~
ಕನ್ನಡ ಬೇಗರಣ ಕಟ್ಟಳೆಗಳು
ಈ ಕೆಳಗಿನ ಇಚಾರವನ್ನು, ದಯಮಾಡಿ ಗಮನವಿಟ್ಟು ಓದಿರಿ, ಇದರಲ್ಲಿ ತಪ್ಪು ಕಂಡರೆ, ತಿಳಿಸಿ.
ಕನ್ನಡದ ನಿಜ ಅಕ್ಕರಪಟ್ಟಿ :-
ದನಿಗಳು :- ಅ,ಆ,ಇ,ಈ,ಉ,ಊ,ಎ,ಏ,ಐ,ಒ,ಓ,ಔ,ಅಂ
ಬೆಂಜನಗಳು :-
ಕ, ಗ, ಙ
ಚ, ಜ, ಞ
ಟ, ಡ, ಣ
ತ, ದ, ನ
ಪ, ಬ, ಮ
ಯ, ರ, ಲ, ವ, ಸ, ಹ, ಳ
ಕಟ್ಟಳೆಗಳು
ಒತ್ತಕ್ಕರ ಕಟ್ಟಳೆ :- ಒತ್ತು+ಅಕ್ಕರ ( ಒತ್ತು ಅಕ್ಷರ ). ಅಂದರೆ ಕನ್ನಡದಲ್ಲಿ ಒಂದು ಅಕ್ಕರವನ್ನು ಒತ್ತಿ ಹೇಳುವದನ್ನು, ಬರೆಯುವಾಗ, ಆ ಅಕ್ಕರದ ಕೆಳಗೆ ಅದೇ ಅಕ್ಕರವನ್ನು ಬರೆಯಲಾಗುತ್ತದೆ.
ಉದಾ: ಕಲ್ಲು, ಮುಳ್ಳು, ಸುಳ್ಳು, ಅಕ್ಕರೆ, ಸಕ್ಕರೆ, ಅಗ್ಗ, ಹಿಗ್ಗು, ಸುಗ್ಗಿ, ನುಗ್ಗು, ಪಕ್ಕ, ಚುಕ್ಕ ಹೀಗೆ ಹಲವಾರು.
ಪೊಳ್ಳು, ಗೊಳ್ಳು, ಗೊಡ್ಡು, ಮುತ್ತು, ಸುತ್ತು, ತುತ್ತು, ಕತ್ತು, ಕುತ್ತು, ಸೊತ್ತು. ಬಹಳ ಇವೆ.
ಕಟ್ಟಳೆಯ ಉಲ್ಲಂಗನೆ :- ಒತ್ತಕ್ಕರ ಎಂಬ ಪದದಲ್ಲಿಯೇ 'ಒತ್ತು' ಇದೆ. ಅಂದರೆ ಆ ಅಕ್ಕರವನ್ನು ಒತ್ತಿ ಹೇಳುವುದು. ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರವನ್ನು ಬರೆದರೆ(ಉದಾ: ಪ್ರ), ಅದು ಬೆರಕೆಯಾಗುತ್ತದೆ, ಒತ್ತಕ್ಕರ ಹೇಗಾಗುತ್ತದೆ? ಇದರಲ್ಲಿ ತಪ್ಪಿದ್ದಲ್ಲಿ ತಿಳಿಸಿ.
ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ ಇರುವ ಪದಗಳೆಲ್ಲವೂ ಹೊರಗಿನವೇ ಆಗಿವೆ. ಉದಾ: ಪತ್ರ, ಚಿತ್ರ, ಪಾತ್ರ, ವಿನಮ್ರ, ವಿಕ್ರಮ, ವಿಕ್ರಯ, ಹೀಗೆ ಬಹಳ ಪದಗಳು. ಈ ಪದಗಳು ಕನ್ನಡಿಗರಿಗೆ ಹೊಂದಿಲ್ಲ. ಟಪಾಲು, ಕಾಗದ(ಕಾಗಜ್ ನಿಂದ ಬಂದದ್ದು), ಇಂತವು ಹೊರಗಿನವಾದರೂ ಒತ್ತಕ್ಕರದ ಕಟ್ಟಳೆ ಕಾಪಾಡುವದರಿಂದ ಅವು ಬಲು ಬೇಗ ಕನ್ನಡದ ಪದಗಳಾಗಿವೆ.
ಒಂದು ಉದಾಹರಣೆ: ಡಾ.ರಾಜಣ್ಣರ 'ಬಂಗಾರದ ಪಂಜರ' ಸಿನಿಮಾ ನೀವು ಒಮ್ಮೆ ನೋಡಿರಿ, ಅದರಲ್ಲಿ ಬರುವ ಒಂದು ಸೀನಿನಲ್ಲಿ, ಬೀರ(ರಾಜಣ್ಣ) ಅವನ ತಮ್ಮನ ಜೊತೆ 'ಕ್ಲಬ್' ಗೆ ಹೋಗಿರುತ್ತಾನೆ. ಮರುದಿನ ಅವರ ಅಪ್ಪ(ಲೋಕನಾತ್) 'ನಿನ್ನೆ ರಾತ್ರಿ ಎಲ್ಲಿಗೆ ಹೋಗಿದ್ದೆ' ಅಂತ ಕೇಳುತ್ತಾನೆ, ಅದಕ್ಕೆ ಬೀರ " ದಾಡಿ(ಡ್ಯಾಡಿ) ನಾನು, 'ಕಿಲುಬಿ'ಗೆ ಹೋಗಿದ್ದೆ " ಅನ್ನುತಾನೆ. 'ಅಶಿಕ್ಷಿತನಾದ' ಬೀರ 'ಕ್ಲಬ್' ನ್ನು ಕಿಲುಬು ಮಾಡಿ ತನ್ನ ಪದವಾಗಿಸಿಕೊಳ್ಳುತ್ತಾನೆ. 'ಸುಶಿಕ್ಷಿತನಾದ' ಅವರ ಅಪ್ಪ ಅದನ್ನು 'ಕ್ಲಬ್' ಎಂದು ತಿದ್ದುತ್ತಾನೆ. ![]()
'I was born intelligent, but education ruined me' ಅಂತಾರಲ್ಲ ಹಾಗೆ.
'ಕ್ಲಬ್' ಎಂದು ಬರೆಯುವಲ್ಲಿ ಒತ್ತಕ್ಕರದ ಕಟ್ಟಳೆ ಉಲ್ಲಂಗನೆಯಾಗುವದರಿಂದ ಅದು ಹೊರಗಿನ ಪದವಾಗೇ ಉಳಿಯುತ್ತದೆ. ಅದು 'ಕಲಬು' ಆದರೆ ಅಲಗು, ಮುಲುಕು, ಮೆಲುಕು ಹೀಗೆ ಹಲವಾರು ಪದಗಳಂತೆಯೇ ಇರುವದರಿಂದ ಬಹು ಬೇಗ ಕನ್ನಡ ಪದವಾಗುತ್ತದೆ.
ಹೀಗೆ, ಒಂದು ಅಕ್ಕರದಡಿ ಇನ್ನೊಂದು ಅಕ್ಕರ ಬರುವ ಯಾವುದೇ ಪದ ತೆಗೆದುಕೊಳ್ಳಿ, ಅದನ್ನವರು ನಿಯಮಾನುಸಾರ ತಿದ್ದಿಯೇ ಆಡುತ್ತಾರೆ. ಉದಾ; ಬರಹದಲ್ಲಿ ಬಹಳ ಸಾಮಾನಿಯಾಗಿ(ಸಾಮಾ 'ನ್ಯ' ವಾಗಿ) ಬಳಸುವ 'ಪ್ರಾಣ' ತೆಗೆದುಕೊಳ್ಳಿ, ಅದನ್ನವರು 'ಪಿರಾಣ', ಇಲ್ಲವೇ 'ಪರಾಣ' ಎನ್ನುತ್ತಾರೆ. 'ರಾತ್ರಿ' ಎಂಬುದನ್ನು 'ರಾತರಿ' ಎನ್ನುತ್ತಾರೆ. 'ಚಿತ್ರ' - ಚಿತ್ತಾರ. 'ಸ್ವಚ್ಛ' - ಸೊಚ್ಚ. ಸ್ವಲ್ಪ - ಸೊಲುಪ. ಇಂತಹ ಎಲ್ಲ ಬೆರಕೆ ಪದಗಳು.
ಈಗ ಹೇಳಿ, ಯಾರು ಕಲಿತವರು(ಸುಶಿಕ್ಷಿತರು), ನಾವಾ? ಹಳ್ಳಿಗರಾ?
ಒಂದು ವಿವರಣೆ :- ಬರವಣಿಗೆಯಲ್ಲಿ 'ಬರುತ್ತೀರಾ?' ಎಂದು ನಾವು ಬರೆಯುತ್ತೇವೆ. ಅದನ್ನು ಆಡುವಾಗ 'ಬರ್ತೀರಾ?' ಆಗುತ್ತದೆ. 'ನುಡಿ ಸೊಚ್ಚತೆ ಮತ್ತು ಬರಹದ ಸೊಚ್ಚತೆ' ಬೇರೆ, ಬೇರೆ(OLN ರ 'ಮಡಿ ಭಾಷೆ,ಮಡಿ ಭಾಷೆ' ಬಲಾಗ ನೋಡಿ) ಎಂದು ಹೇಳುವುದನ್ನು, ಈ ಬೆಳಕಿನಲ್ಲಿ ನೋಡಿದಾಗ ಅದು ಸರಿ ಎನ್ನಬಹುದು. 'ಬರುತ್ತಾ' ಎಂಬುದನ್ನು 'ಬರ್ತಾ' ಬರೆದರೆ, ಅದು ತಪ್ಪು, ಏಕೆಂದರೆ, 'ರ್ತಾ' ಇಲ್ಲಿ, ಒತ್ತಕ್ಕರದ ನಿಯಮ ಉಲ್ಲಂಗನೆಯಾಗುತ್ತದೆ.
ದೊಡ್ಡುಸಿರು(ಮಹಾಪ್ರಾಣ)ಗಳು ಏಕೆ ಬೇಡ?
ಸಕ್ಕದದಿಂದ ಅತವಾ ಇನ್ನಾವುದೇ ನುಡಿಯಿಂದ ತಂದ ದೊಡ್ಡುಸಿರಿನ ಯಾವುದೇ ಪದ, ಮಹಾ'ಪ್ರಾ'ಣವನ್ನು ಕಳೆದುಕೊಂಡು, ಕನ್ನಡದ್ದಾಗಿದೆ.
ಉದಾ:
೧) 'ಘಂ'ಟೆ - ಗಂಟೆ, 'ಭ'ಕ್ತಿ - ಬಕುತಿ, ಭೂಮಿ - ಬೂಮಿ,ಬುವಿ (ನೆಲ), ಹಲವು.
೨) ಸಂಧರ್ಭ ಸರಿಯೇ, ಸಂದರ್ಭ ಸರಿಯೇ? ಇಂತಹ ತಲೆಬುಡವಿರದ ಕೇಳಿಕೆ(ಪ್ರಶ್ನೆ)ಗಳೇಕೆ ಹುಟ್ಟುತ್ತವೆ? ಸಂಧರ್ಭ, ಸಂದರ್ಭ ಎರಡೂ ತಪ್ಪು, ಸಂದಬ್ಬ ಸರಿಯಾದ ಬಳಕೆ. ಏಕೆಂದರೆ, ' ಒತ್ತಕ್ಕದ ಕಟ್ಟಳೆ '.
೩) ದೊಡ್ಡುಸಿರಿನ ನಿರ್ ಬಳಕೆಯಿಂದ, ದೊಡ್ಡುಸಿರಿರುವ ನುಡಿಯಿಂದ ಬಂದ ಪದ, ಸರಳವಾಗಿ, ಮತ್ತು ಬಲು ಬೇಗ ಕನ್ನಡದ ಪದವಾಗಿ ಹೋಗುತ್ತದೆ.
ಶ, ಷ ಗಳನ್ನೂ ಬೇಡವೆಂದು ಹೇಳುತ್ತಿರುವುದು ಇದೇ ಕಾರಣಕ್ಕೆ. ಉದಾ: ಘೋಷಣೆ, ಗೋಸಣೆ.
'ವ' ದ ಒಗಟು
ಕನ್ನಡದಲ್ಲಿ 'ವ' ದಿಂದ ಸುರುವಾಗುವ ಪದಗಳಿಲ್ಲ. 'ವ' ದಿಂದ ಸುರುವಾಗುವ ಪದಗಳೆಲ್ಲವೂ ಹೊರಗಿನವೇ.
ವಿಮಾನ - ಇಮಾನ, ವಿಚಾರ - ಇಚಾರ, ವ್ಯವಸಾಯ - ಬೇಸಾಯ, ವ್ಯಂಜನ - ಬೆಂಜನ, ವ್ಯಾಕರಣ - ಬೇಗರಣ
ವೆಂಕ - ಯಂಕ, ವೇದಿಕೆ - ಯೇದಿಕೆ, ವಿನಯ - ಇನಯ
ಬರವಣಿಗೆಯಲ್ಲಿ 'ವ' ನ್ನು ಬೇರೆ ಅಕ್ಕರದೊಂದಿಗೆ ಬರೆದರೂ ಮಾತನಾಡುವಾಗ ಹೆಚ್ಚಿನ ಬಾರಿ, 'ಒ' ಆಗುವುದು.
ಸ್ವಚ್ಚ - ಸೊಚ್ಚ, ಸ್ವಂತ - ಸೊಂತ, ಸ್ವಲ್ಪ - ಸೊಲುಪ, ಬಹುಸ ಈ ಪದಗಳನ್ನು ಮೊದಲು ಹೀಗೆಯೇ ಬರೆಯುತ್ತಿದ್ದರೇನೋ. ಸಕ್ಕದದ ಬೆನ್ನು ಬಿದ್ದ ಬರಹಗಾರರು, "ಒತ್ತಕ್ಕರದ ಕಟ್ಟಳೆ" ಯನ್ನು ಗಾಳಿಗೆ ತೂರಿದ್ದರಿಂದ ಅವು ಬದಲಾಗಿವೆ.
ಸೊಕ್ಕು,ಸೊನ್ನೆ,ಸೊಲ್ಲು,ಸೊಪ್ಪು,ಸೊಂಡಿಲು,ಸೊಗಸು,ಸೊಗಡು ಈ ಪದಗಳಂತೆಯೇ ಮೇಲೆ ಮಾದರಿಸಿದ ಪದಗಳನ್ನು ಬರೆಯಬೇಕು.
ಯಾವುದೇ ಕನ್ನಡ ಬರಹವನ್ನು ಓದುವಾಗ ನಡುವೆ ಬರುವ ಸಕ್ಕದದ, ಇಲ್ಲವೇ ಬೇರೆ ಯಾವುದೇ ನುಡಿಯ, ಹೆಚ್ಚಿನ ಪದಗಳು ಒತ್ತಕ್ಕರದ ಕಟ್ಟಳೆ ಯನ್ನು ಮೀರುವ ಇಲ್ಲವೇ ವ ದಿಂದ ಸುರುವಾಗುವ ಪದಗಳೇ ಆಗಿವೆ.
ಮೈಸೂರು ಮಲ್ಲಿಗೆ : ಏಕೆ ಮೈಸೂರು ಮಲ್ಲಿಗೆ, ಎಲ್ಲರಿಗೂ ಹಿಡಿಸುವುದು? ಬರೆದು ಏಸು ಕಾಲವಾಗಿದ್ದರೂ ಅದರಲ್ಲಿ ಬರುವ ಹಾಡುಗಳು, ಎಲ್ಲರಿಗೂ ಮನಸ್ಸಿಗೆ ಮುದ ನೀಡುವವು. ಬಳೆಗಾರ ಚೆನ್ನಯ್ಯನ ಹಾಡು ಏನು ಸೊಗಸಾಗಿದೆ!. ಇದನ್ನು ಗಮನಿಸಿದಾಗ, ಇದರಲ್ಲಿ ಸಕ್ಕದದ ಪದಗಳ ಬಳಕೆಯಾಗಲಿ, ಮಹಾಪ್ರಾಣಗಳ ಬಳಕೆಯಾಗಲಿ ಇಲ್ಲವೇ ಇಲ್ಲ, ಇದ್ದರೂ ಅವು ಕನ್ನಡದ ನೇಮಗಳನ್ನು ಪಾಲಿಸುತ್ತವೆ. ಏಕೆಂದರೆ "ಬೆರಕೆ ಪದಗಳು" (ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ) ಕನ್ನಡ ಹಾಡುಗಳಲ್ಲಿ ಹೊಂದುವದಿಲ್ಲ, ಮಾತನಾಡುವದರಲ್ಲೂ ಹೊಂದುವದಿಲ್ಲ.
ಜಯ ಕರುನಾಡ ತಾಯಿ.

- ಸಂಗನಗೌಡ ರವರ ಬ್ಲಾಗ್
- Login or register to post comments
- 816 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಧನ್ಯವಾದಗಳು ; ಇಚಾರ ಮಾಡಲು ಹಚ್ಚಿದ್ದ್ದೀರಿ
ಸಂಗನಗೌಡರೇ
ಧನ್ಯವಾದಗಳು ಅನೇಕ ಹೊಸ ವಿಷಯ ತಿಳಿಸಿ , ಇಚಾರ ಮಾಡಲು ಹಚ್ಚಿದ್ದ್ದೀರಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉಪಕಾರವಾಯಿತು(ಧನ್ಯವಾದಗಳು)
ಸರ್, ನೀವು ಬರೆಯುವ ತೆಂಕಣದ ಕನ್ನಡಿಗರು ಮರಾಟಿಗರ ದೊಡ್ಡ ಬಾಯಿಯೊಂದಿಗೆ ಹಾಕಿಕೊಂಡು ಬಂದ ಗುದಮುರಿಗೆಯ ಕತೆಗಳನ್ನು ನಾನು ಓದುತ್ತಿರುತ್ತೇನೆ. ಬಹುಸ ಅದಕ್ಕೆ, ಅಡ್ಡ ಹೆಸರುಗಳು 'ಮೆನಸಿನಕಾಯಿ', 'ಉಳ್ಳಾಗಡ್ಡಿ' ಯಾಗಿರಬೇಕು. ನಮ್ಮ ಪದಗಳನ್ನು ಉಳಿಸಿಕೊಳ್ಳಲು.
ಉ: ಕನ್ನಡ ಬೇಗರಣ ಕಟ್ಟಳೆಗಳು
ಸಂಗನ ಗೌಡರ ಮತ್ತೊಂದು ಹೊಸ ಉಂಕು.. ಬೊಂಬಾಟ್
ವಿಚಾರ = ಉಂಕು!?
ಉ: ಕನ್ನಡ ಬೇಗರಣ ಕಟ್ಟಳೆಗಳು
ಸ್ವರ=ಸೊರ ಸರಿ ಆದರೆ ಕೇಶಿರಾಜ ಒಪ್ಪನು. ಅವನಂದನದರ್ಕೆ ’ಸರ’ವೆಂದು.
ಱ ಮತ್ತು ೞ ಬಗ್ಗೆ ಮಡಿಯೇಕೆ?
ಸ್ವರ=ಉಸಿರುಲಿಗಳು (ಉಸಿರು ತಡೆಯದಿರುವುದಱಿಂದ ಉಸಿರೊಟ್ಟಿಗೆ ಅಕ್ಕರ ಉಚ್ಚಾರವಾಗುವುದಱಿಂದ)
ವ್ಯಂಜನ=ಬೆಂಜನ=ತಡೆಯುಲಿಗಳು (ಉಸಿರು ತಡೆದು ನಿಲ್ಲುವುದಱಿಂದ)
ಉ: ಕನ್ನಡ ಬೇಗರಣ ಕಟ್ಟಳೆಗಳು
ವಾಡಿಕೆ ಶಬ್ದ ಅಚ್ಚಗನ್ನಡದ್ದು ಬೞಕೆಯಲ್ಲಿದೆಯಲ್ಲ. ಮಧ್ಯದಲ್ಲಿ ಅವನು ಅವಳು ಇವೆಯಲ್ಲ. ಹೞಗನ್ನಡದ ವಲಂ ಕೂಡ ಇದೆಯಲ್ಲ.
ಉ: ಕನ್ನಡ ಬೇಗರಣ ಕಟ್ಟಳೆಗಳು
ವರಸೆ ವಂದರಿ ಇವಕ್ಕೆ ನೀವು ಒರಸೆ ಒಂದರಿ ಎನ್ನುತೀರೇನೋ?
ಉ: ಕನ್ನಡ ಬೇಗರಣ ಕಟ್ಟಳೆಗಳು
ಸಂಗನ,
ಶಂಕರಬಟ್ಟರು ಙ್, ಞ್, ಐ ಮತ್ತು ಔ ಕೂಡ ಬೇಕಾಗಿಲ್ಲ ಅಂತ ಹೇಳಿದ್ದಾರೆ.
ಐ ಬದಲು ಅಯ್
ಔ ಬದಲು ಅವ್ ಬಳಸಬಹುದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು