ತೂ ಸಿಗುವುದಿಲ್ಲ

ಎಂಬ ವಾಕ್ಯವಗಳು ಇಲ್ಲಿ ಯಾಕೆ ಹೇಳಿರುವಿರೋ ನನಗೆ ತಿಳಿಯದಾಗಿದೆ. ನೀವು ಬರೆದಿರುವ ಬಹಳಷ್ಟು ವಿಷಯಗಳು ನಿಮ್ಮ ಯೋಚನೆ, ನಿಮ್ಮ ಅನಿಸಿಕೆಗಳಷ್ಟೇ, ನನ್ನ ಲೇಖನಕ್ಕೆ ಪ್ರತಿಕ್ರಿಯೆಯಲ್ಲ ಅಂದುಕೊಂಡಿದ್ದೇನೆ.

ಪ್ರತಿಭಟನೆ ಮಾಡಿದವರೆಲ್ಲ ಕಾವೇರಿ ನಮ್ಮದು, ಬೇರೆಯವರದ್ದಲ್ಲ ಎನ್ನುತ್ತಾರೆ ಎಂದೂ ನಾನೆಲ್ಲೂ ಹೇಳಿಲ್ಲ. ನಿದರ್ಶನ ಕೊಟ್ಟು ಹೇಳಬೇಕೆಂದರೆ ಹಾಗೆ ಹೇಳಿರುವುದು ನಮ್ಮ ಚಿತ್ರರಂಗದ ಬಹಳಷ್ಟು ಮಂದಿ, ಇದಕ್ಕೆ ಈಗಲೂ ಹಲವಾರು ಚ್ಯಾನೆಲ್ಲುಗಳಲ್ಲಿ ಕವರೇಜ್ ಬರುತ್ತಿರುತ್ತದೆ, ನೋಡಿ. ಅವರು ಹೇಳಿದ್ರೆ ರೈತರು ಹೇಳಿದ ಹಾಗೆ ಅಂತಲ್ಲ. ಟೀವಿಯಲ್ಲಿ ಹೀಗೆ ಎಲ್ಲರ ಮುಂದೆ ಹೇಳುವುದು ಕಳವಳಕಾರಿ ಎಂದಷ್ಟೇ ನನ್ನ ಅನಿಸಿಕೆ.

ಸರ್ಕಾರ ಆಗಲೀ ಇತರೆ ರಾಜಕಾರಣಿಯರಾಗಲೀ ಏಕೆ ಸುಮ್ಮನಿದ್ದಾರೆ ಎನ್ನುವುದಕ್ಕೂ ಕೆಲವು ಸಾಧ್ಯವಿರಬಹುದಾದ ಉತ್ತರಗಳನ್ನು ನೀಡಿದ್ದೇನೆ. ಸಮಸ್ಯೆ ರಾಜಕೀಯ ಆಟಕ್ಕೆ ಮಾರ್ಪಾಡಾಗಿದೆ, ಹಾಗು ಇದಕ್ಕೆ ಪ್ರತಿಭಟನಾಕಾರರೇ ಹೊಣೆ ಎಂದು ಅರ್ಥಬರುವಂತೆ ನಾನು ಹೇಳಿಲ್ಲ. ಅದನ್ನು ತಮ್ಮ ಅನಿಸಿಕೆಯಷ್ಟೇ ಎಂದು ತಿಳಿದಿದ್ದೇನೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ
February 26, 2007 - 5:38pm — Sunil Jayaprakash

Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು

Sunil Jayaprakash's picture

ಹೌದು ಶ್ಯಾಮ್, ಆ ವಾಕ್ಯಗಳು ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆಯಲ್ಲ. ಅದು ನನ್ನ ಅಭಿಪ್ರಾಯವಷ್ಟೇ, ಬಹುಶಃ ನಾನು ಬೇರೊಂದು ಲೇಖನದಲ್ಲಿ ಬರೆದಿದ್ದರೆ ಚೆನ್ನಾಗಿರುತ್ತಿತ್ತು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾವೇರಿ
  • ಕಾವೇರಿ ಪ್ರತಿಭಟನೆ ಮೆಗಾಧಾರಾವಾಹಿ ಆಗಬೇಕೇ?
  • ಕಾವೇರಿ ನೀರು ಹಂಚಿಕೆ ಬಗ್ಗೆ ತೀರ್ಪು ಹೊರಬಿದ್ದಿದೆ
  • ರಾಜಕಾರಣಿಗಳೂ ಕಾವೇರಿಯೂ
  • ಕಾವೇರಿ ನೀರಿನ ಸಮಸ್ಯೆ
Syndicate content

ಲೇಖಕರು

ಶ್ಯಾಮ ಕಶ್ಯಪ's picture

ಪೂರ್ಣ ಹೆಸರು
ಶ್ಯಾಮ ಕಶ್ಯಪ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 8 ಅತಿಥಿಗಳು ಆನ್ಲೈನ್ ಇರುವರು.

ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator