ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ?
ಒಬ್ಬಾತ ಬ್ಲಾಗ್ ಯಾಕೆ ಬರೀತಾನೆ ಅಂತ ನಾನು ಅನೇಕ ಬಾರಿ ಯೋಚಿಸಿದ್ದೆ. ಉದ್ದುದ್ದದ ಹೆಸರುಗಳಿರುವ ಬ್ಲಾಗ್ ನೆನಪಿಡುವುದೂ ಕಷ್ಟ. ಇನ್ನು ಅಂತರ್ಜಾಲದಲ್ಲಿ ಈಗಾಗಲೇ ಇರುವ ಮಾಹಿತಿಯ ಕೆನೆಯಲ್ಲಿ ಮಾತ್ರ ತೇಲಾಡುತ್ತಿರುವ ನಾವು ಇನ್ನಷ್ಟು ಮಾಹಿತಿಯನ್ನು ಬರೆದು ಅದಕ್ಕೆ ಹಾಕಿ ನಮ್ಮನ್ನು ನಾವೇ ಬಿಚ್ಚಿಕೊಳ್ಳುವುದು ಬೇಕು ಬೇಡದ್ದೆಲ್ಲವನ್ನೂ ಪ್ರಪಂಚಕ್ಕೆ ತಿಳಿಸಿ ಹೇಳುವುದು ಇದರಿಂದ ನಾವೇ ಅಲ್ಲದ ಒಂದು ನಾವು ರೂಪುಗೊಳ್ಳುವುದು ಇತ್ಯಾದಿ ನನಗೆ ಬ್ಲಾಗ್ ಎಂಬ ಕಾನ್ಸೆಪ್ಟ್ ಕೇಳಿದ ದಿನದಿಂದ ಕಾಡುತ್ತಿದೆ. ಮೊಬೈಲ್ ಫೋನ್ ಬಂದ ನಂತರ ನಮ್ಮ ಜೀವನದಲ್ಲಿ ಆದ ದೊಡ್ಡದೊಂದು ಬದಲಾವಣೆ ಎಂದರೆ ಜನ ಎಲ್ಲೆಂದರಲ್ಲಿ ದೊಡ್ಡದಾಗಿ ತಮ್ಮ ಮನೆಯ ವಿಷಯವನ್ನು ತೀರಾ ಮುಜುಗರದ ವಿಷಯಗಳನ್ನು ದಾರಿ ಮಧ್ಯೆ ತಮಗೇ ಗೊತ್ತಿಲ್ಲದಂತೆ ದೊಡ್ಡದಾಗಿ ಮಾತನಾಡುತ್ತಾ ನಡೆದಾಡುವುದು.
ಈ ಬಾರಿಯ ಹೋಳಿ ಹಬ್ಬದ ದಿನ ರಾತ್ರಿ ನಾನು ಪಟ್ನಾ ವಿಮಾನ ನಿಲ್ದಾಣದಲ್ಲಿ ಕೂತು ಕಾಯುತ್ತಿದ್ದೆ. ಅಕಸ್ಮತ್ತಾಗಿ ``ರಂಗ್ ಬರಸೇ... ಭೀಗೇ...'' ಎಂದು ಹಾಡುತ್ತಾ ಒಬ್ಬ ನಡುವಯಸ್ಸಿನ ವ್ಯಕ್ತಿ ತೂರಾಡುತ್ತಾ ಬಂದು ನನ್ನ ಪಕ್ಕದಲ್ಲಿ ಕುಳಿತ. ಭಾಂಗ್ ಆತನ ನೆತ್ತಿಯೇರಿತ್ತು. ಕೈಯಲ್ಲಿದ್ದ ಮೊಬೈಲಿನಲ್ಲಿ ಮಾತನಾಡುತ್ತಿದ್ದ. ಖಾಲಿ ಇದ್ದ ವಿಮಾನ ನಿಲ್ದಾಣದಲ್ಲಿ ಈತನೊಬ್ಬನದೇ ಸ್ವರ ಉಳಿದ ಕೆಲವೇ ನಾವು ಶ್ರೋತೃಗಳು! ಮುಂದಿನ ಐದೇ ನಿಮಿಷದಲ್ಲಿ ಆತನ ಹೆಸರು (ಅದು ಇಲ್ಲಿ ಬೇಡ ಬಿಡಿ) ಆತನಿಗೆ ಇಬ್ಬರು ತಂಗಿಯರು ಇರುವುದು, ಆತನಿಗೆ ಮದುವೆಯಾಗಿರುವುದು, ಮಗ ಈ ಬಾರಿ ೧೨ನೇಯಲ್ಲಿ ಇರುವುದು, ಅಜ್ಜಿಗೆ ಅನಾರೋಗ್ಯ ಇರುವುದರಿಂದಾಗಿ ಅವರಿಗೆ ಹೋಳಿ ತಪ್ಪಿದ್ದು ಇತ್ಯಾದಿ ನಮಗೆ ತಿಳಿಯಿತು!
ನಮ್ಮ ಬ್ಲಾಗ್ ಕೂಡಾ ಅಂಥಾ ಒಂದು ಹವ್ಯಾಸ ಎಂದು ನನ್ನ ಅನಿಸಿಕೆ. ಅಕಸ್ಮತ್ತಾಗಿ ಅಂತರ್ಜಾಲ ಜಾಲಾಡುವವರಿಗೆ ಸಿಗುವ ಬ್ಲಾಗ್‍ಗಳು ಅಥವಾ ನಮ್ಮ ಪರಿಚಿತರೇ ಮತ್ತೆ ಮತ್ತೆ ಓದಿ ಬೋರಾಗುವ ಬ್ಲಾಗ್‍ಗಳು, ನಮ್ಮನ್ನು ನಾವೇ ಬಿಚ್ಚಿಟ್ಟು ಹೊಗಳಿಸಿಕೊಳ್ಳುವ ಅಥವಾ ಕೀಳಾಗಿಸಿಕೊಳ್ಳುವ ಬ್ಲಾಗ್‍ಗಳು ಇವನ್ನು ನಾನ್ಯಾಕೆ ಬರೆಯುತ್ತೇನೆ ಎಂಬ ಸಂಶಯದಲ್ಲಿ ನಾನಿದ್ದೇನೆ. ನೀವ್ಯಾಕೆ ಬ್ಲಾಗ್ ಬರೆಯುತ್ತೀರೆಂದು ಟಿಪ್ಪಣಿ ಸೇರಿಸುತ್ತೀರಾ...?

- Abhaya Simha ರವರ ಬ್ಲಾಗ್
- Login or register to post comments
- 610 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಬ್ಲಾಗ್ ಅಂದರೆ ದಿನಚರಿಯೇ ಅಲ್ಲ ಅನ್ನಿಸುತ್ತದೆ..
ಬ್ಲಾಗ್‍ನಲ್ಲಿ ಘಟನೆಗಳ ಬಗ್ಗೆ ಅನಿಸಿಕೆ,ಬರಹ,ಸಾಹಿತ್ಯ,ವಿಮರ್ಶೆ,ಹಾಸ್ಯ ಹೀಗೆ ವೈಯುಕ್ತಿಕವಲ್ಲದ್ದನ್ನು ಬರೆಯುವವರೇ ಹೆಚ್ಚು. ಮೊಬೈಲ್‍ನಲ್ಲಿ ಮಾತನಾಡಿದಂತೆ ಬ್ಲಾಗ್ ಬರೆಯುವವರು ಇದ್ದಾರೆಯೇ?
ಬ್ಲಾಗುಗಳ ಕಥೆ
ಬರೆಯಲು ಪ್ರಯತ್ನಿಸುವ ಎಲ್ಲರಿಗೂ ಮನಸ್ಸಿನಲ್ಲಿ 'ನೀವು ಬರೆದದ್ದು ಚೆಂದವಾಗಿದೆ' ಎಂದು ಹೇಳಿಸಿಕೊಳ್ಳಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಕೆಲವರಿಗಂತೂ ಇದು ವಿಪರೀತ ಹೆಚ್ಚು. ಅಂತರ್ಜಾಲದಲ್ಲಿ ತಮ್ಮದೊಂದು ಮನೆ ಕಟ್ಟಿಕೊಳ್ಳುವುದು ದಿನೇ ದಿನೇ ಸುಲಭವಾಗುತ್ತಿರುವಂತೆಲ್ಲ ಈ ಸಹಜ ಬಯಕೆಗೊಂದು ಸಾಧನ ಲಭ್ಯ.
ನನ್ನ ಸ್ವಂತದ ಅನುಭವದಿಂದ ಇಷ್ಟು ಹೇಳಬಲ್ಲೆ:
ಹೊಸತಾಗಿ ಬರೆಯುವವರಿಗೆ ಅಂತಹ ಸಾಧನ ಮೊದಮೊದಲಿಗೆ ಸಾಕಷ್ಟು ಸಂತೋಷ, ತೃಪ್ತಿ ತಂದುಕೊಡಬಲ್ಲುದು. ತಮ್ಮದೊಂದು ಬ್ಲಾಗ್ ಎರಡು ಮೂರು ಕ್ಲಿಕ್ಕುಗಳಲ್ಲೇ ನಿರ್ಮಿಸಿ, ಅದರಲ್ಲೊಂದು ಲೋಕ ಕಂಡುಕೊಂಡು ತಮ್ಮ virtual ಸ್ನೇಹ ಸಮೂಹವೊಂದನ್ನು ನಿರ್ಮಿಸಿಕೊಂಡು ಸಂತೋಷಪಟ್ಟಿಕೊಳ್ಳುತ್ತಾರೆ. ಹೀಗೆ ಬರೆಯುವವರು ಒಂದು ಹದ ಕಂಡುಕೊಳ್ಳದಿದ್ದಲ್ಲಿ ಎಲ್ಲ ಆಸಕ್ತಿ, ಮತ್ತು initial excitement ದಿನೇ ದಿನೇ ಕಣ್ಮರೆಯಾಗುತ್ತ ಹೋಗುತ್ತದೆ. ಅದೇ ಕೆಲವು ಸ್ನೇಹಿತರು, ಬೋರಾಗುವ ಅದೇ ಚರ್ಚೆಗಳು ಬೇಸರ ತರಿಸುವ ತನಕ ನಡೆದಿರುತ್ತದೆ. ಕೊನೆಗೊಂದು ದಿನ ಆ ಪುಟ ಎಲ್ಲದರೊಂದಿಗೆ ಸೇರಿಹೋಗಿ ಮೂಲೆಯೊಂದರಲ್ಲಿ ಅದರ ಲೇಖಕನ ಗಮನವನ್ನೂ ಸೆಳೆಯದಂತಹ ಪರಿಸ್ಥಿತಿಯಲ್ಲಿ ಕಾಣದಂತಾಗುತ್ತದೆ.
ಮೊದಲ ಆಸಕ್ತಿ ಕಳಕೊಂಡ ನನ್ನಂತಹ ಕೆಲವರು ಸಮುದಾಯವೊಂದನ್ನು ಹುಡುಕಿಕೊಂಡು ಹೋಗುತ್ತಾರೆ. ಸಮುದಾಯದಲ್ಲಿ ಹೆಚ್ಚಿನ ಹೊಸ ಓದುಗರು, ಹೊಸ ಅಭಿಪ್ರಾಯಗಳು, ಹೊಸ ದೃಷ್ಟಿಕೋನಗಳು ಹಾಗೂ ಮುಖ್ಯವಾಗಿ ವೈವಿಧ್ಯ ಸಿಗುತ್ತವಷ್ಟೆ. ಆಸಕ್ತಿ ಮೂಡಿಸುವ ಚರ್ಚೆಗಾಗಿ ಟಿ ವಿ ಚ್ಯಾನಲ್ಲುಗಳನ್ನು ಬದಲಾಯಿಸಿದಂತೆ ಹೆಚ್ಚು ಹುಡುಕಬೇಕಿರುವುದಿಲ್ಲ. (ಹೀಗಿದ್ದೂ ಕೆಲವೊಮ್ಮೆ ಸಮುದಾಯಗಳೂ ಬೇಸರ ತರಿಸುವಷ್ಟು ನೀರಸವಾಗಬಹುದು (ಆರ್ಕುಟ್ ನೋಡಿದ್ದರೆ ನಿಮಗೆ ತಿಳಿದಿರುತ್ತದೆ). ಆದರೆ ಸಮುದಾಯಗಳಲ್ಲಿ ಬದಲಾವಣೆಯ ಗತಿ ಹೆಚ್ಚಿರುವುದರಿಂದ ಚೇತರಿಸಿಕೊಳ್ಳುವ, ಮತ್ತೊಮ್ಮೆ ಆಸಕ್ತಿದಾಯಕವಾಗುವ possibilityಯಂತೂ ಇರುತ್ತದೆ).
ಬ್ಲಾಗುಗಳನ್ನು ಬರೆಯಲು ಪ್ರಾರಂಭಿಸುವವರು ಹಲವು ಬಾರಿ ಬರೆಯಲು ಬೇರೇನೂ ಸಿಗದಂತಾಗಿ ತಮ್ಮ ದಿನನಿತ್ಯ ಜೀವನದ ಬಗ್ಗೆ, ದಿನೇ ದಿನೇ ಕುಕ್ಕುವ ವಿಷಯಗಳ ಬಗ್ಗೆ rant ಬರೆದುಕೊಳ್ಳೋದು ಸರ್ವೇ ಸಾಮಾನ್ಯ. ಹೀಗೆ ಬರೆದುಕೊಳ್ಳುವುದರಿಂದ ತಮ್ಮ ರೀತಿಯಲ್ಲೇ ಸೆಲೆಬ್ರಿಟಿ ಸ್ಟೇಟಸ್ ಕಂಡುಕೊಳ್ಳುತ್ತಾರೆ. ನಮ್ಮ ಅಮೇರಿಕದ ಸ್ನೇಹಿತರು ಇನ್ನೂ ಮುಂದು - ಜತೆಗಿರುವ ಸ್ನೇಹಿತೆಯರ ಬಗ್ಗೆ, ಹಳೆಯ ಸ್ನೇಹಿತೆಯೊಂದಿಗೆ ಟೂ ಬಿಟ್ಟು ಹೊಸ ಸ್ನೇಹಿತೆಯೊಂದಿಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಎಲ್ಲ ಸಾರಾಸಗಟು ಗೀಚಿಕೊಂಡಿರುತ್ತಾರೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ನಟಶೀರೋಮಣಿಗಳ ಜೀವನದ ಚೂರು ಪಾರೂ ಮುಖಪುಟ ಅಲಂಕರಿಸುವ ಸಂಸ್ಕೃತಿಯ ಬಯಕೆಯುಳ್ಳವರಂತೆ. ಕೆಲವರು ಪ್ರಾರಂಭದಿಂದಲೇ ತಮ್ಮ ಜೀವನ ಚಿತ್ರವನ್ನು ಬರೆಯಲೆಂದೇ ಬ್ಲಾಗು ಬಳಸುತ್ತಾರೆ. ಅಂತವರಲ್ಲಿ ಹಲವರಿಗೆ ಸ್ನೇಹಿತರೊಂದಿಗಿನ ನಿಜವಾದ ಆಫ್ಲೈನ್ ಚರ್ಚೆ ಕಡಿಮೆ ಎಂದು ಹಲವರ ಅಂಬೋಣ. ನಿಜವೋ ಸುಳ್ಳೋ, ಎಂದೂ ಕಂಡರಿಯದ ಓದುಗರಲ್ಲಿ ಅವರು ತಮ್ಮ ಸ್ನೇಹಿತರನ್ನು ಕಂಡುಕೊಳ್ಳುವುದು ಪರಮ ಸತ್ಯ. ಓದುಗರಿಗೂ ದೂರದ ಬೆಟ್ಟದಂತಿರುವ ಜೀವನದ ಸ್ವಾರಸ್ಯ ಆಕರ್ಷಿಸದೇ ಇರದು.
*******
"been there, done that" ಎಂಬ ಪರಿಸ್ಥಿತಿಯಲ್ಲಿರುವವರಿಗೆ ಮಾತ್ರ ಬರೆಯುವುದೊಂದು ಅಭ್ಯಾಸ, ಬರವಣಿಗೆಯ ಮೂಲಕ ಅವರ ಅನುಭವಗಳನ್ನು, ತಿಳುವಳಿಕೆಯನ್ನು ಹೆಚ್ಚು ಜನರೊಂದಿಗೆ ಹಂಚಿಕೊಳ್ಳುವ ಮನಸ್ಸು. ಅಂತವರು ಬರೆಯಲು ಪ್ರಯತ್ನಿಸುವುದಿಲ್ಲ ನೇರ ಬರೆಯುತ್ತಾರೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಪ್ರಶ್ನೆಗೆ ಉತ್ತರ
ಆದರೆ ಮೇಲೆ ಬರೆದದ್ದು ನಿಮ್ಮ ಪ್ರಶ್ನೆಗೆ ಉತ್ತರಿಸಲಿಲ್ಲ. ಈಗಿನಂತೆ ನನ್ನ ಬ್ಲಾಗ್ ಬರೆಯುವಿಕೆ ಮೇಲೆ ತಿಳಿಸಿದ ಮೊದಲನೆಯ ವರ್ಗದವರಂತೆ "Initial excitement" ಕಳೆದುಕೊಂಡು ಸೀಮಿತಗೊಂಡುಬಿಟ್ಟಿದೆ.
ಈಗೇನಿದ್ದರೂ ಬರೆದು ಹಂಚಿಕೊಳ್ಳುವಂತಹ ಸರಕಿದ್ದರೆ ಮಾತ್ರ ಬರೆಯೋದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
RE: ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ?
ಮನುಷ್ಯ ತನ್ನ ಕತೆಯನ್ನು ಇನ್ನೊಬ್ಬನೊಡನೆ ಹಂಚಿಕೊಳ್ಳುವುದು ಒಂದು ಅಭಿಜಾತ ಒತ್ತಡ ಅನಿಸುತ್ತದೆ. ಅದಕ್ಕೆ ಬ್ಲಾಗ್ ಇನ್ನೊಂದು ಸಾಧನ ಎಂದು ತಿಳಿಯುತ್ತೇನೆ. ಆದರೆ ಬ್ಲಾಗನ್ನು ನಮಗೆ ಗೊತ್ತಿಲ್ಲದವರೂ ಓದುತ್ತಾರೆ ಎನ್ನುವುದು ಹೊಸ ಅಂಶವಷ್ಟೆ. ನೀವು ಮೋಬೈಲ್ ಮಾತುಕತೆಯ ಬಗ್ಗೆ ಹೇಳಿದ ಹಾಗೆ, ಫುಟ್‌ಪಾತ್, ಬಸ್ಸು, ರೈಲಿನಲ್ಲಿ ಗೊತ್ತಿಲ್ಲದವರ ಖಾಸಗಿ ಜೀವನದ ವಿವರಗಳು ನಮಗೆ ಈ ಹಿಂದೆಯೂ ತಿಳಿಯುತ್ತಿತ್ತು. ಈಗ ಅದು ಮಿಂಚಿನ ವೇಗದಲ್ಲಿ ಸಾವಿರಾರು ಮೈಲುಗಳಾಚೆ ಇರುವವರಿಗೂ ಕೇಳಿಸುತ್ತದೆ ಅಷ್ಟೆ
ವಯ್ಯಕ್ತಿಕವಾಗಿ ಬೇರೆ ಬೇರೆ ಕಾರಣಕ್ಕೆ ಬ್ಲಾಗ್‌ಗಳನ್ನು ಜನ ಬರೆಯುತ್ತಾರೆ. ಕೆಲವರು ವಯಕ್ತಿಕ, ಆಪ್ತ ವಿವರಗಳನ್ನು ಬರೆಯುತ್ತಾರೆ. ಬಹುಶಃ ಅದನ್ನು ಗೊತ್ತಿರುವವರಿಗೆ ಹೇಳಲು ಆಗದೇ ಇರಬಹುದು. ಅನಾಮಿಕವಾಗಿ ಬ್ಲಾಗ್‌ಗಳಲ್ಲಿ ಹೇಳುವುದೂ ಕೂಡ ಒಂದು ಸವಲತ್ತೇ! ಬ್ಲಾಗ್ ಒದಗಿಸುವ ಅನಾಮಿಕತೆ ಕೆಲವರಿಗೆ ವರವೇ ಇರಬೇಕು.
ಇನ್ನು ಸಾಮಾಜಿಕವಾಗಿಯಂತೂ ಬ್ಲಾಗ್ ಎಷ್ಟು ಕೆಲಸ ಮಾಡುತ್ತದೆ ನೋಡಿ. ಪತ್ರಿಕೆ, ರೇಡಿಯೋ, ಟೀವಿ ಸರ್ಕಾರದ ಹುಕುಮ್ಮಿಗೆ ನಮಿಸಿ ಸುಳ್ಳು ಹೇಳುತ್ತಿರುವಾಗ ಬ್ಲಾಗ್‌ಗಳು ಅಮೂಲ್ಯವಾದ ವಿವರಗಳನ್ನು ಯಾರ ಹಂಗೂ ಇಲ್ಲದಂತೆ ಲೋಕಕ್ಕೇ ತಿಳಿಸಬಹುದು. ಯುದ್ಧದಂಥ ಸನ್ನಿವೇಶದಲ್ಲಂತೂ ಇವುಗಳು ಎಷ್ಟು ಮುಖ್ಯವಲ್ಲವೆ?
ವೆಬ್ಬಿನುದ್ದಗಲಕ್ಕೂ ಲಕ್ಷಾಂತರ ಬ್ಲಾಗುಗಳು ಹುಟ್ಟುತ್ತಲೇ ಇವೆ. ಅದರೊಳಗೆ ಬೇಕಾದಷ್ಟು ಜೊಳ್ಳುಪೊಳ್ಳು ಇರಬಹುದು. ಆದರೆ ನಮಗೆ ಹೇಳಬೇಕಾದಂಥ ವಿವರಗಳನ್ನು ಬೇರೆಯವರ ವ್ಯಾಖ್ಯಾನದ ಜರಡೆಯ ಮೂಲಕ ಹಾಯದೇ ಉಳಿದವರಿಗೆ ಮುಟ್ಟಿಸಬಹುದಾದ ಸೌಲಭ್ಯ, ಗುಂಪಿನಲ್ಲಿ ಮಾತಾಡುವಾಗ ಸಿಕ್ಕುವ ಅವಕಾಶದ ಮತ್ತೊಂದು ಮಜಲು.
ಇನ್ನು ನಾನೇಕೆ ಬ್ಲಾಗ್ ಮಾಡುತ್ತೇನೆ? ವಯಕ್ತಿಕವಾಗಿ ನಾನಿನ್ನೂ ಹೆಚ್ಚು ಬ್ಲಾಗ್ ಮಾಡಿಲ್ಲ. ನನಗೆ ಬಂದ ಯೋಚನೆಗಳು, ಮಾಡಿದ ಕೆಲಸಗಳು ಇನ್ನೊಬ್ಬರಿಗೆ ಇಷ್ಟ/ಅನುಕೂಲವಾಗಬಹುದು ಅನ್ನಿಸಿದರೆ ಅದನ್ನು ಬ್ಲಾಗ್ ಮಾಡಬೇಕೆಂದು ನನ್ನ ಯೋಚನೆ.
ಅಭಯ್, ನನ್ನ
ಅಭಯ್,
ನನ್ನ ಅಭಿಪ್ರಾಯ ಹೀಗಿದೆ:-
ಬ್ಲಾಗಿದರೆ 'ಬಾಗು'ವುದು ಸುಲಭ.
ಬಾಗಿದರೆ(ಅಹಂ ಅಳಿದರೆ) ಬಾಳುವುದು ಇನ್ನು ಸುಲಭ:)
ಹೀಗಿದೆ ಬ್ಲಾಗು,ಬಾಗು, ಬಾಳಿನ ನಂಟು ನೋಡಿ
ಹಾಗೆಯೆ ಬ್ಲಾಗಿಗೆ ಹೀಗೆ ಇರಬೇಕೆಂದು ನಿರ್ದಿಷ್ಟ ನಿಯಮಗಳಿಲ್ಲ....ಯಾವುದೇ ಬ್ಲಾಗು ಬ್ಲಾಗುವವನ ಮನಸ್ಸಿನ ಕನ್ನಡಿಯಿದ್ದಂತೆ.
ಉ: ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ?
ಪ್ರೀತಿಯ ಅಭಯ್,
ನಿಮ್ಮ ಪ್ರಶ್ನೆ ಔಚಿತ್ಯಪೂರ್ಣವಾಗಿದೆ. ಇವತ್ತಿನ (೧೪/೧೦/೨೦೦೭) ಕನ್ನಡಪ್ರಭದಲ್ಲಿ ಗುರುಪ್ರಸಾದ ಕಾಗಿನೆಲೆ ಬ್ಲಾಗಮಂಡಲದ ಕುರಿತೇ ಬರೆದಿರುವುದನ್ನು ದಯವಿಟ್ಟು ಓದಿ. ಅಲ್ಲಿ ಇಂಥಹುದೇ ಒಂದು ಜಿಜ್ಞಾಸೆ ಇದೆ. ಆದರೂ ನಿಮ್ಮ ಪ್ರಶ್ನೆ ಮೂಲಭೂತವಾಗಿ ಮನುಷ್ಯ ಯಾಕೆ ಬರೆಯುತ್ತಾನೆ ಎಂಬಲ್ಲಿಗೆ ನಮ್ಮನ್ನು ಕೊಂಡೊಯ್ಯುತ್ತದೆ. ಬರೆಯುವುದು ಡಾಯರಿಯಲ್ಲಿರಬಹುದು, ಪತ್ರಗಳಲ್ಲಿ ಇರಬಹುದು, ಪ್ರಕಟವಾದರೆ ಪತ್ರಿಕೆಯಲ್ಲೇ ಇರಬಹುದು ಅಥವಾ ಪುಸ್ತಕರೂಪದಲ್ಲೇ ಇರಬಹುದು. ಯಾಕೆ ಬರೆಯಬೇಕು ಒಬ್ಬ ಮನುಷ್ಯ ಎನ್ನುವುದು ಪ್ರಶ್ನೆ. ಹಂಚಿಕೊಳ್ಳುವ ಆಸೆ, ಬೇರೆಯವರ ಓದುವ ಕುತೂಹಲ, ಹೆಸರು - ಕೀರ್ತಿಯ ಆಸೆ, ಹಣದ ಆಸೆ ಎಂದೆಲ್ಲ ಉತ್ತರಗಳು ಸಿಗಬಹುದಾದರೂ ಎಲ್ಲ ಉತ್ತರಗಳನ್ನೂ ನಿರಾಕರಿಸುವುದು ಕೂಡ ಸಾಧ್ಯ. ಮತ್ತೆ ಇದು ನಮ್ಮನ್ನು ಮಾತನಾಡುವುದು ಯಾಕೆ ಎಂಬಲ್ಲಿಗೂ ಕೊಂಡೊಯ್ಯಬಹುದಾದ ಪ್ರಶ್ನೆಯಾಗಿ ತಿರುಗಿದರೆ ಅಚ್ಚರಿಯಿಲ್ಲ! ಆದರೆ ಬರೆಯುವುದು, ಪ್ರಕಟಿಸುವುದು ಎಲ್ಲ ನಾವಂದುಕೊಂಡಷ್ಟು ಸಹಜ ಪ್ರಕ್ರಿಯೆಯೇನಲ್ಲ. ಸಹಜವಲ್ಲ ಎಂದರೆ ಅಸಹಜ ಎಂದೂ ತಿಳಿಯಬೇಕಾದ್ದಿಲ್ಲ! ಆದರೂ ಬರೆಯುವುದರಲ್ಲಿ, ಅದನ್ನು ಪ್ರಕಟಿಸುವುದರಲ್ಲಿ ಅಹಂಕಾರದ ಎಕ್ಸ್‌ಟೆನ್ಷನ್ ಇಲ್ಲ ಎನ್ನಲು ಸಾಧ್ಯವಿದೆಯೇ? ನನ್ನದು ಎಂಬ ಅಂಶ ಅಲ್ಲಿ ಇದ್ದೇ ಇರುತ್ತದೆ ಅಲ್ಲವೆ? ಬಹುಷಃ ತುಂಬ ಹಿಂದೆ ಹೆಸರು ಹೇಳದೇ ಬರೆಯುತ್ತಿದ್ದ ಕವಿಗಳಲ್ಲಿ, ಕತೆಗಾರರಲ್ಲಿ, ಶಿಲ್ಪಿಗಳಲ್ಲಿ ಅದೆಲ್ಲ ಪುಣ್ಯದ ಕೆಲಸ ಎಂಬ ಭಾವವಿತ್ತು. ಹೆಸರು ಮುಖ್ಯವಿರಲಿಲ್ಲ. ಆದರೆ ಇವತ್ತು ನಮ್ಮ ಬರಹಗಳಿಗಿಂತ ಹೆಸರೇ ಮುಖ್ಯ! ಎಷ್ಟೋ ಬಾರಿ ಇದು ನನ್ನ ಅಸ್ತಿತ್ವದ ಬಗ್ಗೆ ನಿಮಗೆ (ಉಳಿದೆಲ್ಲರಿಗೆ) ಅರಿವು ಮೂಡಿಸುವ ಪ್ರಯತ್ನ ಕೂಡ! ನಾನು ನೋಡಿ, ನರೇಂದ್ರ ಪೈ ಅಂತ ಒಬ್ಬ ಇದ್ದೇನೆ, ಇಷ್ಟು ಚೆನ್ನಾಗಿ ಬರೀತಿದ್ದೇನೆ ಎಂದು ಹೇಳಿಕೊಳ್ಳುವ ಮರ್ಯಾದಸ್ತ ರೀತಿ ಇದು! ಇದನ್ನು ಅಸ್ಮಿತೆಯ ಆಸೆ ಎಂದು ಕೇಳಲು ಹಿತಕರವಾಗುವಂತೆ ಹೇಳಲು ಸಾಧ್ಯವಿದೆ, ಅಷ್ಟೇ. ಏನಂತೀರಿ?