ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › ವಿಶ್ವನಾಥ ರವರ ಬ್ಲಾಗ್

ಜೂನ್ ಎಂಬ ಒಡಲಾಳದ ಪಡಿನೆಳಲು

June 26, 2006 - 9:09pm — ವಿಶ್ವನಾಥ

ಜೂನ್!

ವರ್ಷದಲ್ಲಿ ಇದು ಏಳಕ್ಕೇರದ ಐದಕ್ಕಿಳಿಯದ ಆರನೇ ತಿಂಗಳು. ನನ್ನಂತಹದೇ ಶುದ್ಧ ಮಧ್ಯಮ ವರ್ಗದ ತಿಂಗಳು!

ಜೂನ್ ತಿಂಗಳು ಮುಂಗಾರನ್ನೂ ತನ್ನ ಬೆನ್ನಿಗೇ ಅಂಟಿಸಿಕೊಂಡು ಬರುತ್ತದೆ, ಈ ದಿನಗಳಲ್ಲಿ ರೈತರು ಬಿತ್ತುವ ಖುಷಿಯಲ್ಲಿದ್ದರೆ, ಸಹಕಾರಿ ಬ್ಯಾಂಕುಗಳು ಕೃಷಿಕರಿಗೆ ಎಷ್ಟು ಬೆಳೆ ಸಾಲ ನೀಡಿದರೆ ಎಷ್ಟು ಬಡ್ಡಿ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿರುತ್ತವೆ, ಸಾಲದ ಮೇಲೆ ತೆಗೆದುಕೊಂಡು ಹೋದ ಗೊಬ್ಬರಕ್ಕೆ ಬೆಳೆ ಬಂದ ಮೇಲೆ ರೈತ ದುಡ್ಡು ಕೊಡುತ್ತಾನೋ ಅಥವಾ ಫಸಲು ಬರದೇ ಕೈ ಎತ್ತುತ್ತಾನೋ ಎಂಬ ಅರ್ಧ ಅಪನಂಬಿಕೆ‌ಯಿಂದಲೇ ಗೊಬ್ಬರದ ಅಂಗಡಿಯವರು ದಂಧೆ ಆರಂಭಿಸುತ್ತಾರೆ.

ಮಕ್ಕಳು ಮಾತ್ರ ಈ ವರೆಗೆ ಬೇಸಿಗೆ ರಜೆಯಲ್ಲಿ ಮಜಾ ಮಾಡಿ ಒಲ್ಲದ ಮನಸ್ಸಿನಿಂದ ಪಾಟೀ ಚೀಲ ಹೆಗಲಿಗೇರಿಸಿ ಶಾಲೆಗೆ ನಡೆಯುತ್ತಾರೆ.

ಜಿಟಿ ಜಿಟಿ ಮಳೆ, ಕಿಚಿ ಪಿಚಿ ಕೆಸರು, ಮಗು ಬಿಕ್ಕಿ ಬಿಕ್ಕಿ ಅತ್ತಂತೆ ಸುರಿಯುವ ಮಳೆಯ ಜೂನ್ ತಿಂಗಳ ಮೊದಲ ತಾರೀಖಿನಂದೇ ಶಾಲೆ ಆರಂಭ.

ಅದೇಕೋ ಈ ತಿಂಗಳು ನನ್ನ ಮನಸ್ಸಿನ ಆಳದಲ್ಲಿ ಒಂದು ರೀತಿಯ ಭಯದ ಗಾಯ ಮೂಡಿಸಿಬಿಟ್ಟಿದೆ. ಶಾಲೆ-ಕಾಲೇಜುಗಳ ಮೆಟ್ಟಿಲು ತುಳಿಯುವುದನ್ನು ಬಿಟ್ಟು 10-12 ವರ್ಷಗಳ ಮೇಲಾದರೂ, ವರ್ಷಕ್ಕೊಮ್ಮೆ ಈ ತಿಂಗಳು ಬಂದಾಗ ಈಗಲೂ ನನ್ನ ಮನಸ್ಸಿನಲ್ಲಿ ಒಂದು ರೀತಿಯ ಭಯ, ವಿಷಣ್ಣತೆ,ಕೀಳರಿಮೆ ಮನೆ ಮಾಡಿ‌ಬಿಡುತ್ತದೆ.

ಉತ್ತರ ಕರ್ನಾಟಕದ ಉರಿಬಿಸಿಲಿನ ಕಾವು ಮೇ ಕೊನೆಯ ವಾರದ ಹೊತ್ತಿಗೆ ಕಡಿಮೆಯಾಗಿ ಜೂನ್ ಮೊದಲ ವಾರದಲ್ಲೇ ಒಂದು ರೀತಿಯ ಮೋಡ ಮುಸುಕಿದ ವಾತಾವರಣ. ಪ್ರಕೃತಿಯ ಮನಸ್ಸಿಗೂ ಮೋಡ ಕವಿದಂತಾಗಿ ಬಿಸಿಲಿನ ದರ್ಶನ ಅಷ್ಟಕ್ಕಷ್ಟೇ. ಆಗಾಗ ಬರುವ ಜಿಟಿ ಜಿಟಿ ಮಳೆ, ನನ್ನ ಮನಸ್ಸಿನಲ್ಲೂ ಮೋಡದ ಮುಸುಕಿದ ವಾತಾರವಣ.

ಇದನ್ನು ಮೀರಿಸುವಂತೆ ಕಬ್ಬಿಣದ ಕಡಲೆಯಂತಿದ್ದ ಗಣಿತದ ಸೂತ್ರಗಳನ್ನು ಹೇರುತ್ತಿದ್ದ ಗಣಿತದ ಮೇಷ್ಟ್ರು, ವಿಜ್ಞಾನದ ಕಾಳಿಂಗಪ್ಪ ಮೇಷ್ಟ್ರು, ಪ್ರಾರ್ಥನೆಯ ಸಮಯದಲ್ಲಿ 'ಜಯ ಭಾರತ ಜನನಿಯ ತನುಜಾತೆ...' ಪದ್ಯದ 'ಜಯ ಹೇ, ಜಯ ಹೇ...' ಚರಣವನ್ನು ಸ್ವಲ್ಪವೇ ಏರು-ಪೇರು ಮಾಡಿದರೂ ಇಡೀ ಮುನ್ನೂರೂ ಚಿಲ್ಲರೆ ವಿದ್ಯಾರ್ಥಿಗಳಿಗೆ ಚಬುಕದ (ಬಿದಿರಿನ ಕೋಲು) ಬಿಸಿ ಮುಟ್ಟಿಸುತ್ತಿದ್ದ ಪಿಟಿ ಸರ್... ನೆನಪಿಸಿಕೊಂಡರೆ ಅದೊಂದು worst life ಅನ್ನಿಸಿಬಿಡುತ್ತದೆ. ಯಾರಾದರೂ Student life is golden life ಅಂತ ಹೇಳಿದರೆ, ಅವರು ಸುಳ್ಳು ಹೇಳುತ್ತಿದ್ದಾರೇನೋ ಎಂದು ಅವರ ಬಗ್ಗೇ ನನಗೆ ಗುಮಾನಿ.

ಹೊಸ ಲೇಖಕ್ ನೋಟುಬುಕ್ಕಿನ ಹಿತವಾದ ವಾಸನೆ, ಹೊಸ ಪಠ್ಯ ಪುಸ್ತಕಗಳ ಬಣ್ಣದ ವಾಸನೆ ಆಘ್ರಾಣಿಸುತ್ತ ಪಾಟಿಚೀಲ ಏರಿಸಿಕೊಂಡು ಹುರುಪಿನಿಂದ ಶಾಲೆಗೆ ನಡೆದರೆ, ಒಮ್ಮೊಮ್ಮೆ ಮೊದಲ ಪೀರಿಯಡ್ಡೇ ಗಣಿತದ್ದು! ಸಾಮಾನ್ಯವಾಗಿ ಹಳ್ಳಿಯ ಶಾಲೆಗಳಲ್ಲಿ ನಿಗದಿತ ಟೈಂ ಟೇಬಲ್ ಇಲ್ಲದೇ ಯಾವ್ಯಾವ ಮೇಷ್ಟ್ರಿಗೆ ಯಾವಾಗ ಪುರುಸೊತ್ತಿರುತ್ತದೋ ಆವಾಗ ಅವರು ಪಾಠ ಮಾಡುತ್ತಾರೆ. ನಮ್ಮ ಶಾಲೆಯಲ್ಲೂ ಆಗುತ್ತಿದ್ದುದು ಅದೇ.

ನಾನೂ ಒಬ್ಬ ಮೇಷ್ಟ್ರ ಮಗ ಆಗಿದ್ದರಿಂದಲೋ, ಅಥವಾ ನಾನು ಜಾಣ ಆಗಬೇಕು ಎಂಬ ಕಾರಣದಿಂದಲೋ ಅಥವಾ ಗಣಿತದಲ್ಲಿ ನಾನು ಶತದಡ್ಡ ಅಂದುಕೊಂಡಿದ್ದರಿಂದಲೋ- ಗೆಳೆಯನ ಬೆನ್ನಿನ ಹಿಂದೆ ನನ್ನ ತಲೆ ಹುದುಗಿಸಿ ಕುಳಿತಿದ್ದರೂ ಗಣಿತದ ಮೇಷ್ಟ್ರ ಹದ್ದಿನ ಕಣ್ಣು ನನ್ನ ಮೇಲೆ ಬಿದ್ದೇ ಬಿಡುತ್ತಿತ್ತು. ಭಾರತ-ಪಾಕಿಸ್ತಾನ ಗಡಿಯಲ್ಲಿ ಪೊದೆಯೊಂದರಲ್ಲಿ ಅವಿತು ಕುಳಿತ ವೈರಿಯನ್ನು ನಮ್ಮ ಭದ್ರತಾ ಪಡೆಗಳು ಹೊರಗೆಳೆದು ಗುಂಡಿನ ಮಳೆಗರೆವಂತೆಯೇ ನಮ್ಮ ಗುರುಗಳು ನನ್ನ ಕೈಗೆ ಚಾಕ್ ಪೀಸ್ ಕೊಟ್ಟು ಗಣಿತದ ಸಮಸ್ಯೆಗಳನ್ನು ಬಿಡಿಸಲು ಹೇಳಿ ನನ್ನ ಹಿಂದೆಯೇ AK 47 ಬಂದೂಕು ಹಿಡಿದು ನಿಲ್ಲುವಂತೆ ಬಿದಿರಿನ ಕೋಲು ಹಿಡಿದು ನಿಂತು ಬಿಡುತ್ತಿದ್ದರು. ಎಷ್ಟೋ ಬಾರಿ ಆ ಲೆಕ್ಕ ಬಿಡಿಸಲು ಆಗದೇ ಅವರ ಹೊಡೆತಕ್ಕೆ ನನ್ನ ನಿಕ್ಕರು ಒದ್ದೆಯಾಗಿದ್ದೂ ಇದೆ! ಆದರೆ ನನ್ನ ಪ್ರೀತಿಯ ವಿಷಯಗಳಾದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ತರಗತಿಗಳಲ್ಲಿ ಮೇಷ್ಟ್ರ ಕಣ್ಣಿಗೆ ರಾಚುವಂತೆ ಅನೇಕ ಬಾರಿ ಕೈ ಎತ್ತಿ ಅವರ ಗಮನ ಸೆಳೆದರೂ ನನಗೆ ಪ್ರಶ್ನೆಗಳನ್ನೇ ಕೇಳುತ್ತಿರಲಿಲ್ಲ.

ಹಾಗೆ ನೋಡಿದರೆ, ನಾನು ನೆಮ್ಮದಿಯಿಂದ ಕಲಿತಿದ್ದು ಪಿಯುಸಿ ಮೊದಲ ವರ್ಷದಿಂದಲೇ. ಹತ್ತನೇ ತರಗತಿವರೆಗೂ ವಿಜ್ಞಾನ-ಗಣಿತದ ಉಕ್ಕಿನ ಕಡಲೆ (ಕಬ್ಬಿಣಕ್ಕಿಂತಲೂ ಕಠಿಣ)ಗಳನ್ನು ಅಗಿಯಲಾಗದೇ ಹಲ್ಲು ಮುರಿದುಕೊಂಡಿದ್ದ ನನಗೆ ಹೊಸ ಹಲ್ಲು ಮೂಳೆತದ್ದು ಪಿಯುಸಿಯಲ್ಲೇ. ಎಸ್ಸೆಸ್ಸೆಲ್ಸಿ ವರೆಗೂ ನನ್ನದು ಸೆಕೆಂಡ್ ಕ್ಲಾಸ್ ಜೀವನ. ಫಸ್ಟ್‌ಕ್ಲಾಸ್‌ ಎಂಬುದು ನನಗಾಗ ಗಗನ ಕುಸುಮ. ಆದರೆ ಪಿಯುಸಿಯಲ್ಲಿ ಆರ್ಟ್ಸ್ ವಿಭಾಗಕ್ಕೆ ಸೇರಿದ ಮೇಲೆ ನನ್ನ ಇಷ್ಟದ ವಿಷಯಗಳನ್ನು ಓದುವ ಅವಕಾಶ ಸಿಕ್ಕಿದ್ದರಿಂದ ನಂತರ ಫಸ್ಟ್‌ಕ್ಲಾಸ್‌ಗೆ ಬಡ್ತಿ.

ಶಾಲೆಯ ದಿನಗಳೇಕೆ ಹೀಗೆ ಎಂದು ನಾನು ಅನೇಕ ಬಾರಿ ಯೋಚಿಸಿದ್ದುಂಟು. ಇದು ಕೇವಲ ನನಗೊಬ್ಬನಿಗಾದ ತಳಮಳವೇ, ಮಾನಸಿಕ ಗೊಂದಲವೇ, ಮನೋವೈಜ್ಞಾನಿಕ ಕಾರಣವೇನಾದರೂ ಇರಬಹುದೇ ಎಂದು ಅನೇಕ ಬಾರಿ ತಲೆ ಕೆಡಿಸಿಕೊಂಡಿದ್ದೇನೆ. ಇಂಗ್ಲಿಷ್ ನಾಟಕ ಪ್ರಪಂಚದಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದ, ಸಾಹಿತ್ಯಕ್ಕೆ ಪ್ರತಿಷ್ಠಿತ ನೊಬೆಲ್ ಪಾರಿತೋಷಕ ಪಡೆದ ಜಾರ್ಜ್ ಬರ್ನಾರ್ಡ್ ಶಾ ಕೂಡ
ಇಂತಹದೇ ತಹತಹ ಅನುಭವಿಸಿದ್ದರಂತೆ. ಅವರ ಜೀವನ ಚರಿತ್ರೆಯಲ್ಲಿ ಈ ವಿಷಯದ ಪ್ರಸ್ತಾಪವೂ ಆಗಿದೆ.
ಶಾಲೆ ಮತ್ತು ಕಾಲೇಜಿನಲ್ಲಿ ಬರ್ನಾರ್ಡ್ ಶಾ ವಿಫಲರಾಗಿದ್ದೇ ಹೆಚ್ಚು. ವೈಜ್ಞಾನಿಕವಾಗಿ ತಯಾರಾಗದ, ನಿದ್ರೆ ಬರಿಸುವ ಪಠ್ಯಕ್ರಮ, ಸಾಹಿತ್ಯದ ಹೆಸರಿನಲ್ಲಿ ತಲೆನೋವಾಗುವ ಪಠ್ಯಪುಸ್ತಕ ಮತ್ತು ವರ್ಷವಿಡೀ ಕಲಿತಿದ್ದನ್ನು ಮೂರೇ ಗಂಟೆಗಳಲ್ಲಿ ಕಕ್ಕುವ ಪರೀಕ್ಷಾ ಪದ್ಧತಿಯನ್ನು ಶಾ ತುಂಬಾ ವಿರೋಧಿಸಿದರು. ಜೈಲೇ ಶಾಲೆಗಿಂತ ಎಷ್ಟೋ ಉತ್ತಮ ಎಂಬ ಅಭಿಪ್ರಾಯವನ್ನೂ ಅವರು ತಮ್ಮ ಆತ್ಮಚರಿತ್ರೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಬರ್ನಾರ್ಡ್ ಶಾ ಮಾತಿನಲ್ಲೇ ಹೇಳಬೇಕೆಂದರೆ, In a prison one was not forced to read books written by warders but in the school, one was forced through the hideous imposture of literature called the text-books!

ನನ್ನ ಮಟ್ಟಿಗಂತೂ ಆತನ ಮಾತು ನೂರಕ್ಕೆ ನೂರು ಸತ್ಯ. ಜೂನ್ ತಿಂಗಳಲ್ಲಿ ನನಗೆ ಬೇಸರವಾದಾಗಲೆಲ್ಲ ನಾನು ನೆನಪಿಸಿಕೊಳ್ಳುವುದು ಬರ್ನಾರ್ಡ್ ಶಾ ನನ್ನೇ.

ಮೊನ್ನೆ ಸ್ನೇಹಿತರೊಬ್ಬರು ತಮ್ಮ ನಾಲ್ಕು ವರ್ಷದ ಮಗು ಶಾಲೆಗೆ ಹೋಗಲು ಹಠ ಮಾಡಿದ್ದನ್ನು ಹೇಳಿದಾಗ ಇದೆಲ್ಲ ನೆನಪಾಯಿತು.

ಹೆಚ್ಚಿನ ಲೇಖನಗಳಿಗೆ ಗೆ ದಯವಿಟ್ಟು http://www.vishwaputa.blogspot.com ಗೆ ಭೇಟಿ ಕೊಡಿ

~.~
  • ವಿಶ್ವನಾಥ ರವರ ಬ್ಲಾಗ್
  • Login or register to post comments
  • 1723 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 27, 2006 - 12:39pm — anjali

ಚೆನ್ನಾಗಿದೆ ವಿಶ್ವನಾಥ್

anjali's picture

ಚೆನ್ನಾಗಿದೆ ವಿಶ್ವನಾಥ್ ನಿಮ್ಮ ಲೇಖನ. ನನ್ನ ಮಗಳನ್ನು ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದ ದಿನಗಳಲ್ಲಿ ನನಗೂ ಹೀಗೆಯೇ ನೆನಪುಗಳು ಮರುಕಳಿಸುತ್ತಿದ್ದವು. ಈಗ ಬಿಡಿ, ಬೆಳೆದು ದೊಡ್ಡವರಾದರು. ಆದ್ರೆ ನೆನಪುಗಳು ಯಾವಗ್ಲೂ ಚೆಂದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2006 - 2:37pm — ವಿಶ್ವನಾಥ

ಧನ್ಯವಾದ

ವಿಶ್ವನಾಥ's picture

ಅಂಜಲಿ ಮೇಡಂ ಅವರಿಗೆ,

ನಮಸ್ಕಾರ.

ಶಾಲೆ ಕಲಿತವರಿಗೆಲ್ಲ ಜೂನ್ ತಿಂಗಳು ಮನಸ್ಸಿಗೆ ಒಂದು ರೀತಿ ಆತಂಕ ಉಂಟು ಮಾಡುವ ತಿಂಗಳು.

ಶಾಲೆಗೆ ಹೋಗಲು ಯಾವ ಮಗುವಾದರೂ ಅತ್ತದ್ದನ್ನು ನೋಡಿದರೆ ನನಗೆ ತುಂಬಾ ಪಾಪ ಅನ್ನಿಸಿಬಿಡುತ್ತದೆ. ಮಕ್ಕಳು ನಗುನಗುತ್ತ ಶಾಲೆಗೆ ಹೋಗುವ ದಿನಗಳು ಎಂದು ಬಂದಾವು ಎಂದು ನಾನು ಎದುರು ನೋಡುತ್ತಿದ್ದೇನೆ.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

-ವಿಶ್ವನಾಥ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2006 - 11:40pm — ಶ್ರೀನಿಧಿ

ಜೂನ್

ಶ್ರೀನಿಧಿ's picture

ಜೂಊಊನ್ ಅಂತ ಮಕ್ಕಳು ಅಳುವಾಗ್ಲೇ ಗೊತ್ತಾಗುತ್ತೆ, ಜೂನ್ ಎಷ್ಟು ಕಷ್ಟ ಅಂತ. ನನಗೆ ಶಾಲೆಯಲ್ಲಿ ಎಲ್ಲಾ ವಿಷಯಗಳೂ ಬೇಜಾರೆ. ಬೇಸಿಗೆಯಲ್ಲಿ ನಾಲೆಯಲ್ಲಿ ಈಜಾಡಿಕೊಂಡು ಸೋಮಾರಿ ತರಹ ಇದ್ದ ನನಗೆ ಜೂನ್ ಬಂದರೆ ಏನೋ ದುಃಖ. ಸುತ್ತ-ಮುತ್ತಲಿನ ಹುಡುಗರ ಮುಖ ನೋಡಿ ಸಮಾಧಾನ ಅಷ್ಟೆ. ನಿತ್ಯ ತಟ್ಟೆ ಊಟದಿಂದ ಡಬ್ಬಿಗೆ ಸ್ಠಳಾಂತರ. ಕೆಲಸಕ್ಕೆ ಸೇರಿದಮೇಲೆ ಇನ್ನೂ ಕಷ್ಟ. ಪ್ರತೀ ಸೋಮವಾರ ಇದೇ ಗೋಳು. ಆಗ ಅಕ್ಟೋಬರ್ ರಜೆಯ ಕನಸು ಈಗ ಮುಂದಿನ ವೀಕೆಂಡ್ ಆಸೆ ಆಷ್ಟೆ ವ್ಯತ್ಯಾಸ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2006 - 2:02pm — ವಿಶ್ವನಾಥ

ಧನ್ಯವಾದ

ವಿಶ್ವನಾಥ's picture

ಶ್ರೀನಿಧಿಯವರೇ,

ನಮಸ್ಕಾರ.

ನಿಜಕ್ಕೂ ನೀವು ಹೇಳಿದ ಹಾಗೆ ಜೂ..........ನ್ ಕಷ್ಟ ಕಷ್ಟ. ಶಾಲೆಯಲ್ಲಿದ್ದಾಗ ಜೂನ್ ಫೋಬಿಯಾ, ಕೆಲಸಕ್ಕೆ ಸೇರಿದ ಮೇಲೆ Monday ಫೋಬಿಯಾ! ಕೊನೆಯಿಲ್ಲವೇ ಇವಕ್ಕೆ.

ಲೇಖನ ಓದಿದ್ದಕ್ಕೆ ಧನ್ಯವಾದಗಳು.

-ವಿಶ್ವನಾಥ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾರ
  • ಪ್ರಸವ ವೇದನೆ?!
  • ನನಗೆ ತು೦ಬ ತು೦ಬ ಅನ೦ದ ಅನೇಕ ಓದುಗರನ್ನು ಲೇಖನಗಳನ್ನು ನಾನು ಸಹ ನನ್ನ ಲಿ೦ಕಿನಲಿ ನೊಡಲು
  • ’ಸಂಪದ ಕನ್ನಡ ತಾಣ" ಕ್ಕೆ ಪಾದಾರ್ಪಣೆ. ಅರ್ಥಾತ್ ಮೊದಲ ಹೆಜ್ಜೆ !
  • ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
Syndicate content

ಲೇಖಕರು

ವಿಶ್ವನಾಥ's picture

ಪರಿಚಯ

I am web journalist. Reading Kannada novels, watching art movies, travelling are my hobbies.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator